ಮಿತ್ರ ಸುಬ್ರಹ್ಮಣ್ಯ ನಿವೃತ್ತ ಪ್ರೌಢಶಾಲಾ ಶಿಕ್ಷಕರು. ನನಗೆ ಬಾಲ್ಯಕಾಲದಿಂದಲೂ ಪರಿಚಿತ ಮತ್ತು ಬಂಧು. ಕಳೆದ ವರ್ಷ ಅವರ ಪತ್ನಿ ಶ್ರೀಮತಿ ಚಂದ್ರಲೇಖಾ ವಿಧಿವಶರಾದರು. ಚಂದ್ರಲೇಖಾ ಸುಬ್ರಹ್ಮಣ್ಯರು ಬಾಲ್ಯದ ಒಡನಾಡಿಗಳು, ಸಂಬಂಧಿಗಳು. ಆ ಸಂಬಂಧ ಮುಂದೆ ವೈವಾಹಿಕ ಜೀವನದಲ್ಲಿಯೂ ಒಟ್ಟಿಗೆ ಮುಂದುವರೆಯಿತು. ೧೪ ವರ್ಷಗಳ ಬಾಲ್ಯದ ಒಡನಾಟ, ೩೩ ವರ್ಷಗಳ ವೈವಾಹಿಕ ಜೀವನದ ಸಂಗಾತಿಯಾಗಿ ಸುಖ-ದುಃಖಗಳೆಲ್ಲದರಲ್ಲಿ ಸಹಭಾಗಿಯಾಗಿದ್ದ ಚಂದ್ರಲೇಖಾ ಶಿಕ್ಷಕಿಯಾಗಿ ಮಕ್ಕಳ ಕಣ್ಮಣಿಯಾಗಿದ್ದರಲ್ಲದೆ, ಧಾರ್ಮಿಕ, ಸಾಂಸ್ಕೃತಿಕ, ಸಾಮಾಜಿಕ ಕಳಕಳಿಯನ್ನೂ ಹೊಂದಿ ತನು-ಮನ-ಧನಗಳಿಂದ ತೊಡಗಿಕೊಂಡಿದ್ದವರು. ಇಂತಹ ಸುದೀರ್ಘ ಒಡನಾಟ ಅಕಾಲಿಕವಾಗಿ ಅಂತ್ಯಗೊಂಡಿದ್ದರಿಂದ ಸುಬ್ರಹ್ಮಣ್ಯ ವಿಚಲಿತರಾದರೂ, ಸಾವರಿಸಿಕೊಂಡು ಪತ್ನಿಯ ಸಾಮಾಜಿಕ ಕಳಕಳಿಯನ್ನು ಮುಂದುವರೆಸಿಕೊಂಡು ಹೋಗುವ ನಿರ್ಧಾರ ಮಾಡಿದರು. ಅವರ ಪತ್ನಿ ತಮ್ಮ ಸೇವಾವಧಿಯಲ್ಲಿ ಗಳಿಸಿ ಉಳಿಸಿದ್ದ ಹಣವನ್ನು ನಿಗದಿತ ಠೇವಣಿಯಲ್ಲಿರಿಸಿ ಅದರಿಂದ ಬರುವ ಉತ್ಪತ್ತಿಯನ್ನು ಸಾಮಾಜಿಕ ಕಾರ್ಯಗಳಿಗೆ ಬಳಸಲು ನಿರ್ಧರಿಸಿದರು. ಪತ್ನಿಯ ಹೆಸರನ್ನು ಆ ಮೂಲಕ ಚಿರಸ್ಥಾಯಿಯಾಗಿ ಉಳಿಸಬೇಕೆಂಬ ಉದ್ದೇಶದಿಂದ ಶ್ರೀಮತಿ ಎಂ.ಎನ್.ಚಂದ್ರಲೇಖ ಹೆಚ್.ಎಸ್.ಸುಬ್ರಹ್ಮಣ್ಯ ಚಾರಿಟಬಲ್ ಟ್ರಸ್ಟ್ ಸ್ಥಾಪಿಸಿ ರಿಜಿಸ್ಟರ್ ಮಾಡಿಸಿದರು. ಬಡರೋಗಿಗಳಿಗೆ, ವೃದ್ಧರಿಗೆ, ವಿದ್ಯಾರ್ಥಿಗಳಿಗೆ, ಧಾರ್ಮಿಕ, ಸಾಮಾಜಿಕ ಚಟುವಟಿಕೆಗಳಿಗೆ ನೆರವು ಒದಗಿಸುವುದು ಟ್ರಸ್ಟಿನ ಮೂಲ ಧ್ಯೇಯೋದ್ದೇಶವಾಗಿದೆ. ಶ್ರೀ ಹೆಚ್.ಎಸ್.ಸುಬ್ರಹ್ಮಣ್ಯ ಟ್ರಸ್ಟಿನ ಅಧ್ಯಕ್ಷರು, ಶ್ರೀ ಹೆಚ್.ಆರ್.ರಂಗಸ್ವಾಮಿ ಉಪಾಧ್ಯಕ್ಷರು, ಶ್ರೀಮತಿ ನಾಗಶ್ರೀಚೇತನ್ ಕಾರ್ಯದರ್ಶಿ ಮತ್ತು ಶ್ರೀ ಹೆಚ್.ಆರ್.ವಿನಾಯಕ ಖಜಾಂಚಿಯಾಗಿದ್ದರೆ, ಶ್ರೀಯುತರಾದ ಕ.ವೆಂ.ನಾಗರಾಜ್, ಹೆಚ್.ಎಸ್.ರಾಮಸ್ವಾಮಿ, ಕೆ.ಎಸ್.ನಾಗರಾಜ್, ಹೆಚ್.ವಿ.ಗೋಪಾಲಕೃಷ್ಣ ಮತ್ತು ಶ್ರೀಮತಿ ಎಲ್.ಎಸ್. ಮಾಧುರಿಯವರುಗಳು ಟ್ರಸ್ಟಿನ ಸದಸ್ಯರುಗಳಾಗಿರುವಂತೆ ಟ್ರಸ್ಟ್ ರಚನೆಯಾಗಿದೆ.
ದಿನಾಂಕ ೧೯.೪.೨೦೧೮ರಂದು ಶ್ರೀ ಸುಬ್ರಹ್ಮಣ್ಯರವರ ಪತ್ನಿಯ ವೈಕುಂಠ ಸಮಾರಾಧನೆಯ ದಿನದಂದು ಹಾಸನದ ಸಂಗಮೇಶ್ವರ ಬಡಾವಣೆಯ ಶ್ರೀ ಶಿವಪಾರ್ವತಿ ದೇವಸ್ಥಾನದ ಸಮುದಾಯ ಭವನದಲ್ಲಿ ನಡೆದ ಸಮಾರಂಭದಲ್ಲಿ, ಬಂದಿದ್ದ ಬಂಧುಗಳು, ಸ್ನೇಹಿತರುಗಳ ಸಮ್ಮುಖದಲ್ಲಿ ಟ್ರಸ್ಟಿನ ಔಪಚಾರಿಕ ಉದ್ಘಾಟನೆಯಾಯಿತು. ಈ ಸಂದರ್ಭದಲ್ಲಿ ಜೀವನಾದರ್ಶಗಳು, ಸಾಮಾಜಿಕ ಮೌಲ್ಯಗಳನ್ನು ಬಿಂಬಿಸುವ ೬೩ ಚಿಂತನಗಳ ಗುಚ್ಛ ತ್ರಿಷಷ್ಟಿ ಸಿಂಚನ ಹೆಸರಿನ ಪುಸ್ತಕದ ಬಿಡುಗಡೆಯಾಯಿತು. ಪ್ರೊ. ವಿ ನರಹರಿ (೧೦), ಶ್ರೀ ಕ.ವೆಂ.ನಾಗರಾಜ್ (೩೧), ಶ್ರೀಮತಿ ಸುಶೀಲಾ ಸೋಮಶೇಖರ್ (೧೫) ಮತ್ತು ಶ್ರೀ ಜಿ.ಎಸ್.ಮಂಜುನಾಥ್ (೭) ರವರುಗಳ ಲೇಖನಗಳ ಸಂಗ್ರಹವೇ ತ್ರಿಷಷ್ಟಿ ಚಿಂತನ. ಕಾರ್ಯಕ್ರಮಕ್ಕೆ ಬಂದಿದ್ದ ಎಲ್ಲರಿಗೂ ಪುಸ್ತಕವನ್ನು ಉಚಿತವಾಗಿ ವಿತರಿಸಲಾಯಿತು. ಲೇಖಕರುಗಳು ಮತ್ತು ಪುಸ್ತಕ ಮುದ್ರಿಸಿದ ಬಾಲಾಜಿ ಪ್ರಿಂಟರ್ಸಿನ ಶ್ರೀ ಪಾಂಡುರಂಗರವರನ್ನು ಸನ್ಮಾನಿಸಲಾಯಿತು.
ಇದೇ ಸಂದರ್ಭದಲ್ಲಿ ಟ್ರಸ್ಟಿನ ಉದ್ದೇಶಕ್ಕೆ ಪೂರಕವಾಗಿ ಪ್ರಾರಂಭಿಕ ನಡೆಯಾಗಿ ಸಕಲೇಶಪುರ ತಾ. ಬಾಗೆ, ಜಮ್ಮನಹಳ್ಳಿ ಮತ್ತು ಅಂಬೇಡ್ಕರ್ ನಗರದ ೧೮೦ ಮಕ್ಕಳಿಗೆ ಸಮವಸ್ತ್ರಗಳನ್ನು ಉಚಿತವಾಗಿ ತಲುಪಿಸುವ ಸಲುವಾಗಿ ಸಂಬಂಧಿಸಿದ ಶಾಲಾ ಮುಖ್ಯಸ್ಥರಿಗೆ ಕೊಡಲಾಯಿತು. ಹಳೇಬೀಡಿನ ಶ್ರೀ ಕೇಶವಮೂರ್ತಿಯವರು ಕಿಡ್ನಿ ವೈಫಲ್ಯಕ್ಕೆ ತುತ್ತಾಗಿ ಡಯಾಲಿಸಿಸ್ ಮಾಡಿಸಿಕೊಳ್ಳುತ್ತಿದ್ದು ಅವರಿಗೆ ನೆರವಾಗುವ ಸಲುವಾಗಿ ರೂ. ೧೫೦೦೦/- ಚೆಕ್ ನೀಡಲಾಯಿತು. ಶಿವಮೊಗ್ಗ ಜಿಲ್ಲೆ ಹೊಸನಗರ ತಾ. ಗರ್ತಿಕೆರೆಯ ರಾ.ಸ್ವ.ಸಂ. ಪ್ರೇರಿತ ಶಾಲೆಯ ಉಪಯೋಗಕ್ಕೆ ಯು.ಪಿ.ಎಸ್. ಖರೀದಿಸಲು ರೂ. ೧೫೦೦೦/- ಚೆಕ್ ಅನ್ನು ಶಾಲೆಯ ಕಾರ್ಯದರ್ಶಿ ಶ್ರೀ ರಾಘವೇಂದ್ರರವರಿಗೆ ನೀಡಲಾಯಿತು. ಟ್ರಸ್ಟಿನ ಧ್ಯೇಯೋದ್ದೇಶಗಳನ್ನು ಕುರಿತು ಶ್ರೀ ಕ.ವೆಂ. ನಾಗರಾಜ್ ಮಾತನಾಡಿದರು. ಪ್ರೊ. ನರಹರಿಯವರು ಟ್ರಸ್ಟಿನ ಉದ್ದೇಶವನ್ನು ಮನಸಾರೆ ಶ್ಲಾಘಿಸಿ ಎಲ್ಲರೂ ಈ ಕಾರ್ಯದಲ್ಲಿ ಜೊತೆಗೂಡಲು ಕರೆ ನೀಡಿದರು. ಭಾವುಕರಾಗಿ ಮಾತನಾಡಿದ ಶ್ರೀ ಸುಬ್ರಹ್ಮಣ್ಯ ಪತ್ನಿಯ ನೆನಪನ್ನು ಉಳಿಸುವ ಮತ್ತು ಆಕೆಯ ಆಶಯದಂತೆ ಸಾಮಾಜಿಕ, ಧಾರ್ಮಿಕ ಚಟುವಟಿಕೆಗಳಿಗೆ, ಬಡ ವಿದ್ಯಾರ್ಥಿಗಳ ಶೈಕ್ಷಣಿಕ ಉದ್ದೇಶಕ್ಕೆ, ಬಡ ರೋಗಿಗಳು ಮತ್ತು ಅಸಹಾಯಕರಿಗೆ ನೆರವು ನೀಡುವ ಕಾರ್ಯವನ್ನು ಮುಂದುವರೆಸುವುದಾಗಿ ಹೇಳಿ ಎಲ್ಲಾ ಬಂಧುಗಳು ಮತ್ತು ಸ್ನೇಹಿತರ ಸಹಕಾರ ಕೋರಿದರು. ಉತ್ತಮ ಮೇಲ್ಪಂಕ್ತಿ ಹಾಕಿಕೊಟ್ಟಿರುವ ಶ್ರೀ ಸುಬ್ರಹ್ಮಣ್ಯರಿಗೆ ಹೃತ್ಪೂರ್ವಕ ಅಭಿನಂದನೆಗಳು.
-ಕ.ವೆಂ.ನಾಗರಾಜ್.
ಸಮಾರಂಭದ ಕೆಲವು ದೃಷ್ಯಗಳು:
1947ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಬಂದ ಸಂದರ್ಭದಲ್ಲಿ 12-13 ವರ್ಷದ ಬಾಲಕನಾಗಿದ್ದವರಿಗೂ ಸ್ವಾತಂತ್ರ್ಯ ಹೋರಾಟಗಾರರ ಪಟ್ಟ ಮತ್ತು ಪಿಂಚಣಿ ಸಿಗುತ್ತದೆ. ಆ ಸಮಯದಲ್ಲಿ ಮತ್ತಾವುದೋ ಕಾರಣಕ್ಕಾಗಿ ಜೈಲಿನಲ್ಲಿದ್ದವರೂ ಪ್ರಮಾಣ ಪತ್ರ ಪಡೆದು ಸ್ವಾತಂತ್ರ್ಯ ಹೋರಾಟಗಾರರೆನಿಸಿಕೊಂಡ ಬಗ್ಗೆಯೂ ಜನರು ಆಡಿಕೊಂಡದ್ದನ್ನು ಕೇಳಿದ್ದೇನೆ. ಯಾವುದೇ ದಾಖಲೆಗಳಿಲ್ಲದಿದ್ದರೂ ಶಿಫಾರಸಿನ ಆಧಾರದಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಪಟ್ಟ ಪಡೆದವರ ಸಂಖ್ಯೆಯೇ ಹೆಚ್ಚು ಎಂಬುದು ವಿಪರ್ಯಾಸ. ಇಂತಹ ಶಿಫಾರಸುಗಳ ಬಲದಿಂದ ಖೊಟ್ಟಿ ಸ್ವಾತಂತ್ರ್ಯ ಹೋರಾಟಗಾರರು ಸವಲತ್ತುಗಳ ಲಾಭ ಪಡೆಯಲು ಅವಕಾಶವಿದೆ, ಪಡೆಯುತ್ತಿದ್ದಾರೆ ಎಂಬ ಆರೋಪಗಳೂ ಇವೆ. ಇದನ್ನು ಪ್ರಸ್ತಾಪಿಸುತ್ತಿರುವ ಉದ್ದೇಶವೆಂದರೆ ಈಗ 1975-77ರ ತುರ್ತು ಪರಿಸ್ಥಿತಿ ವಿರುದ್ಧ ಹೋರಾಡಿದವರಿಗೂ ಪಿಂಚಣಿ ಕೊಡಬೇಕೆಂಬ ಮಾತುಗಳು ಕೇಳಿಬರುತ್ತಿವೆ. ಈಗಾಗಲೇ ಬಿಹಾರ, ಜಾರ್ಖಂಡ್ ಸೇರಿದಂತೆ ಕೆಲವು ರಾಜ್ಯಗಳಲ್ಲಿ ತುರ್ತು ಪರಿಸ್ಥಿತಿ ವಿರುದ್ಧ ಹೋರಾಡಿದವರಿಗೆ ಪಿಂಚಣಿ ಕೊಡುತ್ತಿದ್ದಾರೆ, ಕರ್ನಾಟಕದಲ್ಲೂ ಕೊಡಬೇಕೆಂದು ಒತ್ತಾಯ ಮಾಡುವ ಪ್ರಯತ್ನಗಳು ಆರಂಭವಾಗಿದೆ. ವೈಯಕ್ತಿಕವಾಗಿ ನನಗೆ ಇಂತಹ ಪ್ರಯತ್ನ ಒಳ್ಳೆಯದಲ್ಲವೆಂದು ಅನ್ನಿಸುತ್ತಿದೆ. ಅದಕ್ಕೆ ಪೂರಕವಾಗಿ ನನ್ನ ವಿಚಾರಗಳನ್ನು ಮಂಡಿಸುತ್ತಿರುವೆ.
'ತುರ್ತು ಪರಿಸ್ಥಿತಿ ವಿರುದ್ಧ ಹೋರಾಡಿದವರಿಗೆ ಪಿಂಚಣಿ ಕೊಡಬಾರದೆಂದು ಹೇಳಲು ನೀವು ಯಾರು?' ಎಂಬ ಪ್ರಶ್ನೆಗೆ ಉತ್ತರ ಕೊಟ್ಟು ಮುಂದುವರೆಸುವೆ. ಸ್ವತಃ ನಾನೂ ಒಬ್ಬ 1975-77ರ ತುರ್ತು ಪರಿಸ್ಥಿತಿಯ ಸಂತ್ರಸ್ತನಾಗಿದ್ದವನು. ಆಗ ನಾನು 23-24ರ ತರುಣ. (ಈಗ ನನಗೆ 67 ವರ್ಷಗಳು.) ರಾಜ್ಯ ಸರ್ಕಾರದ ಕಂದಾಯ ಇಲಾಖೆಯಲ್ಲಿ ಕೆಲಸಕ್ಕೆ ಸೇರಿ ಕೇವಲ ಎರಡು ವರ್ಷಗಳಾಗಿದ್ದವು. ಆ ಸಮಯದಲ್ಲಿ ನಿಷೇಧಕ್ಕೆ ಒಳಗಾಗಿದ್ದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕರ್ತನೆಂಬ ಕಾರಣದಿಂದ ನನ್ನನ್ನು ರಾಷ್ಟ್ರೀಯ ಭದ್ರತಾ ನಿಯಮಗಳ ಅನುಸಾರ ಬಂಧಿಸಿ ಹಾಸನದ ಜೈಲಿಗೆ ಅಟ್ಟಿದ್ದರು. ನೌಕರಿಯಿಂದ ಅಮಾನತ್ತು ಮಾಡಿದ್ದರು. 13 ಸುಳ್ಳು ಕ್ರಿಮಿನಲ್ ಮೊಕದ್ದಮೆಗಳನ್ನು ಹೂಡಿದ್ದರು. ದೈಹಿಕ ಮತ್ತು ಮಾನಸಿಕ ಹಿಂಸೆಗೆ ಒಳಗಾಗಿದ್ದವನು. ಒಂದೂವರೆ ವರ್ಷಗಳ ಕಾಲ ಸೇವೆಯಿಂದ ಅಮಾನತ್ತಿನಲ್ಲಿ ಇದ್ದವನನ್ನು ವಿಚಾರಣೆಯ ಫಲಿತಾಂಶಕ್ಕೆ ಒಳಪಟ್ಟು ಹಾಸನದಿಂದ ದೂರದ ಗುಲ್ಬರ್ಗ ಜಿಲ್ಲೆಯ ಸೇಡಮ್ ತಾಲ್ಲೂಕಿಗೆ ವರ್ಗಾಯಿಸಿದ್ದರು ಅನ್ನುವ ಬದಲು ಒಗಾಯಿಸಿದ್ದರು ಅನ್ನಬಹುದು. ನನ್ನ ತಂದೆಯವರು ಆಗ ಹಾಸನದ ನ್ಯಾಯಾಲಯದಲ್ಲಿ ಶಿರಸ್ತೇದಾರರಾಗಿದ್ದು, ಅವರು ಕೆಲಸ ಮಾಡುತ್ತಿದ್ದ ನ್ಯಾಯಾಲಯಕ್ಕೇ ನಾನು ವಿಚಾರಣೆಗೆ ಹಾಜರಾಗಬೇಕಾಗಿ ಬರುತ್ತಿತ್ತು. ಅಂತಹ ದಿನಗಳಲ್ಲಿ ತಂದೆಯವರು ಕರ್ತವ್ಯಕ್ಕೆ ರಜೆ ಹಾಕುತ್ತಿದ್ದರು, ನ್ಯಾಯಾಲಯಕ್ಕೆ ಬರುತ್ತಿರಲಿಲ್ಲ. ಇಷ್ಟೇ ಸಾಲದೆಂಬಂತೆ, ಮನೆಯಲ್ಲಿ ನಿಷೇಧಿತ ಸಂಸ್ಥೆಯ ಚಟುವಟಿಕೆಗಳಿಗೆ ಆಸ್ಪದ ಕೊಡುತ್ತಿದ್ದರೆಂದು ಕಾರಣ ನೀಡಿ ತಂದೆಯವರು ಕೆಲಸ ಮಾಡುತ್ತಿದ್ದ ನ್ಯಾಯಾಲಯದ ನ್ಯಾಯಾಧೀಶರು ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಿಗೆ ಪ್ರಸ್ತಾವನೆ ಸಲ್ಲಿಸಿ ನನ್ನ ತಂದೆಯನ್ನೂ ಕೆಲಸದಿಂದ ಕಡ್ಡಾಯ ನಿವೃತ್ತಿಗೊಳಿಸಲು ಶಿಫಾರಸು ಮಾಡಿದ್ದರು. ಆಗ ಶ್ರೀ ಕೋ. ಚೆನ್ನಬಸಪ್ಪನವರು ಜಿಲ್ಲಾ ಜಡ್ಜ್ ಆಗಿದ್ದು ಪ್ರಸ್ತಾವನೆಯನ್ನು ಒಪ್ಪದಿದ್ದುದರಿಂದ ನನ್ನ ತಂದೆಯವರ ನೌಕರಿ ಉಳಿದಿತ್ತು. ಜೈಲಿನ ಗೋಡೆಗೆ ಒರಗಿ ಕುಳಿತು, ಮುಂದಿನ ಭವಿಷ್ಯದ ಬಗ್ಗೆ ಚಿಂತಿಸುತ್ತಿದ್ದ ನನಗೆ ಮುಂದೇನು ಮಾಡಬೇಕೆಂದು ಮನಸ್ಸಿನಲ್ಲೇ ಲೆಕ್ಕ ಹಾಕಿಕೊಳ್ಳುತ್ತಿದ್ದೆ. ನನ್ನ ನೌಕರಿ ಮರಳಿ ಸಿಗುವ ಭರವಸೆ ನನಗಿರಲಿಲ್ಲ. ನನಗೆ, ನನ್ನ ಕುಟುಂಬದವರಿಗೆ ಅನಗತ್ಯ ಕಿರುಕುಳ ಕೊಟ್ಟಿದ್ದ ಹಲವಾರು ಜನರನ್ನು ಕೊಂದುಹಾಕುವ ಬಗ್ಗೆಯೂ ರೋಷತಪ್ತ ಮನಸ್ಸು ಚಿಂತಿಸುತ್ತಿತ್ತು. ಯಾರು ಯಾರನ್ನು ಹೇಗೆ ಕೊಲ್ಲಬೇಕೆಂಬ ಬಗ್ಗೆಯೂ ಲೆಕ್ಕಾಚಾರ ಹಾಕುತ್ತಿತ್ತು. ಆದರೆ ರಾ.ಸ್ವ.ಸಂಘದ ಹಿರಿಯರು ಮತ್ತು ಸುಮನಸ್ಕರ ಸಹವಾಸಗಳಿಂದ ಬಂದಿದ್ದ ಸಂಸ್ಕಾರ ನನ್ನನ್ನು ದಾರಿ ತಪ್ಪಲು ಬಿಡಲಿಲ್ಲ. ಇಂತಹ ಸಂಸ್ಕಾರ ಇಲ್ಲದೇ ಇದ್ದಿದ್ದರೆ ನಾನೊಬ್ಬ ಉಗ್ರ ಹಿಂಸಾವಾದಿಯಾಗುತ್ತಿದ್ದುದರಲ್ಲಿ ಸಂದೇಹವಿಲ್ಲ. ನನ್ನ ಮುಂದಿನ ಭವಿಷ್ಯವೇ ಮಸುಕಾಗಿದ್ದ ಸಂದರ್ಭವನ್ನು ಎದುರಿಸಿ ಬಂದಿದ್ದ ನಾನು ಅದಕ್ಕಾಗಿ ಈಗ ಪ್ರತಿಫಲರೂಪವಾಗಿ ಪಿಂಚಣಿಯನ್ನೋ, ಗೌರವಧನವನ್ನೋ ನಿರೀಕ್ಷಿಸಿದರೆ, ಅದೂ 40 ವರ್ಷಗಳ ನಂತರದಲ್ಲಿ, ಅದು ನನಗೆ ನಾನೇ ಮಾಡಿಕೊಳ್ಳುವ ಅವಮಾನವೆಂಬುದು ನನ್ನ ವೈಯಕ್ತಿಕ ಅನಿಸಿಕೆ. ನಾನಂತೂ ಅದನ್ನು ನಿರೀಕ್ಷಿಸುವುದಿಲ್ಲ ಮತ್ತು ಅದಕ್ಕಾಗಿ ಕೋರುವುದೂ ಇಲ್ಲ.
ನಿಜ, ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಅದೆಷ್ಟು ಜನರು ಪ್ರಾಣ ಕಳೆದುಕೊಂಡರೋ, ಅದೆಷ್ಟು ಕುಟುಂಬಗಳು ಬೀದಿಗೆ ಬಿದ್ದವೋ, ಅದೆಷ್ಟು ಜನರು ಶಾಶ್ವತವಾಗಿ ಅಂಗವಿಕಲರಾದರೋ ಅದಕ್ಕೆ ಬೆಲೆ ಕಟ್ಟಲಾಗುವುದಿಲ್ಲ. ಅಂತಹವರನ್ನು ಸ್ಮರಿಸುವುದು, ನಿಜಕ್ಕೂ ಆಸರೆ ಅಗತ್ಯವಿರುವವರಿಗೆ ಆಸರೆ ಒದಗಿಸುವುದು ಉತ್ತಮವಾದ ಕಾರ್ಯವೇ. ಅಂತಹವರನ್ನು ಗುರುತಿಸಿ ಅವರಿಗೆ ಸಹಾಯಹಸ್ತ ಚಾಚಿದರೆ ಅದು ಮೆಚ್ಚುವ ಕಾರ್ಯ. ನಾನು ಹಾಸನ ಜಿಲ್ಲೆಯನ್ನೇ ಉದಾಹರಣೆಯಾಗಿಟ್ಟುಕೊಂಡು ನನಗೆ ತಿಳಿದ ಮಾಹಿತಿಯನ್ನು ಹೇಳುವುದಾದರೆ, ಆ ಸಂದರ್ಭದಲ್ಲಿ ಯಾವುದೇ ವಿಚಾರಣೆಯಿಲ್ಲದೆ ಬಂಧಿಸಿಡಬಹುದಾಗಿದ್ದ ಆಂತರಿಕ ಭದ್ರತಾ ಸಂರಕ್ಷಣಾ ಕಾಯದೆ (ಮೀಸಾ) ಅನ್ವಯ ಬಂಧಿತರಾಗಿದ್ದವರು 13 ಜನರು. ಅವರಲ್ಲಿ 10 ಜನರು ಈಗಾಗಲೇ ಮೃತರಾಗಿದ್ದಾರೆ ಮತ್ತು ಅವರ ಕುಟುಂಬಗಳು ಆರ್ಥಿಕ ಸುಸ್ಥಿತಿಯಲ್ಲಿವೆ. ಮೀಸಾ ಬಂದಿಯಾಗಿದ್ದ ರಾ.ಸ್ವ.ಸಂಘದ ಜಿಲ್ಲಾ ಪ್ರಚಾರಕರಾಗಿದ್ದ ಶ್ರೀ ಪ್ರಭಾಕರ ಕೆರೆಕೈ ಅವರು ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಅನುಭವಿಸಿದ ದೈಹಿಕ, ಮಾನಸಿಕ ಹಿಂಸೆಗಳ ಕಾರಣದಿಂದ ತುರ್ತು ಪರಿಸ್ಥಿತಿ ಹಿಂತೆಗೆತವಾದ ಕೆಲವು ವರ್ಷಗಳ ನಂತರದಲ್ಲಿ ಮತಿಭ್ರಮಣೆಗೊಳಗಾಗಿ ಮೃತಿ ಹೊಂದಿದ್ದರು. ಉಳಿದ ಮೂವರೂ ಮೀಸಾ ಬಂಧಿತರಾಗಿದ್ದವರು ಸಹ ಒಳ್ಳೆಯ ಆರ್ಥಿಕ ಸ್ಥಿತಿಯವರಾಗಿದ್ದಾರೆ. ಭಾರತ ರಕ್ಷಣಾ ನಿಯಮಗಳ ಅನುಸಾರ ಬಂಧಿತರಾಗಿದ್ದವರು ಸುಮಾರು 300 ಜನರು. ಅವರಲ್ಲಿಯೂ ಬಹುತೇಕರು ಮೃತರಾಗಿದ್ದಾರೆ ಮತ್ತು ಹಲವರು ಈಗ ಪರಸ್ಥಳಗಳಲ್ಲಿದ್ದು ಎಲ್ಲಿದ್ದಾರೋ ತಿಳಿದಿಲ್ಲ. ಇರುವ ಉಳಿದವರೂ ಸಹ ಪಿಂಚಣಿ ಅವಲಂಬಿಸಿಯೇ ಜೀವನ ಸಾಗಿಸಬೇಕು ಎಂಬ ಸ್ಥಿತಿಯಲ್ಲಿರುವವರು ಬಹುಷಃ ಯಾರೂ ಇಲ್ಲವೆನ್ನಬೇಕು. ಇನ್ನು ಸಾವಿರಾರು ಜನರು ಪ್ರತಿಭಟನೆಯಲ್ಲಿ ತೊಡಗಿದ್ದರೂ, ಜೈಲುಗಳಲ್ಲಿ ಸ್ಥಳಾವಕಾಶವಿಲ್ಲದಿದ್ದರಿಂದ ಪೊಲೀಸರು ಅವರನ್ನು ಹೊಡೆದು, ಬಡಿದು ಹಿಂಸಿಸಿ ಬಿಟ್ಟುಬಿಟ್ಟಿದ್ದರು. ಇನ್ನು ಭೂಗತ ಚಟುವಟಿಕೆಗಳಲ್ಲಿ ತೊಡಗಿ ಚಳುವಳಿಯನ್ನು ಜೀವಂತವಾಗಿರಿಸಿದ್ದವರ ಸಂಖ್ಯೆಯೂ ದೊಡ್ಡದಿದೆ. ಅವರುಗಳಿಗೆ ಗೌರವಧನ ನೀಡಲು ಶಿಫಾರಸು ಪತ್ರಗಳೇ ಆಧಾರವಾಗುತ್ತವೆ. ಹೆಚ್ಚಿನ ರಾ.ಸ್ವ. ಸಂಘದ ಪ್ರಚಾರಕರು, ಕಾರ್ಯಕರ್ತರು ಶಿಫಾರಸಿನ ಗೋಜಿಗೇ ಹೋಗಲಾರರು. ಆಗ ಹೋರಾಟದಿಂದ ದೂರವಿದ್ದ ಹಲವರು ಇಂತಹ ಶಿಫಾರಸಿನ ಲಾಭ ಪಡೆಯುವುದಿಲ್ಲ ಎಂದೂ ಹೇಳಲಾಗದು. ಹೋರಾಟದಲ್ಲಿ ಪಾಲುಗೊಂಡಿದ್ದವರು ಸ್ವಪ್ರೇರಣೆಯಿಂದ, ಪ್ರಜಾಪ್ರಭುತ್ವದ ಮತ್ತು ದೇಶದ ಹಿತದೃಷ್ಟಿಯಿಂದ ಮಾಡಿದ್ದರೇ ಹೊರತು ಯಾವುದೇ ಫಲಾಪೇಕ್ಷೆಯ ನಿರೀಕ್ಷೆ ಅವರಲ್ಲಿರಲಿಲ್ಲ.
ಪಿಂಚಣಿಯೋ, ಗೌರವಧನವೋ ಬರುತ್ತದೆಯೆಂದರೆ, ಬಂದರೆ ಬರಲಿ ಎಂಬ ಮನೋಭಾವದವರೂ ಇರುತ್ತಾರೆ. ತುಂಬಾ ಅನುಕೂಲ ಸ್ಥಿತಿಯಲ್ಲಿರುವ ಒಬ್ಬ ಸ್ನೇಹಿತರು ಹೇಳಿದ್ದೇನೆಂದರೆ, ಒಂದು ಐದು ಸಾವಿರ ಕೊಟ್ಟರೆ ಕೊಡಲಿ ಬಿಡಿ. ನಾವು ತೆಗೆದುಕೊಳ್ಳದೆ ಅದನ್ನು ಬೇರೆ ಯಾವುದೋ ಅಗತ್ಯವಿರುವ ಸಂಸ್ಥೆಗೆ ಅಥವ ಜನರಿಗೆ ಸಿಗುವಂತೆ ಮಾಡಿದರಾಯಿತು! ಹಣದ ಪ್ರಲೋಭನೆಯೇ ಅಂತಹದು. ಯಾರೋ ಕೊಡುವ ಹಣವನ್ನು ಇನ್ನು ಯಾರಿಗೋ ದಾನ ಮಾಡುವ ಬದಲು, ಸಾಧ್ಯವಾದರೆ ನಮ್ಮಲ್ಲಿರುವ ಹಣದಿಂದಲೇ ಸಹಾಯ ಮಾಡೋಣ. ಸರ್ಕಾರದಿಂದ ಪಡೆದು ಏಕೆ ಕೊಡಬೇಕು? ಈಗ ಮಾಡಬಹುದಾದುದೇನೆಂದರೆ, ದೀನಸ್ಥಿತಿಯಲ್ಲಿ ಇರಬಹುದಾದವರನ್ನು ಗುರುತಿಸಿ ಅಂತಹವರಿಗೆ ಮಾತ್ರ ಅವರ ಅಗತ್ಯ ಅನುಸರಿಸಿ ಸಹಾಯ ಸಿಗುವಂತೆ ನೋಡಿಕೊಳ್ಳಬೇಕು, ಅಷ್ಟೆ. ಅಂದು ಹೋರಾಟ ಮಾಡಿದವರೆಲ್ಲರೂ ಈಗ 60 ವರ್ಷಗಳನ್ನು ಮೀರಿದವರೇ ಆಗಿದ್ದಾರೆ. ಅವರಿಗೆ ಗೌರವಧನ ಬೇಡ, ಗೌರವ ಸಾಕು. ಅವರ ವಯಸ್ಸು, ಅನುಭವಗಳನ್ನು ಆಧರಿಸಿ, ಅವರವರ ಶಕ್ತಿ, ಸಾಮರ್ಥ್ಯ ಅನುಸರಿಸಿ ಅವರ ಸೇವೆ, ಮಾರ್ಗದರ್ಶನಗಳನ್ನು ಸೂಕ್ತವಾಗಿ ಬಳಸಿಕೊಂಡರೆ ಅದು ನಿಜವಾಗಿ ಅವರುಗಳಿಗೆ ಸಲ್ಲಿಸಬಹುದಾದ ಗೌರವವಾಗುತ್ತದೆ.
-ಕ.ವೆಂ.ನಾಗರಾಜ್.
ಆ ಮಗು ಒಂದನೆಯ ತರಗತಿಯಲ್ಲಿ ಓದುತ್ತಿದ್ದಾಗ ಅವನ ಶಾಲೆಯ ಮಾಸ್ತರು ಬಸವಣ್ಣನವರ ವಿಚಾರ ಹೇಳುತ್ತಾ ಎಲ್ಲರನ್ನೂ ಪ್ರೀತಿಯಿಂದ ಕಾಣಬೇಕೆಂದು ಹೇಳಿದ್ದರು. ಶಾಲೆ ಮುಗಿಸಿ ಮರಳಿ ಬರುವಾಗ ಮಳೆ ಪ್ರಾರಂಭವಾದುದರಿಂದ ಒಂದು ಮನೆಯ ಮುಂಭಾಗದಲ್ಲಿ ನಿಂತಿತ್ತು. ಆಗ ಓಡಿ ಬಂದ ನಾಯಿಯೊಂದೂ ಸಹ ರಕ್ಷಣೆಗಾಗಿ ಅದೇ ಮನೆಯ ಬಳಿ ಬಂದು ನಿಂತಿತು. ಇವನು ನಿಂತಿದ್ದರಿಂದ ನಾಯಿಗೆ ಜಾಗ ಸಾಲದಾಗಿ ಅರ್ಧ ನೆನೆಯುತ್ತಿತ್ತು. ಮಗು ಯೋಚಿಸಿತು, "ನನಗಾದರೆ ಮನೆಯಿದೆ, ಬಟ್ಟೆಯಿದೆ. ಪಾಪ, ಈ ನಾಯಿಗೆ ಏನಿದೆ?" ನಾಯಿಗೆ ಜಾಗ ಬಿಟ್ಟು ನೆನೆದುಕೊಂಡೇ ಮನೆಗೆ ವಾಪಸು ಬಂದ ಮಗನನ್ನು ಕಂಡ ತಾಯಿಗೆ ನೆನೆದುಕೊಂಡು ಬಂದ ಕಾರಣ ತಿಳಿಸಿತು.ನೆನೆದಿದ್ದ ಮಗುವನ್ನು ಒರೆಸಿ ಬೇರೆ ಬಟ್ಟೆ ಹಾಕಿದ ತಾಯಿ ಮಗುವನ್ನು ಮುದ್ದಾಡಿದಳು. ವಿಷಯ ತಿಳಿದ ತಂದೆಯೂ ಖುಷಿಪಟ್ಟು ಮಗುವಿಗೆ ಹೊಸ ಬಟ್ಟೆ, ಚಾಕೊಲೇಟ್ ಕೊಡಿಸಿದ. ಕಾಲ ಸರಿಯಿತು, ಮಗು ದೊಡ್ಡದಾಗುತ್ತಾ ಹೋದಂತೆ ಆ ಮಾಸ್ತರ ಪಾಠ ಮರೆತುಹೋಗುತ್ತಾ ಒಂದೊಮ್ಮೆ ಪೂರ್ತಿ ಮರೆತೇಹೋಯಿತು.
-ಕ.ವೆಂ.ನಾಗರಾಜ್.