ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಗುರುವಾರ, ನವೆಂಬರ್ 9, 2017

ಪರಿಹಾರವಿಲ್ಲದ ಸಮಸ್ಯೆಗಳಿಲ್ಲ


     ಜೀವನದಲ್ಲಿ ಹಲವಾರು ಸವಾಲುಗಳು ಎದುರಾಗುತ್ತವೆ, ಕೆಲವು ಸಲ ಸೋಲುತ್ತೇವೆ, ಕೆಲವೊಮ್ಮೆ ಗೆಲ್ಲುತ್ತೇವೆ, ಕೆಲವೊಮ್ಮೆ ಹತಾಶರಾಗುತ್ತೇವೆ, ಕೈಚೆಲ್ಲುತ್ತೇವೆ, ಕೆಲವೊಮ್ಮೆ ಅತಿರೇಕದ ನಿರ್ಧಾರಗಳನ್ನು ತೆಗೆದುಕೊಳ್ಳುವವರೆಗೂ ಮನಸ್ಸು ಚಂಚಲವಾಗುತ್ತದೆ. ಆದರೆ, ಸವಾಲುಗಳನ್ನು ಎದುರಿಸುವ ಮನಸ್ಥಿತಿಯನ್ನು ಬೆಳೆಸಿಕೊಳ್ಳುವುದು ಉತ್ತಮವಾದ ರೀತಿ. ಸವಾಲುಗಳನ್ನು ಎದುರಿಸುವುದೇ ಜೀವನ, ಸವಾಲುಗಳಿಲ್ಲದ ಜೀವನ ಜೀವನವೇ ಅಲ್ಲ. ಸವಾಲುಗಳನ್ನು ಎದುರಿಸುವ ಮನಸ್ಥಿತಿಯನ್ನು ಗಳಿಸಿಕೊಳ್ಳುವುದು ಸುಲಭವಲ್ಲವಾದರೂ ಅಸಾಧ್ಯವೇನಲ್ಲ. ಇದಕ್ಕೆ ಅನುಕೂಲವಾಗುವ ಕೆಲವು ಅಂಶಗಳನ್ನು ಪಟ್ಟಿ ಮಾಡುತ್ತಾ ಹೋದರೆ ನಾವು ಅನುಸರಿಸಬಹುದಾದ ಮಾರ್ಗ ನಮಗೇ ತಿಳಿಯುತ್ತಾ ಹೋಗಬಹುದು.
೧. ಸವಾಲುಗಳಿಂದ ದೂರ ಹೋಗದಿರುವುದು: 
     ಯಾವುದಾದರೂ ಸಮಸ್ಯೆ ಎದುರಾದರೆ ಅದನ್ನು ಎದುರಿಸದೆ ದೂರವಿದ್ದಷ್ಟೂ ಸಮಸ್ಯೆ ದೊಡ್ಡದಾಗುತ್ತಾ ಹೋಗುತ್ತದೆ. ಉದಾಹರಣೆಗೆ, ಕಾನೂನು-ಸುವ್ಯವಸ್ಥೆ ಸಮಸ್ಯೆ, ಶಾಂತಿಭಂಗದ ಸಮಸ್ಯೆಗಳು ಉದ್ಭವಿಸಿದಾಗ ಅಧಿಕಾರಿಗಳು ಕೊಠಡಿಯಲ್ಲಿ ಕುಳಿತು ಸಂಬಂಧಿಸಿದವರಿಗೆ ದೂರವಾಣಿ ಮೂಲಕ ಸಲಹೆ, ಸೂಚನೆಗಳನ್ನು ಕೊಡುವುದರ ಬದಲು, ಅವರೇ ಸ್ವತಃ ಸ್ಥಳಕ್ಕೆ ಹೋಗಿ ಪರಿಶೀಲಿಸುವುದರಿಂದ ಕಾರ್ಯನಿರತ ಸಿಬ್ಬಂದಿಗೆ ಹೆಚ್ಚು ನೈತಿಕ ಬೆಂಬಲ ಸಿಗುತ್ತದೆ ಮತ್ತು ಪರಿಸ್ಥಿತಿ ಶೀಘ್ರ ನಿಯಂತ್ರಣಕ್ಕೆ ಬರುತ್ತದೆ. ಅರ್ಧ ಸಮಸ್ಯೆ ಸ್ಥಳದಲ್ಲೇ ಬಗೆ ಹರಿಯುತ್ತದೆ. ಇದೇ ನೀತಿ ಜೀವನದಲ್ಲಿ ಎದುರಾಗುವ ಸಮಸ್ಯೆಗಳಿಗೂ ಅನ್ವಯವಾಗುತ್ತದೆ. ಹೆದರಿದರೆ ಹೆದರಿಸುವವರು ಮತ್ತಷ್ಟು ಹೆದರಿಸುತ್ತಾರೆ. ತಿರುಗಿ ನಿಂತರೆ? ಸಮಸ್ಯೆಯ ಪ್ರಮಾಣ ಖಂಡಿತ ಕುಗ್ಗುತ್ತದೆ. ಒಂದು ನಾಯಿಯೋ, ಕೋತಿಯೋ ರಸ್ತೆಯಲ್ಲಿ ಹೋಗುತ್ತಿರುವಾಗ ಅಟ್ಟಿಸಿಕೊಂಡು ಬಂದಿತೆಂದು ಓಡಿದರೆ ಅವು ಮತ್ತಷ್ಟು ಆರ್ಭಟ ಮಾಡುತ್ತಾ ಬೆನ್ನು ಹತ್ತುತ್ತವೆ. ತಿರುಗಿ ನಿಂತು ಕೆಳಗೆ ಬಗ್ಗಿ ಕಲ್ಲು ಆರಿಸಿಕೊಂಡರೆ ಅಥವ ಆರಿಸಿಕೊಂಡಂತೆ ಮಾಡಿದರೆ ಗಕ್ಕನೆ ನಿಂತು ಬಾಲ ಮುದುರಿ ಹಿಂತಿರುಗುತ್ತವೆ.
೨. ಸಮಸ್ಯೆಯ ಮೂಲ ತಿಳಿಯುವುದು: 
     ಪ್ರತಿಯೊಂದು ಸಮಸ್ಯೆಗೂ ಕಾರಣಗಳು ಇರುತ್ತವೆ. ಸಮಸ್ಯೆಗೆ ಪರಿಹಾರ ಹುಡುಕುವುದಕ್ಕಿಂತ ಸಮಸ್ಯೆಗೆ ಮೂಲ ಕಾರಣ ತಿಳಿದು ಅದನ್ನು ನಿವಾರಿಸಿಕೊಳ್ಳುವುದು ಉತ್ತಮ. ಇಬ್ಬರ ನಡುವೆ ಯಾವುದೋ ಕಾರಣಕ್ಕೆ ಮನಸ್ತಾಪ ಉಂಟಾದರೆ, ತೇಪೆ ಹಾಕುವುದಕ್ಕಿಂತ ಅದಕ್ಕೆ ಕಾರಣವಾದ ಅಂಶ -ಅದು ಮತ್ಸರವೋ, ಮೇಲರಿಮೆಯೋ ಅಥವ ಹಣಕಾಸಿನ ವ್ಯವಹಾರವೋ ಮತ್ತೊಂದೋ- ಗಮನಿಸದಿದ್ದರೆ ಕಂಟಕ ಬರದೇ ಇರುವುದಿಲ್ಲ.
೩. ಧನಾತ್ಮಕ ಮನೋಭಾವ ಹೊಂದುವುದು: 
     ನಾವು ಸಾಮಾನ್ಯವಾಗಿ ಋಣಾತ್ಮಕ ನಿಲುವಿನಿಂದ ನರಳುತ್ತೇವೆ. ನಮಗೆ ಆಗದವರಿರಬಹುದು, ಪರಿಚಯವಿರದವರು ಇರಬಹುದು ಅಂತಹವರ ಬಗ್ಗೆ ನಮಗೆ ಸಕಾರಾತ್ಮಕ ನಿಲುವು ಹೊಂದದಿರುವುದು ಸಮಸ್ಯೆಗಳಿಗೆ ಕಾರಣವಾಗುತ್ತದೆ. ಪ್ರಪಂಚವನ್ನು, ಸುತ್ತಮುತ್ತಲಿನವರನ್ನು ಒಳ್ಳೆಯ ಭಾವನೆಯಿಂದ ನೋಡುವುದನ್ನು, ಒಳ್ಳೆಯ ಸಂಗತಿಗಳನ್ನು ಗುರುತಿಸುವುದನ್ನು ಅಭ್ಯಾಸ ಮಾಡಿಕೊಂಡರೆ ಸಮಸ್ಯೆಯ ಮೂಲವೇ ನಿವಾರಣೆಯಾಗುತ್ತದೆ.
೪. ಹಿಂದಿನ ಯಶಸ್ಸಿನ ಸಂಗತಿಗಳನ್ನು ನೆನಪಿಸಿಕೊಳ್ಳುವುದು: 
     ಹಿಂದಿನ ಕೆಲವು ಘಟನೆಗಳ ಸಂದರ್ಭದಲ್ಲಿ ನಂಬಿಕೆ ಕಳೆದುಕೊಂಡು ಹತಾಶರಾಗಿದ್ದ ಸಂದರ್ಭದಲ್ಲೂ ಅನಿವಾರ್ಯವಾಗಿ ಅದನ್ನು ಎದುರಿಸ ಬೇಕಾಗಿ ಬಂದು ಯಶಸ್ವಿಯಾಗಿದ್ದುದನ್ನು ನೆನಪಿಸಿಕೊಂಡರೆ ಭರವಸೆ ಮೂಡುತ್ತದೆ. ನಿಮ್ಮ ಕೈಗಳು ತಂತಾನೇ ಮುಷ್ಟಿ ಬಿಗಿ ಹಿಡಿಯುತ್ತವೆ ಮತ್ತು ನಿಮ್ಮ ಮನಸ್ಸು ಎದುರಾದ ಸಮಸ್ಯೆಯನ್ನು ಎದುರಿಸಲು ಸಜ್ಜಾಗುತ್ತದೆ.
೫. ಇನ್ನೊಬ್ಬರ ಸ್ಥಾನದಲ್ಲಿ ನಿಲ್ಲುವುದು: 
     ನಮಗೆ ಬಂದಂತಹ ಸಮಸ್ಯೆ ನಾವು ಮೆಚ್ಚುವಂತಹ ವ್ಯಕ್ತಿಗೆ ಬಂದಿದ್ದರೆ ಆತ ಹೇಗೆ ಪ್ರತಿಕ್ರಿಯಿಸುತ್ತಿದ್ದ, ಹೇಗೆ ಎದುರಿಸುತ್ತಿದ್ದ ಎಂಬುದನ್ನು ಕಲ್ಪಿಸಿಕೊಂಡರೆ ನಮಗೆ ಅದೇ ರೀತಿ ಪ್ರತಿಕ್ರಿಯಿಸಲು ಸಾಧ್ಯವಾಗುತ್ತದೆ. ಇಂತಹುದೇ ಸಮಸ್ಯೆ ಇನ್ನು ಬೇರೆ ಯಾರಿಗಾದರೂ ಬಂದಿದ್ದು, ಅವರು ಅದನ್ನು ಹೇಗೆ ನಿಭಯಿಸಿದರು ಎಂಬುದನ್ನು ತಿಳಿದರೂ ನಮಗೆ ಹೊರಬರುವ ದಾರಿ ಕಾಣಿಸುತ್ತದೆ.
೬. ಎದೆ ಎತ್ತಿ ನಿಲ್ಲುವುದು: 
     ಸಮಸ್ಯೆ ಬಂದಿತೆಂದು ಕುಗ್ಗಿದರೆ ಮಾನಸಿಕವಾಗಿಯೂ ನಾವು ಬಲ ಕಳೆದುಕೊಳ್ಳುತ್ತೇವೆ. ಏನೂ ನಡೆದೇ ಇಲ್ಲವೇನೋ ಎಂಬಂತೆ ಅಥವ ಸಮಸ್ಯೆಯಿಂದ ನಾವು ಹೆದರಿಲ್ಲ ಎಂಬ ಭಾವನೆಯನ್ನು ಹೊರಗೆ ತೋರಿಸಿಕೊಂಡು ಎದೆ ಎತ್ತಿ ನಡೆದರೆ ನಮ್ಮ ಮನಸ್ಸೂ ಅದರಿಂದ ಮತ್ತಷ್ಟು ಬಲ ಗಳಿಸಿಕೊಳ್ಳುತ್ತದೆ. ಆತ್ಮವಿಶ್ವಾಸ ಹೆಚ್ಚುತ್ತದೆ, ಸಮಸ್ಯೆ ಎದುರಿಸುವುದು ಕಷ್ಟವೆನಿಸುವುದಿಲ್ಲ.
೭. ಆತ್ಮವಿಶ್ವಾಸದ ಭಾಷೆ ಬಳಸುವುದು: 
     ಅಯ್ಯೋ, ನನ್ನ ಆರೋಗ್ಯವೇ ಸರಿಯಿಲ್ಲ. ಏನು ಮಾಡಲೂ ಆಗುವುದಿಲ್ಲ ಎಂಬರ್ಥದ ಮಾತನಾಡುವವರನ್ನು ಗಮನಿಸಿದರೆ ಅವರು ನಿಶ್ಶಕ್ತಿಯಿಂದ ನಿಧಾನವಾಗಿ ನಡೆದಾಡುತ್ತಾರೆ, ಯಾವ ಕೆಲಸದಲ್ಲೂ ಉತ್ಸಾಹಿಗಳಾಗಿರುವುದಿಲ್ಲ. ಅದೇ ವ್ಯಕ್ತಿಯನ್ನು ಇನ್ನೊಂದು ಸಂದರ್ಭದಲ್ಲಿ, ನಿಮಗೆ ವಯಸ್ಸಾಗಿರುವುದೇ ಗೊತ್ತಾಗುವುದಿಲ್ಲ. ನಿಮ್ಮ ವಯಸ್ಸಿನವರು ಬೇರೆಯವರು ಮೂಲೆ ಹಿಡಿದಿರುತ್ತಾರೆ. ನೀವು ಚಟುವಟಿಕೆಯಿಂದ ಇದ್ದೀರಿ ಎಂದರೆ ಅವರಿಗೆ ಖುಷಿಯಾಗುತ್ತದೆ, ಎದೆ ಎತ್ತರಿಸುತ್ತಾರೆ, ಚಟುವಟಿಕೆಯಿಂದ ಹೆಜ್ಜೆ ಹಾಕುತ್ತಾರೆ. ಸಮಸ್ಯೆಯ ವಿಷಯವೂ ಹಾಗೆಯೇ. ನನ್ನ ಕೈಲಿ ಆಗದು ಎಂಬರ್ಥದಲ್ಲಿ ನಿರುತ್ಸಾಹದ ಮಾತುಗಳನ್ನಾಡದೆ, ಎಷ್ಟೋ ಸಮಸ್ಯೆಗಳಿದ್ದವು, ಬಗೆಹರಿದಿಲ್ಲವೇ, ಇದೇನು ಮಹಾ ಎಂಬ ರೀತಿಯಲ್ಲಿ ಮಾತುಗಳಿದ್ದರೆ ಸಮಸ್ಯೆಯೇ ಹೆದರದಿದ್ದೀತೆ? ಸಮಸ್ಯೆ ಬಂದಾಗ, ಇದರಿಂದ ಪಾರಾಗುವುದು ಹೇಗಪ್ಪಾ? ಎಂದು ಯೋಚಿಸದೆ, ನನ್ನಲ್ಲಿ ಏನು ತಪ್ಪಾಯಿತು? ಎಂಬ ಪ್ರಶ್ನೆ ಹಾಕಿಕೊಂಡರೆ ಉತ್ತರ ಹೊಳೆಯುತ್ತದೆ.
೮. ಕಾರ್ಯಯೋಜನೆ ಹಾಕಿಕೊಳ್ಳುವುದು: 
     ಯಾವುದಾದರೂ ವಿಷಯದ ಕುರಿತು ಮಾತನಾಡಿದರೆ, ಅದು ಕನಸು! ಅದನ್ನು ಸಾಕಾರಗೊಳಿಸಲು ನಿರ್ಧರಿಸಿದರೆ, ಅದು ಸಾಧ್ಯ! ಅದನ್ನು ಕಾರ್ಯಗತಗೊಳಿಸಲು ಪ್ರಾರಂಭಿಸಿದರೆ, ಅದು ವಾಸ್ತವ! ಸಮಸ್ಯೆ ಬಂದಾಗ ಅದನ್ನು ಎದುರಿಸುವ ರೀತಿ ಕುರಿತು ಚಿಂತಿಸಿ ಕಾರ್ಯಯೋಜನೆ ಹಾಕಿಕೊಂಡು ಮುಂದುವರೆದರೆ ಸಮಸ್ಯೆಗೆ ಉಳಿಗಾಲ ಇರದು.
೯. ಧ್ಯಾನ ಮಾಡುವುದು, ಪ್ರಕೃತಿಯೊಂದಿಗೆ ಇರುವುದು: 
     ಸಂಶೋಧನೆಗಳು ಧ್ಯಾನದಲ್ಲಿರುವವರ ಮೆದುಳಿನ ಭಾಗಗಳು ಧ್ಯಾನ ಮಾಡದವರಿಗಿಂತ ಹೆಚ್ಚು ಕ್ರಿಯಾಶೀಲವಾಗಿರುತ್ತವೆಯೆಂದು ಧೃಡಪಡಿಸಿವೆ. ದಿನದಲ್ಲಿ ೧೦ ನಿಮಿಷಗಳಾದರೂ ಧ್ಯಾನ ಮಾಡುವುದರಿಂದ, ಮೌನವಾಗಿ ಕುಳಿತುಕೊಳ್ಳುವುದರಿಂದ ಮನಸ್ಸಿನ ಕೇಂದ್ರೀಕರಣಕ್ಕೆ ಸಹಾಯವಾಗುತ್ತದೆ, ಪರಿಹಾರ ಕಾಣಲು ಮನಸ್ಸು ಸಶಕ್ತವಾಗುತ್ತದೆ. ವ್ಯಾಯಾಮ, ಯೋಗಾಸನಗಳೂ ಹಿತಕಾರಿ. ಗಿಡ-ಮರಗಳು, ಪ್ರಕೃತಿಯ ಸೌಂದರ್ಯ ಅನುಭವಿಸುತ್ತಾ ಕುಳಿತುಕೊಳ್ಳುವುದರಿಂದಲೂ ಮನಸ್ಸು ಹಗುರಗೊಳ್ಳುತ್ತದೆ. ಸಂದರ್ಭದ ಶಿಶುವಾಗುವ ಬದಲಿಗೆ ನಮ್ಮಂತೆ ನಾವಾಗುವ ಪ್ರೇರಣೆ ಸಿಗುತ್ತದೆ. ನಿಯಮಿತ ಅಭ್ಯಾಸಗಳು ಬಲ ಕೊಡುತ್ತವೆ.
೧೦. ಸೂಕ್ತ ಆಹಾರ ಸೇವನೆ: 
     ನಾವು ಸೇವಿಸುವ ಆಹಾರವೂ ಸವಾಲುಗಳನ್ನು ಎದುರಿಸಲು ಸಹಕಾರಿ. ಆಹಾರವೆಂದರೆ ನಮ್ಮ ಮೇಲೆ ಪರಿಣಾಮ ಬೀರುವ ತಿನ್ನುವುದು, ನೋಡುವುದು, ಕೇಳುವುದು ಸಹ ಒಳಗೊಳ್ಳುತ್ತದೆ. ಮಾದಕ ಪದಾರ್ಥಗಳು, ಹಳಸಿದ ಮತ್ತು ತಂಗಳು ಆಹಾರ ಸೇವನೆ ಮೆದುಳನ್ನು ದುರ್ಬಲಗೊಳಿಸುತ್ತದೆ. ನಮ್ಮನ್ನು ಹುರಿದುಂಬಿಸುವ ಸಂಗತಿಗಳನ್ನೇ ನೋಡುವುದು, ಕೇಳುವುದು, ಓದುವುದು, ಶಕ್ತಿದಾಯಕ ಆಹಾರ ಸೇವಿಸುವುದು ಮಾಡಿದರೆ ನಾವು ಧೃಡಗೊಳ್ಳುತ್ತೇವೆ.
೧೧. ಕೌಟುಂಬಿಕ ಸಮಸ್ಯೆಗಳು: 
     ಕೌಟುಂಬಿಕ ಸಮಸ್ಯೆಗಳು ಹೆಚ್ಚಾಗಿ ನಂಬಿಕೆಯ ಕೊರತೆ, ಅಭದ್ರತೆಯ ಭಾವನೆ, ಮತ್ಸರ ಇತ್ಯಾದಿಗಳಿಂದ ಉದ್ಭವಿಸುತ್ತವೆ. ಸಂಬಂಧಿಸಿದವರು ಪರಸ್ಪರ ಮುಖಾಮುಖಿ ಚರ್ಚಿಸಿ ಇತ್ಯರ್ಥಪಡಿಸಿಕೊಳ್ಳುವುದು ಉತ್ತಮ ಮಾರ್ಗ. ಸಾಧ್ಯವಾಗದಾದಾಗ ಸಂಬಂಧಿಸಿದವರಿಗೆ ಒಪ್ಪಿತವಾಗುವ ಮೂರನೆಯ ವ್ಯಕ್ತಿಯ ಮಧ್ಯಸ್ಥಿಕೆಯಲ್ಲಿ ಬಗೆಹರಿಸಿಕೊಳ್ಳಬಹುದು. ಕೌಟುಂಬಿಕ ಆಪ್ತ ಸಮಾಲೋಚನಾ ಕೇಂದ್ರಗಳ ನೆರವೂ ಪಡೆಯಬಹುದು. ಆಪ್ತ ಸಮಾಲೋಚನೆ ಮಾನಸಿಕ ರೋಗಿಗಳಿಗೆ ಮಾತ್ರ ಎಂಬ ಭಾವನೆ ಕೆಲವು ಶಿಕ್ಷಿತರಲ್ಲೂ ಕಂಡುಬರುತ್ತದೆ. ಅವರ ದೃಷ್ಟಿಯಲ್ಲಿ ತಾವೇ ಸರಿ, ತಮ್ಮದೇ ಸರಿ ಎಂಬ ಭಾವವಿರುತ್ತದೆ. ಅಂತಹ ಸಂದರ್ಭದಲ್ಲಿ ಇಬ್ಬರಲ್ಲಿ ಒಬ್ಬರಾದರೂ ಸಮಾಲೋಚಕರ ಸಲಹೆಯಂತೆ ಮುಂದುವರೆಯುವುದು ಸೂಕ್ತ. ಋಣಾತ್ಮಕ(ನೆಗೆಟಿವಿಟಿ) ಭಾವಕ್ಕೆ  ಒತ್ತು ಕೊಡದೆ ಧನಾತ್ಮಕ(ಪಾಸಿಟಿವ್) ಅಂಶಗಳಿಗೆ ಒತ್ತು ಕೊಡುವುದು ಇಂತಹ ಸನ್ನಿವೇಶಗಳಲ್ಲಿ ಅತ್ಯಂತ ಅಗತ್ಯದ ಸಂಗತಿ.
     ಒಟ್ಟಾರೆಯಾಗಿ ಹೇಳಬೇಕೆಂದರೆ, ಪರಿಹಾರವಿಲ್ಲದ ಸಮಸ್ಯೆಗಳಿಲ್ಲ. ಅಸಾಧ್ಯ ಎಂಬುದೂ ಇಲ್ಲ. ಎಲ್ಲವೂ ನಮ್ಮ ಮನಸ್ಥಿತಿ ಮತ್ತು ಎದುರಿಸುವ ರೀತಿಯನ್ನು ಅವಲಂಬಿಸಿದೆ.
-ಕ.ವೆಂ.ನಾಗರಾಜ್.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ