ಭೂನ್ಯಾಯ ಮಂಡಳಿ ಯಾರದ್ದಾದರೂ ಜಮೀನನ್ನು ಹೆಚ್ಚುವರಿಯೆಂದು ತೀರ್ಮಾನಿಸಿದ ಸಂದರ್ಭದಲ್ಲಿ ಅದನ್ನು ಸರ್ಕಾರದ ಸ್ವಾಧೀನಕ್ಕೆ ತೆಗೆದುಕೊಳ್ಳಬೇಕಾದುದು ತಹಸೀಲ್ದಾರರ ಕರ್ತವ್ಯ. ಒಂದು ಪ್ರಕರಣದಲ್ಲಿ ಒಬ್ಬರು ಸ್ವಾಮಿಗಳಿಗೆ ಸೇರಿದ್ದ ಜಮೀನನ್ನು ಹೆಚ್ಚುವರಿಯೆಂದು ತೀರ್ಮಾನವಾದ ಸಂದರ್ಭದಲ್ಲಿ ಅದನ್ನು ಸರ್ಕಾರದ ಸ್ವಾಧೀನಕ್ಕೆ ತೆಗೆದುಕೊಳ್ಳಲು ಸಿಬ್ಬಂದಿಯೊಂದಿಗೆ ಹೋಗಿದ್ದ ತಹಸೀಲ್ದಾರರು ಗ್ರಾಮಸ್ಥರ ವಿರೋಧದಿಂದಾಗಿ ಹಾಗೆಯೇ ಹಿಂತಿರುಗಿ ಬರಬೇಕಾಯಿತು. ಇದಾಗಿ ಸುಮಾರು ಆರು ತಿಂಗಳ ನಂತರ ಆ ಜಮೀನನ್ನು ಸ್ವಾಧೀನ ಪಡೆಯಲು ಜಿಲ್ಲಾಧಿಕಾರಿಯವರಿಂದ ಒತ್ತಾಯ ಬಂದಿದ್ದರಿಂದ ಆ ಜಮೀನನ್ನು ಸ್ವಾಧೀನ ಪಡೆಯಲು ರೆವಿನ್ಯೂ ಇನ್ಸ್ ಪೆಕ್ಟರ್ ಆಗಿ ಆಗತಾನೇ ಬಂದಿದ್ದ ನನ್ನನ್ನು ಅಧಿಕೃತಗೊಳಿಸಿ ತಹಸೀಲ್ದಾರರು ಆದೇಶಿಸಿ ಹಳ್ಳಿಗೆ ಹೋಗಲು ಸೂಚಿಸಿದರು. ಸಹೋದ್ಯೋಗಿಗಳು ಅಲ್ಲಿನ ಪರಿಸ್ಥಿತಿ ಕುರಿತು ವಿವರಿಸಿದ್ದು ಕೇಳಿ ಆ ಕೆಲಸದ ಕಷ್ಟದ ಅರಿವಾಯಿತು. ತಹಸೀಲ್ದಾರರು ಅಗತ್ಯ ಬಿದ್ದರೆ ಪೋಲಿಸ್ ನೆರವು ಪಡೆದು ಹೋಗಲು ತಿಳಿಸಿದರು.
ಪೋಲಿಸ್ ಇನ್ಸ್ ಪೆಕ್ಟರರಿಗೂ ತಿಳಿಸಿ ಸಂಬಂಧಿಸಿದವರಿಗೆ ಪೂರ್ವಸೂಚನೆ ನೀಡಿ ಆ ಗ್ರಾಮಕ್ಕೆ ನಿಗದಿತ ದಿನ ಹೋದರೆ ಅಲ್ಲಿ ಗ್ರಾಮದ ಗಡಿಯಲ್ಲಿ ಸುಮಾರು 300-400 ಜನರು ದೊಣ್ಣೆ, ಮಚ್ಚು, ಕುಡುಗೋಲುಗಳನ್ನು ಹಿಡಿದುಕೊಂಡು ಗುಂಪು ಕೂಡಿದ್ದರು. ನನ್ನನ್ನು ತಡೆದು ಗ್ರಾಮಕ್ಕೆ ಬರಬಾರದೆಂದೂ, ಹಾಗೂ ಮುಂದುವರೆದರೆ ಪರಿಣಾಮ ನೆಟ್ಟಗಿರುವುದಿಲ್ಲವೆಂದು ಎಚ್ಚರಿಸಿದರು. 'ನೀವು ಹೋಗಿರಿ, ಹಿಂದೆ ಬರುತ್ತೇವೆ' ಎಂದು ಹೇಳಿದ್ದ ಪೋಲಿಸರ ಸುಳಿವಿರಲಿಲ್ಲ. ನಾನು ಹೇಳಿದ ಯಾವ ಮಾತುಗಳನ್ನೂ ಗ್ರಾಮಸ್ಥರು ಕೇಳಿಸಿಕೊಳ್ಳುವ ಸ್ಥಿತಿಯಲ್ಲಿರಲಿಲ್ಲ. ನನ್ನನ್ನು ಈಗ ತಡೆಯಬಹುದೆಂದೂ, ನನಗೆ ತೊಂದರೆಯಾದರೆ ನನ್ನ ಸ್ಥಾನದಲ್ಲಿ ಬೇರೊಬ್ಬರು ಹೆಚ್ಚಿನ ಪೋಲಿಸ್ ಸಹಾಯ ಪಡೆದು ಈ ಕೆಲಸ ಮಾಡುತ್ತಾರೆಂದೂ, ಕೆಲಸ ಪೂರ್ಣಗೊಳ್ಳುವವರೆಗೆ ಇದು ಮುಂದುವರೆಯುವುದೆಂದೂ ಹೇಳಿದರೂ ಯಾವುದೇ ಪರಿಣಾಮ ಎದುರಿಸಲು ಅವರುಗಳು ಸಿದ್ಧರಾಗಿದ್ದರು. ಕೊನೆಯ ಅಸ್ತ್ರವಾಗಿ ನಾನು ಜಮೀನನ್ನು ಈಗ ಸ್ವಾಧೀನ ಪಡೆಯುವುದಿಲ್ಲವೆಂದೂ, ಈ ಕುರಿತು ಮೇಲಾಧಿಕಾರಿಗಳಿಗೆ ವರದಿ ಕೊಡುವುದಾಗಿಯೂ ಒಮ್ಮೆ ಸ್ವಾಮಿಗಳನ್ನು ಭೇಟಿ ಮಾಡಿ ಹೋಗುವುದಾಗಿ ಹೇಳಿದರೆ ಅದಕ್ಕೂ ಅವರುಗಳು ಒಪ್ಪಲಿಲ್ಲ. ಬಹಳಷ್ಟು ಮನವರಿಕೆ ಮಾಡಿದ ನಂತರ ಕೊನೆಗೆ ಸ್ವಾಮಿಗಳನ್ನು ಭೇಟಿ ಮಾಡಲು ಅನುಮತಿ ಕೊಟ್ಟ ಗುಂಪು ನನ್ನೊಂದಿಗೆ ಮಠಕ್ಕೆ ಹಿಂಬಾಲಿಸಿತು.
ದೊಡ್ಡ ಕಲ್ಲಿನ ಕಟ್ಟಡದಂತೆಯೇ ಇದ್ದ ಮಠಕ್ಕೆ ಬಂದು ಸ್ವಾಮಿಗಳನ್ನು ಕಂಡು ಅವರಿಗೆ ನಮಸ್ಕರಿಸಿದಾಗ ಅವರು ನನ್ನನ್ನೇ ನೆಟ್ಟ ನೋಟದಿಂದ ನೋಡುತ್ತಾ ನಿಂತಿದ್ದು ಕೆಲಕ್ಷಣದ ನಂತರ ನನ್ನನ್ನು ಅಪ್ಪಿಕೊಂಡು ಕಣ್ಣೀರು ಸುರಿಸಿದ್ದು ನನಗೆ ಆಶ್ಚರ್ಯ ತಂದಿತು. ನಾನು ಮಾತನಾಡಲು ಹೋದಾಗ ಸುಮ್ಮನಿರಲು ಸನ್ನೆ ಮಾಡಿದ ಅವರು ನಂತರ ಸ್ವಲ್ಪ ಸುಧಾರಿಸಿಕೊಂಡು ಮೊದಲು ಮಠದಲ್ಲಿ ಊಟ ಮಾಡಬೇಕೆಂದೂ, ಆಮೇಲೆ ಮಾತನಾಡಬಹುದೆಂದು ಹೇಳಿದರು. ಅವರು ಸಂಸಾರಿ ಸ್ವಾಮಿಯಾಗಿದ್ದರು. ನನಗೆ ಕೈಕಾಲು ತೊಳೆಯಲು ಅವರೇ ನೀರು ತುಂಬಿಕೊಟ್ಟರು. ಬಾಳೆಹಣ್ಣುಗಳು, ಹಲಸಿನಹಣ್ಣಿನ ತೊಳೆಗಳು ಮತ್ತು ಜೇನುತುಪ್ಪ ತಂದು ತಿನ್ನಲು ಕೊಟ್ಟರು. ಸುಮಾರು ಐವತ್ತು ವರ್ಷದವರಿರಬಹುದಾದ ಆ ಸ್ವಾಮಿಗಳು ಮಾಸಲು ಬಿಳಿಯ ಬಣ್ಣದ ತುಂಡು ಕಚ್ಚೆ ಪಂಚೆ ಉಟ್ಟಿದ್ದರು. ಹೆಗಲ ಮೇಲೆ ಅದೇ ಬಣ್ಣದ ಅಂಗವಸ್ತ್ರ ಇತ್ತು. ಹಣೆಯ ಮೇಲೆ ವಿಭೂತಿ ಮತ್ತು ಕುಂಕುಮ ಎದ್ದು ಕಾಣುತ್ತಿತ್ತು. ನನ್ನನ್ನು ನೋಡುವಾಗಲೆಲ್ಲಾ ಅವರ ಕಣ್ಣಿನಲ್ಲಿ ನೀರು ಜಿನುಗುತ್ತಿತ್ತು. ಹೋಳಿಗೆ ಊಟ ಮಾಡಿಸಿ ಸ್ವತಃ ಅವರೇ ನನಗೆ ಬಡಿಸಿದರು. ನಾನು ಊಟ ಮಾಡುವಾಗ ಪಕ್ಕದಲ್ಲಿ ಕುಳಿತು ಬೀಸಣಿಗೆಯಿಂದ ಗಾಳಿ ಬೀಸುತ್ತಿದ್ದರು. ನನ್ನ ಬೆನ್ನು ಸವರುತ್ತಾ 'ಕಲ್ಲೇಶಿ, ಕಲ್ಲೇಶಿ' ಎಂದು ಗುಣುಗುಣಿಸುತ್ತಿದ್ದರು. ನನಗೂ ಏನು ಮಾತನಾಡಬೇಕೆಂದು ತೋಚುತ್ತಿರಲಿಲ್ಲ. ಅಲ್ಲಿದ್ದ ಜನರೂ ಸಹ ಸ್ತಬ್ಧರಾಗಿ ನೋಡುತ್ತಿದ್ದರು. ಅವರೂ ಸಹ 'ಹೌಂದು, ಕಲ್ಲೇಶಿ ಹಾಂಗೆ ಹಾನೆ' (ಹೌದು, ಕಲ್ಲೇಶಿ ಹಾಗೆ ಇದ್ದಾನೆ) ಎಂದು ಪಿಸುಮಾತನಾಡುತ್ತಿದ್ದು ನನಗೆ ಕೇಳಿಸುತ್ತಿತ್ತು. ಊಟವಾದ ಮೇಲೆ ವಿಶ್ರಾಂತಿ ಪಡೆಯಲು ಒಂದು ಕೊಠಡಿಗೆ ಕರೆದೊಯ್ದ ಅವರು ನನಗೆ "ನೀನು ನನ್ನ ಕಲ್ಲೇಶಿ, ದೇವರೇ ನಿನ್ನನ್ನು ಇಲ್ಲಿಗೆ ಕಳಿಸ್ಯಾನ" ಎಂದು ಹೇಳಿದರು. ನಾನು ಕಲ್ಲೇಶಿಯ ಬಗ್ಗೆ ವಿಚಾರಿಸಿದೆ. ಅವರಿಗೆ ಐವರು ಮಕ್ಕಳಿದ್ದರಂತೆ. ಕಲ್ಲೇಶಿ ಅವರ ಎರಡನೇ ಮಗ. ಒಳ್ಳೆಯ ಸ್ವಭಾವದವನಾಗಿ ಎಲ್ಲರಿಗೂ ಅಚ್ಚುಮೆಚ್ಚಿನವನಾಗಿದ್ದ ಅವನು ಸುಮಾರು ಐದು ವರ್ಷಗಳ ಹಿಂದೆ ಕಾಯಿಲೆ ಬಂದು ಮೃತನಾದಾಗ ಅವನಿಗೆ 17 ವರ್ಷವಾಗಿತ್ತಂತೆ. ನೋಡಲು ನನ್ನಂತೆಯೇ ಇದ್ದನಂತೆ. ನಾನು ನಡೆಯುವುದು, ಮಾತನಾಡುವುದು, ಹಾವಭಾವಗಳು ಥೇಟ್ ಕಲ್ಲೇಶಿಯ ತರಹವೇ ಇದ್ದು ಕಲ್ಲೇಶಿಗೂ ನನಗೂ ಎಲ್ಲಾ ರೀತಿಯಲ್ಲೂ ಹೋಲಿಕೆಯಿದೆಯೆಂದು ಹೇಳಿದ ಅವರು ಗದ್ಗದಿತರಾಗಿ ನನ್ನನ್ನು ತಬ್ಬಿಕೊಂಡು 'ಕಲ್ಲೇಶಿ' ಎನ್ನುತ್ತಾ ಅಳತೊಡಗಿದರು. ನಾನು ಅವರ ಕೈಹಿಡಿದು ಸಮಾಧಾನಿಸಿ ಊಟ ಮಾಡಿಕೊಂಡು ಬರುವಂತೆ ಹೇಳಿದೆ. ಅವರು ಮಂತ್ರಮುಗ್ಧರಂತೆ ನಾನು ಹೇಳಿದಂತೆ ಮಾಡಿದರು. ಅಲ್ಲಿ ಸೇರಿದ್ದ ಜನರಿಗೂ ಮಠದಲ್ಲೇ ಊಟದ ವ್ಯವಸ್ಥೆಯಾಗಿತ್ತು. ಸ್ವಾಮಿಗಳ ವರ್ತನೆಯಿಂದ ಜನಗಳಿಗೂ ನನ್ನ ಮೇಲಿದ್ದ ರೋಷ ಕಡಿಮೆಯಾಗಿತ್ತು. ಈ ಅವಧಿಯಲ್ಲಿ ಸ್ವಾಮಿಗಳು ಏನೋ ನಿರ್ಧಾರಕ್ಕೆ ಬಂದಂತಿತ್ತು. ಊಟದ ನಂತರ ಬಂದ ಅವರು "ಮಗೂ, ಬಾಯಿಲ್ಲಿ, ಅದೇನು ಕಾಗದ ಕೊಡು, ಎಲ್ಲಿ ಸೈನು ಮಾಡಬೇಕು ಹೇಳು" ಎಂದರು. ಜಮೀನನ್ನು ಸರ್ಕಾರಕ್ಕೆ ಬಿಟ್ಟುಕೊಡಲು ಅವರು ಸಿದ್ಧರಾಗಿದ್ದರು. ವಿರೋಧಿಸಿದ ಜನರನ್ನೂ ಅವರೇ ಸಮಾಧಾನಿಸಿ ಪರಿಸ್ಥಿತಿ ವಿವರಿಸಿ "ಎಂದಿದ್ದರೂ ಈ ಜಮೀನು ಕೈಬಿಟ್ಟು ಹೋಗುವುದಂತೂ ಸತ್ಯ. ಈಗ ನನ್ನ ಮಗನೇ ಬಂದಿದ್ದಾನೆ. ಅವನ ಮುಖಾಂತರವೇ ಹೋಗಲಿ ಬಿಡಿ" ಎಂದು ಅವರನ್ನು ಒಪ್ಪಿಸಿದರು. ಸಂಬಂಧಿಸಿದ ಕಾಗದ ಪತ್ರಗಳಿಗೆಲ್ಲಾ ಅವರೇ ಸಹಿ ಮಾಡಿದ್ದಲ್ಲದೆ ಅಲ್ಲಿದ್ದ ಪ್ರಮುಖರೆಲ್ಲರ ಸಾಕ್ಷಿ ಸಹಿ ಸಹ ಹಾಕಿಸಿದರು. ಬಲವಂತವಾಗಿ ಮಹಜರ್ ಮಾಡಿ ಕಾಗದದ ಮೇಲೆ ಜಮೀನು ಸ್ವಾಧೀನ ಪಡೆಯುವ, ಗಲಾಟೆ ಆಗುವ ಸಂಭವಗಳು, ಇತ್ಯಾದಿ ನಡೆಯುವ ಪ್ರಸಂಗವೇ ಬರಲಿಲ್ಲ. ಎಲ್ಲಾ ಕೆಲಸಗಳು ಮುಗಿದಾಗ ಹೊರಡಲು ಅನುವಾಗಿ ಅವರಿಗೆ ನಮಸ್ಕರಿಸಿದೆ. ಅವರು ಹೃದಯಪೂರ್ವಕವಾಗಿ ಆಶೀರ್ವದಿಸಿ 'ನಿನ್ನ ಎಲ್ಲಾ ಕಷ್ಟಗಳೂ ದೂರವಾಗಲಿ, ನೂರುಕಾಲ ಸುಖವಾಗಿ ಬಾಳು' ಎಂದು ಹೇಳಿ ಮತ್ತೆ ನನ್ನನ್ನು ತಬ್ಬಿಕೊಂಡರು. ಅವರ ಕಣ್ಣು ತೇವವಾಗಿತ್ತು. ಜನರ ಕೈಯಲ್ಲಿದ್ದ ದೊಣ್ಣೆ, ಮಚ್ಚುಗಳು ಮಾಯವಾಗಿದ್ದವು. ಅವರೂ ನನ್ನನ್ನು ಮೆಚ್ಚುಗೆಯಿಂದ ನೋಡುತ್ತಿದ್ದುದು ನನಗೆ ನಂಬಲಾಗದ ಸತ್ಯವಾಗಿ ಕಾಣುತ್ತಿತ್ತು. ಇಷ್ಟೆಲ್ಲಾ ನಡೆದರೂ ಸಹಾಯಕ್ಕೆ ಬರಬೇಕಿದ್ದ ಪೋಲಿಸರು ಬಂದಿರಲೇ ಇಲ್ಲ. ಅವರೂ 'ಬಂದರೂ ಗಲಾಟೆಯಾಗುತ್ತದೆ, ಸುಮ್ಮನೆ ವಾಪಸು ಬರಬೇಕು' ಎಂದು ಭಾವಿಸಿದ್ದಿರಬೇಕು. ಮಠಕ್ಕೆ ಸೇರಿದ ವಾಹನದಲ್ಲಿ ನನ್ನನ್ನು ಸೇಡಂಗೆ ಕಳಿಸಿಕೊಟ್ಟರು. ನನಗೆ ಆಗಾಗ್ಗೆ ಬಂದು ಹೋಗುತ್ತಿರಲು ಸ್ವಾಮಿಗಳು ತಿಳಿಸಿದರು. ನಂತರದ ದಿನಗಳಲ್ಲೂ ಅವರೇ ಎರಡು-ಮೂರು ಸಲ ಸೇಡಂಗೆ ಬಂದಾಗ ಕಛೇರಿಗೂ ಬಂದು ಆಶೀರ್ವದಿಸಿ ಹಣ್ಣು ಕೊಟ್ಟು ಹೋಗಿದ್ದರು. ನನ್ನ ಈ ಕೆಲಸದ ಬಗ್ಗೆ ಉಪವಿಭಾಗಾಧಿಕಾರಿಯವರು ಆಶ್ಚರ್ಯ ಮತ್ತು ಸಂತೋಷ ವ್ಯಕ್ತಪಡಿಸಿದ್ದರು. ಸ್ಥಳೀಯ ಪತ್ರಿಕೆಗಳಲ್ಲೂ ಈ ವಿಷಯ ಪ್ರಧಾನವಾಗಿ ಪ್ರಸ್ತಾಪವಾಗಿತ್ತು.
ನಾನು ನಂತರದ ದಿನಗಳಲ್ಲಿ ಆಗಾಗ್ಗೆ ಹೋಗಿ ಸ್ವಾಮಿಗಳನ್ನು ಕಂಡು ಮಾತನಾಡಿಸಿ ಬರಬೇಕಾಗಿತ್ತು, ಅವರ ಪಾಲಿನ ಕಲ್ಲೇಶಿಯಾಗಬೇಕಿತ್ತು ಎಂದು ಈಗ ನನಗೆ ಅನ್ನಿಸುತ್ತಿದೆ. ಆದರೆ ಕಾಲ ಮಿಂಚಿದೆ. ಆ ಘಟನೆ ನಡೆದಾಗ ನನಗೆ 23 ವರ್ಷ ವಯಸ್ಸು, ಮದುವೆಯಾಗಿರಲಿಲ್ಲ. ತುರ್ತು ಪರಿಸ್ಥಿತಿ ಕಾಲದ ಕಷ್ಟಗಳು, ಅನಿರೀಕ್ಷಿತ ವರ್ಗಾವಣೆ, ಹುಡುಗುತನ, ಇತ್ಯಾದಿಗಳಿಂದಾಗಿ ನಾನು ಅವರನ್ನು ಭೇಟಿಯಾಗದೆ ಇದ್ದುದು ಸರಿಯಲ್ಲವೆಂದು ನಾನು ಈಗ ಅಂದುಕೊಂಡರೆ ಅದಕ್ಕೆ ಅರ್ಥವಿಲ್ಲ. ನಂತರದಲ್ಲಿ ಕೆಲವು ತಿಂಗಳುಗಳ ನಂತರ ತುರ್ತು ಪರಿಸ್ಥಿತಿ ಕೊನೆಗೊಂಡು ನನಗೆ ವಾಪಸು ಹಾಸನಕ್ಕೆ ವರ್ಗವಾಗಿ ಬಂದ ಮೇಲೆ ಈ ಕಲ್ಲೇಶಿ ಪ್ರಕರಣ ಮರೆತೇ ಬಿಟ್ಟು ತಪ್ಪು ಮಾಡಿದ ಮನೋಭಾವ ನನ್ನನ್ನು ಈಗ ಕಾಡಿದೆ. ಸ್ವಾಮಿಗಳ ಹೃದಯಪೂರ್ವಕವಾದ ಆಶೀರ್ವಾದ ನನ್ನನ್ನು ಕಷ್ಟಕಾಲಗಳಲ್ಲಿ ಕಾಪಾಡಿದೆ ಎಂಬುದು ನನಗೀಗ ಅರಿವಾಗಿದೆ.