"ಏಯ್ ಮುಟ್ಠಾಳ, ಅವನ ಜೊತೆ ಯಾಕೆ ಮಾತಾಡ್ತಿದ್ದೆ? ಅವನಮ್ಮಂಗೂ ನಂಗೂ ಆಗಲ್ಲ ಅಂತ ನಿಂಗೆ ಗೊತ್ತಿಲ್ವಾ?" - ಒಬ್ಬ ತಾಯಿ ತನ್ನ ಮಗನನ್ನು ಗದರಿಸುತ್ತಿದ್ದರೆ, ಆ ಮಗು ಉತ್ತರಿಸಿತ್ತು, "ಅಮ್ಮಾ, ಅವನಮ್ಮ ನಿಂಗೆ ಎನೆಮಿ ಆದರೆ ಅವನ್ಯಾಕೆ ನಂಗೆ ಎನೆಮಿ ಆಗ್ತಾನಮ್ಮ? ಅವನು ನನ್ನ ಬೆಸ್ಟ್ ಫ್ರೆಂಡ್". ವಾಕಿಂಗಿಗೆ ಹೋಗುವ ಸಂದರ್ಭದಲ್ಲಿ ದಾರಿಯಲ್ಲಿ ಕೇಳಿ ಬಂದ ತಾಯಿ-ಮಗನ ಈ ಸಂಭಾಷಣೆ ನನಗೆ ಸಂಬಂಧಗಳ ಕುರಿತು, ಮನುಷ್ಯ ಸ್ವಭಾವದ ಕುರಿತು ಯೋಚಿಸುವಂತೆ ಮಾಡಿತ್ತು. ನಾವು ನಮ್ಮ ಸಂಬಂಧಗಳನ್ನು ಹೇಗೆ ಉಳಿಸಿಕೊಳ್ಳುತ್ತೇವೆ, ಬೆಳೆಸುತ್ತೇವೆ ಎಂಬುದರ ಮೇಲೆ ನಮ್ಮ ಮತ್ತು ನಮ್ಮ ಸಂಬಂಧಿಗಳ ಸಂತೋಷ ಅವಲಂಬಿಸಿರುತ್ತದೆ. ಸಂಬಂಧ ಉಳಿಸಿಕೊಂಡರೆ ಸಂತೋಷ, ಕಳೆದುಕೊಂಡರೆ ದುಃಖ ಸಹಜವಾಗಿ ಹಿಂಬಾಲಿಸುವ ಸಂಗತಿಗಳಾಗಿವೆ.
ಅವರು ತಾವು ತಾವಾಗಿರುವುದಾದರೆ, ಒಬ್ಬರನ್ನು ಕಂಡು ಮತ್ತೊಬ್ಬರು ನಗದೆ ಜೊತೆಗೇ ನಕ್ಕರೆ, ಒಬ್ಬರಿಗಾಗಿ ಮತ್ತೊಬ್ಬರು ಅತ್ತರೆ, ಮತ್ತೊಬ್ಬರು ತಮ್ಮ ಕಾರಣದಿಂದ ಅಳುವಂತೆ ಆಗದಿದ್ದರೆ ಇಬ್ಬರ ನಡುವಿನ ಸಂಬಂಧಗಳು ಉತ್ತಮ ಪ್ರೀತಿಯ ಸಂಬಂಧಗಳಾಗಿರುತ್ತವೆ ಎನ್ನಬಹುದು. ಸಂಬಂಧಗಳು ಉತ್ತಮವಾಗಿರಬೇಕಾದರೆ ಒಬ್ಬರ ಸ್ವಾತಂತ್ರ್ಯವನ್ನು ಮತ್ತೊಬ್ಬರು ಗೌರವಿಸಬೇಕು. ಪ್ರೀತಿಸುತ್ತೇನೆ ಎಂಬ ಕಾರಣಕ್ಕಾಗಿ ಒಬ್ಬರು ತಾವು ಹೇಳಿದಂತೆ ಮತ್ತೊಬ್ಬರು ಕೇಳಬೇಕು ಎಂದು ಬಯಸುವುದು ಸಂಬಂಧಗಳಿಗೆ ಹಾನಿ ತರುತ್ತದೆ. ಇಂತಹ ಹಕ್ಕು ಸಾಧಿಸುವ (ಪೊಸೆಸಿವ್) ಗುಣ ಹೊಂದಿರುವವರು ತಾವು ಇಷ್ಟಪಡುವ ಜನರು ಅಥವ ವಸ್ತುಗಳನ್ನು ತಾನು ಪ್ರೀತಿಸುವವರೂ ಇಷ್ಟಪಡಬೇಕು, ತಾನು ದ್ವೇಷಿಸುವವರನ್ನು ಅವರೂ ದ್ವೇಷಿಸಬೇಕು ಎಂದು ಸಾಧಿಸುವುದನ್ನು ಕಾಣುತ್ತಿರುತ್ತೇವೆ. ಇಂತಹ ಅತಿ ಪ್ರೀತಿಯ ಕಾರಣದ ದ್ವೇಷವೂ ಸಂಬಂಧಗಳನ್ನು ಕೆಡಿಸುವುದರಲ್ಲಿ, ಸಂತೋಷ ಹಾಳು ಮಾಡುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ.
ಸಂಬಂಧಗಳ ತಾಳಿಕೆಗೆ ಇರುವ ದೊಡ್ಡ ಸಮಸ್ಯೆ ಎಂದರೆ ಏನನ್ನಾದರೂ ಪ್ರತಿಫಲವಾಗಿ ಬಯಸುವ ಕಾರಣದಿಂದ ಸಂಬಂಧಗಳನ್ನು ಹೊಂದುವುದು; ಬಯಸಿದುದು ಸಿಗದಿದ್ದರೆ ಅಥವ ಅದರಲ್ಲಿ ಕೊರತೆಯಾದರೆ ಸಂಬಂಧಕ್ಕೆ ಧಕ್ಕೆ ತಗಲಬಹುದು. ವಾಸ್ತವವಾಗಿ ಸಂಬಂಧ ಉಳಿಯಬೇಕೆಂದರೆ ಬಯಸುವುದಕ್ಕಿಂತ ಕೊಡುವುದಕ್ಕೆ ಆದ್ಯತೆ ಕೊಡಬೇಕು. ನಿರೀಕ್ಷಿಸುವುದಕ್ಕಿಂತ ಕೊಡುವುದರಲ್ಲಿ ಹೆಚ್ಚು ಸಂತೋಷವಿರುತ್ತದೆ. ನಾವು ಯಾವುದೋ ಒಂದು ಕೆಲಸವನ್ನು ಮಾಡಬೇಕೆಂದುಕೊಂಡಿದ್ದು, ಒಬ್ಬರೇ ಮಾಡಲಾಗದಿದ್ದಾಗ ಅದನ್ನು ಪೂರ್ಣಗೊಳಿಸಲು ಇನ್ನೊಬ್ಬರ ಸಹಾಯ ಪಡೆಯುತ್ತೇವೆ, ಬಯಸುತ್ತೇವೆ. ಆಗಲೂ ಆ ಕೆಲಸ ಪೂರ್ಣವಾಗದೆ ಉಳಿದರೆ ಅದಕ್ಕೆ ಅವರನ್ನು ದೂಷಿಸುತ್ತೇವೆ. ಬೇರೆ ಮತ್ತೊಬ್ಬರ ಸಹಾಯ ಪಡೆದೆವೆಂದು ಇಟ್ಟುಕೊಳ್ಳೋಣ. ಆಗಲೂ ನಮ್ಮ ಇಷ್ಟದಂತೆ ಪೂರ್ಣವಾಗಿ ಕೆಲಸ ಆಗದಿದ್ದರೆ? ಅವರನ್ನೂ ದೂಷಿಸುತ್ತೇವೆ. ಆ ಕೆಲಸ ಪರಿಪೂರ್ಣವಾಗಿ ಆಗದಿರುವುದಕ್ಕೆ ಮೂಲಕಾರಣ ನಾವೇ ಎಂಬ ಅರಿವು ಮೂಡುವಾಗ ವಿಳಂಬವಾಗಿಬಿಟ್ಟಿರುತ್ತದೆ. ಸಹಾಯಕರು, ಜೊತೆಗಾರರು ಯಾರೇ ಅಗಲಿ, ನಮ್ಮ ಕೆಲಸಕ್ಕೆ ಒತ್ತಾಸೆಯಾಗಬಹುದು, ಸಹಕರಿಸಬಹುದು. ಆದರೆ ಅದರ ಹೊಣೆ ನಮ್ಮದೇ ಎಂಬುದನ್ನು ಅರಿತಾಗ ಜೊತೆಗಾರರನ್ನು ದೂರುವ ಪ್ರವೃತ್ತಿ ದೂರವಾಗುತ್ತದೆ, ಸಂಬಂಧ ಉಳಿಯುತ್ತದೆ. ಎಲ್ಲಾ ರೀತಿಯ ಸಂಬಂಧಗಳು ಬೊಗಸೆಯಲ್ಲಿರುವ ಮರಳಿನಂತೆ! ತೆರೆದ ಕೈಗಳಲ್ಲಿ ಮರಳು ಇರುವಾಗ ಅದು ಹಾಗೆಯೇ ಇರುತ್ತದೆ. ಕೈಗಳನ್ನು ಮಡಿಸಿದಾಗ ಮತ್ತು ಮುಷ್ಟಿ ಬಿಗಿ ಹಿಡಿದಾಗ ಸ್ವಲ್ಪವೇ ಮರಳು ಉಳಿಯುವುದಾದರೂ, ಹೆಚ್ಚು ಭಾಗ ಚೆಲ್ಲಿ ಹೋಗುತ್ತದೆ. ಸಂಬಂಧಗಳೂ ಹಾಗೆಯೇ! ಹಗುರವಾಗಿದ್ದಾಗ, ಇನ್ನೊಬ್ಬರ ಸ್ವಾತಂತ್ರ್ಯ, ಅಭಿಪ್ರಾಯಗಳನ್ನು ಗೌರವಿಸಿದಾಗ ಸಂಬಂಧ ಬಾಳುತ್ತದೆ. ನಮ್ಮ ವಿಚಾರವನ್ನು ಅವರ ಮೇಲೆ ಹೇರಹೊರಟಾಗ, ಹಕ್ಕು ಸಾಧಿಸಲು ಪ್ರಯತ್ನಿಸಿದಾಗ ಸಂಬಂಧಗಳು ನಶಿಸುತ್ತವೆ ಮತ್ತು ಹೆಚ್ಚಿನ ಸಂದರ್ಭಗಳಲ್ಲಿ ಹಾಳಾಗುತ್ತವೆ.
ಸೀತಾಮಾತೆಯನ್ನು ಹುಡುಕಿಹೊರಟ ಹನುಮಂತ ಆಕೆಯನ್ನು ಅಶೋಕವನದಲ್ಲಿ ಗುರುತಿಸಿ ಶ್ರೀರಾಮ ಕೊಟ್ಟ ಚೂಡಾಮಣಿಯನ್ನು ಆಕೆಗೆ ತಲುಪಿಸಿ ಬರುತ್ತಾನೆ. ನಂತರದಲ್ಲಿ ಶ್ರೀರಾಮನಿಗೆ ಅಲ್ಲಿನ ವಿಚಾರಗಳು, ಸೀತಾಮಾತೆಯ ಶೋಕ ಕುರಿತು ತಿಳಿಸುತ್ತಾನೆ. ಶ್ರೀ ರಾಮ ಹನುಮನನ್ನು ಆಲಂಗಿಸಿಕೊಂಡು ಹೇಳುತ್ತಾನೆ, "ಪ್ರಿಯ ಹನುಮಂತ, ನೀನು ನನಗೆ ಮಾಡಿದ ಈ ಉಪಕಾರವನ್ನು ನಾನು ಸದಾ ನೆನಪಿನಲ್ಲಿ ಇಟ್ಟುಕೊಳ್ಳುತ್ತೇನೆ. ನೀನು ಮಾತ್ರ ಇದನ್ನು ಮರೆತುಬಿಡು. ಎಂದೂ ಈ ಉಪಕಾರಕ್ಕೆ ಪ್ರತ್ಯುಪಕಾರ ಬಯಸಬೇಡ. ನೀನು ಮಾಡಿದ ಉಪಕಾರ ಇಲ್ಲೇ ಜೀರ್ಣವಾಗಲಿ. ಏಕೆಂದರೆ, ಪ್ರತ್ಯುಪಕಾರವನ್ನು ಬಯಸುವ ವ್ಯಕ್ತಿ ತನಗರಿವಿಲ್ಲದಂತೆ ವಿಪತ್ತನ್ನೂ ಬಯಸುತ್ತಿರುತ್ತಾನೆ." ಭಗವದ್ಗೀತೆಯಲ್ಲಿ ಶ್ರೀ ಕೃಷ್ಣ ಅರ್ಜುನನಿಗೆ ಹೇಳುವುದೂ ಇದನ್ನೇ, "ನಾವು ಉಪಕಾರವನ್ನೋ ಅಥವಾ ದಾನವನ್ನೋ ಮಾಡುವುದಾದರೆ, ಯಾರು ಅದಕ್ಕೆ ಪ್ರತಿಯಾಗಿ ಪ್ರತ್ಯುಪಕಾರ ಮಾಡಲು ಸಾಧ್ಯವಿಲ್ಲವೋ ಅಂತಹವರಿಗೆ ಮಾತ್ರ ಮಾಡಬೇಕು." ಇಂತಹ ಮನೋಭಾವ ಸಾಧ್ಯವಿರುವವರು ಮಹಾನುಭಾವರೇ ಸರಿ.
ಒಂದು ವ್ಯಾವಹಾರಿಕವಾದ ಉದಾಹರಣೆಯನ್ನು ತೆಗೆದುಕೊಳ್ಳೋಣ. ನಿಮಗೆ ಏನೋ ಒಂದು ಕೆಲಸ ನನ್ನಿಂದ ಆಗಬೇಕಿರುತ್ತದೆ. ನನ್ನನ್ನು ನೀವು ಹೊಗಳುತ್ತೀರಿ, ಉಬ್ಬಿಸುತ್ತೀರಿ ಎಂದಿಟ್ಟುಕೊಳ್ಳಿ. ಕೆಲಸ ಮಾಡಿಸಿಕೊಳ್ಳುವ ಸಲುವಾಗಿ ನನ್ನನ್ನು ಹೊಗಳುತ್ತಿದ್ದೀರೆಂದು ನಾನು ನಿಮ್ಮನ್ನು ನಂಬುವುದಿಲ್ಲ. ನನ್ನ ಕೆಲಸ ನೀನು ಮಾಡುವುದಿಲ್ಲ, ನೀನು ಸರಿಯಿಲ್ಲ ಎಂದು ನೀವು ದೂಷಿಸಿದರೆ ನಾನು ನಿಮ್ಮನ್ನು ಇಷ್ಟಪಡುವುದಿಲ್ಲ ಮತ್ತು ನಿಮ್ಮ ಕೆಲಸ ಮಾಡಿಕೊಡುವುದೂ ಇಲ್ಲ. ಕೆಲಸ ಹೇಗೂ ಮಾಡಿಕೊಡುವುದಿಲ್ಲವೆಂದು ನೀವು ನನ್ನನ್ನು ಅಲಕ್ಷಿಸಿದರೆ ನಿಮ್ಮನ್ನು ನಾನು ಕ್ಷಮಿಸುವುದಿಲ್ಲ. ಆದರೆ, ನೀವು ನನ್ನನ್ನು ಇಷ್ಟಪಡುವವರಾದರೆ, ನನ್ನನ್ನು ಪ್ರೀತಿಸುವುವರಾದರೆ ನಿಮ್ಮನ್ನು ನಾನೂ ಇಷ್ಟಪಡಬೇಕಾಗುತ್ತದೆ ಮತ್ತು ಕಷ್ಟವಾದರೂ ನಿಮ್ಮ ಕೆಲಸವನ್ನು ನಾನು ಮಾಡಿಕೊಡಬೇಕಾಗುತ್ತದೆ. ವ್ಯತ್ಯಾಸ ತಿಳಿಯಿತಲ್ಲವೇ? ಸಂಬಂಧಗಳನ್ನು ಬೆಸೆಯುವ, ಇಷ್ಟಾರ್ಥಗಳನ್ನು ಪೂರೈಸುವ ಸಂಗತಿ ಪ್ರೀತಿಯೇ ಹೊರತು ಮತ್ತಾವುದೂ ಅಲ್ಲ.
ಸಾಮಾನ್ಯವಾಗಿ ಕಂಡುಬರುವ ಕಹಿಸತ್ಯ ಒಂದಿದೆ. ಅದೆಂದರೆ, ಯಾರು ಪ್ರೀತಿಸುತ್ತಾರೋ, ಯಾರು ಆತ್ಮೀಯರಾಗಿರುತ್ತಾರೋ ಅವರೇ ಹೆಚ್ಚು ನೋವು ಅನುಭವಿಸುವವರು! ಗೊತ್ತಿಲ್ಲದವರನ್ನು ಹೊಗಳುತ್ತಾರೆ, ಅವರನ್ನು ಮೆಚ್ಚಿಸಲು ಪ್ರಯತ್ನಿಸುತ್ತಾರೆ. ಆದರೆ ಪ್ರೀತಿಪಾತ್ರರಿಗೇ ವಿವೇಕರಹಿತರಾಗಿ ಪೆಟ್ಟು ಕೊಡುತ್ತಾರೆ. ಸಂಬಂಧಗಳು ಉಳಿಯಬೇಕೆಂದರೆ ಕೆಲವು ಸರಳ ಸೂತ್ರಗಳನ್ನು ಅಳವಡಿಸಿಕೊಳ್ಳಬೇಕು. ನಮ್ಮನ್ನು ಇತರರು ಇಷ್ಟಪಡಬೇಕೆಂದರೆ ನಾವು ಅವರನ್ನು ಇಷ್ಟಪಡಬೇಕು. ಕ್ಷಮಿಸುವ ಗುಣವಿರಬೇಕು. ಒಳ್ಳೆಯವರೆನಿಸಿಕೊಳ್ಳಬೇಕೆಂದರೆ ಇತರರ ಒಳ್ಳೆಯತನವನ್ನು ಗುರುತಿಸುವ ಕೆಲಸ ಮಾಡಬೇಕು. ಒಳ್ಳೆಯ ಮಾತುಗಳನ್ನು ಕೇಳಬೇಕೆಂದರೆ ನಾವು ಒಳ್ಳೆಯ ಮಾತುಗಳನ್ನಾಡಬೇಕು. ಒಳ್ಳೆಯ ಮಾತುಗಳನ್ನು ಆಡುವುದು ಅಭ್ಯಾಸವಾಗಬೇಕು. ಕೆಟ್ಟ ಮಾತುಗಳನ್ನು ಆಡದಿರುವ ಸುಲಭ ಉಪಾಯವೆಂದರೆ ಮೌನವಾಗಿರುವುದು! ಮೌನವಾಗಿರುವುದಕ್ಕೆ ಖರ್ಚಿಲ್ಲ. ಬೇರೆಯವರು ನಮಗೆ ಏನು ಮಾಡಬಾರದೆಂದು ಬಯಸುತ್ತೇವೆಯೋ ಅದನ್ನು ಬೇರೆಯವರಿಗೆ ಮಾಡದಿರುವುದು! ಒಟ್ಟಿನಲ್ಲಿ ಹೇಳಬೇಕೆಂದರೆ, ಸಂಬಂಧಗಳನ್ನು ಸೃಷ್ಟಿಸುವ ಬ್ರಹ್ಮರು, ಉಳಿಸಿಕೊಳ್ಳುವ ವಿಷ್ಣುಗಳು ಮತ್ತು ಲಯಗೊಳಿಸುವ ಮಹೇಶ್ವರರು ನಾವೇನೇ! ನಾವೇ ಬ್ರಹ್ಮ, ವಿಷ್ಣು, ಮಹೇಶ್ವರರು!!
-ಕ.ವೆಂ. ನಾಗರಾಜ್.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ