ಮೊದಲಿಗೆ.. . .
ನಾನು ಅಂಚೆ ಕಛೇರಿಯಲ್ಲಿ ಒಂದು ವರ್ಷ ಮತ್ತು ಕಂದಾಯ ಇಲಾಖೆಯಲ್ಲಿ 36 ವರ್ಷಗಳು ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದು ಇನ್ನೂ ಎರಡು ವರ್ಷಗಳ ಸೇವಾವದಿ ಇರುವಂತೆಯೇ ಸ್ವ ಇಚ್ಛಾ ನಿವೃತ್ತಿ ಪಡೆದುಕೊಂಡೆ. ಜೈಲಿನಲ್ಲಿ ಖೈದಿಯಾಗಿಯೂ ಇದ್ದ ನಾನು (ಯಾವುದೇ ಭ್ರಷ್ಟಾಚಾರ ಅಥವಾ ಸಮಾಜ ದ್ರೋಹಿ ಕೆಲಸ ಮಾಡಿ ಅಲ್ಲ, ಕಾಲಕ್ರಮದಲ್ಲಿ ವಿವರಿಸುವೆ) ಜೈಲಿನ ಸೂಪರಿಂಟೆಂಡೆಂಟ್ ಆಗಿಯೂ, ತಾಲ್ಲೂಕಿನ ಮ್ಯಾಜಿಸ್ತ್ರೇಟ್ ಆಗಿಯೂ ಕೆಲಸ ಮಾಡುವ ಅವಕಾಶ ದೇವರು ಕರುಣಿಸಿದ್ದು ನನ್ನ ಸೌಭಾಗ್ಯ ಮತ್ತು ವಿಶೇಷವೇ ಸರಿ. ಸ್ಯಯಂ ನಿವೃತ್ತಿ ಹೊಂದುವ ಸಮಯದಲ್ಲಿ ಕೇವಲ 10 ದಿನಗಳು ಸೇವೆಯಲ್ಲಿ ಮುಂದುವರೆದಿದ್ದರೆ ಅಸಿಸ್ಟೆಂಟ್ ಕಮಿಷನರ್ ಆಗಿ ಬಡ್ತಿ ಹೊಂದಲು ಅವಕಾಶವಿತ್ತು. ಇದು ಗೊತ್ತಿದ್ದರೂ ನನ್ನದೇ ಆದ ಕಾರಣಗಳಿಗಾಗಿ ಸ್ವಯಂ ನಿವೃತ್ತಿ ಬಯಸಿ ಆರಿಸಿಕೊಂಡೆ. ಇದು ಸರಿಯಾಯಿತೋ ಇಲ್ಲವೋ ಎಂಬುದನ್ನು ಕಾಲ ನಿರ್ಧರಿಸಲಿ. ಸೇವಾಕಾಲದಲ್ಲಿ ನನ್ನ ಮನಸ್ಸಿನ ಭಿತ್ತಿಯಲ್ಲಿ ಉಳಿದುಕೊಂಡಿರುವ ಕೆಲವು ನೆನಪುಗಳು ಮತ್ತು ಘಟನೆಗಳನ್ನು ಮಿತ್ರರೊಂದಿಗೆ ಹಂಚಿಕೊಳ್ಳುವ ಇಚ್ಛೆಯಿಂದ ಈ ಬರಹ ಪ್ರಾರಂಭಿಸಿರುವೆ. ಸ್ವಾಗತಿಸಲು ನಮ್ರ ವಿನಂತಿ. ಅಂಚೆ ಪುರಾಣದೊಂದಿಗೆ ಅನುಭವ ಕಥನ ಪ್ರಾರಂಭಿಸುವೆ.
ಅಂಚೆ ಪುರಾಣ
'ನಾನು ದೊಡ್ಡವನಾದ ಮೇಲೆ ಪೋಸ್ಟ್ ಕಾರ್ಡು ಮಾರುತ್ತೇನೆ'
ಇದು ನಾನು ಸಣ್ಣವನಿದ್ದಾಗ ಯಾರಾದರೂ 'ದೊಡ್ಡವನಾದ ಮೇಲೆ ಏನು ಮಾಡುತ್ತೀಯಾ?' ಎಂದು ಕೇಳಿದರೆ ನಾನು ಕೊಡುತ್ತಿದ್ದ ಉತ್ತರ. ಆಗೆಲ್ಲಾ ಪೋಸ್ಟ್ ಕಾರ್ಡುಗಳು ಬಹಳವಾಗಿ ಬಳಕೆಯಾಗುತ್ತಿದ್ದ ಕಾಲ. ಈಗಿನಂತೆ ಫೋನು ಸಾಮಾನ್ಯ ಬಳಕೆಯಲ್ಲಿರಲಿಲ್ಲ. ಅಂಚೆ ಕಛೇರಿಗಳಲ್ಲಿ ಫೋನು ಇದ್ದರೂ ದೂರದೂರಿಗೆ ಫೋನು ಮಾಡಿ ಮಾತನಾಡಲು ಬುಕ್ ಮಾಡಿ ಗಂಟೆಗಟ್ಟಲೆ, ಕೆಲವೊಮ್ಮೆ ದಿನಗಟ್ಟಲೆ ಕಾಯಬೇಕಿತ್ತು. ಯಾರಿಗೆ ಫೋನು ಮಾಡಲಾಗುತ್ತಿತ್ತೋ ಅವರನ್ನು ಆ ಊರಿನ ಅಂಚೆ ನೌಕರ ಹೋಗಿ ಕರೆದುಕೊಂಡು ಬಂದ ನಂತರವಷ್ಟೇ ಅಲ್ಲಿಂದ ಬರುವ ಕರೆಗಾಗಿ ಕಾಯುತ್ತಾ ಕುಳಿತುಕೊಳ್ಳಬೇಕಿತ್ತು. ಆಗೆಲ್ಲಾ ಎರಡು ಪೈಸೆಗೆ ಒಂದು ಕಾರ್ಡು ಸಿಗುತ್ತಿತ್ತು. ಪ್ರತಿ ಮನೆಯಲ್ಲಿ ಕಾರ್ಡುಗಳ ಕಟ್ಟೇ ಇರುತ್ತಿತ್ತು. ಮುಗಿದಂತೆಲ್ಲಾ 20-30 ಕಾರ್ಡುಗಳನ್ನು ಒಟ್ಟಿಗೇ ತರಿಸಿಡುತ್ತಿದ್ದರು. ಕಾರ್ಡುಗಳನ್ನು ತರಲು ನಾನು ಅಂಚೆ ಕಛೇರಿಗೆ ಹೋದಾಗಲೆಲ್ಲಾ 'ಕಾರ್ಡು ಮಾರಿದರೆ ತುಂಬಾ ಹಣ ಬರುತ್ತೆ. ಅದರಿಂದ ಒಂದು ಚೀಲದ ತುಂಬಾ ಪೆಪ್ಪರಮೆಂಟು, ಕಂಬರಕಟ್ಟು (ಕೊಬ್ಬರಿ, ಬೆಲ್ಲ ಉಪಯೋಗಿಸಿ ಮಾಡಲಾಗುತ್ತಿದ್ದ ಅಂಟಿನ ಉಂಡೆಗಳು) ಚಾಕೊಲೇಟುಗಳನ್ನು ತಂದಿಟ್ಟುಕೊಳ್ಳಬಹುದು' ಎಂದೆಲ್ಲಾ ಅಂದುಕೊಳ್ಳುತ್ತಿದ್ದೆ. ಮನೆಗೆ ಬಂದ ಕಾರ್ಡುಗಳನ್ನು ಪೋಣಿಸಿ ಒಂದು ತೊಲೆಗೆ ನೇತು ಹಾಕಿ ಇಡುತ್ತಿದ್ದರು. ಎಷ್ಟೋ ವರ್ಷಗಳ ವರೆಗೆ ಕಾರ್ಡುಗಳನ್ನು ಇಟ್ಟಿರುತ್ತಿದ್ದರು. ನಾನು ಹುಟ್ಟಿದ್ದ ಸಂದರ್ಭದಲ್ಲಿ ಮಗುವಿಗೆ 'ನಾಗರಾಜ ಎಂದು ಹೆಸರಿಡಿ' ಎಂದು ನನ್ನ ತಂದೆಗೆ ನನ್ನ ತಾಯಿಯ ಅಣ್ಣ ದಿ. ಶ್ರೀನಿವಾಸಮೂರ್ತಿಯವರು ಬರೆದಿದ್ದ ಕಾಗದವನ್ನು ನನಗೆ ಓದಲು, ಬರೆಯಲು ಬಂದ ನಂತರ ನಾನೇ ಓದಿದ್ದ ನೆನಪು ನನಗೆ ಈಗಲೂ ಇದೆ. ದೊಡ್ಡವನಾದ ಮೇಲೆ ನಾನು ಪೋಸ್ಟ್ ಕಾರ್ಡು ಮಾರದಿದ್ದರೂ ಹಾಸನದ ಅಂಚೆ ಕಛೇರಿಯಲ್ಲಿ ಒಂದು ವರ್ಷ ಗುಮಾಸ್ತನಾಗಿ ಕೆಲಸ ಮಾಡುವುದರೊಂದಿಗೆ ನನ್ನ ವೃತ್ತಿಜೀವನ ಪ್ರಾರಂಭವಾಯಿತು!
ನಾನು ಹಾಸನದ ಕಾಲೇಜಿನಲ್ಲಿ 1971ರಲ್ಲಿ ಅಂತಿಮ ಬಿ.ಎಸ್.ಸಿ.ಯಲ್ಲಿ ಓದುತ್ತಿದ್ದಾಗ ಪತ್ರಿಕೆಯಲ್ಲಿ ಬಂದ ಪ್ರಕಟಣೆ ನೋಡಿ ಅಂಚೆ ಗುಮಾಸ್ತರ ಹುದ್ದೆಗೆ ಅರ್ಜಿ ಹಾಕಿದ್ದೆ. ಎಸ್.ಎಸ್.ಎಲ್.ಸಿ.ಯಲ್ಲಿ ತೆಗೆದ ಅಂಕಗಳನ್ನು ಆಧರಿಸಿ ನೇಮಕ ಮಾಡಿಕೊಳ್ಳಲಾಗುತ್ತಿತ್ತು.ಪಿ.ಯು.ಸಿ. ಓದಿದ್ದರೆ ಶೇ. 5 ಅಂಕ ಹೆಚ್ಚಿಗೆ ಕೊಡುತ್ತಿದ್ದರು. ನನಗೆ ಎಸ್ಸೆಸ್ಸೆಲ್ಸಿಯಲ್ಲಿ ಶೇ. 73.4 ಅಂಕ ಬಂದಿದ್ದು ಪಿ.ಯು.ಸಿ.ಯದು ಸೇರಿ ಶೇ. 78.4 ಆಗಿತ್ತು. ಆ ಕಾಲದಲ್ಲಿ ರಾಂಕು ವಿದ್ಯಾರ್ಥಿಗಳಿಗೂ ಶೇ. 80-85 ಕ್ಕಿಂತ ಹೆಚ್ಚಿಗೆ ಅಂಕಗಳನ್ನು ಕೊಡುತ್ತಿರಲಿಲ್ಲ. ನಾನು ಚಿತ್ರದುರ್ಗದ ಮುನಿಸಿಪಲ್ ಹೈಸ್ಕೂಲಿನಲ್ಲಿ ಎಸ್ಸೆಸ್ಸೆಲ್ಸಿ ಪಾಸು ಮಾಡಿದ್ದು ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದರಿಂದ ಪುರಸಭೆಯಲ್ಲಿ ನನಗೆ ಹಾರ ಹಾಕಿ ಸನ್ಮಾನಿಸಿ 50 ರೂ. ಬಹುಮಾನ ಕೊಟ್ಟಿದ್ದರು. ಡಿಗ್ರಿ ಓದಿದ ನಂತರ ಕೆಲಸ ಹುಡುಕಲು ಪ್ರಾರಂಭಿಸಿ ಚಿಕ್ಕಮಗಳೂರಿನ ಒಂದು ಖಾಸಗಿ ಟ್ಯುಟೋರಿಯಲ್ ನಲ್ಲಿ ಟ್ಯೂಟರ್ ಆಗಿ ಸೇರಲು ಮಾತನಾಡಿಕೊಂಡು ಬಂದಿದ್ದೆ. ಸಂಬಳ ಎಷ್ಟು ಅವರೂ ಹೇಳಲಿಲ್ಲ, ನಾನೂ ಕೇಳಿರಲಿಲ್ಲ. ಆಗ ನರಸಿಂಹರಾಜಪುರದಲ್ಲಿ ಕೋರ್ಟಿನಲ್ಲಿ ಕೆಲಸ ಮಾಡುತ್ತಿದ್ದ ತಂದೆಯವರಿಗೆ ವಿಷಯ ತಿಳಿಸುವ ಸಲುವಾಗಿ ಪತ್ರ ಬರೆಯಲು ಕಾರ್ಡು ಕೊಳ್ಳಲು ಚಿಕ್ಕಮಗಳೂರಿನ ಅಂಚೆ ಕಛೇರಿಗೆ ಹೋದಾಗ ಅಲ್ಲಿನ ಸೂಚನಾ ಫಲಕದಲ್ಲಿ ಅಂಚೆ ಗುಮಾಸ್ತರಾಗಿ ನೇಮಕವಾದವರ ಪಟ್ಟಿ ಇತ್ತು. ನೋಡಿದರೆ ನನ್ನ ಹೆಸರೂ ಅದರಲ್ಲಿತ್ತು. ಖುಷಿಯಿಂದ ಪೋಸ್ಟ್ ಮಾಸ್ಟರರನ್ನು ಕೇಳಿದರೆ,'ಆಗತಾನೇ ಪಟ್ಟಿ ಬಂದಿತ್ತೆಂದೂ, ವಾರದ ಒಳಗೆ ನೇಮಕಾತಿ ಆದೇಶ ಬರುತ್ತದೆಂದೂ' ತಿಳಿಸಿದರು. ಟ್ಯೂಟರ್ ಕೆಲಸಕ್ಕೆ ಹೋಗದೆ ನರಸಿಂಹರಾಜಪುರಕ್ಕೇ ಹೋದೆ. ನಿರೀಕ್ಷಿಸಿದಂತೆ ಒಂದು ವಾರದ ಒಳಗೇ ನೇಮಕಾತಿ ಆದೇಶವೂ ಬಂತು. ಮೂರು ತಿಂಗಳು ಮೈಸೂರಿನ ತರಬೇತಿ ಕೇಂದ್ರದಲ್ಲಿ ತರಬೇತಿ ಪಡೆದು ಹಾಸನದ ಪ್ರಧಾನ ಅಂಚೆ ಕಛೇರಿಗೆ ಗುಮಾಸ್ತನಾಗಿ ಬಂದೆ.
ಕಠಿಣ ತರಬೇತಿ
ಮೈಸೂರಿನ ನಝರಬಾದಿನಲ್ಲಿರುವ ಮೊದಲು ಮಹಾರಾಜರಿಗೆ ಸೇರಿದ್ದಾಗಿದ್ದ ಭವ್ಯ ಮಹಲಿನಲ್ಲಿ ಅಂಚೆ ತರಬೇತಿ ಕೇಂದ್ರವಿತ್ತು. ಮೂರು ತಿಂಗಳ ತರಬೇತಿ ಶಿಸ್ತುಬದ್ಧ ಮತ್ತು ಯೋಜಿತ ರೀತಿಯಲ್ಲಿ ಬೆಳಿಗ್ಗೆ 5-30ರಿಂದ ಸಾಯಂಕಾಲ 6-00ರವರೆಗೆ ನಡೆಯುತ್ತಿತ್ತು. ಶಿಕ್ಷಾರ್ಥಿಗಳು ಅಲ್ಲೇ ವಾಸವಿದ್ದು ತರಬೇತಿ ಪಡೆಯಬೇಕಾಗಿತ್ತು. ಶಾರೀರಿಕ ವ್ಯಾಯಾಮಗಳು, ವಿವಿಧ ಅಂಚೆ ಕಛೇರಿ ಕೆಲಸಕಾರ್ಯಗಳ ಕಲಿಯುವಿಕೆಯೊಂದಿಗೆ ಮಾತೃಭಾಷೆ ಹೊರತುಪಡಿಸಿ ದಕ್ಷಿಣ ಭಾರತದ ಯಾವುದಾದರೂ ಒಂದು ಭಾಷೆಯನ್ನು ನಾವು ಕಲಿಯಬೇಕಿತ್ತು.ನಾನು ತಮಿಳು ಭಾಷೆಯನ್ನು ಓದಲು ಬರೆಯಲು ಕಲಿತೆ.
ಭಾಷಾ ಜಗಳ
ತರಬೇತಿಗೆ ಬಂದಿದ್ದ 329 ಶಿಕ್ಷಾರ್ಥಿಗಳ ಪೈಕಿ 290 ತಮಿಳರು, 12 ಮಲೆಯಾಳಿಗಳು,6 ತೆಲುಗು ಭಾಷಿಗರು ಇದ್ದು 21 ಶಿಕ್ಷಾರ್ಥಿಗಳು ಮಾತ್ರ ಕನ್ನಡದವರಾಗಿದ್ದೆವು.ಬೋಧಕರೂ ಹೆಚ್ಚಿನವರು ತಮಿಳರೇ ಆಗಿದ್ದು ನಾವು ತಮಿಳುನಾಡಿನಲ್ಲಿದ್ದೇವೇನೋ ಎಂದು ಅನ್ನಿಸುತ್ತಿತ್ತು. ಆಗಾಗ ತಮಿಳು - ಕನ್ನಡ ಭಾಷಾ ಜಗಳಗಳಾಗುತ್ತಿದ್ದವು. ನಾನು ತಮಿಳು ಭಾಷೆ ಕಲಿಯುತ್ತಿದ್ದರಿಂದ ಎರಡು ಭಾಷೆಗಳ ತುಲನೆ ಮಾಡಲು ಸುಲಭವೆನಿಸುತ್ತಿತ್ತು. ತಮಿಳು ಬೋಧಕರೊಬ್ಬರು ಬೋರ್ಡಿನ ಮೇಲೆ 'kozhikode' ಎಂದು ಬರೆದು ನನ್ನನ್ನು ಎಬ್ಬಿಸಿ ಓದಲು ಹೇಳಿದರು. ನಾನು 'ಕೋಝಿಕೋಡ್' ಎಂದು ಓದಿದಾಗ ತಮಿಳರು, ಮಲೆಯಾಳಿಗಳು ಗೊಳ್ಳೆಂದು ನಕ್ಕಿದ್ದರು. ನನಗೆ ಅದನ್ನು 'ಕೋಳಿಕೋಡ್'' ಎಂದು ಓದಬೇಕೆಂದು ಬೋಧಿಸಿದರು. ಉಚ್ಛಾರಕ್ಕೆ ತಕ್ಕಂತೆ ಬರೆಯಲು ಸಾಧ್ಯವಿದ್ದ ಕನ್ನಡ ಭಾಷೆ ಬಗ್ಗೆ ನನಗೆ ಹೆಮ್ಮೆಯಿತ್ತು. ನಾನು ನನ್ನ ತಮಿಳು ಮಿತ್ರರಿಗೆ ಆಂಗ್ಲ ಭಾಷೆಯಲ್ಲಿ 16 ಪದಗಳನ್ನು ಬರೆಯುವುದಾಗಿಯೂ, ಕನ್ನಡದಲ್ಲಿ ಅದೇ ಉಚ್ಛಾರಕ್ಕೆ ತಕ್ಕಂತೆ 16 ಪದಗಳನ್ನು ಬರೆಯುವುದಾಗಿಯೂ ಹೇಳಿ, ತಮಿಳಿನಲ್ಲಿ ಆ ಪದಗಳನ್ನು ಬರೆಯಲು ಹೇಳುತ್ತಿದ್ದೆ. ಕನ್ನಡದಲ್ಲಿನ ಕ,ಖ,ಗ,ಘ ಅಕ್ಷರಗಳ ಬದಲಿಗೆ 'ಕ್' ಎಂಬ ಒಂದೇ ಅಕ್ಷರ, ಕನ್ನಡದ ಪ,ಫ,ಬ,ಭ ಅಕ್ಷರಗಳ ಬದಲಿಗೆ 'ಪ್' ಎಂಬ ಒಂದೇ ಅಕ್ಷರ ತಮಿಳಿನಲ್ಲಿದ್ದು ಅವರಿಗೆ ಪ್ರತ್ಯೇಕ ಪದಗಳನ್ನು ಬರೆದು ತೋರಿಸಲು ಸಾಧ್ಯವಾಗುತ್ತಿರಲಿಲ್ಲ. ನಾನು ಬರೆದಿದ್ದ ಪದಗಳೆಂದರೆ "ಕಂಪ, ಖಂಪ, ಗಂಪ, ಘಂಪ, ಕಂಫ, ಖಂಫ, ಗಂಫ, ಘಂಫ, ಕಂಬ, ಖಂಬ, ಗಂಬ, ಘಂಬ, ಕಂಭ, ಖಂಭ, ಗಂಭ,ಘಂಭ"; ಈ ಪದಗಳಿಗೆ ತಮಿಳಿನಲ್ಲಿ ಕಂಪ ಎಂದು ಬರೆಯಲು ಮಾತ್ರ ಸಾಧ್ಯವಿದ್ದು ಉಚ್ಛಾರ ಮಾತ್ರ ಕಂಪ, ಗಂಬ, ಕಂಬ ಇತ್ಯಾದಿ ಹೇಳುತ್ತಿದ್ದರು.
ಮಾತನಾಡಿಸದಿದ್ದ ಹುಡುಗಿ
ಕರ್ನಾಟಕದ 21 ಶಿಕ್ಷಾರ್ಥಿಗಳ ಪೈಕಿ 19 ಉತ್ತರ ಕರ್ನಾಟಕದವರಾಗಿದ್ದು, ನಾನು ಮತ್ತು ಒಬ್ಬ ಸಂಕೇತಿ ಹುಡುಗಿ ಮಾತ್ರ ಹಾಸನದವರಾಗಿದ್ದೆವು. ನನ್ನ ಸಂಕೋಚ ಸ್ವಭಾವದಿಂದಾಗಿ ಆ ಹುಡುಗಿಯನ್ನು ತರಬೇತಿಯ ಮೂರು ತಿಂಗಳ ಅವಧಿಯಲ್ಲಿ ಒಮ್ಮೆಯೂ ಮಾತನಾಡಿಸಿರಲಿಲ್ಲ. ತರಬೇತಿಯ ನಂತರ ನನ್ನನ್ನು ಹಾಸನದ ಪ್ರಧಾನ ಕಛೇರಿಗೆ ಮತ್ತು ಆಕೆಯನ್ನು ಒಂದು ಉಪ ಅಂಚೆ ಕಛೇರಿಗೆ ನೇಮಿಸಿದಾಗಲೂ ಮಾತನಾಡಿಸಿರಲಿಲ್ಲ. ಹಾಸನದ ಪ್ರಧಾನ ಅಂಚೆ ಕಛೇರಿಯಲ್ಲಿ ಅಂಚೆ ಇನ್ಸ್ ಪೆಕ್ಟರ್ ಆಗಿದ್ದ ಸಹೋದ್ಯೋಗಿಯೊಂದಿಗೆ ಆಕೆಯ ವಿವಾಹ ಆದಾಗ 10 ಜನರೊಂದಿಗೆ 11ನೆಯವನಾಗಿ ಶುಭಾಶಯ ಹೇಳಲು ಹೋದಾಗಲೇ ಆಕೆಯನ್ನು ಪ್ರಥಮವಾಗಿ ಮಾತನಾಡಿಸಿದ್ದು ಎಂಬುದನ್ನು ನೆನೆಸಿಕೊಂಡು ನನಗೆ ನಗು ಬರುತ್ತದೆ.
ಭಾವತಂತಿ ಮೀಟಿದಾಗ
ಅಂಚೆ ತರಬೇತಿ ಕೇಂದ್ರದ ಗೀತೆಯೆಂದು ಪರಿಗಣಿಸಿದ್ದ ಹಾಡನ್ನು ಆರಿಸಿದ ಪುಣ್ಯಾತ್ಮನನ್ನು ನೆನೆಸಿಕೊಳ್ಳುತ್ತೇನೆ. ಭಗತ್ ಸಿಂಗ್ ಕುರಿತಾದ ಹಿಂದಿ ಚಲನಚಿತ್ರ "ಶಹೀದ್" ನಲ್ಲಿ ಭಗತ್ ಸಿಂಗನನ್ನು ಗಲ್ಲಿಗೇರಿಸಿದ ನಂತರ ಆತನ ಶವಯಾತ್ರೆ ನಡೆಯುತ್ತಿದ್ದ ಸಂದರ್ಭದಲ್ಲಿ ಹಿನ್ನೆಲೆಯಲ್ಲಿ ಹಾಡಲಾಗಿದ್ದ ಗೀತೆ ಅದು. ಈ ಹಾಡನ್ನು ಸಾಮೂಹಿಕವಾಗಿ ನಮ್ಮಿಂದ ಹಾಡಿಸಲಾಗುತ್ತಿತ್ತು.
ವತನ್ ಕಿ ರಾಹ ಮೇ ವತನ್ ಕಿ ನೌಜವಾನ್ ಶಹೀದ್ ಹೋ
ಶಹೀದ್ ತೇರೆ ಮೌತ್ ಹಿ ತೇರೇ ವತನ್ ಕಿ ಜಿಂದಗಿ
(ದೇಶಕ್ಕಾಗಿ ದೇಶದ ನವಯುವಕನೇ ಹುತಾತ್ಮನಾಗು
ಹುತಾತ್ಮನೇ, ನಿನ್ನ ಮರಣವೇ ನಿನ್ನ ದೇಶದ ಬದುಕು)
ಈ ರೀತಿ ಪ್ರಾರಂಭವಾಗುತ್ತಿದ್ದ ಈ ಹಾಡಿನ ಪ್ರತಿ ಸಾಲಿನಲ್ಲಿ ದೇಶಭಕ್ತಿ ಉಕ್ಕಿಸುವ, ದೇಶಕ್ಕಾಗಿ ದೇಹ ಮುಡುಪಿಡುವ, ದೇಶಕ್ಕಾಗಿ ಹೋರಾಡುವ ಪ್ರೇರಣೆ ತುಂಬಿಸಲಾಗಿತ್ತು. ಈ ಹಾಡನ್ನು ಹೇಳುವಾಗಲೆಲ್ಲಾ ನನ್ನ ಗಂಟಲು ತುಂಬಿ ಬರುತ್ತಿತ್ತು. ಭಾವಾವೇಶಕ್ಕೆ ಒಳಗಾಗುತ್ತಿದ್ದೆ. ಈ ಹಾಡನ್ನು ನಾನು ಈಗಲೂ ನಾನು ನೆನೆಸಿಕೊಳ್ಳುತ್ತಿದ್ದು, ಇದು ನನ್ನ ಮೇಲೆ ಬಹಳ ಪ್ರಭಾವ ಬೀರಿದೆ.
ಅಹರ್ನಿಶಿ ಸೇವಾಮಹೇ
ಮೈಸೂರಿನಿಂದ ಮೂರು ತಿಂಗಳ ತರಬೇತಿ ಮುಗಿಸಿಕೊಂಡು ಹಾಸನದ ಪ್ರಧಾನ ಅಂಚೆ ಕಛೇರಿಯಲ್ಲಿ ಕರ್ತವ್ಯಕ್ಕೆ ಹಾಜರಾದಾಗ ಪೋಸ್ಟ್ ಮಾಸ್ಟರ್ ಶಾನುಭಾಗರು ನನಗೆ ಪಾರ್ಸೆಲ್ ಶಾಖೆಯಲ್ಲಿ ಕೆಲಸ ಮಾಡಲು ಆದೇಶಿಸಿದರು. ಕೆಲಸದ ಅವಧಿ ಬೆಳಿಗ್ಗೆ 6-00ರಿಂದ 10-00 ಮತ್ತು ಮಧ್ಯಾಹ್ನ 2-00 ರಿಂದ 6-00 ಆಗಿತ್ತು. ಅಂಚೆ ಕಛೇರಿಗೆ ಸಮೀಪದ ಉತ್ತರ ಬಡಾವಣೆಯಲ್ಲಿ ಒಂದು ಕೊಠಡಿಯಲ್ಲಿ ಬಾಡಿಗೆಗೆ ವಾಸವಿದ್ದ ನಾನು ಬೆಳಿಗ್ಗೆ ಪ್ರಾತರ್ವಿಧಿಗಳನ್ನು ಮುಗಿಸಿಕೊಂಡು ಬೆಳಿಗ್ಗೆ 5-30ಕ್ಕೇ ಮನೆ ಬಿಡಬೇಕಾಗಿತ್ತು. ನನ್ನ ಹತ್ತಿರ ಕೈಗಡಿಯಾರವಿರಲಿಲ್ಲ. ಬೆಳಿಗ್ಗೆ ಎಚ್ಚರವಾದಾಗ ತಡವಾಯಿತೇನೋ ಎಂದು ಗಡಿಬಿಡಿಯಿಂದ ಎದ್ದು ತಣ್ಣೀರಿನಲ್ಲಿ ಸ್ನಾನ ಮುಗಿಸಿಕೊಂಡು ನನಗೆ ಇಷ್ಟವಾಗಿದ್ದ ಇಸ್ತ್ರಿ ಮಾಡಿದ ಹತ್ತಿ ಬಟ್ಟೆಯ ಬಿಳಿಯ ಪೈಜಾಮ ಮತ್ತು ಅರ್ಧ ತೋಳಿನ ಬಿಳಿಯ ಅಂಗಿ ದರಿಸಿಕೊಂಡು ಲಗುಬಗೆಯಿಂದ ಹೊರಬಿದ್ದೆ. ಅರ್ಧ ದಾರಿಯಲ್ಲಿ ಬೀಟ್ ಪೋಲಿಸಿನವನೊಬ್ಬ ಅಡ್ಡಗಟ್ಡಿ "ಏಯ್, ಎಲ್ಲಿಗೆ ಹೊರಟೆ?" ಎಂದು ಗದರಿಸಿ ಕೇಳಿದ. ನಾನು "ಪೋಸ್ಟಾಫೀಸಿಗೆ" ಎಂದಾಗ ನನ್ನ ಕುತ್ತಿಗೆ ಪಟ್ಟಿ ಹಿಡಿದುಕೊಂಡು "ರಾತ್ರಿ ಒಂದು ಗಂಟೆಯಲ್ಲಿ ಎಂಥ ಪೋಸ್ಟಾಫೀಸು? ನಿಜ ಹೇಳು" ಎಂದಾಗ ನನಗೆ ಭಯವಾಯಿತು. ಅಂಜುತ್ತಲೇ "ಪೋಸ್ಟಾಫೀಸು 24 ಗಂಟೆ ಕೆಲಸ ಮಾಡುತ್ತದೆ. ಇಲ್ಲದಿದ್ದರೆ ಪೋಸ್ಟು ಎಲ್ಲರಿಗೆ ಸಮಯಕ್ಕೆ ಸರಿಯಾಗಿ ಹೇಗೆ ತಲುಪುತ್ತದೆ?" ಎಂದು ಉತ್ತರಿಸಿದೆ. ನನ್ನ ಸಮಜಾಯಿಷಿ ಆತನಿಗೆ ಸರಿಯಾಗಿ ಕಂಡಿರಬೇಕು. ನನ್ನನ್ನು ಮೇಲೆ ಕೆಳಗೆ ನೋಡಿದ ಆತನಿಗೆ ನಾನು ಕಳ್ಳನಲ್ಲ ಎಂದು ಕಂಡಿರಬೇಕು, "ಸರಿ, ಹೋಗು" ಎಂದು ಬಿಟ್ಟ. ನಾನು 'ಬದುಕಿದೆಯಾ, ಬಡಜೀವವೇ' ಎಂದುಕೊಂಡು ಹೊರಟೆ. 'ಈ ಮಧ್ಯ ರಾತ್ರಿಯಲ್ಲಿ ಏನು ಮಾಡುವುದಪ್ಪಾ, ಈ ಪೋಲೀಸು ಬೇರೆ ಇಲ್ಲೇ ಇದ್ದಾನೆ. ವಾಪಸು ರೂಮಿಗೆ ಹೋಗುವ ಹಾಗಿಲ್ಲ' ಎಂದುಕೊಂಡು ಮುಂದೆ ಹೋಗಿ ಬಸ್ ನಿಲ್ದಾಣಕ್ಕೆ ಹೋಗಿ ಕಲ್ಲು ಬೆಂಚಿನ ಮೇಲೆ ಬೆಳಗಾಗುವವರೆಗೆ ಕುಳಿತುಕೊಂಡೆ. ಪಕ್ಕದಲ್ಲಿದ್ದವರ ವಾಚು ನೋಡಿಕೊಂಡು ಬೆಳಿಗ್ಗೆ 5-45ಕ್ಕೆ ಅಂಚೆ ಕಛೇರಿಗೆ ಹೋದೆ. ಮೊದಲ ತಿಂಗಳ ಸಂಬಳವಾಗಿ 229 ರೂಪಾಯಿ ಸಿಕ್ಕಿತು. ಅದರಲ್ಲಿ 95 ರೂ. ಕೊಟ್ಟು ಒಂದು ಟೈಮ್ ಸ್ಟಾರ್ ವಾಚು ಕೊಂಡೆ. ನನ್ನ ಖರ್ಚಿಗೆ 34 ರೂ. ಇಟ್ಟುಕೊಂಡು 100 ರೂ. ಅನ್ನು ನನ್ನ ತಂದೆಗೆ ಮನಿಯಾರ್ಡರ್ ಮಾಡಿದೆ.
ಒದಗಿದ್ದ ಗಂಡಾಂತರ
ಒಂದು ತಿಂಗಳು ಪಾರ್ಸೆಲ್ ಶಾಖೆಯಲ್ಲಿ ನನ್ನ ಕೆಲಸ ನೋಡಿ ಮೆಚ್ಚಿದ ಪೋಸ್ಟ್ ಮಾಸ್ಟರರು ನನ್ನನ್ನು ಉಳಿತಾಯ ಖಾತೆಯಲ್ಲಿ ಕೆಲಸ ಮಾಡಲು ಹಚ್ಚಿದರು. ಉಳಿತಾಯ ಶಾಖೆಯಲ್ಲಿ ಕೆಲಸ ಮಾಡುತ್ತಾ ಒಂದೆರಡು ತಿಂಗಳಾಗಿರಬಹುದು. ಆಗ ಈಗಿನಂತೆ ಜನರು ಹಣ ಜಮಾ ಮಾಡಲು ಚಲನ್ ಬರೆದುಕೊಡಬೇಕಾಗಿರಲಿಲ್ಲ. ಪಾಸ್ ಪುಸ್ತಕದ ಒಳಗೆ ಹಣ ಇಟ್ಟು ಕೊಟ್ಟರೆ ಸಾಕಿತ್ತು. ಅಂಚೆ ಗುಮಾಸ್ತ ಹಣ ಎಣಿಸಿ 'ಡಿಪಾಸಿಟ್ ಸ್ಲಿಪ್' ಎಂದು ಕತ್ತರಿಸಿ ಇಟ್ಟಿದ್ದ ತುಂಡು ಹಾಳೆಯಲ್ಲಿ ಖಾತೆ ವಿವರ ಮತ್ತು ಹಣದ ವಿವರ ಬರೆದುಕೊಂಡು, ಪಾಸ್ ಪುಸ್ತಕದಲ್ಲಿ ಮತ್ತು ಲೆಡ್ಜರ್ ನಲ್ಲಿ ದಾಖಲೆ ಮಾಡಿ ಸಬ್ ಪೋಸ್ಟ್ ಮಾಸ್ಟರರಿಗೆ ಸಹಿಗೆ ಕಳುಹಿಸುತ್ತಿದ್ದು, ಸಬ್ ಪೋಸ್ಟ್ ಮಾಸ್ಟರರು ತಮ್ಮ ಲಾಗ್ ಪುಸ್ತಕದಲ್ಲಿ ವಿವರ ಬರೆದುಕೊಂಡು ಪಾಸ್ ಪುಸ್ತಕಕ್ಕೆ ಸಹಿ ಮಾಡಿ ವಾಪಸು ಕೊಡುತ್ತಿದ್ದರು. ದಿನದ ವ್ಯವಹಾರದ ಸಮಯ ಮುಗಿದ ನಂತರ ಗುಮಾಸ್ತರ ಮತ್ತು ಸಬ್ ಪೋಸ್ಟ್ ಮಾಸ್ಟರರ ದಾಖಲಿತ ವಿವರಗಳು ತಾಳೆಯಾದ ನಂತರ ಹಣವನ್ನು ಲೆಕ್ಕಪತ್ರ ಶಾಖೆಗೆ ಜಮಾ ಮಾಡಬೇಕಾಗಿತ್ತು. ಒಮ್ಮೆ ಒಬ್ಬರು 1000 ರೂ. ಹಣವನ್ನು ಪಾಸ್ ಪುಸ್ತಕದ ಒಳಗೆ ಇಟ್ಟು ನನಗೆ ಕೊಟ್ಟಾಗ ನಾನು ಡಿಪಾಸಿಟ್ ಸ್ಲಿಪ್ ನಲ್ಲಿ 1000 ರೂ. ಎಂದು ಬರೆದುಕೊಂಡರೂ ಪಾಸ್ ಪುಸ್ತಕದಲ್ಲಿ ಮತ್ತು ಲೆಡ್ಜರಿನಲ್ಲಿ 10000 ರೂ. ಎಂದು ಬರೆದು ಸಹಿಗೆ ಕಳಿಸಿದ್ದೆ. ಸಹಿ ಆದ ಮೇಲೆ ಪಾಸ್ ಪುಸ್ತಕ ಖಾತೆದಾರರಿಗೆ ವಾಪಸು ಕೊಟ್ಟೆ. ಮಧ್ಯಾಹ್ನ ಲೆಕ್ಕ ತಾಳೆ ನೋಡಿದರೆ 9000 ರೂ. ಕಡಿಮೆ ಬಂತು. ನಾನು ಕೈತಪ್ಪಿನಿಂದ ಬರೆದಿದ್ದೆಂದು ಹೇಳಿದರೂ ಅದನ್ನು ಒಪ್ಪುವಂತಿರಲಿಲ್ಲ. 'Customer is never wrong' ಎಂಬುದು ಅಂಚೆ ಕಛೇರಿಯ ಧ್ಯೇಯ ವಾಕ್ಯವಾಗಿತ್ತು. ವಿಷಯ ಪೋಸ್ಟ್ ಮಾಸ್ಟರರ ಗಮನಕ್ಕೆ ಹೋಯಿತು. ಅವರು ಎಲ್ಲವನ್ನೂ ಕೇಳಿ "ನಾಗರಾಜ, ನಾನೇನೂ ಮಾಡುವಂತಿಲ್ಲ. ನಿನಗೆ ಅರ್ಧ ಗಂಟೆ ಸಮಯ ಕೊಡುತ್ತೇನೆ. ಅಷ್ಟರ ಒಳಗೆ ಸರಿ ಮಾಡಿ ತೋರಿಸು. ಇಲ್ಲದಿದ್ದರೆ 9000 ರೂ. ಕಟ್ಟು. ಇಲ್ಲದಿದ್ದರೆ ಪೋಲಿಸ್ ದೂರು ಕೊಡುವುದು ಅನಿವಾರ್ಯ" ಎಂದುಬಿಟ್ಟರು. ನನಗೆ ದಿಕ್ಕು ತೋಚಲಿಲ್ಲ. ನನಗೆ ಬರುವ 229 ರೂ. ಸಂಬಳದಲ್ಲಿ 9000 ರೂ. ಕಟ್ಟಲು ಸಾಧ್ಯವೇ? ಕೆಲಸಕ್ಕೆ ಸೇರಿ 3-4 ತಿಂಗಳಾಗಿದ್ದು ನನ್ನ ಹತ್ತಿರ ಬೇರೆ ಹಣವೂ ಇರಲಿಲ್ಲ. ಲೆಡ್ಜರಿನಲ್ಲಿದ್ದ ಖಾತದಾರರ ವಿಳಾಸ ನೋಡಿಕೊಂಡು ಆ ಭಾಗದ ಪೋಸ್ಟ್ ಮ್ಯಾನ್ ರನ್ನು ಕರೆದುಕೊಂಡು ಅವರನ್ನು ಹುಡುಕಿಕೊಂಡು ಹೊರಟೆ. ಅದೃಷ್ಟಕ್ಕೆ ಸ್ವಲ್ಪ ದೂರ ಹೋಗಿದ್ದಾಗ ದಾರಿಯಲ್ಲೇ ಅವರು ಸಿಕ್ಕರು. ನಾನು "ಸ್ವಲ್ಪ ನಿಮ್ಮ ಪಾಸ್ ಪುಸ್ತಕ ಕೊಡಿ, ನೋಡಬೇಕು" ಎಂದಾಗ ಪುಣ್ಯಕ್ಕೆ ಅವರ ಅಂಗಿ ಜೇಬಿನಲ್ಲೇ ಇಟ್ಟುಕೊಂಡಿದ್ದ ಪಾಸ್ ಪುಸ್ತಕ ತೆಗೆದುಕೊಟ್ಟರು. ನಾನು ಪಾಸ್ ಪುಸ್ತಕ ಕೈಗೆ ಬಂದ ತಕ್ಷಣ ಅದರಲ್ಲಿ 1000 ರೂ. ಎಂದು ತಿದ್ದುಪಡಿ ಮಾಡಿದೆ ಮತ್ತು ಅವರಿಗೆ ವಿಷಯ ತಿಳಿಸಿದೆ. ಅವರು "ನಾನು ಪಾಸ್ ಪುಸ್ತಕ ತೆಗೆದು ನೋಡಿರಲಿಲ್ಲ. ನೋಡಿದ್ದರೆ ನಿಮಗೆ ಪಾಸ್ ಪುಸ್ತಕ ಕೊಡುತ್ತಲೇ ಇರಲಿಲ್ಲ" ಎಂದರು. ಅವರು ತಮಾಷೆಗೆ ಹೇಳಿದರೋ, ನಿಜಕ್ಕೂ ಹೇಳಿದರೋ ಗೊತ್ತಿಲ್ಲ. ಅವರನ್ನು ಕೋರಿಕೊಂಡು ಅವರನ್ನೂ ಕರೆದುಕೊಂಡು ಪೋಸ್ಟ್ ಮಾಸ್ಟರರ ಬಳಿಗೆ ಬಂದೆ. ಲೆಕ್ಕ ತಾಳೆಯಾಗಿ ನನ್ನಲ್ಲಿದ್ದ ಅಂದಿನ ಹಣವನ್ನು ಲೆಕ್ಕ ಪತ್ರ ಶಾಖೆಗೆ ಜಮಾ ಮಾಡಿದಾಗಲೇ ನಾನು ಸರಾಗವಾಗಿ ಉಸಿರಾಡಿದ್ದು. ಹಿಂದೆಯೂ ಒಮ್ಮೆ ಒಬ್ಬ ಗುಮಾಸ್ತರು ಹೀಗೆಯೇ ಮಾಡಿ 9000 ರೂ. ಕಟ್ಟಿದ್ದರಂತೆ. ಇಲಾಖಾ ವಿಚಾರಣೆಯಾಗಿ ಅವರಿಗೆ ಶಿಕ್ಷೆಯೂ ಆಗಿತ್ತಂತೆ. ಈ ಘಟನೆ ನಂತರ ನಾನು ಹುಷಾರಾಗಿ ಕೆಲಸ ಮಾಡತೊಡಗಿದೆ.
ಬಂದಳೋ ಬಂದಳು ಚೆಲುವೆ ಬಂದಳು!
ಅಂಚೆ ಕಛೇರಿಯ ಏಕತಾನತೆಯ ಕೆಲಸಕಾರ್ಯಗಳಲ್ಲಿ ತೊಡಗಿದ್ದವರು ಪರಸ್ಪರ ಮಾತುಕಥೆಗಳಲ್ಲಿ ಕಷ್ಟ-ಸುಖಗಳನ್ನು ಹಂಚಿಕೊಳ್ಳುತ್ತಿದ್ದರು. ವೃತ್ತಿ ವೈಷಮ್ಯ, ಅಸೂಯೆ, ಇತ್ಯಾದಿಗಳು ರಾಜ್ಯ ಸರ್ಕಾರದ ಕಛೇರಿಗಳಿಗೆ ಹೋಲಿಸಿದರೆ ಅಂಚೆ ಕಛೇರಿಯಲ್ಲಿ ಕಡಿಮೆಯಿತ್ತೆಂದೇ ಹೇಳಬಹುದು. ಆಗಾಗ ರಸಮಯ ಸನ್ನಿವೇಶಗಳೂ ಬರುತ್ತಿದ್ದವು. ಅಂಚೆ ಕಛೇರಿಯ ಪ್ರಾರಂಭದಲ್ಲೇ ತಂತಿ ಕಛೇರಿ ಇತ್ತು. ಅದರ ಪಕ್ಕದಲ್ಲೇ ನಾನು ಕೆಲಸ ಮಾಡುತ್ತಿದ್ದ ಉಳಿತಾಯ ಶಾಖೆ. ಆಗ ತಂತಿ ಸಂದೇಶಗಳನ್ನು ಮೋರ್ಸ್ ಲಿಪಿಯಲ್ಲಿ ಕಳುಹಿಸಲಾಗುತ್ತಿತ್ತು. ಸಂದೇಶ ಬರುವಾಗ 'ಕಟ್ಟ ಕಡ ಕಟ್ಟ ಕಡ ಕಡ ಕಟ್ಟ" ಇತ್ಯಾದಿ ಶಬ್ದ ಬರುತ್ತಿತ್ತು. ಅದನ್ನು ಡಿಕೋಡ್ ಮಾಡಿ ತಂತಿ ಸಂದೇಶವನ್ನು ನಮೂನೆಯಲ್ಲಿ ಕೈಬರಹದಲ್ಲಿ ಬರೆದು ಅಂಚೆಯ ಆಳಿನ ಮೂಲಕ ಸಂಬಂಧಿಸಿದವರಿಗೆ ತಲುಪಿಸಲಾಗುತ್ತಿತ್ತು. ಟೆಲಿಗ್ರಾಫ್ ಆಪರೇಟರ್ ಇನ್ನೂ ಹುಡುಗನಾಗಿದ್ದು ಕೀಟಲೆ ಸ್ವಭಾವ ಹೋಗಿರಲಿಲ್ಲ. ಅಂಚೆ ಕಛೇರಿಗೆ ಯಾರಾದರೂ ನೋಡಲು ಚೆನ್ನಾಗಿದ್ದ ಹುಡುಗಿ ಯಾವುದಾದರೂ ಕೆಲಸಕ್ಕಾಗಿ ಬಂದಾದ ಅವನು ಟೇಬಲ್ ಮೇಲೆ 'ಕಟ್ಟ-ಕಡ-ಕಟ್ಟ-ಕಟ್ಟ' ಇತ್ಯಾದಿ ಶಬ್ದ ಮಾಡುತ್ತಿದ್ದ. 'Beauty is coming'' ಎಂದು ಅದರ ಅರ್ಥವಂತೆ. ಇದು ಗೊತ್ತಿದ್ದ ಕಛೇರಿಯವರು ತಾವು ಮಾಡುತ್ತಿದ್ದ ಕೆಲಸ ಬಿಟ್ಟು ಬಂದವರನ್ನು ನೋಡುತ್ತಿದ್ದರು. ಇವನು ಕುಟ್ಟುವುದು, ಉಳಿದವರು ತಲೆ ಎತ್ತಿ ಗಮನಿಸುವುದನ್ನು ನೋಡಲು ತಮಾಷೆಯಾಗಿತ್ತು. ಹೀಗೆಯೇ ಒಮ್ಮೆ ಒಬ್ಬರು ಬಂದಾಗ ಅವನು ಯಥಾ ಪ್ರಕಾರ ಕಡಕಟ್ಟಿಸಿ ಸಂದೇಶ ನೀಡಿದ. ಇತರರು ನೋಡ ನೋಡುತ್ತಿದ್ದಂತೆಯೇ ಬಂದಿದ್ದ ಹುಡುಗಿ ಸಹ ಸೀದಾ ಒಳಗೆ ಬಂದು ಟೆಲಿಗ್ರಾಫ್ ಆಪರೇಟರನ ಟೇಬಲ್ ಮೇಲೆ ತಾನೂ ಕಡ ಕಟ್ಟ ಕಟ್ಟ ಕುಟ್ಟಿ ಹೆಡ್ ಪೋಸ್ಟ್ ಮಾಸ್ಟರರೊಂದಿಗೆ ಮಾತನಾಡಲು ಹೋದಳು. ನಂತರ ತಿಳಿದ ವಿಷಯವೆಂದರೆ ಆಕೆಯೂ ಟೆಲಿಗ್ರಾಫ್ ಆಪರೇಟರ್ ಆಗಿದ್ದು ಹೆಡ್ ಪೋಸ್ಟ್ ಮಾಸ್ಟರರ ಸಂಬಂಧಿಯಾಗಿದ್ದು ಮಾತನಾಡಿಸಿಕೊಂಡು ಹೋಗಲು ಬಂದಿದ್ದಳಂತೆ. ಅವಳು ನೀಡಿದ್ದ ಸಂದೇಶ 'Thanks for the compliments' ಎಂದು ಆಗಿತ್ತಂತೆ. ಹೆಡ್ ಪೋಸ್ಟ್ ಮಾಸ್ಟರರೊಂದಿಗೆ ಆಕೆ ಈ ಸಂದೇಶ ವಿನಿಮಯಗಳ ವಿಷಯದಲ್ಲಿ ಯಾವುದೇ ಮಾತನ್ನಾಡಿರಲಿಲ್ಲ. ಆದರೂ ಅಂದಿನಿಂದ ಆಪರೇಟರ್ ಮಿತ್ರನ ಕಡಕಟ್ಟುವಿಕೆ ಸಂದೇಶ ನಿಂತುಹೋಯಿತು.
ಅಂಚೆ ಸೇವೆಗೆ ವಿದಾಯ
ಅಂಚೆ ಕಛೇರಿಯಲ್ಲಿ ಕೇವಲ ಒಂದು ವರ್ಷ ಸೇವೆ ಸಲ್ಲಿಸಿ ನಂತರ ಕೆ.ಪಿ.ಎಸ್.ಸಿ.ಯಿಂದ ಆಯ್ಕೆಗೊಂಡಿದ್ದ ಕಂದಾಯ ಇಲಾಖೆಯ ಕೆಲಸಕ್ಕೆ ಸೇರಿದೆ. ಅಂಚೆ ಕಛೇರಿಯ ನೌಕರರೆಲ್ಲರೂ 'ಮೊದಲು ಅಂಚೆ ಕಛೇರಿ ಬಿಟ್ಟು ಹೋಗು. ಇಲ್ಲಿ ಕತ್ತೆ ಕೆಲಸ, ಸಂಬಳ ಕಡಿಮೆ. ಅಲ್ಲಿ ನಿನಗೆ ಮುಂದುವರೆಯಲು ಅವಕಾಶಗಳಿವೆ' ಎಂದು ಹೇಳುತ್ತಿದ್ದರು. ನನಗೆ ಗೊತ್ತಿದ್ದ ರಾಜ್ಯ ಸರ್ಕಾರಿ ನೌಕರರೆಲ್ಲಾ ಕೇಂದ್ರ ಸರ್ಕಾರದ ನೌಕರಿ ಬಿಟ್ಟುಬರಬೇಡವೆಂದು ಹೇಳುತ್ತಿದ್ದು ನನಗೆ ಏನು ಮಾಡಬೇಕೆಂದು ತೋಚದೆ ಜ್ವರ ಬಂದಿತ್ತು. 'ಪೋಸ್ಟ್ ಮಾಸ್ಟರಿಗೆ ಬುದ್ಧಿ ಇಲ್ಲ; ಸ್ಟೇಶನ್ ಮಾಸ್ಟರಿಗೆ ನಿದ್ದೆ ಇಲ್ಲ' ಎಂಬ ಗಾದೆ ಮಾತು ಆಗ ಚಾಲ್ತಿಯಲ್ಲಿತ್ತು. ಅಂಚೆ ಕಛೇರಿಯ ಇಲಾಖಾ ಪರೀಕ್ಷೆಗಳಲ್ಲಿ ತೇರ್ಗಡೆಯಾಗಿ ನನ್ನ ಕೆಲಸ ಖಾಯಂ ಆಯಿತೆಂದು ಸಂದೇಶ ಬಂದ ದಿನವೇ ಅಂಚೆ ಕಛೇರಿ ಕೆಲಸಕ್ಕೆ ರಾಜಿನಾಮೆ ನೀಡಿ ಹೊರಬಂದೆ. ಈ ನನ್ನ ನಿರ್ಧಾರಕ್ಕೆ ಪದವೀಧರ ನೌಕರರಿಗೂ ಇತರ ನೌಕರರಿಗೂ ಅಲ್ಲಿ ವ್ಯತ್ಯಾಸವಿರದಿದ್ದುದು ಒಂದು ಕಾರಣವಾಗಿದ್ದರೆ, ಇನ್ನೊಂದು ಕಾರಣ ಹೊರಜಗತ್ತಿಗೆಲ್ಲಾ ಸಂಪರ್ಕ ಕಲ್ಪಿಸುವ ಅಂಚೆ ಕಛೇರಿ ನೌಕರರಿಗೇ ಹೊರಜಗತ್ತಿನ ಸಂಪರ್ಕ ಕಡಿಮೆಯಿತ್ತು. ಅವರು ತಾವಾಯಿತು, ತಮ್ಮ ಕೆಲಸವಾಯಿತು ಎಂಬಂತೆ ಇರಬೇಕಿತ್ತು ಆ ಸಮಯದಲ್ಲಿದ್ದ ಹಿರಿಯ ನೌಕರರ ಸ್ಥಿತಿ ಸಹ ನನ್ನನ್ನು ಹೊರಬರಲು ಪ್ರೇರಿಸಿತ್ತು. ಒಬ್ಬರು ಹಿರಿಯ ನೌಕರರಂತೂ ರಸ್ತೆಯಲ್ಲಿ ಓಡಾಡುವಾಗ ತಮ್ಮಷ್ಟಕ್ಕೆ ತಾವೇ ಕೈಯಾಡಿಸಿಕೊಂಡು ಒಬ್ಬರೇ ಮಾತನಾಡಿಕೊಂಡು ಹೋಗುತ್ತಿದ್ದರು. ಯಾರಾದರೂ ಮಾತನಾಡಿಸಿದರೆ ಬೆಚ್ಚಿಬಿದ್ದು ವಾಸ್ತವ ಸ್ಥಿತಿಗೆ ಬರುತ್ತಿದ್ದುದನ್ನು ಕಂಡಿದ್ದ ನನಗೆ ಅವರ ಬಗ್ಗೆ ಮರುಕ ಭಾವನೆ ಬರುತ್ತಿತ್ತು. ಅವರು ನನ್ನನ್ನು ಆತ್ಮೀಯರಂತೆ ಮಾತನಾಡಿಸುತ್ತಿದ್ದುದನ್ನು ನಾನು ಮರೆಯುವುದಿಲ್ಲ. ಅಂಚೆ ಇಲಾಖೆ ಬಿಟ್ಟು ಹೊರಬಂದರೂ ನನಗೆ ಅಲ್ಲಿನ ವಾತಾವರಣ, ಸ್ನೇಹಿತರು ನೆನಪಾಗುತ್ತಿರುತ್ತದೆ. ದಶಕಗಳು ಕಳೆದರೂ ಅಂದಿನ ಸ್ನೇಹಿತರು ಈಗಲೂ ಸ್ನೇಹಿತರಾಗಿ ಉಳಿದಿರುವುದು ಅಂಚೆ ಇಲಾಖೆಯನ್ನು ಗೌರವಿಸುವಂತೆ ಮಾಡಿದೆ. ಅಂಚೆ ಕಛೇರಿಯ ವಾತಾವರಣ ನಾನು ಕೆಲಸ ಮಾಡುತ್ತಿದ್ದ ಅವಧಿಯಲ್ಲಿದ್ದಂತೆ ಈಗಿರಲಾರದು. ನಾನು ಪಡೆದಿದ್ದ ಅಂಚೆ ತರಬೇತಿ ಒಂದು ಅತ್ಯತ್ತಮ ತರಬೇತಿಯಾಗಿದ್ದು ನನ್ನ ಮೇಲೆ ಸತ್ಪ್ರಭಾವ ಬೀರಿದೆ.
(ಕಾಲಘಟ್ಟ; 1972-73).
[ಅಂಚೆ ಪುರಾಣವನ್ನು ಈ ಹಿಂದೆ 4 ಕಂತುಗಳಲ್ಲಿ ಪ್ರಕಟಿಸಿದ್ದು ಅವನ್ನು ಒಟ್ಟುಗೂಡಿಸಿ ಇಲ್ಲಿ ಪ್ರಕಟಿಸಿದೆ.]
ಕಂದಾಯ ಇಲಾಖೆಯವರೊಬ್ಬರು ಇಂಥ ಬ್ಲಾಗು ಬರೆಯುವುದು ನಿಮ್ಮಕಾಲಮಾನದವರಿಗೆ ಮಾತ್ರ ಸಾಧ್ಯ.ಬಿಡದೇ ಓದಿಸಿಕೊಂಡು ಹೋಯಿತು .ಜೈಲು ಕಥೆ ಹೇಳಿಲ್ಲ.ಮುಜಗರದವಿಷಯವಾದರೆ ಬಿಟ್ಟು ಬಿಡಿ.ಶುಭಾಶಯಗಳು.ಹಾಗೆ ಮತ್ತೊಂದು ಮಾತು ಅಂಚೆಯ ಅಣ್ಣ ೆಂಬ ಹಿರೆಮಠರ ಕವಿತೆ ಪೂರ್ಣಫಾಟ ಹುಡುಕುತ್ತಿದ್ದೇನೆ ಸಿಕ್ಕರೆ ಪೋಸ್ಟ್ ಮಾಡಿ ನಿಮ್ನ ಬ್ಲಾಗ‍್ನಲ್ಲಿ
ಪ್ರತ್ಯುತ್ತರಅಳಿಸಿ