ಬೆಂಗಳೂರಿನ ಬಡಾವಣೆಯೊಂದರಲ್ಲಿ "ತಮಿಳು ಭಾಷಿಕರು ಹಾಕಿರುವ ತಮಿಳು ಫ್ಲೆಕ್ಸ್ ಅನ್ನು ಕಿತ್ತುಹಾಕಲು ಕನ್ನಡ ಹೋರಾಟಗಾರರೆಲ್ಲಾ ಇಂತಹ ಸ್ಥಳದಲ್ಲಿ ಸೇರಿ" ಎಂಬ ಒಕ್ಕಣೆ ಫೇಸ್ ಬುಕ್ಕಿನಲ್ಲಿ ಪ್ರಚುರವಾಗಿತ್ತು. ಸನ್ನಿಲಿಯೋನ್ ಕಾರ್ಯಕ್ರಮ ನಡೆಸಲು ಅವಕಾಶ ಕೊಡುವುದಕ್ಕೆ 30 ಲಕ್ಷ ರೂ. ಕೇಳಿದ್ದ ಕನ್ನಡಪರ ಸಂಘಟನೆಯೊಂದರ ಪದಾಧಿಕಾರಿಯ ವಿಚಾರ ಹೆಚ್ಚು ಪ್ರಚಾರ ಮತ್ತು ಟೀಕೆಗೆ ಒಳಗಾಗಿದ್ದ ಸಂದರ್ಭದಲ್ಲೇ ಈ ಒಕ್ಕಣೆ ಪ್ರಕಟಗೊಂಡಿದ್ದು, ಬಹುಷಃ ಜನರ ಗಮನವನ್ನು ಬೇರೆಡೆಗೆ ಸೆಳೆಯುವ ಸಲುವಾಗಿ ಇದ್ದಿರಬೇಕು. ಲಂಚಕ್ಕೆ ಬೇಡಿಕೆ ಇಟ್ಟಿದ್ದನ್ನು ಖಂಡಿಸಿದ್ದ ಒಬ್ಬ ವ್ಯಕ್ತಿಯನ್ನು ಅಪಹರಿಸಿ ಹಿಗ್ಗಾಮುಗ್ಗಾ ಥಳಿಸಿದ ಪ್ರಕರಣವೂ ಆಯಿತು. ಗೋವಾದ ಮಂತ್ರಿಯೊಬ್ಬರು ಕನ್ನಡಿಗರನ್ನು ತುಚ್ಚವಾಗಿ ಹೀಯಾಳಿಸಿದ್ದರು. ಹಿಂದಿ ಫಲಕಗಳ ವಿರುದ್ಧ ಆಗಾಗ್ಗೆ ಸಮೂಹ ಸನ್ನಿಯ ವಾತಾವರಣ ಮೂಡಿ ಫಲಕಗಳಿಗೆ ಮಸಿ ಬಳೆಯುವ ಕಾರ್ಯಕ್ರಮವೂ ಆಗುತ್ತಿರುತ್ತದೆ. ಹಿಂದೊಮ್ಮೆ ಮುಂಬಯಿಯಲ್ಲಿ ಕನ್ನಡಿಗರನ್ನು ಅಲ್ಲಿಂದ ಹೊರಹಾಕುವ ಚಳುವಳಿ ನಡೆದು ಕನ್ನಡಿಗರ ಮೇಲೆ ಹಲ್ಲೆಯಾಗಿತ್ತು. ಕಾವೇರಿ ವಿವಾದ ಭುಗಿಲೆದ್ದಾಗಲೆಲ್ಲಾ ತಮಿಳುನಾಡಿನಲ್ಲಿ ಕನ್ನಡಿಗರ ಮೇಲೆ ಹಲ್ಲೆಯಾಗುವುದು ಸಾಮಾನ್ಯ ಸಂಗತಿಯಾಗಿದೆ. ಕನ್ನಡದ ಹೆಸರಿನಲ್ಲಿ ಚಂದಾ ವಸೂಲು ಮಾಡುವ ಸಂಘ-ಸಂಸ್ಥೆಗಳಿಗೆ ಕರುನಾಡಿನಲ್ಲಿ ಬರವಿಲ್ಲ. ಹಣಬಲವಿರುವ, ರಾಜಕೀಯ ಕೃಪಾಶ್ರಯಗಳಿರುವ ಅಂತಹ ಗುಂಪುಗಳವರು ಸಾಕಿಕೊಂಡಿರುವ ಗೂಂಡಾಪಡೆಗಳ ಭಯದಿಂದಾಗಿ ಸಾಮಾನ್ಯರು ಅವರ ವಿರುದ್ಧ ಮಾತನಾಡುವುದಿಲ್ಲ. ಆದರೆ ಈ ಎಲ್ಲಾ ಪ್ರಸಂಗಗಳಲ್ಲಿ ಕನ್ನಡ ಭಾಷೆಗೆ ಆದ ಅನುಕೂಲವೆಷ್ಟು ಎಂದು ನೋಡಿದರೆ ಉತ್ತರ ಸೊನ್ನೆಯೇ ಆಗಿದೆ. ಕನ್ನಡ ಸಾಹಿತ್ಯದ, ವ್ಯಾಕರಣದ ಗಂಧ-ಗಾಳಿ ಇಲ್ಲದಿದ್ದವರೂ ಕನ್ನಡದ ಹೋರಾಟಗಾರರಾಗಿದ್ದಾರೆ ಎಂಬುದು ವಿಪರ್ಯಾಸ.
ಕನ್ನಡ ಭಾಷೆಯ ಬಗ್ಗೆ ನಿಜವಾದ ಪ್ರೀತಿ ಇದ್ದರೆ ಅದನ್ನು ಉಳಿಸುವ, ಬೆಳೆಸುವ ಬಗ್ಗೆ ಚಿಂತಿಸಬೇಕು. ಅದನ್ನು ಬಿಟ್ಟು ಬೇರೆ ಭಾಷೆಗಳನ್ನು ದ್ವೇಷಿಸಿದರೆ ಕನ್ನಡಕ್ಕೆ ಆಗುವ ಉಪಕಾರವೇನು? ಇಂತಹ ದ್ವೇಷದಿಂದ ಇತರ ರಾಜ್ಯಗಳಲ್ಲಿರುವ ಕನ್ನಡಿಗರಿಗೆ ತೊಂದರೆಯಾಗುವುದೇ ಹೊರತು ಮತ್ತೇನೂ ಆಗದು. ಅಮೆರಿಕಾ, ಬ್ರಿಟನ್, ದುಬಾಯಿ, ಆಸ್ಟ್ರೇಲಿಯ ಮುಂತಾದ ಪರದೇಶಗಳಲ್ಲಿ, ಭಾರತದ ಇತರ ರಾಜ್ಯಗಳಲ್ಲಿ ಕನ್ನಡದ ಅಭಿಮಾನಿಗಳು ಕನ್ನಡದ ಬಗ್ಗೆ ಕಾಳಜಿ ವಹಿಸಿ ಅನೇಕ ಕಾರ್ಯಕ್ರಮಗಳನ್ನು ಮಾಡುತ್ತಿರುವ ಬಗ್ಗೆ, ಅಂತಹ ಕಾರ್ಯಕ್ರಮಗಳಲ್ಲಿ ಕನ್ನಡದ ದಿಗ್ಗಜರು ಭಾಗವಹಿಸುವ ಬಗ್ಗೆ ನಮಗೆ ಹೆಮ್ಮೆ ಆಗುತ್ತದೆಯಲ್ಲವೇ? ಅದೇ ರೀತಿ ಇತರ ಭಾಷಿಕರು ಅವರವರ ಭಾಷೆಗಳ ಬಗ್ಗೆ ಹೆಮ್ಮೆ ಹೊಂದಿರುತ್ತಾರೆ. ಈ ಮೂಲ ಅಂಶವನ್ನು ಗಮನದಲ್ಲಿರಿಸಿ ಕನ್ನಡಿಗರು ಕನ್ನಡವನ್ನು ಮೆರೆಸುವ ಬಗ್ಗೆ ಒತ್ತು ಕೊಡಬೇಕಿದೆ. ಕನ್ನಡದ ಬಗ್ಗೆ ಕನ್ನಡದವರೇ ಅಸಡ್ಡೆ ಮಾಡಿ, ಇತರ ಭಾಷಿಕರು ಕನ್ನಡವನ್ನು ಬಳಸಲು ಒತ್ತಾಯಿಸುವುದು ಅರ್ಥಹೀನ. ಕರುನಾಡಿನ ರಾಜಧಾನಿ ಬೆಂಗಳೂರಿನ ಕನ್ನಡದಲ್ಲಿ ಕನ್ನಡವನ್ನು ಹುಡುಕಬೇಕು. ಅಲ್ಲಿ ಕಂಗ್ಲಿಷಿನದೆ ರಾಜ್ಯಭಾರ. ಅಷ್ಟೇ ಅಲ್ಲ, ಇಂಗ್ಲಿಷ್, ತಮಿಳು, ತೆಲುಗು, ಹಿಂದಿ, ಉರ್ದು ಇತ್ಯಾದಿ ಹಲವಾರು ಭಾಷೆಗಳ ಕಲಸು ಮೇಲೋಗರ. ಕನ್ನಡಿಗರು ಸಕಲ ಭಾಷಾಪ್ರವೀಣರು. ಅವರು ತಮಿಳರೊಂದಿಗೆ ತಮಿಳಿನಲ್ಲಿ, ಹಿಂದಿಯವರೊಂದಿಗೆ ಹಿಂದಿಯಲ್ಲಿ, ಮುಸ್ಲಿಮರೊಂದಿಗೆ ಉರ್ದುವಿನಲ್ಲಿ, ತಮ್ಮ ತಮ್ಮಲ್ಲೇ ಆದರೆ ಶೇ. 70ರಷ್ಟು ಇಂಗ್ಲಿಷ್ ಮಿಶ್ರಿತ ಕನ್ನಡದಲ್ಲಿ ಮಾತನಾಡುತ್ತಾರೆ. ಮಕ್ಕಳೆಲ್ಲರನ್ನೂ ಇಂಗ್ಲಿಷ್ ಮೀಡಿಯಮ್ ಶಾಲೆಗಳಿಗೆ ಕಳಿಸುತ್ತಾರೆ, ಮನೆಯಲ್ಲಿಯೂ ಮಕ್ಕಳೊಂದಿಗೆ ಇಂಗ್ಲಿಷಿನಲ್ಲೇ ಬರದಿದ್ದರೂ ಮಾತನಾಡುತ್ತಾರೆ. ಕರ್ನಾಟಕ ಸಂಗೀತವನ್ನೂ ಇಂಗ್ಲಿಷ್ ಲಿಪಿಯ ಸಾಹಿತ್ಯದಲ್ಲಿ ಕಲಿಸುವ ಸಂಗೀತ ವಿದ್ವಾಂಸರುಗಳು ಬೆಂಗಳೂರಿನಲ್ಲಿದ್ದಾರೆ. ಇಂಗ್ಲಿಷ್ ಮಾಧ್ಯಮದ ಶಾಲೆಗಳಲ್ಲಿ ಕನ್ನಡದಲ್ಲಿ ಮಾತನಾಡಿದರೆ ದಂಡ ವಿಧಿಸುತ್ತಾರೆ. ಇನ್ನು ಕನ್ನಡ ಉಳಿಯಬೇಕೆಂದರೆ ಹೇಗೆ?
ಕನ್ನಡ ನಮಗೆ ಹೇಗೆ ಮಾತೃಭಾಷೆಯೋ, ತಮಿಳರಿಗೆ ತಮಿಳು, ಆಂಧ್ರದವರಿಗೆ ತೆಲುಗು, ಕೇರಳಿಗರಿಗೆ ಮಲಯಾಳಿ, ಮಹಾರಾಷ್ಟ್ರಿಗರಿಗೆ ಮರಾಠಿ, ಉತ್ತರದ ರಾಜ್ಯಗಳವರಿಗೆ ಹಿಂದಿ, ಬಂಗಾಳಿ, ಬಿಹಾರಿ ಇತ್ಯಾದಿಗಳು ಮಾತೃಭಾಷೆಗಳಾಗಿವೆ. ಅವರವರ ಮಾತೃಭಾಷೆಗಳನ್ನು ಗೌರವಿಸುವುದು ಆಯಾ ಭಾಷಿಕರ ಕರ್ತವ್ಯ. ನಮ್ಮ ತಾಯಿ ಬಡವಾಗಿದ್ದಾಳೆ ಎಂದು ಇತರರ ಶ್ರೀಮಂತ ತಾಯಂದಿರನ್ನು ದ್ವೇಷಿಸಿದರೆ ನಮ್ಮ ತಾಯಿಯ ಬಡತನ ಹೋಗುವುದೇ? ಭಾರತದ ಸೋದರ ಭಾಷೆಗಳನ್ನು ನಾವೂ ಗೌರವಿಸುವುದು ಅಗತ್ಯ. ಹಾಗೆಯೇ ನಮ್ಮ ಮಾತೃಭಾಷೆ ಕನ್ನಡಕ್ಕೆ ಪ್ರಥಮ ಆದ್ಯತೆ ನೀಡುವುದೂ ನಮ್ಮ ಕರ್ತವ್ಯ. ನಮ್ಮ ತಾಯಿಭಾಷೆಯನ್ನು ಶ್ರೀಮಂತಗೊಳಿಸಲು ಏನು ಮಾಡಬೇಕೋ ಅದನ್ನು ಮಾಡದೆ, ಕನ್ನಡ, ಕನ್ನಡ ಎಂದು ಬೀದಿಯಲ್ಲಿ ಬೊಬ್ಬೆ ಹೊಡೆದರೆ ಕನ್ನಡ ಉದ್ಧಾರವಾಗುವುದಿಲ್ಲ. ಕನ್ನಡವನ್ನು ವ್ಯವಹಾರಗಳಲ್ಲಿ ಉಳಿಸಬೇಕು, ಬಳಸಬೇಕು. ಹಾಗಾದಾಗ ಮಾತ್ರ ಕನ್ನಡ ಉಳಿದೀತು. ರಾಜ್ಯ ಸರ್ಕಾರ ಈ ದಿಸೆಯಲ್ಲಿ ವಿಫಲವಾಗಿದೆಯೆಂದರೆ ಕಠಿಣವಾದ ಮಾತಾದರೂ ಸತ್ಯವಾಗಿದೆ. ಕನ್ನಡ ಮಾಧ್ಯಮದ ಶಾಲೆಗಳಿಗೆ ಉತ್ತೇಜನ ಏನೇನೂ ಸಾಲದು. ಕನ್ನಡದ ಸರ್ಕಾರಿ ಶಾಲೆಗಳು ಮಕ್ಕಳಿಲ್ಲದೆ ಮುಚ್ಚಲ್ಪಡುತ್ತಿವೆ. ಖಾಸಗಿ ಶಾಲೆಗಳಲ್ಲಂತೂ ಕನ್ನಡಕ್ಕೆ ಸ್ಥಾನವೇ ಇಲ್ಲ. ಕನ್ನಡ ಸಾಹಿತ್ಯ ಪರಿಷತ್, ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕನ್ನಡ ಸಾಹಿತ್ಯ ಅಕಾಡೆಮಿ ಇತ್ಯಾದಿಗಳು ಸರ್ಕಾರಿ ಕೃಪಾಪೋಷಿತ ಸಂಸ್ಥೆಗಳಾಗಿದ್ದು, ಸರ್ಕಾರದ ಅನುದಾನ ಅವಲಂಬಿಸಿ ಆಡಳಿತದಲ್ಲಿರುವ ರಾಜಕಾರಣಿಗಳ ಹಸ್ತಕ್ಷೇಪಕ್ಕೆ, ಮುಲಾಜಿಗೆ ಒಳಗಾಗಿವೆ. ವರ್ಷಕ್ಕೊಮ್ಮೆ ಸಮ್ಮೇಳನಗಳು, ಕೆಲವು ಔಪಚಾರಿಕ ನಿರ್ಣಯಗಳನ್ನು ಅಂಗೀಕರಿಸಿದರೆ ಅವುಗಳ ಕೆಲಸ ಮುಗಿಯಿತು. ಅವು ಜಾರಿಯಾಗುತ್ತವೆಯೇ ಎಂದು ಯಾರೂ ತಲೆ ಕೆಡಿಸಿಕೊಳ್ಳುವುದಿಲ್ಲ. ಲಾಬಿ ಮಾಡುವವರಿಗೆ, ಆಡಳಿತ ಪಕ್ಷದವರನ್ನು ಓಲೈಸುವವರಿಗೆ ಪ್ರಶಸ್ತಿ, ಸನ್ಮಾನಗಳು ಸಿಗುತ್ತವೆ ಎಂಬ ದೊಡ್ಡ ಆಪಾದನೆಯೇ ಇದೆ. ಇನ್ನು ಕನ್ನಡ ಮಾಧ್ಯಮದಲ್ಲಿ ಓದಿದರೆ ಭವಿಷ್ಯವಿಲ್ಲ ಎಂಬ ವಾತಾವರಣಕ್ಕೆ ಪೂರಕವಾಗಿ ಸರ್ಕಾರ ವರ್ತಿಸುತ್ತಿರುವದಕ್ಕೆ ಮುಖ್ಯ ಕಾರಣವೆಂದರೆ ಶಿಕ್ಷಣ ಕ್ಷೇತ್ರ ಬಹುತೇಕ ರಾಜಕಾರಣಿಗಳ ಹಿಡಿತದಲ್ಲಿಯೇ ಇರುವುದು! ಕನ್ನಡ ಮೂಲೆಪಾಲಾಗದೆ ಇನ್ನೇನಾಗುತ್ತದೆ? ರಾಜ್ಯದಲ್ಲಿಯೇ ಕನ್ನಡಕ್ಕೆ ಆದ್ಯತೆ, ಮಹತ್ವ ಕೊಡದವರು ವಿಶ್ವ ಕನ್ನಡ ಸಮ್ಮೇಳನ ಮಾಡುತ್ತಾರೆ.
ಕನ್ನಡಕ್ಕೆ ನಿಜವಾಗಿಯೂ ಮಹತ್ವ ಸಿಗಬೇಕೆಂದರೆ, ಕನ್ನಡ ಉಳಿಯಬೇಕೆಂಬ ನೈಜ ಕಳಕಳಿ ಇದ್ದರೆ ಕನ್ನಡದಲ್ಲಿ ಶಿಕ್ಷಣ ಪಡೆದವರಿಗೆ ರಾಜ್ಯದಲ್ಲಿ ಪ್ರಥಮ ಆದ್ಯತೆ ನೀಡಬೇಕು, ಕನ್ನಡಿಗರಿಗೇ ಉದ್ಯೋಗ ಸಿಗುವಂತೆ ನೋಡಿಕೊಳ್ಳಬೇಕು, ಕನ್ನಡ ಮಾಧ್ಯಮ ಶಾಲೆಗಳಿಗೆ ವಿಶೇಷ ಪ್ರೋತ್ಸಾಹ ನೀಡಬೇಕು, ಹೊಸ ಇಂಗ್ಲಿಷ್ ಮಾಧ್ಯಮದ ಶಾಲೆಗಳನ್ನು ನಿಯಂತ್ರಿಸಬೇಕು. ಇಂಗ್ಲಿಷ್ ಮಾಧ್ಯಮದ ಶಾಲೆಗಳ ಗುಣಮಟ್ಟ ಕನ್ನಡ ಶಾಲೆಗಳಲ್ಲೂ ಕಾಯ್ದುಕೊಳ್ಳಬೇಕು. ಕನ್ನಡದ ಕಟ್ಟಾಳುಗಳು, ಹೋರಾಟಗಾರರು ತಮ್ಮ ಹೋರಾಟವನ್ನು ಯಾವುದೋ ಸಿನೆಮಾ ಪ್ರದರ್ಶನ, ಫ್ಲೆಕ್ಸ್ ತೆಗೆಸುವುದು, ಯಾರೋ ಏನೋ ಮಾತನಾಡಿದರೆಂದು ಪ್ರತಿಭಟನೆ ಮಾಡುವುದು, ರಾಜಕಾರಣಿಗಳ ಕೈಗೊಂಬೆಗಳಾಗಿ ಅವರ ಮರ್ಜಿಯಂತೆ ಹೋರಾಟಗಳನ್ನು ಮಾಡುವುದು, ಇತ್ಯಾದಿಗಳಲ್ಲಿ ತೊಡಗಿ ತಮ್ಮ ಶ್ರಮವನ್ನು ವ್ಯರ್ಥಗೊಳಿಸುವುದಕ್ಕಿಂತ ಮೇಲೆ ಹೇಳಿದ ಸಂಗತಿಗಳ ಬಗ್ಗೆ ಸರ್ಕಾರದ ಮೇಲೆ ಒತ್ತಡ ಹೇರುವ ಬಗ್ಗೆ ಗಮನ ಹರಿಸಬೇಕು. ಯಾವುದೇ ಭಾಷೆಯಾದರೂ ಅದರ ಮೂಲ ಉದ್ದೇಶ ಭಾವನೆಗಳನ್ನು ವ್ಯಕ್ತಪಡಿಸುವುದೇ ಆಗಿದೆ. ಭಾಷೆ ವ್ಯವಹಾರಕ್ಕೆ ಉಪಯೋಗವಾಗುವ, ಭಾವನೆಗಳನ್ನು ಹೊರಹೊಮ್ಮಿಸಲು ಅವಕಾಶ ಕೊಡುವ ಸಾಧನ. ಕನ್ನಡಿಗರ ಭಾಷೆ ಕನ್ನಡ. ಅದು ಉಳಿಯಬೇಕು, ಬೆಳೆಯಬೇಕು ಅಂದರೆ ಅದರ ಹೊಣೆ ನಮ್ಮದೇ ಹೊರತು ಇತರರದಲ್ಲ. ನಮಗೆ ಬೇಕಿದ್ದರೆ ಅದು ಉಳಿಯುತ್ತದೆ, ಇಲ್ಲದಿದ್ದರೆ ಅಳಿಯುತ್ತದೆ. ಉಳಿಯಲಿ, ಬೆಳಗಲಿ ಎಂಬುದು ಎಲ್ಲರ ಸದಾಶಯ. ಆ ಆಶಯಕ್ಕೆ ಪೂರಕವಾಗಿ ನಡೆದುಕೊಳ್ಳಬೇಕಾಗಿರುವುದು ನಮ್ಮ ಕರ್ತವ್ಯ.
-ಕ.ವೆಂ. ನಾಗರಾಜ್.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ