ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಭಾನುವಾರ, ಏಪ್ರಿಲ್ 16, 2017

ಅಮರ ಸ್ನೇಹ


     ನಮ್ಮನ್ನು ನಾವೇ ಪ್ರಾಮಾಣಿಕರಾಗಿ ನಮಗೆ ಯಾರು ಅತ್ಯಂತ ಪ್ರಿಯರು ಎಂದು ಪ್ರಶ್ನಿಸಿಕೊಂಡಾಗ ಸಮಸ್ಯೆಗಳಲ್ಲಿ ಸಿಲುಕಿ ತೊಳಲಾಡುತ್ತಿರುವ ಸಂದರ್ಭಗಳಲ್ಲಿ ನಮಗೆ ಸಾಮಾನ್ಯವಾಗಿ ಪುಕ್ಕಟೆ ಸಲಹೆ ಕೊಡುವವರು, ಹೊಗಳುವವರು, ಪರಿಹಾರ ಸೂಚಿಸುವವರು, ಶಪಿಸುವವರು, ದೂಷಿಸುವವರು, ಇತ್ಯಾದಿಯವರಿಗಿಂತ ನಮ್ಮ ಕಷ್ಟ, ನೋವುಗಳಿಗೆ ನಿಜವಾಗಿ ಸ್ಪಂದಿಸುವವರು ಮತ್ತು ಮೃದುವಾಗಿ ನಮ್ಮ ಗಾಯಗಳ ಮೇಲೆ ಕೈಯಾಡಿಸಿ ಸಾಂತ್ವನ ಹೇಳುವವರೇ ಹೆಚ್ಚು ಪ್ರಿಯರೆನಿಸುತ್ತಾರೆ ಅಲ್ಲವೇ? ಹೀಗೆ ಮಾಡುವವರೇ ನಿಜವಾದ ಸ್ನೇಹಿತರು! ಅಂತಹ ಸ್ನೇಹಿತರ ಸಂಖ್ಯೆ ಸಾವಿರವಾಗಲಿ, ಸ್ನೇಹ ಅಮರವಾಗಲಿ. 
     ಸ್ನೇಹ ಅನ್ನುವುದು ಇಬ್ಬರು ಅಥವ ಹೆಚ್ಚಿನ ಜನರೊಂದಿಗೆ ಪರಸ್ಪರ ಹೊಂದಿರುವ ಮಧುರ ಅನುಬಂಧ, ಭಾವಬಂಧ. ಜೀವಿಗಳು ಸ್ವಭಾವತಃ ಸಮಾಜಾವಲಂಬಿಯಾಗಿರುವುದರಿಂದ ಸ್ನೇಹಕ್ಕೆ ಮಹತ್ವ ಬರುತ್ತದೆ. ಸ್ನೇಹ ಅನೇಕ ಗುಣವಿಶೇಷಗಳನ್ನು ಹೊಂದಿದ್ದು ಅದರಲ್ಲಿ ಕರುಣೆ, ಅನುಕಂಪ, ಸತ್ಯ, ಸಮಾನಭಾವ, ಅವಲಂಬನೆ, ನಂಬಿಕೆ, ಸಹವಾಸದಲ್ಲಿ ಸಂತಸ, ಭದ್ರತೆಯ ಭಾವ, ಅಂಜಿಕೆ, ಅಳುಕುಗಳಿಲ್ಲದೆ ಭಾವನೆಗಳ ವಿನಿಮಯ, ಇತ್ಯಾದಿಗಳು ಒಳಗೊಳ್ಳುತ್ತವೆ. ಮೂರ್ಖತನವನ್ನು ನಿರ್ಭಿಡೆಯಿಂದ ತೋರಿಸಿಕೊಳ್ಳಲು ಸಂಕೋಚಿಸದಿರುವುದು ಸ್ನೇಹಿತರಲ್ಲಿ ಮಾತ್ರ ಸಾಧ್ಯ. ಗಾಢವಾದ ಸ್ನೇಹತ್ವ ಹೊಂದಿರುವವರು ಹೆಚ್ಚು ಸಂತೋಷಿಗಳಾಗಿರುತ್ತಾರೆಂಬುದು ಒಂದು ಸಂಶೋಧನೆಯಿಂದ ತಿಳಿದುಬಂದಿರುವ ಸತ್ಯ. ಸ್ನೇಹಕ್ಕೆ ಯಾವುದೇ ನಿಬಂಧನೆಗಳು, ನಿಯಮಗಳನ್ನು ಅನ್ವಯಿಸಲಾಗದಿದ್ದರೂ, ಸ್ನೇಹವನ್ನು ಸಾಮಾನ್ಯವಾಗಿ ಸಮಾನ ಹಿನ್ನೆಲೆ, ಪ್ರವೃತ್ತಿ, ವೃತ್ತಿ, ಆಸಕ್ತಿಗಳು ಮತ್ತು ಇಂತಹುದೇ ಸಾಮಾನ್ಯ ಸಂಗತಿಗಳು ನಿರ್ಧರಿಸುತ್ತವೆ.
     ಸ್ನೇಹ ಬಾಲ್ಯದಿಂದ ವೃದ್ಧಾಪ್ಯದವರೆಗೆ ವಿವಿಧ ರೀತಿಗಳಲ್ಲಿ ವ್ಯಕ್ತಗೊಳ್ಳುತ್ತವೆ. ಬಾಲ್ಯದಲ್ಲಿ ಆಟದ ವಸ್ತುಗಳನ್ನು, ತಿಂಡಿ ಪದಾರ್ಥಗಳನ್ನು ಹಂಚಿಕೊಳ್ಳುವುದರಿಂದ, ಒಟ್ಟಿಗೆ ಆಡುವುದರಿಂದ, ಆಟ-ಪಾಠಗಳನ್ನು ಮಾಡುವುದರಿಂದ ಸ್ನೇಹ ಚಿಗುರುತ್ತದೆ. ಈ ಚಿಕ್ಕ ವಯಸ್ಸಿನಲ್ಲಿ ಆಟದ ಸಾಮಾನುಗಳನ್ನು ಮಕ್ಕಳು ಇತರರೊಡನೆ ಹಂಚಿಕೊಳ್ಳಲು ಇಷ್ಟಪಡದಿದ್ದರೂ, ತಾವು ಇಷ್ಟಪಡುವ, ಸ್ನೇಹಿತರೆಂದು ಭಾವಿಸುವ ಓರಗೆಯವರೊಂದಿಗೆ ಹಂಚಿಕೊಳ್ಳುತ್ತವೆ. ಸ್ನೇಹಿತರೊಂದಿಗೆ ಮಾತ್ರ ಆಟವಾಡಲು, ಒಟ್ಟಿಗೆ ಇರಲು ಬಯಸುತ್ತವೆ. ಬಾಲ್ಯದಲ್ಲಿ ಉತ್ತಮ ಗೆಳೆಯರನ್ನು ಹೊಂದುವ ಮಕ್ಕಳು ಮುಂದೆ ಸಮಾಜದೊಡನೆ ಉತ್ತಮ ರೀತಿಯಲ್ಲಿ ಹೊಂದಿಕೊಳ್ಳಬಲ್ಲವು. ಬಾಲ್ಯದ ಗೆಳೆತನಗಳು ನಂತರದ ಗೆಳೆತನಗಳಿಗಿಂತ ಹೆಚ್ಚು ದೀರ್ಘವಾಗಿ ಬಾಳುತ್ತವೆ ಎಂಬುದು ಅನುಭವವೇದ್ಯ ಸಂಗತಿ. ಬೆಳೆಯುತ್ತಾ ಹೋದಂತೆ ಸ್ನೇಹ ಹೆಚ್ಚು ನಿರೀಕ್ಷೆಗಳನ್ನು ಹೊಂದುತ್ತಾ ಹೋಗುತ್ತದೆ. ಪ್ರಾರಂಭದಲ್ಲಿನ ಸರಳ ವಿಚಾರಗಳು, ಅಂದರೆ ಅಕ್ಕ-ಪಕ್ಕದವರು, ಸಮೀದವರೊಡನೆ ಹೊಂದುವ ಸ್ನೇಹ ನಂತರದಲ್ಲಿ ಒಬ್ಬರಲ್ಲಿ ಒಬ್ಬರ ವಿಶ್ವಾಸ, ನಂಬಿಕೆಗಳನ್ನು ಬಯಸುತ್ತದೆ. ಅದಕ್ಕೂ ನಂತರದಲ್ಲಿ, ಸಮಾನ ಅಭಿರುಚಿ, ಹವ್ಯಾಸಗಳು, ಆಸಕ್ತಿಗಳು ಗಣನೆಗೆ ಬರುತ್ತವೆ. ಸ್ನೇಹ ಶಾಲೆಯಲ್ಲಿ ಕಲಿಯುವಂತಹ ಸಂಗತಿಯಲ್ಲ. ಆದರೆ ಸ್ನೇಹದ ಅರ್ಥ ತಿಳಿಯದವರು ಏನನ್ನೂ ಕಲಿತಿಲ್ಲವೆಂದೇ ಅನ್ನಬೇಕಾಗುತ್ತದೆ. ಸ್ನೇಹಿತರನ್ನು ಪಡೆಯಲು ಇರಬೇಕಾದ ಅರ್ಹತೆಯೆಂದರೆ ಸ್ವತಃ ಸ್ನೇಹಿತರಾಗುವುದು!
     ಹರಯ ಬರುವ ಸಮಯದಲ್ಲಿ ಯುವಕ-ಯುವತಿಯರ ಸ್ವಭಾವ ನಿರ್ಧರಿಸುವಲ್ಲಿ ಸ್ನೇಹ ಪ್ರಧಾನ ಪಾತ್ರ ವಹಿಸುತ್ತದೆ. ಸಾಮಾನ್ಯವಾಗಿ ಗಮನಿಸಬಹುದಾದ ಸಂಗತಿಯೆಂದರೆ ಯಾರು ಪಾಠ-ಪ್ರವಚನಗಳಲ್ಲಿ, ಶಾಲಾ ಚಟುವಟಿಕೆಗಳಲ್ಲಿ ಆಸಕ್ತಿ ತೋರುತ್ತಾರೋ ಅವರುಗಳು ಹಾದಿ ತಪ್ಪಲಾರರು ಮತ್ತು ಆರೋಗ್ಯವಂತರಾಗಿರುತ್ತಾರೆ. ತದ್ವಿರುದ್ಧವಾಗಿರುವವರಲ್ಲಿ ಹಲವರು ಹರಯದ ಉತ್ಸಾಹದಲ್ಲಿ ಕುಡಿಯುವುದು, ಧೂಮಪಾನ ಮಾಡುವುದು, ಅಡ್ಡದಾರಿ ಹಿಡಿಯುವುದು, ಇತ್ಯಾದಿಗಳಲ್ಲಿ ತೊಡಗುವುದನ್ನು ಕಾಣಬಹುದು. ವಿರುದ್ಧ ಲಿಂಗಿಗಳ ಬಗ್ಗೆ ಕಾಮಾಕರ್ಷಣೆಯೇ ಸ್ನೇಹವೆಂದು ಭಾವಿಸುವ ವಯಸ್ಸು ಇದು. ಹಾಗೆಂದು ಎಲ್ಲರೂ ಹಾಗಿರುತ್ತಾರೆ ಎನ್ನಲಾಗುವುದಿಲ್ಲ. ಪವಿತ್ರ ಪ್ರೇಮಿಗಳೂ ಇರುತ್ತಾರೆ. ಇಂತಹ ಸೆಳೆತಕ್ಕೆ ಒಳಗಾದವರು ಇದನ್ನೇ ಜೀವನದ ಪ್ರಥಮ ಆದ್ಯತೆಯೆಂದು ತಿಳಿದು ಅನಾಹುತಗಳನ್ನು ಮಾಡಿಕೊಂಡಿರುವುದೂ ಇದೆ.      ಹಣ್ಣು ಮಾಗಿದ ನಂತರ ರುಚಿ ಜಾಸ್ತಿ. ಹಾಗೆಯೇ, ಪ್ರೌಢರಾದಾಗ ಜೀವನದ ಅನುಭವಗಳ ಹಿನ್ನೆಲೆಯಲ್ಲಿ ಸ್ನೇಹಕ್ಕೆ ಮೆರುಗು ಬರುತ್ತದೆ. ನಿಜವಾದ ಸ್ನೇಹದ ಗುಣವೆಂದರೆ ಅರ್ಥ ಮಾಡಿಕೊಳ್ಳುವುದು ಮತ್ತು ಅರ್ಥವಾಗುವುದು ಎಂಬ ಅರಿವು ಆಗ ಮೂಡಿರುತ್ತದೆ. ಬೆಳಕಿನಲ್ಲಿ ಒಂಟಿಯಾಗಿ ನಡೆಯುವುದಕ್ಕಿಂತಲೂ ಕತ್ತಲೆಯಲ್ಲಿ ಸ್ನೇಹಿತರೊಡಗೂಡಿ ನಡೆಯುವುದು ಹಿತಕರವಾಗಿರುತ್ತದೆ. ಎಲ್ಲರೂ ತೊರೆದುಹೋದರೂ ನೈಜ ಸ್ನೇಹಿತ ಎಂತಹ ಸಂದರ್ಭದಲ್ಲೂ ಒಟ್ಟಿಗೆ ಇರಬಯಸುತ್ತಾನೆ. ಅವನು ಕಷ್ಟದಲ್ಲಿ ಸೂಕ್ತ ಸಲಹೆ ಕೊಡುತ್ತಾನೆ, ತಾಳ್ಮೆಯಿಂದ ಕೇಳುತ್ತಾನೆ, ಸಮಸ್ಯೆ ಬಂದಾಗ ಪಲಾಯನ ಮಾಡದೆ ಎದೆಗೊಡುತ್ತಾನೆ, ಧೈರ್ಯದಿಂದ ಸಮರ್ಥಿಸುತ್ತಾನೆ ಮತ್ತು ಬದಲಾಗದೆ ಇರುತ್ತಾನೆ. ಇಂತಹ ಒಬ್ಬ ಸ್ನೇಹಿತ ನೂರಾರು ಬಂಧುಗಳಿಗಿಂತಲೂ ಮಿಗಿಲಾಗಿರುತ್ತಾನೆ.
     ಎಲ್ಲಾ ಸ್ನೇಹಗಳೂ ಒಂದೇ ರೀತಿ ಇರುವುದಿಲ್ಲ, ಇದ್ದರೂ ಹಲವು ಕಾರಣಗಳಿಂದಾಗಿ ದೀರ್ಘಕಾಲ ಬಾಳಲಾರವು. ಸ್ನೇಹದ ತಾಳಿಕೆ, ಬಾಳಿಕೆ ಸಂಬಂಧಿಸಿದವರ ಮನೋಭಾವಗಳನ್ನು ಅವಲಂಬಿಸಿರುತ್ತದೆ. ಒಂದು ಉದಾಹರಣೆ ನೋಡೋಣ. ಅವರಿಬ್ಬರೂ ಬಾಲ್ಯದಿಂದಲೂ ಪರಿಚಿತರು. ರಾಜಕಾರಣದಲ್ಲಿ ಆಸಕ್ತಿ ಹೊಂದಿದವರು, ಒಂದೇ ಸಮುದಾಯಕ್ಕೆ ಸೇರಿದವರು. ಸಮಾನ ಆಸಕ್ತಿಗಳು ಅವರನ್ನು ಒಟ್ಟುಗೂಡಿಸಿದ್ದವು. ಇಬ್ಬರೂ ಪರಸ್ಪರ ಕೈಜೋಡಿಸಿ ಮೇಲೆ ಬಂದರು. ಒಬ್ಬರ ಉತ್ಕರ್ಷಕ್ಕೆ ಇನ್ನೊಬ್ಬರು ಸಹಕಾರಿಗಳಾಗಿದ್ದರು. ಕ್ರಮೇಣ ಅವರು ರಾಜ್ಯಮಟ್ಟದಲ್ಲೂ ಮಿಂಚಿದರು. ಆಗ ಅವರ ಸ್ನೇಹಕ್ಕೆ ಮುಳ್ಳಾಗಿದ್ದು ಅಸೂಯೆ. ಎಲ್ಲಿ ಅವರು ಬೆಳೆದರೆ ತಮ್ಮ ಏಳಿಗೆಗೆ ಧಕ್ಕೆಯಾಗುತ್ತದೋ, ಎಲ್ಲಿ ಅವರು ತಮಗಿಂತ ಹೆಚ್ಚು ಹೆಸರು, ಕೀರ್ತಿ ಗಳಿಸುತ್ತಾರೋ, ತಮ್ಮ ಮತ್ತು ತಮ್ಮವರ ಅsವೃದ್ಧಿಗೆ ತೊಡಕಾಗುತ್ತಾರೋ ಎಂಬ ಭಾವನೆ ಬಲಿಯಲಾರಂಭಿಸಿತೋ, ಅಲ್ಲಿಗೆ ಅವರ ಸ್ನೇಹ ಬಲಿಯಾಯಿತು. ರಾಮ-ಲಕ್ಷ್ಮಣ, ಲವ-ಕಶ, ಎರಡು ದೇಹ-ಒಂದೇ ಅತ್ಮ, ಇತ್ಯಾದಿ ಕರೆಸಿಕೊಳ್ಳುತ್ತಿದ್ದವರು ಶತ್ರುಗಳಾಗಿ ಬದಲಾದರು. ಅವರ ಕಾಲು ಇವರು, ಇವರ ಕಾಲು ಅವರು ಎಳೆದರು. ಇಬ್ಬರೂ ಪತನ ಕಂಡರು. ಇಂತಹ ಅಸೂಯೆ ಒಂದು ಕ್ಷೇತ್ರಕ್ಕೆ ಸೀಮಿತವಲ್ಲ, ಎಲ್ಲಾ ಕ್ಷೇತ್ರಗಳಲ್ಲೂ, ಅದು ಸಾಹಿತ್ಯವಿರಬಹುದು, ಕಲೆಯಿರಬಹುದು, ವೃತ್ತಿಯಿರಬಹುದು, ಸಮಾಜಸೇವೆ ಆಗಬಹುದು, ಧಾರ್ಮಿಕ ರಂಗವಿರಬಹುದು, ಯಾವುದೇ ಇರಬಹುದು, ಎಲ್ಲಾ ರಂಗಗಳಲ್ಲೂ ಅಸೂಯೆ ಮುಳ್ಳಾಗಿ ಆತ್ಮೀಯರೇ ಶತ್ರುಗಳಾಗುವಂತೆ ಮಾಡಿಬಿಡುತ್ತದೆ. 
ಸ್ನೇಹ ಪ್ರೀತಿಯಲು ಲಾಭವನೆ ಅರಸುವರು
ಕಿಂಚಿತ್ತು ಪಡೆಯಲು ಶಾಶ್ವತವ ಕಳೆಯುವರು |
ವಿಶ್ವಾಸದಮೃತಕೆ ವಿಷವ ಬೆರೆಸುವರು
ಇಂಥವರ ಸಂಗದಿಂ ದೂರವಿರು ಮೂಢ ||
     ಸ್ನೇಹದಲ್ಲೂ ಅನೇಕ ವಿಧಗಳನ್ನು ಕಾಣಬಹುದು-ಸಾಂದರ್ಭಿಕ ಸ್ನೇಹ, ಕಪಟ ಸ್ನೇಹ, ಅನಿವಾರ್ಯ ಸ್ನೇಹ, ವೃತ್ತಿ/ವ್ಯವಹಾರ ನಿಮಿತ್ತದ ಸ್ನೇಹ, ಇತ್ಯಾದಿ ಪಟ್ಟಿ ಬೆಳೆಸುತ್ತಾ ಹೋಗಬಹುದು. ರೈಲು, ಬಸ್ಸುಗಳಲ್ಲಿ ಪ್ರಯಾಣಿಸುವಾಗ ಅಕ್ಕ-ಪಕ್ಕ ಇರುವವರೊಂದಿಗೆ ಸಹಜವಾಗಿ ಪ್ರಾರಂಭವಾಗುವ ಸಾಂದರ್ಭಿಕ ಮಾತುಗಳ ವಿನಿಮಯ ಪ್ರಯಾಣ ಮುಗಿಯುವ ವೇಳೆಗೆ ಆತ್ಮೀಯತೆಗೆ ತಿರುಗಬಹುದು. ಇಂತಹ ಸಾಂದರ್ಭಿಕ ಸ್ನೇಹ ಪ್ರಯಾಣದ ಅಯಾಸವನ್ನೂ ಮರೆಸಬಲ್ಲದು. ಇನ್ನು ಕಛೇರಿಗಳಲ್ಲಿ, ಅಂಗಡಿ-ಮುಂಗಟ್ಟುಗಳಲ್ಲಿ, ವ್ಯವಹಾರ ಕ್ಷೇತ್ರಗಳಲ್ಲಿ ಸಂಪರ್ಕಕ್ಕೆ ಬರುವವರೊಡನೆ ಸ್ನೇಹದಿಂದ ವರ್ತಿಸಲೇಬೇಕಾಗುತ್ತದೆ. ಅದು ವ್ಯವಹಾರದ ಯಶಸ್ಸಿಗೆ ಅಗತ್ಯವಾಗಿರುತ್ತದೆ. ಕಪಟ ಸ್ನೇಹಕ್ಕೆ ರಾಜಕಾರಣದ ಮಿತ್ರರುಗಳು ಉತ್ತಮ ಉದಾಹರಣೆಯಾಗುತ್ತಾರೆ. ಸಮಯ ಬಂದಾಗ ಕಾಲು ಹಿಡಿಯುವ, ಅಗತ್ಯ ಪೂರೈಸಿದೊಡನೆ ಕಾಳೆಳೆಯುವ ಜನರಿಗೇನೂ ಅಲ್ಲಿ ಕೊರತೆಯಿಲ್ಲ. ಅಲ್ಲಿ ಸ್ವಂತದ ಏಳಿಗೆ ಮಾತ್ರ ಪರಿಗಣಿತವಾಗಿರುತ್ತದೆ. ಇಷ್ಟವಿರಲಿ, ಇಲ್ಲದಿರಲಿ ನೇತಾರರುಗಳು ಹೇಳಿದ್ದಕ್ಕೆಲ್ಲಾ ಜೈ ಅನ್ನುವವರು, ಅವರೇ ಇಂದ್ರ, ಚಂದ್ರ, ದೇವೇಂದ್ರ ಅನ್ನುವವರು, ಹೊಗಳಿ ಅಟ್ಟಕ್ಕೇರಿಸುವವರು ಮತ್ತು ಆ ಮೂಲಕ ತಮ್ಮ ಸ್ವಾರ್ಥ ತೀರಿಸಿಕೊಳ್ಳುವವರ ಹಿಂಡೇ ಕಣ್ಣಿಗೆ ರಾಚುತ್ತಿರುತ್ತದೆ. ರಕ್ತ ಸಂಬಂಧ, ವೈವಾಹಿಕ ಸಂಬಂಧಗಳ ಮೂಲಕ ಮೂಡುವ ಸ್ನೇಹ ಗಟ್ಟಿಯಾಗಿರುತ್ತದಾದರೂ ಅಲ್ಲೂ ಸಹ ವೈಮನಸ್ಸುಗಳಿಂದಾಗಿ ಸ್ನೇಹಕ್ಕೆ ಧಕ್ಕೆ ಬಂದು, ಸಂಬಂಧಗಳು ಕಳಚಿಕೊಳ್ಳುವುದನ್ನೂ ಕಾಣುತ್ತಿರುತ್ತೇವೆ. ನೈಜ ಸ್ನೇಹ ಹೊರತುಪಡಿಸಿ ಉಳಿದೆಲ್ಲಾ ಸ್ನೇಹಗಳು ಸಾಮಾನ್ಯವಾಗಿ ಸ್ನೇಹದ ಮುಖವಾಡ ಧರಿಸಿರುತ್ತವೆ.
     ಒಂದಂತೂ ಸತ್ಯ. ಈ ಸ್ನೇಹ ಅನ್ನುವುದು ಎಲ್ಲರಿಗೂ ಅನಿವಾರ್ಯ ಮತ್ತು ಅಗತ್ಯ. ಅದು ಇಲ್ಲದಿದ್ದರೆ ಬದುಕು ನೀರಸವಾಗುತ್ತದೆ. ಅದು ಭಗವಂತ ನೀಡಿರುವ ಜೀವನದ ಅತ್ಯಮೂಲ್ಯ ಮತ್ತು ಅದ್ಭುತ ಉಡುಗೊರೆ. ಚಾಣಕ್ಯ ಹೇಳಿದಂತೆ ಪ್ರತಿ ಸ್ನೇಹದಲ್ಲೂ ಸ್ವಾರ್ಥ ಇದ್ದೇ ಇರುತ್ತದೆ. ಸ್ವಾರ್ಥವಿಲ್ಲದ ಸ್ನೇಹ ಇರಲಾರದು. ಅದು ಕಹಿ ಸತ್ಯ. ಆದರೆ ಅಂತಹ ಸ್ವಾರ್ಥವೂ ಪರಸ್ಪರರ ಏಳಿಗೆಗೆ ಪೂರಕವಾಗಿದ್ದರೆ ಸ್ನೇಹಕ್ಕೆ ಅರ್ಥ ಬರುತ್ತದೆ. ಸ್ನೇಹ ಕಳೆದುಹೋದಾಗ ಮಾತ್ರ ಅದರ ಬೆಲೆ ತಿಳಿದೀತು! ನಾವು ಬರುವಾಗ ಒಂಟಿ, ಹೋಗುವಾಗ ಒಂಟಿ, ಆದರೆ ಬಂದು ಹೋಗುವ ನಡುವಿನ ಅವಧಿಯಲ್ಲಿ ನಾವು ಒಂಟಿಯಲ್ಲ ಎಂಬ ಭಾವನೆ ಮೂಡಿಸುವುದೇ ಸ್ನೇಹದ ಅದ್ಭುತ ಚಮತ್ಕಾರ.
-ಕ.ವೆಂ.ನಾಗರಾಜ್.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ