ನನ್ನ ಬಗ್ಗೆ

ನನ್ನ ಫೋಟೋ

ನಿವೃತ್ತ ತಹಸೀಲ್ದಾರ್, ಕೆಳದಿ ಕವಿಮನೆತನದ ಪತ್ರಿಕೆ 'ಕವಿಕಿರಣ'ದ ಸಂಪಾದಕ.
ನನ್ನ ಕೃತಿಗಳು: 1.ಕವಿಸುಬ್ರಹ್ಮಣ್ಯಯ್ಯ - ಒಂದು ಜೀವಗೀತೆ (ವ್ಯಕ್ತಿ ಚಿತ್ರಣ), 2. ಮೂಢ ಉವಾಚ - ಮುಕ್ತಕಗಳು, 3. ಆದರ್ಶದ ಬೆನ್ನು ಹತ್ತಿ . .
ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಮಂಗಳವಾರ, ಏಪ್ರಿಲ್ 23, 2013

ಬಾಲ ಸಂಸ್ಕಾರ ಶಿಬಿರ - ಒಂದು ಯಶಸ್ವೀ ಪ್ರಯೋಗ     ವೇದಭಾರತೀ ಆಶ್ರಯದಲ್ಲಿ ಹಾಸನದಲ್ಲಿ ದಿನಾಂಕ 07-04-2013ರಿಂದ 17-04-2013ರವರೆಗೆ ನಡೆದ ಬಾಲ ಸಂಸ್ಕಾರ ಶಿಬಿರದ ಉದ್ದೇಶ ನಿರೀಕ್ಷೆಗೂ ಮೀರಿ ಯಶಸ್ವಿಯೆನಿಸಿತು. ಜಾತಿ, ಮತ, ಪಂಥ, ಲಿಂಗ, ವಯಸ್ಸಿನ ಭೇದವಿಲ್ಲದೆ ವೇದಾಭ್ಯಾಸದಲ್ಲಿ ತೊಡಗಿರುವ ವೇದಾಧ್ಯಾಯಿಗಳ ಸಂಘಟಿತ ಶ್ರಮ ಫಲ ನೀಡಿದೆ. ಮಕ್ಕಳಲ್ಲೂ ವೇದಾಧ್ಯಯನದ ಕಡೆಗೆ ಆಸಕ್ತಿ, ಅವರಲ್ಲಿ ದೇಶಭಕ್ತಿ, ಸಾಮಾಜಿಕ ಪ್ರಜ್ಞೆ ಜಾಗೃತಿಗೊಳಿಸುವುದರೊಂದಿಗೆ ಉತ್ತಮ ಸಂಸ್ಕಾರ ನೀಡಲು ಶಿಬಿರದಲ್ಲಿ ಒತ್ತು ನೀಡಲಾಯಿತು. ಕೇವಲ 40 ಮಕ್ಕಳಿಗೆ ಪ್ರವೇಶಾವಕಾಶ ಕೊಡಬೇಕೆಂದು ನಿರ್ಧರಿಸಿದ್ದರೂ, ಪೋಷಕರ ಒತ್ತಾಯಕ್ಕೆ ಮಣಿದು 80 ಮಕ್ಕಳನ್ನು ಶಿಬಿರಕ್ಕೆ ಸೇರಿಸಿಕೊಳ್ಳಬೇಕಾಯಿತು.
     ದೇಶಭಕ್ತರ, ಸಾಧು-ಸಂತರ, ಉತ್ತಮ ನೀತಿ ಸಾರುವ ಸುಭಾಷ ಚಂದ್ರ ಬೋಸ್, ಮದನ ಲಾಲ್ ಧಿಂಗ್ರಾ, ಶಿವಾಜಿ, ವಿವೇಕಾನಂದ, ಧ್ರುವ, ನಚಿಕೇತ ಮುಂತಾದವರ ಕಥೆಗಳನ್ನು ಹೇಳಲಾಯಿತು. ಪ್ರತಿನಿತ್ಯ ವಿವಿಧ ರೀತಿಯ ಆಟಗಳನ್ನು ಆಡಿಸಲಾಯಿತು. ದೇಶಭಕ್ತಿ ಗೀತೆಗಳನ್ನು ಹೇಳಿಕೊಡಲಾಯಿತು. ತಮ್ಮಲ್ಲಿನ ಪ್ರತಿಭೆಗಳನ್ನು ಮಕ್ಕಳು ಹಾಡು ಹೇಳುವ, ನೃತ್ಯ ಮಾಡುವ, ಏಕಪಾತ್ರಾಭಿನಯ ಮಾಡುವ, ಆಶುಭಾಷಣದಲ್ಲಿ ಭಾಗವಹಿಸುವ ಮೂಲಕ ವ್ಯಕ್ತಪಡಿಸಿದರು. ಚಿತ್ರಗಳನ್ನು ಬಿಡಿಸುವ ಮೂಲಕ ಮಕ್ಕಳು ತಮ್ಮ ಪ್ರತಿಭೆ ಮೆರೆದರು. ಕಾಗದದಿಂದ ಕರಕುಶಲಕಲೆಗಳನ್ನು ಅವರಿಂದ ಮಾಡಿಸಲಾಯಿತು. ಅಂತ್ಯಾಕ್ಷರಿ, ಹಾಡು, ಭಜನೆ, ಸಂವಾದಗಳಲ್ಲೂ ಅವರನ್ನು ತೊಡಗಿಸಲಾಯಿತು. ಇಷ್ಟೆಲ್ಲಾ ಆಸಕ್ತಿಕರ ಚಟುವಟಿಕೆಗಳಲ್ಲಿ ಅವರನ್ನು ತೊಡಗಿಸಿ ಪ್ರತಿನಿತ್ಯ ಸುಮಾರು ಒಂದು ಗಂಟೆಯ ಕಾಲ ಅವರಿಗೆ ಸರಳ ವೇದ ಮಂತ್ರಗಳನ್ನು ವೇದಾಧ್ಯಾಯಿಗಳಾದ ಶ್ರೀಯುತ ಅನಂತನಾರಾಯಣ, ಪ್ರಸಾದ್ ಮತ್ತು ವಿಶ್ವನಾಥ ಶರ್ಮರವರು ಅರ್ಥಸಹಿತ ಹೇಳಿಕೊಟ್ಟರು.  ಸುಮಾರು 25 ಮಂತ್ರಗಳನ್ನು ಕಲಿತ ಮಕ್ಕಳು ಸಮಾರೋಪ ದಿನದಂದು ಸಾಮೂಹಿಕವಾಗಿ ವೇದಮಂತ್ರಗಳನ್ನು ಸ್ವರಸಹಿತ ಹೇಳಿದಾಗ ಪೋಷಕರು, ಕಾರ್ಯಕ್ರಮದಲ್ಲಿ ಹಾಜರಿದ್ದವರು ಬೆರಗಾಗಿದ್ದರು.
     14-04-2013ರಂದು ಮಕ್ಕಳು ತಮ್ಮ ತಾಯಿ-ತಂದೆ, ಪೋಷಕರನ್ನು ನಮಸ್ಕರಿಸಿ ಗೌರವಿಸುವ ಮತ್ತು ಭಾರತಮಾತೆಯ ಪೂಜೆ ಮಾಡುವ ವಿಶೇಷ ಕಾರ್ಯಕ್ರಮ ಜೋಡಿಸಲಾಗಿತ್ತು. ಇದು ಮಕ್ಕಳ, ಪೋಷಕರ ಮತ್ತು ಕಾರ್ಯಕ್ರಮ ವೀಕ್ಷಿಸಿದವರ ಮೇಲೆ ಉತ್ತಮ ಪ್ರಭಾವ ಬೀರಿತು. ಪತ್ರಿಕೆಗಳು, ದೃಷ್ಯಮಾಧ್ಯಮಗಳಲ್ಲಿ ಪ್ರಶಂಸೆ ವ್ಯಕ್ತವಾಯಿತು. ಸಮಾರೋಪ ದಿನದಂದು ಮಕ್ಕಳು ಮತ್ತು ಅವರ ಪೋಷಕರು ವ್ಯಕ್ತಪಡಿಸಿದ ಅನಿಸಿಕೆಗಳು ಶಿಬಿರದ ಯಶಸ್ಸಿಗೆ ಕನ್ನಡಿಯಾಗಿತ್ತು. ಉದ್ಘಾಟನೆಯ ದಿನ, ಮಾತೃವಂದನಾ ಕಾರ್ಯಕ್ರಮದ ದಿನ ಮತ್ತು ಸಮಾರೋಪದ ದಿನಗಳಂದು ಪೋಷಕರನ್ನೂ ಆಹ್ವಾನಿಸಿ ಮಕ್ಕಳನ್ನು ಸುಸಂಸ್ಕಾರದಿಂದ ಬೆಳೆಸುವ ಹೊಣೆಗಾರಿಕೆ ಕುರಿತು ಹಾಗೂ ಮನೆಯೇ ಮೂಲತಃ ಸಂಸ್ಕಾರಗಳನ್ನು ಪೋಷಿಸುವ ಕೇಂದ್ರಗಳಾಗಬೇಕಾದ ಅಗತ್ಯತೆ ಕುರಿತು ಅವರ ಗಮನ ಸೆಳೆಯಲಾಯಿತು. 40 ಮಕ್ಕಳೂ ಸೇರಿದಂತೆ ಸುಮಾರು 80-100 ಪೋಷಕರೂ ಸಹ ವೇದಭಾರತೀ ವತಿಯಿಂದ ನಡೆಸಲಾಗುತ್ತಿರುವ ನಿತ್ಯ ವೇದಾಭ್ಯಾಸ ಕಾರ್ಯಕ್ರಮಕ್ಕೆ ಇನ್ನು ಮುಂದೆ ಬರುವುದಾಗಿ ನಿರ್ಧರಿಸಿ ತಿಳಿಸಿದ್ದು ವಿಶೇಷ. ಉತ್ತಮ ರೀತಿಯಲ್ಲಿ ಶಿಬಿರ ಯಶಸ್ವಿಯಾಗಿ ಸಂಪನ್ನಗೊಳ್ಳಲು ಶ್ರೀ ಹರಿಹರಪುರ ಶ್ರೀಧರ ಮತ್ತು ಶ್ರೀ ಕ.ವೆಂ.ನಾಗರಾಜರ ಮಾರ್ಗದರ್ಶನದಲ್ಲಿ ಉತ್ತಮ ಸಹಕಾರ ನೀಡಿದ ವೇದಭಾರತಿಯ ಎಲ್ಲಾ ವೇದಾಭ್ಯಾಸಿಗಳೂ, ಸಂಪನ್ಮೂಲ ವ್ಯಕ್ತಿಗಳಾಗಿ ಸಹಕರಿಸಿದ ಎಲ್ಲಾ ಮಿತ್ರರುಗಳೂ ಕಾರಣರಾಗಿದ್ದು, ಅವರೆಲ್ಲರೂ ಅಭಿನಂದನಾರ್ಹರಾಗಿದ್ದಾರೆ.
     ಶಿಬಿರದ ಕೆಲವು ದೃಷ್ಯಗಳು:

ಶಿಬಿರಾರ್ಥಿಗಳು
ದೇಶಭಕ್ತಿ ಗೀತೆಗಳ ಕಲಿಕೆ
 ಮೊಳಗಿತು ಓಂಕಾರ - ವೇದಾಧ್ಯಾಯಿಗಳ ಮಾರ್ಗದರ್ಶನದಲ್ಲಿ
  ಸಹಕಾರಿಗಳು, ಸಂಪನ್ಮೂಲ ವ್ಯಕ್ತಿಗಳು - ಇವರಷ್ಟೇ ಅಲ್ಲ!
 ತಾಯಿ-ತಂದೆ, ಪೋಷಕರಿಗೆ ಗೌರವಾರ್ಪಣೆ

 ಪೋಷಕರು
 ಭಾರತ ಮಾತೆಗೆ ನಮನ

 ಶಿಬಿರಾರ್ಥಿಗಳ, ಪೋಷಕರ ಅನಿಸಿಕೆ
 ಒಂದು ಚಮತ್ಕಾರ ಪ್ರದರ್ಶನ - ಶಿಬಿರಾರ್ಥಿಗಳಿಂದ
 ಅಗ್ನಿಹೋತ್ರ -  ಪ್ರಾತ್ಯಕ್ಷಿಕೆ
 ನಿತ್ಯ ಮಕ್ಕಳಿಗೆ ಉಪಾಹಾರ, ಪಾನೀಯ ವಿತರಣೆ

ಹರಿಹರಪುರ ಶ್ರೀಧರರ ಸಾಂದರ್ಭಿಕ ನುಡಿ, ವೇದಿಕೆಯಲ್ಲಿ ಕವಿನಾಗರಾಜ್, 
ಸಿ.ಎಸ್.ಕೃಷ್ಣಸ್ವಾಮಿ ಮತ್ತು ಡಾ. ವಾಮನರಾವ್ ಬಾಪಟ್.


2 ಕಾಮೆಂಟ್‌ಗಳು:

  1. ನಾನು ಬಾಲಕನಾಗಿದ್ದಾಗ ಇಂತಹ ಶಿಬಿರಗಳು ಸಿಕ್ಕಿದ್ದರೆ ನನಗೆ ಬಹು ಉಪಕೃತವಾಗುತ್ತಿತ್ತು. ಒಳ್ಳೆಯ ಶಿಬಿರ ಆಯೋಜಿಸಿದ ಎಲ್ಲರೂ ಅಭಿನಂದನಾರ್ಹರು.

    ಪ್ರತ್ಯುತ್ತರಅಳಿಸಿ
    ಪ್ರತ್ಯುತ್ತರಗಳು
    1. ಧನ್ಯವಾದಗಳು, ಬದರೀನಾಥರೇ. ನೀವೇ ಒಂದು ಶಿಬಿರ ಆಯೋಜಿಸಲು ಶಕ್ತರಿದ್ದೀರಿ!

      ಅಳಿಸಿ