ನನ್ನ ಬಗ್ಗೆ

ನನ್ನ ಫೋಟೋ

ನಿವೃತ್ತ ತಹಸೀಲ್ದಾರ್, ಕೆಳದಿ ಕವಿಮನೆತನದ ಪತ್ರಿಕೆ 'ಕವಿಕಿರಣ'ದ ಸಂಪಾದಕ.
ನನ್ನ ಕೃತಿಗಳು: 1.ಕವಿಸುಬ್ರಹ್ಮಣ್ಯಯ್ಯ - ಒಂದು ಜೀವಗೀತೆ (ವ್ಯಕ್ತಿ ಚಿತ್ರಣ), 2. ಮೂಢ ಉವಾಚ - ಮುಕ್ತಕಗಳು, 3. ಆದರ್ಶದ ಬೆನ್ನು ಹತ್ತಿ . .
ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಮಂಗಳವಾರ, ಜುಲೈ 21, 2015

ಅನ್ನಭಾಗ್ಯವೂ, ತಳಪಾಯ ಸರಿಯಿರದ ಕಟ್ಟಡವೂ!


     ಅನ್ನಭಾಗ್ಯ ಯೋಜನೆಯನ್ನು ಸಮರ್ಥಿಸುವ ಮತ್ತು ವಿರೋಧಿಸುವ ಅನೇಕ ಲೇಖನಗಳು, ಪ್ರತಿಷ್ಠಿತರೆನಿಸಿಕೊಂಡವರ ಹೇಳಿಕೆಗಳು, ಪ್ರತಿಹೇಳಿಕೆಗಳು ಎಲ್ಲರ ಗಮನ ಸೆಳೆಯುತ್ತಿವೆ. ಎರಡೂ ಕಡೆಯವರ ವಾದಗಳಲ್ಲಿ ಹುರುಳೂ ಇದೆ, ಜೊಳ್ಳೂ ಇದೆ. ಆದರೆ ಸಮರ್ಥಿಸುವ ಮತ್ತು ವಿರೋಧಿಸುವ ಭರದಲ್ಲಿ ಕಟು ವಾಸ್ತವತೆಯನ್ನು ಕಡೆಗಾಣಿಸುತ್ತಿರುವುದು ವಿಪರ್ಯಾಸವಾಗಿದೆ. ತುತ್ತು ಅನ್ನಕ್ಕೂ ಪರದಾಡುವವರಿಗೆ ಅನ್ನ ಒದಗಿಸುವುದು ಎಷ್ಟು ಅಗತ್ಯವೋ, ಅಷ್ಟೇ ಅಗತ್ಯ ಅವರುಗಳು ಅನ್ನ ಸಂಪಾದಿಸಲು ಅಗತ್ಯವಾದ ಉದ್ಯೋಗಾವಕಾಶಗಳನ್ನು ಒದಗಿಸುವುದೂ ಆಗಿದೆ. ಯಾವುದೇ ಯೋಜನೆಯನ್ನು ಜಾರಿಗೊಳಿಸುವ ಮುನ್ನ ಅದರ ಸಾಧಕ-ಬಾಧಕಗಳನ್ನು ಪರಿಗಣಿಸಬೇಕು, ಪೂರ್ವ ತಯಾರಿ ಸಮರ್ಪಕವಾಗಿರಬೇಕು. ಆದರೆ ಯೋಜನೆಗಳನ್ನು ಕೇವಲ ಜನಾಕರ್ಷಣೆಯ ಸಲುವಾಗಿ, ಮತ ಗಳಿಸುವ ಸಾಧನಗಳಾಗಿ ಘೋಷಿಸುತ್ತಿರುವುದು ಸುಯೋಗ್ಯ ಆಡಳಿತದ ಲಕ್ಷಣವಂತೂ ಅಲ್ಲ. ಅನ್ನಭಾಗ್ಯ ಯೋಜನೆಯೂ ಸಹ ಅಗ್ಗದ ಜನಪ್ರಿಯತೆಯ ದೃಷ್ಟಿಯಿಂದ ಜಾರಿಗೊಳಿಸಲಾಗುತ್ತಿದೆ ಎಂದು ಹೇಳಬೇಕಾದ ವಸ್ತುಸ್ಥಿತಿ ಇರುವುದು ವಿಷಾದದ ಸಂಗತಿಯಾಗಿದೆ.
     ಬಡತನದ ರೇಖೆಗಿಂತ ಕೆಳಗಿರುವವರು (ಬಿಪಿಎಲ್) ಎಂದರೆ ದಿನನಿತ್ಯದ ಅಗತ್ಯಕ್ಕೆ ಬೇಕಾದ ಆಹಾರ ಮತ್ತು ಇತರ ಅತ್ಯಾವಶ್ಯಕ ಸಂಗತಿಗಳನ್ನು ಹೊಂದಿಸಿಕೊಳ್ಳಲು ತಕ್ಕಂತೆ ಆದಾಯ ಹೊಂದದವರು ಎಂಬುದು ಸಾಮಾನ್ಯ ವಿವರಣೆಯಾಗುತ್ತದೆ. ಇಂತಹ ಕುಟುಂಬಗಳನ್ನು ಗುರುತಿಸಲು ಬೇಕಾದ ರೀತಿ-ನೀತಿಗಳು ಒಂದೊಂದು ರಾಜ್ಯದಲ್ಲಿ ಒಂದೊಂದು ರೀತಿಯಾಗಿವೆ. ಒಪ್ಪೊತ್ತಿನ ಗಂಜಿಗೂ ಗತಿಯಿಲ್ಲದ, ಉದ್ಯೋಗಾವಕಾಶವೂ ಲಭ್ಯವಿರದ ಸಾವಿರಾರು ಕುಟುಂಬಗಳು ಇವೆ. ಇವರುಗಳನ್ನು ಗುರುತಿಸಿ ಬಡತನ ನಿರ್ಮೂಲನೆಗೆ ಕ್ರಮ ವಹಿಸುವುದು ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಜವಾಬ್ದಾರಿಯಾಗಿದೆ. ಸುಪ್ರೀಮ್ ಕೋರ್ಟಿನ ನಿರ್ದೇಶನದಂತೆ (ಪ್ರಕರಣ ಸಂ. ಸಂಖ್ಯೆ (ಸಿ).೧೯೬/೨೦೦೧)  ಪಡಿತರ ಅವ್ಯವಸ್ಥೆ ಸರಿಪಡಿಸುವ ದಿಕ್ಕಿನಲ್ಲಿ ಅನುಸರಿಸಬೇಕಾದ ಕ್ರಮಗಳ ಕುರಿತು ರಚಿತವಾದ ವಾಧ್ವಾ ಸಮಿತಿ ವಿವರವಾದ ವರದಿ ಸಲ್ಲಿಸಿದ್ದು, ಆ ವರದಿಯಂತೆ ಕ್ರಮ ಅನುಸರಿಸಲು ಸರ್ವೋಚ್ಛ ನ್ಯಾಯಾಲಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ವಾಧ್ವಾ ಸಮಿತಿಯ ವರದಿಯಲ್ಲಿ ಕರ್ನಾಟಕದಲ್ಲಿ ಸುಮಾರು 31,29,000 ಅರ್ಹ ಬಿಪಿಎಲ್ ಕುಟುಂಬಗಳಿರುವುದನ್ನು ದಾಖಲಿಸಲಾಗಿದೆ.
     ರಾಜ್ಯ ಸರ್ಕಾರ ಬಿಪಿಎಲ್ ಕುಟುಂಬಗಳ ಸಮೀಕ್ಷೆಯನ್ನು ಸರಿಯಾಗಿ ನಡೆಸಿದೆಯೇ ಮತ್ತು ಅರ್ಹರೆಲ್ಲರಿಗೆ ಪಡಿತರ ಚೀಟಿಗಳನ್ನು ಕೊಟ್ಟಿದೆಯೇ ಎಂದರೆ ಸಿಗುವ ಉತ್ತರ ಇಲ್ಲ ಎಂಬುದೇ ಆಗಿದೆ. ಇದು ಸತ್ಯ ಸಂಗತಿಯಾಗಿದೆ. ಜನಗಣತಿಯಲ್ಲಿ ದಾಖಲಾದ ಕುಟುಂಬಗಳ ಸಂಖ್ಯೆಗೂ, ಬಿಪಿಎಲ್ ಕುಟುಂಬಗಳ ಸಮೀಕ್ಷೆ ನಡೆಸಿದಾಗ ಮತ್ತು ಪಡಿತರ ಚೀಟಿಗಳಿಗಾಗಿ ನಡೆಸಿದ ಸಮೀಕ್ಷೆ ಮಾಡಿದಾಗ ಕಂಡು ಬಂದ ಕುಟುಂಬಗಳ ಸಂಖ್ಯೆಗೂ ಅಜ-ಗಜಾಂತರ ವ್ಯತ್ಯಾಸ ಎದ್ದು ಕಾಣುತ್ತದೆ. ವರ್ಷಗಟ್ಟಲೇ ಸಿಬ್ಬಂದಿಯನ್ನು ನಿಯೋಜಿಸಿ ಪಟ್ಟಿಗಳನ್ನು ಸಿದ್ಧಪಡಿಸಿದಾಗ ಅಗಾಧವಾದ ವ್ಯತ್ಯಾಸ ಕಂಡು ಬಂದಾಗ ಹೊಸ ರೀತಿ-ನೀತಿಗಳನ್ನು ಸೂಚಿಸಿ ಪುನರ್ ಸಮೀಕ್ಷೆ ಮಾಡಲು 'ಸೂಚನೆ' ಬರುತ್ತದೆ ಮತ್ತು 'ಸಂಖ್ಯೆ ಕಡಿತಗೊಳಿಸಲೂ' ಸೂಚನೆ ಅಧಿಕಾರಿಗಳಿಗೆ ಸಿಗುತ್ತದೆ. ಇರುವ ಪಟ್ಟಿಗಳನ್ನೇ ತೇಪೆ ಹಚ್ಚಿ ಹೊಸ ಪಟ್ಟಿ ಸಿದ್ಧವಾದರೂ ಅದೂ ನ್ಯೂನತೆಗಳ ಕಂತೆಗಳನ್ನೇ ಹೊತ್ತಿರುತ್ತದೆ. ಕಹಿ ಸತ್ಯವೆಂದರೆ ರಾಜಕಾರಣಿಗಳ, ಸ್ಥಳೀಯ ನಾಯಕರುಗಳ ಒತ್ತಡಗಳು, ಭ್ರಷ್ಠಾಚಾರ ಪ್ರೇರಿತರಾದ ಕೆಲವು ಸಿಬ್ಬಂದಿಗಳು, ಸಮರ್ಪಕ ಮೇಲ್ವಿಚಾರಣೆಯ ಕೊರತೆ, ಆಡಳಿತಾತ್ಮಕ ಅವ್ಯವಸ್ಥೆಗಳು ಇಂತಹ ನ್ಯೂನತೆಗೆ ಇಂಬು ಕೊಡುತ್ತವೆ. ಪಡಿತರ ಚೀಟಿಗಳ ವಿತರಣೆ ದಶಕಗಳ ಕಾಲದಿಂದ ನಡೆಯುತ್ತಲೇ ಇದೆ, ಇಂದಿಗೂ ಮುಗಿದಿಲ್ಲ. ಮುಗಿಯುವ ಲಕ್ಷಣಗಳೂ ಇಲ್ಲ. ಒಮ್ಮೆ ಕೊಟ್ಟ ಕಾರ್ಡುಗಳು ಸರಿಯಿಲ್ಲವೆಂದು ರದ್ದುಪಡಿಸಿ ಹೊಸದಾಗಿ ಕೊಡುವುದಾಗಿ ಹೇಳುತ್ತಾರೆ. ಪುನಃ ಇಂತಹ ಎಡವಟ್ಟುಗಳ ಪುನರಾವರ್ತನೆ ಆಗುತ್ತದೆ. ಆದರೆ ಈ ಎಲ್ಲಾ ಸರ್ಕಸ್ಸುಗಳ ಎಡೆಯಲ್ಲಿ ನಿಜಕ್ಕೂ ಅನ್ನಕ್ಕೂ ಗತಿಯಿಲ್ಲದವರ ಕುಟುಂಬಗಳು ಬಿಪಿಎಲ್ ಕಾರ್ಡುಗಳನ್ನು ಶಕ್ತವಾಗುತ್ತವೆಯೇ ಎಂಬುದು ಯಕ್ಷ ಪ್ರಶ್ನೆಯಾಗಿದೆ. ಬಿಪಿಎಲ್ ಕಾರ್ಡುಗಳನ್ನು ಪಡೆಯುವಾಗ ವಾಸವಿರುವ ಮನೆಯ ವಿವರಗಳು, ಆಧಾರ್ ಕಾರ್ಡಿನ ವಿವರ ಮುಂತಾದುವನ್ನು ಒದಗಿಸಬೇಕು. ಸರ್ಕಾರವೇ ಹೇಳಿರುವಂತೆ ರಾಜ್ಯದಲ್ಲಿ ಸುಮಾರು 15 ಲಕ್ಷ ಕುಟುಂಬಗಳು ವಸತಿರಹಿತವಾಗಿವೆ. ಇಂತಹವರಿಗೆ ಕಾರ್ಡುಗಳು ಸಿಗಬೇಕು. ಆದರೆ ವಿಳಾಸ ಸರಿಯಾಗಿ ಕೊಡದ ಕಾರಣದಿಂದ ಇಂತಹವರಿಗೆ ಕಾರ್ಡುಗಳು ಸಿಗುವುದೇ ಇಲ್ಲ. ಇಂತಹವರಿಗೆ ಧ್ವನಿಯಾಗಿ ನಿಲ್ಲುವವರು ಯಾರೂ ಇರುವುದಿಲ್ಲ ಎಂಬುದು ವಿಷಾದದ ಸಂಗತಿಯೇ ಸರಿ.
     ಸರ್ಕಾರವೇ ಪ್ರಕಟಿಸಿರುವ ಮಾಹಿತಿಯಂತೆ 14.07.2015ರಲ್ಲಿ ಇದ್ದಂತೆ ರಾಜ್ಯದಲ್ಲಿ ಪಡಿತರ ಚೀಟಿಗಳನ್ನು ಹೊಂದಿರುವ ಕುಟುಂಬಗಳ ವಿವರ ಹೀಗಿದೆ:
ಜನಗಣತಿ ಪ್ರಕಾರ ಕುಟುಂಬಗಳ ಸಂಖ್ಯೆ: 1,31,79,911
ಅಂತ್ಯೋದಯ ಕಾರ್ಡುಗಳು:                    9,66,560
ಎಪಿಎಲ್ ಕಾರ್ಡುದಾರರು:                      33,71,982
ಬಿಪಿಎಲ್ ಕಾರ್ಡುದಾರರು:                    1,03,70,172
ಒಟ್ಟು ಕಾರ್ಡುದಾರ ಕುಟುಂಬಗಳು:          1,47,08,714
ಅಂದರೆ, ಕಾರ್ಡುಗಳ ಸಲುವಾಗಿ ಸುಮಾರು 16 ಲಕ್ಷ ಕುಟುಂಬಗಳು ಹೆಚ್ಚಾಗಿ ಗುರುತಿಸಲ್ಪಟ್ಟಿವೆ. ಲೆಕ್ಕದಲ್ಲಿ ಕೊಡಲಾಗಿದೆಯೆಂದು ತೋರಿಸಲಾಗಿರುವ ಕಾರ್ಡುಗಳ ಪೈಕಿಯೂ ಕಾರ್ಡುದಾರರಿಗೆ ಕಾರ್ಡುಗಳು ವಾಸ್ತವವಾಗಿ ತಲುಪಿಲ್ಲದವರ ಸಂಖ್ಯೆಯೂ ಗಣನೀಯವಾಗಿದೆ. ಇದು ಇಲ್ಲಿಗೇ ಮುಗಿಯಲಿಲ್ಲ. ಇನ್ನೂ 9,83,474ಕುಟುಂಬಗಳು ಕಾರ್ಡು ಕೊಡಲು ಕೋರಿ ಸಲ್ಲಿಸಿದ ಅರ್ಜಿಗಳು ಇತ್ಯರ್ಥಕ್ಕೆ ಬಾಕಿ ಇವೆ. ಆದರೆ ಅರ್ಜಿಗಳನ್ನೇ ಸಲ್ಲಿಸಲಾಗದಿರುವ (ಏಕೆಂದರೆ ಈಗ ಆನ್ ಲೈನಿನಲ್ಲಿ ಅರ್ಜಿ ಸಲ್ಲಿಸಬೇಕಿದೆ, ಮೊಬೈಲುಗಳನ್ನು ಹೊಂದಿರಬೇಕಿದೆ!), ಸಲ್ಲಿಸಲು ತಿಳಿಯದಿರುವ, ದೀನಸ್ಥಿತಿಯ ಕಾರಣದಿಂದಾಗಿ ಇತರರ ಸಹಾಯ ಪಡೆಯಲಾಗದಿರುವ, ಇತರರು ಸಹಾಯ ಮಾಡದಿರುವ ಕುಟುಂಬಗಳ ಸಂಖ್ಯೆ ಕಡಿಮೆಯೇನಲ್ಲ. ಇದು ಏನು ತೋರಿಸುತ್ತದೆ? ಬಡತನ ನಿರ್ಮೂಲನೆ ಮಾಡುವ ನೈಜ ಕಾಳಜಿ ಇದ್ದಿದ್ದರೆ, ರಾಜಕೀಯ ಕಾರಣಗಳನ್ನು ಮೀರಿದ ಇಚ್ಛಾಶಕ್ತಿ ಪ್ರದರ್ಶಿಸಿದ್ದರೆ ಇಂತಹ ಪರಿಸ್ಥಿತಿ ಬರುತ್ತಿರಲಿಲ್ಲ. ಯಾರಿಗೆ ಅನ್ನಭಾಗ್ಯದ ನಿಜಲಾಭ ಸಿಗಬೇಕೋ ಅವರುಗಳಲ್ಲಿ ಹೆಚ್ಚಿನವರಿಗೆ ಕಾರ್ಡುಗಳೇ ಸಿಕ್ಕಿಲ್ಲವೆಂದರೆ ಅದು ಅತಿಶಯೋಕ್ತಿಯಲ್ಲ.
     ಇನ್ನೊಂದು ಮಗ್ಗುಲಿಗೆ ಬರೋಣ. ಇಷ್ಟೊಂದು ಅಗಾಧ ಪ್ರಮಾಣದಲ್ಲಿರುವ ಕಾರ್ಡುದಾರರಿಗೆ (ಕಾರ್ಡು ಹೊಂದಿರುವವರೆಲ್ಲರೂ ಅರ್ಹರೇ ಎಂಬ ಪ್ರಶ್ನೆಯನ್ನು ಬದಿಗಿರಿಸಿ) ಎಷ್ಟು ಪ್ರಮಾಣದ ಅಕ್ಕಿ ಬೇಕಾಗುತ್ತದೆ, ಅದಕ್ಕೆ ತಗಲುವ ಸಾವಿರಾರು ಕೋಟಿಗಳಷ್ಟು ಮೊತ್ತವನ್ನು ಹೇಗೆ ಕ್ರೋಢೀಕರಿಸಲಾಗುತ್ತದೆ ಎಂಬುದಕ್ಕೆ ಸಮರ್ಪಕ ಉತ್ತರ ಸರ್ಕಾರದ ಕಡೆಯಿಂದ ಸಿಗಲಾರದು. ಅಕ್ಕಿಯ ದಾಸ್ತಾನು ಕಡಿಮೆಯಾದರೆ, ಹಣ ಹೊಂದಿಸಲಾಗದಿದ್ದರೆ ಕೇಂದ್ರದ ಕಡೆಗೆ ಬೆಟ್ಟು ತೋರಿಸುವ ಕೆಲಸವಂತೂ ಆಗುತ್ತದೆ. ಅನ್ನಭಾಗ್ಯ ಯೋಜನೆ ಘೋಷಣೆಯಾದ ಸಂದರ್ಭದಲ್ಲೇ ವಿತರಣೆಗೆ ಅಗತ್ಯವಾದಷ್ಟು ಧಾನ್ಯ ಲಭ್ಯವಿರದೇ ಪ್ರಾರಂಭದ ಹಲವು ತಿಂಗಳುಗಳಲ್ಲಿ ಅಕ್ಕಿ ಸಮರ್ಪಕವಾಗಿ ವಿತರಣೆ ಆಗಿರಲಿಲ್ಲ. ಹೀಗಾಗಿ ಮಿಲ್ ಮಾಲಿಕರುಗಳಿಂದ ಬಲವಂತವಾಗಿ ನವೆಂಬರ್, 2013ರಿಂದ ಫೆಬ್ರವರಿ, 2014ರವರೆಗೆ ಸಂಗ್ರಹಿಸಿದ್ದ 1.61 ಲಕ್ಷ ಟನ್ ಅಕ್ಕಿ ಬಹುತೇಕ ಹಾಳಾದ ಅಥವ ಹಾಳಾಗುವ ಸ್ಥಿತಿಯಲ್ಲಿತ್ತು. ಅದರಲ್ಲಿ 93 ಸಾವಿರ ಟನ್ ಅಕ್ಕಿಯನ್ನು ಅದೇ ಸ್ಥಿತಿಯಲ್ಲಿ ಜನರಿಗೆ ವಿತರಿಸಲಾಯಿತು. ವಿತರಿಸಲು ಸಾಧ್ಯವೇ ಇಲ್ಲದಷ್ಟು ಹಾಳಾದ 68 ಸಾವಿರ ಟನ್ ಅಕ್ಕಿಯ ವಿತರಣೆ ತಡೆ ಹಿಡಿಯಲಾಯಿತು. ವಿಪರ್ಯಾಸವೆಂದರೆ ಮಿಲ್ ಮಾಲಿಕರುಗಳಿಗೆ ಪೂರ್ಣ ಹಣ ಪಾವತಿಸಲಾಯಿತು. ಸರ್ಕಾರಕ್ಕೆ, ಅರ್ಥಾತ್ ಸಾರ್ವಜನಿಕರಿಗೆ, ಇದರಿಂದ ಆದ ನಷ್ಟ ಸುಮಾರು 200 ಕೋಟಿ ರೂ.ಗಳು! ಈ ಕುರಿತು ಯಾರೇ ಬುದ್ಧಿಜೀವಿಗಳು, ಪ್ರಗತಿಪರರು ಎಂದು ಹಣೆಪಟ್ಟಿ ಹಚ್ಚಿಕೊಂಡವರು ಸೊಲ್ಲೆತ್ತಲೇ ಇಲ್ಲ. ಯಾರ ವಿರುದ್ಧವೂ ಸರ್ಕಾರವೂ ಕ್ರಮ ಕೈಗೊಳ್ಳಲೇ ಇಲ್ಲ!
     ಪಡಿತರ ವಿತರಣೆಯ ಲೋಪಗಳ ಕುರಿತು ಹೇಳುವುದೇ ಬೇಡ. ಹೆಚ್ಚಿನ ದಾಸ್ತಾನು ಕಾಳಸಂತೆಯ ಪಾಲಾಗುವುದು ಗುಟ್ಟಾಗಿ ಉಳಿದಿಲ್ಲ. ಉಚಿತವಾಗಿ ಅಕ್ಕಿ ವಿತರಿಸುವ ಯೋಜನೆ ಜಾರಿಗೆ ಮೊದಲೇ ಧಾನ್ಯಗಳು ಕಾಳಸಂತೆಗೆ ಹೋಗುತ್ತಿದ್ದುದು, ಹೊಸ ಯೋಜನೆ ಜಾರಿಗೆ ಬಂದ ಮೇಲೆ ಹೆಚ್ಚಾಯಿತಷ್ಟೇ ಅಲ್ಲದೆ ಸಂಬಂಧಿಸಿದವರಿಗೆ ಲೂಟಿ ಹೊಡೆಯಲು ಹೆಚ್ಚಿನ ಅವಕಾಶವಾಯಿತು. ವಿತರಣೆಯ ಕಾಲದಲ್ಲಿ ಹೇಗೆಲ್ಲಾ ಅವ್ಯವಹಾರಗಳು ನಡೆಯುತ್ತವೆ ಎಂಬುದನ್ನು ವಿವರಿಸುತ್ತಾ ಹೋದರೆ ದೀರ್ಘವಾಗುವ ಕಾರಣದಿಂದ ಒಂದು ಉದಾಹರಣೆಯನ್ನಷ್ಟೇ ಕೊಡುವೆ. ಈಗ ಸರ್ಕಾರದ ಹೆಚ್ಚುವರಿ ಮುಖ್ಯಕಾರ್ಯದರ್ಶಿ ಆಗಿರುವ ದಕ್ಷ ಮತ್ತು ಪ್ರಾಮಾಣಿಕ ಅಧಿಕಾರಿ ಶ್ರೀ ಮದನಗೋಪಾಲರು ಬಿಜಾಪುರದ ಡಿ.ಸಿ. ಆಗಿದ್ದಾಗ ನಡೆದಿದ್ದ ಸಂಗತಿ. ಅಲ್ಲಿನ ಆಹಾರ ಇಲಾಖೆಯ ಉಪನಿರ್ದೇಶಕರು ಪ್ರತಿ ತಿಂಗಳು 300 ನ್ಯಾಯಬೆಲೆ ಅಂಗಡಿಗಳ ಪೈಕಿ 50 ನ್ಯಾಯಬೆಲೆ ಅಂಗಡಿಗಳಿಗೆ ಅಕ್ಕಿ, 50 ಅಂಗಡಿಗಳಿಗೆ ಗೋಧಿಯನ್ನು ಬಿಡುಗಡೆ ಮಾಡುತ್ತಿರಲಿಲ್ಲ. ಅದರ ಮುಂದಿನ ತಿಂಗಳು ಬೇರೆ ಬೇರೆ 50 ಅಂಗಡಿಗಳಿಗೆ ಕೊಡುತ್ತಿರಲಿಲ್ಲ, ಉಳಿದ 250 ಅಂಗಡಿಗಳಿಗೆ ಬಿಡುಗಡೆ ಆಗುತ್ತಿತ್ತು. ಹೀಗೆ ರೊಟೇಶನ್ನಿನಂತೆ ಮಾಡುತ್ತಿದ್ದರು. ಆ 50 ಅಂಗಡಿಗಳ ಅಕ್ಕಿ ಮತ್ತು ಗೋಧಿ ಸೋಲಾಪುರಕ್ಕೆ ಹೋಗುತ್ತಿತ್ತು. ಅಲ್ಲಿ ಅದನ್ನು ಹಿಟ್ಟು, ರವೆ ಮಾಡಿ ಮಾರಲಾಗುತ್ತಿತ್ತು. ಒಮ್ಮೆ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದರು. ಜಿಲ್ಲಾಧಿಕಾರಿ ಸ್ವತಃ ಮುತುವರ್ಜಿ ವಹಿಸಿ ಪ್ರಕರಣ ದಾಖಲಾಗುವಂತೆ ನೋಡಿಕೊಂಡರು. ಅಂದಿನ ಆಹಾರ ಮಂತ್ರಿ ಶ್ರೀಮತಿ ಮನೋರಮಾ ಮಧ್ವರಾಜ್ ಅವರನ್ನೂ ಒಪ್ಪಿಸಿ ಸಿ.ಒ.ಡಿ. ತನಿಖೆ ನಡೆಯುವಂತೆ ಮಾಡಿದರು. ಉಪನಿರ್ದೇಶಕರು, ಫುಡ್ ಇನ್ಸ್‌ಪೆಕ್ಟರರನ್ನು ಬಂಧಿಸಲಾಯಿತು. ಸಿಓಡಿ ತನಿಖೆಯಲ್ಲಿ ಆರೋಪಗಳು ಸಾಬೀತಾದವು. ಆದರೆ ಸಿಓಡಿಯವರಿಗೆ ಶಿಕ್ಷೆ ಕೊಡಲು ಬರುವುದಿಲ್ಲ. ತನಿಖೆ ನಡೆಸಿ ವರದಿ ಕೊಡುವುದಷ್ಟೆ ಅವರ ಕೆಲಸ. ನಂತರ ಇಲಾಖಾ ವಿಚಾರಣೆ ನಡೆಯಿತು. 1994ರಲ್ಲಿ ನಡೆದ ಈ ಪ್ರಕರಣ 14 ವರ್ಷಗಳವರೆಗೆ ಮುಂದುವರೆಯಿತು. ಏನಾಯಿತೋ ಗೊತ್ತಿಲ್ಲ, ಕೊನೆಗೆ ಆರೋಪಗಳು ಸಾಬೀತಾಗಲಿಲ್ಲವೆಂದು ತೀರ್ಮಾನವಾಗಿ ಅಧಿಕಾರಿಗಳು ಪಾರಾದರು, ಬಡ್ತಿಯನ್ನೂ ಪಡೆದರು. ಕಾನೂನನ್ನು ಹೇಗೆ ತಿರುಚಬಹುದು ಎಂಬುದಕ್ಕೆ ಉದಾಹರಣೆ ಇದು. ಕೆಲವು ನಿರ್ದಿಷ್ಟ ನ್ಯಾಯಬೆಲೆ ಅಂಗಡಿಗಳಿಗೆ ಅಗತ್ಯಕ್ಕಿಂತ ಹೆಚ್ಚು ಪಡಿತರ ಬಿಡುಗಡೆ ಮಾಡಿ ಹೆಚ್ಚುವರಿ ಧಾನ್ಯವನ್ನು ಕಾಳಸಂತೆಯಲ್ಲಿ ಮಾರಾಟ ಮಾಡಿಸಿ ಕಾಳಸಂತೆಕೋರರು, ನ್ಯಾಯಬೆಲೆ ಅಂಗಡಿ ಮಾಲಿಕರು ಮತ್ತು ಕೆಳಗಿನ ಅಧಿಕಾರಿಗಳಿಂದಲೂ ಕಮಿಷನ್, ಮಾಮೂಲು ವಸೂಲು ಮಾಡುವ ಹಿರಿಯ ಆಹಾರ ಅಧಿಕಾರಿಗಳೂ ಕಾಣಸಿಗುತ್ತಾರೆ.
     ಅಗತ್ಯ ಪ್ರಮಾಣದ ಅಕ್ಕಿಯ ಅಲಭ್ಯತೆ, ಹಣಕಾಸಿನ ಮುಗ್ಗಟ್ಟು ಮತ್ತು ವ್ಯವಸ್ಥೆಯ ಲೋಪಗಳು ಈ ಯೋಜನೆಯನ್ನು ಹೀಗೆಯೇ ಮುಂದುವರೆಸಲು ಬಿಡುತ್ತದೆ ಎಂದು ಹೇಳುವುದು ಕಷ್ಟ. ಮೊದಲು 1 ರೂ.ಗೆ 1 ಕೆಜಿಯಂತೆ ಕಾರ್ಡಿಗೆ 30 ಕೆಜಿ ಕೊಡುತ್ತಿದ್ದದ್ದು ನಂತರ ಉಚಿತವಾಯಿತು. ಈಗ ಸದಸ್ಯರ ಸಂಖ್ಯೆ ಅನುಸರಿಸಿ ಪ್ರಮಾಣವನ್ನೂ ಕಡಿತ ಮಾಡಲಾಗಿದೆ. ಮುಂದೆ ಇದು ಕಾರ್ಡಿಗೆ ಗರಿಷ್ಠ ಹತ್ತು ಕೆಜಿಗೂ ಇಳಿಯಬಹುದು. ಕಾರ್ಡುಗಳ ಸಂಖ್ಯೆ ಕಡಿತಗೊಳಿಸಲು ಮತ್ತು ನಕಲಿ ಕಾರ್ಡುಗಳನ್ನು ಪತ್ತೆ ಹಚ್ಚಿ ರದ್ದುಗೊಳಿಸಲು ಸೂಚನೆ ಹೊರಡಬಹುದು. ಇದರ ಅರ್ಥ ನಿಜಕ್ಕೂ ಅಗತ್ಯವಿರುವ, ಕಾರ್ಡು ಸಿಗದಿರುವ ಅರ್ಹರಿಗೆ ಹೊಸ ಕಾರ್ಡುಗಳ ವಿತರಣೆ ನಿಲ್ಲಿಸಿಬಿಡಬಹುದು. ಕಾಲಕ್ರಮೇಣ ಈ ಯೋಜನೆ ದಾಖಲೆಯಲ್ಲಿ ಮಾತ್ರ ಉಳಿಯಬಹುದು. ತಳಪಾಯ ಭದ್ರವಿಲ್ಲದ ಕಟ್ಟಡ ಕುಸಿಯುವಂತೆ ಅನ್ನಭಾಗ್ಯ ಯೋಜನೆಯೂ ಆಗಬಾರದೆಂದರೆ ಸರ್ಕಾರ ಮೊದಲು ವಸ್ತುನಿಷ್ಠವಾಗಿ ಮತ್ತು ರಾಜಕೀಯ ಕಾರಣಗಳನ್ನು ಇಟ್ಟುಕೊಳ್ಳದೆ ನೈಜ ಬಡವರನ್ನು ಗುರುತಿಸಿ ಅವರುಗಳಿಗೆ ಮಾತ್ರ ಉಚಿತ ಪಡಿತರ ಸಿಗುವಂತೆ ನೋಡಿಕೊಳ್ಳಬೇಕಿದೆ. ಅಗತ್ಯದ ಪ್ರಮಾಣದ ಅಕ್ಕಿ ಸಂಗ್ರಹಣೆ ಮತ್ತು ಹಣಕಾಸಿನ ಕ್ರೋಢೀಕರಣಕ್ಕೆ ಸಂಪನ್ಮೂಲಗಳನ್ನು ಹೊಂದಿಸುವ ಯೋಜನೆ ಮಾಡಬೇಕಿದೆ. ಯಾವುದೇ ಯೋಜನೆ ರಾಜಕೀಯ ಪಕ್ಷದ ಕಾರ್ಯಕ್ರಮವಾಗದೆ ರಾಷ್ಟ್ರೀಯ ಕಾರ್ಯಕ್ರಮವಾಗಿ ರೂಪಿತವಾಗಿ ಅಧಿಕಾರಕ್ಕೆ ಬರುವ ಯಾವುದೇ ಪಕ್ಷ ಅದನ್ನು ಮುಂದುವರೆಸಿಕೊಂಡು ಹೋಗುವ ಹೊಣೆಗಾರಿಕೆ ಹೊತ್ತರೆ ಮಾತ್ರ ಬಡವರ ಉದ್ಧಾರ ಸಾಧ್ಯ.
-ಕ.ವೆಂ.ನಾಗರಾಜ್.
***************
ವಿಕ್ರಮ ವಾರಪತ್ರಿಕೆಯ 16.8.2015ರ ಸಂಚಿಕೆಯಲ್ಲಿ ಪ್ರಕಟಿತ:

17.8.2015ರ ಜನಮಿತ್ರ ಪತ್ರಿಕೆಯ 'ಚಿಂತನ' ಅಂಕಣದಲ್ಲಿ ಪ್ರಕಟಿತ:


ದಿನಾಂಕ 19.8.2016ರ ಜನಹಿತ ಪತ್ರಿಕೆಯ 'ಜನಕಲ್ಯಾಣ' ಅಂಕಣದಲ್ಲಿ ಪ್ರಕಟಿತ:6 ಕಾಮೆಂಟ್‌ಗಳು:

 1. Tanuja Shivaram
  ಅನ್ನ ಭಾಗ್ಯ, ಶಾದಿ ಭಾಗ್ಯ ಇವೆರಡು ಭಾಗ್ಯಗಳನ್ನು ಅತಿಯಾದ ಉತ್ಸಾಹದಲ್ಲಿ ಜಾರಿಗೊಳಿಸಿದ ಯೋಜನೆಗಳು.
  ಇದರಲ್ಲಿ ಯಾವ ಅನುಮಾನವೂ ಇಲ್ಲ. ಅನ್ನಕ್ಕೆ ಬೆಲೆಯೇ ಇಲ್ಲದಂತಾಗಿದೆ. ಕಡೇ ಪಕ್ಷ ಐದು ರೂಪಾಯಿಗೆ ಒಂದು ಕಿಲೋ ಕೊಟ್ಟಿದ್ದರೆ ಆ ಅನ್ನ ಬ್ರಹ್ಮನಿಗೆ ಆ ಅನ್ನಪೂರ್ಣೇಶ್ವರಿಗೆ ಕಿಂಚಿತ್ತಾದರೂ ಬೆಲೆ ಇರುತ್ತಿತ್ತು.

  ಪ್ರತ್ಯುತ್ತರಅಳಿಸಿ
  ಪ್ರತ್ಯುತ್ತರಗಳು
  1. nageshamysore
   ಯಾವುದೆ ಭಾಗ್ಯವಾಗಲಿ ಯೋಜನೆಯ ಫಲ ನಿಶ್ಚಿತವಾಗಿ ಫಲಾನುಭವಿಗಳಿಗೆ ತಲುಪಿಸುವಂತಹ ವ್ಯವಸ್ಥೆ ನಮ್ಮಲ್ಲಿರದಿರುವುದು ದೊಡ್ಡ ದುರಂತ. ಅಂಕಿ ಅಂಶಗಳ ಸಮೇತ ಸಂಪೂರ್ಣ ವಿವರವನ್ನೊದಗಿಸಿದ 'ಅನ್ನಭಾಗ್ಯ..' ಉತ್ತಮ ಮಾಹಿತಿಪೂರ್ಣ ಲೇಖನ. ಧನ್ಯವಾದಗಳು ಕವಿಗಳೆ :-)

   kavinagaraj
   'ಮುಖಪುಸ್ತಕ'ದ ನಿಲುಮೆ ಗುಂಪಿನಲ್ಲಿ ಶ್ರೀ ಸತೀಶ ಚಪ್ಪರಿಕೆ ಎಂಬವರು ಅನ್ನಭಾಗ್ಯ ಯೋಜನೆಯನ್ನು ಸಮರ್ಥಿಸಿ, ಶ್ರೀ ಭೈರಪ್ಪನವರನ್ನು ಮತ್ತು ಯೋಜನೆ ವಿರೋಧಿಸುವವರನ್ನು ಟೀಕಿಸಿ ಒಂದು ಲೇಖನ ಪ್ರಜಾವಾಣಿಯಲ್ಲಿ ಪ್ರಕಟಿಸಿದ್ದನ್ನು ಹಾಕಿದ್ದರು. ನಾನು ಯೋಜನೆ ಸಮರ್ಪಕವಾಗಿರದೆ, ತಲುಪಬೇಕಾದವರಿಗೆ ತಲುಪದೆ, ಸೋಮಾರಿತನಕ್ಕೆ ಪ್ರೋತ್ಸಾಹಿಸುತ್ತಿದೆಯೆಂದು ಪ್ರತಿಕ್ರಿಯಿಸಿದ್ದೆ. ಆ ಮಹಾಶಯರಿಗೆ ನನ್ನ ಪರಿಚಯವೇ ಇಲ್ಲದಿದ್ದರೂ, ;'ತಹಸೀಲ್ದಾರರಾಗಿ ನಾನು ಸರಿಯಾಗಿ ಕೆಲಸ ಮಾಡುತ್ತಿಲ್ಲವೆಂದು ಅದಕ್ಕಾಗಿ ನಾಚಿಕೆಯೆನಿಸುತ್ತಿದೆ' ಎಂದು ಲಘುವಾಗಿ ಟೀಕಿಸಿದ್ದರು. (ಅ)ವಿಚಾರವಾದಿಗಳು ತಮಗೆ ಪಥ್ಯವಾಗದಿದ್ದ ಪ್ರತಿಕ್ರಿಯೆ ಬಂದಾಗ ವೈಯಕ್ತಿಕ ಮಟ್ಟದ ಟೀಕೆ ಮಾಡುವುದು ಹವ್ಯಾಸವಾಗಿದೆ. ನಾನು ವಾದವನ್ನು ಮುಂದುವರೆಸಹೋಗದೆ ಪ್ರತ್ಯೇಕ ಲೇಖನವನ್ನು ಅಂಕಿ-ಅಂಶಗಳನ್ನು ಆಧರಿಸಿ ಬರೆದೆ. ಆ ಲೇಖನವೇ ಇದು. ಪ್ರತಿಕ್ರಿಯೆಗೆ ವಂದನೆಗಳು, ನಾಗೇಶರೇ.

   H A Patil
   ಕವಿ ನಾಗರಾಜರವರಿಗೆ ವಂದನೆಗಳು
   ಅನ್ನಬಾಗ್ಯದ ಕುರಿತು ತಾವು ಬರೆದ ಬರಹ ವಸ್ತುನಿಷ್ಟವಾಗಿದೆ, ಇಲ್ಲಿ ಮೂಲಭೂತವಾಗಿ ತೊಂದರೆಯಿರುವುದು ಎಲ್ಲ ಜನಗಳ ಪ್ರಾಮಾಣಿಕತೆಯಲ್ಲಿ ಈಗ ಅದುವೆ ಅಪರೂಪದ ವಸ್ತುವಾಗಿದೆ. ಇಂದು ನಾವುಗಳು ನಿಜವಾಗಿ ನೈತಿಕತೆಯ ಅಧಃಪತನದ ಹಾದಿಯಲ್ಲಿದ್ದೇವೆ. ಇಂದು ನೈತಿಕ ಶಿಕ್ಷಣ ಜನ ಸಮುದಾಯದಲ್ಲಿ ಇಲ್ಲದಿರುವುದು ಮತ್ತು ಸರ್ಕಾರಿ ನೌಕರಿಗೆ ಅರ್ಹತೆಯಾಗಿಲ್ಲದಿರುವುದು ಇದಕ್ಕೆಲ್ಲ ಕಾರಣ, ಸಕಾಲಿಕ ಮತ್ತು ವರ್ತಮಾನದ ದುರಂತದ ಒಂದು ಮನೋಜ್ಞ ಚಿತ್ರಣ ನೀಡಿದ್ದೀರಿ ದನ್ಯವಾದಗಳು.

   kavinagaraj
   ವಂದನೆಗಳು, ಪಾಟೀಲರೇ. ಅಗ್ಗದ ಜನಪ್ರಿಯತೆ ಸಲುವಾಗಿ ತರಾತುರಿಯಲ್ಲಿ ಜಾರಿಗೆ ತರುವ ಎಲ್ಲಾ ಯೋಜನೆಗಳ ಹಣೆಬರಹವೂ ಇಷ್ಟೇನೇ!

   ಅಳಿಸಿ
  2. Nagaraj Bhadra
   ಉತ್ತಮ ಲೇಖನ ಸರ್. ಸರಕಾರವು ಅನಭಾಗ್ಯ ಯೋಜನೆ ಘೋಷಣೆ ಮಾಡಿದ್ದಾಗ ಆಹಾರ ಮತ್ತು ಸರಬರಾಜು ಇಲಾಖೆಯ ಪ್ರಧಾನ ಕಾಯ೯ದಶಿ೯ಯಾಗಿ ಪ್ರಮಾಣೀಕ ಹಾಗೂ ದಕ್ಷ ಅಧಿಕಾರಿ ಹಷ೯ ಗುಪ್ತಾವರನ್ನು ನೇಮಿಸಿತ್ತು. ಅವರು ಇಲಾಖೆಯಲ್ಲಿನ ಭ್ರಷ್ಟಾಚಾರವನ್ನು ತಡೆಯಲು ತುಂಬಾ ಒಳ್ಳೆಯ ಕೆಲಸವನ್ನು ಮಾಡಿದ್ದಾರೆ.ರೇಶನ್ ಅಂಗಡಿಗಳಲ್ಲಿ ಬಯೋಮೇಟ್ರರಿಕ ವ್ಯವಸ್ಥೆವನ್ನು ಜಾರಿಮಾಡಿದರು.ಆದರೆ ಸರಕಾರವನ್ನು ಕೆಲವು ತಿಂಗಳ ಹಿಂದೆ ಅವರನ್ನು ಬೇರೆ ಇಲಾಖೆಗೆ ವಗ೯ವಾಣೆ ಮಾಡಿದು ವಿಪ೯ಯಾಸವೆ ಸರಿ.

   kavinagaraj
   ವಂದನೆಗಳು, ನಾಗರಾಜಭದ್ರರವರೇ, ಹರ್ಷಗುಪ್ತರವರು ಪುತ್ತೂರಿನಲ್ಲಿ ಅಸಿಸ್ಟೆಂಟ್ ಕಮಿಷನರ್ ಆಗಿದ್ದಾಗ ನಾನು ಪುತ್ತೂರಿನಲ್ಲಿ ತಹಸೀಲ್ದಾರ್ ಆಗಿದ್ದೆ. ಅವರ ಬಗ್ಗೆ ನನ್ನ ಅಭಿಪ್ರಾಯ ಬೇರೆಯದೇ ಆಗಿದೆ. ಇರಲಿ, ಈ ವಿಷಯ ಲೇಖನಕ್ಕೆ ಪ್ರಸ್ತುತವಲ್ಲವಾದುದರಿಂದ ಬಿಟ್ಟುಬಿಡುವೆ. ಯಾವುದೇ ಬದಲಾವಣೆ ಮೇಲಿನಿಂದ ಬರಬೇಕು. ಅದು ಇಂದಿನ ಸ್ಥಿತಿಯಲ್ಲಿ ನಿರೀಕ್ಷಿಸುವುದು ಕಷ್ಟವೇ ಸರಿ.

   ಅಳಿಸಿ
  3. Nagaraj Bhadra
   ಹೌದ ಸರ್.ಹಷ೯ ಗುಪ್ತಾವರು ಬೀದರ. ಜಿಲ್ಲೆಯ ಜಿಲ್ಲಾಧಿಕಾರಿಗಳಾದ ಬೀದರನಲ್ಲಿ ತುಂಬಾ ಒಳ್ಳೆಯ ಕೆಲಸವನ್ನು ಮಾಡಿದ್ದಾರೆ ಅಂಥ ಕೇಳಿದೆ ಸರ್. ಬೀದರನಲ್ಲಿ ರಸ್ತೆಗಳ ಅಭಿವೃದ್ಧಿ, ಅದನ್ನು ಒಳ್ಳೆಯ ಪ್ರವಾಸಿ ತಾಣವನಾಗಿ ಮಾಡಿದ್ದಾರೆ ಸರ್.ಅವರ ಬಗ್ಗೆ ನನಗೆ ಅಷ್ಟೊಂದು ಗೊತ್ತಿಲ್ಲ. ಸರ್.ನೀವು ಅವರ ಜೊತೆ ಕೆಲಸ ಮಾಡಿದ್ದೀರಿ ಅವರ ಬಗ್ಗೆ ನಿಮಗೆ ಹೆಚ್ಚು ಗೊತ್ತಿರುತ್ತದೆ ಸರ್.

   kavinagaraj
   ನಮಸ್ತೆ, ನಾಗರಾಜಭದ್ರರವರೇ. ಹರ್ಷಗುಪ್ತರವರು ಒಳ್ಳೆಯ ಕೆಲಸಗಳನ್ನೂ ಮಾಡಿದ್ದಾರೆ. ಅವರಲ್ಲಿನ ಮದ,ದರ್ಪ, ದುರಹಂಕಾರಗಳು ತಗ್ಗಿದರೆ ಅವರು ಒಳ್ಳಯೆ ಜನಸ್ನೇಹಿ ಅಧಿಕಾರಿಯಾದಾರು. ನನ್ನ ಲೇಖನವೊಂದರಲ್ಲಿ ಒಬ್ಬ ಅಧಿಕಾರಿಯ ಬಗ್ಗೆ ಉಲ್ಲೇಖಿಸಿರುವೆ. ಲಿಂಕ್ ಇಲ್ಲಿದೆ. ಅವರು ಯಾರೆಂದು ನೀವಏ ಊಹಿಸಿ.
   http://sampada.net/%E0%B2%AE%E0%B2%A6%E0%B2%A6-%E0%B2%B5%E0%B2%BF%E0%B2%...

   lpitnal
   ಸರ್, ಕಣ್ತೆರೆಸುವ ಸಕಾಲಿಕ ಲೇಖನ. ಇನ್ನೂ ಬಹಳಷ್ಟು ಸುಧಾರಣೆಗಳು ಆಗಬೇಕಿದೆ ಎನಿಸುತ್ತಿದೆ. ಒಟ್ಟಿನಲ್ಲಿ ಯಾರೂ ಹಸಿವಿನಿಂದ ಬಳಲಬಾರದೆಂಬ ಮಾನವೀಯ ಕಾಳಜಿ ನನಗೆ. ಹೇಗೆ ಪ್ರತಿಕ್ರೆಯಿಸಬೇಕೋ ಅರಿಯೆ. ಇದೊಂದು ಬಹು ಗಹನ ವಿಷಯ. ಸಾಕಷ್ಟು ಮಾಹಿತಿ ಕಲೆಹಾಕಿ ವಿಷಯ ಪ್ರಸ್ತಾವನೆ ಮಾಡಿದ್ದು, ಅನೇಕ ವಿಷಯಗಳನ್ನು ತಿಳಿಯುವಂತಾಯಿತು.

   kavinagaraj
   ವಂದನೆಗಳು, ಇಟ್ನಾಳರೇ.

   Venkatesh Jois
   Annabagya entahavarige siguttilla. eddavara swattaguttiruvudu vishadada sangati.

   ಅಳಿಸಿ
  4. santhosha shastry
   ಬಹಳ‌ ಅರ್ಥವತ್ತಾದ‌ ಲೇಖನ‌. ಆದ್ರೆ, ನಮ್ಮ‌ ದುರಾದೃಷ್ಟ‌, ಇದು ಅರ್ಥವಾಗಬೇಕಾದವರಿಗೆ ಅರ್ಥವಾಗೋಲ್ಲ‌!! ಹಾಗಾಗಿ, ಅನರ್ಥ‌ ಕಟ್ಟಿಟ್ಟ‌ ಬುತ್ತಿ.

   kavinagaraj
   ವಂದನೆಗಳು, ಸಂತೋಷ ಶಾಸ್ತ್ರಿಗಳೇ.

   ಅಳಿಸಿ