ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಮಂಗಳವಾರ, ಡಿಸೆಂಬರ್ 12, 2017

ಘನತೆ (Dignity)


     'ನಾಯಿಯನ್ನು ಸಿಂಹಾಸನದ ಮೇಲೆ ಕೂರಿಸಿದರೂ ಅದರ ಬುದ್ದಿ ಬಿಟ್ಟೀತೇ' ಎಂಬುದು ಪ್ರಸಿದ್ಧ ಆಡುಮಾತು! ನಾಯಿಯನ್ನು ಸಿಂಹಾಸನದ ಮೇಲೆ ಕೂರಿಸುವುದರಿಂದ ನಾಯಿಯ ಘನತೆ ಹೆಚ್ಚಬಹುದೇನೋ, ಆದರೆ ಸಿಂಹಾಸನದ ಘನತೆಗೆ ಮಾತ್ರ ಖಂಡಿತಾ ಕುಂದು ಬರುತ್ತದೆ. ವಿಧಾನಸೌಧದ ಬಾಗಿಲನ್ನು ಕಾಲಿನಿಂದ ಜಾಡಿಸಿ ಒದ್ದವರು ಪ್ತತಿಷ್ಠಿತ ಕುರ್ಚಿಯಲ್ಲಿ ಕುಳಿತಿರುವವರು ಇರುವಂತೆಯೇ, ಲೋಕಸಭೆಗೆ ಪ್ರಥಮವಾಗಿ ಕಾಲಿರಿಸಿದ ಸಂದರ್ಭದಲ್ಲಿ ಮೆಟ್ಟಲನ್ನು ಮುಟ್ಟಿ ನಮಸ್ಕರಿಸಿದವರೂ ಇದ್ದಾರೆ. ಕೆಲವರಿಂದ ಕುರ್ಚಿಗೆ, ಪ್ರಶಸ್ತಿಗಳಿಗೆ ಘನತೆ ಹೆಚ್ಚಿದರೆ ಕೆಲವರಿಂದ ಕುರ್ಚಿಯ ಮತ್ತು ಪ್ರಶಸ್ತಿಗಳ ಘನತೆ ತಗ್ಗುತ್ತದೆ. ಘನತೆ ಎಂಬ ಪದ ಹಿರಿದು, ಮೌಲ್ಯಯುತವಾದದ್ದು ಎಂಬ ಅರ್ಥ ಹೊರಡಿಸುತ್ತದೆ. ಸೌಜನ್ಯತೆ, ಗಾಂಭೀರ್ಯ, ಔನ್ನತ್ಯ, ದೊಡ್ಡತನ, ಗೌರವ, ಹಿರಿಮೆ, ಒಳ್ಳೆಯ ಗುಣ, ಒಳ್ಳೆಯ ನಡವಳಿಕೆ, ಆತ್ಮಾಭಿಮಾನ, ಆತ್ಮಗೌರವ, ಒಳ್ಳೆಯ ನಿಲುವು, ಸ್ಥಾನ-ಮಾನ, ಸುಸಂಸ್ಕೃತಿ, ವಿಶಿಷ್ಟತೆ, ವಿಶೇಷತೆ, ನಾಯಕತ್ವದ ಗುಣ, ಪರಿಪೂರ್ಣತೆ, ಅಂತಸ್ತು, ಸುಸಂಪನ್ನ, ಪ್ರಾಮುಖ್ಯತೆ, ಸುಜ್ಞಾನ ಹೀಗೆ ಹತ್ತು ಹಲವಾರು ವಿಶೇಷಣೆಗಳು ಘನತೆ ಪದದ ಅರ್ಥ ಮತ್ತು ಘನತೆಗಳನ್ನು ಸಾರುತ್ತವೆ. 
     ವ್ಯಕ್ತಿಯ ಗೌರವಕ್ಕೆ, ಅರ್ಥಾತ್ ಘನತೆಗೆ ಧಕ್ಕೆ ಬರದಂತೆ ನೋಡಿಕೊಳ್ಳಬೇಕಾದುದು ಸರ್ಕಾರದ ಕರ್ತವ್ಯವಾಗಿದೆ. ಭಾರತದ ಸಂವಿಧಾನದ ೧೫(೧) ಮತ್ತು (೨)ರ ವಿಧಿ ಸರ್ಕಾರವು ಯಾವುದೇ ಪ್ರಜೆಯನ್ನು ಧರ್ಮ, ಜನಾಂಗ, ಜಾತಿ, ಲಿಂಗ, ಹುಟ್ಟಿದ ಊರು, ಇತ್ಯಾದಿ ಯಾವುದೇ ಕಾರಣದಿಂದ ತಾರತಮ್ಯದಿಂದ ನೋಡದಿರಲು ಸ್ಪಷ್ಟ ನಿರ್ದೇಶನ ನೀಡುತ್ತದೆ. ಆದರೆ ಜನರ ಘನತೆಗೆ ಕುಂದು ತರುವ, ಧಕ್ಕೆ ನೀಡುವಂತಹ ಹಲವು ತಾರತಮ್ಯದ ಕ್ರಮಗಳನ್ನು ಆಡಳಿತ ಮಾಡುವವರೇ ಅನುಸರಿಸುತ್ತಿರುವುದು ಸಂವಿಧಾನ ವಿರೋಧಿ ಕ್ರಮವೆನ್ನದೆ ಇರಲಾಗದು. ಇಂತಹ ಕ್ರಮಗಳನ್ನು ವಿರೋಧಿಸುವವರನ್ನು ಅಧಿಕಾರಬಲ ಉಪಯೋಗಿಸಿ ಹತ್ತಿಕ್ಕುವುದೂ ಸಾಮಾನ್ಯವೆನಿಸಿಬಿಟ್ಟಿದೆ. ಇಂತಹ ಕ್ರೂರ ವ್ಯವಸ್ಥೆ ಅನಿವಾರ್ಯವೆಂಬಂತೆ ಜನರೂ ಒಗ್ಗಿ ಹೋಗುತ್ತಿದ್ದಾರೆ.
     ರಾಜಕೀಯ ಸ್ವಾರ್ಥದ ಕಾರಣಗಳಿಗಾಗಿ ಅನೇಕರ ಘನತೆಯನ್ನು ಕುಗ್ಗಿಸುವ, ಚಾರಿತ್ರ್ಯ ಹರಣ ಮಾಡುವ ಕೃತ್ಯಗಳು ಅಧಿಕಾರಸ್ಥ ರಾಜಕಾರಣಿಗಳೇ ಮಾಡಿರುವುದು, ಮಾಡುತ್ತಿರುವುದು ಜಗಜ್ಜಾಹೀರಾಗಿದೆ. ಸಾಧ್ವಿ ಪ್ರಜ್ಞಾರನ್ನು ಮತ್ತು ಹಲವಾರು ಹಿರಿಯ ಅಧಿಕಾರಿಗಳನ್ನು ಸುಳ್ಳು ಆರೋಪಗಳ ಮೇಲೆ ವರ್ಷಗಳವರೆಗೆ ಜೈಲಿನಲ್ಲಿ ಕೊಳೆಯುವಂತೆ ಮಾಡಿದ್ದಲ್ಲದೆ, ಚಿತ್ರಹಿಂಸೆಗೆ ಒಳಪಡಿಸಿದ ಅಕ್ಷಮ್ಯ ಅಪರಾಧ ಎಸಗಿದವರು ಅದನ್ನು ಜೀರ್ಣಿಸಿಕೊಂಡಿದ್ದಾರೆ. ಜಿಲ್ಲಾಧಿಕಾರಿ ಡಿ.ಕೆ.ರವಿ, ಡಿವೈಎಸ್ಪಿ ಗಣಪತಿ ಮುಂತಾದವರ ಪ್ರಕರಣಗಳಲ್ಲಿ ಎಗ್ಗಿಲ್ಲದೆ ಸಾಕ್ಷ್ಯನಾಶ, ಚಾರಿತ್ರ್ಯ ಹರಣ ಮುಂತಾದ ಕೃತ್ಯಗಳಲ್ಲಿ ಹಿರಿಯ ಮಂತ್ರಿಗಳು, ಉನ್ನತ ಅಧಿಕಾರಿಗಳ ಹೆಸರುಗಳು ಕೇಳಿಬರುತ್ತಿರುವುದು ಬೇಲಿಯೇ ಹೊಲ ಮೇಯುವಂತೆ ಆದುದಕ್ಕೆ ಈಚಿನ ಉದಾಹರಣೆಗಳು. ನ್ಯಾಯ ಕೊಡಬೇಕಾದವರೇ ಅಪರಾಧಿಗಳನ್ನು ರಕ್ಷಿಸುವ ಆರೋಪ ಹೊತ್ತಿದ್ದಾರೆ. ಅವರವರೇ ವಿಚಾರಣೆಯ ನಾಟಕ ನಡೆಸಿ ಶುದ್ಧ ಹಸ್ತರೆಂದು ಪ್ರಮಾಣ ಪತ್ರ ಕೊಟ್ಟುಕೊಂಡುಬಿಡುತ್ತಾರೆ ಎಂಬುದು ಜನಸಾಮಾನ್ಯರ ಮಾತು. 
     ರಾಜಕೀಯದ ಸಲುವಾಗಿ ಒಂದು ವರ್ಗವನ್ನು ಓಲೈಸುವುದೂ ತಾರತಮ್ಯದ ಕೃತ್ಯವಾಗಿದ್ದು, ಸಂವಿಧಾನದ ಸ್ಪಷ್ಟ ಉಲ್ಲಂಘನೆಯಾಗುತ್ತದೆ. ಆಡಳಿತ ನಡೆಸುವವರು ತಾವು ಎಲ್ಲರನ್ನೂ ಸಮಾನವಾಗಿ ಕಾಣುವುದು ಮತ್ತು ಸಮನಾಗಿ ಕಾಣುತ್ತಿದ್ದೇವೆಂದು ತೋರಿಸಿಕೊಳ್ಳುವುದೂ ಅತ್ಯಗತ್ಯ. ಯಾವುದೋ ವರ್ಗವನ್ನು ಓಲೈಸಿದರೆ ಅದು ಇನ್ನೊಂದು ವರ್ಗವನ್ನು ಕೀಳಾಗಿ ಕಂಡಂತೆ ಆಗುತ್ತದೆ. ಟಿಪ್ಪೂ ಜಯಂತಿಯನ್ನು ಮಾಡಲು ಮುಸ್ಲಿಮರೇ ಒತ್ತಾಯಿಸದಿದ್ದರೂ, ಸರ್ಕಾರ ಪ್ರಬಲ ಜನವಿರೋಧವನ್ನೂ ಕಡೆಗಣಿಸಿ, ಪೊಲೀಸ್ ಭದ್ರ ಕಾವಲಿನಲ್ಲಿ ಟಿಪ್ಪೂ ಜಯಂತಿ ಮಾಡುತ್ತದೆ. ಮುಸ್ಲಿಮರ ಹಬ್ಬ ಹರಿದಿನಗಳಿಗೆ ಎಲ್ಲಾ ರೀತಿಯ ಸವಲತ್ತುಗಳು, ಸಹಕಾರಗಳನ್ನು ಕೊಡುತ್ತಾರೆ, ಹಿಂದೂ ಹಬ್ಬಗಳು, ಉತ್ಸವಗಳಿಗೆ ಶಾಂತಿ, ಸುವ್ಯವಸ್ಥೆಯ ಹೆಸರಿನಲ್ಲಿ ಹಲವು ನಿರ್ಬಂಧಗಳನ್ನು ಹೇರುತ್ತಾರೆ, ಅಡ್ಡಿಪಡಿಸುತ್ತಾರೆ ಎಂಬ ಆರೋಪ ಬರುವಂತೆ ಆಡಳಿತದಲ್ಲಿರುವವರು ಅವಕಾಶ ಕೊಡಬಾರದು. ಈದ್ ಮಿಲಾದ್ ಮತ್ತು ಹನುಮ ಜಯಂತಿ ಉತ್ಸವಗಳಿಗೆ ಸಂಬಂಧಿಸಿದಂತೆ ರಾಜ್ಯಸರ್ಕಾರ ನಡೆದುಕೊಂಡ ರೀತಿ ತಾರತಮ್ಯದಿಂದ ಕೂಡಿದೆ ಎಂಬ ಅಪವಾದಕ್ಕೆ ಗುರಿಯಾಗಿದೆ.
     ತಮಿಳುನಾಡಿನ ಮುಖ್ಯಮಂತ್ರಿಯಾಗಿದ್ದ ಜಯಲಲಿತಾ ಮತ್ತು ನಂತರದಲ್ಲಿ ಮುಖ್ಯಮಂತ್ರಿಯ ಕನಸು ಕಂಡು ಸದ್ಯ ತುರಂಗವಾಸದಲ್ಲಿರುವ ಶಶಿಕಲಾರವರ ಕಾಲಿಗೆ ಸರತಿಯ ಸಾಲಿನಲ್ಲಿ ನಿಂತು ನಡುಬಗ್ಗಿಸಿ ಪಾದಮುಟ್ಟಿ ನಮಸ್ಕಾರ ಮಾಡುತ್ತಿದ್ದ ಶಾಸಕರು, ಅಧಿಕಾರಸ್ಥರುಗಳನ್ನು ಕಂಡಿದ್ದೇವೆ. ಇದು ಅವರ ಘನತೆಯ ಪ್ರದರ್ಶನವಾಗಿರದೆ ಸಲಾಮು ಮಾಡುತ್ತಿದ್ದವರು ಸ್ವಾರ್ಥ ಮತ್ತು ಅಧಿಕಾರದ ಸಲುವಾಗಿ ಕಳೆದುಕೊಂಡಿದ್ದ ಘನತೆಯನ್ನು ಬಿಂಬಿಸುತ್ತದೆ. ಅಧಿಕಾರದ ಮುಂದೆ ಅಭಿಮಾನವೂ ನಿಕೃಷ್ಟವಾಗಿಬಿಡುತ್ತದೆ! ಇನ್ನು ಸಾಮಾಜಿಕವಾಗಿ ನೋಡುವುದಾದರೆ ಕೆಲವು ವರ್ಗದವರ ಬಗ್ಗೆ ಅಸ್ಪೃಷ್ಯತೆ, ಪ್ರವೇಶ ನಿಷೇಧ ಮುಂತಾದವು ಘನತೆಗೆ ಕುಂದು ತರುವ ಕೃತ್ಯಗಳಾಗಿವೆ. ಧಾರ್ಮಿಕವಾಗಿ ಸಹ ಕೆಲವು ಆಚರಣೆಗಳು ಪುರುಷ ಪ್ರಧಾನವಾಗಿರುವುದೂ ಕಂಡುಬರುತ್ತದೆ. ಉಡುಪು ಧರಿಸುವಿಕೆ, ಶಿಕ್ಷಣ. ವೈವಾಹಿಕ ಕಟ್ಟುಪಾಡುಗಳು ಇತ್ಯಾದಿಗಳಲ್ಲಿ ಧಾರ್ಮಿಕವಾಗಿ ಸಹ ಇರುವ ಕೆಲವು ಧರ್ಮಗಳಲ್ಲಿನ ಹಲವು ಕಟ್ಟುಪಾಡುಗಳು ಸ್ತ್ರೀ ತಾರತಮ್ಯಕ್ಕೆ ಉದಾಹರಣೆಗಳಾಗಿವೆ.
     ವೈಯಕ್ತಿಕವಾಗಿ, ಕೌಟುಂಬಿಕವಾಗಿ ಇನ್ನೊಬ್ಬರ ಮನಸ್ಸನ್ನು ನೋಯಿಸಿ ಅವರ ಘನತೆಗೆ ಕುಂದು ತರುವ ಕೃತ್ಯಗಳನ್ನೂ ಕಾಣುತ್ತಿರುತ್ತೇವೆ. ಕಾರ್ಯಕ್ರಮಕ್ಕೋ, ಸಮಾರಂಭಕ್ಕೋ ಎಲ್ಲರನ್ನೂ ಆಹ್ವಾನಿಸಿ ಕೆಲವರನ್ನು ಬೇಕೆಂದೇ ಕರೆಯದಿರುವುದು, ಕರೆದರೂ ಬಂದಾಗ ಅವರನ್ನು ಮಾತನಾಡಿಸದೇ ನಿರ್ಲಕ್ಷಿಸುವುದು ಮಾಡಿದಾಗ ಸಂಬಂದಿಸಿದವರು ಕುಗ್ಗಿಹೋಗುತ್ತಾರೆ. ರಸ್ತೆಯಲ್ಲಿ ಹೋಗುತ್ತಿರುವಾಗ ಎದುರಿನಲ್ಲಿ ಹಳೆಯ ಪರಿಚಯಸ್ಥರೊಬ್ಬರನ್ನು ಕಂಡು ವಿಶ್ವಾಸದಿಂದ ಅವರನ್ನು ಮಾತನಾಡಿಸಿದರೆ ಅವರು ಉತ್ತರಿಸದೆ, ಗಮನಿಸದಂತೆ ಮುಂದೆ ಹೋದರೆ ಹೇಗೆ ಅನ್ನಿಸುತ್ತದೆ? ನನ್ನ ವೈಯಕ್ತಿಕ ಅನುಭವವನ್ನು ಹಂಚಿಕೊಳ್ಳುವೆ. ದೂರದ ಊರಿಗೆ ವರ್ಗವಾಗಿದ್ದ ನಾನು ಪ್ರಯತ್ನ ಪಟ್ಟು ನನ್ನ ಕುಟುಂಬ ವಾಸವಿದ್ದ ಜಿಲ್ಲಾಕೇಂದ್ರಕ್ಕೆ ವರ್ಗ ಮಾಡಿಸಿಕೊಂಡಿದ್ದೆ. ನಾನು ಅಲ್ಲಿಗೆ ಬಂದದ್ದು ಆಗ ಇದ್ದ ಜಿಲ್ಲಾಮಂತ್ರಿಗಳಿಗೆ ಇಷ್ಟವಿರಲಿಲ್ಲ. ಅದಕ್ಕೆ ಕಾರಣವೂ ಇತ್ತು. ಅವರ ಕ್ಷೇತ್ರದಲ್ಲಿ ಹಲವು ವರ್ಷಗಳ ಹಿಂದೆ ಕೆಲಸ ಮಾಡುತ್ತಿದ್ದಾಗ ಅವರ ತಾಳಕ್ಕೆ ಕುಣಿಯುತ್ತಿರಲಿಲ್ಲ ಮತ್ತು ಅವರು ಹೇಳಿದ್ದ ಕಾನೂನಿಗೆ ವಿರುದ್ಧವಾದ ಕೆಲಸವನ್ನು ಮಾಡಲಿಲ್ಲ ಎಂಬ ಕಾರಣಕ್ಕೆ ನನ್ನನ್ನು ಮಂಗಳೂರಿಗೆ ವರ್ಗಾಯಿಸಿದ್ದರು. ಅದನ್ನು ನೆನಪಿನಲ್ಲಿಟ್ಟಿದ್ದ ಅವರು ಜಿಲ್ಲಾಧಿಕಾರಿಯವರಿಗೆ ನನ್ನನ್ನು ಕೂಡಲೇ ವಾಪಸು ಕಳಿಸಲು ತಿಳಿಸಿದ್ದರು. ಜಿಲ್ಲಾಧಿಕಾರಿಗೆ ಆ ಅಧಿಕಾರವಿರಲಿಲ್ಲ. ಸರ್ಕಾರದ ಮಟ್ಟದಲ್ಲೇ ನನ್ನ ವರ್ಗಾವಣೆ ಆದೇಶ ಆಗಬೇಕಿತ್ತು. ನನ್ನ ಬಗ್ಗೆ ವಿಶ್ವಾಸವಿದ್ದ ಜಿಲ್ಲಾಧಿಕಾರಿಯವರು ನನ್ನನ್ನು ಕರೆದು, ಹೋಗಿ 'ಅವರಿಗೆ ಒಂದು ಸಲಾಮು ಹಾಕಿಬಾ. ಇಲ್ಲೇ ಉಳಿಸಲು ಕೇಳಿಕೋ' ಎಂದು ಸಲಹೆ ನೀಡಿದ್ದರು. ಅದರಿಂದ ಪ್ರಯೋಜನವಾಗದು ಎಂಬ ಅರಿವಿದ್ದ ನಾನು ಅವರನ್ನು ಕಂಡಿರಲಿಲ್ಲ. ಮುಂದೆ ಕೆಲವೇ ದಿನಗಳಲ್ಲಿ ನನಗೆ ಶಿವಮೊಗ್ಗಕ್ಕೆ ವರ್ಗಾಯಿಸಿದ ಆದೇಶ ಕೈಸೇರಿತ್ತು. ನನ್ನ ಇಂತಹ ಸ್ವಭಾವದಿಂದಾಗಿ ನನ್ನ ಸೇವಾವಧಿಯಲ್ಲಿ ಇಪ್ಪತ್ತಾರು ವರ್ಗಾವಣೆಗಳನ್ನು ಕಂಡಿದ್ದೆ. 
     ಮಾನವ ಹಕ್ಕುಗಳಿಗೆ ಸಂಬಂಧಿಸಿದಂತೆ ವಿಶ್ವಸಂಸ್ಥೆಯ ಘೋಷಣೆಯಲ್ಲಿ, ಎಲ್ಲಾ ಮಾನವ ಜೀವಿಗಳೂ ಘನತೆ ಮತ್ತು ಹಕ್ಕುಗಳಿಗೆ ಸಂಬಂಧಿಸಿದಂತೆ ಸಮಾನರು. ವಿವೇಚನೆ ಮಾಡುವ ಶಕ್ತಿ ಮತ್ತು ಅಂತಃಪ್ರಜ್ಞೆ ಇರುವ ಅವರು ಪರಸ್ಪರ ಒಬ್ಬರನ್ನೊಬ್ಬರನ್ನು ಸೋದರಭಾವದಿಂದ ಕಾಣಬೇಕು ಎಂದು ಹೇಳಿದೆ. ನಮ್ಮ ನಮ್ಮ ವೈಯಕ್ತಿಕ ಘನತೆ, ಗೌರವಗಳನ್ನು ಕಾಪಾಡಿಕೊಳ್ಳೋಣ. ಹಾಗೆಯೇ ಇತರರ ಘನತೆ, ಗೌರವಗಳಿಗೆ ಧಕ್ಕೆ ಬರದಂತೆ ವರ್ತಿಸೋಣ. ರಾಜಕೀಯವಾಗಿ, ಸಾಮಾಜಿಕವಾಗಿ, ಧಾರ್ಮಿಕವಾಗಿ, ಕೌಟುಂಬಿಕವಾಗಿ ಅಥವ ವೈಯಕ್ತಿಕವಾಗಿ ಇನ್ನೊಬ್ಬರ ಘನತೆಗೆ ಕುಂದು ಎಣಿಸಿದರೆ ಅದರ ಪರಿಣಾಮ ದ್ವೇಷ ಮತ್ತು ಸಂಘರ್ಷವಲ್ಲದೆ ಮತ್ತೇನೂ ಅಲ್ಲ. ಇದು ವಿನಾಶದ ಹಾದಿ. ಪರಸ್ಪರ ಗೌರವಿಸುವುದನ್ನು ಕಲಿಯೋಣ. ಇದು ವಿಕಾಸದ ಹಾದಿ.
-ಕ.ವೆಂ.ನಾಗರಾಜ್.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ