ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಶುಕ್ರವಾರ, ಮೇ 10, 2013

ನೈವೇದ್ಯದ ಪರಿಯೇನೆಂಬೆನೋ!


     ೧೮ನೆಯ ಶತಮಾನದ ಕೆಳದಿ ಕವಿ ಲಿಂಗಣ್ಣನ 'ಶಿವಪೂಜಾ ದರ್ಪಣ' ವೈಶಿಷ್ಟ್ಯಗಳಿಂದ ಕೂಡಿದ ಶಿವಪೂಜಾವಿಧಿಗಳನ್ನು ವಿವರಿಸುವ ಚಂಪೂಕಾವ್ಯವಾಗಿದ್ದು, ಒಂದು ಅನುಪಮ ಕೃತಿ. ಸಾಂಪ್ರದಾಯಿಕ ಪೂಜಾ ವಿಧಿ-ವಿಧಾನಗಳನ್ನು ಅನುಸರಿಸುವವರಿಗೆ ಇದು ಉತ್ತಮ ಕೊಡುಗೆ. ಐದು ಆಶ್ವಾಸಗಳುಳ್ಳ ಈ ಕೃತಿಯ ಪ್ರಥಮಾಶ್ವಾಸದಲ್ಲಿ ಪೀಠಿಕೆ, ದ್ವಿತೀಯಾಶ್ವಾಸದಲ್ಲಿ ಪೂಜಾಮಂಟಪ ಪೂಜೆ, ಪೀಠಾರೋಹಣ, ಉಪಚಾರಗಳ ವರ್ಣನೆ, ತೃತೀಯಾಶ್ವಾಸದಲ್ಲಿ ವಿವಿಧ ಪೂಜೋಪಚಾರಗಳು, ಪಂಚಾಮೃತಾಭಿಷೇಕ, ಆಚಮನ, ನಾಮಾವಳಿಗಳೊಂದಿಗೆ ಅರ್ಚನೆ, ಇತ್ಯಾದಿಗಳ ವಿವರಗಳಿದ್ದರೆ ನಾಲ್ಕನೆಯ ಆಶ್ವಾಸದಲ್ಲಿ ಧೂಪ, ದೀಪಗಳೊಂದಿಗೆ ವಿವಿಧ ಭಕ್ಷ್ಯ ಭೋಜ್ಯಗಳು, ಫಲರಸಾಯನಾದಿ ಬಹುವಿಧ ನೈವೇದ್ಯಗಳೊಂದಿಗೆ ಉಪಚಾರ ನಡೆಸುವ ಕ್ರಿಯೆಯ ವರ್ಣನೆಯಿದೆ. ಐದನೆಯ ಆಶ್ವಾಸದಲ್ಲಿ ವಿವಿಧ ರೀತಿಯ ಮಂಗಳಾರತಿ, ಷೋಡಶೋಪಚಾರಗಳ ವಿವರಗಳಿವೆ. 
     ಒಟ್ಟು ೫೮೫ ಕಂದವೃತ್ತ, ವಚನ ಗದ್ಯಗಳಿಂದ ಕೂಡಿರುವ ಈ ಕೃತಿಯಲ್ಲಿ ವಿವಿಧ ಬಗೆಯ ನೈವೇದ್ಯಗಳನ್ನು ಸಮರ್ಪಣೆ ಮಾಡುವುದಕ್ಕೆ ಸಂಬಂಧಿಸಿ ೧೧೯ ಕಂದ ಪದ್ಯಗಳನ್ನು ಕವಿ ರಚಿಸಿದ್ದಾನೆ. ಕಂಡು ಕೇಳರಿಯದ ಭಕ್ಷ್ಯ ಭೋಜ್ಯಗಳ ವರ್ಣನೆ ಬಾಯಲ್ಲಿ ನೀರೂರಿಸುವಂತಿದೆ. ಎಷ್ಟೋ ಪದಾರ್ಥಗಳು ಹೇಗಿರುತ್ತವೆ, ಅವು ಏನು, ಹೇಗೆ ಮಾಡುತ್ತಾರೆ ಎಂಬುದು ಈಗಿನವರಿಗೆ ತಿಳಿಯುವುದಿಲ್ಲ. ಕವಿ ನೈವೇದ್ಯ ಸಮರ್ಪಣೆಯ ಕುರಿತು ಆರಂಭದಲ್ಲಿ ಹೀಗೆ ಹೇಳುತ್ತಾನೆ:

ತಾವರೆಗಣ್ಣನ ಕಣ್ಮಲ |
ರ್ದಾವರೆಯರ್ಚನೆಯನೊಪ್ಪುವಡಿದಾವರೆಯಂ ||
ತಾವರೆವಗೆ ಗೆರೆದಲೆಯಂ 
ತಾವರೆಗೋಲನ ಮದಾಪಹಾರ ಪೊರೆಗೆಮ್ಮಂ || (ಶಿ.ಪೂ.ದ. ೪.೧.)

ಮಿರುಪೀಯಾಶ್ವಾಸದೊಳಂ |
ವರಧೂಪ ಸುದೀಪಮುಖ ಸದುಪಚಾರಗಳಿಂ ||
ಪರಮೇಶ್ವರನಂ ಪೂಜಿಪ |
ಪರಿವಿಡಿಯಂ ಪೇಳ್ವೆನಾಲಿಪುದು ಸುಜನರ್ಕಳ್ || (ಶಿ.ಪೂ.ದ. ೪.೨.)

    ಸಕಲ ಭಕ್ಷ್ಯಗಳನ್ನು ಸ್ವೀಕರಿಸಿ ಹರಸಲು ಭಕ್ತ ಬೇಡುತ್ತಾನೆ. ಸುರುಚಿರ ದುಗ್ಧವಿಪಾಚಿತ ವರ ಸದ್ಯೋಘೃತ ಶಿತಾಂಚಲದೇಲಾಚೂರ್ಣೋತ್ಕರ ಮಿಳಿತ ದಿವ್ಯಶಾಲೀ ಪರಮಾನ್ನ, ಸದ್ಯೋಘೃತ ಯುಕ್ಪರಿಮಳ ಶಾಲ್ಯಾನ್ನ, ಪವಣಿಂ ಪಚಿಸಿ ನಿಶಾಚೂರ್ಣವನುರು ಸೈಂಧವನಿಕ್ಕಿ ಹಿಂಗಿನ ರಸದಿಂತವೆ ವಾಸಿಸಿರ್ದ ಸೂಪ (ವಿವಿಧ ಲವಣ, ಮಸಾಲೆ ಸಾಮಗ್ರಿಗಳನ್ನು ಬಳಸಿ ಮಾಡಿದ ರಸ), ಹಪ್ಪಳ, ಸಂಡಿಗೆ, ಬಾಳುಕ, ಪೊಸಮೆಣಸುಪ್ಪನಿಕ್ಕಿ ಹದವಾಗಿ ಕಾಸಿ ಹಿಂಗಿಸಿ ಕರಿಬೇವನಿಕ್ಕಿ ತಿಲತೈಲ ಸುಸರ್ಷಪ ನವ್ಯ ಜೀರಕ ಪ್ರಸರ ಸಹಿತ ಮಾಡಿದ ತಿಂತ್ರಿಣೀ ರಸದ ಸುರುಂಕು, ರಾಮಠ, ಸರ್ಷಪ, ಜೀರಕ ಹೇಮಾಭ ಸುಮೇಧಿ (ವಿವಿಧ ಮಸಾಲೆ ಪದಾರ್ಥಗಳು, ಕಾಳುಗಳು)ಗಳಿಗೆ ತುಪ್ಪದ ಒಗ್ಗರಣೆ ಹಾಕಿ ಮಾಡಿದ ಆಹಾರ, ಸುಲಲಿತ ಸಾಂದ್ರ ಬಿಂಬ ಮುರುವಲುಕೋಜ್ವಲತರ ಕಾರ ವಲ್ಲಿ ಕದಳೀ  . . ಪಟೋಳ ಕಂಗೆಳಸು ಸುತಿಕ್ತ ಬಿಂಬ ಪನಸಂ ಮಡುವಾಗಲಮೆಂಬ ಶಾಕಸಂಕುಲ, ಮಜ್ಜಿಗೆಯ ಪಸಿಯ ಕಟ್ಟಿನ ಸಜ್ಜಿನ ಪಳದ್ಯ, ಕಾಯಿ ಬಜ್ಜಿ, ಪೊಂದೊವರಿಲುಗ್ಗಿಯ ಪಜ್ಜಳ, ಕಜಿಪುಗಳು, ಗೋಧೂಮಕ ತಂಡುಲಾದ್ವಚಣಕೋದ್ಯನ್ಮಾಷ ಮುದ್ಗ, ಇತ್ಯಾದಿ ಧಾನ್ಯೋತ್ಕರ ನಾಳಿಕೇರ ತವ ಖರ್ಜೂರಾಜ್ಯ ದುಗ್ಧಸಹಿತ, ಕರ್ಪೂರಕ, ಪುಷ್ಪಲಸದೇಲಾಚೂರ್ಣ (ಏಲಕ್ಕಿಪುಡಿ) ಹಾಕಿ ಮಾಡಿದ ಭಕ್ಷ್ಯ, ಎರೆಯಪ್ಪ, ಪೋಳಿಗೆ, ಕಚೋರಿ, ನೀರೊತ್ತಿಗೆ, ಚಿಲ್ಲಪ್ಪ, ಜಿಲೇಬಿ, ಗಾರಿಗೆ, ಮಂಡಿಗೆ, ಎಂಣ್ಣೂರಿಗೆ, ಗೂಳೂರಿ ಜೇನ ಸಕ್ಕರೆಗುಳ್ಳಂಪೂರಿಗೆ, ಬೀಸೂರಿಗೆ, ಪೊಸಪೂರಿ, ಸಕ್ಕರೆ ಬರಡೆಯುಮೆಸೆವ ಪೇಣಿ, ಬೇಳ್ಪೋಳಿಗೆ, ಸುರುಳಿ, ಮದುನಾಳ, ಕಪ್ಪುರನಾಳ, ವಡೆ, ಹೂರಣ, ತಿಲ ತೆಂಗಾಯ್ಗಡುಬು, ಇಡ್ಢಳಿಗೆಯುಂಡೆ, ಆಂಬೊಡೆ, ಪಾಲ್ಗಡುಬು, ಎಲೆಗಡುಬು, ಉದ್ದಿನ ನಲ್ಗಡುಬು, ಕೊಟ್ಟೆಯ ಕಡುಬು, ಗೋಧಿ ರೊಟ್ಟಿ, ಕಡಲೆಗಡುಬು, ಪೊಯ್ಗಡುಬು, ವೃತ್ತಾಸು, ಮುಳುಕ, ಗೇರ್ವೀಜದ ಸೋಮಿಯ ಸುಮುದ್ಗಗೋಧೂಮದ ತಿಲರಾಜಿಯ ಸೇವಗೆಯ ಅಭಿನವ ಲಾಜದ ಲಡ್ಡುಗೆ, ಪಾಲೌಗು, ತೊಡಹದೌಗು, ತೆಳ್ಳೌಗು ದೋಸೆ, ಸಕ್ಕರೆ ತೆಂಗಾಯ್ಪಾಲೊಳ್ಸೇವಿಗೆ, ಕಾಂಡವೆಯ ಮೋದಕ, ಎಳ್ಳುಂಡೆ, ಕೆಂಡಗರ್ಜಿ, ಕಾಯ್ಪಾಲುಂಡೆ, ತೊಳೆಯುಂಡೆ, ಸುಕ್ಕಿನುಂಡೆ, ಪಲಸವಣ್ಗಡುಬು, ಚಕ್ಕುಲಿ, ಕರುಂಜಿಕಾಯಿ, ತಂಬಿಟ್ಟು, ಪಂಚಕಜ್ಜಾಯ, ನನೆಗಡಲೆ, ಚಿಗುಳಿ, ಈ ಭಕ್ಷ್ಯಗಳನ್ನು ಸವಿಯಲು ಹೆರೆದುಪ್ಪ, ತಿಳಿದುಪ್ಪ, ನೊರೆದುಪ್ಪ, ಕಡಿದುಪ್ಪ, ನೀರ್ಮಳಲ್ದುಪ್ಪ, ಕೆನೆಹಾಲು, ಮೊಸರು, ಜೇನುತುಪ್ಪ, ಬೆಣ್ಣೆ, ಖಂಡಶರ್ಕರೆ, ತನಿವಾಲು, ನೊರೆವಾಲು, ಸರಳಿಗೆ, ಚಾರು ಕದಳೀ ಫಲಾಮೃತಸಾರ ಸುಶರ್ಕರಾಜ್ಯಾನ್ವಿತ ಗೋಕ್ಷೀರ, ಮುದ್ಗಾನ್ನ, ಜಂಬೀರರಸಾನ್ನ, ಘೃತಾನ್ನ, ಮಾಷ ಹಾರಿದ್ರಾನ್ನ, ನವನೀತಾನ್ನ, ಕಲಸೋಗರ (ಕೋಸಂಬರಿ), ಬಾಳೆಯ ಪಣ್ಗಳ ಸೀಕರಣೆ, ಜಂಬುಕಪಿತ್ಥಾಮ್ರಂ ದಾಳಿಂಬ ಪನಸ ಕದಳಿ ನಾಳಿಕೇರ ದ್ರಾಕ್ಷಿ, ಖರ್ಜೂರ, ಇತ್ಯಾದಿ ಫಲಗಳು, ಚತುರ್ವಿಧ ಮಧುರಸ, ಎಳೆಯ ನಾಳಿಕೇರ ರಸ, ಬೆಳಲ್ಪಣ್ಣಿನಿಮಾವಿನ ಪಣ್ಣರಸಾಯನ, ಕರ್ಪೂರ, ಏಲಕ್ಕಿ, ಇತ್ಯಾದಿಗಳನ್ನು ಬೆರೆಸಿದ ಶರ್ಕರೋದಕ, ಅಂಬಲಿಗಡಲೆ, ಕಟ್ಟುಮೊಸರು, ಕೆನೆಮೊಸರು, ಗಡ್ಡೆಮೊಸರು, ಉಪ್ಪು, ಎಳ್ಳು, ಇಂಗು, ಪನಿಶಾಧಾನ್ಯಾಕಪತ್ರಗಳು, ಮೆಂತ್ಯ ಮುಂತಾದ ಕಾಳುಗಳು, ವಿವಿಧ ಸಾಮಗ್ರಿಗಳನ್ನು ಸೇರಿಸಿದ ಸಮುಲ್ಲಸಲ್ಲವನಶಾಕ, ವಿವಿಧ ಉಪ್ಪಿನಕಾಯಿಗಳು, ಬಗೆ ಬಗೆ ಪಚ್ಚಡಿಗಳು, ಪಿಂಡಿಗಳು, ಕಚ್ಚಡಿ ಮೆಳಸೇಲಕಿಗೆರೆಗುಚ್ಚದ ಕಾಳ್ಗಳು, ಜಂಬೀರರಸ, ಸೈಂಧವ, ಸೇಲಕಿ ಕೊತ್ತುಂಬರಿ ಕರಿಬೇವು ಹಾಕಿ ಮಾಡಿದ ಸ" ಮಜ್ಜಿಗೆ,  . . . .ಅಬ್ಬಬ್ಬಾ! ಕವಿ ವಿವರಿಸಿದ ಭಕ್ಷ್ಯಗಳು, ಅದರಲ್ಲಿ ಸೇರಿಸಿದ ಪದಾರ್ಥಗಳ ವಿವರಣೆಗಳನ್ನು ಮೂಲಕಾವ್ಯದಲ್ಲೇ ಓದಿದರೆ ಅದರ ಸೊಗಸೇ ಬೇರೆ. ಅಲ್ಲಿ ಹೇಳಿದ ಇನ್ನೂ ಅನೇಕ ಖಾದ್ಯಗಳ ವಿವರ ಇಲ್ಲಿ ಹೇಳಿಲ್ಲ. ಊಟದ ನಂತರದಲ್ಲಿ ವಿವಿಧ ತಾಂಬೂಲಗಳ ಅರ್ಪಣೆ, ವಿವಿಧ ಫಲಗಳ ಅರ್ಪಣೆ, ಉಯ್ಯಾಲೆಗಳ ಸೇವೆಯ ಅರ್ಪಣೆ, ವಿವಿಧ ಆಭರಣಗಳ ಅರ್ಪಣೆ, ಇತ್ಯಾದಿಗಳ ವರ್ಣನೆಗಳನ್ನು ಕವಿ ಮಾಡಿದ್ದಾನೆ. ಕವಿಯ ಕೊನೆಯ ಬೇಡಿಕೆಯಿದು:

ಪರಮೇಶ್ವರ ಬಿನ್ನಪಮಿಂ |
ತುರುತರ ಸದ್ಭಕ್ತಿಂದೆ ನಿಮಗರ್ಪಿಸಿದೀ ||
ಪರಿಯ ಬಹುವಿಧದ ಕಾಣ್ಕೆಯ |
ಮಿರುಪಖಿಲ ಪದಾರ್ಥಚಯವನಂಗೀಕರಿಸೈ || (ಶಿ.ಪೂ.ದ. ೪.೧೧೫.)

ನಿನ್ನಡಿಯ ದಾಸ ನಾಂ ಕರ |
ಮೆನ್ನೀ ಸ್ತ್ರೀಪುತ್ರಗೇಹ ಪಶು ಸರ್ವಸ್ವಂ ||
ನಿನ್ನದು ಕೃಪೆಯಿರಬೇಕೀ |
ಬಿನ್ನಪಗಳನಾಲಿಸೀಶ ಪನ್ನಗಭೂಷಾ || (ಶಿ.ಪೂ.ದ. ೪.೧೧೬.)

     ಕೆಳದಿ ಲಿಂಗಣ್ಣಕವಿಯ ಕಾವ್ಯವೈಭವವನ್ನು ಓದಿಯೇ ಅನುಭವಿಸಬೇಕು. ಅನುಪಮ ಕವಿಗೆ ಪ್ರಣಾಮಗಳು.
-ಕ.ವೆಂ.ನಾಗರಾಜ್.

2 ಕಾಮೆಂಟ್‌ಗಳು:

  1. ಕವಿನಾಗರಾಜರೆ ತುಂಬಾ ಒಳ್ಳೆಯ ಬರಹ ಇದು. ದೇವರನ್ನು ಮೆಚ್ಚಿಸಲು ಅವನನ್ನು ಸತ್ಕರಿಸುವ ಪರಿ. ಎಲ್ಲವನ್ನು ಕೊಟ್ಟ ಅವನಿಗೆ ಅವನು ಕೊಟ್ಟಿರುವದನ್ನೆ ಅರ್ಪಿಸಿ, ಮತ್ತೆ ನಮಗೆ ಒಳ್ಳೆಯದು ಮಾಡು ಎನ್ನುವ ಮನುಷ್ಯನ ಭಾವವೆ ಸುಂದರ.

    ಪ್ರತ್ಯುತ್ತರಅಳಿಸಿ