ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಮಂಗಳವಾರ, ಮೇ 28, 2013

ಅರ್ಥ ಕಳೆದುಕೊಂಡ ಇಲಾಖಾ ವಿಚಾರಣೆಗಳು - ೨: ಲೂಟಿಕೋರರಿಗಿದು ಸುಭಿಕ್ಷಕಾಲ

     ಬಿಜಾಪುರ ಜಿಲ್ಲೆಯಲ್ಲಿ ಆಹಾರ ಇಲಾಖೆಯ ಉಪನಿರ್ದೇಶಕರಾಗಿದ್ದವರೊಬ್ಬರು ಮಾಡಿದ ಅವ್ಯವಹಾರದ ಪ್ರಸಂಗ ಉಲ್ಲೇಖನೀಯವಾದುದು. ಪ್ರತಿ ತಿಂಗಳೂ ೩೦೦ ನ್ಯಾಯಬೆಲೆ ಅಂಗಡಿಗಳಿಗೆ ಪಡಿತರ ಸಾಮಗ್ರಿಗಳನ್ನು ಬಿಡುಗಡೆ ಮಾಡುವಾಗ ೫೦ ಅಂಗಡಿಗಳಿಗೆ ಅಕ್ಕಿ ಮತ್ತು ಬೇರೆ ೫೦ ಅಂಗಡಿಗಳಿಗೆ ಗೋಧಿಯನ್ನು ಬಿಡುಗಡೆ ಮಾಡುತ್ತಿರಲಿಲ್ಲ. ಅದರ ಮುಂದಿನ ತಿಂಗಳಿನಲ್ಲಿ ಇನ್ನು ಬೇರೆ ಬೇರೆ ೫೦ ಅಂಗಡಿಗಳಿಗೆ ಅಕ್ಕಿ, ಗೋಧಿ ಕೊಡುತ್ತಿರಲಿಲ್ಲ. ಹೀಗೆ ಇದನ್ನು ರೊಟೇಶನ್ನಿನಂತೆ ಮಾಡುತ್ತಿದ್ದರು. ಪ್ರತಿ ತಿಂಗಳಿನಲ್ಲಿಯೂ ೫೦ ಅಂಗಡಿಗಳ ಅಕ್ಕಿ ಮತ್ತು ೫೦ ಅಂಗಡಿಗಳ ಗೋಧಿ ಸೋಲಾಪುರದ ದಾರಿ ಹಿಡಿಯುತ್ತಿದ್ದವು. ಅಲ್ಲಿ ಅದನ್ನು ಹಿಟ್ಟು, ರವೆಗಳಾಗಿ ಪರಿವರ್ತಿಸಿ ಮುಕ್ತ ಮಾರುಕಟ್ಟೆಯಲ್ಲಿ ಮಾರಲಾಗುತ್ತಿತ್ತು. ಹೀಗೆ ಬಹಳ ಕಾಲದಿಂದ ನಡೆಯುತ್ತಿದ್ದ ವ್ಯವಹಾರದಿಂದ ಆ ಉಪನಿರ್ದೇಶಕರು ಆರ್ಥಿಕವಾಗಿ ಭಾರೀಕುಳ ಆದರು. ಒಮ್ಮೆ ಬಿಜಾಪುರದ ಜಿಲ್ಲಾಧಿಕಾರಿಯವರ ಕೈಗೆ ಈ ರೀತಿ ಆಹಾರ ಪದಾರ್ಥಗಳ ಕಳ್ಳಸಾಗಣೆಯಾಗುತ್ತಿದ್ದಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದರು. ಪ್ರಾಮಾಣಿಕ ಜಿಲ್ಲಾಧಿಕಾರಿಯಾಗಿದ್ದರಿಂದ ಅವರು ಮತ್ತು ಸಹಾಯಕ ಆಯುಕ್ತರು ಸ್ವತಃ ಸಗಟು ಗೋಡೌನಿಗೆ ಹೋಗಿ ಸತತವಾಗಿ ಐದು ದಿನಗಳ ಕಾಲ ಅವಿರತ ತಪಾಸಣೆ ಮಾಡಿದರು. ದಾಸ್ತಾನಿನಲ್ಲಿ ವ್ಯತ್ಯಾಸ ಇರುವುದು, ಅವ್ಯವಹಾರ ನಡೆದಿರುವುದು ಧೃಢಪಟ್ಟಿತು. ಉಪನಿರ್ದೇಶಕರು ಜಿಲ್ಲಾಮಟ್ಟದ ಅಧಿಕಾರಿಯಾಗಿದ್ದರಿಂದ ಅವರ ವಿರುದ್ಧ ಸರ್ಕಾರದ ಮಟ್ಟದಲ್ಲೇ ಕ್ರಮ ಜರುಗಿಸಬೇಕಿದ್ದಿತು. ಬೇರೆ ಜಿಲ್ಲಾಧಿಕಾರಿಯವರಾಗಿದ್ದರೆ ಪ್ರಕರಣ ಮುಚ್ಚಿಹೋಗುತ್ತಿತ್ತೋ ಏನೋ! ಆದರೆ, ಆ ಜಿಲ್ಲಾಧಿಕಾರಿಯವರು ಸ್ವತಃ ಮುತುವರ್ಜಿ ವಹಿಸಿ ಯಾವುದೇ ಮಾಹಿತಿಗಳನ್ನೂ ಬಿಡದಂತೆ ದಾಖಲೆಗಳ ಸಹಿತ ವರದಿ ಸಿದ್ಧಪಡಿಸಿಕೊಂಡು ಗೃಹ ಇಲಾಖೆಯ ಕಮಿಷನರರನ್ನು ಮುಖತಃ ಭೇಟಿ ಮಾಡಿ ಪ್ರಕರಣದ ಗಂಭೀರತೆಯನ್ನು ವಿವರಿಸಿದರು. ಆ ಸಂದರ್ಭದಲ್ಲಿ ಆಹಾರ ಮಂತ್ರಿಯಾಗಿದ್ದ ಶ್ರೀಮತಿ ಮನೋರಮಾ ಮಧ್ವರಾಜರನ್ನೂ ಅವರ ಮನೆಗೇ ಹೋಗಿ ಭೇಟಿ ಮಾಡಿ ಅವ್ಯವಹಾರದ ವಿಷಯ ಗಮನಕ್ಕೆ ತಂದರು. ಸಾರ್ವಜನಿಕರ ಆಹಾರದ ಲೂಟಿ ಮಾಡಿರುವವರಿಗೆ ತಕ್ಕ ಶಿಕ್ಷೆಯಾಗಬೇಕೆಂದು ಕೋರಿಕೊಂಡರು. ಆಹಾರ ಮಂತ್ರಿಗಳೂ ಒಪ್ಪಿ, ಸಿ.ಒ.ಡಿ. ತನಿಖೆಗೂ ಆದೇಶ ಮಾಡಿದರು. ಫಲಶೃತಿಯಾಗಿ ಉಪನಿರ್ದೇಶಕರು ಮತ್ತು ಫುಡ್ ಇನ್ಸ್ ಪೆಕ್ಟರರ ಬಂಧನವಾಯಿತು. ಎರಡು ದಿನಗಳ ಕಾಲ ಅವರು ಜೈಲಿನಲ್ಲಿದ್ದರು. ನಂತರ ಜಾಮೀನಿನ ಮೇಲೆ ಹೊರಬಂದರು. 
     ೧೯೯೪ರಲ್ಲಿ ನಡೆದ ಈ ಪ್ರಕರಣದಲ್ಲಿ ೨೦೦೮ರವರೆವಿಗೂ ಸುಮಾರು ೧೪ ವರ್ಷಗಳ ಕಾಲ ವಿಚಾರಣೆ ನಡೆಯಿತು. ಸಿ.ಒ.ಡಿ. ತನಿಖೆಯಲ್ಲಿ ಉಪನಿರ್ದೇಶಕರು ಮಾಡಿದ ಅಪರಾಧ ರುಜುವಾತಾಗಿತ್ತು. ಸಿ.ಒ.ಡಿ.ಯವರು ತನಿಖೆ ನಡೆಸಬಹುದು, ತಪ್ಪಿತಸ್ಥರೆಂದು ತೀರ್ಮಾನಿಸಬಹುದು, ಆದರೆ ಅವರಿಗೆ ಶಿಕ್ಷೆ ಕೊಡಲು ಬರುವುದಿಲ್ಲ. ಕೇವಲ ಸರ್ಕಾರಕ್ಕೆ ವರದಿ ಸಲ್ಲಿಸಬಹುದಷ್ಟೆ. ಆ ಕೆಲಸವನ್ನು ಅವರು ಸರಿಯಾಗಿ ಮಾಡಿದರು. ನಂತರದಲ್ಲಿ ಸರ್ಕಾರದ ಕಡೆಯಿಂದ ಇಲಾಖಾ ವಿಚಾರಣೆ ನಡೆಯಿತು. ಅಧಿಕಾರಿಗಳು ಜಿಲ್ಲಾಧಿಕಾರಿಯವರನ್ನು (ಅಷ್ಟು ಹೊತ್ತಿಗೆ ಅವರು ಬಿಜಾಪುರದಿಂದ ಬೇರೆಡೆಗೆ ವರ್ಗವಾಗಿದ್ದರು) 'ಏನೋ ತಪ್ಪು ಮಾಡಿಬಿಟ್ಟಿದ್ದೇವೆ. ದಯವಿಟ್ಟು ನಮ್ಮನ್ನು ಕ್ಷಮಿಸಿ ಬಿಟ್ಟುಬಿಡಿ, ನಮ್ಮ ವಿರುದ್ಧ ಸಾಕ್ಷಿ ಹೇಳಬೇಡಿ' ಎಂದು ಪರಿಪರಿಯಾಗಿ ಬೇಡಿಕೊಂಡಿದ್ದರು. ಆದರೆ ಆ ಜಿಲ್ಲಾಧಿಕಾರಿಯವರು ಕರ್ತವ್ಯದ ದೃಷ್ಟಿಯಿಂದ ಮಾಡಬೇಕಾದ ಎಲ್ಲವನ್ನೂ ಮಾಡಿದರು. ಸಿ.ಒ.ಡಿ.ಯವರ ಮುಂದೆಯೂ, ಇಲಾಖಾ ವಿಚಾರಣಾಧಿಕಾರಿಯವರ ಮುಂದೆಯೂ ನೈಜ ಸಾಕ್ಷ್ಯ ಹೇಳಿದರು. ನಂತರದಲ್ಲಿ ಏನು ಆಯಿತೋ, ಹೇಗೆ ಆಯಿತೋ ಗೊತ್ತಿಲ್ಲ, ಅಧಿಕಾರಿಗಳು ನಿರ್ದೋಷಿಗಳಾಗಿ ಹೊರಬಂದರು! ಕಾನೂನುಗಳನ್ನು ಹೇಗೆ ತಿರುಚಬಹುದೆಂಬುದು ಮತ್ತು ಹೇಗೆ ಸುಲಭವಾಗಿ ಪಾರಾಗಬಹುದೆಂಬುದು ಜಾಹೀರಾಯಿತು. ವಿಶೇಷವೆಂದರೆ ಈ ಪ್ರಕರಣದಲ್ಲಿ ರಾಜಕಾರಣಿಗಳ ಹಸ್ತಕ್ಷೇಪವಿರಲಿಲ್ಲ. ಈ ಪ್ರಕರಣದಲ್ಲಿ ಸಾರ್ವಜನಿಕರಿಗೆ ಸೇರಬೇಕಾಗಿದ್ದ ಟನ್ನುಗಟ್ಟಲೆ ಅಕ್ಕಿ, ಗೋಧಿಗಳು ಕಾಳಸಂತೆಯ ಪಾಲಾಗಿದ್ದು ಸತ್ಯ, ಜಿಲ್ಲಾಧಿಕಾರಿಯವರು ಪ್ರಾಮಾಣಿಕವಾಗಿ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕೆಂದು ಕ್ರಮ ಜರುಗಿಸಿದ್ದು ಸತ್ಯ, ಸಿ.ಒ.ಡಿ. ತನಿಖೆಯಲ್ಲಿ ಆರೋಪ ರುಜುವಾತಾಗಿದ್ದೂ ಸತ್ಯ, ಕೊನೆಗೆ ಇಲಾಖಾ ವಿಚಾರಣೆಯಲ್ಲಿ ಮಾತ್ರ ಸಂಬಂಧಿಸಿದವರು ನಿರ್ದೋಷಿಗಳೆಂದು ತೀರ್ಮಾನವಾಗಿ, ಅವರುಗಳು ಗೆಲುವಿನ ನಗೆ ಬೀರಿ, ಬರಬೇಕಾಗಿದ್ದ ಬಾಕಿ ಸಂಬಳ-ಸಾರಿಗೆಗಳನ್ನು ಪಡೆದುದಲ್ಲದೆ ಬಡ್ತಿಗಳನ್ನೂ ಪಡೆದು ಉನ್ನತ ಹುದ್ದೆಗೆ ಏರಿದ್ದೂ ಸತ್ಯವೇ!!
     ಭೂಗಳ್ಳತನ ಹೆಚ್ಚಾಗಿರುವುದಕ್ಕೆ ಕಾರಣ ಏನು, ಭೂಗಳ್ಳತನ ಮಾಡಿಯೂ ತಪ್ಪಿಸಿಕೊಳ್ಳುವುದು ಹೇಗೆ ಎಂದು ತಿಳಿಯಬೇಕೇ? ಈ ಪ್ರಕರಣ ನೋಡಿ. ಬಿಳಿಗಿರಿರಂಗನಬೆಟ್ಟದಲ್ಲಿ ಕಾಯ್ದಿಟ್ಟ ಅರಣ್ಯ ಪ್ರದೇಶದಲ್ಲಿ ೫೦ ಎಕರೆ ಜಾಗವನ್ನು ೫ ಜನರಿಗೆ ಭೂರಹಿತ ಕೃಷಿಕಾರ್ಮಿಕರಿಗೆ ಮಂಜೂರು ಮಾಡಿದ್ದರು. ಆ ಐದು ಜನ ಭೂರಹಿತ ಕೃಷಿಕಾರ್ಮಿಕರ ಪೈಕಿ ಸುಬ್ಬರಾವ್, ಕೃಷ್ಣಮೂರ್ತಿ, ರಜನೀಕಾಂತ್ ಇವರುಗಳೂ ಸೇರಿದ್ದರು. ಅವರೆಲ್ಲಾ ಬೆಂಗಳೂರಿನ ಸದಾಶಿವನಗರದಲ್ಲಿದ್ದವರು. ಸುಬ್ಬರಾವ್ ಅನ್ನುವವರು ಅಖಿಲ ಭಾರತ ಮಟ್ಟದ ಕೈಗಾರಿಕಾ ಸಂಸ್ಥೆಯೊಂದರ ಅಧ್ಯಕ್ಷರು. ಚಿತ್ರನಟ ರಜನೀಕಾಂತ್ ಬಗ್ಗೆ ತಿಳಿಯದವರಾರು? ಎಲ್ಲರೂ ಕೋಟ್ಯಾಧೀಶ್ವರರೇ. ಇವರುಗಳು ಭೂರಹಿತ ಕೃಷಿಕಾರ್ಮಿಕರು ಎಂದು ಪ್ರಮಾಣಪತ್ರ ಕೊಟ್ಟವರು, ಅದನ್ನು ಒಪ್ಪಿ ಜಮೀನು ಮಂಜೂರು ಮಾಡುವವರನ್ನು ಏನೆಂದು ಹೇಳಬೇಕು? ಇವರುಗಳು ಯಾರೂ ಭೂರಹಿತ ಕೃಷಿಕಾರ್ಮಿಕರಲ್ಲ, ಕೋಟ್ಯಾಧೀಶ್ವರರು, ಇವರುಗಳು ಭೂರಹಿತ ಕೃಷಿಕಾರ್ಮಿಕರು ಎಂದು ಧೃಢೀಕರಣ ಪತ್ರ ಪಡೆದಿದ್ದರೆ ಅದು ತಪ್ಪು ಎಂದು ಹೇಳಲು ಯಾವ ಕಾನೂನಿನ ತಿಳಿವಳಿಕೆಯೂ ಅಗತ್ಯವಿಲ್ಲ. ಸಾಮಾನ್ಯ ತಿಳುವಳಿಕಸ್ಥನಿರಲಿ, ಮೂರ್ಖನಿಗೂ ಗೊತ್ತಾಗುವ ಸಂಗತಿಯಿದು. ನಂಜನಗೂಡಿನ ಅಸಿಸ್ಟೆಂಟ್ ಕಮಿಷನರರ ಗಮನಕ್ಕೆ ಈ ವಿಷಯ ಗೊತ್ತಾಗಿ ಜಿಲ್ಲಾಧಿಕಾರಿಯವರಿಗೆ ಜಮೀನನ್ನು ವಾಪಸು ಸರ್ಕಾರದ ಸುಪರ್ದಿಗೆ ತೆಗೆದುಕೊಳ್ಳಲು ವಿವರವಾದ ವರದಿ ಸಲ್ಲಿಸಿದ್ದರು. ಜಿಲ್ಲಾಧಿಕಾರಿಯವರು ಸಂಬಂಧಿಸಿದವರಿಗೆ ನೋಟೀಸು ಕೊಟ್ಟು ವಿಚಾರಣೆ ನಡೆಸಿ ಮಾಡಿದ ಆದೇಶವೆಂದರೆ ಮಂಜೂರಿದಾರರು ಮಂಜೂರಾದ ಜಮೀನನ್ನು ಸಾಗುವಳಿಗೆ ತರುವುದಕ್ಕೆ ಬಹು ದೊಡ್ಡ ಹಣವನ್ನು ವೆಚ್ಚ ಮಾಡಿದ್ದಾರೆ, ಆದ್ದರಿಂದ ಜಮೀನನ್ನು ಮರಳಿ ಸರ್ಕಾರಕ್ಕೆ ತೆಗೆದುಕೊಳ್ಳುವುದು ಸೂಕ್ತವಲ್ಲ ಎಂದು! ಈ ನಿರ್ಧಾರ ಸರಿಯಾದುದಲ್ಲವೆಂದು ಪ್ರಕರಣದ ಅರಿವಿದ್ದ ಯಾರಿಗೇ ಆಗಲಿ ಗೊತ್ತಾಗದಿರದು. ಪ್ರೊಬೇಷನರಿ ಅಸಿಸ್ಟೆಂಟ್ ಕಮಿಷನರರು ಐ.ಎ.ಎಸ್. ಕೇಡರಿನವರಾಗಿದ್ದು, ಅವರಿಗೆ ಈ ಅದೇಶ ಸರಿಕಾಣದೇ ಸರ್ಕಾರದ ಮುಖ್ಯ ಕಾರ್ಯದರ್ಶಿಯವರಿಗೆ ದೂರು ಸಲ್ಲಿಸಿದರು. ಆ ದೂರು ಲೋಕಾಯುಕ್ತಕ್ಕೆ ಹೋಯಿತು. ಸಂಬಂಧಿಸಿದ ತಹಸೀಲ್ದಾರ್, ರೆವಿನ್ಯೂ ಇನ್ಸ್ ಪೆಕ್ಟರ್, ಸರ್ವೆಯರ್, ಗ್ರಾಮಲೆಕ್ಕಿಗರು ಎಲ್ಲರೂ ಅಮಾನತ್ತುಗೊಂಡರು. ಇಲಾಖಾ ವಿಚಾರಣೆಯೂ ನಡೆಯಿತು. ದೂರು ನೀಡಿದ್ದ ಅಸಿಸ್ಟೆಂಟ್ ಕಮಿಷನರರು ಸಾಕ್ಷ್ಯ ಸಹ ಹೇಳಿದ್ದರು, ಮಂಜೂರಾತಿಯಲ್ಲಿ ಅಕ್ರಮವಾಗಿದೆಯೆಂದು ತಿಳಿಸಿದ್ದರು. ಆದರೂ, ಕೆಲವು ವರ್ಷಗಳ ನಂತರ ಎಲ್ಲರೂ ನಿರಪರಾಧಿಗಳೆಂದು ಆದೇಶವಾಯಿತು. ಕ್ರಮೇಣ ಪ್ರಕರಣ ಮುಚ್ಚಿಹೋಯಿತು. ಆರೋಪಿಗಳಾಗಿದ್ದವರಿಗೆ ಬಡ್ತಿಯ ಬಹುಮಾನವೂ ಸಿಕ್ಕಿತು, ಎಲ್ಲರೂ ವಿಷಯವನ್ನು ಮರೆತೇಬಿಟ್ಟರು ಎಂಬಲ್ಲಿಗೆ ನಿರರ್ಥಕವೆನಿಸಿದ ಇಲಾಖಾ ವಿಚಾರಣಾ ಪ್ರಸಂಗಗಳ ಎರಡನೆಯ ಅಧ್ಯಾಯಕ್ಕೆ ಮಂಗಳವು.

 -ಕ.ವೆಂ.ನಾಗರಾಜ್. 
ಹಿಂದಿನ ಲೇಖನಕ್ಕೆ ಲಿಂಕ್:

ಶುಕ್ರವಾರ, ಮೇ 24, 2013

ಶೌಚಾಲಯವೂ, ಭ್ರಷ್ಟಾಚಾರವೂ !!



     ಹಾಸನ ನಗರದ ಸ್ಟೇಡಿಯಮ್ಮಿನಲ್ಲಿ ಒಂದು ಆಧುನಿಕ ಶೌಚಾಲಯ ನಿರ್ಮಾಣವಾಗಿ ೪-೫ ವರ್ಷಗಳಾಗಿವೆ. ಆಗ ಈ ಕಾಮಗಾರಿಗೆ ಸುಮಾರು ೫-೧೦ ಲಕ್ಷ ರೂ. ಖರ್ಚು ತೋರಿಸಿರಬಹುದು, ಅಥವ ಇನ್ನೂ ಹೆಚ್ಚು ತೋರಿಸಿರಲೂಬಹುದು. ಅದನ್ನು ಇದುವರೆವಿಗೂ ಸಾರ್ವಜನಿಕ ಉಪಯೋಗಕ್ಕೆ ತೆರೆದಿಲ್ಲ. ಏಕೆ ತೆರೆದಿಲ್ಲವೆಂದು ಅದನ್ನು ಕಟ್ಟಿಸಿದವರಾಗಲೀ, ಜನರಾಗಲೀ ಇದುವರೆವಿಗೂ ತಲೆ ಕೆಡಿಸಿಕೊಂಡಿಲ್ಲ. ಹಾಗೆಂದು ಅಲ್ಲಿ ಬೇರೆ ಶೌಚಾಲಯಗಳು ಇವೆಯೇ ಎಂದರೆ ಅದೂ ಇಲ್ಲ. ದಿನ ನಿತ್ಯ ನೂರಾರು ಜನರು ಅಲ್ಲಿ ವಾಯುಸೇವನೆಗೆ, ವಿಶ್ರಾಂತಿಗೆ ಬಂದು ಹೋಗುತ್ತಾರೆ. ಹಲವಾರು ಕ್ರೀಡಾಕೂಟಗಳು ನಡೆಯುತ್ತಲೇ ಇರುತ್ತವೆ. ಸ್ವಾತಂತ್ರ್ಯೋತ್ಸವ, ಕನ್ನಡ ರಾಜ್ಯೋತ್ಸವ, ಮುಂತಾದ ಎಲ್ಲಾ ರಾಷ್ಟ್ರೀಯ ಕಾರ್ಯಕ್ರಮಗಳು ನಡೆಯುವುದು ಇಲ್ಲಿಯೇ. ಆಗ ಸಾವಿರಾರು ಜನರು ಸೇರುತ್ತಾರೆ. ಇಲ್ಲಿನ ಶಾಸಕರ ಮನೆ ಇರುವುದೂ ಸ್ಟೇಡಿಯಮ್ ಸಮೀಪದ ಬಡಾವಣೆಯಲ್ಲಿಯೇ. ಅವರು ಇದೇ ಮಾರ್ಗವಾಗಿ ಓಡಾಡುತ್ತಾರೆ. ಆದರೂ ಶೌಚಾಲಯ ಉಪಯೋಗಕ್ಕೆ ತೆರೆದಿಲ್ಲ ಮತ್ತು ಜನರಿಗೂ ಅದು ಬೇಕಿಲ್ಲವೆಂದರೆ ಏನೆನ್ನಬೇಕು? ಇಲ್ಲಿ ಶೌಚಾಲಯದ ಅಗತ್ಯವಿಲ್ಲವೇ ಎಂದರೆ ತುಂಬಾ ಅಗತ್ಯವಿದೆ. ಗಂಡಸರು ಎಲ್ಲೋ ದಿಬ್ಬದ ಮರೆಯಲ್ಲಿ, ಗಿಡದ ಮರೆಯಲ್ಲಿ ಮತ್ತು ವಿಶೇಷವೆಂದರೆ ಇದೇ ಶೌಚಾಲಯದ ಹಿಂಬದಿಯಲ್ಲಿ ಬಾಧೆ ತೀರಿಸಿಕೊಳ್ಳುತ್ತಿದ್ದಾರೆ. ಹೆಂಗಸರು ಏನು ಮಾಡಬೇಕು? ಸ್ತ್ರೀಶಕ್ತಿ ಸಂಘಗಳು, ಪ್ರಬುದ್ಧ ಮಹಿಳಾಮಣಿಗಳೂ ಈ ಬಗ್ಗೆ ಚಕಾರವೆತ್ತಿಲ್ಲ. ಜನರು ಇದೇ ವ್ಯವಸ್ಥೆಯನ್ನು ಒಪ್ಪಿಕೊಂಡು ಬಿಟ್ಟಿದ್ದಾರೆ. ಶೌಚಾಲಯದ ನಿರ್ಮಾಣಕ್ಕೆ ಆದ ವೆಚ್ಚ ವ್ಯರ್ಥವಾದಂತಾಯಿತಲ್ಲವೇ? ಇದು ಸಾರ್ವಜನಿಕರ ಹಣದ ದುರುಪಯೋಗವಲ್ಲವೇ? ಇದು ಭ್ರಷ್ಟಾಚಾರವಲ್ಲವೇ? ಜನರು ಜಾಗೃತರಾಗಿದ್ದರೆ ಈ ಶೌಚಾಲಯಕ್ಕೆ ಆದ ವೆಚ್ಚ ಸಮರ್ಪಕವಾಗಿ ಬಳಕೆಯಾಗಿದೆಯೇ ಎಂಬುದನ್ನು ಪರಿಶೀಲಿಸುವುದರ ಜೊತೆಗೆ, ಅದನ್ನು ಸಾರ್ವಜನಿಕರ ಉಪಯೋಗಕ್ಕೆ ತೆರೆಯುವಂತೆ ನೋಡಿಕೊಳ್ಳುತ್ತಿದ್ದರು ಮತ್ತು ತೆರೆದ ನಂತರವೂ ಅದು ಸರಿಯಾಗಿ ನಿರ್ವಹಣೆಯಾಗುವಂತೆ ನಿಗಾ ವಹಿಸುತ್ತಿದ್ದರು ಅಥವ ಸಂಬಂಧಿಸಿದವರನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದರು. ಇಲ್ಲಿ ಹಾಗಾಗಿಲ್ಲ. ಹಾಗಾದರೆ ಭ್ರಷ್ಟಾಚಾರಕ್ಕೆ ನಿಜವಾದ ಹೊಣೆಗಾರರು ಯಾರು? ನಾವೇ ಅಲ್ಲವೇ? ಇಂದು ವ್ಯಾಪಕವಾಗಿರುವ ಭ್ರಷ್ಟಾಚಾರದ ಮೂಲಬೇರು ಎಲ್ಲಿದೆಯೆಂದರೆ ಜನರಿಗೆ ಅಗತ್ಯವಾದ ಮೂಲಭೂತ ಕಾರ್ಯಕ್ರಮಗಳ ಜಾರಿ ಸರಿಯಾಗಿ ಆಗುತ್ತಿದೆಯೇ ಎಂಬುದನ್ನು ಗಮನಿಸುವಲ್ಲಿನ ವೈಫಲ್ಯದಲ್ಲಿ, ನಮ್ಮ ಅಜಾಗರೂಕತೆಯಲ್ಲಿ, ಅನ್ಯಾಯವೆಂದು ಗೊತ್ತಿದ್ದೂ ಸಹಿಸಿಕೊಂಡಿರುವಲ್ಲಿ!
-ಕ.ವೆಂ.ನಾಗರಾಜ್

ಮಂಗಳವಾರ, ಮೇ 21, 2013

ಅರ್ಥ ಕಳೆದುಕೊಂಡ ಇಲಾಖಾ ವಿಚಾರಣೆಗಳು - ೧


     ಅವನೊಬ್ಬ ಗ್ರಾಮಲೆಕ್ಕಿಗ, ಹೆಸರು ಖಲಂದರ್ ಎಂದಿಟ್ಟುಕೊಳ್ಳೋಣ. ಪ್ರತಿ ತಿಂಗಳೂ ತಾನು ವಸೂಲು ಮಾಡಿದ ಕಂದಾಯ, ಸರ್ಕಾರೀ ಬಾಕಿ, ಇತ್ಯಾದಿಗಳ ಖಾತೆ, ಖಿರ್ದಿ ಬರೆದು ಸಂಬಂಧಿಸಿದ ಲೆಕ್ಕ ಶೀರ್ಷಿಕೆಗಳಿಗೆ ಜಮಾ ಮಾಡಲು ಬ್ಯಾಂಕ್ ಚಲನ್ನುಗಳನ್ನು ಬರೆದು ಶಿರಸ್ತೇದಾರರಿಂದ ಮೇಲುಸಹಿ ಮಾಡಿಸಿಕೊಳ್ಳುತ್ತಿದ್ದ. ಎಲ್ಲರನ್ನೂ ಚೆನ್ನಾಗಿ ಮಾತನಾಡಿಸುತ್ತಿದ್ದ ಅವನು ಧಾರಾಳಿಯೂ ಆಗಿದ್ದರಿಂದ ಎಲ್ಲರಿಗೂ ಅವನು ಆಪ್ತನೆನಿಸಿದ್ದ. ಹಣ ಬ್ಯಾಂಕಿಗೆ ಜಮಾ ಆದಮೇಲೆ ತಾಲ್ಲೂಕು ಕಛೇರಿಯ ಡಿಸಿಬಿ (ಡಿಮ್ಯಾಂಡ್-ಕಲೆಕ್ಷನ್-ಬ್ಯಾಲೆನ್ಸ್ = ಬೇಡಿಕೆ-ವಸೂಲಿ-ಶಿಲ್ಕು) ವಹಿಯಲ್ಲಿ ವಿವರ ಬರೆಯುತ್ತಿದ್ದ. ಕಛೇರಿಯ ಗುಮಾಸ್ತರು ಅದನ್ನು ಖಜಾನೆಯಿಂದ ಬರುವ ಶೆಡ್ಯೂಲುಗಳೊಂದಿಗೆ ತಾಳೆ ನೋಡಬೇಕಾದುದು ಕ್ರಮವಾದರೂ, ಖಜಾನೆಯಿಂದ ಶೆಡ್ಯೂಲುಗಳು ತಿಂಗಳುಗಳು ತಡವಾಗಿ ಬರುತ್ತಿದ್ದುದರಿಂದ ತಾಳೆ ನೋಡುವ ಕೆಲಸ ಸಾಮಾನ್ಯವಾಗಿ ಆಗುತ್ತಿರಲಿಲ್ಲ. ದಫ್ತರ್ ತನಿಖೆ ಮಾಡುವಾಗಲೋ, ಲೆಕ್ಕ ಪರಿಶೋಧನೆ ಮಾಡುವಾಗಲೋ ವ್ಯತ್ಯಾಸವಿದ್ದರೆ ಪರಿಶೀಲಿಸಿ ನೋಡುತ್ತಾರೆ. ಸಾಮಾನ್ಯವಾಗಿ ಯಾವುದೋ ಲೆಕ್ಕ ಶೀರ್ಷಿಕೆಗೆ ಹೋಗಬೇಕಾದ ಹಣ ಇನ್ನು ಯಾವುದೋ ಶೀರ್ಷಿಕೆಗೆ ಜಮಾ ಆಗಿ ವ್ಯತ್ಯಾಸವಾಗುತ್ತಿರುತ್ತದೆ. ಕಂದಾಯ ಲೆಕ್ಕ ಪರಿಶೀಲಕರು ಎಲ್ಲಾ ಗ್ರಾಮಲೆಕ್ಕಿಗರುಗಳ ಲೆಕ್ಕವನ್ನು ಪರಿಶೀಲಿಸುವುದಿಲ್ಲ. ಪರಿಶೀಲನಾ ಅವಧಿಯಲ್ಲಿ ಲಭ್ಯವಿರುವವರ ಲೆಕ್ಕಗಳನ್ನು ಮಾತ್ರ ಪರಿಶೀಲಿಸುತ್ತಾರೆ. ಜಾಣ ಖಲಂದರ್ ಆ ಕಛೇರಿಯಲ್ಲಿ ೪-೫ ವರ್ಷಗಳಿಂದ ಕೆಲಸ ಮಾಡಿದ್ದರೂ ಆ ಅವಧಿಯಲ್ಲಿ ಒಮ್ಮೆಯೂ ಅವನ ಲೆಕ್ಕ ಯಾವುದಾದರೂ ಕಾರಣದಿಂದ ತನಿಖೆಯಾಗಿರಲೇ ಇಲ್ಲ. ಹೀಗೆ ಒಮ್ಮೆ ಪರಿಶೀಲಿಸಿದಾಗ ಖಲಂದರನ ಮಿತ್ರ ಗ್ರಾಮಲೆಕ್ಕಿಗ ರಮೇಶನ ಒಂದು ತಿಂಗಳ ಕಂದಾಯದ ಹಣ ಖಜಾನೆಯ ಲೆಕ್ಕದಲ್ಲಿ ಜಮಾ ಆಗದೆ ಇರುವುದು ಕಂಡುಬಂದಿತು. ಖಿರ್ದಿಯಲ್ಲಿ ಮಾತ್ರ ಹಣ ಬ್ಯಾಂಕಿಗೆ ಸಂದಾಯವಾದ ಕುರಿತು ಬ್ಯಾಂಕಿನ 'ಕ್ಯಾಶ್ ರಿಸೀವ್ಡ್' ಸೀಲು ಇತ್ತು. ಅನುಮಾನದಿಂದ ಬ್ಯಾಂಕಿನಲ್ಲಿ ವಿಚಾರಿಸಿದಾಗ ಆ ಮೊಬಲಗು ಬ್ಯಾಂಕಿಗೆ ಜಮಾ ಆಗಿಲ್ಲದುದು ಖಚಿತವಾಗಿತ್ತು. ರಮೇಶನಿಗೆ ನೋಟೀಸು ಕೊಟ್ಟು ವಿಚಾರಿಸಿದಾಗ ತಾನು ಒಂದು ವಾರ ರಜೆಯಲ್ಲಿದ್ದುದರಿಂದ ಹಣವನ್ನು ಮಿತ್ರ ಖಲಂದರ್ ಮೂಲಕ ಬ್ಯಾಂಕಿಗೆ ಕಟ್ಟಿಸಿದ್ದಾಗಿ ತಿಳಿಸಿದ್ದ. ಶಿರಸ್ತೇದಾರರಿಗೆ ಅನುಮಾನ ಬಂದು ಖಲಂದರನ ಖಾತೆ-ಖಿರ್ದಿಗಳನ್ನು ಪಡೆದು ಪರಿಶೀಲಿಸಿದಾಗ ಖಲಂದರ್ ಕಛೇರಿಗೆ ಬಂದ ಮೊದಲ ಎರಡು ತಿಂಗಳ ಹಣ ಹೊರತುಪಡಿಸಿ ನಂತರದ ಯಾವುದೇ ತಿಂಗಳ ಹಣ ಸರ್ಕಾರಕ್ಕೆ ಜಮಾ ಅಗಿರದೇ ಇದ್ದುದು ಗೊತ್ತಾಯಿತು. ಅವನೇ ಬ್ಯಾಂಕಿನ ಖೋಟಾ ಸೀಲು ಮಾಡಿಸಿಕೊಂಡು ಹಣ ಜಮಾ ಆದ ಬಗ್ಗೆ ಖಿರ್ದಿಯಲ್ಲಿ ಒತ್ತುತ್ತಿದ್ದ. ದೊಡ್ಡ ಮೊತ್ತದ ಹಣ ಲಪಟಾವಣೆಯಾಗಿತ್ತು. ಮಿತ್ರ ರಮೇಶನ ಹಣವನ್ನೂ ಬ್ಯಾಂಕಿಗೆ ಜಮಾ ಮಾಡದೇ ತನ್ನ ಖೋಟಾ ಸೀಲು ಒತ್ತಿದ್ದರಿಂದ ಈ ಹಗರಣ ಬೆಳಕಿಗೆ ಬರುವಂತಾಯಿತು. ಜಿಲ್ಲಾಧಿಕಾರಿಯವರಿಗೆ ವರದಿ ಹೋಯಿತು. ಗ್ರಾಮಲೆಕ್ಕಿಗ, ಆ ಐದು ವರ್ಷಗಳಲ್ಲಿ ಕೆಲಸ ಮಾಡಿದ್ದ ಡಿಸಿಬಿ ಗುಮಾಸ್ತರುಗಳು, ರೆವಿನ್ಯೂ ಇನ್ಸ್ ಪೆಕ್ಟರುಗಳು, ಶಿರಸ್ತೇದಾರರುಗಳ ಮೇಲೆ ಇಲಾಖಾ ವಿಚಾರಣೆ ನಡೆಸಲಾಯಿತು. ಸುಮಾರು ೨-೩ ವರ್ಷಗಳ ಕಾಲ ವಿಚಾರಣೆ ನಡೆದು ಆರೋಪಿಗಳು ತಪ್ಪಿತಸ್ಥರೆಂದು ತೀರ್ಮಾನಿಸಿದರು. ಗ್ರಾಮಲೆಕ್ಕಿಗನನ್ನು ಸೇವೆಯಿಂದ ವಜಾ ಮಾಡಲಾಯಿತು. ಗುಮಾಸ್ತರುಗಳ, ರೆವಿನ್ಯೂ ಇನ್ಸ್ ಪೆಕ್ಟರುಗಳ ಎರಡೆರಡು ವಾರ್ಷಿಕ ಇಂಕ್ರಿಮೆಂಟುಗಳನ್ನು, ಶಿರಸ್ತೇದಾರರ ೪ ವಾರ್ಷಿಕ ಇಂಕ್ರಿಮೆಂಟುಗಳನ್ನು ತಡೆಹಿಡಿದು ಆದೇಶವಾಯಿತು. ಅವರುಗಳ ಬಡ್ತಿಗೂ ಇದರಿಂದ ತೊಂದರೆಯಾಯಿತು. 
     ವಜಾಗೊಂಡ ಗ್ರಾಮಲೆಕ್ಕಿಗ ಸುಮ್ಮನೇ ಕೂರಲಿಲ್ಲ. ತನ್ನದೇ ಆದ ಒಂದು ಪೆಪ್ಪರಮೆಂಟ್ ತಯಾರಿಕಾ ಘಟಕ ಸ್ಥಾಪಿಸಿದ. ಅದೇ ಸಮಯಕ್ಕೆ ತನ್ನನ್ನು ವಜಾ ಮಾಡಿದ ಜಿಲ್ಲಾಧಿಕಾರಿಯವರ ಆದೇಶವನ್ನು ಪ್ರಶ್ನಿಸಿ ಉಚ್ಛನ್ಯಾಯಾಲಯದಲ್ಲಿ ಮೇಲುಮನವಿಯನ್ನೂ ಸಲ್ಲಿಸಿದ. ಪೆಪ್ಪರಮೆಂಟ್ ತಯಾರಿಕೆ ಮತ್ತು ಮಾರಾಟದಿಂದ ಒಳ್ಳೆಯ ಲಾಭ ಮಾಡಿದ ಅವನು ದೊಡ್ಡ ಬಂಗಲೆಯಂತಹ ಮನೆ ಕಟ್ಟಿಕೊಂಡು ಕಾರಿನಲ್ಲಿ ಸೂಟು ಬೂಟು ಧರಿಸಿ ಓಡಾಡತೊಡಗಿದ. ಉಚ್ಛನ್ಯಾಯಾಲಯದಲ್ಲಿ ೬-೭ ವರ್ಷಗಳು ವಿಚಾರಣೆ ನಡೆದು ಆ ಗ್ರಾಮಲೆಕ್ಕಿಗ ನಿರ್ದೋಷಿಯೆಂದು ತೀರ್ಮಾನವಾಗಿತ್ತು. ಇಲಾಖಾ ವಿಚಾರಣೆ ಸರಿಯಾಗಿ ನಡೆಸಿರಲಿಲ್ಲವೆಂದೂ, ಬ್ಯಾಂಕಿನವರನ್ನು ವಿಚಾರಣೆ ನಡೆಸಿಯೇ ಇಲ್ಲವೆಂದೂ, ತನ್ನ ಮುಗ್ಧತೆಯನ್ನು ಬ್ಯಾಂಕಿನವರು ದುರುಪಯೋಗಪಡಿಸಿಕೊಂಡಿದ್ದರೆಂದೂ ಅವನು ಮುಂದಿಟ್ಟ ವಾದವನ್ನು ಒಪ್ಪಿದ ನ್ಯಾಯಾಲಯ, ಸರ್ಕಾರ ಆರೋಪಗಳನ್ನು ಸಾಬೀತುಗೊಳಿಸುವಲ್ಲಿ ವಿಫಲವಾಗಿದೆಯೆಂದು, ಸರಿಯಾಗಿ ವಿಚಾರಣೆ ನಡೆಸಿಲ್ಲವೆಂದು ಹಾಗೂ ಅವನನ್ನು ಮರಳಿ ಸೇವೆಗೆ ತೆಗೆದುಕೊಂಡು ಹಿಂದಿನ ಪೂರ್ಣ ಅವಧಿಯ ವೇತನವನ್ನು ಪಾವತಿಸಲು ಮತ್ತು ಅಗತ್ಯವೆನಿಸಿದರೆ ಹೊಸದಾಗಿ ಇಲಾಖಾ ವಿಚಾರಣೆ ನಡೆಸಬಹುದೆಂದೂ ತಿಳಿಸಿತ್ತು. ಕಾರಿನಲ್ಲಿ ಟ್ರಿಮ್ಮಾಗಿ ಬಂದ ಖಲಂದರನನ್ನು ಜಿಲ್ಲಾಧಿಕಾರಿಯವರು ಸೇವೆಗೆ ತೆಗೆದುಕೊಳ್ಳಲೇಬೇಕಾಯಿತು ಮತ್ತು ಹಳೆಯ ಎಂಟು ವರ್ಷಗಳ ಸಂಬಳವನ್ನು ಅವನು ಕೆಲಸ ಮಾಡಿರದಿದ್ದರೂ ಅವನಿಗೆ ಕೊಡಲೇಬೇಕಾಯಿತು. ಅವನೋ ನಂತರದಲ್ಲಿ, ತನ್ನ ಪರವಾಗಿ ಇನ್ನೊಬ್ಬನನ್ನು ನೇಮಿಸಿಕೊಂಡು ಅವನಿಗೆ ತನ್ನ ಅರ್ಧ ಸಂಬಳ ಕೊಟ್ಟು ಬರವಣಿಗೆ ಕೆಲಸ ಮಾಡಿಸುತ್ತಿದ್ದ. ಸಂಬಳ ತೆಗೆದುಕೊಳ್ಳಲು ಮತ್ತು ಅನಿವಾರ್ಯ ಸಂದರ್ಭಗಳಲ್ಲಿ ಮಾತ್ರ ಅವನು ಕಛೇರಿಗೆ ಹೋಗುತ್ತಿದ್ದ. ಜಿಲ್ಲಾಧಿಕಾರಿಯವರು ಹೊಸದಾಗಿ ಇಲಾಖಾ ವಿಚಾರಣೆ ನಡೆಸುವ ಸಲುವಾಗಿ ಹೊಸದಾಗಿ ಆರೋಪ ಪಟ್ಟಿ ತಯಾರಿಸಲು ತಹಸೀಲ್ದಾರರಿಗೆ ಸೂಚಿಸಿದರು. ಹಳೆಯ ಕಡತಗಳನ್ನು ಪರಿಶೀಲಿಸಿ ಆರೋಪ ಪಟ್ಟಿ ತಯಾರಿಸಲು ನೋಡಿದರೆ ಸಂಬಂಧಿಸಿದ ಕಡತಗಳು, ದಾಖಲೆಗಳು ದೊರೆಯುವುದೇ ಕಷ್ಟವಾಗಿತ್ತು. ಹಿಂದಿನ ಇಲಾಖಾ ವಿಚಾರಣಾ ಕಡತದಿಂದಲೂ ಮುಖ್ಯವಾದ ಮೂಲ ದಾಖಲಾತಿಗಳೇ ಕಣ್ಮರೆಯಾಗಿದ್ದವು. ಅವರ ಮೇಲೆ ಇವರು, ಇವರ ಮೇಲೆ ಅವರು ತಪ್ಪು ಹೊರಿಸುತ್ತಲೇ, ಪತ್ರ ವ್ಯವಹಾರಗಳನ್ನು ಮಾಡುತ್ತಲೇ ವರ್ಷಗಳು ಉರುಳಿದವು. ಖಲಂದರನ ಆದರಾತಿಥ್ಯಗಳಿಗೆ ಮರುಳಾದವರು ಅವನ ಸಹಕಾರಕ್ಕೆ ನಿಂತಿದ್ದರು.  ಕ್ರಮೇಣ ಎಲ್ಲರಿಗೂ ವಿಷಯ ಮರೆತೇ ಹೋಯಿತು. ಅವನೂ ಪೂರ್ಣ ಸೇವೆ ಸಲ್ಲಿಸಿ ಸೇವಾನಿವೃತ್ತನೂ ಆದ, ಪಿಂಚಣಿಯನ್ನೂ ಪಡೆದ ಎಂಬಲ್ಲಿಗೆ ವ್ಯರ್ಥ ಇಲಾಖಾ ವಿಚಾರಣಾ ಪ್ರಸಂಗಗಳ ಈ ಅಧ್ಯಾಯ ಮುಗಿದುದು.

-ಕ.ವೆಂ.ನಾಗರಾಜ್.

ಬುಧವಾರ, ಮೇ 15, 2013

ರಾಷ್ಟ್ರೀಯ ಕಾರ್ಯಕ್ರಮಗಳು ರಾಜಕೀಯ ಕಾರ್ಯಕ್ರಮಗಳಾಗದಿರಲಿ!


     ೧೯೭೫-೭೭ರ ತುರ್ತು ಪರಿಸ್ಥಿತಿ ಕಾಲದಲ್ಲಿ, ಪತ್ರಿಕಾ ಸೆನ್ಸಾರ್ ಜಾರಿಯಲ್ಲಿದ್ದ ಕಾಲದಲ್ಲಿ ಪತ್ರಿಕೆಗಳು ಮತ್ತು ರೇಡಿಯೋಗಳಲ್ಲಿ ಕಾಂಗ್ರೆಸ್ ಪಕ್ಷ ಮತ್ತು ಅಂದಿನ ಪ್ರಧಾನಿ ಇಂದಿರಾಗಾಂಧಿಯ ಗುಣಗಾನ ಬಿಟ್ಟರೆ ಕಾಂಗ್ರೆಸ್ ವಿರೋಧಿ ಸುದ್ದಿಗಳಿಗೆ ಅವಕಾಶವೇ ಇರಲಿಲ್ಲ. ಆಗ ಕೇಳಿ ಬರುತ್ತಿದ್ದ ಒಂದು ಪ್ರಚಾರ ಗೀತೆ -'ಇಂದಿರಾಗಾಂಧಿಯ ಇಪ್ಪತ್ತಂಶದ ಕಾರ್ಯಕ್ರಮ, ಜನತೆಗೆ ಮಾಡಿದೆ ಬಾಳ್ ಸುಗಮ'- ಎಲ್ಲರಿಗೂ ಬಾಯಿಪಾಠವಾಗಿತ್ತು. ಆ ಇಪ್ಪತ್ತಂಶದ ಕಾರ್ಯಕ್ರಮಗಳಿಗೆ ಬೇಕಾದ ಹಣ ಬರುತ್ತಿದ್ದುದು ಸರ್ಕಾರದ ಖಜಾನೆಯಿಂದ, ಇಂದಿರಾಗಾಂಧಿಯವರಿಂದಲಾಗಲೀ, ಕಾಂಗ್ರೆಸ್ ಪಕ್ಷದಿಂದಲಾಗಲೀ ಅಲ್ಲ. ಹೆಸರು ಮಾತ್ರ ಅವರದು. ಅಲ್ಲಿಂದ ಪ್ರಾರಂಭವಾದ ಈ ಕೆಟ್ಟ ಪರಂಪರೆ ದೇಶವನ್ನು ಅಧೋಗತಿಗೆ ಒಯ್ಯುತ್ತಿದೆ. ವಿವಿಧ ರಾಜಕೀಯ ಪಕ್ಷಗಳು ತಮ್ಮ ಚುನಾವಣಾ ಪ್ರಣಾಳಿಕೆಗಳಲ್ಲಿ ಘೋಷಿಸುವ ಕಾರ್ಯಕ್ರಮಗಳನ್ನು ಅಧಿಕಾರಕ್ಕೆ ಬಂದ ನಂತರದಲ್ಲಿ ತಮ್ಮ ನೇತಾರರುಗಳ ಹೆಸರಿನಲ್ಲಿ ಜಾರಿಗಳಿಸಲು ಪ್ರಾರಂಭಿಸಿದವು. ಹಿಂದಿದ್ದ ಯೋಜನೆ, ಕಾರ್ಯಕ್ರಮಗಳನ್ನೇ ಅಲ್ಪ ಸ್ವಲ್ಪ ಬದಲಾವಣೆಗಳನ್ನು ಮಾಡಿ ತಮ್ಮದೇ ಕಾರ್ಯಕ್ರಮವೆಂಬಂತೆ ಬಿಂಬಿಸತೊಡಗಿದವು. ಇಂದು ಇಂದಿರಾಗಾಂಧಿ ಮತ್ತು ರಾಜೀವಗಾಂಧಿಯವರ ಹೆಸರಿನಲ್ಲಿ ದೇಶದಲ್ಲಿ ಎಷ್ಟು ಸರ್ಕಾರಿ ಸಂಸ್ಥೆಗಳು, ಯೋಜನೆಗಳು, ಕಟ್ಟಡಗಳು ಇವೆಯೋ ಅದರ ಲೆಕ್ಕ ಯಾರಿಗೂ ತಿಳಿದಿರಲಾರದು. ಕಾಂಗ್ರೆಸ್ಸೇತರ ಸರ್ಕಾರಗಳ ಕಥೆಯೂ ಇದೇ. ರಾಜ್ಯ ಸರ್ಕಾರಗಳೂ ಕೇಂದ್ರ ಸರ್ಕಾರದ ಹಿರಿಯಕ್ಕನ ಚಾಳಿಯನ್ನೇ ಮುಂದುವರೆಸಿಕೊಂಡು ಬರುತ್ತಿವೆ. ಜನಸಾಮಾನ್ಯನ ಪ್ರಾಥಮಿಕ ಅವಶ್ಯಕತೆಗಳನ್ನು ಪೂರೈಸುವುದಾದರೂ, ಸಂವಿಧಾನ ಬದ್ಧ ಕರ್ತವ್ಯಗಳನ್ನು ನಿರ್ವಹಿಸುವುದಾದರೂ ಅವುಗಳಿಗೆ ಪಕ್ಷಗಳ ಸಾಧನೆಯೆಂಬಂತೆ ಬಿಂಬಿಸುವ ಪ್ರವೃತ್ತಿ ದೇಶದ ಹಿತದೃಷ್ಟಿಯಿಂದ ಒಳ್ಳೆಯದಲ್ಲ. 
     ಜನಸಾಮಾನ್ಯರ ಪ್ರಾಥಮಿಕ ಅಗತ್ಯತೆಗಳಾದ ಕುಡಿಯುವ ನೀರು ಒದಗಿಸುವುದು, ಉತ್ತಮ ಶಿಕ್ಷಣ ಎಲ್ಲರಿಗೂ ಸಿಗುವಂತೆ ನೋಡಿಕೊಳ್ಳುವುದು, ಮೂಲಭೂತ ಸೌಕರ್ಯಗಳಾದ ಸಂಪರ್ಕ ರಸ್ತೆಗಳು, ಚರಂಡಿಗಳ ನಿರ್ಮಾಣ ಮತ್ತು ನಿರ್ವಹಣೆ, ಉತ್ತಮ ಆರೋಗ್ಯ ಪಾಲನೆ ಮತ್ತು ಸುಯೋಗ್ಯ ಚಿಕಿತ್ಸಾ ವ್ಯವಸ್ಥೆ, ಇತ್ಯಾದಿ ಹಲವು ಪ್ರಾಥಮಿಕ ಅಂಶಗಳನ್ನು ಮುಂದಿಟ್ಟುಕೊಂಡು ಎಲ್ಲಾ ರಾಜಕೀಯ ಪಕ್ಷಗಳವರೂ ಒಟ್ಟಾಗಿ ದೇಶಕ್ಕೆ ಒಂದು ಸಾಮಾನ್ಯ ಕಾರ್ಯಕ್ರಮ ರೂಪಿಸಬೇಕು. ಯಾವುದೇ ಪಕ್ಷದ ಸರ್ಕಾರ ಬಂದರೂ ಈ ಸಾಮಾನ್ಯ ಕಾರ್ಯಕ್ರಮಗಳನ್ನು ಜಾರಿಗೆ ತರಬೇಕಾದುದು ಅವುಗಳ ಮೂಲಭೂತ ಜವಾಬ್ದಾರಿಯಾಗಬೇಕು. ಈ ಕಾರ್ಯಕ್ರಮಗಳನ್ನು ಬದಲಾವಣೆ ಮಾಡಿ ಕಾಂಗ್ರೆಸ್ ಕಾರ್ಯಕ್ರಮ, ಬಿಜೆಪಿ ಕಾರ್ಯಕ್ರಮ, ಕಮ್ಯುನಿಸ್ಟ್ ಕಾರ್ಯಕ್ರಮ ಎಂದು ಹೇಳಬಾರದು. ಎಲ್ಲಾ ರಾಜಕೀಯ ಪಕ್ಷಗಳ ಅಧ್ಯಕ್ಷರುಗಳು ಈ ಸಾಮಾನ್ಯ ಕಾರ್ಯಕ್ರಮಗಳಿಗೆ ಬದ್ಧರಾಗಿರುತ್ತೇವೆಂದು ಸಹಿ ಮಾಡಬೇಕು. ನಮ್ಮ ಚುನಾವಣಾ ಆಯೋಗ ಇದನ್ನು ಏಕೆ ಕಡ್ಡಾಯ ಮಾಡಬಾರದು? ಚುನಾವಣಾ ಸಮಯಗಳಲ್ಲಿ ನೀತಿ ಸಂಹಿತೆ ಉಲ್ಲಂಘನೆಯಂತಹ ಪ್ರಕರಣಗಳು ಆಗ ಗಣನೀಯವಾಗಿ ಕಡಿಮೆಯಾದಾವು. ಜನರನ್ನು ಸೋಮಾರಿಗಳನ್ನಾಗಿಸುವ ಅಗ್ಗದ ಕಾರ್ಯಕ್ರಮಗಳಿಗೆ ಕಡಿವಾಣ ಬೀಳಬೇಕು. 'ಯಾರದೋ ದುಡ್ಡು, ಎಲ್ಲಮ್ಮನ ಜಾತ್ರೆ' ಎಂಬ ಗಾದೆಯಂತೆ ಈಗ ಜಾರಿಗೆ ತರಲು ಉದ್ದೇಶಿಸಿರುವ ಒಂದು ರೂಪಾಯಿಗೆ ೧ ಕೆ.ಜಿ. ಅಕ್ಕಿಯ ಕಾರ್ಯಕ್ರಮ (ಇದಕ್ಕೊಂದು ಪುಕ್ಕಟೆ ಪ್ರಚಾರ ಪಡೆಯುವ ಹೆಸರು ಇಡುತ್ತಾರೆ) ಸಹ ಮತಗಳಿಕೆಯ, ಜನರನ್ನು ಓಲೈಸುವ, ಸೋಮಾರಿಗಳನ್ನಾಗಿಸುವ, ಪ್ರಗತಿಯ ಬದಲು ಅವನತಿಗೆ ಜಾರಿಸುವ ಅಗ್ಗದ ಜನಪ್ರಿಯ ಕಾರ್ಯಕ್ರಮವೆನ್ನದೆ ವಿಧಿಯಿಲ್ಲ. ಇಂತಹ ಕಾರ್ಯಕ್ರಮಗಳು, ಯೋಜನೆಗಳನ್ನು ಮಾಡಬಯಸಿದರೆ ರಾಜಕೀಯ ಪಕ್ಷಗಳು, ರಾಜಕೀಯ ಪುಡಾರಿಗಳು ಅವರದೇ ಹಣ ಬಳಸಿ ಮಾಡಲಿ ಮತ್ತು ಅವರ ಹೆಸರುಗಳನ್ನೇ ಬಳಸಲಿ. 
     ಯಾವುದೇ ಒಬ್ಬ ವ್ಯಕ್ತಿ ಹಳ್ಳಿಯೊಂದರಲ್ಲಿ ಸಾಯುವ ಸ್ಥಿತಿಯಲ್ಲಿದ್ದಾನೆ ಎಂದರೆ ಅವನನ್ನು ರಕ್ಷಿಸುವ ಹೊಣೆ ಸರ್ಕಾರದ್ದಾಗಿರುತ್ತದೆ. ಅವನು ಕಾಂಗ್ರೆಸ್ ಪಕ್ಷದವನು, ಬಿಜೆಪಿಯವನು, ಕಮ್ಯೂನಿಸ್ಟ್, ಸಮಾಜವಾದಿ ಪಕ್ಷದವನು, ಆ ಜಾತಿಯವನು, ಈ ಧರ್ಮದವನು, ಇತ್ಯಾದಿ ನೋಡಬೇಕೇ? ಉತ್ತಮ ನೈರ್ಮಲ್ಯ ಪಾಲನೆಗೂ, ಒಳ್ಳೆಯ ಸಂಪರ್ಕ ಸಾಧನಗಳನ್ನು ಕಲ್ಪಿಸುವುದಕ್ಕೂ ರಾಜಕೀಯ ಬೆರೆಸಬೇಕೇ? ಕೆಲವು ಮಕ್ಕಳು ಕಾರುಗಳಲ್ಲಿ ಶಾಲೆಗಳಿಗೆ ಹೋಗುತ್ತಿದ್ದರೆ, ಕೆಲವರು ಶಿಕ್ಷಣ ವಂಚಿತರಾಗಿ ತುತ್ತು ಕೂಳಿಗೂ ಪರದಾಡುವ ಸ್ಥಿತಿಯಲ್ಲಿರಬೇಕೇ? ಹೆಚ್ಚಿನ ಆರೋಗ್ಯದ ಸಮಸ್ಯೆಗಳು ಉಂಟಾಗುವುದು ಒಳ್ಳೆಯ ಕುಡಿಯುವ ನೀರಿನ ಪೂರೈಕೆಯ ಕೊರತೆಯಿಂದಲ್ಲವೇ? ಕುಡಿಯುವ ನೀರಿನ ಪೂರೈಕೆ ಒದಗಿಸುವುದು ಎಲ್ಲಾ ಸರ್ಕಾರಗಳ ಕರ್ತವ್ಯವಲ್ಲವೇ? ನಿರ್ದಿಷ್ಟ ರಾಜಕೀಯ ಪಕ್ಷಕ್ಕೆ ಮತ  ನೀಡಿದರೆ ಮಾತ್ರ ಈ ಸಮಸ್ಯೆಗೆ ಪರಿಹಾರ ಸಿಗುವುದೆಂದು ಹೇಳಿ ಮತ ಕೇಳುವುದು ಎಷ್ಟು ಸರಿ? ನೈರ್ಮಲ್ಯದ ಸಮಸ್ಯೆಗೆ ಪರಿಹಾರ ರೂಪಿಸುವುದಕ್ಕೆ ಯಾವ ಕಾನೂನು ಬೇಕು? ಯಾವ ಕ್ರಾಂತಿ ಆಗಬೇಕು? ಮಾಡಬೇಕೆಂಬ ಮನಸ್ಸು ಇದ್ದರೆ ಸಾಕಲ್ಲವೇ? ಇಂತಹ ಸಂಗತಿಗಳನ್ನು ಸೇರಿಸಿ ಒಂದು ಸಾಮಾನ್ಯ ರಾಷ್ಟ್ರೀಯ ಕಾರ್ಯಕ್ರಮ ರೂಪಿಸಲು ಒತ್ತಡ ತರಬೇಕಿದೆ. ರಾಜಕೀಯ ಧುರೀಣರ, ಪಕ್ಷಗಳ ನಾಯಕರ ಹೆಸರಿನಲ್ಲಿ ಸರ್ಕಾರದ ಹಣ ಬಳಸಿ ವಿವಿಧ ಸರ್ಕಾರಿ ಯೋಜನೆಗಳಿಗೆ ಅವರುಗಳ ಹೆಸರಿಡುವುದನ್ನು ಮೊದಲು ನಿಷೇಧಿಸಬೇಕು. ಈಗ ಅಂತಹ ರಾಜಕೀಯ ನಾಯಕರುಗಳ ಹೆಸರಿನಲ್ಲಿ ಇರುವ ಸರ್ಕಾರೀ ಸಂಸ್ಥೆಗಳ ಹೆಸರುಗಳಲ್ಲಿ ಸ್ವಾತಂತ್ರ್ಯಾನಂತರದ ರಾಜಕೀಯ ನಾಯಕರ ಹೆಸರುಗಳನ್ನು ಕಿತ್ತುಹಾಕಬೇಕು. ಚುನಾವಣಾ ಆಯೋಗ ಮತ್ತು ಜನಸಾಮಾನ್ಯರ ಹಿತ ಬಯಸುವ ನೇತಾರರು ಇತ್ತ ಗಮನ ಹರಿಸಬೇಕು.
     ಇಂತಹ ಅಗ್ಗದ ಪ್ರಚಾರ ಪಡೆದುಕೊಳ್ಳುವ ಪ್ರವೃತ್ತಿ ಇಂದು ಯಾವ ಹಂತಕ್ಕೆ ತಲುಪಿದೆಯೆಂದರೆ ಸಂಸದರ, ಶಾಸಕರ ಹೆಸರಿನಲ್ಲಿ ಸರ್ಕಾರಿ ಅನುದಾನಗಳು ಬಿಡುಗಡೆಯಾಗುತ್ತವೆ. ಜಿಲ್ಲಾ ಪಂಚಾಯಿತಿ, ಗ್ರಾಮ ಪಂಚಾಯಿತಿಗಳಲ್ಲಿಯೂ ಕೂಡ ಸದಸ್ಯರ ಹೆಸರುಗಳಲ್ಲಿ, ಅವರುಗಳು ಬಯಸಿದಂತೆ ಅನುದಾನಗಳು ಬಿಡುಗಡೆಯಾಗುತ್ತವೆಯೇ ಹೊರತು ಜನರ ಅಗತ್ಯ, ಅವಶ್ಯಕತೆಗಳಿಗನುಸಾರವಾಗಿ ಅಲ್ಲ. ಅದರಲ್ಲೂ ರಾಜಕೀಯ ತಾರತಮ್ಯವಿರುತ್ತದೆ. ಅವರುಗಳು ಬಯಸುವ ಕಾರ್ಯಕ್ರಮಗಳಿಗೆ ಮಾತ್ರ ಅವುಗಳು ಬಳಕೆಯಾಗುತ್ತಿವೆ. ಸಮುದಾಯ ಭವನದ ಹೆಸರಿನಲ್ಲಿ ಕಟ್ಟುವ ಕಟ್ಟಡಗಳಿಗೂ ಸಹ ಅಂತಹ ಹಣ ಹೋಗುತ್ತಿದೆ. ನಂತರದಲ್ಲಿ ಅವು ಕಲ್ಯಾಣ ಮಂಟಪಗಳಾಗಿ ಖಾಸಗಿಯವರು ಹಣ ಮಾಡಿಕೊಳ್ಳುವುದರಲ್ಲಿ ಅಂತ್ಯವಾಗುತ್ತಿದೆ. ಕೇವಲ ಮತಗಳಿಕೆ ದೃಷ್ಟಿಯಿಂದ ಅಗ್ಗದ ಜನಪ್ರಿಯ ಕಾರ್ಯಕ್ರಮಗಳು ಜಾರಿಯಾಗುತ್ತಿದ್ದು, ಅವುಗಳಿಂದ ಸರ್ಕಾರದ ಬೊಕ್ಕಸದಿಂದ ಜನಸಾಮಾನ್ಯರ ಕೋಟಿಗಟ್ಟಲೆ ಹಣ ಲೂಟಿಯಾಗುತ್ತಿದೆ. ಇಂತಹ ಕಾರ್ಯಕ್ರಮಗಳು ನೈಜ ಫಲಾನುಭವಿಗಳಿಗೆ ತಲುಪುವುದರಲ್ಲಿ ಎಷ್ಟರಮಟ್ಟಿಗೆ ಸಫಲವಾಗುತ್ತವೆ ಎಂಬುದು ಎಲ್ಲರಿಗೂ ತಿಳಿದದ್ದೇ.
     ಅಣ್ಣಾ ಹಜಾರೆಯವರು ಒಮ್ಮೆ ಮಾತನಾಡುತ್ತಾ, "ಆಡಳಿತದಲ್ಲಿ ಜನರು ಪಾಲುಗೊಳ್ಳುವುದು ಎಂದರೆ ಏನು?" ಎಂದು ಪ್ರಶ್ನಿಸಿ ತಾವೇ ಕೊಟ್ಟಿದ್ದ ಉತ್ತರವೆಂದರೆ, "ಆಡಳಿತದಲ್ಲಿ ಜನರು ಪಾಲುಗೊಳ್ಳುವುದು ಅನ್ನುವುದು ಸರಿಯಲ್ಲ; ಜನರ ಕಾರ್ಯಕ್ರಮದಲ್ಲಿ ಸರ್ಕಾರ ಪಾಲುಗೊಳ್ಳುವುದು." ಹೀಗಾಗಬೇಕೆಂದರೆ ಜನರು ಜಾಗೃತರಾಗಿರಬೇಕು. ರಾಜಕೀಯ ನಾಯಕರುಗಳು ಜನರ 'ನಾಯಕ'ರಾಗದೆ, 'ಸೇವಕ'ರಾಗಬೇಕು. ಸರ್ವಸಮ್ಮತ, ಮೂಲಭೂತ ಅತ್ಯಗತ್ಯ ಜನಪರ ಕಾರ್ಯಕ್ರಮಗಳು ಯಾವುದೇ ರಾಜಕೀಯ ಪಕ್ಷದ, ನೇತಾರರ ಕಾರ್ಯಕ್ರಮಗಳೆನಿಸದೆ ರಾಷ್ಟ್ರೀಯ ಕಾರ್ಯಕ್ರಮಗಳೆನಿಸಲಿ; ಈ ಕುರಿತು ಜನಜಾಗೃತಿ ಮೂಡಿಸುವ ಕೆಲಸ ಎಲ್ಲಾ ಪ್ರಜ್ಞಾವಂತರು ಮಾಡಲಿ ಎಂದು ಆಶಿಸೋಣ.
-ಕ.ವೆಂ.ನಾಗರಾಜ್.

ಶುಕ್ರವಾರ, ಮೇ 10, 2013

ನೈವೇದ್ಯದ ಪರಿಯೇನೆಂಬೆನೋ!


     ೧೮ನೆಯ ಶತಮಾನದ ಕೆಳದಿ ಕವಿ ಲಿಂಗಣ್ಣನ 'ಶಿವಪೂಜಾ ದರ್ಪಣ' ವೈಶಿಷ್ಟ್ಯಗಳಿಂದ ಕೂಡಿದ ಶಿವಪೂಜಾವಿಧಿಗಳನ್ನು ವಿವರಿಸುವ ಚಂಪೂಕಾವ್ಯವಾಗಿದ್ದು, ಒಂದು ಅನುಪಮ ಕೃತಿ. ಸಾಂಪ್ರದಾಯಿಕ ಪೂಜಾ ವಿಧಿ-ವಿಧಾನಗಳನ್ನು ಅನುಸರಿಸುವವರಿಗೆ ಇದು ಉತ್ತಮ ಕೊಡುಗೆ. ಐದು ಆಶ್ವಾಸಗಳುಳ್ಳ ಈ ಕೃತಿಯ ಪ್ರಥಮಾಶ್ವಾಸದಲ್ಲಿ ಪೀಠಿಕೆ, ದ್ವಿತೀಯಾಶ್ವಾಸದಲ್ಲಿ ಪೂಜಾಮಂಟಪ ಪೂಜೆ, ಪೀಠಾರೋಹಣ, ಉಪಚಾರಗಳ ವರ್ಣನೆ, ತೃತೀಯಾಶ್ವಾಸದಲ್ಲಿ ವಿವಿಧ ಪೂಜೋಪಚಾರಗಳು, ಪಂಚಾಮೃತಾಭಿಷೇಕ, ಆಚಮನ, ನಾಮಾವಳಿಗಳೊಂದಿಗೆ ಅರ್ಚನೆ, ಇತ್ಯಾದಿಗಳ ವಿವರಗಳಿದ್ದರೆ ನಾಲ್ಕನೆಯ ಆಶ್ವಾಸದಲ್ಲಿ ಧೂಪ, ದೀಪಗಳೊಂದಿಗೆ ವಿವಿಧ ಭಕ್ಷ್ಯ ಭೋಜ್ಯಗಳು, ಫಲರಸಾಯನಾದಿ ಬಹುವಿಧ ನೈವೇದ್ಯಗಳೊಂದಿಗೆ ಉಪಚಾರ ನಡೆಸುವ ಕ್ರಿಯೆಯ ವರ್ಣನೆಯಿದೆ. ಐದನೆಯ ಆಶ್ವಾಸದಲ್ಲಿ ವಿವಿಧ ರೀತಿಯ ಮಂಗಳಾರತಿ, ಷೋಡಶೋಪಚಾರಗಳ ವಿವರಗಳಿವೆ. 
     ಒಟ್ಟು ೫೮೫ ಕಂದವೃತ್ತ, ವಚನ ಗದ್ಯಗಳಿಂದ ಕೂಡಿರುವ ಈ ಕೃತಿಯಲ್ಲಿ ವಿವಿಧ ಬಗೆಯ ನೈವೇದ್ಯಗಳನ್ನು ಸಮರ್ಪಣೆ ಮಾಡುವುದಕ್ಕೆ ಸಂಬಂಧಿಸಿ ೧೧೯ ಕಂದ ಪದ್ಯಗಳನ್ನು ಕವಿ ರಚಿಸಿದ್ದಾನೆ. ಕಂಡು ಕೇಳರಿಯದ ಭಕ್ಷ್ಯ ಭೋಜ್ಯಗಳ ವರ್ಣನೆ ಬಾಯಲ್ಲಿ ನೀರೂರಿಸುವಂತಿದೆ. ಎಷ್ಟೋ ಪದಾರ್ಥಗಳು ಹೇಗಿರುತ್ತವೆ, ಅವು ಏನು, ಹೇಗೆ ಮಾಡುತ್ತಾರೆ ಎಂಬುದು ಈಗಿನವರಿಗೆ ತಿಳಿಯುವುದಿಲ್ಲ. ಕವಿ ನೈವೇದ್ಯ ಸಮರ್ಪಣೆಯ ಕುರಿತು ಆರಂಭದಲ್ಲಿ ಹೀಗೆ ಹೇಳುತ್ತಾನೆ:

ತಾವರೆಗಣ್ಣನ ಕಣ್ಮಲ |
ರ್ದಾವರೆಯರ್ಚನೆಯನೊಪ್ಪುವಡಿದಾವರೆಯಂ ||
ತಾವರೆವಗೆ ಗೆರೆದಲೆಯಂ 
ತಾವರೆಗೋಲನ ಮದಾಪಹಾರ ಪೊರೆಗೆಮ್ಮಂ || (ಶಿ.ಪೂ.ದ. ೪.೧.)

ಮಿರುಪೀಯಾಶ್ವಾಸದೊಳಂ |
ವರಧೂಪ ಸುದೀಪಮುಖ ಸದುಪಚಾರಗಳಿಂ ||
ಪರಮೇಶ್ವರನಂ ಪೂಜಿಪ |
ಪರಿವಿಡಿಯಂ ಪೇಳ್ವೆನಾಲಿಪುದು ಸುಜನರ್ಕಳ್ || (ಶಿ.ಪೂ.ದ. ೪.೨.)

    ಸಕಲ ಭಕ್ಷ್ಯಗಳನ್ನು ಸ್ವೀಕರಿಸಿ ಹರಸಲು ಭಕ್ತ ಬೇಡುತ್ತಾನೆ. ಸುರುಚಿರ ದುಗ್ಧವಿಪಾಚಿತ ವರ ಸದ್ಯೋಘೃತ ಶಿತಾಂಚಲದೇಲಾಚೂರ್ಣೋತ್ಕರ ಮಿಳಿತ ದಿವ್ಯಶಾಲೀ ಪರಮಾನ್ನ, ಸದ್ಯೋಘೃತ ಯುಕ್ಪರಿಮಳ ಶಾಲ್ಯಾನ್ನ, ಪವಣಿಂ ಪಚಿಸಿ ನಿಶಾಚೂರ್ಣವನುರು ಸೈಂಧವನಿಕ್ಕಿ ಹಿಂಗಿನ ರಸದಿಂತವೆ ವಾಸಿಸಿರ್ದ ಸೂಪ (ವಿವಿಧ ಲವಣ, ಮಸಾಲೆ ಸಾಮಗ್ರಿಗಳನ್ನು ಬಳಸಿ ಮಾಡಿದ ರಸ), ಹಪ್ಪಳ, ಸಂಡಿಗೆ, ಬಾಳುಕ, ಪೊಸಮೆಣಸುಪ್ಪನಿಕ್ಕಿ ಹದವಾಗಿ ಕಾಸಿ ಹಿಂಗಿಸಿ ಕರಿಬೇವನಿಕ್ಕಿ ತಿಲತೈಲ ಸುಸರ್ಷಪ ನವ್ಯ ಜೀರಕ ಪ್ರಸರ ಸಹಿತ ಮಾಡಿದ ತಿಂತ್ರಿಣೀ ರಸದ ಸುರುಂಕು, ರಾಮಠ, ಸರ್ಷಪ, ಜೀರಕ ಹೇಮಾಭ ಸುಮೇಧಿ (ವಿವಿಧ ಮಸಾಲೆ ಪದಾರ್ಥಗಳು, ಕಾಳುಗಳು)ಗಳಿಗೆ ತುಪ್ಪದ ಒಗ್ಗರಣೆ ಹಾಕಿ ಮಾಡಿದ ಆಹಾರ, ಸುಲಲಿತ ಸಾಂದ್ರ ಬಿಂಬ ಮುರುವಲುಕೋಜ್ವಲತರ ಕಾರ ವಲ್ಲಿ ಕದಳೀ  . . ಪಟೋಳ ಕಂಗೆಳಸು ಸುತಿಕ್ತ ಬಿಂಬ ಪನಸಂ ಮಡುವಾಗಲಮೆಂಬ ಶಾಕಸಂಕುಲ, ಮಜ್ಜಿಗೆಯ ಪಸಿಯ ಕಟ್ಟಿನ ಸಜ್ಜಿನ ಪಳದ್ಯ, ಕಾಯಿ ಬಜ್ಜಿ, ಪೊಂದೊವರಿಲುಗ್ಗಿಯ ಪಜ್ಜಳ, ಕಜಿಪುಗಳು, ಗೋಧೂಮಕ ತಂಡುಲಾದ್ವಚಣಕೋದ್ಯನ್ಮಾಷ ಮುದ್ಗ, ಇತ್ಯಾದಿ ಧಾನ್ಯೋತ್ಕರ ನಾಳಿಕೇರ ತವ ಖರ್ಜೂರಾಜ್ಯ ದುಗ್ಧಸಹಿತ, ಕರ್ಪೂರಕ, ಪುಷ್ಪಲಸದೇಲಾಚೂರ್ಣ (ಏಲಕ್ಕಿಪುಡಿ) ಹಾಕಿ ಮಾಡಿದ ಭಕ್ಷ್ಯ, ಎರೆಯಪ್ಪ, ಪೋಳಿಗೆ, ಕಚೋರಿ, ನೀರೊತ್ತಿಗೆ, ಚಿಲ್ಲಪ್ಪ, ಜಿಲೇಬಿ, ಗಾರಿಗೆ, ಮಂಡಿಗೆ, ಎಂಣ್ಣೂರಿಗೆ, ಗೂಳೂರಿ ಜೇನ ಸಕ್ಕರೆಗುಳ್ಳಂಪೂರಿಗೆ, ಬೀಸೂರಿಗೆ, ಪೊಸಪೂರಿ, ಸಕ್ಕರೆ ಬರಡೆಯುಮೆಸೆವ ಪೇಣಿ, ಬೇಳ್ಪೋಳಿಗೆ, ಸುರುಳಿ, ಮದುನಾಳ, ಕಪ್ಪುರನಾಳ, ವಡೆ, ಹೂರಣ, ತಿಲ ತೆಂಗಾಯ್ಗಡುಬು, ಇಡ್ಢಳಿಗೆಯುಂಡೆ, ಆಂಬೊಡೆ, ಪಾಲ್ಗಡುಬು, ಎಲೆಗಡುಬು, ಉದ್ದಿನ ನಲ್ಗಡುಬು, ಕೊಟ್ಟೆಯ ಕಡುಬು, ಗೋಧಿ ರೊಟ್ಟಿ, ಕಡಲೆಗಡುಬು, ಪೊಯ್ಗಡುಬು, ವೃತ್ತಾಸು, ಮುಳುಕ, ಗೇರ್ವೀಜದ ಸೋಮಿಯ ಸುಮುದ್ಗಗೋಧೂಮದ ತಿಲರಾಜಿಯ ಸೇವಗೆಯ ಅಭಿನವ ಲಾಜದ ಲಡ್ಡುಗೆ, ಪಾಲೌಗು, ತೊಡಹದೌಗು, ತೆಳ್ಳೌಗು ದೋಸೆ, ಸಕ್ಕರೆ ತೆಂಗಾಯ್ಪಾಲೊಳ್ಸೇವಿಗೆ, ಕಾಂಡವೆಯ ಮೋದಕ, ಎಳ್ಳುಂಡೆ, ಕೆಂಡಗರ್ಜಿ, ಕಾಯ್ಪಾಲುಂಡೆ, ತೊಳೆಯುಂಡೆ, ಸುಕ್ಕಿನುಂಡೆ, ಪಲಸವಣ್ಗಡುಬು, ಚಕ್ಕುಲಿ, ಕರುಂಜಿಕಾಯಿ, ತಂಬಿಟ್ಟು, ಪಂಚಕಜ್ಜಾಯ, ನನೆಗಡಲೆ, ಚಿಗುಳಿ, ಈ ಭಕ್ಷ್ಯಗಳನ್ನು ಸವಿಯಲು ಹೆರೆದುಪ್ಪ, ತಿಳಿದುಪ್ಪ, ನೊರೆದುಪ್ಪ, ಕಡಿದುಪ್ಪ, ನೀರ್ಮಳಲ್ದುಪ್ಪ, ಕೆನೆಹಾಲು, ಮೊಸರು, ಜೇನುತುಪ್ಪ, ಬೆಣ್ಣೆ, ಖಂಡಶರ್ಕರೆ, ತನಿವಾಲು, ನೊರೆವಾಲು, ಸರಳಿಗೆ, ಚಾರು ಕದಳೀ ಫಲಾಮೃತಸಾರ ಸುಶರ್ಕರಾಜ್ಯಾನ್ವಿತ ಗೋಕ್ಷೀರ, ಮುದ್ಗಾನ್ನ, ಜಂಬೀರರಸಾನ್ನ, ಘೃತಾನ್ನ, ಮಾಷ ಹಾರಿದ್ರಾನ್ನ, ನವನೀತಾನ್ನ, ಕಲಸೋಗರ (ಕೋಸಂಬರಿ), ಬಾಳೆಯ ಪಣ್ಗಳ ಸೀಕರಣೆ, ಜಂಬುಕಪಿತ್ಥಾಮ್ರಂ ದಾಳಿಂಬ ಪನಸ ಕದಳಿ ನಾಳಿಕೇರ ದ್ರಾಕ್ಷಿ, ಖರ್ಜೂರ, ಇತ್ಯಾದಿ ಫಲಗಳು, ಚತುರ್ವಿಧ ಮಧುರಸ, ಎಳೆಯ ನಾಳಿಕೇರ ರಸ, ಬೆಳಲ್ಪಣ್ಣಿನಿಮಾವಿನ ಪಣ್ಣರಸಾಯನ, ಕರ್ಪೂರ, ಏಲಕ್ಕಿ, ಇತ್ಯಾದಿಗಳನ್ನು ಬೆರೆಸಿದ ಶರ್ಕರೋದಕ, ಅಂಬಲಿಗಡಲೆ, ಕಟ್ಟುಮೊಸರು, ಕೆನೆಮೊಸರು, ಗಡ್ಡೆಮೊಸರು, ಉಪ್ಪು, ಎಳ್ಳು, ಇಂಗು, ಪನಿಶಾಧಾನ್ಯಾಕಪತ್ರಗಳು, ಮೆಂತ್ಯ ಮುಂತಾದ ಕಾಳುಗಳು, ವಿವಿಧ ಸಾಮಗ್ರಿಗಳನ್ನು ಸೇರಿಸಿದ ಸಮುಲ್ಲಸಲ್ಲವನಶಾಕ, ವಿವಿಧ ಉಪ್ಪಿನಕಾಯಿಗಳು, ಬಗೆ ಬಗೆ ಪಚ್ಚಡಿಗಳು, ಪಿಂಡಿಗಳು, ಕಚ್ಚಡಿ ಮೆಳಸೇಲಕಿಗೆರೆಗುಚ್ಚದ ಕಾಳ್ಗಳು, ಜಂಬೀರರಸ, ಸೈಂಧವ, ಸೇಲಕಿ ಕೊತ್ತುಂಬರಿ ಕರಿಬೇವು ಹಾಕಿ ಮಾಡಿದ ಸ" ಮಜ್ಜಿಗೆ,  . . . .ಅಬ್ಬಬ್ಬಾ! ಕವಿ ವಿವರಿಸಿದ ಭಕ್ಷ್ಯಗಳು, ಅದರಲ್ಲಿ ಸೇರಿಸಿದ ಪದಾರ್ಥಗಳ ವಿವರಣೆಗಳನ್ನು ಮೂಲಕಾವ್ಯದಲ್ಲೇ ಓದಿದರೆ ಅದರ ಸೊಗಸೇ ಬೇರೆ. ಅಲ್ಲಿ ಹೇಳಿದ ಇನ್ನೂ ಅನೇಕ ಖಾದ್ಯಗಳ ವಿವರ ಇಲ್ಲಿ ಹೇಳಿಲ್ಲ. ಊಟದ ನಂತರದಲ್ಲಿ ವಿವಿಧ ತಾಂಬೂಲಗಳ ಅರ್ಪಣೆ, ವಿವಿಧ ಫಲಗಳ ಅರ್ಪಣೆ, ಉಯ್ಯಾಲೆಗಳ ಸೇವೆಯ ಅರ್ಪಣೆ, ವಿವಿಧ ಆಭರಣಗಳ ಅರ್ಪಣೆ, ಇತ್ಯಾದಿಗಳ ವರ್ಣನೆಗಳನ್ನು ಕವಿ ಮಾಡಿದ್ದಾನೆ. ಕವಿಯ ಕೊನೆಯ ಬೇಡಿಕೆಯಿದು:

ಪರಮೇಶ್ವರ ಬಿನ್ನಪಮಿಂ |
ತುರುತರ ಸದ್ಭಕ್ತಿಂದೆ ನಿಮಗರ್ಪಿಸಿದೀ ||
ಪರಿಯ ಬಹುವಿಧದ ಕಾಣ್ಕೆಯ |
ಮಿರುಪಖಿಲ ಪದಾರ್ಥಚಯವನಂಗೀಕರಿಸೈ || (ಶಿ.ಪೂ.ದ. ೪.೧೧೫.)

ನಿನ್ನಡಿಯ ದಾಸ ನಾಂ ಕರ |
ಮೆನ್ನೀ ಸ್ತ್ರೀಪುತ್ರಗೇಹ ಪಶು ಸರ್ವಸ್ವಂ ||
ನಿನ್ನದು ಕೃಪೆಯಿರಬೇಕೀ |
ಬಿನ್ನಪಗಳನಾಲಿಸೀಶ ಪನ್ನಗಭೂಷಾ || (ಶಿ.ಪೂ.ದ. ೪.೧೧೬.)

     ಕೆಳದಿ ಲಿಂಗಣ್ಣಕವಿಯ ಕಾವ್ಯವೈಭವವನ್ನು ಓದಿಯೇ ಅನುಭವಿಸಬೇಕು. ಅನುಪಮ ಕವಿಗೆ ಪ್ರಣಾಮಗಳು.
-ಕ.ವೆಂ.ನಾಗರಾಜ್.