"ಅವರು ದೊಡ್ಡ ಮನುಷ್ಯರಾದರೂ ಎಷ್ಟೊಂದು ಸರಳವಾಗಿದ್ದಾರೆ! ಎಂಥವರಿಗಾದರೂ ನೋಡಿದರೆ ಕೈಮುಗಿಯಬೇಕು ಅನ್ನಿಸುತ್ತದೆ" - ಆ ವ್ಯಕ್ತಿಯನ್ನು ನೋಡಿದವರೊಬ್ಬರು ತಮ್ಮ ಸ್ನೇಹಿತನ ಬಳಿಯಲ್ಲಿ ಹೀಗೆ ಹೇಳಿದಾಗ ಅವನ ಸ್ನೇಹಿತ ನಗುತ್ತಾ, "ಅವನಾ? ಅವನೊಬ್ಬ ಛತ್ರಿ, ಆಷಾಡಭೂತಿ" ಎಂದು ಅವನ ಗುಣಗಳ ಅನಾವರಣ ಮಾಡಿದಾಗ ತಬ್ಬಿಬ್ಬಾಗಿದ್ದರು. ಮುಖವಾಡಗಳನ್ನೇ ಧರಿಸಿರುವ ಜನರ ನಡುವೆ ಅಸಲಿ ಮುಖ ಯಾವುದು, ನಕಲಿ ಯಾವುದು ಎಂದು ತಿಳಿಯುವುದು ಸುಲಭವಲ್ಲ. ನಾನು ತಹಸೀಲ್ದಾರನಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ಒಮ್ಮೆ ಅಂಬೇಡ್ಕರ್ ಜಯಂತಿಯಂದು ಸಾಮೂಹಿಕ ಭೋಜನದ ವ್ಯವಸ್ಥೆ ಮಾಡಲಾಗಿತ್ತು. ಕ್ಷೇತ್ರದ ಶಾಸಕರು ಪಕ್ಕದಲ್ಲಿ ಕುಳಿತಿದ್ದ ನನಗೆ ಕಿವಿಯಲ್ಲಿ ಪಿಸುಗುಟ್ಟಿದ್ದರು, "ಊಟದ ಶಾಸ್ತ್ರ ಮಾಡಿ. ಐಬಿಯಲ್ಲಿ ಬೇರೆ ಊಟ ಇದೆ". ಮರುದಿನದ ಪತ್ರಿಕೆಗಳಲ್ಲಿ ನಮ್ಮ ಸಹಭೋಜನದ ಫೋಟೋ ಪ್ರಕಟವಾಗಿತ್ತು. ಅಸಲಿ ಆಭರಣಗಳಿಗಿಂತ ನಕಲಿ ಆಭರಣಗಳೇ ಸುಂದರವಾಗಿ, ಅಸಲಿಗಿಂತ ಚೆನ್ನಾಗಿ ಕಾಣುತ್ತವೆ. ಖೋಟಾ ನೋಟುಗಳನ್ನು ಪತ್ತೆ ಹಚ್ಚುವುದೇ ಕಷ್ಟವೆಂಬಷ್ಟು ಅಸಲಿಯಂತೆ ಕಾಣುತ್ತವೆ. ನಮ್ಮ ಎದುರಿಗೆ ಅತ್ಯಂತ ಸ್ನೇಹದಿಂದ ಮಾತನಾಡಿ, ಬೆನ್ನ ಹಿಂದೆ ನಮ್ಮನ್ನು ದೂರುವವರೂ ಇರುತ್ತಾರೆ. ಅಸಲಿ ಮತ್ತು ನಕಲಿತನಗಳನ್ನು ಗುರುತಿಸುವುದಕ್ಕೆ ಕೆಳಗೆ ತಿಳಿಸಿರುವ ಅಂಶಗಳು ಸಹಾಯಕವಾಗಬಹುದು.
೧. ಗೌರವ ತೋರಿಸುವ ರೀತಿ:
ಯಾರು ತಮ್ಮ ಸಂಪರ್ಕಕ್ಕೆ ಬರುವ ಎಲ್ಲರನ್ನೂ ಗೌರವದಿಂದ, ಪ್ರೀತಿಯಿಂದ ಕಾಣುತ್ತಾರೋ ಅವರು ಅಸಲಿಗಳು. ಅವರು ಯಾರನ್ನೂ ಕೀಳಾಗಿ ಕಾಣುವುದಿಲ್ಲ ಅಥವ ತಾವು ಮೇಲಿನವರೆಂದು ತೋರಿಸಿಕೊಳ್ಳುವುದಿಲ್ಲ. ಆದರೆ ನಕಲಿಗಳು ಅಧಿಕಾರದಲ್ಲಿರುವವರನ್ನು ಮತ್ತು ತಮಗೆ ಪ್ರಯೋಜನಕ್ಕೆ ಬರುವವರೆನ್ನು ಮಾತ್ರ ಗೌರವಿಸುತ್ತಾರೆ. ಯಾರನ್ನು ಗೌರವಿಸಬೇಕು ಎಂಬ ವಿಚಾರದಲ್ಲಿ ಅವರು ಲೆಕ್ಕಾಚಾರ ಹಾಕುತ್ತಾರೆ. ಉಳಿದವರನ್ನು ನಿಕೃಷ್ಟವಾಗಿ ಕಾಣುತ್ತಾರೆ ಅಥವ ನಿರ್ಲಕ್ಷ್ಯಿಸುತ್ತಾರೆ.
೨. ಮೆಚ್ಚುಗೆಯ ನಿರೀಕ್ಷೆ:
ತುಂಬಿದ ಕೊಡದಂತಹ ವ್ಯಕ್ತಿತ್ವದವರು ತಾವಾಗಿಯೇ ಇನ್ನೊಬ್ಬರನ್ನು ಮೆಚ್ಚಿಸಲು, ಅವರ ಗಮನ ಸೆಳೆಯಲು ಹೋಗುವುದಿಲ್ಲ. ಅವರು ತಾವಿದ್ದಂತೆಯೇ ತಾವು ಸಂತುಷ್ಟರಾಗಿರುತ್ತಾರೆ ಮತ್ತು ಇನ್ನೊಬ್ಬರ ಮೆಚ್ಚುಗೆಗಾಗಲೀ, ನಿಂದನೆಗಾಗಲೀ ಮಹತ್ವ ಕೊಡುವುದಿಲ್ಲ. ಆದರೆ ನಕಲಿಗಳು ತಾವು ದೊಡ್ಡವರೆಂದು ಬಿಂಬಿಸಿಕೊಳ್ಳಲು ಜನರನ್ನು ಮೆಚ್ಚಿಸುವುದಕ್ಕಾಗಿ ತಮ್ಮ ಮಿತಿ ಮೀರಿ ಹೋಗುತ್ತಾರೆ. ಅನುಕೂಲವಾಗುತ್ತದೆ ಎನ್ನಿಸಿದರೆ ಎಂತಹವರನ್ನೂ ಓಲೈಸುತ್ತಾರೆ, ಲಾಬಿ ಮಾಡುತ್ತಾರೆ, ಹಾಡಿಹೊಗಳುತ್ತಾರೆ. ಅಧಿಕಾರದಲ್ಲಿರುವವರನ್ನು ಇಂದ್ರ, ಚಂದ್ರ, ದೇವೇಂದ್ರ ಎನ್ನುತ್ತಾ, ಅವರ ವಿರೋಧಿಗಳನ್ನು ವಾಚಾಮ ಗೋಚರವಾಗಿ ನಿಂದಿಸುವ ಕಾಯಕದಲ್ಲಿ ತೊಡಗುತ್ತಾರೆ. ದುರಂತವೆಂದರೆ ಆಡಳಿತದಲ್ಲಿರುವವರು ತಮ್ಮ ಸ್ವಾರ್ಥಸಾಧನೆಗಾಗಿ ಇಂತಹ ನಕಲಿಗಳನ್ನು ಪ್ರೋತ್ಸಾಹಿಸುತ್ತಾರೆ, ಪ್ರಶಸ್ತಿಗಳನ್ನು ಕೊಡುತ್ತಾರೆ, ಉನ್ನತ ಸ್ಥಾನಗಳ ಬಳುವಳಿ ನೀಡುತ್ತಾರೆ.
೩. ಗಮನ ಸೆಳೆಯುವುದು:
ನೈಜ ವ್ಯಕ್ತಿತ್ವದವರು ತಾವು ಜನರ ಆಕರ್ಷಣೆಯ ಕೇಂದ್ರವಾಗಿರಬೇಕೆಂದು ಬಯಸುವುದಿಲ್ಲ. ತಾವು ಇರುವಂತೆಯೇ ಇರಬಯಸುವವರು ಅವರು. ತಾವು ಮಾಡುತ್ತಿರುವ ಕೆಲಸಗಳನ್ನು ಸದ್ದಿಲ್ಲದೆ ನಡೆಸಿಕೊಂಡು ಹೋಗುವ ಮನಸ್ಥಿತಿಯವರು ಆ ಕಾರಣಕ್ಕಾಗಿಯೇ ಗೌರವಿಸಲ್ಪಡುತ್ತಾರೆ. ಆದರೆ ಪ್ರಚಾರದ ಹಪಾಹಪಿಯಿರುವವರು ದೊಡ್ಡ ಗಂಟಲಿನಲ್ಲಿ ಸ್ವಪ್ರಚಾರ ಮಾಡಿಕೊಳ್ಳುತ್ತಾ ಮುಂಚೂಣಿಯಲ್ಲಿರಬಯಸುತ್ತಾರೆ. ಅವರು ಜನರು ತಮ್ಮ ಸುತ್ತಲೇ ಇದ್ದು, ತಮ್ಮನ್ನು ಗೌರವಿಸುತ್ತಾರೆಂಬ ಭ್ರಮೆ ಹೊಂದಿರುತ್ತಾರೆ.
೪. ಸಾಧನೆಯ ಪ್ರಕಟೀಕರಣ:
ನಿಜವಾದ ಸಾಧಕರು ತಮ್ಮ ಸಾಧನೆಯನ್ನು ಕೊಚ್ಚಿಕೊಳ್ಳುವುದಿಲ್ಲ. ಏಕೆಂದರೆ ಅದನ್ನು ಅವರು ಮೆಚ್ಚುಗೆ ಗಳಿಸಿಕೊಳ್ಳುವುದಕ್ಕಾಗಿ ಮಾಡಿರುವುದಿಲ್ಲ. ಅವರು ಸಾಮಾನ್ಯವಾಗಿ ವಿನೀತರಾಗಿರುತ್ತಾರೆ ಮತ್ತು ಸರಳರಾಗಿರುತ್ತಾರೆ. ಆದರೆ ಅರೆಬೆಂದ ವ್ಯಕ್ತಿತ್ವದವರು ತಾವು ಮಾಡಿದ, ಮಾಡಲು ಪ್ರಯತ್ನಿಸಿದ ಸಾಧನೆಗಳ ಬಗ್ಗೆ ದೊಡ್ಡದಾಗಿ ಕೊಚ್ಚಿಕೊಳ್ಳುತ್ತಿರುತ್ತಾರೆ. ಅಷ್ಟೇನೂ ಮಹತ್ವದ್ದಲ್ಲದ ಸಂಗತಿಯನ್ನೂ ಮಹತ್ವದ್ದೆಂಬಂತೆ ಬಿಂಬಿಸುತ್ತಿರುತ್ತಾರೆ.
೫. ಅಭಿಪ್ರಾಯ ತಿಳಿಸುವ ರೀತಿ:
ಮುಚ್ಚುಮರೆ ಮಾಡದ ಸ್ವಭಾವದವರು ತಮಗೆ ಅನ್ನಿಸಿದುದನ್ನು ನೇರವಾಗಿ ಹೇಳಿಬಿಡುತ್ತಾರೆ. ಅವರ ಅಭಿಪ್ರಾಯಗಳಲ್ಲಿ ಕಪಟತನವಾಗಲೀ, ಏನನ್ನೋ ಮುಚ್ಚಿಡುವುದಾಗಲೀ ಇರುವುದಿಲ್ಲ. ಇದ್ದುದನ್ನು ಇದ್ದಂತೆ ಪ್ರಾಮಾಣಿಕವಾಗಿ ಹೇಳುತ್ತಾರೆ. ಅದರೆ ದ್ವಿಮುಖ ವ್ಯಕ್ತಿತ್ವ ಹೊಂದಿದವರು ಎದುರಿಗೆ ಒಂದು ತರಹ ಮತ್ತು ಹಿಂದೆ ಮತ್ತೊಂದು ತರಹ ಹೇಳುತ್ತಾರೆ. ಗಾಳಿಮಾತುಗಳನ್ನು ಹರಡುವುದರಲ್ಲಿ ಅವರು ಆನಂದ ಕಾಣುತ್ತಾರೆ.
೬. ಮಾತು ಮತ್ತು ಕೃತಿ:
ಸರ್ವಜ್ಞನ ನುಡಿ, ಆಡದೇ ಮಾಡುವನು ರೂಢಿಯೊಳಗುತ್ತಮನು, ಆಡಿ ಮಾಡುವನು ಮಧ್ಯಮ. ಅಧಮ ತಾನಾಡಿಯೂ ಮಾಡದವ ಎಂಬ ಮಾತು ಸಾರ್ವಕಾಲಿಕ ಸತ್ಯ. ಮಾಡಬೇಕೆಂದುದನ್ನು ಹೇಳದೇ ಸದ್ದಿಲ್ಲದೆ ಮಾಡುವ ಸಾಧಕರುಗಳು ನೋಡುವ ಕಣ್ಣುಗಳಿಗೆ ಕಾಣುತ್ತಾರೆ. ಆದರೆ ಆಡುವುದೇ ಒಂದು. ಮಾಡುವುದೇ ಮತ್ತೊಂದು ಎನ್ನುವವರ ಸಂಖ್ಯೆ ಹೆಚ್ಚು. ಹಾಗೆ ಮಾಡುತ್ತೇನೆ, ಹೀಗೆ ಮಾಡುತ್ತೇನೆ ಎಂದು ಭರವಸೆ ಕೊಡುವ ಬಹುತೇಕ ರಾಜಕಾರಣಿಗಳು ಅದನ್ನು ಎಷ್ಟರ ಮಟ್ಟಿಗೆ ಈಡೇರಿಸುತ್ತಾರೆ ಎಂಬುದು ತಿಳಿದ ವಿಚಾರವೇ ಆದರೂ ಜನರು ಮೋಸ ಹೋಗುತ್ತಾರೆ.
೭. ಅಭಿಪ್ರಾಯ ವ್ಯಕ್ತಪಡಿಸುವ ರೀತಿ:
ಪ್ರಾಮಾಣಿಕರು ಪೂರ್ವಾಗ್ರಹ ಪೀಡಿತರಾಗಿರದೆ ಯಾವುದೇ ಒಳ್ಳೆಯ ಸಂಗತಿ ಯಾರಿಂದಲೇ ಬಂದರೂ ಸ್ವೀಕರಿಸುತ್ತಾರೆ, ಮೆಚ್ಚುತ್ತಾರೆ, ಕೆಟ್ಟ ಕೃತ್ಯಗಳನ್ನು ಯಾರೇ ಮಾಡಿರಲಿ, ಖಂಡಿಸುತ್ತಾರೆ. ನಕಲಿ ವ್ಯಕ್ತಿತ್ವದವರು ಪೂರ್ವಾಗ್ರಹ ಪೀಡಿತರಾಗಿದ್ದು, ತಮ್ಮವರ ಮತ್ತು ತಮ್ಮ ಗುಂಪಿನವರ ವಿಚಾರಗಳನ್ನು ಮಾತ್ರ ಒಪ್ಪುತ್ತಾರೆ. ತಮ್ಮವರು ಎಂದು ಭಾವಿಸದವರ ಒಳ್ಳೆಯ ವಿಚಾರಗಳಲ್ಲೂ ಕೊಂಕು ಹುಡುಕುತ್ತಾರೆ. ತಮ್ಮವರ ಕೆಟ್ಟ ಕೃತ್ಯಗಳನ್ನು ಕಂಡೂ ಕಾಣದವರಂತಿರುತ್ತಾರೆ. ಮಾಧ್ಯಮಗಳು ಬುದ್ಧಿಜೀವಿಗಳು, ಪ್ರಗತಿಪರರು, ಇತ್ಯಾದಿ ವಿಶೇಷಣಗಳೊಂದಿಗೆ ಬಿಂಬಿಸಿ ಮುನ್ನೆಲೆಗೆ ತಂದಿರುವ ಅನೇಕ ಸಾಹಿತಿಗಳು, ಕಲಾವಿದರು, ರಾಜಕಾರಣಿಗಳು ಇಂತಹ ನಕಲಿ ವ್ಯಕ್ತಿತ್ವದವರಾಗಿರುವುದು ದೌರ್ಭಾಗ್ಯವೇ ಸರಿ. ಇಂತಹವರು ಇತರರನ್ನು ಟೀಕಿಸಿ ಕೆಟ್ಟವರೆಂದು ಪ್ರಚಾರ ಮಾಡಿ ಅವರ ನೋವಿನಲ್ಲಿ ಸಂತೋಷ ಕಾಣುವ ವಿಕೃತರಾಗಿರುತ್ತಾರೆ.
೮. ನೆರವು ನೀಡುವ ರೀತಿ:
ಸಜ್ಜನರು ತಮ್ಮ ಸುತ್ತಮುತ್ತಲಿನವರಿಗೆ ವೈಯಕ್ತಿಕ ಅಭಿಲಾಷೆಗಳಿಲ್ಲದೆ ಷರತ್ತಿಲ್ಲದ ನೆರವು ನೀಡಲು ಮುಂದಾಗುತ್ತಾರೆ. ಎಲ್ಲರೂ ಚೆನ್ನಾಗಿರಲಿ ಎಂಬ ಮನೋಭಾವ ಅವರದಾಗಿರುತ್ತದೆ. ಆದರೆ ಸಮಯಸಾಧಕರು ತಮಗೆ ಪ್ರತಿಫಲ ಸಿಗುವಂತಹ ಸಂದರ್ಭಗಳಲ್ಲಿ ಮಾತ್ರ ಸಹಾಯಹಸ್ತ ಚಾಚುತ್ತಾರೆ. ತಮಗೆ ಪ್ರಯೋಜನವಿಲ್ಲ ಎಂದಾದರೆ ಇತರರು ಸಾಯುತ್ತಿದ್ದರೂ ತಿರುಗಿ ನೋಡದ ಅಮಾನವೀಯ ಗುಣದವರಾಗಿರುತ್ತಾರೆ.
ನಕಲಿಗಳನ್ನು ಅಸಲಿಗಳನ್ನಾಗಿಸುವುದು ಸಾಧ್ಯವೇ? ಈ ಜಗತ್ತು ಅಸಲಿಯೆಂದು ಬಿಂಬಿಸಿಕೊಳ್ಳಲು ಪ್ರಯತ್ನಿಸುವ ನಕಲಿಗಳಿಂದ ತುಂಬಿಹೋಗಿದೆ. ನಮ್ಮ ಸುತ್ತಲೂ, ಇದರಲ್ಲಿ ನಾವೂ ಸೇರಿರಬಹುದು, ಇಂತಹ ನಕಲಿಗಳು ಕಾಣಸಿಗುತ್ತಾರೆ. ಅವರು ನಮ್ಮ ಸ್ನೇಹಿತರಾಗಿರಬಹುದು, ಕುಟುಂಬದವರಾಗಿರಬಹುದು, ಸಹಪಾಠಿಗಳಾಗಿರಬಹುದು, ನೆರೆಹೊರೆಯವರಾಗಿರಬಹುದು, ಜಾತಿಯವರಾಗಿರಬಹುದು, ಸಹೋದ್ಯೋಗಿಗಳಾಗಿರಬಹುದು, ಯಾರೇ ಆಗಿರಬಹುದು ಎಂಬುದನ್ನು ಯಾರೂ ತಳ್ಳಿಹಾಕಲಾರರು. ಜನರೂ ಸಹ ನಕಲಿಗಳಾಗಿರುವುದನ್ನು ಒಪ್ಪಿಕೊಂಡುಬಿಡುತ್ತಾರೆ, ಏಕೆಂದರೆ ಅಸಲಿಗಿಂತ ನಕಲಿಯೇ ಹೆಚ್ಚು ಜನಾಕರ್ಷಕವಾಗಿರುತ್ತದೆ ಮತ್ತು ಹೆಚ್ಚು ಪ್ರಯೋಜನಕಾರಿ ಎಂದು ಭಾವಿಸುತ್ತಾರೆ. ನೀವು ನಿಮ್ಮ ಒಬ್ಬ ಸ್ನೇಹಿತ ಮೊದಲು ನಿಮ್ಮನ್ನು ಮೆಚ್ಚಿಸಿ, ನಂತರ ನಿಮಗೆ ಮೋಸ ಮಾಡಿದರೆ ಒಪ್ಪುತ್ತೀರಾ? ಇಲ್ಲವೆಂದಾದರೆ ನಕಲಿಗಳನ್ನು ಪ್ರೋತ್ಸಾಹಿಸುವುದನ್ನು ನಿಲ್ಲಿಸಿ. ಫೇಸ್ ಬುಕ್ಕಿನಲ್ಲಿ ಒಂದು ಅಸಲಿ ಮತ್ತೊಂದು ನಕಲಿ ಖಾತೆ ಹೊಂದಿರುವವರು ಬಹಳ ಜನರಿದ್ದಾರೆ, ಅವರ ಒಂದೊಂದು ಮುಖಕ್ಕೆ ಒಂದರಂತೆ! ಅವರ ನಕಲಿ ಖಾತೆಯೇ ಅವರ ಅಸಲಿತನದ ದರ್ಶನ ಮಾಡಿಸುತ್ತದೆ. ಕಪಟಿ ಸ್ನೇಹಿತನಿಗಿಂತ ಪ್ರಾಮಾಣಿಕ ಶತ್ರುವೇ ಮೇಲು, ಅರ್ಥಾತ್ ನಕಲಿಗಿಂತ ಅಸಲಿಯೇ ಎಂದೆಂದಿಗೂ ಮೇಲು!
-ಕ.ವೆಂ.ನಾಗರಾಜ್.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ