ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಮಂಗಳವಾರ, ಆಗಸ್ಟ್ 18, 2015

ನಾಗರಪಂಚಮಿ - ಬರದಿರಲಿ ನಾಗನ ನೆಮ್ಮದಿಗೆ ಭಂಗ!



     ನಾಳೆ ನಾಗರಪಂಚಮಿ! ನಾಗನ ನೆಮ್ಮದಿಗೆ ಭಂಗ ತರದಂತೆ ಹಬ್ಬ ಆಚರಿಸಿದರೆ ಅದು ನಿಜವಾದ ನಾಗಪೂಜೆ ಆದೀತು!! ಪ್ರಕೃತಿಯ ಸಮತೋಲನಕ್ಕೆ ನಾಗನ ಸಂತತಿಯ ರಕ್ಷಣೆ ಅತ್ಯಗತ್ಯ ಎಂಬ ಅರಿವು ಜನರಲ್ಲಿ ಮೂಡಬೇಕಿದೆ. ಸಂಪ್ರದಾಯವನ್ನು ಅದರ ನಿಜಾರ್ಥದಲ್ಲಿ ಆಚರಿಸಲು ಈ ದಿನವನ್ನು ಆರಿಸಿಕೊಳ್ಳೋಣ.
   ಚಿಕ್ಕಂದಿನಲ್ಲಿ ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದಾಗ ಹೇಳುತ್ತಿದ್ದ 'ನಾಗರಹಾವೇ, ಹಾವೊಳು ಹೂವೇ, ಬಾಗಿಲ ಬಿಲದಲಿ ನಿನ್ನಯ ಠಾವೇ, ಕೈಗಳ ಮುಗಿವೆ, ಹಾಲನ್ನೀವೆ, ಈಗಲೆ ಹೊರಗೆ ಪೋ ಪೋ ಪೋ ಪೋ' ಎಂಬ ಪದ್ಯ ಈಗಲೂ ನೆನಪಿಗೆ ಬರುತ್ತಿರುತ್ತದೆ.  ನಾಗರಪಂಚಮಿಯಂದು ನಾಗರನಿಗೆ ಹಾಲೆರೆದು, ಧೂಪ, ದೀಪ, ನೈವೇದ್ಯಗಳನ್ನು ಅರ್ಪಿಸುವ ಸಂಪ್ರದಾಯ ಚಾಲನೆಯಲ್ಲಿದೆ. ನಾಗರ ಪಂಚಮಿ ಆಚರಣೆ ಪರಂಪರೆಯಿಂದ ಮುಂದುವರೆಯಲು ಹಲವಾರು ಕಾರಣಗಳಿರಬಹುದು, ಅದಕ್ಕಾಗಿ ಹಲವಾರು ಪುರಾಣಕಥೆಗಳು ಇರಬಹುದು, ಹಲವಾರು ಕ್ಷೇತ್ರಗಳು ನಾಗಪೂಜೆಯ ಕಾರಣಕ್ಕೇ ಪ್ರಸಿದ್ಧವಾಗಿರುವುದೂ ಸತ್ಯ. ಕರ್ನಾಟಕದಲ್ಲಿ ದಕ್ಷಿಣಕನ್ನಡದ ಕುಕ್ಕೆ, ಕೋಲಾರದ ಘಾಟಿ ಹಾಗೂ ಉತ್ತರಕನ್ನಡದ ಮುಗ್ವಾ ಸುಬ್ರಹ್ಮಣ್ಯ ಕ್ಷೇತ್ರಗಳು ನಾಗಪೂಜೆಯ ಕಾರಣದಿಂದಲೇ ಪ್ರಸಿದ್ಧವಾಗಿವೆ. ನಾಗನನ್ನೇ ಆರಾಧ್ಯದೈವವಾಗಿಸಿಕೊಂಡಿರುವ ಜನರಿದ್ದಾರೆ, ಜನಾಂಗಗಳೇ ಇವೆ. ನಾಗ ಉತ್ತಮ ಮಳೆ-ಬೆಳೆಯ ಸಂಕೇತವಾಗಿದ್ದು, ಅರಿತೋ ಅರಿಯದೆಯೋ ಅವುಗಳಿಗೆ ತೊಂದರೆಯಾದರೆ ದೋಷ ಕಾಡುತ್ತದೆಯೆಂದು ಇಂತಹ ಪ್ರಾಯಶ್ಚಿತ್ತ ಕಾರ್ಯಗಳಾದ ನಾಗಬಲಿ ಅಥವಾ ಆಶ್ಲೇಷಾ ಬಲಿ, ನಾಗಮಂಡಲ, ನಾಗಪ್ರತಿಷ್ಠೆ ಮೊದಲಾದ ಪೂಜಾವಿಧಿಗಳನ್ನು ನಡೆಸುತ್ತಾರೆ. ನಾಗರಹಾವು ಸತ್ತಿದ್ದನ್ನು ಕಂಡರೆ ಅದಕ್ಕೆ ಶಾಸ್ತ್ರೋಕ್ತವಾಗಿ ಅಂತಿಮ ಸಂಸ್ಕಾರ ನಡೆಸುವುದನ್ನೂ ಕಾಣುತ್ತೇವೆ. ಎಲ್ಲಾ ಹಾವುಗಳನ್ನು ಪೂಜಿಸದೆ ನಾಗರವನ್ನೇ ಆಯ್ಕೆ ಮಾಡಿಕೊಳ್ಳಲು ಅದರ ಚುರುಕುತನ, ನಯನ ಮನೋಹರ ರೂಪ, ಹೊಂದಿರುವ ಭಯಂಕರ ವಿಷ ಹಾಗೂ ಭಯ ಸಹ ಕಾರಣವಾಗಿರಬಹುದು. ನಾಗರಹಾವನ್ನು ಕಾಮ ಹಾಗೂ ದ್ವೇಷಕ್ಕೆ ಸಂಕೇತವಾಗಿಯೂ ಬಳಸುತ್ತಿರುವುದು ವೇದ್ಯದ ಸಂಗತಿ.
     ನಾಗರಪಂಚಮಿಯ ಹಬ್ಬದಲ್ಲಿ ಕುಟುಂಬದವರು ಹಬ್ಬದ ಅಡಿಗೆ ಮಾಡಿ, ಹೊಸ ಬಟ್ಟೆಯುಟ್ಟು ಸಂಭ್ರಮಿಸುವುದು, ಸೋದರ-ಸೋದರಿಯರು ಬಾಂಧವ್ಯದ ಬೆಸುಗೆ ಗಟ್ಟಿ ಮಾಡಿಕೊಳ್ಳುವುದು ಒಳ್ಳೆಯದೇ. 'ನಾಗದೇವ'ನಿಗೆ ಸಂತುಷ್ಟಗೊಳಿಸಲು, ಅರಿತೋ, ಅರಿಯದೆಯೋ ತಪ್ಪಾಗಿದ್ದಲ್ಲಿ ತಮಗೆ ಕೇಡಾಗದಿರಲಿ ಎಂಬ ಬೇಡಿಕೆಗಾಗಿ, ಮಕ್ಕಳ ಭಾಗ್ಯ(?)ಕ್ಕಾಗಿ ನಾಗಪೂಜೆಯನ್ನು, ಪ್ರಾಯಶ್ಚಿತ್ತಕಾರ್ಯವನ್ನು ಹಬ್ಬದ ದಿನಗಳಲ್ಲದೆ ಇತರ ದಿನಗಳಲ್ಲೂ ಆಚರಿಸುವವರಿದ್ದಾರೆ. ಪುರಾಣಗಳಲ್ಲಿ ನಾಗಲೋಕ ಪಾತಾಳದಲ್ಲಿದೆಯೆಂದು ಬಣ್ಣಿಸಲಾಗುತ್ತದೆ. ಹುತ್ತಗಳಲ್ಲಿ, ಬಿಲಗಳಲ್ಲಿ ವಾಸಿಸುವ ಉರಗಗಳು ಭೂಮಿಯ ಕೆಳಗೆ ಹೆಚ್ಚಾಗಿ ವಾಸಿಸುವುದರಿಂದ ಈ ಪ್ರತೀತಿ ಬಂದಿರಬಹುದು. ಕಾನನಗಳಲ್ಲಿರುವ ಹುತ್ತಗಳು ಮಳೆಗಾಲದಲ್ಲಿ ನೀರು ಭೂಮಿಯ ಒಳಗೆ ಬಸಿಯಲು ಸಹಾಯಕವಾಗಿ ಅಂತರ್ಜಲ ಕಾಪಾಡುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. 
     ನಾಗರಪಂಚಮಿಯನ್ನು ಕರ್ನಾಟಕದ ಎಲ್ಲಾ ಪ್ರದೇಶಗಳಲ್ಲೂ ಭಕ್ತಿಭಾವದಿಂದ ಆಚರಿಸುತ್ತಾರಾದರೂ, ತುಳುನಾಡಿನಲ್ಲಿ 'ನಾಗ'ನಿಗೆ ವಿಶೇಷ ಮಹತ್ವ ನೀಡುತ್ತಾರೆ. ನಾಗಾರಾಧನೆಗೆ ಮಹತ್ವವಿರುವ ಅಲ್ಲಿ, 'ನಾಗಬನ'ಗಳ ಹೆಸರಿನಲ್ಲಾದರೂ ಸ್ವಲ್ಪಮಟ್ಟಿಗೆ ಹಸಿರು ಉಳಿದಿದೆ ಎನ್ನಲು ಅಡ್ಡಿಯಿಲ್ಲ. ಆದರೆ ಆ ನಾಗಬನಗಳನ್ನೂ ಕಾಂಕ್ರೀಟೀಕರಣ ಮಾಡುತ್ತಿರುವುದು ದುರ್ದೈವ.
     ಪ್ರಸ್ತುತ ಆಚರಣೆಯಲ್ಲಿರುವ ಹಾಲೆರೆಯುವ ಪದ್ಧತಿಯಿಂದ ನಾಗದೇವ ಸಂತುಷ್ಟಗೊಳ್ಳುವನೇ ಎಂಬ ಕುರಿತು ವಿಚಾರ ಮಾಡುವುದು ಒಳ್ಳೆಯದು. ಬಸವಣ್ಣನವರ ವಚನ "ಕಲ್ಲ ನಾಗರ ಕಂಡರೆ ಹಾಲನೆರೆವರಯ್ಯಾ, ದಿಟದ ನಾಗರ ಕಂಡರೆ ಕೊಲ್ಲು ಕೊಲ್ಲೆಂಬರಯ್ಯಾ" ಎಂಬುದು ಮಾನವನ ಮನಸ್ಥಿತಿಗೆ ಹಿಡಿದ ಕೈಗನ್ನಡಿ. ಹಾವು ಹಾಲು ಕುಡಿಯುವುದೇ, ಒಂದು ವೇಳೆ ಕುಡಿದರೂ ಅದು ಇಷ್ಟವಾದ ಆಹಾರವೇ ಎಂಬುದು ಸಂದೇಹಾಸ್ಪದ. ಒಂದು ವೇಳೆ ಹಾಲು ಅದಕ್ಕೆ ಇಷ್ಟವಾದ ಆಹಾರವೆಂದೇ ಇಟ್ಟುಕೊಂಡರೂ ಹುತ್ತಕ್ಕೆ ಹಾಲೆರೆದರೆ ಉದ್ದೇಶ ಈಡೇರುವುದೇ? ಎರೆಯುವುದಾದರೆ ಹಾವಿಗೇ ಎರೆಯಲಿ. ವರ್ಷಕ್ಕೊಮ್ಮೆ ಹಾಲೆರೆದರೆ ಉಳಿದ ೩೬೪ ದಿನಗಳಲ್ಲಿ ಅದಕ್ಕೆ ಹಾಲು ಎಲ್ಲಿ ಸಿಗುತ್ತದೆ? ಯೋಚಿಸಬೇಕಾದ ವಿಷಯವಿದಲ್ಲವೇ? ಹಾವು ಹಾಲು ಕುಡಿಯುವುದೆಂದೇನೂ ಇಲ್ಲ. ಕುಡಿಯಲು ನೀರಿಲ್ಲದಿದ್ದರೆ, ಬಾಯಾರಿಕೆಯಾದರೆ ಕುಡಿಯುತ್ತದೆ. ಹಾಲನೆರೆಯುವ ಶೇ. 95ಕ್ಕೂ ಹೆಚ್ಚು ಜನರು ಹಬ್ಬದ ದಿನದಂದು ಹುತ್ತವನ್ನು ಹುಡುಕಿಕೊಂಡು ಹೋಗಿ ಹಾಲು ಎರೆಯುವರು. ಹುತ್ತಕ್ಕೆ ಹಾಲು ಹಾಕುವುದರಿಂದ ಹುತ್ತಕ್ಕೆ ಹಾನಿಯಾಗುತ್ತದೆ, ಅಲ್ಲಿರಬಹುದಾದ ಹಾವಿನ ಏಕಾಂತಕ್ಕೆ ಭಂಗವಾಗುತ್ತದೆ, ಹಿಂಸೆಯಾಗುತ್ತದೆ, ತೊಂದರೆ ಅನುಭವಿಸುತ್ತದೆಯಲ್ಲವೇ? ಹೀಗೆ ತೊಂದರೆ ಕೊಟ್ಟು 'ನಾಗದೇವ' ಸಂತುಷ್ಟನಾದನೆಂದು ಭಾವಿಸುವುದು ಎಷ್ಟರ ಮಟ್ಟಿಗೆ ಸರಿ? ಸಂಪ್ರದಾಯವಾದಿಗಳು 'ಎಷ್ಟೋ ಪ್ರಶ್ನೆಗಳಿಗೆ ಸಮಂಜಸ ಉತ್ತರ ಸಿಗಲಾರದು ಮತ್ತು ಎಷ್ಟೋ ವಿಷಯಗಳು ತರ್ಕಕ್ಕೆ ನಿಲುಕಲಾರವು' ಎಂದು ಹೇಳುತ್ತಾರಾದರೂ, ಇಂತಹ ಆಚರಣೆ ಕುರಿತು ಪ್ರಶ್ನೆ ಮಾಡಬಾರದು, ತರ್ಕ ಮಾಡಬಾರದು ಎಂಬ ಅವರ ವಾದ ಸರಿಯೆಂದು ತೋರುವುದಿಲ್ಲ. ಅಪ್ಪ ಹಾಕಿದ ಆಲದಮರವೆಂದು ನೇಣು ಹಾಕಿಕೊಳ್ಳಲು ಹೋಗದೆ ಅದರ ನೆರಳಿನಲ್ಲಿ ಬಾಳಬಹುದು.
      ನಗರ ಪ್ರದೇಶಗಳಲ್ಲಂತೂ ಹಾವಿಗೆ ತಾವೇ ಇಲ್ಲ. ಹೊರವಲಯಗಳಲ್ಲಿ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ಮಾತ್ರ ಅವು ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಹೆಣಗಾಡುತ್ತಿವೆ. ಅವುಗಳ ವಾಸಸ್ಥಾನಗಳನ್ನು ನಾಶಪಡಿಸಿ ಅವುಗಳ ಹೆಸರಿನಲ್ಲಿ ದೇವಸ್ಥಾನಗಳನ್ನು ನಿರ್ಮಿಸುತ್ತಿರುವುದು ಎಂತಹ ವಿಪರ್ಯಾಸ! ಉದ್ದೇಶ 'ನಾಗದೇವ'ನನ್ನು ಸಂತುಷ್ಟಗೊಳಿಸಬೇಕು, ಆತನಿಂದ ತೊಂದರೆಯಾಗಬಾರದು ಎಂಬುದೇ ಆಗಿದ್ದಲ್ಲಿ ಹಬ್ಬವನ್ನು ಈರೀತಿ ಆಚರಿಸಬಹುದಲ್ಲವೇ? 
1. ಬಾಂಧವ್ಯಗಳ ಬೆಸುಗೆ ಗಟ್ಟಿಗೊಳ್ಳಲು ಅಣ್ಣ-ತಮ್ಮಂದಿರು, ತಂಗಿಯರು ಒಂದೆಡೆ ಸೇರಿ ಒಟ್ಟಿಗೆ ಸಂಭ್ರಮದಿಂದ ಸೇರಿ ಹಬ್ಬವನ್ನಾಚರಿಸುವುದು. ಹಲವೆಡೆ ಆಚರಣೆಯಲ್ಲಿರುವ ಜೋಕಾಲಿ ಆಡುವುದು, ಮದರಂಗಿ (ಮೆಹಂದಿ) ಹಚ್ಚುವುದು, ಸೋದರರಿಗೆ ತನಿ ಎರೆಯುವುದು, ಮುಂತಾದವುಗಳಿಗೆ ಜೀವ ತುಂಬುವುದು. ಈ ದಿನದಂದು ಮಾಡುವ ತಂಬಿಟ್ಟು, ಕಡುಬು, ಮುಂತಾದ ವಿಶೇಷ ಖಾದ್ಯಗಳನ್ನು ಸೇವಿಸುವುದು.
2. ಮದುವೆಯಾದ ಹೆಣ್ಣು ಮಕ್ಕಳಿಗೆ ತವರಿನ ನೆನಪು ಕಾಡದಿರುವಂತೆ ಅವರಿಗೆ ಉಡುಗೊರೆಗಳನ್ನು ನೀಡಿ ಸಂತಸಗೊಳ್ಳುವಂತೆ ಮಾಡುವುದು.
3. ಉರಗಗಳು ನೆಮ್ಮದಿಯಿಂದ ಬಾಳಲು ಅವಕಾಶ ಮಾಡಿಕೊಡಬೇಕು.
4. ತಮಗೆ ತೊಂದರೆಯಾದಾಗ ಮತ್ತು ಭಯವಾದಾಗ ಮಾತ್ರ ಹಾವುಗಳು ಕಚ್ಚುತ್ತವೆ. ಇಲ್ಲದಿದ್ದಲ್ಲಿ ಅವುಗಳಿಂದ ತೊಂದರೆಯಿಲ್ಲ. ಇಲಿಗಳು, ಕೀಟಗಳನ್ನು ಭಕ್ಷಿಸುವ ಅವು ರೈತಮಿತ್ರರು. ಜನರಲ್ಲಿ ಉರಗಗಳ ಕುರಿತು ಜಾಗೃತಿ ಮೂಡಿಸುವುದಲ್ಲದೆ ಪರಿಸರ ಸಂರಕ್ಷಣೆಯ ಕಡೆಗೆ ಗಮನ ಕೊಡಬೇಕು.
5. ಹುತ್ತಕ್ಕೆ ಹಾಲೆರೆಯುವ ಬದಲು ಕೆಲವು ವಿಚಾರವಂತ ಮಠಾಧೀಶರು ಮಾಡುತ್ತಿರುವಂತೆ ಮಕ್ಕಳಿಗೆ ಹಾಲು ಹಂಚಬಹುದು.
6. ಹಾವು ಅಥವ ಪ್ರಾಣಿಗಳ ಚರ್ಮ ಸುಲಿದು ತಯಾರಿಸುವ ಬೆಲ್ಟು, ಇತ್ಯಾದಿಗಳನ್ನು ಕೊಳ್ಳಬಾರದು. ಹಾವು ಬದುಕಿದ್ದಂತೆಯೇ ಹಾವಿನ ಚರ್ಮ ಸುಲಿದು, ಒದ್ದಾಡುತ್ತಿರುವ ಹಾವಿನ ದೇಹವನ್ನು ಎಸೆದು ಹೋಗುವ ಕ್ರೂರಿಗಳ ಕಾರ್ಯಕ್ಕೆ ಇದರಿಂದ ಕಡಿವಾಣ ಹಾಕಬಹುದು.
7. ಇಂತಹ  ಸೂಕ್ತವೆನಿಸುವ  ಇತರ ಕಾರ್ಯಗಳನ್ನು ಕೈಗೊಳ್ಳಬಹುದು.
     ಇನ್ನು ಮುಂದಾದರೂ ನಾಗರ ಪಂಚಮಿಯನ್ನು 'ಪರಿಸರ ಪಂಚಮಿ'ಯಾಗಿ ಆಚರಿಸೋಣ ಎಂಬುದು ಎಲ್ಲಾ ಪರಿಸರ ಪ್ರೇಮಿಗಳ ಪರವಾಗಿ ಈ 'ನಾಗರಾಜ'ನ ಆಶಯ!
-ಕ.ವೆಂ.ನಾಗರಾಜ್.

2 ಕಾಮೆಂಟ್‌ಗಳು:

  1. Nagaraj Bhadra
    ನಾಗರಾಜ ಸರ್ ಅವರಿಗೆ ನಮಸ್ಕಾರಗಳು.ನಮ್ಮ ದೇಶದ ಜನರಲ್ಲಿ ಹಲವಾರು ಮೂಡನಂಬಿಕೆಗಳಿದ್ದಾವೆ ಅವುಗಳಲ್ಲಿ ಇದು ಒಂದು ಸರ್.ಮೂಡನಂಬಿಕೆಯಿಂದ. ಹೊರಬಂದು ಪರಿಸರ ಪಂಚಮೀ ಆಚರಿಸುವ ಅವಶ್ಯಕತೆಯಿದೆ.ಒಳ್ಳೆಯ ಸಲಹೆ ಸರ್.

    kavinagaraj
    ಧನ್ಯವಾದ, ನಾಗರಾಜ ಭದ್ರರವರೇ.

    ravindra n angadi
    ನಮಸ್ಕಾರಗಳು ಸರ್,
    ಪ್ರತಿಯೊಂದು ಹಬ್ಬಕ್ಕೂ ಒಂದೊಂದು ಕಾರಣವಿರುತ್ತದೆ ಅದರಲ್ಲಿ ವೈಜ್ಞಾನಿಕವಾಗಿಯೂ ಕಾರಣಗಳಿರುತ್ತವೆ,
    'ಪರಿಸರ ಪಂಚಮಿ'ಯ ಹಾರ್ದಿಕ ಶುಭಾಷಯಗಳು. ಧನ್ಯವಾದಗಳು.

    kavinagaraj
    ಧನ್ಯವಾದಗಳು, ರವೀಂದ್ರ ನಾ. ಅಂಗಡಿಯವರೇ.

    santhosha shastry
    ಸ್ವನಾಮಧೇಯಬಲದಿಂದ‌ "ನಾಗರಾಜ‌"ನ‌ ಮೇಲೆ ಪ್ರೀತಿಯೋ ಹೇಗೆ?!! ಹೀಗೇ ಸುಮ್ಮನೆ ಹೇಳಿದ್ದು. ಬಹಳ‌ ಅರ್ಥವತ್ತಾದ‌ ಲೇಖನ‌, ಸರ್.

    kavinagaraj
    ಇದ್ದರೂ ಇರಬಹುದು. ನನಗೆ ನಾಗರಾಜ ಎಂಬ ಹೆಸರು ಬರಲೂ ನಾಗರಾಜನೇ ಕಾರಣ! ಹಳೇಬೀಡಿನಲ್ಲಿ ಚಿಕ್ಕಮಗುವಾಗಿದ್ದಾಗ ವರಾಂಡದಲ್ಲಿ ಮಲಗಿಸಿದ್ದಾಗ ಒಂದು ನಾಗರಹಾವು ನನ್ನ ತಲೆಯ ಹತ್ತಿರ ಹೆಡೆ ಬಿಚ್ಚಿ ಕುಳಿತಿತ್ತಂತೆ. ಅದು ಅಲ್ಲಿಂದ ಸರಿದುಹೋಗುವವರೆಗೂ ಎಲ್ಲರೂ ಉಸಿರು ಬಿಗಿ ಹಿಡಿದು ಕಾದಿದ್ದರಂತೆ. ನಾನು ನಿದ್ದೆ ಮಾಡುತ್ತಿದ್ದರಿಂದ ಅಪಾಯವಾಗಿರಲಿಲ್ಲವಂತೆ. ಎಚ್ಚರವಾಗಿ ಕೈಕಾಲು ಆಡಿಸಿದ್ದರೆ ಎಂಬ ಭಯ ಎಲ್ಲರಿಗೂ ಇತ್ತಂತೆ. ಅದಕ್ಕಾಗಿಯೇ ನನಗಿಟ್ಟ ಹೆಸರು 'ನಾಗರಾಜ'. ಧನ್ಯವಾದ, ಸಂತೋಷ ಶಾಸ್ತ್ರಿಯವರೇ.

    keshavmysore
    ಹಾವು ಜೀವವಿದ್ದಾಗಲೇ ಅದರ ಚರ್ಮ ಸುಲಿದರೆ ಆ ಚರ್ಮವು ಬಹಳ ಮೃದುವಾಗಿರುತ್ತದೆಂದೂ, ಅದನ್ನು ಹಸನು ಮಾಡುವುದರಿಂದ ಉತ್ತಮ ಮಟ್ಟದ ಚರ್ಮಪದಾರ್ಥಗಳನ್ನು ತಯಾರಿಸಬಹುದಾದ ಬಗ್ಗೆ ಚೆನ್ನೈನಲ್ಲಿರುವ ಸೆಂಟ್ರಲ್ ಲೆದರ್ ರಿಸರ್ಚ್ ಇನ್ಸ್ಟಿಟ್ಯೂಟ್ ನ ವಿಜ್ಞಾನಿಗಳು ೯೦ರ ದಶಕದಲ್ಲಿ ಸಂಶೋಧನೆ ನಡೆಸಿದ್ದರೆಂದು ಓದಿದ ನೆನಪಿದೆ.

    kavinagaraj
    :( ಇಂತಹ ಸಂಶೋಧನೆಗಳಿಗೆ ಧಿಕ್ಕಾರವಿರಲಿ.

    ಪ್ರತ್ಯುತ್ತರಅಳಿಸಿ
    ಪ್ರತ್ಯುತ್ತರಗಳು
    1. keshavmysore
      ಕವಿಗಳೇ, ನಿಮ್ಮ ಧಿಕ್ಕಾರಕ್ಕೆ ನನ್ನ ಸಂಪೂರ್ಣ ಸಹಮತವಿದೆ.
      ಆದರೆ ಯೋಚಿಸಿ - ಮಾನವ ಸಹಜವಾಗಿ ಸ್ವಾರ್ಥಿಯಲ್ಲವೇ? ನಿಸರ್ಗದ ಎಲ್ಲ ಸಂಪನ್ಮೂಲಗಳೂ, ಜೀವವಿಕಾಸದಲ್ಲಿ ತನಗಿಂತ ಕೆಳಸ್ತರದಲ್ಲಿರುವ ಎಲ್ಲ ಜೀವ ಜಂತುಗಳೂ ತನಗಾಗಿಯೇ ಸೃಷ್ಟಿಸಲ್ಪಟ್ಟಿರುವುದೆಂಬ ಭಾವನೆ ನಾವು ಎಲ್ಲೆಲ್ಲೂ ಕಾಣಬಹುದು. ಹಸು ಹಾಲು ಕೊಡುವುದೇ ನಮಗಾಗಿ, ಜೇನು ಮಧು ಸಂಗ್ರಹಿಸುವುದೇ ನಮಗಾಗಿ, ಪ್ರಾಣಿಗಳ ತುಪ್ಪಟವಿರುವುದೇ ನಮ್ಮನ್ನು ಛಳಿಯಿಂದ ರಕ್ಷಿಸಿಕೊಳ್ಳುವುದಕ್ಕಾಗಿ ಇತ್ಯಾದಿ ಪಟ್ಟಿ ಬೆಳೆಸುತ್ತಲೇ ಹೋಗಬಹುದು.
      ನಾಗರೀಕತೆಯ ಪ್ರಾರಂಭದಲ್ಲಿ ಅಗತ್ಯಕ್ಕಷ್ಟೇ ಸೀಮಿತವಾಗಿದ್ದ ಈ ಬಳಕೆಗಳನ್ನು ಇಂದು ಡೇರಿ, ಜೇನುಕೃಷಿ, ಚರ್ಮೋತ್ಪನ್ನದಂತಹ ಉದ್ಯಮಗಳಾಗಿ ಬೆಳೆಸಿದ್ದು ನಾವೇ ಅಲ್ಲವೇ?

      santhosha shastry
      ಹಸುವಿನಿಂದ‌ ಹಾಲು ಕರೆಯುವುದೂ, ಹಾವು ಜೀವಂತವಿದ್ದಾಗ‌ ಅದರ‌ ಚರ್ಮ‌ ಸುಲಿಯುವುದಕ್ಕೂ ವ್ಯತ್ಯಾಸವಿದೆಯಷ್ಟೇ? ಹಾಗಾಗಿ ಇಂಥ‌ ಆವಿಷ್ಕಾರಗಳಿಗೆ ಅವಕಾಶಾವಿರಬಾರದು.

      keshavmysore
      ನಿಜ ಸಂತೋಷ್ ರವರೆ. ಇಲ್ಲಿ ಅದನ್ನು ಉದಾಹರಿಸಿದ್ದು ಮನುಷ್ಯನ ಸ್ವಾರ್ಥದ ಒಂದು ಉದಾಹರಣೆಯಾಗಿ ಅಷ್ಟೆ.
      ನಿಮಗೆ ಗೊತ್ತಿರಬಹುದು - ಹಾಲು ಕರೆಯದೇ ಹಸುವನ್ನು ಹಾಗೇ ಬಿಟ್ಟರೆ ಅದು ೧೫ರಿಂದ ೨೦ವರ್ಷ ಬದುಕಬಲ್ಲದು. ಆದರೆ ಹಾಲಿಗಾಗಿ ಸಾಕುವ ಹಸುಗಳ ಜೀವಿತಾವಧಿ ಬರೇ ೮ರಿಂದ ೧೦ವರ್ಷಗಳು ಮಾತ್ರ; ಕೆಲವು ಅದೃಷ್ಟವಿರುವ ಹಸುಗಳು ಗೋಶಾಲೆ ಸೇರಿದರೆ ಮಿಕ್ಕವು ಕಸಾಯಿಖಾನೆಗೆ ರವಾನೆಯಾಗುತ್ತವೆ. ಹಾಲು ಉತ್ಪಾದನೆಗೆಂದೇ ಗರ್ಭಧಾರಣೆ ಮಾಡಿಸುವ ಈ ಕ್ರಿಯೆಯಲ್ಲಿ ಹುಟ್ಟುವ ಗಂಡು ಕರುಗಳು ತಿಂಗಳೊಳಗೇ ಎಳೆಗರು ಮಾಂಸ ಉತ್ಪಾದನೆಗೆ ಬಲಿಯಾಗುತ್ತವೆ. ಹೆಣ್ಣು ಕರು ೩ವರ್ಷದೊಳಗೇ ಮತ್ತೊಂದು ಹಾಲು ತಯಾರಿಸುವ ಯಂತ್ರವಾಗುತ್ತದೆ.
      ಅಷ್ಟಕ್ಕೂ ಕ್ಷೀರಕ್ರಾಂತಿ ಸಾಧಿಸಿದ ನಮ್ಮ ದೇಶವು ೨ ತಿಂಗಳ ಹಿಂದೆ ಹಸು ಎಮ್ಮೆಗಳ ಮಾಂಸದ ರಫ್ತು ವ್ಯಾಪಾರದಲ್ಲಿ ಬ್ರೆಝಿಲ್ ದೇಶವನ್ನು ಹಿಂದಿಕ್ಕಿ ಮೊದಲ ಸ್ಥಾನ ತಲುಪಿದ ಸುದ್ದಿ ಓದಿರಬಹುದು. ಈ ಮಾಂಸದ ಅತಿದೊಡ್ಡ ಗ್ರಾಹಕ ಚೀನಾದ ಮಾರುಕಟ್ಟೆಯನ್ನು ಪುನ: ಪ್ರವೇಶಿಸುವುದಕ್ಕಾಗಿ ಪ್ರಧಾನಮಂತ್ರಿ ಮೋದಿಯವರು ಚೀನಾ ಪ್ರವಾಸದಲ್ಲಿ ಸಫಲವಾಗಿದ್ದೂ ನೀವು ಓದಿರಬಹುದು. ಅಷ್ಟೊಂದು ಮಾಂಸ ಎಲ್ಲಿಂದ ಬರುತ್ತದೆ ಹೇಳಿ ನೋಡುವ? ಎಲ್ಲವೂ ವ್ಯಾಪರಕ್ಕಾಗಿ ಅಲ್ಲವೇ?
      ಹಾಗಾಗಿ ನಾವು ಸ್ವಾರ್ಥಿಗಳೆಂದು ಒಪ್ಪಿಕೊಳ್ಳೋಣ; ಹಿಂಸೆಯಲ್ಲಿ ಹೆಚ್ಚು-ಕಡಿಮೆಯೆಂಬ ಆಷಾಢಭೂತಿತನ ಬೇಡ. ನಮ್ಮ ಸ್ವಾರ್ಥಕ್ಕಾಗಿ ಮಾಡುವ ಹಿಂಸೆ ಹಿಂಸೆಯೇ! ಅದು ಹಾಲಿರಬಹುದು, ರೇಷ್ಮೆಯಿರಬಹುದು ಅಥವಾ ಜಂಭದ ಚೀಲವಿರಬಹುದು!
      ನಂತರದಲ್ಲಿ ಪ್ರಾಣಿಜನ್ಯ ಉತ್ಪಾದನೆಗಳನ್ನು ಬಹಿಷ್ಕರಿಸುವ ವೈಯುಕ್ತಿಕ ನಿರ್ಧಾರ ಕೈಗೊಂಡರೆ ಅದು ಈ ನಿಟ್ಟಿನಲ್ಲಿ ನಾವು ಮಾಡಬಹುದಾದ ಅಳಿಲು ಸೇವೆ ಎಂದುಕೊಳ್ಳಬಹುದು ಅಲ್ಲವೇ?
      ಇದರ ಬಗ್ಗೆ ಯೋಚಿಸುವಾಗೆಲ್ಲ ಚಿ. ಉದಯಶಂಕರರ ಗಿರಿಕನ್ಯೆ ಚಿತ್ರದ ರಾಜ್ ಹಾಡಿದ ಹಾಡು - ’ಏನೆಂದು ನಾ ಹೇಳಲೀ.. ಮಾನವನಾಸೆಗೆ ಕೊನೆಯೆಲ್ಲೀ..’ ಕಿವಿಯಲ್ಲಿ ಗುಯ್ಗುಡುತ್ತದೆ!

      kavinagaraj
      ಪ್ರತಿಕ್ರಿಯಿಸಿದ ಸಂತೋಷ ಶಾಸ್ತ್ರಿ ಮತ್ತು ಕೇಶವರಿಗೆ ವಂದನೆಗಳು. ಮಾನವನ ಸ್ವಾರ್ಥಕ್ಕಾಗಿ ಜಗತ್ತೇ ಬಲಿಯಾಗುತ್ತಿದೆ. ತಡೆಯಲು ಕೈಲಾಗುವಷ್ಟನ್ನು ಜಗಪ್ರೇಮಿಗಳು ಮಾಡಬಹುದಷ್ಟೇ!!

      ಅಳಿಸಿ