ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಗುರುವಾರ, ನವೆಂಬರ್ 3, 2016

ಹುಚ್ಚರಾಯಸ್ವಾಮಿ ದೇವಾಲಯ, ಶಿಕಾರಿಪುರ


     ಬ್ರಿಟಿಷರೊಂದಿಗೆ ಸೆಣೆಸಾಡಿ ನದಿ ಹಾರಿ ತಪ್ಪಿಸಿಕೊಂಡಿದ್ದ ಧೊಂಡಿಯ ಶಿಕಾರಿಪುರದ ದೈವ ಹುಚ್ಚರಾಯಸ್ವಾಮಿಗೆ ನಮಿಸಿ ರಕ್ಷಿಸಲು ಕೋರಿಕೊಂಡಿದ್ದಲ್ಲದೆ, ತಾನು ತಪ್ಪಿಸಿಕೊಂಡು ಹೋಗಲು ಸಾಧ್ಯವಾದರೆ ತನ್ನ ಖಡ್ಗವನ್ನು ದೇವರಿಗೆ ಅರ್ಪಿಸುವುದಾಗಿ ಹರಕೆ ಹೊತ್ತಿದ್ದ. ಹರಕೆಯನ್ನು ತೀರಿಸುವ ಸಲುವಾಗಿ ಅರ್ಪಿಸಿದ್ದ ಖಡ್ಗ ಈಗಲೂ ದೇವಸ್ಥಾನದಲ್ಲಿದೆ. ಪ್ರಾಸಂಗಿಕವಾಗಿ ದೇವಸ್ಥಾನದ ಸ್ಥಳ ಪುರಾಣ, ಪ್ರಚಲಿತ ವಿಚಾರದ ಕುರಿತೂ ಪ್ರಸ್ತಾಪಿಸುವೆ. ಶಿಕಾರಿಪುರದ ತಹಸೀಲ್ದಾರ್ ಮತ್ತು ತಾಲೂಕು ದಂಡಾಧಿಕಾರಿಯಾಗಿ ಎರಡು ಅವಧಿಗಳಲ್ಲಿ ಕೆಲಸ ಮಾಡಿದ್ದರಿಂದ ಮುಜರಾಯಿ ಅಧಿಕಾರಿಯಾಗಿಯೂ ಈ ದೇವಸ್ಥಾನದ ಅಭಿವೃದ್ಧಿಗಾಗಿ ಕೆಲಸ ಮಾಡಿದ ಸದವಕಾಶವೂ ನನಗೆ ಸಿಕ್ಕಿದ್ದು ಪುಣ್ಯವಾಗಿದೆ. ಕೆಲಸ ಮಾಡಿದ ಅವಧಿಯಲ್ಲಿ ದೇವಸ್ಥಾನದ ಖಾತೆ ವಿವರ ಸ್ಥಳೀಯ ಪುರಸಭೆಯಲ್ಲಿ ಇಲ್ಲದಿದ್ದುದನ್ನು ಗಮನಿಸಿ ಹೊಸದಾಗಿ ಸರ್ವೆ ಮಾಡಿಸಿ ಖಾತೆ ವಿವರಗಳು ದಾಖಲಾಗುವಂತೆ ಮಾಡಿದ್ದು, ಒತ್ತುವರಿ ಮಾಡಿದ್ದವರನ್ನು ತೆರವುಗೊಳಿಸಿದ್ದು ಮತ್ತು ಹೊಸ ಒತ್ತುವರಿಗೆ ಅವಕಾಶವಿರದಂತೆ ಮಾಡಿದ್ದು ಹೇಳಿಕೊಳ್ಳಬಹುದಾದ ಸಂಗತಿಯಾಗಿದೆ. ಸಮೀಪದ ಹುಚ್ಚರಾಯ ಸ್ವಾಮಿಯ ಕೆರೆಯ ಅಭಿವೃದ್ಧಿ, ಉದ್ಯಾನವನ ನಿರ್ಮಾಣ ಮತ್ತು ಬೃಹತ್ ಈಶ್ವರನ ವಿಗ್ರಹ ಸ್ಥಾಪನೆಗೆ ಆಗ ರಾಜ್ಯದ ಉಪಮುಖ್ಯಮಂತ್ರಿ ಮತ್ತು ನಂತರದಲ್ಲಿ ಮುಖ್ಯಮಂತ್ರಿಗಳಾಗಿದ್ದ ಶ್ರೀ ಯಡಿಯೂರಪ್ಪನವರು ಆಸಕ್ತಿ ವಹಿಸಿದ್ದುದನ್ನು ವಿಶೇಷವಾಗಿ ಉಲ್ಲೇಖಿಸಬೇಕು. ಆ ಅವಧಿಯಲ್ಲಿ ಈಗ ಈಶ್ವರನ ವಿಗ್ರಹವಿರುವ ಸ್ಥಳ ಮರಾಠ ಸಮಾಜದ ವ್ಯಕ್ತಿಯೊಬ್ಬರಿಗೆ ಸೇರಿದ್ದಾಗಿದ್ದು, ಅವರಿಗೆ ವಾರಸುದಾರರಿಲ್ಲದ ಪ್ರಯುಕ್ತ ಅದನ್ನು ಸಾರ್ವಜನಿಕ ಉದ್ದೇಶಕ್ಕಾಗಿ ಸರ್ಕಾರದ ಸುಪರ್ದಿಗೆ ತೆಗೆದುಕೊಳ್ಳುವ ಕೆಲಸ ಆಗುವಂತೆ ಮಾಡಿದ್ದು ತಹಸೀಲ್ದಾರನಾಗಿ ನಾನು ಮಾಡಿದ್ದ ಕರ್ತವ್ಯವಾಗಿದ್ದರೂ ಈಗ ಆ ಸ್ಥಳ ಜನಾಕರ್ಷಣೆಯ ಕೇಂದ್ರವಾಗಿರುವುದು ನನಗೆ ಮುದ ನೀಡಿದ ಕೆಲಸವಾಗಿದೆ.
     ಸುಮಾರು 17ನೆಯ ಶತಮಾನಕ್ಕೆ ಸೇರಿದ ಈ ದೇವಸ್ಥಾನ ಈಗ ಜೀರ್ಣೋದ್ಧಾರಗೊಂಡು ಸುಂದರವಾಗಿ ಕಂಗೊಳಿಸಿದೆ. ವೀರಶೈವ ಮತದ ಹುಚ್ಚಪ್ಪಸ್ವಾಮಿ ಎಂಬುವರಿಂದ ನಿರ್ಮಾಣಗೊಂಡಿತೆನ್ನಲಾಗಿದೆ. ತೀರ್ಥಹಳ್ಳಿ ತಾಲ್ಲೂಕಿನ ಕವಲೆದುರ್ಗ ಮಠದಿಂದ ಬಂದು ಶಿಕಾರಿಪುರದ ನೆಲವಾಗಿಲಿನಲ್ಲಿ ನೆಲೆಸಿದ್ದ ಹುಚ್ಚಪ್ಪಸ್ವಾಮಿ ಸ್ಥಳೀಯ ಬ್ರ್ರಾಹ್ಮಣ ಕುಟುಂಬಗಳೊಂದಿಗೆ ಸೌಹಾರ್ದ ಸಂಬಂಧ ಹೊಂದಿ ಬ್ರ್ರಾಹ್ಮಣ ದೀಕ್ಷೆ ಪಡೆದು ಮಠವೊಂದನ್ನು ಸ್ಥಾಪಿಸಿಕೊಂಡಿದ್ದನೆನ್ನಲಾಗಿದೆ. ಒಂದು ದಿನ ಹುಚ್ಚಪ್ಪಸ್ವಾಮಿಯ ಕನಸಿನಲ್ಲಿ ಹನುಮಂತ ದೇವರು ಕಾಣಿಸಿಕೊಂಡು ಊರಿನ ದೊಡ್ಡಕೆರೆಯಲ್ಲಿ ತನ್ನ ವಿಗ್ರಹವಿದ್ದು ಅದನ್ನು ಹೊರತೆಗೆದು ಪ್ರತಿಷ್ಠಾಪಿಸುವಂತೆ ಹೇಳಿದಂತೆ ಆಗುತ್ತದೆ. ಈ ವಿಷಯವನ್ನು ಹುಚ್ಚಪ್ಪಸ್ವಾಮಿ ಊರಿನ ಪ್ರಮುಖರಿಗೆ ತಿಳಿಸಲಾಗಿ ಕೆಲವರು ಅಪಹಾಸ್ಯ ಮಾಡಿ ನಕ್ಕರೂ, ಕೆಲವರಿಗೆ ಅದನ್ನು ಪರೀಕ್ಷಿಸುವ ಮನಸ್ಸಾಗುತ್ತದೆ. ಅವರು ಗ್ರಾಮಸ್ಥರ ನೆರವಿನೊಂದಿಗ ಹುಚ್ಚಪ್ಪಸ್ವಾಮಿ ಹೇಳಿದ ಸ್ಥಳದಲ್ಲಿ ಪರಿಶೀಲಿಸಿದಾಗ ಅಲ್ಲಿ ಕಲ್ಲಿನ ಬಾನಿಯೊಂದು ಮಗುಚಿಕೊಂಡಿರುವ ಸ್ಥಿತಿಯಲ್ಲಿರುವುದು ಕಂಡುಬರುತ್ತದೆ. ಅದನ್ನು ಮಗುಚಿ ನೋಡಿದಾಗ ಅಲ್ಲಿ ಮನೋಹರವಾದ ಆಂಜನೇಯನ ವಿಗ್ರಹ ಗೋಚರವಾಗುತ್ತದೆ. ಅದನ್ನು ಹೊರತೆಗೆದು ಎಲ್ಲಿ ಪ್ರತಿಷ್ಠಾಪಿಸಬೇಕು ಎಂಬ ಬಗ್ಗೆ ಚರ್ಚೆಯಾಗುತ್ತದೆ. ಹುಚ್ಚಪ್ಪಸ್ವಾಮಿಯವರ ಮಠದಲ್ಲೇ ಪ್ರತಿಷ್ಠಾಪಿಸಬೇಕೆಂದು ತೀರ್ಮಾನವಾದಾಗ ದೇವರಿಗೆ ತನ್ನ ಹೆಸರನ್ನೇ ಇಡುವುದಾದರೆ ಅದಕ್ಕೆ ಅವಕಾಶ ಕೊಡುವುದಾಗಿ ಅವರು ಹೇಳುತ್ತಾರೆ. ಹೀಗಾಗಿ ಹುಚ್ಚರಾಯಸ್ವಾಮಿ ಎಂದೇ ಆಂಜನೇಯ ಇಲ್ಲಿ ಹೆಸರಾಗಿದ್ದಾನೆ. ಸುಮಾರು ಆರು ಅಡಿ ಉದ್ದ, ನಾಲ್ಕು ಅಡಿ ಅಗಲ ಮತ್ತು ಆಳವಿರುವ ಕಲ್ಲಿನ ಬಾನಿಯನ್ನು ಈಗಲೂ ದೇವಸ್ಥಾನದಲ್ಲಿ ಕಾಣಬಹುದಾಗಿದೆ. ಈ ಬಾನಿಯನ್ನು ಸೂಕ್ತ ಸ್ಥಳದಲ್ಲಿ ಇಟ್ಟು ಸುತ್ತಲೂ ಸರಪಳಿ ಕಟಕಟೆ ನಿರ್ಮಿಸಿ ಅದಕ್ಕೆ ಹಾನಿಯಾಗದಂತೆ ಸಂರಕ್ಷಿಸಿಡುವುದು ಸೂಕ್ತವಾಗಿದೆ. ಹುಚ್ಚರಾಯ ಅನ್ನುವ ಹೆಸರು ಎಷ್ಟು ಜನಪ್ರಿಯವೆಂದರೆ ಈ ಹೆಸರನ್ನಿಟ್ಟುಕೊಂಡ ಬಹಳಷ್ಟು ಜನರು ಶಿಕಾರಿಪುರ ತಾಲ್ಲೂಕಿನಲ್ಲಿ ಕಾಣಸಿಗುತ್ತಾರೆ. 
     ಹುಚ್ಚರಾಯಸ್ವಾಮಿಯನ್ನು ಭ್ರಾಂತೇಶ ಎಂಬ ಹೆಸರಿನಿಂದಲೂ ಕರೆಯುತ್ತಾರೆ. ಇಲ್ಲಿ ಇರುವ ವಿಗ್ರಹದ ಮೂಗು ಸಾಲಿಗ್ರಾಮ ಶಿಲೆಯದ್ದಾಗಿದೆ. ಇಲ್ಲಿ ಪ್ರಚಲಿತವಿರುವ ಸಂಗತಿಯೆಂದರೆ ಸಾಲಿಗ್ರಾಮ ಹೊಂದಿರುವ ಮೂರು ದೇವರ ದರ್ಶನ ಮಾಡಿದರೆ ಮನೋಭೀಷ್ಠಗಳು ನೆರವೇರುತ್ತವೆ ಎಂಬ ನಂಬಿಕೆ. ಶಿಕಾರಿಪುರದ ಭ್ರಾಂತೇಶ, ಹಾವೇರಿ ಜಿಲ್ಲೆ ಬ್ಯಾಡಗಿ ತಾಲ್ಲೂಕಿನ ಕದರಮಂಡಲಗಿಯಲ್ಲಿರುವ ಕಾಂತೇಶ ಮತ್ತು ಧಾರವಾಡ ಜಿಲ್ಲೆಯ ಸಾತೇನಹಳ್ಳಿಯ ಶಾಂತೇಶರ ದರ್ಶನವನ್ನು ಒಂದೇ ದಿನ ಮಾಡಿದರೆ ಕಾಶಿಯಾತ್ರೆ ಮಾಡಿದಷ್ಟು ಪುಣ್ಯ ಸಿಗುತ್ತದೆಯೆಂದು ಜನರು ನಂಬುತ್ತಾರೆ. ವಿಶೇಷವೆಂದರೆ ಶಾಂತೇಶ ಮತ್ತು ಕಾಂತೇಶ ಸಹ ಆಂಜನೇಯನ ವಿಗ್ರಹಗಳೇ ಆಗಿದ್ದು ಅಲ್ಲಿನ ಸ್ಥಳಪುರಾಣಗಳೂ ಸಹ ಇದೇ ರೀತಿ ಇರುವುದೆನ್ನಲಾಗಿದೆ. ಶಿಕಾರಿಪುರದ ಭ್ರಾಂತೇಶನಿಗೆ ಮೂಗಿನಲ್ಲಿ ಸಾಲಿಗ್ರಾಮವಿದ್ದರೆ, ಕದರಮಂಡಲಗಿಯ ಕಾಂತೇಶನಿಗೆ ಕಣ್ಣುಗಳಲ್ಲಿ ಮತ್ತು ಸಾತೇನಹಳ್ಳಿಯ ಶಾಂತೇಶನಿಗೆ ಎದೆಯ ಮೇಲ್ಭಾಗದಲ್ಲಿ ಸಾಲಿಗ್ರಾಮ ಇದೆಯೆನ್ನಲಾಗಿದೆ. ಈ ಮೂರು ಸ್ಥಳಗಳು ದೂರದಲ್ಲಿದ್ದರೂ ಒಂದು ದಿನದಲ್ಲಿ ನೋಡಿಬರಲು ಅವಕಾಶವಿದ್ದು, ವಾಹನದ ವ್ಯವಸ್ಥೆ ಮಾಡಿಕೊಂಡು ಹೋಗಿಬರುವ ಭಕ್ತಾದಿಗಳ ಸಂಖ್ಯೆ ಕಡಿಮೆಯೇನಿಲ್ಲ. 
     ದಿನಾಂಕ 20.10.2016ರಂದು ಶಿಕಾರಿಪುರಕ್ಕೆ ಭೇಟಿ ನೀಡಿದ ಸಂದರ್ಭದ ಫೋಟೋಗಳಿವು.ನಿವೃತ್ತನಾಗಿ ಎಂಟು ವರ್ಷಗಳ ನಂತರದಲ್ಲೂ ರೆವಿನ್ಯೂ  ಇನ್ಸ್ ಪೆಕ್ಟರ್ ಮಂಜುನಾಥ್, ಕೃಷ್ನಮೂರ್ತಿ, ಕಛೇರಿಯ ಮತ್ತು ದೇವಸ್ಥಾನದ ಸಿಬ್ಬಂದಿ ತೋರಿದ ವಿಶ್ವಾಸಕ್ಕೆ ಮನತುಂಬಿಬಂದಿತು. ಹೊಸದಾಗಿ ಬಂದಿದ್ದ ತಹಸೀಲ್ದಾರ್ ಶ್ರೀ ಬಿ. ಶಿವಕುಮಾರರೂ ಧೊಂಡಿಯವಾಘನ ಕುರಿತು ಆಸಕ್ತಿ ತೋರಿಸಿದ್ದು ಸಂತಸವಾಯಿತು.
-ಕ.ವೆಂ.ನಾಗರಾಜ್. 
***************
ಈಗಿನ ತಹಸೀಲ್ದಾರ್ ಶ್ರೀ ಶಿವಕುಮಾರರೊಂದಿಗೆ ಧೊಂಡಿಯ ಕುರಿತು ಮಾತುಕತೆ



ಧೊಂಡಿಯವಾಘನ ಖಡ್ಗದೊಂದಿಗೆ


ದೇವಸ್ಥಾನದ ಆವರಣದಲ್ಲಿ 

ಅಭಿವೃದ್ಧಿಗೊಂಡ ಹುಚ್ಚರಾಯನಕೆರೆ ಆವರಣ
ಬೃಹತ ಶಿವನ ವಿಗ್ರಹ - ಇದರ ನಿರ್ಮಾಣದಲ್ಲಿ ನನ್ನ ಪಾಲೂ ಇದೆಯೆಂಬ ಹೆಮ್ಮೆ

2 ಕಾಮೆಂಟ್‌ಗಳು:

  1. Chidananda Nagaraj
    Good work sir

    Subraya Kamath K
    This is a kind of work normally officeers do not consider important. It is indeed heartening that Nagaraj has done it. Removing encroachment is easier said than done! Hats off to Nagarajs great work! Posterity will commend this work! Great!

    Kavi Nagaraj
    ಧನ್ಯವಾದಗಳು, ಸರ್.

    Shivappa Parashuramappa ·
    You have enlightened new information about Huchuraya Temple .
    We must thank to Hon. BSY ji, Sri.BSR ji and Sri. Gurumurthy ji for this beautiful and enormous development.

    Kavi Nagaraj
    ಆ ಅವಧಿಯಲ್ಲಿ ಇನ್ನಿತರ ಹೊಸ ಹೊಸ ಯೋಜನೆಗಳಿಗೆ (ಶಾಲಾ ಕಾಲೇಜುಗಳ ಕಟ್ಟಡಗಳು, ವಿದ್ಯುತ್ ಯೋಜನೆಗಳು, ಇತ್ಯಾದಿ) ಸರ್ಕಾರಿ ಜಾಗಗಳನ್ನು ಹೊಂದಿಸುವುದು, ತೊಂದರೆ ನಿವಾರಿಸುವುದು, ಒತ್ತುವರಿ ತೆರವು ಮಾಡುವುದು, ಪ್ರತಿಭಟನೆಗಳು, ಕೋರ್ಟು, ಕಛೇರಿ ಅಲೆದಾಟಗಳು, ಒತ್ತಡಗಳು, ಕಿರಿಕಿರಿಗಳು ಇವುಗಳನ್ನು ನೆನೆಸಿಕೊಂಡರೆ ಆಗಿರುವ ಕೆಲಸದ ಬಗ್ಗೆ, ನನ್ನ ಕರ್ತವ್ಯ ನಿರ್ವಹಿಸಿದ ಬಗ್ಗೆ ನನಗೆ ತೃಪ್ತಿಯಾಗುತ್ತದೆ. ಶಿಕಾರಿಪುರ ಬಿಟ್ಟ ನಂತರದಲ್ಲೂ ಅಂತಹ ಕೇಸುಗಳಲ್ಲಿ ಕೋರ್ಟುಗಳಿಗೆ ಸಾಕ್ಷಿ ಹೇಳಿಕೆಗಳನ್ನು ನೀಡಲು ಹಲವಾರು ಸಲ ಶಿಕಾರಿಪುರ ಮತ್ತು ಶಿವಮೊಗ್ಗದ ಕೋರ್ಟುಗಳಿಗೆ ಹೋಗಿಬಂದಿರುವೆ. ಶ್ರೀ ಯಡಿಯೂರಪ್ಪ ಮತ್ತು ಶ್ರೀ ಗುರುಮೂರ್ತಿ ಮತ್ತು ಜನರ ಸಹಕಾರ ನನಗೆ ಬೆನ್ನೆಲುಬಾಗಿತ್ತು. ಆ ಯೋಜನೆಗಳ ಶಂಕುಸ್ಥಾಪನೆ, ಉದ್ಘಾಟನೆ, ಇತ್ಯಾದಿಗಳು ನಾನು ಶಿಕಾರಿಪುರದಲ್ಲಿದ್ದಾಗ ಮತ್ತು ಬಿಟ್ಟ ನಂತರದಲ್ಲಿ ಆದ ಸಂದರ್ಭಗಳಲ್ಲಿ ಪ್ರಾರಂಭದ ದಿನಗಳಲ್ಲಿನ ನನ್ನ ಶ್ರಮ ಸಾರ್ಥಕವೆನಿಸಿತ್ತು. ಕಛೇರಿ ಸಿಬ್ಬಂದಿಯ ಮತ್ತು ತಾಲ್ಲೂಕಿನ ಅಧಿಕಾರಿಗಳೆಲ್ಲರ ಶ್ರಮವೂ ಇದರಲ್ಲಿದೆ. ತಾ.ನ ಅಧಿಕಾರಿಗಳ ನೆಟ್ ವರ್ಕ್ ಹೇಗಿತ್ತೆಂದರೆ ಎಸ್ಸೆಮ್ಮೆಸ್ ಮಾಡಿದ 15 ನಿಮಿಷಗಳಲ್ಲಿ ಒಟ್ಟಿಗೆ ಸೇರಿ ನಿರ್ಧಾರಕ್ಕೆ ಬರುತ್ತಿದ್ದೆವು. ಕೆಲಸಗಳ ಅಡ್ಡಿ ನಿವಾರಣೆಗೆ ಯೋಜಿಸುತ್ತಿದ್ದೆವು. ಎಲ್ಲರನ್ನೂ ನೆನೆಸಿಕೊಳ್ಳುತ್ತಿರುವೆ. ಪ್ರತಿಕ್ರಿಯೆಗೆ ವಂದನೆಗಳು.

    Satyavati Subramanya
    ತಮ್ಮ ಕರ್ತವ್ಯನಿಷ್ಟೆಗೆ,ಕೋಟಿ ನಮನಗಳು.

    Veerabadra Shetty
    ಅದ್ಭುತ,ಮಹಾನುಭಾವರೇ,ದೇವರು ನಿಮಗೆ ಒಳ್ಳೆಯದು ಮಾಡಲಿ,

    Venkata Giriappa
    Oh salute you sir and the state government that allowed you to work for Hindu and temples .in the history of independence it may be an exception to have reinforced temple status when Congress government at centre and governor did not notice your act .you r a prathahsmaraniya in the language of indian ethos and culture .

    ಪ್ರತ್ಯುತ್ತರಅಳಿಸಿ