ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಮಂಗಳವಾರ, ನವೆಂಬರ್ 7, 2017

ತಾವರೆ ಎಲೆಯ ಮೇಲಿನ ನೀರು


ಮಾಯೆಯ ಮುಸುಕಿನಲಿ ನಡೆದಿಹುದು ಜಗವು
ಜಗದ ಅವಸಾನವದು ಮರೆಯಾಗೆ ಮಾಯೆ|
ಹುಡುಕಾಟ ಬೆದಕಾಟ ಚಣಚಣಕು ಪರದಾಟ
ಮಾಯೆಯಾಟದಲಿ ಮನವೆ ದಾಳ ಮೂಢ||
     ಈ ಜಗತ್ತಿನಲ್ಲಿ ನಡೆಯುವ ಜೀವನ ನಾಟಕಗಳು ಒಂದಕ್ಕಿಂತ ಒಂದು ಭಿನ್ನ, ರಮ್ಯ. ನವರಸಗಳೂ ತುಂಬಿ ತುಳುಕುವ ಈ ನಾಟಕದಲ್ಲಿ ಪ್ರತಿಯೊಬ್ಬರೂ ಪಾತ್ರಧಾರಿಗಳೇ. ವಿಶೇಷವೆಂದರೆ ಯಾರೊಬ್ಬರಿಗೂ ಇದು ನಾಟಕ ಎಂದು ಅನ್ನಿಸುವುದೇ ಇಲ್ಲ. ಪಾತ್ರವೇ ತಾವೆಂದು ತನ್ಮಯರಾಗಿ ನಟಿಸುವಾಗ ಉಸಿರು ನಿಲ್ಲುವವರೆಗೂ ನಾಟಕದಲ್ಲಿ ತಮ್ಮ ಪಾತ್ರ ಒಂದೊಮ್ಮೆ ಮುಕ್ತಾಯವಾಗುತ್ತದೆ ಎಂದು ಭಾವಿಸುವುದೇ ಇಲ್ಲ. ನಾಟಕದಲ್ಲಿನ ತಮ್ಮ ಪಾತ್ರ ಒಂದೊಮ್ಮೆ ಮುಗಿಯುತ್ತದೆ ಎಂದು ಮುಂಚೆಯೇ ಗೊತ್ತಿದ್ದರೆ, ಪಾತ್ರದ ಅಭಿನಯದಲ್ಲಿ ಮತ್ತಷ್ಟು ಜೀವಕಳೆ ತುಂಬುತ್ತಿದ್ದರೇನೋ! ಇದು ನಾಟಕ, ನಾವು ಪಾತ್ರಧಾರಿಗಳು ಎಂದು ಗೊತ್ತಾದರೆ ಪಾತ್ರ ಅನುಭವಿಸುವ ಕಷ್ಟ-ನಷ್ಟಗಳನ್ನು ಸಹಿಸಿಕೊಳ್ಳಲು ಅವಕಾಶವಾಗುತ್ತಿತ್ತು. ಭಗವದ್ಗೀತೆಯ ಒಂದು ಶ್ಲೋಕದಲ್ಲಿ (೫.೧೦) ನಿರ್ಲಿಪ್ತ ಭಾವದಿಂದ, ಫಲ ನಿರಪೇಕ್ಷೆಯಿಂದ ಕರ್ಮಗಳನ್ನು ಮಾಡುವವರಿಗೆ ತಾವರೆಯ ಎಲೆಯ ಮೇಲೆ ನೀರು ತನ್ನ ಇರುವನ್ನು ತೋರಿಸಲು ಹೇಗೆ ಸಾಧ್ಯವಿಲ್ಲವೋ ಹಾಗೆ, ಅವರಿಗೆ ಪಾಪಗಳು, ಕಷ್ಟಗಳು ತೊಂದರೆ ಕೊಡಲಾರವು ಎಂದು ಹೇಳಿದೆ. ಒಂದೆರಡು ಪ್ರಸಂಗಗಳನ್ನು ಗಮನಿಸೋಣ.
ಪ್ರಸಂಗ ೧:
     ಅದೊಂದು ಸಂತೃಪ್ತ, ಶ್ರೀಮಂತ ಕುಟುಂಬವಾಗಿತ್ತು. ಗಂಡ, ಹೆಂಡತಿ ಮತ್ತು ಅವರಿಗೆ ಇಬ್ಬರು ಗಂಡು ಮಕ್ಕಳು. ಚಿನ್ನದ ಚಮಚ ಬಾಯಿಯಲ್ಲಿ ಇಟ್ಟುಕೊಂಡು ಹುಟ್ಟಿದವರು ಅನ್ನುವ ಹಾಗೆ ಬೆಳೆದ ಮಕ್ಕಳು ಒಳ್ಳೆಯ ವಿದ್ಯಾಭ್ಯಾಸ ಪಡೆದರು. ಮಕ್ಕಳಿಬ್ಬರಿಗೂ ಮುಂದೆ ಅಮೆರಿಕಾದಲ್ಲಿ ಒಳ್ಳೆಯ ಕೆಲಸಗಳೂ ಸಿಕ್ಕಿದವು. ಮದುವೆಯೂ ಆಗಿ ಅಲ್ಲಿಯೇ ನೆಲೆಸಿದರು. ಮಕ್ಕಳು ಆಗಾಗ್ಯೆ ಬಂದು ಹೋಗಿ ಮಾಡುತ್ತಿದ್ದರು. ಬರುಬರುತ್ತಾ ಬಂದು ಹೋಗುವುದು ಕಡಿಮೆಯಾಗುತ್ತಾ ಹೋಯಿತು. ಕೆಲವು ವರ್ಷಗಳಲ್ಲಿ ತಂದೆ ತೀರಿಹೋದರು. ತಾಯಿ ಒಂಟಿಯಾದರು. ಯಾವ ಕಾರಣಕ್ಕೋ ಏನೋ, ಒಂಟಿ ತಾಯಿಯನ್ನು ತಮ್ಮೊಂದಿಗೆ ಮಕ್ಕಳು ಕರೆದುಕೊಂಡು ಹೋಗಲು ಮನಸ್ಸು ಮಾಡಲಿಲ್ಲ. ಅಡಿಗೆಯವರು, ಕೆಲಸದವರುಗಳು ಇದ್ದರೂ ತಮ್ಮವರು ಎಂಬುವವರಿಲ್ಲದ ಬಾಧೆ ಅವರನ್ನು ಕಾಡುತ್ತಿತ್ತು. ಮಕ್ಕಳೂ ಹಣ ಕಳಿಸುತ್ತಿದ್ದು, ದೂರದಿಂದಲೇ ಮಾತನಾಡುತ್ತಿದ್ದರೂ ಒಂಟಿತನದಿಂದ ಕೊರಗುತ್ತಿದ್ದ ಆ ತಾಯಿ ಮಕ್ಕಳ ಸಲಹೆಯಂತೆ ವೃದ್ಧಾಶ್ರಮಕ್ಕೆ ಸೇರಿಕೊಂಡರು. ತಾವಿದ್ದ ವೃದ್ಧಾಶ್ರಮಕ್ಕೂ ಅವರು ಲಕ್ಷ, ಲಕ್ಷ ಹಣ ದಾನ ಮಾಡಿದ್ದರು. ಉದಾಸ ಭಾವದಿಂದ ಸೂರು ದಿಟ್ಟಿಸುತ್ತಾ ಕುಳಿತಿರುತ್ತಿದ್ದ ಅವರು ಮುಂದೊಮ್ಮೆ ಅನಾರೋಗ್ಯದಿಂದ ಕಾಲವಶರಾದಾಗ ಅವರ ಮಕ್ಕಳು ಅವರ ಜೊತೆಯಲ್ಲಿರಲಿಲ್ಲ. ಇಲ್ಲಿ ಯಾರದು ತಪ್ಪು ಎಂಬ ವಿಶ್ಲೇಷಣೆಗಿಂತ ಎಲ್ಲಿ ತಪ್ಪಾಗಿದೆ ಎಂಬುದು ಗಮನಿಸಬೇಕಾಗಿದೆ. ನೈತಿಕ ಮೌಲ್ಯಗಳನ್ನು ಬೋಧಿಸದ ಶಿಕ್ಷಣ ಪದ್ಧತಿ, ಸಂಸ್ಕಾರಗಳಿಗೆ ಮಹತ್ವ ಕೊಡದ ಕುಟುಂಬಗಳಿಂದಾಗಿ ಸಂಬಂಧಗಳ ಮಹತ್ವ ಕ್ಷೀಣವಾಗಿ ಇಂತಹ ಮತ್ತು ಇದಕ್ಕಿಂತ ದುರಂತ ಸ್ಥಿತಿಯಲ್ಲಿರುವ ಕುಟುಂಬಗಳು ಕಂಡು ಬರುತ್ತವೆ.
ಪ್ರಸಂಗ ೨:
     ಒಬ್ಬರು ಸಂತರನ್ನು ಒಮ್ಮೆ ಗೃಹಸ್ಥರೊಬ್ಬರು ತಮ್ಮ ಮನೆಗೆ ಆಹ್ವಾನಿಸಿದ್ದರು. ಆ ಕುಟುಂಬದವರೆಲ್ಲರೂ ಆ ಸಂತರ ಶಿಷ್ಯರು, ಅಭಿಮಾನಿಗಳು. ಆ ಮನೆಯಲ್ಲಿದ್ದ ಸುಮಾರು ೯೦-೯೨ರ ವಯಸ್ಸಿನ ವೃದ್ಧೆಯೊಬ್ಬರು ಸಂತರಿಗೆ ನಮಸ್ಕರಿಸಿ, ಪೂಜ್ಯರೇ, ನನಗೆ ಇನ್ನೇನೂ ಆಸೆಯಿಲ್ಲ. ನಿಮ್ಮ ಪಾದದ ಬಳಿಯಲ್ಲಿ ತಲೆಯಿಟ್ಟು ಪ್ರಾಣ ಬಿಡಬೇಕೆಂಬ ಆಸೆಯಿದೆ ಎಂದು ಹೇಳಿದಾಗ, ಆ ಸಂತರು ಕೂಡಲೇ ಸರಿಯಾಗಿ ಕುಳಿತುಕೊಂಡು, ಹಾಗೆಯೇ ಮಾಡಿ ಎಂದುಬಿಟ್ಟರು. ಗಾಬರಿಯಾದ ವೃದ್ಧೆ, ಅಯ್ಯೋ ಸ್ವಾಮಿ, ಈಗಲೇ ಅಲ್ಲ. ನನ್ನ ಮೊಮ್ಮಗನ ಮದುವೆ ನೋಡಬೇಕು. ಅವನ ಮಗುವನ್ನು ಎತ್ತಿ ಆಡಿಸಬೇಕು. ಆನಂತರ . .  ಎಂದು ರಾಗ ಎಳೆದರು. ಆಹಾ, ಮಾಯಾಮೋಹಿನಿಯ ಆಟವೇ ಆಟ! ಎಷ್ಟೇ ವಯಸ್ಸಾದರೂ ಮೋಹದ ಬಂಧ ಸಡಿಲಾಗುವುದೇ ಇಲ್ಲವಲ್ಲಾ!
ಪ್ರಸಂಗ ೩:
     ವೃದ್ಧ ವ್ಯಾಪಾರಿಯೊಬ್ಬ ಮರಣಶಯ್ಯೆಯಲ್ಲಿದ್ದು ಇನ್ನೇನು ಕೊನೆಯುಸಿರು ಎಳೆಯುತ್ತಾನೆ ಎಂಬ ಸ್ಥಿತಿಗೆ ತಲುಪಿದಾಗ, ಆತನ ಮಕ್ಕಳೆಲ್ಲರಿಗೂ ಬರಲು ಹೇಳಿಕಳುಹಿಸಿದರು. ಎಲ್ಲರೂ ಮನೆಗೆ ಧಾವಿಸಿ ಬಂದರು. ಹಿರಿಯ ಮಗನನ್ನು ಕಂಡ ಆ ವೃದ್ಧರು ಆತನಿಗೆ ಏನೋ ಹೇಳಲು ಪ್ರಯತ್ನಿಸುತ್ತಿದ್ದರು. ಆದರೆ ಅವರ ಬಾಯಿಯಿಂದ ಸ್ವರ ಹೊರಡುತ್ತಿರಲಿಲ್ಲ. ಬಹಳ ಪ್ರಯತ್ನದ ನಂತರ ಕ್ಷೀಣವಾಗಿ ಹೇಳಿದ್ದೇನೆಂದರೆ, ಇಷ್ಟು ಬೇಗ ಏಕೆ ಅಂಗಡಿ ಬಾಗಿಲು ಹಾಕಿದೆ? ಎಂದು! ಇಷ್ಟು ಹೇಳಿ ಅವರು ತಲೆ ವಾಲಿಸಿಬಿಟ್ಟರು. ಲೋಭದ ಅತ್ಯುನ್ನತ ಸ್ಥಿತಿ ಇದು. ಅವರಿಗೆ ಸಾಯುವ ಸಮಯದಲ್ಲಿಯೂ ಸಾಕು ಎಂಬ ಭಾವ ಬರಲೇ ಇಲ್ಲ.
     ಮೊದಲ ಪ್ರಸಂಗದಲ್ಲಿ ನೈತಿಕ ಮೌಲ್ಯಗಳಿಲ್ಲದ ಶಿಕ್ಷಣ ಮತ್ತು ಸುಯೋಗ್ಯ ಸಂಸ್ಕಾರದ ಕೊರತೆ ಆ ಸ್ಥಿತಿಗೆ ಕಾರಣವಾಗಿದ್ದರೂ, ಮಕ್ಕಳನ್ನು ಸಾಕಿ ಸಲುಹಿದ್ದಕ್ಕೆ ಪ್ರತಿಯಾಗಿ ಮಕ್ಕಳು ತಮ್ಮನ್ನು ಕೊನೆಗಾಲದಲ್ಲಿ ನೋಡಿಕೊಳ್ಳಬೇಕೆಂಬ ನಿರೀಕ್ಷೆಯೇ ಆ ತಾಯಿಯನ್ನು ನೋವಾಗಿ ಕಾಡಿದ್ದುದು. ಅಂತಹ ನಿರೀಕ್ಷೆ ಇಟ್ಟುಕೊಂಡಿರದಿದ್ದಲ್ಲಿ ಬಹುಷಃ ದುಃಖದ ಪ್ರಮಾಣ ಕಡಿಮೆಯಿರುತ್ತಿತ್ತೇನೋ! ಇಂದಿನ ದಿನಮಾನಗಳಲ್ಲಿ ಮಕ್ಕಳನ್ನು ಬೆಳೆಸುವುದು ಕರ್ತವ್ಯ ಎಂಬ ದೃಷ್ಟಿಯಿಂದ ಕರ್ತವ್ಯ ನಿರ್ವಹಿಸಿ, ಪ್ರತಿಯಾಗಿ ಅವರು ವೃದ್ಧಾಪ್ಯದಲ್ಲಿ ತಮ್ಮನ್ನು ನೋಡಿಕೊಳ್ಳಬೇಕೆಂಬ ನಿರೀಕ್ಷೆ ಇಟ್ಟುಕೊಳ್ಳದಿರುವುದು ಒಳಿತು. ಈ ಭಾವ ಬರಬೇಕೆಂದರೆ ಅಂಟಿಯೂ ಅಂಟದಂತೆ, ತಾವರೆ ಎಲೆಯ ಮೇಲಿನ ನೀರಿನಂತೆ ಇರುವುದನ್ನು ಅಭ್ಯಾಸ ಮಾಡಿಕೊಳ್ಳಬೇಕಾಗುತ್ತದೆ. ಎರಡನೆಯ ಪ್ರಸಂಗದಲ್ಲಿ, ಒಟ್ಟು ಕುಟುಂಬದ ಹಿರಿಯರು ಇಳಿವಯಸ್ಸಿನ ಸಂದರ್ಭದಲ್ಲಿ ಕೌಟುಂಬಿಕ ಮೋಹಗಳನ್ನು ಕಡಿಮೆ ಮಾಡಿಕೊಳ್ಳಬೇಕಾದ ಅಗತ್ಯ ತೋರಿಸುತ್ತದೆ. ವಯೋಸಹಜ ಭಾವನೆಗೂ, ವಾಸ್ತವತೆಗೂ ಇರುವ ಅಂತರವನ್ನು ಆ ವೃದ್ಧೆಯ ಮಾತುಗಳೇ ಬಿಂಬಿಸುತ್ತವೆ. ಇನ್ನು ಮೂರನೆಯ ಪ್ರಸಂಗದಲ್ಲಿ ವಯಸ್ಸಾದಂತೆ ಪಕ್ವಗೊಳ್ಳಬೇಕಾಗಿದ್ದ ಮನಸ್ಸು ಲೋಭದ ಕಾರಣದಿಂದಾಗಿ ಕುಬ್ಜವಾಗಿಯೇ ಉಳಿದಿರುವುದರ ಸಂಕೇತ.
     ಮಾನವನ ಆರು ವೈರಿಗಳೆಂದೇ ಕರೆಯಲ್ಪಡುವ ಕಾಮ, ಕ್ರೋಧ, ಮದ, ಮತ್ಸರ, ಲೋಭ ಮತ್ತು ಮೋಹಗಳ ಹಿತವಾದ ಒಡನಾಟವಿದ್ದರೆ ಬದುಕು ಹಿತವಾಗಿರುತ್ತದೆ. ಯಾವುದಾದರೂ ಅತಿಯಾದರೆ ಹಾನಿ ಕಟ್ಟಿಟ್ಟ ಬುತ್ತಿ. ಇದಕ್ಕೆ ನಿದರ್ಶನವಾಗಿ ಹೇರಳವಾದ ಉದಾಹರಣೆಗಳು ಸಿಗುತ್ತವೆ ಮತ್ತು ಅವು ಪ್ರತ್ಯಕ್ಷವಾಗಿ ನಾವೇ ನಮ್ಮ ಜೀವನದಲ್ಲಿ ಕಾಣಬಹುದಾದಂತಹ ಸಂಗತಿಗಳಾಗಿವೆ. ನಮ್ಮ ಅನುಭವಗಳೇ ಗುರುವಾಗಿ ನಮ್ಮನ್ನು ತಿದ್ದಿದರೆ, ಅಂಟಿಯೂ ಅಂಟದಂತಿರುವ ಸ್ವಭಾವ ಬೆಳೆಸಿಕೊಂಡರೆ ನಾವು ಸಾಧಕರಾಗುತ್ತೇವೆ. ಇಂತಹ ಸಾಧನೆ ಸರಳವಲ್ಲ, ಆದರೆ ಅಸಾಧ್ಯವೂ ಅಲ್ಲ.
-ಕ.ವೆಂ.ನಾಗರಾಜ್.


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ