ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಮಂಗಳವಾರ, ಫೆಬ್ರವರಿ 20, 2018

ಸತ್ಯವಿಠಲ ವಿರಚಿತ 'ಸಮಗ್ರ ಭಾಮಿನೀ ಕಾವ್ಯಗಳು' - ಸಂಪುಟ-1


     'ಸತ್ಯವಿಠಲ' ನಾಮಾಂಕಿತದಲ್ಲಿ ಹೆಸರಾಗಿರುವ ಶ್ರೀ ಬಿ.ವಿ ಸತ್ಯನಾರಾಯಣರಾವ್ ಮೂಲತಃ ಶಿರಾ ತಾಲ್ಲೂಕು ಬುಕ್ಕಾಪಟ್ಟಣದವರು. ಈಗ ಬೆಂಗಳೂರಿನಲ್ಲಿ ವಾಸ. ಮೆಕ್ಯಾನಿಕಲ್ ಇಂಜನಿಯರ್ ಪದವಿ ಪಡೆದು, ಎಲೆಕ್ಟ್ರಿಕಲ್ ಇಂಜನಿಯರ್ ವೃತ್ತಿಯಲ್ಲಿದ್ದವರು. ಬೆಂಗಳೂರು ವಿದ್ಯುತ್ ಸರಬರಾಜು ಕಂಪೆನಿಯಲ್ಲಿ ಉಪಪ್ರಧಾನ ವ್ಯವಸ್ಥಾಪಕರಾಗಿ ನಿವೃತ್ತರಾದವರು. ಇವರ ಸಾಹಿತ್ಯಿಕ ಸಾಧನೆ ಬೆರಗುಗೊಳಿಸುವಂತಹದು. 
     ಕಳೆದ ಅಕ್ಟೋಬರ್ ತಿಂಗಳಿನಲ್ಲಿ ಮೈಸೂರಿನ 'ಮಾದವ ಕೃಪಾ'ದಲ್ಲಿ ನಡೆದ ಅಖಿಲ ಭಾರತೀಯ ಸಾಹಿತ್ಯ ಪರಿಸತ್ತಿನ ಎರಡು ದಿನಗಳ ಕಾರ್ಯಾಗಾರದಲ್ಲಿ ಶ್ರೀ ಸತ್ಯನಾರಾಯಣರಾಯರೂ ಭಾಗವಹಿಸಿದ್ದರು. ಆಗ ನನಗೆ ಅವರ ಸಾಹಿತ್ಯಿಕ ಬರಹಗಳ ಮತ್ತು ಅವರ ವೈಯಕ್ತಿಕ ಪರಿಚಯ ಇರಲಿಲ್ಲ. ತಮ್ಮ ವಿಸಿಟಿಂಗ್ ಕಾರ್ಡ್ ಅನ್ನು ಕೊಟ್ಟು ಪರಿಚಯಿಸಿಕೊಂಡಿದ್ದರು. ಉಭಯ ಕುಶಲೋಪರಿ ಮಾತನಾಡಿದ್ದೆವು, ಅಷ್ಟೆ. ಈ ತಿಂಗಳ 10ರಂದು ರಾಮನಗರ ಅ.ಭಾ.ಸಾ.ಪ. ವತಿಯಿಂದ ಪದ್ಮಶ್ರೀ ಪುರಸ್ಕೃತ ಡಾ. ದೊಡ್ಡರಂಗೇಗೌಡರಿಗೆ ರಾಮನಗರದಲ್ಲಿ ಸನ್ಮಾನ ಕಾರ್ಯಕ್ರಮವಿದ್ದು, ನನ್ನನ್ನು ಪ್ರಾಸ್ತಾವಿಕ ನುಡಿಗಳನ್ನಾಡಲು ಆಹ್ವಾನಿಸಿದ್ದರು. ಕಾರ್ಯಕ್ರಮ ಚೆನ್ನಾಗಿ ನಡೆಯಿತು. ಆ ಸಂದರ್ಭದಲ್ಲಿ ಸ್ಮರಣಿಕೆಯಾಗಿ ಕೊಟ್ಟಿದ್ದ ಪುಸ್ತಕವೇ 'ಸತ್ಯವಿಠಲ ವಿರಚಿತ 'ಸಮಗ್ರ ಭಾಮಿನೀ ಕಾವ್ಯಗಳು' - ಸಂಪುಟ-1'. ಇದಕ್ಕಾಗಿ ರಾಮನಗರ ಅ.ಭಾ.ಸಾ.ಪ.ದ ಕಾರ್ಯಕರ್ತರಿಗೆ ಆಭಾರಿಯಾಗಿದ್ದೇನೆ. 800 ಪುಟಗಳ ಬೃಹತ್ ಪುಸ್ತಕದ ಗಾತ್ರವೇ ಅದರ ಹಿರಿಮೆ ಹೇಳುತ್ತದೆ. ಶ್ರೀ ಬೆಳವಾಡಿ ಮಂಜುನಾಥರವರು ಸಂಪಾದಿಸಿದ ಮತ್ತು ಅವರ 'ಭಾಮಿನೀ ಭಾಸ್ಕರನಿಗೆ ನಮಸ್ಕಾರ' ಎಂಬ ಶೀರ್ಷಿಕೆಯಲ್ಲಿ ಬರೆದ ಅವರ 'ಸತ್ಯವಿಠಲ'ರ ಕೃತಿಗಳ ವಿಮರ್ಶಾತ್ಮಕ ಬರಹವೇ 250 ಪುಟಗಳದ್ದಾಗಿರುವುದು ವಿಶೇಷ.
     ಶ್ರೀ ಸತ್ಯನಾರಾಯಣರಾಯರು ಐವತ್ತಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ಇದರಲ್ಲಿ ಇಪ್ಪತ್ತು ಸಂಸ್ಕೃತ ಕೃತಿಗಳು. ಕರ್ನಾಟಕದಲ್ಲಿ ಅತ್ಯಂತ ಹೆಚ್ಚು ಭಾಮಿನೀ ಕಾವ್ಯಗಳನ್ನು ಬರೆದವರು ಬಹುಷಃ ಇವರೇ ಇರಬೇಕು. ಸಾಮಾಜಿಕ ಮೌಲ್ಯಗಳನ್ನು ಬಿಂಬಿಸುವ ಇವರ ಬರಹಗಳು ಚೇತೋಹಾರಿಯಾಗಿವೆ, ಸರಳವಾಗಿವೆ. ಗಮಕಿಗಳು ವಾಚಿಸಲು, ವ್ಯಾಖ್ಯಾನಿಸಲು ಇವರ ಕೃತಿಗಳನ್ನು ಆರಿಸಿಕೊಳ್ಳಬಹುದು.
     ಈ ಪುಸ್ತಕದಲ್ಲಿ ಪ್ರಕಟಗೊಂಡಿರುವ ಭಾಮಿನೀ ಕಾವ್ಯಗಳು ಇವು:
1. ಸಂಪೂರ್ಣ ದೇವೀ ಮಹಾತ್ಮೆ,
2. ಶ್ರೀ ಪೂರ್ಣೇ ಲಲಿತಾಂಬಿಕಾ ಶತಕಂ
3. ಧರ್ಮಸ್ಥಳ ಯಶೋಗಾಥೆ
4. ಬಕುಳೇಶ್ವರ ಸತ್ಯನಾಥ ವಿಲಾಸಂ
5. ರಾಘವೇಂದ್ರ ಸರಿತ್ಸಾಗರ
6. ಗಾಯತ್ರೀ ರಾಮಾಯಣ
7. ಬೆಳವಾಡಿ ಸ್ವಯಂಭೂ ಗಣಪ
8. ಬಾಹುಬಲಿ ಚರಿತಂ
9. ಬಸವೇಶ ನಮನಂ
10. ಶ್ರೀ ಶಿವಕುಮಾರಸ್ವಾಮಿ ಗುರು ಚರಿತ್ರಂ
11. ಶ್ರೀ ಶಿರಡಿ ಸಾಯಿಬಾಬಾ.
     ಲೇಖಕರ ಪರಿಶ್ರಮ, ಸುಲಲಿತ ರಚನೆ, ಅರ್ಥವಾಗುವ ಸರಳಗನ್ನಡದ ಕಾವ್ಯ ಸಾಹಿತ್ಯಿಕ ಲೋಕಕ್ಕೆ ಒಳ್ಳೆಯ ಕೊಡುಗೆಯಾಗಿದೆ. ಲೇಖಕರಿಗೆ, ಸಂಪಾದಕರು ಮತ್ತು ವಿಮರ್ಶಕರಿಗೆ ನಮನಗಳು.
-ಕ.ವೆಂ.ನಾಗರಾಜ್.

ಭಾನುವಾರ, ಫೆಬ್ರವರಿ 11, 2018

ಎಲೆ ನೋವೇ, ವಿಶ್ರಾಂತಿ ತೆಗೆದುಕೋ! - Dear pain, please take rest!


ಧಾರಾಳಿಗಳಿವರು ಉರಿನುಡಿಗಳಾಡಲು
ನುಡಿಯೊಂದಕೆದುರಾಗಿ ಕಟುನುಡಿಗಳೈದಾರು |
ಸವಿನುಡಿಯ ಮೆಚ್ಚರು ಮೌನವಾಂತುವರು
ನಲ್ನುಡಿಗೆ ನಾಲಿಗೆಯು ಸವೆದೀತೆ ಮೂಢ ||
     ಈ ಜನರೇ ಹೀಗೆ, ಯಾರಾದರೂ ಏನಾದರೂ ಅಂದರೆ ಒಂದು ಬೈಗುಳಕ್ಕೆ ಪ್ರತಿಯಾಗಿ ಹತ್ತಿಪ್ಪತ್ತು ಬೈಗುಳಗಳನ್ನು ಹಿಂತಿರುಗಿಸುತ್ತಾರೆ. ಆದರೆ ಹತ್ತಿಪ್ಪತ್ತು ಒಳ್ಳೆಯ ಮಾತುಗಳಿಗೆ ಪ್ರತಿಯಾಗಿ ಒಂದಾದರೂ ಒಳ್ಳೆಯ ಮಾತು ಆಡಿದರೆ ಅದೇ ಬಹಳ ಹೆಚ್ಚು. ಕೆಟ್ಟ ನುಡಿಗಳನ್ನು ಆಡಲು ತೋರುವ ಧಾರಾಳತನ ಒಳ್ಳೆಯ ಮಾತುಗಳಿಗೆ ಬರುವುದಿಲ್ಲ. ಎಲ್ಲಿ ತಮ್ಮ ಒಳ್ಳೆಯ ಮಾತುಗಳಿಂದ ಇನ್ನೊಬ್ಬರಿಗೆ ಕೋಡು ಬಂದುಬಿಡುತ್ತದೋ ಎಂಬ ಆತಂಕದಿಂದ ಆ ಕೋಡುಗಳನ್ನು ತಮ್ಮಲ್ಲೇ ಉಳಿಸಿಕೊಳ್ಳುತ್ತಾರೆ! ಪುರಂದರದಾಸರು ಈ ಕಾರಣಕ್ಕಾಗಿಯೇ, 'ಆಚಾರವಿಲ್ಲದ ನಾಲಿಗೆ, ನಿನ್ನ ನೀಚ ಬುದ್ಧಿಯ ಬಿಡು ನಾಲಿಗೆ, ವಿಚಾರವಿಲ್ಲದೆ ಪರರ ದೂಷಿಸುವುದಕೆ ಚಾಚಿಕೊಂಡಿರುವಂಥ ನಾಲಿಗೆ' ಎಂದು ಹಾಡಿರುವುದು. ಇನ್ನೊಬ್ಬರಿಗೆ ಅಹಿತವಾಗಿ ಮಾತನಾಡುವುದರಿಂದ, ಅಹಿತ ಬಯಸುವುದರಿಂದ ಅವರಿಗೂ ನೋವು, ಇವರಿಗೂ ನೋವು, ಇಬ್ಬರಿಗೂ ನೋವು! ಇದಕ್ಕೆ ಪರಿಹಾರವಿದೆಯೇ? ಎಲೆ ನೋವೇ, ಸ್ವಲ್ಪ ವಿಶ್ರಾಂತಿ ತೆಗೆದುಕೋ ಎಂದು ಹೇಳಲು ಬರುವುದಿಲ್ಲವೇ?
     'ನೋವು ಅನಿವಾರ್ಯ. ಆದರೆ ನೋವು ಅನುಭವಿಸುವುದು ಅನಿವಾರ್ಯವಲ್ಲ' - ಈ ಸೂತ್ರ ಅನುಸರಿಸಿ ವಿಚಾರ ಮಾಡೋಣ. ದೈಹಿಕವಾಗಿ ಆಗುವ ನೋವು ಕಾಲಾನುಕ್ರಮದಲ್ಲಿ ನಿವಾರಣೆಯಾಗಿತ್ತದೆ. ಆದರೆ ಮಾನಸಿಕವಾಗಿ ಆಗುವ ನೋವು ಬೇಗ ಶಮನವಾಗುವುದಿಲ್ಲ. ಒಬ್ಬೊಬ್ಬರ ಮನಸ್ಥಿತಿ ಅನುಸರಿಸಿ ನೋವಿನ ಪ್ರಮಾಣ ಇರುತ್ತದೆ. ಒಂದೇ ರೀತಿಯ ಆಘಾತ ಹಲವರಿಗೆ ಹಲವು ರೀತಿಯಲ್ಲಿ ಬಾಧಿಸುತ್ತದೆ. ದಪ್ಪ ಚರ್ಮದವರಿಗೆ ಏನೂ ಆಗದಿರಬಹುದು. ಕೆಲವರು ಕೊರಗಬಹುದು, ಕಾಯಿಲೆ ಬೀಳಬಹುದು. ಕೆಲವರು ಆತ್ಮಹತ್ಯೆಯನ್ನೂ ಮಾಡಿಕೊಳ್ಳಬಹುದು. 'ಆಗಿದ್ದು ಆಗಿಹೋಯಿತು. ಅನುಭವಿಸಬೇಕು. ಸಮಾಧಾನ ಮಾಡಿಕೋ' ಎಂಬ ಉಪದೇಶಗಳು ನೋವಿನ ಪ್ರಮಾಣ ಕಡಿಮೆ ಮಾಡಲಾರವು. ಸಂತೋಷದ ಸಂದರ್ಭಗಳಲ್ಲೂ ಅದನ್ನು ಅನುಭವಿಸಲಾಗದ ಸ್ಥಿತಿ ಒದಗಿರುತ್ತದೆ. ಇಂತಹ ಸ್ಥಿತಿಯಲ್ಲಿ ನೋವಿಗೆ ವಿಶ್ರಾಂತಿ ನೀಡುವ, ಮನಸ್ಸಿಗೆ ಹಿತವಾಗುವ ರೀತಿಯನ್ನು ಕಂಡುಕೊಳ್ಳುವುದು ಹೇಗೆ? 
೧. ನೋವಿನ ಮೂಲ ತಿಳಿಯುವುದು: 
     ನೋವಿಗೆ ಕಾರಣವಾದ ಸಂಗತಿ ತಿಳಿದುಕೊಳ್ಳಬೇಕು. ಏಕೆ ಇಂತಹ ನೋವಿಗೆ ಒಳಗಾಗಿದ್ದೇವೆ ಎಂಬ ಕುರಿತು ಚಿಂತಿಸಬೇಕು. ಕೆಲವರಿಗೆ ಯಾವ ಕಾರಣಕ್ಕಾಗಿ ನೋವು ಅನುಭವಿಸಬೇಕಾಗಿದೆಯೋ, ಆ ಕಾರಣದಿಂದಾಗಿ ತಾವು ದೂಷಿಸಲ್ಪಡಲು, ಕೆಟ್ಟದಾಗಿ ಕಾಣಲ್ಪಡಲು ಅರ್ಹರೆಂಬ ಭಾವನೆ ಬಂದು ಕೀಳರಿಮೆ ಕಾಡುವುದೂ ಇದೆ. ಇದರಿಂದ ಹೊರಬರಲು ಆಗುವುದೇ ಇಲ್ಲವೆಂಬ ನಿರಾಶೆಯನ್ನೂ ಹೊಂದುವ ಸಾಧ್ಯತೆಯೂ ಇದೆ. ಮೊದಲ ಹೆಜ್ಜೆಯಾಗಿ, ಸಮಸ್ಯೆಯ ಮೂಲಕ್ಕೆ ಹೋಗಿ ಅರ್ಥ ಮಾಡಿಕೊಳ್ಳುವ, ಪರಿಹರಿಸಿಕೊಳ್ಳುವ ಪ್ರಯತ್ನ ಆರಂಭಿಸಬೇಕು. 
೨. ನೋವಿನ ಅಭಿವ್ಯಕ್ತಿ:
     ಯಾರು ನಮ್ಮ ನೋವಿಗೆ ಕಾರಣರಾಗಿದ್ದಾರೋ ಅವರಿಗೆ ನಮ್ಮ ಸ್ಥಿತಿಯನ್ನು, ಮನೋಭಾವವನ್ನು ತಿಳಿಸಬೇಕು. ಅವರು ನಮ್ಮ ಭಾವನೆ ಅರ್ಥ ಮಾಡಿಕೊಳ್ಳುವರೆಂಬ ಭರವಸೆ ಇಲ್ಲದಿದ್ದರೂ ನಾವು ಹೇಳುವುದನ್ನು ಹೇಳಿಕೊಂಡುಬಿಡಬೇಕು. ನಮಗೆ ಏನೆಲ್ಲಾ ಅನ್ನಿಸುತ್ತದೋ ಅದನ್ನು ಒಂದು ಕಾಗದದಲ್ಲಿ ಬರೆದು, ನಂತರ ಅದನ್ನು ಸುಟ್ಟುಹಾಕಿಬಿಡುವುದೂ ಸಮಾಧಾನ ತರಬಹುದು. ಇದು ಭವಿಷ್ಯದಲ್ಲಿ ಇಂತಹ ಸಮಸ್ಯೆಗಳನ್ನು ಎದುರಿಸಲು ಮನೋಧೈರ್ಯ ನೀಡುತ್ತದೆ. ನೋವಿನ ಪ್ರಮಾಣ ಕಡಿಮೆ ಮಾಡುತ್ತದೆ, ಬಲಿಪಶುವಾದೆ ಎಂಬ ಭಾವನೆಯಿಂದ ಹೊರಬರಲು ಸಹಾಯ ಮಾಡುತ್ತದೆ.
೩. ವರ್ತಮಾನಕ್ಕೆ ಆದ್ಯತೆ ಕೊಡುವುದು:
     ನೋವಿಗೆ ಕಾರಣವಾದ ಹಳೆಯ ಸಂಗತಿಯನ್ನೇ ಕುರಿತು ಚಿಂತಿಸುವುದು ಒಳ್ಳೆಯದಲ್ಲ. ಅದು ಅಂತಹ ಸಂಗತಿಯನ್ನು ಪುನರಾವರ್ತಿಸುವುದಕ್ಕೆ, ವಿರೋಧಿಸುವುದಕ್ಕೆ ಪ್ರಚೋದಿಸುತ್ತದೆ. 'ಏನಾಯಿತು? ಏನು ತಪ್ಪು ಮಾಡಿದೆ? ಏನು ಮಾಡಬಹುದಿತ್ತು?' ಎಂದೆಲ್ಲಾ ಯೋಚಿಸುವಂತೆ ಮಾಡುತ್ತದೆ. ಇದು ನಮ್ಮನ್ನು ನಾವೇ ಹಿಂಸಿಸಿಕೊಳ್ಳುವ ಪರಿ. ನಾವು ಏನು ಮಾಡಬಹುದಿತ್ತೋ ಅದನ್ನು ಈಗ ಮಾಡಲು ಬರುವುದಿಲ್ಲ. ಅದರ ಬದಲು, ಯಾವ ಕಾರಣದಿಂದ ಆ ಪರಿಸ್ಥಿತಿ ಬಂದಿದೆಯೋ ಅದನ್ನು ನಿಭಾಯಿಸುವ ಬಗ್ಗೆ ಗಮನ ಕೊಡಬೇಕು. ಕಷ್ಟವೆಂದಾದರೆ ಆಪ್ತ ಸಮಾಲೋಚಕರ ನೆರವು ಪಡೆಯಬೇಕು.
೪. ಸಮರ್ಥಿಸಿಕೊಳ್ಳದಿರುವುದು:
     'ನಿನ್ನದೇನೂ ತಪ್ಪಿಲ್ಲ, ನಿನಗೆ ಈ ಸ್ಥಿತಿ ಬರಬಾರದಿತ್ತು, ಇದಕ್ಕೆ ನೀನು ಅರ್ಹನಲ್ಲ' ಎಂಬ ಸಮಾಧಾನದ ಮಾತುಗಳನ್ನು ಕೇಳುವುದರಿಂದ ಪರಿಸ್ಥಿತಿ ಸುಧಾರಿಸುವುದಿಲ್ಲ. ಇದು ಹಳೆಯ ನಿಲುವಿಗೇ ಅಂಟಿಕೊಳ್ಳುವಂತೆ ಮಾಡುತ್ತದೆ. ಸಮರ್ಥಿಸಿಕೊಳ್ಳಲು ಕಾರಣಗಳನ್ನು, ಕತೆಗಳನ್ನು ಹೇಳುವುದೂ ಸರಿಯಲ್ಲ. ದೂರಿಗೆ ಪ್ರತಿಯಾಗಿ ದೂರುವುದೂ ತರವಲ್ಲ. ಪರಿಸ್ಥಿತಿಯನ್ನು ಉತ್ತಮಗೊಳಿಸಲು ಏನು ಮಾಡಬಹುದೋ ಆ ಬಗ್ಗೆ ಮಾತ್ರ ಗಮನ ಕೊಡಬೇಕು. ನಾವು ಚೆನ್ನಾಗಿರಲು ಬೇರೆಯವರ ಸಮರ್ಥನೆ ಬೇಕಿಲ್ಲ, ನಾವೂ ನಮ್ಮನ್ನು ಸಮರ್ಥಿಸಿಕೊಳ್ಳಬೇಕಿಲ್ಲ.
೫. ಕ್ಷಮಿಸಿಕೊಳ್ಳೋಣ:
     ನಾವು ಏನೂ ತಪ್ಪು ಮಾಡದಿರಬಹುದು, ಅಥವ ತಪ್ಪೇ ಮಾಡಿರಬಹುದು. ಅದಕ್ಕಾಗಿ ಕೊರಗುತ್ತಾ ಕುಳಿತರೆ ಪ್ರಯೋಜನವಿಲ್ಲ. ಇಂದಿನ ದಿನವನ್ನು ಹಳೆಯ ನೆನಪುಗಳ ಭಾರವನ್ನು ಹೊತ್ತು ಕಳೆಯುವುದೇಕೆ? ತಪ್ಪು ಮಾಡಿರಲಿ, ಮಾಡದಿರಲಿ ನಮ್ಮನ್ನು ನಾವು ಕ್ಷಮಿಸಿಕೊಂಡು ಮುಂದಿನ ದಿನಗಳನ್ನಾದರೂ ಸಹನೀಯವಾಗುವಂತೆ, ಮತ್ತೆ ಆ ತಪ್ಪು ಮರುಕಳಿಸದಂತೆ ನೋಡಿಕೊಳ್ಳುವುದರಲ್ಲಿ ಜಾಣತನವಿದೆ.
೬. ಬಲಿಪಶುವೆಂಬ ಭಾವ ಸಲ್ಲದು, ದೂಷಿಸಬಾರದು:
      ನಾವು ಬಲಿಪಶುವಾಗಿರಬಹುದು. ಇನ್ನೊಬ್ಬರು ಕೇಡು ಬಗೆದಿರಬಹುದು. ಇಂದಿನ ಸ್ಥಿತಿಗೆ ನಮ್ಮ ತಪ್ಪು ಕಾರಣವಾಗಿರದಿರಬಹುದು. ಇದಕ್ಕಾಗಿ ಇನ್ನೊಬ್ಬರನ್ನು ದೂಷಿಸಿದರೆ ಪರಿಸ್ಥಿತಿ ಸರಿಯಾಗದು. ಅದು ನಮ್ಮನ್ನು ಹಿಂದಿನ ಸ್ಥಿತಿಯಲ್ಲಿಯೇ ಉಳಿಸುತ್ತದೆ. ನಮ್ಮ ತಪ್ಪು ಇಲ್ಲದಿದ್ದರೂ, ನಮ್ಮ ಮನೋಭಾವಕ್ಕೆ ಹೊಣೆಗಾರರು ನಾವೇ ಆಗಿರುತ್ತೇವೆ. ಇಂತಹ ಪರಿಸ್ಥಿತಿಗೆ ನಮ್ಮ ಮನೋಭಾವವೂ ಕಾರಣವೆಂಬುದನ್ನು ಮರೆಯಬಾರದು. 
೭. ನೋವು ನಮ್ಮ ಗುರುತಾಗದಿರಲಿ:
      ಹಳೆಯ ಘಟನೆಗಳು, ಸಂಗತಿಗಳು ನಮ್ಮ ಗುರುತಾಗಿ ಉಳಿಯದಿರಲಿ. ಅದು ಸಂಬಂಧಗಳ ಮೇಲೆ ಪರಿಣಾಮ ಬೀರುವಂತಾಗಬಾರದು. ಹಳೆಯ ಕಹಿ ಸಂಗತಿಗಳ ತಳಪಾಯದ ಮೇಲೆ ಇಂದಿನ ಕಟ್ಟಡ ನಿರ್ಮಿಸಲು ಹೋಗಬಾರದು. ಹಳೆಯ ಸಂಗತಿಗಳ ಬಗ್ಗೆ ಒಂದು ನಿರ್ಧಾರ ತಳೆದು ಮುಂದುವರೆಯುವುದು ಸೂಕ್ತ. ತನ್ನಿಂದ ತಾನೇ ಸರಿಯಾಗಲಿ ಎಂಬ ನಿರೀಕ್ಷೆ ಪರಿಸ್ಥಿತಿಯನ್ನು ಯಥಾಸ್ಥಿತಿಯಲ್ಲಿ ಉಳಿಸುತ್ತದೆ. ಆಪ್ತ ಸಮಾಲೋಚನೆ ಖಂಡಿತವಾಗಿ ನೆರವಿಗೆ ಬರುತ್ತದೆ. ಬಹಳ ಸಮಯದಿಂದ ಮುಂದುವರೆದುಕೊಂಡು ಬಂದಿರುವ ಕಹಿ ಗುರುತನ್ನು ಅಳಿಸುವುದು ಸುಲಭವಲ್ಲ. ಕಹಿ ಘಟನೆ ಸಂಭವಿಸುವ ಮುನ್ನ ನಾವು ಹೇಗಿದ್ದೆವು, ನಂತರ ಹೇಗಿದ್ದೇವೆ ಎಂಬುದನ್ನು ಚಿಂತಿಸಬೇಕು. ಘಟನೆಗಿಂತ ಮುಂಚೆ ಇದ್ದಂತೆ ಈಗಲೂ ಇರುವ ಸಾಧ್ಯತೆ ಮತ್ತು ಅಗತ್ಯತೆ ಬಗ್ಗೆ ಗಮನ ಹರಿಸಬೇಕು. ನಮ್ಮ ಬಗ್ಗೆ ಇತರರು ಏನು ಭಾವಿಸುತ್ತಾರೆ ಎಂಬ ಬಗ್ಗೆ ಅರಿವು ಹೊಂದಬೇಕು. ಇದು ನಾವು ಏನಾಗಬೇಕು, ಏನಾಗಿರಬಾರದು ಎಂಬ ಬಗ್ಗೆ ತಿಳಿಹೇಳುತ್ತದೆ. ನಮ್ಮ ಮನೋಭಾವ ಇಲ್ಲಿಯೂ ಮುಖ್ಯವಾಗುತ್ತದೆ.
೮. ಸಂತೋಷ ನೀಡುವ ಸಂಗತಿಗಳ ಬಗ್ಗೆ ಗಮನ ಕೊಡೋಣ:
     ನೋವಿನ ಕುರಿತೇ ಯೋಚಿಸುವುದನ್ನು ನಿಲ್ಲಿಸೋಣ. ಈ ಕ್ಷಣಕ್ಕೆ ಯಾವುದು ಸಂತೋಷ ಕೊಡುತ್ತದೋ ಅದನ್ನು ಅನುಭವಿಸಬೇಕು. ತಂಗಾಳಿಯಲ್ಲಿ ಉದ್ಯಾನವನದಲ್ಲಿ ಕುಳಿತುಕೊಳ್ಳುವುದು ಹಿತವೆನಿಸಬಹುದು, ಹಿತವಾದವರನ್ನು ಮಾತನಾಡಿಸುವುದು, ಪುಟ್ಟ ಮಕ್ಕಳೊಡನೆ ಸಮಯ ಕಳೆಯುವುದು, ಸತ್ಸಂಗಗಳಲ್ಲಿ ಭಾಗಿಯಾಗುವುದು, ಇತ್ಯಾದಿಗಳಲ್ಲಿ ಸಿಗುವ ಸಂತೋಷ ಅನುಭವಿಸಬೇಕು. ಈಗಿನ ಸಣ್ಣ ಸಂತೋಷದ ಕ್ಷಣಗಳೇ ಮುಂದಿನ ನಮ್ಮ ಗುರಿಯನ್ನು ಕಂಡುಕೊಳ್ಳಲು ಸಹಾಯ ಮಾಡಬಹುದು. 
೯. ಇತರರೊಂದಿಗೆ ಸಮಯ ಹಂಚಿಕೊಳ್ಳೋಣ:
     ನೋವಿನ ಭಾರದಿಂದಾಗಿ ಜನರೊಡನೆ ಬೆರೆಯದೆ ಒಂಟಿಯಾಗಿರುವುದು ತರವಲ್ಲ. ಅದು ನಮ್ಮ ದೌರ್ಬಲ್ಯವನ್ನು ತೋರಿಸಿದಂತಾಗುತ್ತದೆ. ನಾವು ಯಾವಾಗಲೂ ನೋವಿನ ಭಾರವನ್ನು ಹೊತ್ತೇ ತಿರುಗಾಡಬೇಕಿಲ್ಲ. ನಮ್ಮ ಹಿತ ಬಯಸುವವರೊಡನೆ ಸಮಯ ಕಳೆಯಬೇಕು. ಅವರನ್ನು ಆರಿಸಿಕೊಳ್ಳುವಾಗಲೂ ಎಚ್ಚರಿಕೆಯಿರಬೇಕು. ಅನುಕಂಪ ತೋರುವ ನೆಪದಲ್ಲಿ ಬಿರುಕುಗಳನ್ನು ಹೆಚ್ಚಿಸುವವರನ್ನು ಹತ್ತಿರ ಸೇರಿಸಬಾರದು. ನೋವಿನ ಕತೆಗಳನ್ನು ದೂರವಿರಿಸಿರಬೇಕು. ಅವರುಗಳಲ್ಲದೆ ಇನ್ನಿತರರ ಜೊತೆಗೂ ಒಟ್ಟಿಗೆ ಊಟ ಮಾಡುವ, ಸಿನೆಮಾಗೆ, ಶಾಪಿಂಗಿಗೆ ಹೋಗುವ ಸಂದರ್ಭಗಳನ್ನು ಬಳಸಿಕೊಂಡರೆ, ನೋವಿನ ಭಾರ ಕಡಿಮೆಯಾಗುತ್ತಾ ಹೋಗುತ್ತದೆ. ಸಣ್ಣ ಪುಟ್ಟ ಸಂತೋಷದ, ಶಾಂತಿಯ ಕ್ಷಣಗಳನ್ನು ನಮ್ಮದಾಗಿಸಿಕೊಳ್ಳುತ್ತಾ ಹೋದರೆ ಹಳೆಯ ನೋವು ಮರೆಯುತ್ತಾಹೋಗುತ್ತದೆ.
೧೦. ಪರಿಹಾರ ಕಂಡುಕೊಳ್ಳಬೇಕಾದವರು ನಾವೇ!
      ಎಲ್ಲಾ ಸಮಸ್ಯೆಗಳಿಗೂ ಒಂದೇ ರೀತಿಯ ಪರಿಹಾರ ಇರುತ್ತದೆ ಎಂದೇನೂ ಇಲ್ಲ. ಆದರೆ ಪರಿಹಾರ ಕಂಡುಕೊಳ್ಳಬೇಕಾದವರು ನಾವೇ ಆಗಿರುತ್ತೇವೆ. ಪರಿಹಾರ ಬೇಕೇ, ಬೇಡವೇ ಎಂದು ನಿರ್ಧರಿಸಬೇಕಾದವರೂ ನಾವೇ! ಅದಕ್ಕೆ ತಕ್ಕಂತೆ ಕಾರ್ಯಪ್ರವೃತ್ತರಾಗಬೇಕಾದವರೂ ನಾವೇನೇ! ಒಟ್ಟಾರೆಯಾಗಿ ಇಷ್ಟು ಮಾತ್ರ ಸತ್ಯ, ನೋವುಗಳು ಸಾಮಾನ್ಯವಾಗಿ ಅನಿವಾರ್ಯ, ಆದರೆ ನೋವನ್ನು ಅನುಭವಿಸುವುದು ಮಾತ್ರ ಅನಿವಾರ್ಯವಲ್ಲ. 
-ಕ.ವೆಂ. ನಾಗರಾಜ್.