ನನ್ನ ಬಗ್ಗೆ

ನನ್ನ ಫೋಟೋ

ನಿವೃತ್ತ ತಹಸೀಲ್ದಾರ್, ಕೆಳದಿ ಕವಿಮನೆತನದ ಪತ್ರಿಕೆ 'ಕವಿಕಿರಣ'ದ ಸಂಪಾದಕ.
ನನ್ನ ಕೃತಿಗಳು: 1.ಕವಿಸುಬ್ರಹ್ಮಣ್ಯಯ್ಯ - ಒಂದು ಜೀವಗೀತೆ (ವ್ಯಕ್ತಿ ಚಿತ್ರಣ), 2. ಮೂಢ ಉವಾಚ - ಮುಕ್ತಕಗಳು, 3. ಆದರ್ಶದ ಬೆನ್ನು ಹತ್ತಿ . .
ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಮಂಗಳವಾರ, ಜನವರಿ 18, 2011

ಮೂಢ ಉವಾಚ -41 : ಹಸಿವು

ಹಸಿದವಗೆ ಹುಸಿ ವೇದಾಂತ ಬೇಡ
ಕಥೆ ಕವನ ಸಾಹಿತ್ಯ ಬೇಡವೇ ಬೇಡ |
ಬಳಲಿದ ಉದರವನು ಕಾಡಬೇಡ
ಮುದದಿ ಆದರಿಸಿ ಮೋದಪಡು ಮೂಢ ||


ಹೊಟ್ಟೆಯ ತೊಟ್ಟಿಯದು ತುಂಬುವುದು ಎಂದು?
ಹಸಿವು ಮಾಡಿಸುವ ಕುಕರ್ಮಗಳೆನಿತೊಂದು |
ಬಂಧಗಳ ಹೆಣೆಯುವುದು ಪಾಶಗಳ ಬೀಸುವುದು
ಆತ್ಮಾಭಿಮಾನ ಮರೆಸುವುದೊ ಮೂಢ ||


ಹಸಿವಿನಿಂ ಬಳಲುತಿರೆ ಹೊನ್ನು ಬೇಕೇನು?
ಹಸಿವಿನಿಂ ನರಳುತಿರೆ ಹೆಣ್ಣು ಬೇಕೇನು? |
ಹಸಿವು ಹಿಂಗಿಸಲು ಅನ್ನವೇ ಬೇಕು
ಹೊಟ್ಟೆ ತುಂಬಿರಲೆಲ್ಲವೂ ಬೇಕು ಮೂಢ ||


ಪರಮಾತ್ಮನೆಂಬುವನು ಎಲ್ಲಿಹನು ಕೇಳಿ
ದೇವಭಕ್ತರೆ ಹೇಳಿ ಅರಿತವರೆ ತಿಳಿ ಹೇಳಿ |
ದೇವನಿರದಿಹನೆ ಜೀವಿಗಳ ಉದರದಲಿ
ಹಸಿವಿರದಿರೆ ಪರಮಾತ್ಮನೆಲ್ಲಿ ಮೂಢ ||
-ಕವಿ ನಾಗರಾಜ್.

ಶ್ರೀಮತಿ ಲಲಿತಾ ರಮೇಶರವರ ಧ್ವನಿಯಲ್ಲಿ ಕೇಳಿ:


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ