ಮೂರನೆಯ ತರಗತಿಯಲ್ಲಿ ಓದುತ್ತಿದ್ದ ಮಗು ಹೋಮ್ ವರ್ಕ್ ಮಾಡುತ್ತಿತ್ತು. 'ಎಫ್‌ಆರ್‌ಇಎನ್‌ಡಿ-ಫ್ರೆಂಡ್' ಎಂದು ಹೇಳಿಕೊಳ್ಳುತ್ತಾ ಬರೆಯುತ್ತಿದ್ದುದನ್ನು ಗಮನಿಸಿದ ತಾಯಿ, ಅದು "ಎಫ್‌ಆರ್‌ಇಎನ್‌ಡಿ ಅಲ್ಲ, ಎಫ್‌ಆರ್‌ಐಇಎನ್‌ಡಿ- ಫ್ರೆಂಡ್" ಎಂದು ತಿದ್ದಿದಳು. ಮಗಳು, "ನಮ್ಮ ಮಿಸ್ ಹೇಳಿಕೊಟ್ಟಿದ್ದೇ ಹೀಗೆ. ಬೇರೆ ಬರೆದರೆ ಮಿಸ್ ತಪ್ಪು ಅಂತ ಇಂಟು ಮಾರ್ಕ್ ಹಾಕ್ತ್ತಾರೆ. ನನ್ನ ಫ್ರೆಂಡ್ ಶಾಂತಿ ಹೀಗೆ ಹೇಳಿದ್ದಕ್ಕೆ ಮಿಸ್ ಅವಳಿಗೆ ಹೊಡೆದರು" ಎಂದುದನ್ನು ಕೇಳಿಸಿಕೊಂಡ ತಂದೆ, "ನಡಿ, ನಾನೂ ಸ್ಕೂಲಿಗೆ ಬರ್ತೀನಿ, ಆ ಮಿಸ್ಸಿಗೆ ದಬಾಯಿಸ್ತೀನಿ" ಎಂದ. ಮಗಳು ಅಳುತ್ತಾ, "ಬೇಡಪ್ಪಾ, ಆಮೇಲೆ ನನಗೆ ಕಡಿಮೆ ಮಾರ್ಕ್ಸ್ ಕೊಡ್ತಾರೆ, ಫೇಲ್ ಮಾಡ್ತಾರೆ. ಎಲ್ಲರ ಎದುರಿಗೆ ನನಗೆ ಬೈತಾರೆ" ಅಂದಳು. ವಾಸ್ತವತೆ ಅರಿತ ತಂದೆ-ತಾಯಿ, "ನೋಡು, ನಾನು ಹೇಳಿಕೊಟ್ಟಿದ್ದೆನಲ್ಲಾ ಅದು ಸರಿ. ಮಿಸ್‌ಗೆ ತೋರಿಸೋದಿಕ್ಕೆ ಹಾಗೆ ಬರಿ, ಆದರೆ ಸರಿಯಾದ ಸ್ಪೆಲಿಂಗ್ ಹೀಗೆ ಅಂತ ತಿಳಿದುಕೊಂಡಿರು" ಎಂದು ಮಧ್ಯದ ದಾರಿಯನ್ನು ಮಗುವಿಗೆ ತೋರಿಸಿದರು. ಮಕ್ಕಳ ಬೆಳವಣಿಗೆ ಅತ್ಯಂತ ಸೂಕ್ಷ್ಮವಾಗಿ ಗಮನಿಸಬೇಕಾದ ವಿಷಯವಾಗಿದೆ. ಅದರಲ್ಲಿ ತಾಯಿ, ತಂದೆ ಮತ್ತು ಗುರುಗಳ ಪಾತ್ರ ಮಹತ್ವದ್ದಾಗಿದೆ. ಒಬ್ಬ ವ್ಯಕ್ತಿ ಸುಯೋಗ್ಯ ನಾಗರಿಕನಾಗಬೇಕಾದರೆ, ಅದರಲ್ಲಿ ತಂದೆ, ತಾಯಿ ಮತ್ತು ಗುರುಗಳ ಪಾತ್ರವೇ ನಿರ್ಣಾಯಕ. ಇನ್ನೊಂದು ರೀತಿಯಲ್ಲಿ ಹೇಳಬೇಕೆಂದರೆ, ಒಬ್ಬ ವ್ಯಕ್ತಿ ಕೆಟ್ಟವನೋ ಅಥವ ಒಳ್ಳೆಯವನೋ ಆಗುವುದರಲ್ಲಿ ಈ ಮೂವರ ಪಾತ್ರವೇ ಅಧಿಕವಾಗಿರುತ್ತದೆ.
ಮಕ್ಕಳ ಮನಸ್ಸು ಮತ್ತು ಸ್ವಭಾವ ಸೂಕ್ಷ್ಮವಾಗಿರುತ್ತದೆ. ೧೫ ವರ್ಷಗಳಾಗುವವರೆಗೆ ಅವರ ಸ್ವಭಾವಗಳು ಯಾರು ಯಾವ ರೀತಿ ತಿದ್ದುತ್ತಾರೋ ಆ ರೀತಿ ರೂಪಿತವಾಗುತ್ತದೆ. ಅವರಿಗೆ ತಂದೆ-ತಾಯಿಯರೇ ಆದರ್ಶ ಮತ್ತು ಮಾರ್ಗದರ್ಶಿಗಳು. ಅವರನ್ನು ಅನುಸರಿಸಿಯೇ ಮಕ್ಕಳು ಬೆಳೆಯುತ್ತಾರೆ. ಆದ್ದರಿಂದ ತಂದೆ-ತಾಯಿಯರು ಜಾಗೃತರಾಗಿರಬೇಕು, ಮಕ್ಕಳ ಬೇಕು-ಬೇಡಗಳನ್ನು ಅರಿತಿರಬೇಕು, ಸೂಕ್ತ ಮಾರ್ಗದರ್ಶನ ಮಾಡಬೇಕು ಮತ್ತು ಮಕ್ಕಳಿಗೆ ಆದರ್ಶಪ್ರಾಯರಾಗಿ ನಡೆಯಬೇಕು ಅಥವ ಆ ರೀತಿ ಇರುವಂತೆಯಾದರೂ ತೋರಿಸಿಕೊಳ್ಳಬೇಕು. ಮಗುವೊಂದು ಶಾಲೆಯಿಂದ ಬರುವಾಗ ಯಾರದ್ದೋ ಪೆನ್ಸಿಲ್ ಕದ್ದುಕೊಂಡು ಬಂದಿತ್ತು. ಆ ಬಗ್ಗೆ ತಾಯಿ ಆಕ್ಷೇಪಿಸಿದಾಗ ತಂದೆ ಹೇಳಿದ್ದನಂತೆ, "ಮಗೂ, ಕದಿಯಬಾರದು. ನನಗೆ ಹೇಳಿದ್ದರೆ ನಾನೇ ಆಫೀಸಿನಿಂದ ತಂದುಕೊಡುತ್ತಿರಲಿಲ್ಲವಾ?" ಇಂತಹ ವ್ಯಕ್ತಿತ್ವದವರು ಮಕ್ಕಳಿಗೆ ಏನು ಸಂಸ್ಕಾರ ಕಲಿಸಿಯಾರು? ಮಕ್ಕಳು ದಡ್ಡರಾಗುವುದು, ಬುದ್ಧಿವಂತರಾಗುವುದು, ಚುರುಕಾಗುವುದು ಅಥವ ಮದ್ದರಾಗುವುದು ಪೋಷಕರ ಮೇಲೆಯೇ ಅವಲಂಬಿತವಾಗಿದೆ. ಅವರನ್ನು ಗದರಿಸಿ ತಿದ್ದಲು ಸಾಧ್ಯವಿಲ್ಲ. ಸ್ವತಃ ಆ ರೀತಿ ನಡೆದು ತೋರಿಸಿದರೆ ಮಕ್ಕಳು ಸಹಜವಾಗಿ ತಿದ್ದಿಕೊಳ್ಳುತ್ತಾರೆ, ಅನುಸರಿಸುತ್ತಾರೆ. ಒಂದೆರಡು ಉದಾಹರಣೆಗಳನ್ನು ಗಮನಿಸೋಣ.
ಮನೆಯಲ್ಲಿ ಎಲ್ಲರೂ ಟಿವಿ ನೋಡುತ್ತಾ ಕುಳಿತಿರುತ್ತಾರೆ. ಮಗುವನ್ನು ಮಾತ್ರ, 'ಹೋಗು, ರೂಮಿನಲ್ಲಿ ಬಾಗಿಲು ಹಾಕಿಕೊಂಡು ಓದು, ಹೋಮ್ ವರ್ಕ್ ಮಾಡು' ಎಂದರೆ? ಆ ಸಂದರ್ಭದಲ್ಲಿ ಮಗುವಿನ ಮನಸ್ಥಿತಿಯನ್ನೂ ಅರ್ಥ ಮಾಡಿಕೊಳ್ಳಬೇಕು. ಅದಕ್ಕೂ ಎಲ್ಲರೊಂದಿಗೆ ಕುಳಿತು ಟಿವಿ ನೋಡುವ ಮನಸ್ಸಾಗುವುದಿಲ್ಲವೇ? ಎಲ್ಲರಿಗೂ ಇರುವುದು ನನಗಿಲ್ಲ ಎಂಬ ಭಾವನೆ ಬರುವುದಿಲ್ಲವೇ? ಓದಲು/ಬರೆಯಲು ಮನಸ್ಸು ಬರುತ್ತದೆಯೇ? ಆಗ ಪೋಷಕರಾದವರು ಸಂಯಮ ವಹಿಸಿ ತಾವೂ ಟಿವಿ ನೋಡಲು ಹೋಗಬಾರದು. ಮಕ್ಕಳೊಡನೆ ಟಿವಿ ನೋಡುವಾಗ ಒಳ್ಳೆಯ ಕಾರ್ಯಕ್ರಮಗಳನ್ನು ಮಾತ್ರ ನೋಡುವುದು ಒಳ್ಳೆಯದು. ಮಕ್ಕಳು ಏನಾದರೂ ಸಿಟ್ಟು ಮಾಡಿಕೊಂಡರೆ ರೇಗುವುದನ್ನು ಬಿಟ್ಟು, ನಾವು ಸಮಾಧಾನದಿಂದ, ಸಹನೆಯಿಂದ ಮಾತನಾಡುತ್ತಿದ್ದೇವೆಯೇ ಎಂದು ಆತ್ಮಶೋಧನೆ ಮಾಡಿಕೊಳ್ಳಬೇಕು. ನಾವು ಸಿಟ್ಟು ಮಾಡಿಕೊಳ್ಳಬಹುದು, ರೇಗಬಹುದು, ಮಕ್ಕಳು ಮಾತ್ರ ಸಿಟ್ಟು ಮಾಡಿಕೊಳ್ಳಬಾರದು ಎಂಬ ನೀತಿ ಸರಿಯಲ್ಲ. ಹೇಳುವುದನ್ನು ಕೇಳಿ ಅಲ್ಲ, ಮಾಡುವುದನ್ನು ನೋಡಿ ಮಕ್ಕಳು ಅನುಸರಿಸುತ್ತಾರೆ.
'ನಾವೇನೋ ಕಷ್ಟಪಟ್ಟೆವು. ನಮ್ಮ ಮಕ್ಕಳಿಗೆ ಕಷ್ಟವಾಗಬಾರದು' ಎಂದು ಮಕ್ಕಳಿಗೆ ಸಕಲ ಸೌಲಭ್ಯಗಳನ್ನೂ ಒದಗಿಸಿ, ಅತಿ ಹೆಚ್ಚು ಫೀಸು ವಸೂಲು ಮಾಡುವ, ಒಳ್ಳೆಯ ಸೌಕರ್ಯಗಳಿರುವ, ಸುಂದರ ಕಟ್ಟಡದ ಶಾಲೆಗೇ ಸೇರಿಸುತ್ತಾರೆ. ಇದು ತಪ್ಪಲ್ಲ. ಕೇಳಿ ಕೇಳಿದ್ದನ್ನು, ಬೇಕು-ಬೇಕಾದದ್ದನ್ನೆಲ್ಲಾ ಕೊಡಿಸಿಬಿಟ್ಟರೆ ಪೋಷಕರ ಕರ್ತವ್ಯ ಮುಗಿದುಹೋಗುವುದಿಲ್ಲ. ಹೀಗೆ ಮಾಡಿದರೆ, ಕಷ್ಟವನ್ನೇ ಅರಿಯದ ಮಕ್ಕಳು ಮುಂದೆ ಜೀವನದಲ್ಲಿ ಸ್ವಾರ್ಥಿಗಳಾಗುತ್ತಾರೆ, ಸಣ್ಣ-ಪುಟ್ಟ ಕಷ್ಟಗಳಿಗೇ ಅಂಜುತ್ತಾರೆ, ಎದುರಿಸುವ ಧೈರ್ಯ ಬರುವುದಿಲ್ಲ. ಅಗತ್ಯಕ್ಕಿಂತ ಹೆಚ್ಚಿನದನ್ನು ಒದಗಿಸಬಾರದು ಮತ್ತು ಎಲ್ಲವೂ ಸುಲಭವಾಗಿ ಸಿಗುತ್ತದೆ ಎಂಬ ಭಾವನೆ ಬರದಂತೆ ನೋಡಿಕೊಳ್ಳಬೇಕು. ಬಡತನದಲ್ಲಿ ಬೆಳೆದ ಮಕ್ಕಳಿಗೆ ತಾಯಿ ಕೈತುತ್ತು ಹಾಕಿ, ಕೆಲವೊಮ್ಮೆ ಆಕೆ ಉಪವಾಸದಿಂದ ಇದ್ದುದು ತಿಳಿದಿರುತ್ತದೆ. ಮುಂದೆ ಪೋಷಕರನ್ನು ಸುಖವಾಗಿ ನೋಡಿಕೊಳ್ಳಬೇಕೆಂಬುದು ಅವರ ಮನಸ್ಸಿನಲ್ಲಿ ಅಚ್ಚೊತ್ತಿರುತ್ತದೆ. ಬಡತನವಿಲ್ಲದೆ ಸುಖವಾಗಿ ಬೆಳೆಯುತ್ತಿರುವ ಮಕ್ಕಳಿಗೂ ಸಹ, ತಮ್ಮ ಸಲುವಾಗಿ ಪೋಷಕರು ಕಷ್ಟ ಪಡುತ್ತಾರೆ, ತಮ್ಮ ಸಲುವಾಗಿ ಸಂಯಮದಿಂದ ವರ್ತಿಸಿ ತಮ್ಮ ಸುಖ-ಸಂತೋಷಗಳನ್ನು ತ್ಯಜಿಸುತ್ತಾರೆ ಎಂಬ ಭಾವನೆ ಬಂದರೆ ಅದೂ ಒಳ್ಳೆಯ ಬೆಳವಣಿಗೆಯೇ.
ವಿವೇಕಾನಂದ ಬಾಲಕ ನರೇಂದ್ರನಾಗಿದ್ದಾಗಿನ ಘಟನೆ ಇಲ್ಲಿ ಪ್ರಸ್ತುತವೆನಿಸುತ್ತದೆ. ಶಾಲೆಯಲ್ಲಿ ಉಪಾಧ್ಯಾಯರು ಒಮ್ಮೆ ಕೇಳಿದ ಪ್ರಶ್ನೆಗೆ ನರೇಂದ್ರ ಸರಿಯಾದ ಉತ್ತರ ಕೊಡುತ್ತಾನೆ. ಉಪಾಧ್ಯಾಯರು ಆ ಉತ್ತರ ತಪ್ಪು ಎಂದಾಗ ನರೇಂದ್ರ, "ನನ್ನ ಉತ್ತರ ನಿಜಕ್ಕೂ ಸರಿಯಾಗಿದೆ" ಎಂದು ಸಮರ್ಥಿಸಿಕೊಳ್ಳುತ್ತಾನೆ. ಎದುರು ಮಾತನಾಡಿದ್ದಕ್ಕೆ ಮೇಷ್ಟರು ನರೇಂದ್ರನ ಕೈಗೆ ಬಾಸುಂಡೆ ಬರುವಂತೆ ಬಾರಿಸುತ್ತಾರೆ. ಅಳುತ್ತಾ ಬಂದ ಮಗನಿಂದ ತಾಯಿ ಭುವನೇಶ್ವರಿ ವಿಷಯ ತಿಳಿದು ಹೇಳುತ್ತಾಳೆ, "ಮಗೂ, ನೀನು ಸರಿಯಾಗಿಯೇ ಹೇಳಿದ್ದೀಯ. ಮೇಷ್ಟ್ರು ಹೇಳಿದ್ದನ್ನೇ ಸರಿ ಎಂದು ಒಪ್ಪಿಕೊಂಡಿದ್ದರೆ ನಿನಗೆ ಏಟು ಬೀಳುತ್ತಿರಲಿಲ್ಲ. ಆದರೆ ಎಂತಹ ಸಂದರ್ಭದಲ್ಲೂ ನೀನು ಸುಳ್ಳು ಒಪ್ಪಿಕೊಳ್ಳಬೇಡ. ಸುಳ್ಳಿನ ಜೊತೆಗೆ ಹೊಂದಾಣಿಕೆ ಮಾಡಿಕೊಳ್ಳಬೇಡ". ಹೀಗೆ ಹೇಳದೆ 'ಇನ್ನು ಮುಂದೆ ಹೀಗೆಲ್ಲಾ ಏಟು ತಿಂದು ಬರಬೇಡ. ಒಪ್ಪಿಕೊಂಡುಬಿಡು' ಎಂದಿದ್ದರೆ, ನರೇಂದ್ರ ವಿವೇಕಾನಂದ ಆಗುತ್ತಲೇ ಇರಲಿಲ್ಲ. ವಿವೇಕಾನಂದರೂ ಮುಂದೆ, 'ಇಂದು ನಾನು ಏನು ಆಗಿದ್ದೇನೋ ಅದಕ್ಕೆ ನನ್ನ ತಾಯಿಯೇ ಕಾರಣ' ಎಂದು ಹೇಳುತ್ತಿದ್ದರು.
ಪೋಷಕರು ಮಕ್ಕಳ ಸಲುವಾಗಿ ಎಷ್ಟೇ ಕಷ್ಟ ಬಂದರೂ ತಮ್ಮ ಸಮಯವನ್ನು ಕೊಡಲೇಬೇಕು. ಈಗಂತೂ ಗಂಡ-ಹೆಂಡತಿ ಇಬ್ಬರೂ ದುಡಿಯಲು ಹೋಗುತ್ತಾರೆ. ಸಮಯವೇ ಸಾಕಾಗುವುದಿಲ್ಲ ಎಂಬ ನೆಪವೂ ಸೇರಿಕೊಳ್ಳುತ್ತದೆ. ಆದರೂ, ಸಮಯ ಕೊಡಲೇಬೇಕು; ಇಲ್ಲದಿದ್ದರೆ ಕರ್ತವ್ಯಚ್ಯುತಿ ಎಂದು ಹೇಳದೇ ವಿಧಿಯಿಲ್ಲ. ಸಮಯ ಕೊಡುವುದೆಂದರೆ ಮಕ್ಕಳನ್ನು ಕರೆದುಕೊಂಡು ಹೊರಗೆ ಸುತ್ತಾಡುವುದು, ಪಿಕ್‌ನಿಕ್ಕಿಗೆ ಹೋಗುವುದು, ಒಟ್ಟಾಗಿ ಮನರಂಜನೆಗಾಗಿ ಸಮಯ ಕೊಡುವುದು ಮಾತ್ರ ಅಲ್ಲ. ಮಕ್ಕಳು ಹೇಗೆ ಓದುತ್ತಿದ್ದಾರೆ, ಶಾಲೆಯಲ್ಲಿ ಏನು ನಡೆಯುತ್ತಿದೆ ಎಂದು ಗಮನಿಸುವುದರ ಜೊತೆಗೆ ವಾರಕ್ಕೆ ಒಂದೆರಡು ಗಂಟೆಗಳಾದರೂ ಶಾಲೆಯ ಪಾಠಗಳನ್ನು ಮಕ್ಕಳಿಗೆ ಹೇಳಿಕೊಡುವುದೂ ಮುಖ್ಯವಾಗುತ್ತದೆ. ಇದು ಮಕ್ಕಳ ಮುಂದಿನ ಬೆಳವಣಿಗೆಗೆ, ಬಾಂಧವ್ಯ ವೃದ್ಧಿಗೆ, ಪೋಷಕರು ತಮ್ಮನ್ನು ಎಷ್ಟೊಂದು ಪ್ರೀತಿಸುತ್ತಾರೆ ಎಂಬ ಭಾವನೆ ಬರಲು ಅಗತ್ಯವಾಗಿದೆ.
ಲೇಖನ ವಿಸ್ತಾರವಾಗುವ ಕಾರಣದಿಂದ ಉಳಿದುದನ್ನು ಸಂಕ್ಷಿಪ್ತಗೊಳಿಸಿ ಹೇಳಬೇಕೆಂದರೆ:
೧. ಮಕ್ಕಳಿಗಾಗಿ ಕಡ್ಡಾಯವಾಗಿ ತಂದೆ-ತಾಯಿ ಇಬ್ಬರೂ ಸಮಯ ಮೀಸಲಿಡಬೇಕು;
೨. ಮನೆಯಲ್ಲಿ ಮಕ್ಕಳ ಕಲಿಕೆ, ಅಭಿವೃದ್ಧಿಗಳಿಗೆ ಪೂರಕವಾದ ವಾತಾವರಣ ಸೃಷ್ಟಿಸಬೇಕು;
೩. ಮಕ್ಕಳ ಶಾಲೆಯ ಶಿಕ್ಷಕರೊಡನೆ ಸಂಪರ್ಕವಿರಿಸಿಕೊಳ್ಳಬೇಕು;
೪. ಮಕ್ಕಳಿಗೆ ಸೂಕ್ತ ಪ್ರೋತ್ಸಾಹ ಕೊಡಬೇಕು ಮತ್ತು ಅವರ ಚಟುವಟಿಕೆಗಳ ಬಗ್ಗೆ ಗಮನವಿರಬೇಕು;
೫. ಮಕ್ಕಳಿಗೆ ಹೇಗೆ ವಿದ್ಯಾಭ್ಯಾಸ ಮಾಡಬೇಕೆಂಬ ಬಗ್ಗೆ ಮಾರ್ಗದರ್ಶನ ಮಾಡಬೇಕು;
೬. ಪ್ರೀತಿ, ವಿಶ್ವಾಸಗಳು ಮತ್ತು ಶಿಸ್ತಿನ ವಿಚಾರದಲ್ಲಿ ಸಮತೋಲನ ಇಟ್ಟುಕೊಳ್ಳಬೇಕು;
೭. ಮಕ್ಕಳ ಆಸಕ್ತಿ ಇರುವ ಕ್ಷೇತ್ರದಲ್ಲಿ ಮುಂದೆ ಬರಲು ಅಗತ್ಯದ ಸಹಕಾರ ಕೊಡಬೇಕು: ಆದರೆ, ಮೂಲ ವಿದ್ಯಾಭ್ಯಾಸದಲ್ಲಿ ಕೊರತೆ ಅಥವ ಹಿಂದುಳಿಯುವಿಕೆ ಆಗದಂತೆ ನೋಡಿಕೊಳ್ಳಬೇಕು.
೮. ಕೊನೆಯದಾಗಿ, ಮಕ್ಕಳು ಏನಾಗಬೇಕೆಂದು ಬಯಸುತ್ತಾರೋ, ಆ ರೀತಿ ತಂದೆ-ತಾಯಿಗಳೂ ಇರಬೇಕು.
-ಕ.ವೆಂ. ನಾಗರಾಜ್.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ