ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಭಾನುವಾರ, ಮಾರ್ಚ್ 18, 2012

ಗುಂಡಿಯಲ್ಲಿ ಬಿದ್ದ ನಾಯಿಮರಿ



     ಎಂದಿನಂತೆ ಬೆಳಿಗ್ಗೆ ಬೇಗ ಎದ್ದು ವಾಕಿಂಗಿಗೆ [ವಾಯುಸೇವನೆಗೆ ಅನ್ನವುದಕ್ಕಿಂತ ವಾಕಿಂಗ್ ಅನ್ನುವುದು ಜನಪ್ರಿಯ ಬಳಕೆಯ ಪದ] ಹೊರಟು ಸ್ಟೇಡಿಯಮ್ ತಲುಪಿದೆ. ಒಂದು ಸುತ್ತು ಹಾಕಿರಬಹುದು. ಪಕ್ಕದಲ್ಲಿದ್ದ ಗುಂಡಿಯೊಂದರಿಂದ ನಾಯಿಮರಿಯ ಕುಂಯ್ ಕುಂಯ್ ಆರ್ತ ಸ್ವರ ಕೇಳಿಸಿತು. ಸುಮಾರು ೪ಅಡಿ ಆಳದ ಗುಂಡಿಯಲ್ಲಿ ಬಗ್ಗಿ ನೋಡಿದರೆ ಅಲ್ಲಿ ಪುಟಾಣಿ ನಾಯಿಮರಿಯೊಂದು ಮೇಲೆ ಹತ್ತಲು ಪರದಾಡುತ್ತಿತ್ತು. ಆಟವಾಡುತ್ತಾ ಅಲ್ಲಿ ಬಿದ್ದಿರಬೇಕು. ಅದಕ್ಕೆ ಮೇಲೆ ಹತ್ತಲಾಗುತ್ತಿರಲಿಲ್ಲ. ಅದರ ಜೊತೆಯ ಇನ್ನೊಂದು ಪುಟಾಣಿ ಮರಿ ಗುಂಡಿಯ ಮೇಲ್ಭಾಗದಲ್ಲಿ ನಿಂತು ಗಮನಿಸುತ್ತಾ ಸುತ್ತಲೂ ಪರದಾಡುತ್ತಿತ್ತು. ಅಲ್ಲಿ ಓಡಾಡುತ್ತಿದ್ದವರನ್ನು ನೋಡುತ್ತಾ ಇದ್ದ ಆ ಇನ್ನೊಂದು ಮರಿಯ ನೋಟ ಯಾರಾದರೂ ಸಹಾಯ ಮಾಡಿ ಎಂದು ಕೇಳುವಂತಿತ್ತು. ಯಾಂತ್ರಿಕವಾಗಿ ವಾಕಿಂಗ್ ಮುಂದುವರೆಸಿದ್ದ ನಾನು ಅದಾಗಲೇ ಆ ಗುಂಡಿ ದಾಟಿ ಮುಂದೆ ಹೋಗಿಬಿಟ್ಟಿದ್ದೆ. ಅದನ್ನು ಮೇಲೆತ್ತಬೇಕಾಗಿತ್ತು ಎಂದು ಮನಸ್ಸು ಹೇಳುತ್ತಿತ್ತು. ಇನ್ನೊಂದು ಸುತ್ತು ಬರುವಾಗ ನೋಡಿದರೆ ಆ ಮರಿ ಅಲ್ಲೇ ಇತ್ತು. ಅದನ್ನು ಮೇಲೆತ್ತಲು ಹೋದಾಗ ಅದು ಮುಂಗಾಲುಗಳನ್ನು ಮುಂದೆ ಚಾಚಿ ನೋಡಿದ 'ಮೇಲಕ್ಕೆ ಎತ್ತು' ಎಂದು ಕೋರುವ ನೋಟ ನನ್ನನ್ನು ಕರಗಿಸಿತು. ಅದರ ಕಾಲು ಹಿಡಿದು ಮೇಲಕ್ಕೆತ್ತಿ ಬಿಟ್ಟು ವಾಕಿಂಗ್ ಮುಂದುವರೆಸಿದರೆ ಆ ಮರಿ ಮತ್ತು ಅದರ ಜೊತೆಯ ಮರಿಗಳೆರಡೂ ಕೃತಜ್ಞತೆ ತೋರಿಸುವಂತೆ ಕುಣಿದು ಕುಪ್ಪಳಿಸಿ ನನ್ನ ಕಾಲುಗಳಿಗೆ ತೊಡರಿಕೊಂಡು ಬರತೊಡಗಿದವು. ಅವನ್ನು ತಪ್ಪಿಸಿಕೊಂಡು ವಾಕಿಂಗ್ ಮುಂದುವರೆಸಿದೆ. ಮುಂದಿನ ಸುತ್ತಿನಲ್ಲಿ ಬರುವಾಗ ಆ ಮರಿಗಳು ತಾಯಿಯ ಜೊತೆ ಚಿನ್ನಾಟವಾಡುತ್ತಾ, ಹಾಲು ಕುಡಿಯುತ್ತಾ ಇದ್ದ ದೃಷ್ಯ ಕಂಡು ಮನಸ್ಸು ಹಗುರವಾಯಿತು.
     ವಾಕಿಂಗ್ ಮುಂದುವರೆದು ವಾಪಸು ಮನೆ ತಲುಪುವವರೆಗೂ ನನ್ನ ಮನಸ್ಸು ಆ ವಿಚಾರದಲ್ಲೇ ಮುಳುಗಿತ್ತು. ನಾವೂ ಸಹ ಆ ನಾಯಿಮರಿಯಂತೆ ಗುಂಡಿಯಲ್ಲಿ ಬಿದ್ದು ಮೇಲೆ ಹತ್ತಲಾರದೇ ಪರದಾಡುತ್ತಿದ್ದೇವಲ್ಲವೇ ಅನ್ನಿಸಿತು. ನಮ್ಮನ್ನು ಆವರಿಸಿದ ಮಾಯೆ/ಭ್ರಮೆ ನಾವು ಗುಂಡಿಯಲ್ಲಿರುವ ವಾಸ್ತವತೆ ಮರೆಮಾಚಿ, ಗುಂಡಿಯಲ್ಲೇ ಇರುವಂತೆ ಮಾಡುತ್ತಿರಬೇಕು. ಸ್ವಾಭಿಮಾನ, ದುರಭಿಮಾನಗಳಿಂದ ನಾವೇ ತೋಡಿಕೊಂಡ ಗುಂಡಿಗೆ ನಾವೇ ಆಟವಾಡುತ್ತಾ ಬಿದ್ದುಬಿಟ್ಟಿರಬೇಕು. ಮೇಲೆ ಹತ್ತಲು ಮಾಡುವ ಪ್ರಯತ್ನಗಳಿಗೆ ರಾಗ, ದ್ವೇಷಗಳು ಅಡ್ಡಿಯಾಗಿ ಪುನಃ ಕೆಳಗೆ ಜಾರಿಸುತ್ತಿರಬೇಕು. ಒಂದೊಮ್ಮೆ ಗುಂಡಿಯಲ್ಲಿ ಬಿದ್ದ ಅರಿವಾದರೂ, ಮೋಹ, ಮಮಕಾರಗಳು ಮೇಲೆ ಹತ್ತದಂತೆ ಮಾಡುತ್ತಿರಬೇಕು. ಹೀಗೆಲ್ಲಾ ಯೋಚಿಸುತ್ತಿದ್ದ ಮನಸ್ಸು ಇಷ್ಟಕ್ಕೆಲ್ಲಾ ಹೊಣೆ ಯಾರು, ಅದರಲ್ಲಿ ನಿನ್ನ ಪಾಲೆಷ್ಟು, ಇತರರ ಪಾಲೆಷ್ಟು ಎಂದು ಕೆಣಕುತ್ತಿತ್ತು. ಗುಂಡಿಯಿಂದ ಮೇಲೆ ಬರಲು ಪ್ರಾಮಾಣಿಕ ಪ್ರಯತ್ನ ಮಾಡಿದರೆ, ಮಾಡುತ್ತಲೇ ಇದ್ದರೆ, ಮೇಲೆ ಹತ್ತಲು ಸಹಾಯ ಮಾಡಲು ದೇವರು ಯಾರನ್ನಾದರೂ ಕಳಿಸಿಯೇ ಕಳಿಸುತ್ತಾನೆ. ಆರೀತಿ ಸಹಾಯ ಮಾಡುವ ಯಾರೋ ಒಬ್ಬರೇ ನಮ್ಮ ಪಾಲಿಗೆ ಮಾರ್ಗದರ್ಶಕರಾಗುತ್ತಾರೆ ಎಂದು ಅನ್ನಿಸುವ ಹೊತ್ತಿಗೆ ಮನೆಗೆ ಬಂದು ತಲುಪಿದ್ದೆ. ನಾಯಿಮರಿ ಕುಂಯ್‌ಗುಡದೇ ಇದ್ದಿದ್ದರೆ ನಾನು ಅದನ್ನು ಮೇಲೆತ್ತುತ್ತಿರಲಿಲ್ಲ. ಹಾಗೆಯೇ ನಾವು ಮೇಲೇರಲು ಮೊರೆಯಿಡದಿದ್ದರೆ ನಮಗೆ ಸಹಾಯ ಸಿಗದೇ ಹೋಗಬಹುದು!
-ಕ.ವೆಂ.ನಾಗರಾಜ್.

2 ಕಾಮೆಂಟ್‌ಗಳು:

  1. ಆತ್ಮೀಯ ನಾಗರಾಜ್ ರವರೆ,
    ನಿಮ್ಮ ಲೇಖನ ಓದುವಾಗ ಬಂದ ತುಣುಕು. " ಬಯಲು ಆಲಯದೊಳಗೊ? ಆಲಯವು ಬಯಲೊಳಗೋ? ಬಯಲು ಆಲಯವೆರಡು ನಯನದೊಳಗೊ? ನಯನ ಬುದ್ಧಿಯ ಒಳಗೊ ? ಬುದ್ಧಿ ನಯನದ ಒಳಗೊ? ನಯನ ಬುದ್ಧಿಗಳೆರಡು ನಿನ್ನೊಳಗೊ ಹರಿಯೇ? "
    ಉತ್ತಮ ಚಿಂತನಕ್ಕೆ ಧನ್ಯವಾದಗಳು.
    ಪ್ರಕಾಶ್

    ಪ್ರತ್ಯುತ್ತರಅಳಿಸಿ