ದೊಡ್ಡ ಮನುಷ್ಯರೆಂದರೆ ಯಾರು? ಅಧಿಕಾರ ಇರುವವರೇ? ಹಣ, ಅಂತಸ್ತು ಹೊಂದಿರುವವರೇ? ದೊಡ್ಡ ದೇಹದ ಬಲಶಾಲಿಗಳೇ? ವಯಸ್ಸಿನಲ್ಲಿ ಹಿರಿಯರಾದವರೇ? ವಿದ್ವಾಂಸರೇ? ಹಿಂದಿನ ಕಾಲದಲ್ಲಿ ರಾಜಾ ಪ್ರತ್ಯಕ್ಷ ದೇವತಾ ಎನ್ನುತ್ತಿದ್ದರು. ಹಾಗೆಂದು, ಎಲ್ಲಾ ರಾಜರುಗಳೂ ದೇವರಂತೆ ಇರಲಿಲ್ಲ. ಈಗ ಅರಸೊತ್ತಿಗೆ ಇಲ್ಲ. ಜನರಿಂದ ಆಯ್ಕೆಗೊಂಡ ಪ್ರಜಾಪ್ರತಿನಿಧಿಗಳು ಆಳುವವರ ಸ್ಥಾನದಲ್ಲಿದ್ದಾರೆ. ಅವರಿಗೆ ಅಧಿಕಾರವಿದೆ, ಪೊಲೀಸ್ ಪಡೆಯಿದೆ, ಸೈನ್ಯವಿದೆ, ಕಾಯದೆ, ಕಾನೂನುಗಳ ನಿಯಂತ್ರಣ ಅವರುಗಳ ಕೈಯಲ್ಲೇ ಇದೆ. ಹಣಬಲವಿದೆ, ಜನಬಲವಿದೆ. ಅವರುಗಳು ದೊಡ್ಡವರೇ? ಕೆಲವರ ಬಳಿ ಅಧಿಕಾರವಿರುವುದಿಲ್ಲ, ಹಣ ಇರುವುದಿಲ್ಲ, ಹುಟ್ಟಿನ ಅಥವ ಜಾತಿಯ ಬೆಂಬಲವಿರುವುದಿಲ್ಲ. ಆದರೂ ಅವರನ್ನು ಜನ ದೊಡ್ಡವರೆಂದು ಗೌರವದಿಂದ ಕಾಣುತ್ತಾರೆ. ಅವರನ್ನು ಗೌರವದಿಂದ ಕಾಣುವಂತೆ ಮಾಡುವ ಸಂಗತಿಯೆಂದರೆ ಅವರ ಸುಸಂಸ್ಕೃತ ನಡವಳಿಕೆ ಹಾಗೂ ಸಮಾಜದ ಕುರಿತ ಅವರ ಕಳಕಳಿ. ಸಾಮಾನ್ಯರು ಸ್ವಂತದ ಬಗ್ಗೆ ಎಷ್ಟು ಕಾಳಜಿ, ಮುತುವರ್ಜಿ ವಹಿಸುತ್ತಾರೋ, ಅದಕ್ಕಿಂತ ಹೆಚ್ಚಿನ ಕಾಳಜಿಯನ್ನು ಅಂತಹವರು ಸಮಾಜದ ಸಹಜೀವಿಗಳ ಬಗ್ಗೆ ವಹಿಸುತ್ತಾರೆ. ಅವರಿಗೆ ಸ್ವಂತದ ಹಿತ, ಅಧಿಕಾರ, ಅಂತಸ್ತಿಗಿಂತ ಸಮುದಾಯದ ಹಿತವೇ ಉನ್ನತವಾದುದಾಗಿರುತ್ತದೆ. ಇತರರು ಅವರನ್ನು ಗೌರವಿಸುವಂತೆ ಮಾಡುವ ಅಂಶ ಇದೇ ಆಗಿದೆ.
ಎಷ್ಟೋ ಜನರಿಗೆ ತಮ್ಮ ತಾತ, ಮುತ್ತಾತಂದಿರುಗಳ ಹೆಸರುಗಳೇ ತಿಳಿದಿರುವುದಿಲ್ಲ. ಆದರೆ ತಮ್ಮ ಕುಟುಂಬಕ್ಕೆ ಸಂಬಂಧವೇ ಇರದಿರುವ ವಿವೇಕಾನಂದ, ಭಗತ್‌ಸಿಂಗ್, ಮಹಾತ್ಮ ಗಾಂಧಿ, ಬಸವಣ್ಣ, ಅಂಬೇಡ್ಕರ್ ಮುಂತಾದವರ ಬಗ್ಗೆ ಚೆನ್ನಾಗಿ ತಿಳಿದಿರುತ್ತದೆ. ಇವರುಗಳಿಗಿಂತ ಹಿಂದಿನವರಾದ, ಮಹಾಮಹಿಮರೆಂದು ಪರಿಗಣಿಸುವ ನೂರಾರು ಗಣ್ಯರುಗಳ ಬಗ್ಗೆ ಸಹ ನಮಗೆ ಗೌರವ ಇಂದಿಗೂ ಇರುತ್ತದೆ. ಏಕೆ? ಇದಕ್ಕೆ ಉತ್ತರ ಬಹಳ ಸರಳವಾಗಿದೆ. ಅವರುಗಳು ಯಾರೂ ಸ್ವಂತದ ಹಿತಕ್ಕೆ ಪ್ರಾಧಾನ್ಯ ಕೊಟ್ಟವರಲ್ಲ. ಸಮಾಜದ ಹಿತವೇ ಮುಖ್ಯವೆಂದು ಭಾವಿಸಿ ಸಮಾಜದ ಸಲುವಾಗಿಯೇ ಬಾಳಿ ತಮ್ಮ ಜೀವನವನ್ನು ಅರ್ಪಿಸಿದ್ದವರು. ಹುಟ್ಟಿದೆವು, ಹೇಗೋ ಬಾಳಿದೆವು, ಸಂಸಾರ ಸಾಗಿಸಿದೆವು, ಒಂದು ದಿನ ಕಂತೆ ಒಗೆದೆವು ಎನ್ನುವವರನ್ನು ಸಮಾಜವಿರಲಿ, ಅವರ ಕುಟುಂಬಸ್ಥರುಗಳೇ ನೆನಪಿನಲ್ಲಿ ಇಟ್ಟುಕೊಳ್ಳುವವರ ಸಂಖ್ಯೆ ಬಹಳ ಕಡಿಮೆ. ಯಾರು ಇತರರ ಸಲುವಾಗಿ ಬಾಳುತ್ತಾರೋ ಅವರುಗಳನ್ನೇ ಜನರು ಸ್ಮರಿಸುವವರು. ಯಾರು ಜನಮಾನಸದ ಸ್ಮರಣೆಯಲ್ಲಿ ಬಹುಕಾಲ ಉಳಿಯುತ್ತಾರೋ ಅವರುಗಳೇ ದೊಡ್ಡವರು.
ದೇವರು ನಮ್ಮೊಳಗೆ ಅದೇನನ್ನೋ ಹುದುಗಿಸಿ ಇಟ್ಟಿದ್ದಾನೆ. ಅದೇ ನಮ್ಮನ್ನು ಈಗಿರುವುದಕ್ಕಿಂತ ಉನ್ನತ ಸ್ಥಿತಿಗೆ ಏರುವ ತುಡಿತ. ಆ ಉನ್ನತ ಸ್ಥಿತಿ ಅಂದರೆ ನಮ್ಮ ದೃಷ್ಟಿಯಲ್ಲಿ ಏನು ಅನ್ನುವುದನ್ನು ಅವಲಂಬಿಸಿ ನಮ್ಮ ವ್ಯಕ್ತಿತ್ವಗಳು ರೂಪಿತಗೊಳ್ಳುತ್ತವೆ. ಕೆಲವರಿಗೆ ಅಧಿಕಾರದ ಹಂಬಲ, ಕೆಲವರಿಗೆ ಹಣ, ಆಸ್ತಿ ಮಾಡಿಕೊಳ್ಳುವ ಹಂಬಲ, ಕೆಲವರಿಗೆ ಸಕಲ ಮೋಜುಗಳನ್ನೂ ಅನುಭವಿಸುವ ಹಂಬಲ, ಹೀಗೆ ಒಂದಲ್ಲಾ ಒಂದು ರೀತಿಯಲ್ಲಿ ದೊಡ್ಡವರೆನ್ನಿಸಿಕೊಳ್ಳುವ ಹಂಬಲ ಇರುತ್ತದೆ. ಕೆಲವರು ತಮ್ಮ ಇಚ್ಛೆ, ಬಯಕೆಗಳಂತೆ ದೊಡ್ಡ ಸ್ಥಿತಿಗೆ ಏರಲೂಬಹುದು. ಆದರೆ, ಆ ಎಲ್ಲಾ ದೊಡ್ಡವರುಗಳನ್ನು ಜನರು ನೆನೆಯುವುದಿಲ್ಲ. ಮೊದಲೇ ಹೇಳಿದಂತೆ ಅವರ ದೊಡ್ಡತನಗಳಲ್ಲಿ ಸಂಕುಚಿತ ಸ್ವಾರ್ಥದ ಪ್ರಮಾಣ ಕಡಿಮೆಯಿದ್ದಷ್ಟೂ ಅವರುಗಳು ಜನರ ದೃಷ್ಟಿಯಲ್ಲೂ ದೊಡ್ಡವರೆನ್ನಿಸಿಕೊಳ್ಳುತ್ತಾ ಹೋಗುತ್ತಾರೆ.
ಎಲ್ಲರೂ ಸ್ವಾರ್ಥ ಬಿಟ್ಟು ಸಮಾಜಕ್ಕಾಗಿಯೇ ದುಡಿಯಲಿ ಎಂದು ನಿರೀಕ್ಷೆ ಮಾಡಲು ಸಾಧ್ಯವಿಲ್ಲ. ಆದರೆ, ಇದ್ದುದರಲ್ಲಿಯೇ, ನಮ್ಮ ಕಾರ್ಯಕ್ಷೇತ್ರದಲ್ಲಿಯೇ ನಿಸ್ಪೃಹರಾಗಿದ್ದರೆ ಅದೂ ದೊಡ್ಡತನವೇ. ಅಂದರೆ, ವಿದ್ಯಾರ್ಥಿಯಿರಲಿ, ನೌಕರನಿರಲಿ, ರಾಜಕಾರಣಿಯಿರಲಿ, ರೈತನಿರಲಿ, ಕಾರ್ಮಿಕನಿರಲಿ, ಮಾಲಿಕನಿರಲಿ ತಮ್ಮ ತಮ್ಮ ಜವಾಬ್ದಾರಿಯನ್ನು ನಾಗರಿಕ ಪ್ರಜ್ಞೆಯಿಂದ, ಸಮೂಹ ಹಿತದೃಷ್ಟಿಯಿಂದ ಪಾಲಿಸಿದಲ್ಲಿ ಅವರುಗಳೂ ದೊಡ್ಡವರೇ. ಉತ್ತಮ ತಾಯಿ, ಉತ್ತಮ ತಂದೆ, ಉತ್ತಮ ಶಿಕ್ಷಕ, ಉತ್ತಮ ಸ್ನೇಹಿತ, ಉತ್ತಮ ಆಟಗಾರ ಆಗಲು ಶ್ರಮಿಸುವುದೂ ದೊಡ್ಡವರಾಗುವ ಪ್ರಯತ್ನವೇ ಸರಿ. ಕೆಲವರು ದೊಡ್ಡವರಾಗಲು ಅಡ್ಡದಾರಿ ಹಿಡಿಯುತ್ತಾರೆ. ಅದರಿಂದ ಅವರಿಗೂ ಮತ್ತು ಸಮಾಜಕ್ಕೂ ಹಿತವಾಗಲಾರದು. ರಾಜಕಾರಣಿಗಳು ತಾವು ದೊಡ್ಡವರು ಎಂದು ತೋರಿಸಿಕೊಳ್ಳುವುದಕ್ಕೆ ಇತರರು ಕೆಟ್ಟವರು, ಕೀಳು ಎಂದು ಬಿಂಬಿಸುವುದು ಸಾಮಾನ್ಯವಾಗಿಬಿಟ್ಟಿದೆ. ಇನ್ನು ಕೆಲವರಿಗೆ ಇತರರ ದೋಷ, ದೌರ್ಬಲ್ಯಗಳನ್ನು ಎತ್ತಿ ಆಡುತ್ತಾ ತಾವು ಹಾಗಿಲ್ಲ, ಸಂಭಾವಿತ ಎಂದು ಪರೋಕ್ಷವಾಗಿ ತೋರಿಸಿಕೊಳ್ಳುವ ಚಟವಿರುತ್ತದೆ. ಅವರುಗಳು ಸಂಭಾವಿತರಾಗಿದ್ದರೂ ಸಹ, ಅವರ ಈ ಚಟದಿಂದ ಅವರು ಕುಬ್ಜರಾಗಿಬಿಡುತ್ತಾರೆ.
ದೊಡ್ಡತನದ ಕುರಿತು ಸಂಕ್ಷಿಪ್ತವಾಗಿ ಹೇಳಬಹುದಾದುದೇನೆಂದರೆ:
೧. ದೊಡ್ಡತನವನ್ನು ದೈಹಿಕ ಶಕ್ತಿಯಿಂದ ಅಳೆಯಲಾಗದು, ಗುಣಗಳ ಶಕ್ತಿಯಿಂದ ನಿರ್ಧರಿಸಬಹುದು.
೨. ದೊಡ್ಡತನ ಆಸ್ತಿ, ಅಂತಸ್ತು ಸಂಪಾದಿಸುವುದರಲ್ಲಿಲ್ಲ, ಸೇವೆ ಸಲ್ಲಿಸುವುದರಲ್ಲಿದೆ.
೩. ಸ್ವಲಾಭ ಹೊಂದುವುದರಲ್ಲಿ ದೊಡ್ಡತನವಿಲ್ಲ, ತ್ಯಾಗ ಮಾಡುವುದರಲ್ಲಿದೆ, ಪಡೆಯುವುದರಲ್ಲಿಲ್ಲ, ಕೊಡುವುದರಲ್ಲಿದೆ.
೪. ಚಂಚಲತೆಯಲ್ಲಿರದೆ ಧೃಢತೆ, ನಂಬಿಕೆ, ಸ್ಥಿರತೆ, ಸಾತತ್ಯತೆಗಳಲ್ಲಿ ದೊಡ್ಡತನವಿದೆ.
ನಾವೂ ದೊಡ್ಡವರಾಗಲು ಸರಳ ಮಾರ್ಗವಿದೆ. ಅದೆಂದರೆ, ಆತ್ಮವತ್ ಸರ್ವಭೂತೇಷು- ಎಲ್ಲರನ್ನೂ ನಮ್ಮಂತೆಯೇ ಭಾವಿಸುವುದು! ಸರ್ವಜ್ಞ ಹೇಳಿದಂತೆ, ತನ್ನಂತೆ ಪರರ ಬಗೆದೊಡೆ ಕೈಲಾಸ ಬಿನ್ನಾಣವಕ್ಕು, ಮಹಾವೀರ ಹೇಳಿದಂತೆ, ಬಾಳು, ಬಾಳಗೊಡು ತತ್ವ ಅಳವಡಿಸಿಕೊಳ್ಳುವುದು. ನಮ್ಮಂತೆ ಇತರರನ್ನು ಭಾವಿಸುವುದೆಂದರೆ, ನಮಗೆ ಯಾರಾದರೂ ಹಿಂಸಿಸಿದರೆ ನಮಗೆ ಎಷ್ಟು ನೋವಾಗುತ್ತದೆಯೋ, ಅಷ್ಟೇ ನೋವು ನಾವು ಇನ್ನೊಬ್ಬರನ್ನು ಹಿಂಸಿಸಿದಾಗ ಅವರಿಗೆ ಆಗುತ್ತದೆ ಎಂಬ ಅರಿವು ಹೊಂದಿರುವುದು. ನಮಗೆ ಸಾಧ್ಯವಾಗುವುದಾದರೆ ಇನ್ನೊಬ್ಬರಿಗೆ ಉಪಕಾರ ಮಾಡೋಣ, ಅಪಕಾರವನ್ನಂತೂ ಮಾಡದಿರೋಣ. ಇನ್ನೊಬ್ಬರಿಗೆ ಉಪಕಾರ ಮಾಡಲು ಸಾಧ್ಯವಿದ್ದು, ಉಪಕಾರ ಮಾಡಿದರೆ, ಅದು ನಮಗೆ ನಾವೇ ಉಪಕಾರ ಮಾಡಿಕೊಂಡಂತೆ! ಅಥರ್ವ ವೇದದ ಈ ಮಂತ್ರ ಹೀಗಿದೆ: 'ಶತಹಸ್ತ ಸಮಾಹರ ಸಹಸ್ರಹಸ್ತ ಸಂ ಕಿರ| ಕೃತಸ್ಯ ಕಾರ್ಯಸ್ಯ ಚೇಹ ಸ್ಫಾತಿಂ ಸಮಾವಹ||' - ನೂರು ಕೈಗಳಿಂದ ಸಂಪಾದಿಸಿ, ಸಾವಿರ ಕೈಗಳಿಂದ ಹಂಚು, ಈ ರೀತಿ ನಿನ್ನ ಕಾರ್ಯ ವಿಸ್ತಾರ ಸಾಧಿಸಿಕೋ ಎನ್ನುವ ಈ ಮಂತ್ರ ಸಮಾಜದ ಹಿತ ಪರಮವೆಂದು ಒತ್ತಿ ಹೇಳಿದೆ. ನಾನಾ ರೀತಿಯಲ್ಲಿ, ಸಾಧ್ಯವಾದ ಎಲ್ಲಾ ನ್ಯಾಯಯುತ ಮಾರ್ಗಗಳಲ್ಲಿ ಸಂಪಾದನೆ ಮಾಡಿ, ಅದನ್ನು ಸಮಾಜದ ಅರ್ಹರಿಗೆ, ದೀನ-ದಲಿತರಿಗೆ ಸಹಾಯ ಮಾಡಲು ಪ್ರೇರೇಪಿಸುವ ಈ ದಾರಿ ದೊಡ್ಡವರಾಗಬಯಸುವವರಿಗೆ ಮಾರ್ಗದರ್ಶಿಯಾಗಿದೆ.
-ಕ.ವೆಂ.ನಾಗರಾಜ್.