ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಬುಧವಾರ, ಅಕ್ಟೋಬರ್ 20, 2010

ಮೂಢ ಉವಾಚ -20: ಮತ್ಸರ


ಕೋಪಿಷ್ಠರೊಡನೆ ಬಡಿದಾಡಬಹುದು|
ಅಸಹನೀಯವದು ಮತ್ಸರಿಗರ ಪ್ರೇಮ||
ಪರರುತ್ಕರ್ಷ ಸಹಿಸರು ಕರುಬಿಯುರಿಯುವರು|
ಉದರದುರಿಯನಾರಿಸುವವರಾರೋ ಮೂಢ||


ಭುಕ್ತಾಹಾರ ಜೀರ್ಣಿಸುವ ವೈಶ್ವಾನರ|*
ಕಂಡವರನು ಸುಡುವನೆ ಅಸೂಯಾಪರ||
ಶತಪಾಲು ಲೇಸು ಮಂಕರೊಡನೆ ಮೌನ|
ಬೇಡ ಮಚ್ಚರಿಗರೊಡನೆ ಸಲ್ಲಾಪ ಮೂಢ||


ಸದ್ಗುಣಕಮಲಗಳು ಕಮರಿ ಕಪ್ಪಡರುವುವು|
ಸರಿಯು ತಪ್ಪೆನಿಸಿ ತಪ್ಪು ಒಪ್ಪಾಗುವುದು||
ಅರಿವು ಬರುವ ಮುನ್ನಾವರಿಸಿ ಬರುವ ಮತ್ಸರವು|
ನರರ ಕುಬ್ಜರಾಗಿಸುವುದು ಮೂಢ||

[* ವೈಶ್ವಾನರ ಎಂಬುದು ಹೊಟ್ಟೆಯೊಳಗೆ ಇರುವ ಕಿಚ್ಚು. ತಾಯಿಯ ಗರ್ಭದಲ್ಲಿರುವಾಗಲೇ ಹುಟ್ಟುವ ಈ ಕಿಚ್ಚು ತಿಂದ ಆಹಾರವನ್ನು ಜೀರ್ಣಿಸುತ್ತದೆ.]
********************
-ಕವಿನಾಗರಾಜ್.

1 ಕಾಮೆಂಟ್‌:

  1. ಇಂತಹ ಒಂದು ಅದ್ಭುತ ಪದ್ಯವನ್ನು ಎರಡುವಾರಗಳ ನಂತರ ನೋಡುತ್ತಿದ್ದೇನಲ್ಲಾ! ವೇದಸುಧೆಗೆ ಈ ಪದ್ಯ ಯಾವಾಗ ಬರುತ್ತದೆ? ಜನವರಿ ಕವಿಗೋಷ್ಠಿಯಲ್ಲಿ ಮೂಢನ ಕೂಸು ಜನ್ಮತಾಳಿಯೇ ಬಿಡಬೇಕು, ಇನ್ನು ನಿಧಾನ ಬೇಡ, ನಾನು ಕಾಯಲಾರೆ.

    ಪ್ರತ್ಯುತ್ತರಅಳಿಸಿ