ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಬುಧವಾರ, ಮಾರ್ಚ್ 28, 2012

ಕೇಕೆ ಹಾಕಿತು ಕ್ರೌರ್ಯ!

     [ಇದು ನಡೆದ ಸತ್ಯ ಕಥೆ. ಹೆಸರುಗಳನ್ನು ಬದಲಿಸಿದ್ದೇನೆ.]
     ನಾಗಾನಾಯ್ಕ ಮತ್ತು ಸರಸ್ವತೀಬಾಯಿ ಬಹಳಷ್ಟು ಚರ್ಚೆಯ ನಂತರ ಕೊನೆಗೂ ತಮ್ಮ ಒಬ್ಬಳೇ ಮಗಳು ದೀಪಾಳನ್ನು ನಾಗಾನಾಯ್ಕನ ಅಕ್ಕ ಲಕ್ಷ್ಮಮ್ಮನ ಕಿರಿಯ ಮಗ ಸೂರ್ಯನಿಗೆ ಕೊಡಲು ನಿರ್ಧರಿಸಿದರು. ಸೂರ್ಯ ನಿರುದ್ಯೋಗಿಯಾಗಿದ್ದರೂ ಅವನ ತಂದೆ ರಾಮಾನಾಯ್ಕ ನಿವೃತ್ತ ಶಿರಸ್ತೇದಾರರಾಗಿದ್ದು ಒಳ್ಳೆಯ ಆಸ್ತಿ, ಜಮೀನು ಹೊಂದಿದ ಸ್ಥಿತಿವಂತರಾಗಿದ್ದರು. ಸೂರ್ಯನ ಅಣ್ಣಂದಿರೂ ಪ್ರತಿಷ್ಠಿತ ಹುದ್ದೆಗಳಲ್ಲಿ ಬೇರೆ ಬೇರೆ ಊರುಗಳಲ್ಲಿ ಕೆಲಸ ಮಾಡುತ್ತಿದ್ದು, ಸೂರ್ಯ ಸಹ ಕೆಲಸದ ಹುಡುಕಾಟದಲ್ಲಿದ್ದ. ಒಂದಲ್ಲಾ ಒಂದು ಕೆಲಸ ಸಿಕ್ಕೇ ಸಿಗುತ್ತದೆ, ಸಿಗದಿದ್ದರೂ ಜೀವನಕ್ಕೆ ಏನೂ ತೊಂದರೆಯಿಲ್ಲವೆಂಬ ಅನಿಸಿಕೆ ಈ ನಿರ್ಧಾರಕ್ಕೆ ಪುಷ್ಟಿ ಕೊಟ್ಟಿತ್ತು. ಸಾಮಾನ್ಯ ರೂಪಿನ ದೀಪಾ ಸಹ ಸೂರ್ಯನನ್ನು ನೋಡಿದ್ದು ಅವಳು ಹಿರಿಯರ ಅಭಿಪ್ರಾಯಕ್ಕೆ ಸಮ್ಮತಿಸಿದ್ದಳು. ಎರಡೂ ಮನೆಯವರ ನಡುವೆ ಮಾತುಕತೆಗಳಾದವು. ಮದುವೆ ಸಂದರ್ಭದಲ್ಲಿ ಇಪ್ಪತ್ತು ತೊಲ ಬಂಗಾರ ಮತ್ತು ಕೇವಲ ನಾಲ್ಕು ಲಕ್ಷ ರೂಪಾಯಿ ನಾಗಾನಾಯ್ಕ ಕೊಡಬೇಕೆಂದು ಒಪ್ಪಂದವಾಗಿ ನಿಶ್ಚಿತಾರ್ಥವೂ ಸಂಭ್ರಮದಿಂದ ನಡೆಯಿತು. ನಂತರದ ಒಂದೇ ತಿಂಗಳಿನಲ್ಲಿ ಧಾಂ ಧೂಂ ಆಗಿ ಮದುವೆಯೂ ಆಗಿಹೋಯಿತು. ಒಪ್ಪಂದದಂತೆ ವರದಕ್ಷಿಣೆಯಾಗಿ ಆ ನಿರುದ್ಯೋಗಿಯ ತಂದೆ-ತಾಯಿಯವರಿಗೆ ನಾಲ್ಕು ಲಕ್ಷ ರೂ. ಹಣ, ಬಂಗಾರವೂ ದಕ್ಕಿತು. ಯಾವುದೇ ಲೋಪವಾಗದಂತೆ ಮದುವೆ ಮಾಡಿದ ಸಮಾಧಾನ ದೀಪಾಳ ತಂದೆ-ತಾಯಿಯವರದಾಯಿತು.
     ಮದುವೆ ನಂತರದಲ್ಲಿ ಒಂದು ವಾರ ನೂತನ ದಂಪತಿಗಳು ಆ ಊರು, ಈ ಊರು ತಿರುಗಿ ಹಳ್ಳಿಯ ಮನೆಗೆ ಬಂದು ಇದ್ದರು. ಹಳ್ಳಿಯ ಮನೆಯಲ್ಲಿ ೧೫-೨೦ ದಿನಗಳು ಇದ್ದು, ಸೂರ್ಯ ಕೆಲಸ ಹುಡುಕುವ ಸಲುವಾಗಿ ದೀಪಾಳನ್ನೂ ಕರೆದುಕೊಂಡು ಬೆಂಗಳೂರಿನ ಕಾಲೇಜು ಒಂದರಲ್ಲಿ ಉಪನ್ಯಾಸಕನಾಗಿದ್ದ ಅಣ್ಣ ಚಂದ್ರನ ಮನೆಗೆ ಬಂದ. ಸೂರ್ಯನಿಗೆ ಕೆಲಸ ಸಿಗಲಿಲ್ಲ. ದೀಪಾಳಿಗೆ ಸೂರ್ಯನ ಅತ್ತಿಗೆಯಿಂದ ಮೂದಲಿಕೆ ತಪ್ಪಲಿಲ್ಲ. ಬಿಟ್ಟಿ ಕೂಳು ಹಾಕುವುದಕ್ಕೆ ನಿಮ್ಮಪ್ಪ ಏನು ನಮಗೆ ಹಣ ಕೊಟ್ಟಿದ್ದಾನಾ? ಎಂದು ಪ್ರಾರಂಭವಾದ ಮಾತು ಕೊನೆ ಕೊನೆಗೆ ದೀಪಾಳ ಮೇಲೆ ಕೈ ಮಾಡುವಷ್ಟು ಮುಂದುವರೆಯಿತು. ಒಂದು ತಿಂಗಳ ನಂತರ ಇನ್ನು ಸಹಿಸುವುದು ಸಾದ್ಯವೇ ಇಲ್ಲವೆಂದಾದಾಗ ದೀಪಾಳ ಗೋಳಾಟ ನೋಡಲಾರದೆ ಗಂಡ ಸೂರ್ಯ ಅವಳನ್ನು ಅವಳ ತಂದೆಯ ಮನೆಗೆ ಕರೆದುಕೊಂಡು ಬಂದು ಅಲ್ಲಿ ಒಂದು ವಾರವಿದ್ದು ನಂತರ ಅವನೊಬ್ಬನೇ ಕೆಲಸ ಹುಡುಕುವುದಾಗಿ ಹೇಳಿ ಬೆಂಗಳೂರಿಗೆ ಹೋದ. ಮತ್ತೂ ಒಂದು ತಿಂಗಳು ಕಳೆಯಿತು. ಉಂಡಾಡಿ ಗುಂಡನಂತೆ ಬೆಳೆದಿದ್ದ ಸೋಮಾರಿತನವೇ ಮೈವೆತ್ತಿದ್ದ ಸೂರ್ಯ ಕೆಲಸ ಸಿಗಲಿಲ್ಲವೆಂದು ಮಾವನ ಮನೆಗೆ ಬಂದು ಕೆಲವು ದಿನವಿದ್ದು ನಂತರ ಪತ್ನಿ ದೀಪಾಳನ್ನು ಕರೆದುಕೊಂಡು ವಾಪಸು ಹಳ್ಳಿಯ ಮನೆಗೆ ಬಂದು ಅಲ್ಲಿಯೂ ಕೆಲವು ದಿನಗಳವರೆಗೆ ಕಾಲ ಕಳೆದರು. ಪುನಃ ಪುಸಲಾಯಿಸಿ ಪತ್ನಿಯನ್ನೂ ಕರೆದುಕೊಂಡು ಬೆಂಗಳೂರಿನ ಅಣ್ಣನ ಮನೆಗೆ ಹೋಗಿ ಒಂದು ತಿಂಗಳು ಅಲ್ಲಿದ್ದ ಸೂರ್ಯನ ಭಂಡತನಕ್ಕೆ ಏನೆನ್ನಬೇಕೋ ಗೊತ್ತಿಲ್ಲ. ಯಥಾಪ್ರಕಾರ ದೀಪಾ ಮತ್ತು ಸೂರ್ಯನ ಅತ್ತಿಗೆಯರ ನಡುವೆ ಜಟಾಪಟಿ ನಡೆಯುತ್ತಲೇ ಇತ್ತು. ದೀಪಾ ಕಣ್ಣೀರಿನಲ್ಲೇ ಕೈ ತೊಳೆಯುವಂತಹ ಅಸಹಾಯಕ ಪರಿಸ್ಥಿತಿ ನಿರ್ಮಾಣವಾಯಿತು. ತನಗೆ ಕೆಲಸ ಸಿಕ್ಕ ಮೇಲೆ ಎಲ್ಲಾ ಸರಿಯಾಗುತ್ತದೆ ಎಂದು ಸಮಾಧಾನ ಮಾಡಿದ ಸೂರ್ಯ ಪತ್ನಿಯನ್ನು ಕರೆದುಕೊಂಡು ಹೋಗಿ ದಾವಣಗೆರೆಯಲ್ಲಿದ್ದ ತನ್ನ ಅಕ್ಕನ ಮನೆಯಲ್ಲಿ ಬಿಟ್ಟು ತಾನೊಬ್ಬನೇ ಬೆಂಗಳೂರಿಗೆ ವಾಪಸು ಹೋದ. ಹಂಗಿನ ಕೂಳು ತಿನ್ನುತ್ತಿದ್ದ ದೀಪಾ ದಾವಣಗೆರೆಯಲ್ಲಿ ಒಂದು ತಿಂಗಳು ಇದ್ದು, ತಂದೆಯನ್ನು ಕರೆಸಿಕೊಂಡು ತವರು ಮನೆಗೇ ಬಂದಳು.
     ತವರುಮನೆಯಲ್ಲಿ ಎರಡು ತಿಂಗಳು ಕಳೆಯಿತು. ಅಳಿಯ ಮಹಾಶಯ ನಂತರ ಬಂದವನು ಪತ್ನಿಯನ್ನು ಕರೆದುಕೊಂಡು ಹೋಗಿ ಶಿವಮೊಗ್ಗದಲ್ಲಿದ್ದ ಇನ್ನೊಬ್ಬ ಅಣ್ಣನ ಮನೆಗೆ ಬಂದ. ಅಲ್ಲೂ ೧೦-೧೫ ದಿನಗಳು ಇದ್ದರು. ಆ ನಂತರದಲ್ಲಿ ಪತ್ನಿ ಮತ್ತು ತಾಯಿಯನ್ನೂ ಕರೆದುಕೊಂಡು ಪುನಃ ಬೆಂಗಳೂರಿನ ದೀಪಾಳ ಪಾಲಿನ ನರಕದ ಮನೆಗೆ ಹೋದ. ೧೦-೧೫ ದಿನಗಳಲ್ಲಿ ಹೆಂಗಸರುಗಳ ನಡುವಣ ಜಗಳ ಬಗೆಹರಿಯದಷ್ಟು ತಾರಕಕ್ಕೇರಿದಾಗ ಗಂಡ-ಹೆಂಡತಿ ಇಬ್ಬರೂ ಗಂಟು ಮೂಟೆ ಕಟ್ಟಿಕೊಂಡು ನಾಗಾನಾಯ್ಕನ ಮನೆಗೆ ಬಂದರು. ನಾಗಾನಾಯ್ಕ ಇಬ್ಬರಿಗೂ ಬುದ್ಧಿ ಹೇಳಿ ಒಂದು ದಿನ ತಮ್ಮ ಮನೆಯಲ್ಲಿ ಇರಿಸಿಕೊಂಡು ಇಬ್ಬರನ್ನೂ ವಾಪಸು ಬೆಂಗಳೂರಿಗೇ ಕಳಿಸಿದ. ಬೆಂಗಳೂರಿಗೆ ಹೋಗಿ ಕೆಲವು ದಿನಗಳಾಗಿರಬಹುದು. ಒಂದು ರಾತ್ರಿ ನಾಗಾನಾಯ್ಕನ ಅಕ್ಕ ಫೋನು ಮಾಡಿ ನಿನ್ನ ಮಗಳು ಸಿಟ್ಟು ಮಾಡುತ್ತಿರುತ್ತಾಳೆ, ಅವಳನ್ನು ಕರೆದುಕೊಂಡು ಹೋಗು ಎಂದು ತಿಳಿಸಿದ್ದಾಳೆ. ಮಗಳ ಹತ್ತಿರ ಮಾತನಾಡಿದರೆ ಅವಳು ಅಪ್ಪಾ, ನಾನು ಈಗಲೇ ಹೊರಟುಬರುತ್ತಿದ್ದೇನೆ. ಬೆಳಿಗ್ಗೆ ಶಿವಮೊಗ್ಗದ ರೈಲ್ವೇ ಸ್ಟೇಷನ್ನಿನ ಹತ್ತಿರ ಬಾ ಎಂದಿದ್ದಾಳೆ. ರಾತ್ರಿ ಬರುವುದು ಬೇಡ, ಬೆಳಿಗ್ಗೆ ಬಾ ಎಂದು ಹೇಳಿದ ಅವನು ಅಳಿಯನಿಗೂ ಬೆಳಿಗ್ಗೆ ಕರೆದುಕೊಂಡು ಬರುವಂತೆ ಹೇಳಿದ್ದಾನೆ. ಮರುದಿನ ಬೆಳಗಿನ ಜಾವ ೫.೩೦ಕ್ಕೆ ಪುನಃ ಅಪ್ಪನಿಗೆ ಫೋನು ಮಾಡಿದ ದೀಪಾ ತಾನು ಹೊರಟು ಬರುತ್ತಿರುವುದಾಗಿಯೂ ಶಿವಮೊಗ್ಗ ರೈಲು ನಿಲ್ದಾಣಕ್ಕೆ ಮಧ್ಯಾಹ್ನ ಬರಬೇಕೆಂದೂ ತಿಳಿಸಿದ್ದಾಳೆ. ಅವಳು ಬರುವುದು ಬೇಡವೆಂದೂ, ತಾನೇ ಬೆಂಗಳೂರಿಗೆ ಬರುತ್ತಿರುವುದಾಗಿ ನಾಗಾನಾಯ್ಕ ಹೇಳಿದಾಗ ಅಪ್ಪಾ, ನೀನು ಬೇಗ ಬಾ, ಇಲ್ಲದಿದ್ದರೆ ನನ್ನನ್ನು ಸಾಯಿಸಿಬಿಡುತ್ತಾರೆ ಎಂದು ಅಳುತ್ತಾ ಹೇಳಿದ್ದಾಳೆ. ಆದರೂ ನಾಗಾನಾಯ್ಕ ಹೊಲದ ಹತ್ತಿರದ ಕೆಲಸ ಮುಗಿಸಿ ೧೧ ಕ್ಕೆ ಫೋನು ಮಾಡಿ ವಿಚಾರಿಸಿದ್ದಾನೆ. ಅವನ ಅಕ್ಕ ನಿನ್ನ ಮಗಳನ್ನು ಕರೆದುಕೊಂಡು ಹೋಗಿಬಿಡು ಎಂದು ತಿಳಿಸಿದ್ದಾಳೆ. ೧೨ ಗಂಟೆಗೆ ಹೊರಟು ಶಿವಮೊಗ್ಗ ತಲುಪಿ ಅಲ್ಲಿಂದ ರೈಲಿನಲ್ಲಿ ಹೊರಟ ನಾಗಾನಾಯ್ಕ ಬೆಂಗಳೂರಿನ ಮನೆ ತಲುಪಿದಾಗ ರಾತ್ರಿ ೯.೩೦ ಆಗಿತ್ತು.
      ನಾಗಾನಾಯ್ಕನಿಗೆ ಆ ಮನೆಯಲ್ಲಿ ತಣ್ಣನೆಯ ಸ್ವಾಗತ ದೊರೆಯಿತು. ಕುಶಾಲಿಗಾಗಿ ಎಲ್ಲರ ಯೋಗಕ್ಷೇಮ ವಿಚಾರಿಸಿದ ನಂತರ ಮಗಳ ಬಗ್ಗೆ ಕೇಳಿದ್ದಾನೆ. ಅಕ್ಕ ಲಕ್ಷ್ಮಮ್ಮ ನಿನ್ನ ಮಗಳು ಉರುಳು ಹಾಕಿಕೊಂಡಿದ್ದಾಳೆ ಎಂಬ ಉತ್ತರ ಕೊಟ್ಟಾಗ ನಾಗಾನಾಯ್ಕ ಹೌಹಾರಿದ್ದಾನೆ. ಸುಸ್ತಾಗಿ ಕುಸಿದು ಬಿದ್ದ ಅವನನ್ನು ಉಪಚರಿಸುವವರು ಅಲ್ಲಿ ಯಾರೂ ಇರಲಿಲ್ಲ. ಮಗಳ ಹೆಣವನ್ನೂ ನೋಡಲು ಅವನಿಗೆ ಧೈರ್ಯವಿರಲಿಲ್ಲ. ಅಂದು ಮಧ್ಯರಾತ್ರಿ ಸುಮಾರು ೧.೩೦ರ ವೇಳೆಗೆ  ಸೂರ್ಯನ ಮೂವರು ಅಣ್ಣಂದಿರು ಮತ್ತು ಇಬ್ಬರು ಸ್ಥಳೀಯ ಮುಖಂಡರು ಸೇರಿಕೊಂಡು ಹೆಣವನ್ನು ಹಳ್ಳಿಗೆ ಸಾಗಿಸಲು ಸಿದ್ಧತೆ ನಡೆಸಿದ್ದರು. ಇದಕ್ಕಾಗಿ ಒಂದು ಕೆಂಪು ಮಾರುತಿ ಒಮ್ನಿ ವಾಹನವನ್ನು ಊರಿನಿಂದಲೇ ತಂದಿದ್ದರು. ನಾಗಾನಾಯ್ಕ ಆಗ ಹೆಣವಿದ್ದ ಕೊಠಡಿಯ ಬಾಗಿಲಿಗೆ ಅಡ್ಡವಾಗಿ ನಿಂತು, ಪೋಳಿಸರಿಗೆ ದೂರು ಕೊಟ್ಟು ಅವರು ಬರುವವರೆಗೂ ದೇಹ ಸಾಗಿಸಬಾರದು ಎಂದು ಅವರಿಗೆ ಸುಮಾರು ಒಂದೂವರೆ ಗಂಟೆಯ ಕಾಲ ಅಡ್ಡಿಪಡಿಸಿದ್ದಾನೆ. ಎಲ್ಲರೂ ಸೇರಿ ಅವನನ್ನು ಸಮಾಧಾನ ಪಡಿಸಿ ಊರಿಗೆ ಹೋದ ಮೇಲೆ ಅಲ್ಲೇ ಪೋಲಿಸರಿಗೆ ದೂರು ಕೊಟ್ಟು, ಅವರು ತನಿಖೆ ನಡೆಸಿದ ಮೇಲೇ ಮುಂದಿನ ಕಾರ್ಯ ಮಾಡೋಣ ಎಂದು ಒಪ್ಪಿಸಿ ಹೆಣವನ್ನು ವ್ಯಾನಿನಲ್ಲಿ ಹಾಕಿಕೊಂಡು ಹೊರಟಿದ್ದಾರೆ. ಅದೇ ವ್ಯಾನಿನಲ್ಲಿ ನಾಗಾನಾಯ್ಕ ಬಂದರೂ ಮಗಳ ಹೆಣವನ್ನು ನೋಡುವ ಧೈರ್ಯ ಆಗಲೂ ಮಾಡಿರಲಿಲ್ಲ. ಆ ವ್ಯಾನು ಹಳ್ಳಿ ತಲುಪಿದ್ದು ಮಧ್ಯಾಹ್ನ ೧೨.೩೦ರ ವೇಳೆಗೆ.
     ಇಲ್ಲಿಯವರೆಗಿನ ಕಥೆ ದೀಪಾಳ ತಂದೆ, ತಾಯಿ ಮತ್ತು ಅಣ್ಣ ಹೇಳಿದ್ದು. ಮುಂದಿನ ಕಥೆಯನ್ನು ನಾನು ಮುಂದುವರೆಸುತ್ತೇನೆ.ಏಕೆಂದರೆ, ಇಲ್ಲಿಂದ ಮುಂದೆ ಪ್ರಕರಣದಲ್ಲಿ ನನ್ನ ಪ್ರವೇಶವಾಯಿತು.
     ಅಂದು ಸಾಯಂಕಾಲ ೭ ಗಂಟೆಯ ವೇಳೆಗೆ ಮನೆಗೆ ಸುಸ್ತಾಗಿ ಬಂದವನು ಬಟ್ಟೆ ಬದಲಾಯಿಸುತ್ತಿದ್ದ ವೇಳೆಗೆ ಪೋಲಿಸ್ ಇನ್ಸ್‌ಪೆಕ್ಟರರು ಫೋನಿನಲ್ಲಿ ವಿಷಯ ತಿಳಿಸಿ ಶವತನಿಖೆ ನಡೆಸಿಕೊಡಲು ಕೋರಿದ್ದರು. ಲಿಖಿತ ವರದಿ ಮತ್ತು ಕೋರಿಕೆ ಕಳುಹಿಸಿಕೊಡಲು ಹಾಗೂ ಕತ್ತಲಾದ್ದರಿಂದ ಅಲ್ಲಿ ಬೆಳಕಿನ ವ್ಯವಸ್ಥೆ ಮಾಡಲೂ ತಿಳಿಸಿದ್ದೆ. ಅರ್ಧ ಗಂಟೆ ಬಿಟ್ಟು ಕಛೇರಿಗೆ ಫೋನು ಮಾಡಿ ವಿಚಾರಿಸಿದರೆ ಇನ್ನೂ ಪೋಲಿಸರಿಂದ ಕೋರಿಕೆ ಬಂದಿರಲಿಲ್ಲವೆಂದು ತಿಳಿಯಿತು. ಅಷ್ಟರಲ್ಲಿ ಮೃತಳ ಊರಿನಿಂದ ಟ್ರ್ಯಾಕ್ಟರುಗಳಲ್ಲಿ ಜನ ಬಂದು ಹಳ್ಳಿಯಲ್ಲಿದ್ದಾರೆಂದೂ ಗಲಾಟೆಯಾಗುವ ಸಂಭವವಿದೆಯೆಂದೂ ನನಗೆ ಮಾಹಿತಿ ಸಿಕ್ಕಿತು. ಸಬ್‌ಇನ್ಸ್ ಪೆಕ್ಟರರಿಗೆ ಫೋನು ಮಾಡಿ ವರದಿ ಬಗ್ಗೆ ಪುನಃ ವಿಚಾರಿಸಿದೆ. ಬರವಣಿಗೆ ಕೆಲಸ ಆಗುತ್ತಿದೆ, ದೂರು ತಡವಾಗಿ ಕೊಟ್ಟಿದ್ದಾರೆ, ಇನ್ನು ಅರ್ಧ ಗಂಟೆಯ ಒಳಗೆ ಆಗುತ್ತದೆ ಎಂಬ ಉತ್ತರ ಬಂದಿತು. ರಾತ್ರಿ ೯.೦೦ರ ವೇಳೆಯಾದರೂ ಕೋರಿಕೆಯ ಸುಳಿವಿರದ ಕಾರಣ ಪುನಃ ಫೋನು ಮಾಡಿ ಈಗಾಗಲೇ ತಡವಾಗಿದೆ, ಅಲ್ಲಿ ಗಲಾಟೆಗೆ ಅವಕಾಶ ಕೊಡುವುದು ಬೇಡ. ಅಗತ್ಯದ ಸಿಬ್ಬಂದಿಯೊಂದಿಗೆ ಬನ್ನಿ, ನಾನು ಈಗ ಹೊರಟಿದ್ದೇನೆ ಎಂದಾಗ ಅವರು ಹಿಂದೆಯೇ ತಾವೂ ಬರುವುದಾಗಿ ತಿಳಿಸಿದರು. ಹತ್ತು ನಿಮಿಷ ನೋಡಿ ಒಬ್ಬರು ಗುಮಾಸ್ತರು ಮತ್ತು ಒಬ್ಬರು ಜವಾನರನ್ನು ಕರೆದುಕೊಂಡು ಪೋಲಿಸ್ ಠಾಣೆಯ ಮುಂದೆಯೇ ಹೋಗಿ ಅವರನ್ನು ಹೊರಡಲು ಸೂಚಿಸಿದೆ. ಕೆಲವರು ಸಿಬ್ಬಂದಿ ಕರೆದುಕೊಂಡು ಬರುವುದಾಗಿ ಹೇಳಿದಾಗ ನಾನು ಹಳ್ಳಿಗೆ ಹೊರಟೆ. ಹೆಣವನ್ನು ಮನೆಯ ಮುಂಭಾಗದಲ್ಲಿ ಒಂದು ಹಳೆಯ ಮಂಚದ ಮೇಲೆ ಮಲಗಿಸಲಾಗಿತ್ತು. ಜನ ಗುಂಪು ಕೂಡಿದ್ದರು. ಅಲ್ಲಿದ್ದವರಲ್ಲಿ ಹೆಚ್ಚಿನವರು ಮೃತಳ ಊರಿನವರಾಗಿದ್ದು, ಸ್ಥಳೀಯರ ಸಂಖ್ಯೆ ಬೆರಳೆಣಿಕೆಯಷ್ಟಿತ್ತು. ಮೃತಳ ಗಂಡನಾಗಲೀ, ಅವನ ಅಣ್ಣಂದಿರಾಗಲೀ ಅಲ್ಲಿ ಇರಲಿಲ್ಲ. ಭಯದಿಂದ ಜಾಗ ಖಾಲಿ ಮಾಡಿದ್ದಿರಬೇಕು. ಹಳ್ಳಿ ತಲುಪಿದ ಅರ್ಧ ಗಂಟೆ ನಂತರ ಬಂದ ಪೋಲಿಸ್ ಜೀಪಿನಲ್ಲಿ ಒಬ್ಬರು ಹೆಡ್ ಕಾನ್ಸ್ ಟೇಬಲ್ ಮತ್ತು ಒಬ್ಬರು ಪೇದೆ ಮಾತ್ರ ಇದ್ದುದು ಕಂಡು ನನಗೆ ಸಿಟ್ಟು ಬಂದರೂ ತೋರಿಸಿಕೊಳ್ಳಲಿಲ್ಲ. ಸಬ್ ಇನ್ಸ್‌ಪೆಕ್ಟರ್ ಎಲ್ಲಿ? ವರದಿ ಎಲ್ಲಿ? ಎಂದು ಕೇಳಿದರೆ ಲೆಟರ್ ಕಛೇರಿಗೆ ಕೊಟ್ಟಿದ್ದೇವೆ ಎಂಬ ಉತ್ತರ ಬಂತು. ಕಛೇರಿಗೆ ಫೋನು ಮಾಡಿ ಕೇಳಿದರೆ ಅಲ್ಲಿದ್ದ ಕಾವಲುಗಾರ ಯಾವ ಪೋಲಿಸರೂ ಬಂದಿಲ್ಲ, ಯಾರೂ ಲೆಟರ್ ಕೊಟ್ಟಿಲ್ಲ ಎಂದು ಹೇಳಿದ್ದ. ಅದಿಕೃತ ಕೋರಿಕೆ ಇಲ್ಲದೆ ಶವತನಿಖೆ ಮಾಡುವಂತಿಲ್ಲ, ಅಲ್ಲಿಂದ ವಾಪಸೂ ಬರುವ್ಲಂತಿಲ್ಲ, ಹಾಗೆ ಬಂದಿದ್ದರೆ ಅದು ತಪ್ಪು ಸಂಧೇಶ ರವಾನಿಸುತ್ತಿತ್ತು ಮತ್ತು ಗಲಾಟೆಗೆ ಅವಕಾಶವಾಗುತ್ತಿತ್ತು. ನಾನು ಯಾರೂ ಇಲ್ಲದ ಸ್ಥಳಕ್ಕೆ ಹೋಗಿ ಫೋನಿನಲ್ಲಿ ಸಬ್ ಇನ್ಸ್‌ಪೆಕ್ಟರರಿಗೆ ಕಠಿಣವಾಗಿ ನಿಂದಿಸಿದೆ. ಅವರು ರಾತ್ರಿ ಕತ್ತಲಾದ್ದರಿಂದ ಬೆಳಿಗ್ಗೆ ಶವತನಿಖೆ ಮಾಡಬಹುದೆಂಬ ಕಾರಣದಿಂದ ಹೀಗೆ ಮಾಡಿದ್ದೆಂದು ಹೇಳಿ ಮತ್ತಷ್ಟು ಬೈಸಿಕೊಂಡರು.  ನಾನು ಶವತನಿಖೆ ಮಾಡಿದ ನಂತರ ಮೃತರ ಸಂಬಂಧಿಗಳನ್ನು ವಿಚಾರಿಸಿ ಹೇಳಿಕೆ ಪಡೆಯುತ್ತಿದ್ದೆ. ಆದರೆ ಈ ಪ್ರಕರಣದಲ್ಲಿ ಪೋಲಿಸರ ಕೋರಿಕೆ ಬರುವವರೆಗೆ ಆ ಕೆಲಸವನ್ನಾದರೂ ಮಾಡಬಹುದೆಂದು ಶವದ ಪಕ್ಕದಲ್ಲಿಯೇ ಕುರ್ಚಿ ತರಿಸಿ ಹಾಕಿಕೊಂಡು ಮೃತೆಯ ತಂದೆ, ತಾಯಿ, ಅಣ್ಣ ಮತ್ತು ಗ್ರಾಮಸ್ಥರ ಹೇಳಿಕೆಗಳನ್ನು ಪಡೆಯಲು ಪ್ರಾರಂಭಿಸಿದೆ. ಅದು ಸಾಮಯಿಕ ಮತ್ತು ಸಾಂದರ್ಭಿಕವಾಗಿ ತೆಗೆದುಕೊಂಡಿದ್ದ ಅಗತ್ಯದ ನಿರ್ಧಾರವಾಗಿತ್ತು. ಇದರಿಂದ ಅಲ್ಲಿದ್ದ ಯಾರಿಗೂ ಯಾವುದೇ ಸಂಶಯ ಬರಲು ಅವಕಾಶವಾಗಲಿಲ್ಲ. ಕೋರಿಕೆ ಪತ್ರ ಹಿಡಿದು ಸಬ್‌ಇನ್ಸ್‌ಪೆಕ್ಟರ್ ಧಾವಿಸಿ ಬಂದ ನಂತರವೇ ಶವತನಿಖೆ ಪ್ರಾರಂಭಿಸಿದ್ದು. ನಾನು ಪ್ರಾರಂಭದಲ್ಲಿ ಹೇಳಿರುವ ಎಲ್ಲಾ ಸಂಗತಿಗಳೂ ದಾಖಲಿಸಿಕೊಂಡಿರುವ ಹೇಳಿಕೆಗಳಲ್ಲಿ ಇರುವುದಾಗಿದೆ.
     ನಾನು ದೀಪಾಳ ಶವದ ಪಕ್ಕದಲ್ಲಿಯೇ ಕುಳಿತಿದ್ದರೂ ತನಿಖೆಯ ದೃಷ್ಟಿ ಬೀರಿದ್ದು ನಿಯಮದ ರೀತ್ಯಾ ಶವತನಿಖೆಯ ಕೋರಿಕೆ ಪತ್ರ ಕೈಸೇರಿದ ನಂತರವೇ. ೨೪ ವರ್ಷದ, ಮದುವೆಯಾದ ಕೇವಲ ೯ ತಿಂಗಳಲ್ಲಿ ಅಂತ್ಯ ಕಂಡಿದ್ದ, ಆ ೯ ತಿಂಗಳುಗಳಲ್ಲೂ ಕೇವಲ ನರಕವನ್ನೇ ಕಂಡಿದ್ದ, ಅವರಿವರ ಮನೆಗಳಲ್ಲಿ ಹಂಗಿನ ಕೂಳಿಗಾಗಿ ಕೈಯೊಡ್ಡಬೇಕಾಗಿ ಬಂದಿದ್ದ ದೀಪಾಳ ಪ್ರಾಣದೀಪ ನಂದಿಹೋಗಿತ್ತು. ಆ ೯ ತಿಂಗಳುಗಳಲ್ಲೇ ಎರಡು ಸಲ ಮಕ್ಕಳು ಈಗಲೇ ಬೇಡವೆಂದು ಅತ್ತೆಯ ಮನೆಯಲ್ಲಿ ಬಲವಂತವಾಗಿ ಅಬಾರ್ಷನ್ ಮಾಡಿಸಿದ್ದರೆಂದು ಮತ್ತು ಮಕ್ಕಳಾಗದಂತೆ ಬಲವಂತವಾಗಿ ಮಾತ್ರೆಗಳನ್ನು ನುಂಗಿಸುತ್ತಿದ್ದರೆಂದು ದೀಪಾಳ ತಾಯಿ ಹೇಳಿಕೆಯಲ್ಲಿ ತಿಳಿಸಿದ್ದಳು.  ಇನ್ನೂ ಅರಳಬೇಕಾಗಿದ್ದ ಹೂವೊಂದನ್ನು ಅರಳುವ ಮುನ್ನವೇ ಹೊಸಕಿ ಹಾಕಿದ್ದ ಕಟುಕರನ್ನು ಮನದಲ್ಲೇ ಶಪಿಸಿದೆ. ಶವ ಇರುವ ಜಾಗದ ಸುತ್ತಲೂ ಚಾಪೆ, ಸೀರೆಗಳಿಂದ ಪರದೆ ಕಟ್ಟಿಸಿದೆ. ಸಂದಿಯಿಂದ ಇಣುಕಿ ನೋಡುತ್ತಿದ್ದವರನ್ನು ಗದರಿಸಿ ಕಳಿಸಬೇಕಾಯಿತು. ನನ್ನ ಸಿಟ್ಟು ತಣಿದಿರದಿದ್ದ ಕಾರಣ, ಪಕ್ಕ ನಿಂತುಕೊಂಡಿದ್ದ ಪೇದೆಗೆ ಏನು ಮಿಕಿಮಿಕಿ ನೋಡುತ್ತಿದ್ದೀರಿ? ಜನರನ್ನು ದೂರ ಕಳಿಸಿ ಎಂದು ಸಿಡುಕಿದೆ. ನಿಯಮದಂತೆ ಶವತನಿಖೆ ನಡೆಸಿ ಕಂಡು ಬಂದ ಸಂಗತಿಗಳನ್ನು ಗುಮಾಸ್ತರಿಗೆ ಹೇಳಿ ಬರೆಸುತ್ತಿದ್ದೆ. ಶವದ ಮೂಗು, ಬಾಯಿ, ಕಣ್ಣುಗಳಿಂದ ರಕ್ತ ಜಿನುಗಿತ್ತು. ಬಲ ಕೆನ್ನೆ ಮತ್ತು ಎದೆಯ ಭಾಗ ಊದಿತ್ತು. ಕಿವಿಯಲ್ಲೂ ರಕ್ತ ಹೆಪ್ಪುಗಟ್ಟಿತ್ತು. ಬಲ ಕಂಕುಳಿನ ಕೆಳಭಾಗದಲ್ಲಿ, ಬಲಪಕ್ಕೆಗಳ ಭಾಗದಲ್ಲಿ ರಕ್ತನಾಳಗಳು ಒಡೆದು ರಕ್ರ ಹೆಪುಗಟ್ಟಿದ ಗುರುತುಗಳಿದ್ದವು. ಎಡಭಾಗದಲ್ಲೂ ಹೀಗೆಯೇ ಗುರುತುಗಳಿದ್ದವು. ಸೊಂಟದ ಭಾಗದಲ್ಲಿ ಮತ್ತು ತೊಡೆಗಳಲ್ಲಿ ಅಲ್ಲಲ್ಲಿ ರಕ್ತ ಹೆಪ್ಪುಗಟ್ಟಿದ ಗುರುತುಗಳು ಕಂಡವು. ಸಾಯುವ ಮುನ್ನ ಅವಳು ಅನುಭವಿಸಿರಬಹುದಾದ ಚಿತ್ರಹಿಂಸೆಯನ್ನು ನೆನೆದು ಇಂತಹ ವಿಕೃತರೂ ಇರುತ್ತಾರೆಯೇ ಎಂದು ನೊಂದುಕೊಂಡೆ. ಎಡಗೈ ರಟ್ಟೆ, ಮೊಣಕೈ, ಬಲ ಮೊಣಕಾಲಿನ ಕೆಳಗೆ ಎಳೆದಾಡಿದ, ಚರ್ಮ ಕಿತ್ತುಬಂದ ತರಚಿದ ಗುರುತುಗಳಿದ್ದು, ಬಹುಶಃ ಅವು ಶವವನ್ನು ವ್ಯಾನಿನಲ್ಲಿ ಇಡುವಾಗ, ಪ್ರಯಾಣಿಸುವಾಗ,  ಇಳಿಸುವಾಗ ಆಗಿರಬಹುದಾದ ತರಚು ಗಾಯಗಳಿರಬೇಕು. ಪಂಚರ ಸಮಕ್ಷಮದಲ್ಲಿ ಈ ಕೆಲಸ ಮುಗಿಸಿ, ಅವರುಗಳ ಸಹಿಯನ್ನೂ ಪಡೆದು, ಶವಪರೀಕ್ಷೆ ನಡೆಸಿ ವರದಿಸಲು ವೈದ್ಯಾಧಿಕಾರಿಗಳಿಗೆ ಸೂಚಿಸಿದೆ. ಶವಪರೀಕ್ಷೆ ನಂತರ ಸಂಬಂಧಿಕರಿಗೆ ಶವವನ್ನು ಅಂತ್ಯ ಸಂಸ್ಕಾರಕ್ಕಾಗಿ ಒಪ್ಪಿಸಲು ಮತ್ತು ಮುಂದಿನ ಅಗತ್ಯದ ತನಿಖೆ ಮುಂದುವರೆಸಲು ಸಬ್ ಇನ್ಸ್‌ಪೆಕ್ಟರರಿಗೆ ತಿಳಿಸಿ ಅಲ್ಲಿಂದ ಹೊರಟುಬಂದೆ. ಶವಪರೀಕ್ಷೆ ನಡೆಸಲು ವೈದ್ಯಾಧಿಕಾರಿಯವರಿಗೆ ಸೂಚನಾಪತ್ರ ಕಳಿಸಿದ ಮೂರು ಗಂಟೆಯ ನಂತರದಲ್ಲಿ ಅವರಿಂದ ಶವ ಕೊಳೆಯಲು ಪ್ರಾರಂಭಿಸಿರುವುದರಿಂದ ಶವಪರೀಕ್ಷೆಯನ್ನು ಮಾಡುವುದು ಕಷ್ಟವೆಂದು ತಿಳಿಸಿದ್ದರಿಂದ ಜಿಲ್ಲಾ ಆಸ್ಪತ್ರೆಯಿಂದ ಫೋರೆನ್ಸಿಕ್ ತಜ್ಞರನ್ನು ಕಳಿಸಿ ಶವಪರೀಕ್ಷೆ ಮಾಡುವಂತೆ ಪತ್ರ ಕಳುಹಿಸಿದೆ. ಅವರು ಬಂದು ತನಿಖೆ ನಡೆಸುವ ಹೊತ್ತಿಗೆ ಸಂಜೆಯಾಗಿತ್ತು. ಅವರು ಏನು ವರದಿಯನ್ನು ಪೋಲಿಸರಿಗೆ ಸಲ್ಲಿಸಿದರು ಎಂಬುದು ನನಗೆ ತಿಳಿದಿಲ್ಲ. ಕೊಲೆ ಮಾಡಿ ಕಲ್ಲು ಕಟ್ಟಿ ನೀರಿನಲ್ಲಿ ಹಲವಾರು ದಿನಗಳು ಇದ್ದು ಜಲಚರಗಳು ತಿಂದು ಅಕರಾಳ ವಿಕರಾಳವಾಗಿದ್ದ ಶವದ ಪರೀಕ್ಷೆಯನ್ನೇ ವೈದ್ಯರು ಮಾಡಿದ್ದ ಸಂಗತಿ ನನ್ನ ಅನುಭವದ ಬುತ್ತಿಯಲ್ಲಿದೆ. ಹಾಗಿರುವಾಗ ಈ ಶವದ ಪರೀಕ್ಷೆಗೆ ವೈದ್ಯರು ಏಕೆ ಹಿಂಜರಿದರು ಎಂಬ ಬಗ್ಗೆ ಅಧಿಕೃತವಾಗಿ ನಾನು ಹೇಳಲು ನಾನು ವೈದ್ಯಕೀಯ ವಿಷಯಗಳ ತಜ್ಞನಲ್ಲವಾದ್ದರಿಂದ ಸಾಧ್ಯವಿಲ್ಲ. ಜ್ಯುಡಿಶಿಯಲ್ ಮ್ಯಾಜಿಸ್ಟ್ರೇಟರ ನ್ಯಾಯಾಲಯಕ್ಕೆ ಶವತನಿಖಾ ವರದಿಯನ್ನು ದಾಖಲಿಸಿದ್ದ ಹೇಳಿಕೆಗಳು ಹಾಗೂ ನನ್ನ ಅನಿಸಿಕೆಗಳೊಂದಿಗೆ ಕಳುಹಿಸಿದೆ. ತನಿಖೆ ಕಾಲದಲ್ಲಿ ನನ್ನ ಜೊತೆಯೇ ಹಲವಾರು ಗಂಟೆಗಳ ಕಾಲ ಇರಬೇಕಾಗಿ ಬಂದಿದ್ದ ಗುಮಾಸ್ತ ಛಳಿಜ್ವರ ಬಂದು ಮೂರು ದಿನ ರಜಾ ಹಾಕಿದ್ದ. ಟಿವಿ ೯ರಲ್ಲಿ ಈ ಪ್ರಕರಣದ ಸುದ್ದಿಯನ್ನು ರಂಜಿತವಾಗಿ ತೋರಿಸಲಾಯಿತು. ಆ ಸುದ್ದಿ ಒಳ್ಳೆಯ ಮತ್ತು ಪ್ರಸಾರ ಮಾಡಬೇಕಾಗಿದ್ದ ರೀತಿಯಲ್ಲಿ ಇರಲಿಲ್ಲವೆಂಬುದು ನನ್ನ ವೈಯಕ್ತಿಕ ಅಭಿಪ್ರಾಯ.
     ಪ್ರಕರಣಗಳ ಶೀಘ್ರ ಇತ್ಯರ್ಥಕ್ಕಾಗಿ ತ್ವರಿತಗತಿ ನ್ಯಾಯಾಲಯಗಳು ರಚಿತವಾಗಿರುವುದರಿಂದ ಮೊದಲಿಗಿಂತ ಪರವಾಗಿಲ್ಲವೆಂಬಂತೆ ಪ್ರಕರಣಗಳು ಇತ್ಯರ್ಥವಾಗುತ್ತಿದೆ. ಈ ಘಟನೆ ನಡೆದ ಸ್ಥಳ ಬೆಂಗಳೂರು ಆಗಿದ್ದರಿಂದ ಅಲ್ಲಿನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ ವಿಚಾರಣೆ ಆರಂಭವಾಯಿತು. ಘಟನೆ ನಡೆದ ಸುಮಾರು ಎರಡು ವರ್ಷಗಳ ನಂತರ ನನಗೆ ಸಾಕ್ಷಿ ಹೇಳಿಕೆ ನೀಡಲು ಸಮನ್ಸ್ ಬಂದಿತು. ಹೇಳಿಕೆ ನೀಡಲು ಹೋದ ಸಂದರ್ಭದಲ್ಲಿ ಕಟಕಟೆಯಲ್ಲಿ ನಿಂತಿದ್ದ, ಸುಮಾರು ಎರಡು ವರ್ಷಗಳಿಂದ ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿಗಳ ಪ್ರಥಮ ದರ್ಶನ ನನಗಾಯಿತು. ಹೇಳಿಕೆ ನೀಡುವ ಮುನ್ನ ಕಡತವನ್ನು ನೋಡಲು ಮತ್ತು ಚರ್ಚಿಸಲು ಸರ್ಕಾರಿ ವಕೀಲರನ್ನು ಭೇಟಿಯಾದ ಸಂದರ್ಭದಲ್ಲಿ ಯಾವ ಪಂಚರ ಸಮಕ್ಷಮದಲ್ಲಿ ನಾನು ಶವತನಿಖೆ ನಡೆಸಿದ್ದೆನೋ ಅವರೆಲ್ಲರೂ ತಮಗೇನೂ ಗೊತ್ತಿಲ್ಲವೆಂಬಂತೆ ಸಾಕ್ಷ್ಯ ಹೇಳಿದ್ದ ವಿಷಯ ತಿಳಿಯಿತು. ಪೋಲಿಸರು ಹೆಸರಿಸಿದ್ದ ಇತರ ಕೆಲವು ಸಾಕ್ಷಿಗಳೂ ಪ್ರತೀಕೂಲ ಹೇಳಿಕೆ ನೀಡಿದ್ದುದೂ ತಿಳಿಯಿತು. ಸರ್ಕಾರಿ ವಕೀಲರು 'ಮೃತಳ ತಂದೆ ಸರಿಯಿಲ್ಲ, ಪಾಪ, ಆ ಕಾಲೇಜು ಲೆಕ್ಚರರ್ ಎರಡು ವರ್ಷಗಳಿಂದ ಜೈಲಿನಲ್ಲಿರಬೇಕಾಗಿ ಬಂದಿದೆ' ಎಂದಾಗ ಪ್ರಕರಣ ಸಾಗುತ್ತಿದ್ದ ರೀತಿಯ ಕಲ್ಪನೆ ನನಗಾಗಿತ್ತು. ನಾನು ನನ್ನ ಹೇಳಿಕೆ ನೀಡಿ ನಾನು ಮಾಡಿದ ತನಿಖೆಯನ್ನು ಸಮರ್ಥಿಸಿಕೊಂಡು, ಆರೋಪಿಗಳ ಪರ ವಕೀಲರ ಅಡ್ಡಪ್ರಶ್ನೆಗಳಿಗೆ ಸೂಕ್ತ ಉತ್ತರ ಕೊಟ್ಟಿದ್ದೆ. ಮುಂದೇನಾಯಿತು ಎಂಬ ವಿಷಯ ನನಗೆ ತಿಳಿಯಲಿಲ್ಲ. ಪ್ರಿಯ ದೀಪಾ, ಮುಂದಿನ ಜನ್ಮದಲ್ಲಾದರೂ ನಿನಗೆ ಸುಖ, ನ್ಯಾಯ ಸಿಗಲಿ ಎಂದು ಹಾರೈಸುವೆ.
     ಪ್ರಪಂಚವನ್ನು ನೋಡುವ ನಮ್ಮ ದೃಷ್ಟಿ ಬದಲಾಗಬೇಕೆಂದು ತಿಳಿದವರು ಹೇಳುತ್ತಾರೆ. ಎಲ್ಲಾ ವಿಷಯದಲ್ಲೂ ಒಳ್ಳೆಯದನ್ನು ಕಾಣಬೇಕೆನ್ನುತ್ತಾರೆ. ಈ ಪ್ರಕರಣದಲ್ಲಿ ಒಳ್ಳೆಯ ಸಂಗತಿ ಹುಡುಕಲು ನಾನು ವಿಫಲನಾಗಿರುವೆ. ನನ್ನ ನೋಟದಲ್ಲೇ ಏನೋ ತಪ್ಪಿರಬೇಕು!
-ಕ.ವೆಂ.ನಾಗರಾಜ್.
************
ಹಿಂದಿನ ಅನುಭವ ಕಥನ - 'ಶವಗಳೊಡನೆ ಸಂಭಾಷಣೆ'ಗೆ ಲಿಂಕ್: http://kavimana.blogspot.in/2012/03/blog-post_26.html

11 ಕಾಮೆಂಟ್‌ಗಳು:

  1. ಬಹಳ ಘೋರ ಕಥನ. ಇದು ನೈಜ ಕಥೆಯನ್ನುತೀರಿ. ಆ ಮಗಳನ್ನು ಕಳೆದುಕೊಂಡ ತಂದೆಯ ಮನೋವ್ಯಥೆಗೆ, ಶಬ್ಧಗಳೇ ಇಲ್ಲ. ಇಂಥಹ ಕೊಲೆಗಡುಕರಿಗೆ ಧಿಕ್ಕಾರ.
    ಆ ಪರಮಾತ್ಮನೇ ಅವರನ್ನು ಸಂತೈಸಬೇಕು.

    ಪ್ರತ್ಯುತ್ತರಅಳಿಸಿ
    ಪ್ರತ್ಯುತ್ತರಗಳು
    1. ಇದು ನೂರಕ್ಕೆ ನೂರು ಸತ್ಯದ ಕಥೆ.ನನ್ನ ಕಲ್ಪನೆ ಇಲ್ಲಿ ಏನೂ ಇಲ್ಲ. ಇಲ್ಲಿ ಹೇಳಿರುವ ವಿಚಾರಗಳೆಲ್ಲವೂ ನಾನು ದಾಖಲಿಸಿಕೊಂಡಿದ್ದ ಹೇಳಿಕೆಗಳಲ್ಲಿವೆ ಮತ್ತು ಅವು ನ್ಯಾಯಾಲಯದ ಗಮನಕ್ಕೂ ಬಂದಿದೆ. ಪ್ರತಿಕ್ರಿಯಿಸದ್ದಕ್ಕೆ ವಂದನೆ, ರವಿಯವರೇ.

      ಅಳಿಸಿ
  2. ಓದಿ ಮುಗಿಸುವಷ್ಟರಲ್ಲಿ ತಲೆ ಭಾರವಾದ೦ತೆನಿಸಿ, ಏನೋ ಒ೦ದು ರೀತಿಯ ವೇದನೆ... ಎಲ್ಲರೂ ಪ್ರತಿಕೂಲ ಸಾಕ್ಷಿಯನ್ನು ಹೇಳಿದ್ದು ತಿಳಿದು, ಇ೦ಥಹವರೂ ಇರುತ್ತಾರಲ್ಲ ಎನಿಸಿತು! ನನಗೇಕೋ ಕೊಲೆಗಡುಕರಿಗಿ೦ತ, ಕೊಲೆಗಡುಕರಿಗೆ ಶಿಕ್ಷೆಯಾಗದಿದ್ದ೦ತೆ ಆಮಿಷಗಳಿಗೆ ಬಲಿಯಾದರಲ್ಲ! ಅವರ ಮೇಲೆ ಕೆಟ್ಟ ಕೋಪ ಬರ್ತಾ ಇದೆ.
    ನಿಮ್ಮ ಅನುಭವ ಬಹಳಷ್ಟಿದೆ.. ಹಿರಿಯರು ಹಾಗೂ ಉತ್ತಮ ಸ೦ಗ್ರಾಹಕರೂ ಆಗಿರುವ ತಮ್ಮಿ೦ದ ಇನ್ನೂ ಹೆಚ್ಚೆಚ್ಚು ಸಾಮಾಜಿಕ ಸ೦ದೇಶಗಳುಳ್ಳ ಲೇಖನಗಳನ್ನು ನಿರೀಕ್ಷಿಸುತ್ತಿದ್ದೇನೆ.
    ನಮಸ್ಕಾರಗಳೊ೦ದಿಗೆ,
    ನಿಮ್ಮವ ನಾವಡ.

    ಪ್ರತ್ಯುತ್ತರಅಳಿಸಿ
    ಪ್ರತ್ಯುತ್ತರಗಳು
    1. ಹೌದು, ನಾವಡರೇ. ಇಂದಿನ ದುಸ್ಥಿತಿಗಳಿಗೆ ಕಾರಣ ಇಂತಹ ಮನೋಭಾವವೇ ಎಂದರೆ ತಪ್ಪಿಲ್ಲ. ಪ್ರತಿಕ್ರಿಯೆಗೆ ದನ್ಯವಾದಗಳು.

      ಅಳಿಸಿ
  3. ನೈಜಕಥೆಯೆನ್ನುತ್ತೀರಿ! ಶವಪರೀಕ್ಷೆಗೆ ತಾವೇ ಹೋಗಿದ್ದಿರಿ ಎನ್ನುತ್ತೀರಿ, ನಿಮ್ಮ ಪ್ರಕಾರ ಯಾವುದೇ ರೀತಿಯ ಆತ್ಮಹತ್ಯೆ, ಕೊಲೆ ಮುಂತಾದುವುಗಳ ಪೂರ್ಣಪ್ರಮಾಣದ ಪೋಸ್ಟ್ ಮಾರ್ಟಂ ಮಾಡದೆಯೇ ಶವಸಂಸ್ಕಾರಕ್ಕೆ ಅವಕಾಶವಿದೆಯೇ? ಅದೂ ಪೊಲೀಸರ ಗಮನಕ್ಕೆ ಬಂದ ನಂತರವೂ!ತಹಸೀಲ್ದಾರರೊಬ್ಬರು ಶವ ತನಿಖೆ ಮಾಡಿದ ವಿಷಯ ಬಲು ಅಪರೂಪ! ನನಗೇನೋ ಇಲ್ಲಿ ಸ್ವಲ್ಪ ತನಿಖೆಯ ಹಾದಿಯೇ ತಪ್ಪಾದಹಾಗೆ ಕಾಣಿಸುತ್ತಿದೆ. ಸಾಮಾನ್ಯವಾಗಿ ನಮಗೆ ಅನ್ಯಾಯವಾದಾಗ ಬೊಬ್ಬೆ ಹಾಕುವ ನಾವುಗಳು ಪಕ್ಕದ ಮನೆಯವರಿಗೆ ಏನಾದರೂ ಆದಾಗ, ಜಾರಿಕೊಳ್ಳುವ ಪ್ರಯತ್ನದಲ್ಲಿಯೇ ಇರುತ್ತೇವೆ. ಇಂತಹ ಪ್ರಸಂಗಗಳು ಇತ್ತೀಚೆಗೆ ಬಹಳವಾಗುತ್ತಿರುವ ಬಗ್ಗೆ ಏನೆನ್ನಬೇಕೋ ತಿಳಿಯದಾಗಿದೆ.

    ಪ್ರತ್ಯುತ್ತರಅಳಿಸಿ
  4. ಯಾವುದೇ ಹೆಣ್ಣುಮಗಳು ಮದುವೆಯಾದ ೭ ವರ್ಷಗಳ ಒಳಗೆ ಮೃತಳಾದರೆ ಅದನ್ನು ವರದಕ್ಷಿಣೆಗಾಗಿ ಆದ ಸಾವೆಂಬ ಹಿನ್ನೆಲೆಯಲ್ಲಿ ತಾಲ್ಲೂಕು ಮ್ಯಾಜಿಸ್ಟ್ರೇಟರು ಮತ್ತು ಮೇಲ್ಪಟ್ಟ ಅಧಿಕಾರಿಯಿಂದ ಶವತನಿಖೆ ನಡೆಸಬೇಕಾಗಿರುತ್ತದೆ. ಪೋಲಿಸರಿಂದ ಪ್ರಥಮ ವರ್ತಮಾನ ವರದಿಯೊಡನೆ ಶವತನಿಖೆಗೆ ಕೋರಿಕೆ ಸ್ವೀಕರಿಸಿದ ನಂತರ ತನಿಖೆ ಮಾಡಲಾಗುತ್ತದೆ. ತಾಲ್ಲೂಕು ದಂಡಾಧಿಕಾರಿ ಮಾಡುವುದು ಶವತನಿಖೆ, ವೈದ್ಯರು ಮಾಡುವುದು ಶವಪರೀಕ್ಷೆ. ಇಂತಹ ಪ್ರಕರಣಗಳಲ್ಲಿ ಶವತನಿಖೆ ಮಾಡಿದ ನಂತರದಲ್ಲಿ ವೈದ್ಯರಿಂದಲೂ ಶವಪರೀಕ್ಷೆ ಮಾಡಿಸಿ ವರದಿ ಪಡೆಯಲಾಗುತ್ತದೆ. ಜಿಲ್ಲಾ ಸೆಷನ್ಸ್ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತದೆ. ಲೇಖನದ ಈ ವಾಕ್ಯ ಗಮನಿಸಿ: 'ಪಂಚರ ಸಮಕ್ಷಮದಲ್ಲಿ ಈ ಕೆಲಸ ಮುಗಿಸಿ, ಅವರುಗಳ ಸಹಿಯನ್ನೂ ಪಡೆದು, ಶವಪರೀಕ್ಷೆ ನಡೆಸಿ ವರದಿಸಲು ವೈದ್ಯಾಧಿಕಾರಿಗಳಿಗೆ ಸೂಚಿಸಿದೆ. ಶವಪರೀಕ್ಷೆ ನಂತರ ಸಂಬಂಧಿಕರಿಗೆ ಶವವನ್ನು ಅಂತ್ಯ ಸಂಸ್ಕಾರಕ್ಕಾಗಿ ಒಪ್ಪಿಸಲು ಮತ್ತು ಮುಂದಿನ ಅಗತ್ಯದ ತನಿಖೆ ಮುಂದುವರೆಸಲು ಸಬ್ ಇನ್ಸ್‌ಪೆಕ್ಟರರಿಗೆ ತಿಳಿಸಿ ಅಲ್ಲಿಂದ ಹೊರಟುಬಂದೆ.' ನಿಮಗೆ ಮತ್ತೂ ಸಂದೇಹವಿದ್ದರೆ ನಿಮಗೆ ಗೊತ್ತಿರುವ ವಕೀಲರಿಂದ ಖಚಿತ ಪಡಿಸಿಕೊಳ್ಳಬಹುದು. ನಿಮ್ಮ ಪ್ರತಿಕ್ರಿಯೆಗೆ ವಂದನೆಗಳು.
    ನನ್ನ ಹಿಂದಿನ ಲೇಖನ -'ಶವಗಳೊಡನೆ ಸಂಭಾಷಣೆ'http://kavimana.blogspot.in/2012/03/blog-post_26.htmlಯನ್ನೂ ಗಮನಿಸಿದರೆ ನಿಮಗೆ ಪೂರ್ಣ ಮ಻ಹಿತಿ ಸಿಕ್ಕಬಹುದು.

    ಪ್ರತ್ಯುತ್ತರಅಳಿಸಿ
    ಪ್ರತ್ಯುತ್ತರಗಳು
    1. ಮುಂದುವರೆದ ಮಾಹಿತಿ:
      ಯಾವುದೇ ರೀತಿಯ ಕೊಲೆ, ಅತ್ಮಹತ್ಯೆ ಮುಂತಾದುವುಗಳ ತನಿಖೆಯನ್ನು ಪೋಲಿಸರೇ ನಡೆಸುತ್ತಾರೆ. ಇಂತಹ ಪ್ರಕರಣಗಳಲ್ಲಿ ತಾಲ್ಲೂಕು ದಂಡಾಧಿಕಾರಿಯವರಿಂದಲೂ ಶವತನಿಖೆಯನ್ನು ಪೋಲಿಸ್ ಕೋರಿಕೆ ಬಂದ ನಂತರವೇ ಮಾಡಲಾಗುತ್ತದೆ. ಇದು ಹೆಚ್ಚುವರಿ ಕ್ರಮವಾಗಿದ್ದು, ಹೆಚ್ಚಿನ ನ್ಯಾಯದ ಖಾತರಿಪಡಿಸಿಕೊಳ್ಳುವ ಉದ್ದೇಶದಿಂದ ಮಾಡಿರುವ ಕಾನೂನು ಆಗಿದೆ. ಈ ಪ್ರಕರಣದಲ್ಲೂ ತನಿಖಾಧಿಕಾರಿ ಬೆಂಗಳೂರು ಜಿಲ್ಲಾ ವ್ಯಾಪ್ತಿಯ ಒಬ್ಬರು ಪೋಲಿಸ್ ಅಧಿಕಾರಿಯೇ ಆಗಿದ್ದು, ನ್ಯಾಯಾಲಯದಲ್ಲಿ ಆರೋಪ ಸಾಬೀತು ಪಡಿಸುವ ಹೊಣೆಗಾರಿಕೆ ಅವರದ್ದೇ ಆಗಿದೆ. ಶವತನಿಖೆ ಮಾಡಿದ ತಹಸೀಲ್ದಾರರನ್ನೂ ಸಾಕ್ಷಿಯಾಗಿ ಜಿಲ್ಲಾ ನ್ಯಾಯಾಲಯದಲ್ಲಿ ಕರೆಸುತ್ತಾರೆ.ಬೆಂಗಳೂರಿನಲ್ಲಿ ಕೊಲೆಯಾದವಳ ಹೆಣವನ್ನು ನಾನು ಕೆಲಸ ಮಾಡುತ್ತಿದ್ದ ತಾಲ್ಲೂಕಿನ ವ್ಯಾಪ್ತಿಯಲ್ಲಿ ತಂದು ಅಪರಾಧ ಮುಚ್ಚಿ ಹಾಕುವ ಆರೋಪಿಗಳ ಪ್ರಯತ್ನ ನೆರವೇರಲಿಲ್ಲವಷ್ಟೆ.

      ಅಳಿಸಿ
  5. ಆತ್ಮೀಯ ನಾಗರಾಜ್
    ಓದಿ ಮುಗಿಸುವಾಗ ಇಂತಹ ಕ್ರೌರ್ಯಕ್ಕೆ ಕೊನೆ ಎಂದು? ಇಂತಹ ಆಮಿಷಕ್ಕೆ ಬಿದ್ದವರಿಗೆ ಪಾಪ ಪ್ರಜ್ಞೆ ಕಾಡುವುದಿಲ್ಲವೇ? ಚಿಕ್ಕದೊಂದು ತಪ್ಪು ಅಚಾತುರ್ಯದಿಂದ ಸಂಭವಿಸಿದರೆ ಆ ದಿನದ ನಿದ್ದೆ ಹಾರಿಹೋಗಿ ಬಿಡುತ್ತದೆ.ಅಂಥಹುದರಲ್ಲಿ ಇಷ್ಟು ದೊಡ್ಡ ಪ್ರಮಾದ ಎಸಗುವ ಮಂದಿಗೆ ಹೇಗೆ ನಿದ್ದೆ ಊಟ ಸೇರುತ್ತದೆ? ನನಗೆ ಅರ್ಥವಾಗದ ಸಮಸ್ಯೆ.
    ಅನುಭವ ಅದೆಷ್ಟೋ ಪಾಟಗಳನ್ನು ಕಲಿಸುತ್ತದೆ. ಕೆಲವೊಮ್ಮೆ ನಾವು ನಿಸ್ಸಹಾಯಕರಾಗಿ ಇರುವುದನ್ನು ಕಲಿಸುತ್ತದೆ ಅಲ್ಲವೇ? ನಿಮ್ಮ ಅನುಭವದ ಕಂತೆ ದೊಡ್ಡದಿದೆ. ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು.
    ಪ್ರಕಾಶ್

    ಪ್ರತ್ಯುತ್ತರಅಳಿಸಿ
  6. ಆತ್ಮೀಯ ಪ್ರಕಾಶರ ಪ್ರತಿಕ್ರಿಯೆಗೆ ಧನ್ಯವಾದಗಳು. ಈ ಪ್ರಕರಣದಲ್ಲಿ ವರದಕ್ಷಿಣೆಯ ದಾಹ ಬಲಿ ತೆಗೆದುಕೊಂಡಂತೆ ಕಾಣುವುದಿಲ್ಲ. ಬದಲಾಗಿ ಕಿರಿಯ ಮಗನಾಗಿ ಕೇವಲ ಉಂಡುಟ್ಟು ಉಡಾಳನಂತೆ ತಿರುಗಾಡುವ ಸ್ವಭಾವದ ಮೈಗಳ್ಳನಿಗೆ ಜವಾಬ್ದಾರಿಯ ಅರಿವು ಬರುವ ಮುನ್ನ, ಅತ ಸ್ವಂತದ ದುಡಿಮೆ ರೂಢಿಸಿಕೊಳ್ಳುವ ಮುನ್ನ ಮಗಳನ್ನು ಕೊಟ್ಟು ಮದುವೆ ಮಾಡಿದ್ದು ಪ್ರಮಾದವಾಯಿತೆನ್ನಿಸುತ್ತದೆ. ಮಗಳು ಕರೆದ ತಕ್ಷಣದಲ್ಲಿ ತಂದೆ ಹೋಗಿದ್ದಿದ್ದಿದ್ದರೆ ಅವಳು ಜೀವಂತವಾಗುಳಿಯುತ್ತಿದ್ದಳೇನೋ ಎಂತಲೂ ಮನ ಯೋಚಿಸಿದ್ದಿದೆ. ಹೆಂಗಸರ ನಡುವಣ ಅಸಹನೆ, ಅಸೆಗಳೂ ಇಲ್ಲಿ ಪಾತ್ರ ವಹಿಸಿರಬಹುದು.

    ಪ್ರತ್ಯುತ್ತರಅಳಿಸಿ
  7. ನಿಮ್ಮ ಹೆಸರು ತಿಳಿಸಿದ್ದರೆ ಚೆನ್ನಾಗಿತ್ತು. ಪ್ರತಿಕ್ರಿಯೆಗೆ ಧನ್ಯವಾದಗಳು.

    ಪ್ರತ್ಯುತ್ತರಅಳಿಸಿ