ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಸೋಮವಾರ, ಡಿಸೆಂಬರ್ 25, 2017

ಬದ್ಧತೆ (Commitment)


     1924ರಲ್ಲಿ ಜಪಾನಿನ ಟೋಕಿಯೋ ವಿಶ್ವವಿದ್ಯಾಲಯದ ಒಬ್ಬರು ಪ್ರೊಫೆಸರ್ ಒಂದು ಕಂದು ಬಣ್ಣದ ಮುದ್ದಾದ ನಾಯಿಯನ್ನು ಸಾಕಲು ತಂದರು. ಇಬ್ಬರಿಗೂ ಒಂದು ರೀತಿಯ ಪ್ರೀತಿಯ ಅನುಬಂಧ ಬೆಳೆಯಿತು. ಪ್ರತಿನಿತ್ಯ ಟ್ರೈನಿನಲ್ಲಿ ಕೆಲಸದ ಸ್ಥಳಕ್ಕೆ ಹೋಗಿಬರುತ್ತಿದ್ದ ಅವರು ಸಾಯಂಕಾಲ ಮರಳಿ ಬರುವಾಗ ಹತ್ತಿರವೇ ಇದ್ದ ಶಿಬುಯ ರೈಲ್ವೆ ನಿಲ್ದಾಣಕ್ಕೆ ಹೋಗಿ ಕಾಯುತ್ತಿದ್ದ 'ಹಚಿಕೋ' ಎಂಬ  ಹೆಸರಿನ ಆ ನಾಯಿ ಪ್ರತಿ ದಿನ ಅವರನ್ನು ಸ್ವಾಗತಿಸಿ ಅವರೊಂದಿಗೆ ಮನೆಗೆ ಬರುತ್ತಿತ್ತು. ಒಂದು ದಿನವೂ ತಪ್ಪದ ಈ ಕ್ರಮ ಒಂದು ವರ್ಷದವರೆಗೂ ಮುಂದುವರೆಯಿತು. ಮೇ, 1925ರಲ್ಲಿ ಆ ಪ್ರೊಫೆಸರ್ ಪಾಠ ಮಾಡುತ್ತಿದ್ದಾಗಲೇ ಕುಸಿದು ಮೃತರಾದರು. ಅಂದೂ ಸಹ ರೈಲು ನಿಲ್ದಾಣದಲ್ಲಿ ಕಾಯುತ್ತಿದ್ದ ಹಚಿಕೋ ರೈಲು ಬಂದರೂ ಒಡೆಯ ಬಾರದುದನ್ನು ಕಂಡು ನಿರಾಶೆಯಿಂದ ಮರಳಿತ್ತು. ಮರುದಿನವೂ ಹೋಗಿ ಬಂದಿತು. ನಂತರದ ದಿನಗಳಲ್ಲೂ ತಪ್ಪದೆ ಹೋಗಿಬರುತ್ತಿತ್ತು. ಆಶ್ಚರ್ಯವಾಗುತ್ತದೆ, ಮುಂದಿನ 9 ವರ್ಷಗಳವರೆಗೆ ಒಂದು ದಿನವೂ ತಪ್ಪದ ಈ ಕಾಯುವಿಕೆ ಆ ನಾಯಿ ಸಾಯುವರೆಗೂ ಸಾಗಿತ್ತು. ಅದನ್ನು ಗಮನಿಸುತ್ತಿದ್ದ ರೈಲ್ವೆ ಸಿಬ್ಬಂದಿ ಮತ್ತು ಪ್ರಯಾಣಿಕರು ಸಹ ಅದರ ಬಗ್ಗೆ ವಿಶೇಷ ಅಕ್ಕರೆ ಹೊಂದಿದ್ದರು. ಆ ನಾಯಿಯ ನೆನಪಿಗಾಗಿ ಪ್ರತಿಮೆಯನ್ನು ನಿಲ್ದಾಣದ ಪ್ರವೇಶದ್ವಾರದ ಬಳಿ ಸ್ಥಾಪಿಸಿ ಆ ದ್ವಾರಕ್ಕೆ 'ಹಚಿಕೋ ದ್ವಾರ' ಎಂದು ಹೆಸರಿಟ್ಟಿದ್ದಾರೆ. ಅದು ಈಗಲೂ ಒಂದು ವೀಕ್ಷಣೀಯ ಸ್ಥಳವಾಗಿದೆ. ಆ ನಾಯಿಯ ನಡವಳಿಕೆಯನ್ನು ಪ್ರೀತಿ ಎನ್ನುವುದೋ, ಬದ್ಧತೆ ಎನ್ನುವುದೋ? ಪ್ರೀತಿಯಿಂದ ಒಡಮೂಡಿದ ಬದ್ಧತೆ ಎನ್ನುವುದೇ ಸೂಕ್ತ!
     ಬದ್ಧತೆ ಅಂದರೆ ಒಂದು ನಿಶ್ಚಿತವಾದ ನಡವಳಿಕೆ, ಕ್ರಮ, ರೀತಿಗಳಿಗೆ ಬದ್ಧರಾಗುವುದು ಅನ್ನಬಹುದು. ಸ್ವಂತದ ಬದ್ಧತೆ ಎಂದರೆ ನಾನು ಹೀಗಿರಬೇಕು, ಹಾಗಿರಬೇಕು ಎಂದು ಕಟ್ಟುಪಾಡುಗಳನ್ನು ಹಾಕಿಕೊಳ್ಳುವುದು. ಪ್ರತಿನಿತ್ಯ ಬೆಳಿಗ್ಗೆ ಬೇಗ ಏಳುತ್ತೇನೆ, ವಾಕಿಂಗ್/ವ್ಯಾಯಾಮ ಮಾಡುತ್ತೇನೆ, ಸ್ನಾನ ಮಾಡಿದ ನಂತರವೇ ತಿಂಡಿ ತಿನ್ನುತ್ತೇನೆ, ತಪ್ಪದೆ ದೇವಸ್ಥಾನಕ್ಕೆ ಹೋಗುತ್ತೇನೆ, ಗಳಿಕೆಯ ಸ್ವಲ್ಪ ಭಾಗವನ್ನು ದೀನ-ದಲಿತರಿಗೆ ವೆಚ್ಚ ಮಾಡುತ್ತೇನೆ ಇತ್ಯಾದಿ ನಿರ್ಧಾರಗಳನ್ನು ಮಾಡಿಕೊಂಡು ಅದಕ್ಕೆ ಅನುಸಾರವಾಗಿ ನಡೆಯುವುದೇ ಸ್ವಂತದ ಬದ್ಧತೆ ಎನ್ನಿಸುತ್ತದೆ. ಈ ಕೆಲಸ ಆದರೆ ತಿರುಪತಿಗೆ ಹೋಗಿ ಮುಡಿ ಕೊಡುತ್ತೇನೆ, ಮಗ ಪರೀಕ್ಷೆಯಲ್ಲಿ ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾದರೆ ಸೈಕಲ್ ತೆಗೆಸಿಕೊಡುತ್ತೇನೆ ಇತ್ಯಾದಿವ ಷರತ್ತು ಬದ್ಧ ಬದ್ಧತೆಗಳೂ ಇರುತ್ತವೆ. ಒಟ್ಟಿನಲ್ಲಿ ಹೇಳಬೇಕೆಂದರೆ ಆಡಿದಂತೆ/ನಿರ್ಧರಿಸಿದಂತೆ ನಡೆಯುವುದೇ ಬದ್ಧತೆ. ಮದುವೆಯ ಸಂದರ್ಭದಲ್ಲಿ 'ಧರ್ಮೇಚ ಅರ್ಥೇಚ ಕಾಮೇಚ ನಾತಿ ಚರಾಮಿ' ಎಂದು ಪರಸ್ಪರ ಆಶ್ವಾಸನೆ ಕೊಟ್ಟುಕೊಳ್ಳುವುದೂ ಶಾಸ್ತ್ರೋಕ್ತ ಬದ್ಧತೆಯೇ! ಹೀಗೆ ನಡೆದಾಗ ಸಿಗುವುದೇ ಆತ್ಮ ಸಂತೋಷ.
     ರಮೇಶ, ಸುರೇಶ, ಗಣೇಶ ಮೂವರು ಸ್ನೇಹಿತರು. ಗಣೇಶ ತನ್ನ ಮನೆಯಲ್ಲಿ ಮರುದಿನ ನಡೆಯಲಿರುವ ಕಾರ್ಯಕ್ರಮಕ್ಕೆ ಯಾವುದೇ ಕಾರಣಕ್ಕೆ ತಪ್ಪದೆ ಬರಬೇಕೆಂದು ರಮೇಶ, ಸುರೇಶರನ್ನು ಆಹ್ವಾನಿಸುತ್ತಾನೆ. ಖಂಡಿತಾ ಬರುವುದಾಗಿ ಇಬ್ಬರೂ ಹೇಳುತ್ತಾರೆ. ಕಾರ್ಯಕ್ರಮದ ದಿನ ಭಾರಿ ಮಳೆ ಸುರಿಯುತ್ತದೆ. ರಸ್ತೆಗಳಲ್ಲಿ ನೀರು ಮೊಣಕಾಲೆತ್ತರದಲ್ಲಿ ಹರಿಯುತ್ತಿರುತ್ತದೆ, ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗುತ್ತದೆ. 'ತಲೆ ಮೇಲೆ ತಲೆ ಬಿದ್ದರೂ ತಪ್ಪದೆ ಬರುತ್ತೇನೆ' ಎಂದಿದ್ದ ರಮೇಶ ದೂರವಾಣಿ ಮೂಲಕ, 'ತಪ್ಪು ತಿಳಿಯಬೇಡ. ಇಂತಹ ಮಳೆಯಲ್ಲಿ ಬರಲಾಗುತ್ತಿಲ್ಲ' ಎಂದು ತಿಳಿಸುತ್ತಾನೆ. 'ಬರುತ್ತೇನೆ' ಎಂದಷ್ಟೇ ತಿಳಿಸಿದ್ದ ಸುರೇಶ ಮಳೆಯಲ್ಲಿ ನೆಂದು ತೊಪ್ಪೆಯಾಗಿ ಬಂದು ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಾನೆ. ರಮೇಶನಿಗೆ ತಪ್ಪಿಸಿಕೊಳ್ಳಲು ಸಕಾರಣವಿರುತ್ತದೆ. ಅದನ್ನು ತಪ್ಪೆನ್ನಲಾಗುವುದಿಲ್ಲ. ಆದರೆ ಸುರೇಶನ ಬದ್ಧತೆ ಮಾತ್ರ ಮೆಚ್ಚುವಂತಹದು. ನನ್ನ ಚಿಕ್ಕ ವಯಸ್ಸಿನಲ್ಲಿನ ಒಂದು ಉದಾಹರಣೆ ಹಂಚಿಕೊಳ್ಳಬೇಕೆನಿಸಿದೆ. ನಾನು ಆರೆಸ್ಸೆಸ್ಸಿನ ಒಂದು ಪ್ರಭಾತ ಶಾಖೆಯ ಮುಖ್ಯ ಶಿಕ್ಷಕನಾಗಿದ್ದೆ. ಪ್ರತಿದಿನ ಬೆಳಿಗ್ಗೆ ಆರು ಗಂಟೆಗೆ ಸರಿಯಾಗಿ ಮೈದಾನದಲ್ಲಿ ನಿಂತು ಶಾಖೆ ಪ್ರಾರಂಭದ ಸೂಚನೆಯಾಗಿ ನಾನು ಒಬ್ಬನೇ ಇರಲಿ, ಹಲವಾರು ಜನರಿರಲಿ ಸೀಟಿ ಊದುತ್ತಿದ್ದೆ. ಮೈದಾನದ ಬದಿಯಲ್ಲಿನ ಮನೆಗಳಲ್ಲಿ ಮುಂಭಾಗದಲ್ಲಿ ಗುಡಿಸುವುದು, ನೀರು ಚಿಮುಕಿಸಿ ರಂಗೋಲಿ ಹಾಕುವುದು, ಇತ್ಯಾದಿ ಚಟುವಟಿಕೆಗಳೂ   ಅದೇ ಸಮಯದಲ್ಲಿ ಪ್ರಾರಂಭವಾಗುತ್ತಿದ್ದವು. ನನಗೆ ಜ್ವರ ಬಂದಿದ್ದರಿಂದ ಎರಡು ದಿನಗಳು ನನಗೆ ಶಾಖೆಗೆ ಹೋಗಲಾಗಿರಲಿಲ್ಲ. ಮೂರನೆಯ ದಿನ ಶಾಖೆ ಮುಗಿಸಿ ಹೋಗುವಾಗ ಒಬ್ಬ ಗೃಹಿಣಿ ನನ್ನನ್ನು ಕರೆದು "ಎರಡು ದಿನಗಳು ಏಕೆ ಬರಲಿಲ್ಲ? ನಿನ್ನ ಸೀಟಿ ಕೇಳಿದ ಮೇಲೇ ನಾನು ಏಳುತ್ತಿದ್ದೆ. ನೀನು ಸೀಟಿ ಊದದೇ ಇದ್ದರಿಂದ ನಾನು ಏಳುವುದು ತಡವಾಯಿತು" ಎಂದು ಹೇಳಿದ್ದರು! ಸಮಯಕ್ಕೆ ಸರಿಯಾಗಿ ಸೀಟಿ ಊದುವುದು ನನ್ನ ಬದ್ದತೆಯಾಗಿದ್ದರೆ, ಸೀಟಿ ಕೇಳಿ ಏಳುವುದು ಅವರು ರೂಢಿಸಿಕೊಂಡ ಬದ್ಧತೆಯಾಗಿತ್ತೇನೋ ಎನ್ನಿಸಿ ನಗು ಬಂದಿತ್ತು.
     ಸರ್ವಜ್ಞನ ವಚನ 'ಆಡದೆ ಮಾಡುವನು ರೂಢಿಯೊಳಗುತ್ತಮನು, ಆಡಿ ಮಾಡುವನು ಮಧ್ಯಮ, ಅಧಮ ತಾನಾಡಿಯೂ ಮಾಡದವನು' ಎಂಬುದು ಬದ್ಧತೆಯ ಮಹತ್ವವನ್ನು ಎತ್ತಿಹಿಡಿದಿದೆ. ಬದ್ಧತೆ ಮತ್ತು ವಿಶ್ವಾಸಾರ್ಹತೆಗಳು ಜೊತೆಗಾರರು. ಬದ್ಧತೆಯಿರುವವರು ಜನರ ಮನ್ನಣೆ, ನಂಬಿಕೆಗೆ ಪಾತ್ರರಾಗುತ್ತಾರೆ. ಬದ್ಧತೆಯಿಲ್ಲದವರು ಬೊಗಳೆದಾಸರು ಎಂದು ಕರೆಯಿಸಿಕೊಳ್ಳುತ್ತಾರೆ. ಬಹುತೇಕ ರಾಜಕಾರಣಿಗಳು, ಪ್ರಚಾರದ ಹಂಗಿಗೆ ಬಿದ್ದ ಹಲವರು ಬೊಗಳೆದಾಸರ ಪಟ್ಟಿಯಲ್ಲಿ ಮೊದಲಿಗರಾಗಿದ್ದಾರೆ. ವೈಯಕ್ತಿಕವಾಗಿ ಬದ್ಧತೆಯಿರುವವರು ಸುಯೋಗ್ಯ ನಾಗರಿಕರಾಗಿರುತ್ತಾರೆ. ಕೌಟುಂಬಿಕವಾಗಿ, ಸಾಮಾಜಿಕವಾಗಿ ಸಹ ಉತ್ತಮ ವ್ಯಕ್ತಿಗಳು ಬದ್ಧತೆ ಹೊಂದಿರುತ್ತಾರೆ. ಕುಟುಂಬ, ಸಮಾಜ, ದೇಶದ ಹಿತದೃಷ್ಟಿಯಿಂದ ಕೆಲವೊಂದು ಬದ್ಧತೆಗಳನ್ನು ಪಾಲಿಸಲೇಬೇಕು. ಇಲ್ಲದಿದ್ದರೆ ಕುಟುಂಬ, ಸಮಾಜ, ದೇಶ ಪತನ ಹೊಂದುತ್ತದೆ.
     ಬದ್ಧತೆಯ ಮತ್ತಷ್ಟು ರೂಪಗಳೂ ಇವೆ. ಮಾತಿನ ಭರವಸೆಯಲ್ಲಿ ನಂಬಿಕೆ ಇರುತ್ತದೆ. ವ್ಯವಹಾರಗಳಲ್ಲಿ ಲಿಖಿತ ಬಾಂಡುಗಳಲ್ಲಿ ಒಪ್ಪಂದಗಳು, ಷರತ್ತುಗಳನ್ನು ವಿಧಿಸಿ ಅದಕ್ಕೆ ಭಾಗಿದಾರರು ಬದ್ಧರಾಗುತ್ತಾರೆ. ಜಾರಿಯಲ್ಲಿರುವ ಹಲವಾರು ಕಾನೂನುಗಳು, ಕಟ್ಟಳೆಗಳು, ಕಾಯದೆಗಳೂ ಸಹ ನಾಗರಿಕರನ್ನು ಅದರ ವ್ಯಾಪ್ತಿ ಮೀರಿ ಹೋಗದಂತೆ ನಿರ್ಬಂಧಿಸುತ್ತವೆ. ಅದಕ್ಕೆ ಒಳಪಡಬೇಕಾದುದೂ ಬದ್ಧತೆಯೇ ಆಗುತ್ತದೆ. ಪ್ರೀತಿಯ ಬದ್ದತೆ, ಭಕ್ತಿಯ ಬದ್ದತೆ, ಹಿರಿಯರಿಗೆ ಸಲ್ಲಿಸುವ ಗೌರವದ ಬದ್ಧತೆ, ಹೀಗೆ ಪ್ರತಿಯೊಂದು ವಿಷಯದಲ್ಲಿಯೂ ಬದ್ಧತೆ ಕಂಡುಬರುತ್ತದೆ. ಬದ್ಧತೆ ಇರುವಲ್ಲಿ ಭರವಸೆ, ನಂಬಿಕೆ, ವಿಶ್ವಾಸ, ನಿರಾತಂಕ, ಪ್ರೀತಿ ಇರುತ್ತದೆ. ನಮ್ಮ ನಡವಳಿಕೆಗಳಲ್ಲಿ ಕಂಡು ಬರುವ ಬದ್ಧತೆಯ ಪ್ರಮಾಣ ಅನುಸರಿಸಿ ನಮ್ಮ ವ್ಯಕ್ತಿತ್ವ ನಿರ್ಧರಿತವಾಗುತ್ತದೆ. ಬದ್ಧತೆ ಇರುವವರು ಪರಿಸ್ಥಿತಿಯೊಂದಿಗೆ ರಾಜಿ ಮಾಡಿಕೊಳ್ಳುವುದಿಲ್ಲ. ರಾಜಿ ಮಾಡಿಕೊಳ್ಳುವವರು ಬದ್ಧತೆ ಇರುವವರಲ್ಲ. ರಾಜಿ ಮಾಡಿಕೊಳ್ಳುವ ಸ್ವಭಾವದವರು ತಮಗೇ ಸದಾ ಪಾಲಿಸಲು ಸಾಧ್ಯವಿಲ್ಲ ಅನ್ನಿಸುವಂತಹ ವಿಷಯಗಳನ್ನು ಪಾಲಿಸಲು ಇತರರಿಗೆ ಹೇಳದಿರುವುದು ಒಳಿತು. ವೈಯಕ್ತಿಕ ಬದ್ಧತೆ ಗುಂಪಿನ, ತಂಡದ, ಆಡಳಿತದ, ಸಮಾಜದ ಮತ್ತು ದೇಶದ ಯಶಸ್ಸಿಗೆ ತಳಪಾಯವಾಗಿದೆ.
     ನಾವು ಸಂತೋಷವಾಗಿರಬಹುದಾದ ಸರಳ ಉಪಾಯವೆಂದರೆ, ನಮಗೆ ಇಷ್ಟವೆನಿಸುವ, ನಮಗೆ ಗೌರವವಿರುವ ಯಾವುದೇ ವಿಚಾರ, ವ್ಯಕ್ತಿ, ಸಂಗತಿ ಕುರಿತು ಹೊಯ್ದಾಟವಿರದಂತಹ ಬದ್ಧತೆ ಹೊಂದಿರುವುದು. ಇಂತಹ ಬದ್ಧತೆ ಯಶಸ್ಸಿಗೂ ರಹದಾರಿ. ನಮ್ಮ ಅಂತರಂಗಕ್ಕೆ ಅದು ಸರಿ ಅನ್ನಿಸುವಾಗ ನಮಗೆ ಸಿಗುವುದು ಸಂತೋಷವೇ! ಸಂತೋಷ ಅನ್ನುವುದು ನಮ್ಮ ಮಾನಸಿಕ ಸ್ಥಿತಿ ಆಗಿರುವಾಗ ಅದನ್ನು ಇತರರ ಅನಿಸಿಕೆ, ಅಭಿಪ್ರಾಯಗಳನ್ನು ಅನುಸರಿಸಿ ನಿರ್ಧರಿಸಿಕೊಳ್ಳಬೇಕೇಕೆ? ನಮ್ಮ ಬದ್ಧತೆಯಿಂದ ನಾಲ್ಕು ಜನಕ್ಕೆ ಒಳ್ಳೆಯದಾಗುವುದಾದರೆ ಅದಕ್ಕಿಂತ ದೊಡ್ಡ ಸಮಾಧಾನ, ಸಂತೋಷ ಬೇರೆ ಏನಿದೆ?
-ಕ.ವೆಂ.ನಾಗರಾಜ್.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ