ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಶುಕ್ರವಾರ, ಸೆಪ್ಟೆಂಬರ್ 14, 2012

ಮೂಢ ಉವಾಚ - 90


ಆನಂದದ ಬಯಕೆ ನಂದದೆಂದೆಂದು
ಆನಂದವೇನೆಂದು ತಿಳಿಯಬೇಕಿಂದು |
ಸಿಕ್ಕಷ್ಟು ಸಾಲದೆನೆ ಆನಂದವಿನ್ನೆಲ್ಲಿ
ಇರುವುದೆ ಸಾಕೆನಲು ಆನಂದ ಮೂಢ || ..೩೧೩

ಹುಟ್ಟಿನಿಂ ಜಾತಿಯೆನೆ ನೀತಿಗದು ದೂರ
ಪ್ರಿಯ ಸುತರು ನರರಲ್ತೆ ದೇವಾಧಿದೇವನ |
ದೇವಗಿಲ್ಲದ ಜಾತಿ ಮಕ್ಕಳಿಗೆ ಬೇಕೇಕೆ
ಮೇಲು ಕೀಳುಗಳ ಸರಿಸಿಬಿಡು ಮೂಢ || ..೩೧೪

ನಾನಾರು ಅವನಾರು ಜಗವೆಂದರೇನು
ಪ್ರಶ್ನತ್ರಯಗಳು ನರರ ಕಾಡದಿಹವೇನು |
ಹಿಂದಿದ್ದು ಈಗಿರುವ ಎಂದೆಂದು ಇಹವೀ
ಒಗಟಿಗುತ್ತರವ ತಿಳಿದಿಹೆಯ ಮೂಢ || ..೩೧೫

ನಾನಾರು ಹೇಗಿರುವೆ ಬಿಡಿಸಿ ಹೇಳುವವರಾರು
ಜನನ ಮರಣಗಳ ಚಕ್ರ ತಿರುಗುವುದು ಏಕೆ |
ಹುಟ್ಟುವುದು ಏಕೆ ಸಾಯುವುದು ಮತ್ತೇಕೆ
ಅನಾದಿ ಪ್ರಶ್ನೆಗಳು ಅನಂತವೋ ಮೂಢ || ..೩೧೬
*************
-ಕ.ವೆಂ.ನಾಗರಾಜ್.

2 ಕಾಮೆಂಟ್‌ಗಳು:

  1. ಆನಂದದ ಸರಿಯಾದ ವ್ಯಾಖ್ಯಾನ.

    ಜಾತಿಗಳ ಬಗೆಗೆ ನನದೂ ಇದೇ ವಾದ.

    ನನ್ನ ಪ್ರಶ್ನೆಯೂ ಇದೇ.

    ಅನಂತವಾದ ಪ್ರಶ್ನೆಗಳನ್ನು ನಿಮ್ಮಂತ ಹಿರಿಯರೇ ಬಿಡಿಸಿ ಹೇಳಬೇಕು.

    ಪ್ರತ್ಯುತ್ತರಅಳಿಸಿ