ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಭಾನುವಾರ, ಏಪ್ರಿಲ್ 22, 2018

ಶ್ರೀಮತಿ ಎಂ.ಎನ್.ಚಂದ್ರಲೇಖ ಹೆಚ್.ಎಸ್.ಸುಬ್ರಹ್ಮಣ್ಯ ಚಾರಿಟಬಲ್ ಟ್ರಸ್ಟ್


     ಮಿತ್ರ ಸುಬ್ರಹ್ಮಣ್ಯ ನಿವೃತ್ತ ಪ್ರೌಢಶಾಲಾ ಶಿಕ್ಷಕರು. ನನಗೆ ಬಾಲ್ಯಕಾಲದಿಂದಲೂ ಪರಿಚಿತ ಮತ್ತು ಬಂಧು. ಕಳೆದ ವರ್ಷ ಅವರ ಪತ್ನಿ ಶ್ರೀಮತಿ ಚಂದ್ರಲೇಖಾ ವಿಧಿವಶರಾದರು. ಚಂದ್ರಲೇಖಾ ಸುಬ್ರಹ್ಮಣ್ಯರು ಬಾಲ್ಯದ ಒಡನಾಡಿಗಳು, ಸಂಬಂಧಿಗಳು. ಆ ಸಂಬಂಧ ಮುಂದೆ ವೈವಾಹಿಕ ಜೀವನದಲ್ಲಿಯೂ ಒಟ್ಟಿಗೆ ಮುಂದುವರೆಯಿತು. ೧೪ ವರ್ಷಗಳ ಬಾಲ್ಯದ ಒಡನಾಟ, ೩೩ ವರ್ಷಗಳ ವೈವಾಹಿಕ ಜೀವನದ ಸಂಗಾತಿಯಾಗಿ ಸುಖ-ದುಃಖಗಳೆಲ್ಲದರಲ್ಲಿ ಸಹಭಾಗಿಯಾಗಿದ್ದ ಚಂದ್ರಲೇಖಾ ಶಿಕ್ಷಕಿಯಾಗಿ ಮಕ್ಕಳ ಕಣ್ಮಣಿಯಾಗಿದ್ದರಲ್ಲದೆ, ಧಾರ್ಮಿಕ, ಸಾಂಸ್ಕೃತಿಕ, ಸಾಮಾಜಿಕ ಕಳಕಳಿಯನ್ನೂ ಹೊಂದಿ ತನು-ಮನ-ಧನಗಳಿಂದ ತೊಡಗಿಕೊಂಡಿದ್ದವರು. ಇಂತಹ ಸುದೀರ್ಘ ಒಡನಾಟ ಅಕಾಲಿಕವಾಗಿ ಅಂತ್ಯಗೊಂಡಿದ್ದರಿಂದ ಸುಬ್ರಹ್ಮಣ್ಯ ವಿಚಲಿತರಾದರೂ, ಸಾವರಿಸಿಕೊಂಡು ಪತ್ನಿಯ ಸಾಮಾಜಿಕ ಕಳಕಳಿಯನ್ನು ಮುಂದುವರೆಸಿಕೊಂಡು ಹೋಗುವ ನಿರ್ಧಾರ ಮಾಡಿದರು. ಅವರ ಪತ್ನಿ ತಮ್ಮ ಸೇವಾವಧಿಯಲ್ಲಿ ಗಳಿಸಿ ಉಳಿಸಿದ್ದ ಹಣವನ್ನು ನಿಗದಿತ ಠೇವಣಿಯಲ್ಲಿರಿಸಿ ಅದರಿಂದ ಬರುವ ಉತ್ಪತ್ತಿಯನ್ನು ಸಾಮಾಜಿಕ ಕಾರ್ಯಗಳಿಗೆ ಬಳಸಲು ನಿರ್ಧರಿಸಿದರು. ಪತ್ನಿಯ ಹೆಸರನ್ನು ಆ ಮೂಲಕ ಚಿರಸ್ಥಾಯಿಯಾಗಿ ಉಳಿಸಬೇಕೆಂಬ ಉದ್ದೇಶದಿಂದ ಶ್ರೀಮತಿ ಎಂ.ಎನ್.ಚಂದ್ರಲೇಖ ಹೆಚ್.ಎಸ್.ಸುಬ್ರಹ್ಮಣ್ಯ ಚಾರಿಟಬಲ್ ಟ್ರಸ್ಟ್ ಸ್ಥಾಪಿಸಿ ರಿಜಿಸ್ಟರ್ ಮಾಡಿಸಿದರು. ಬಡರೋಗಿಗಳಿಗೆ, ವೃದ್ಧರಿಗೆ, ವಿದ್ಯಾರ್ಥಿಗಳಿಗೆ, ಧಾರ್ಮಿಕ, ಸಾಮಾಜಿಕ ಚಟುವಟಿಕೆಗಳಿಗೆ ನೆರವು ಒದಗಿಸುವುದು ಟ್ರಸ್ಟಿನ ಮೂಲ ಧ್ಯೇಯೋದ್ದೇಶವಾಗಿದೆ. ಶ್ರೀ ಹೆಚ್.ಎಸ್.ಸುಬ್ರಹ್ಮಣ್ಯ ಟ್ರಸ್ಟಿನ ಅಧ್ಯಕ್ಷರು, ಶ್ರೀ ಹೆಚ್.ಆರ್.ರಂಗಸ್ವಾಮಿ ಉಪಾಧ್ಯಕ್ಷರು, ಶ್ರೀಮತಿ ನಾಗಶ್ರೀಚೇತನ್ ಕಾರ್ಯದರ್ಶಿ ಮತ್ತು ಶ್ರೀ ಹೆಚ್.ಆರ್.ವಿನಾಯಕ ಖಜಾಂಚಿಯಾಗಿದ್ದರೆ, ಶ್ರೀಯುತರಾದ ಕ.ವೆಂ.ನಾಗರಾಜ್, ಹೆಚ್.ಎಸ್.ರಾಮಸ್ವಾಮಿ, ಕೆ.ಎಸ್.ನಾಗರಾಜ್, ಹೆಚ್.ವಿ.ಗೋಪಾಲಕೃಷ್ಣ ಮತ್ತು ಶ್ರೀಮತಿ ಎಲ್.ಎಸ್. ಮಾಧುರಿಯವರುಗಳು ಟ್ರಸ್ಟಿನ ಸದಸ್ಯರುಗಳಾಗಿರುವಂತೆ ಟ್ರಸ್ಟ್ ರಚನೆಯಾಗಿದೆ.

     ದಿನಾಂಕ ೧೯.೪.೨೦೧೮ರಂದು ಶ್ರೀ ಸುಬ್ರಹ್ಮಣ್ಯರವರ ಪತ್ನಿಯ ವೈಕುಂಠ ಸಮಾರಾಧನೆಯ ದಿನದಂದು ಹಾಸನದ ಸಂಗಮೇಶ್ವರ ಬಡಾವಣೆಯ ಶ್ರೀ ಶಿವಪಾರ್ವತಿ ದೇವಸ್ಥಾನದ ಸಮುದಾಯ ಭವನದಲ್ಲಿ ನಡೆದ ಸಮಾರಂಭದಲ್ಲಿ, ಬಂದಿದ್ದ ಬಂಧುಗಳು, ಸ್ನೇಹಿತರುಗಳ ಸಮ್ಮುಖದಲ್ಲಿ ಟ್ರಸ್ಟಿನ ಔಪಚಾರಿಕ ಉದ್ಘಾಟನೆಯಾಯಿತು. ಈ ಸಂದರ್ಭದಲ್ಲಿ ಜೀವನಾದರ್ಶಗಳು, ಸಾಮಾಜಿಕ ಮೌಲ್ಯಗಳನ್ನು ಬಿಂಬಿಸುವ ೬೩ ಚಿಂತನಗಳ ಗುಚ್ಛ ತ್ರಿಷಷ್ಟಿ ಸಿಂಚನ ಹೆಸರಿನ ಪುಸ್ತಕದ ಬಿಡುಗಡೆಯಾಯಿತು. ಪ್ರೊ. ವಿ ನರಹರಿ (೧೦), ಶ್ರೀ ಕ.ವೆಂ.ನಾಗರಾಜ್ (೩೧), ಶ್ರೀಮತಿ ಸುಶೀಲಾ ಸೋಮಶೇಖರ್ (೧೫) ಮತ್ತು ಶ್ರೀ ಜಿ.ಎಸ್.ಮಂಜುನಾಥ್ (೭) ರವರುಗಳ ಲೇಖನಗಳ ಸಂಗ್ರಹವೇ ತ್ರಿಷಷ್ಟಿ ಚಿಂತನ. ಕಾರ್ಯಕ್ರಮಕ್ಕೆ ಬಂದಿದ್ದ ಎಲ್ಲರಿಗೂ ಪುಸ್ತಕವನ್ನು ಉಚಿತವಾಗಿ ವಿತರಿಸಲಾಯಿತು. ಲೇಖಕರುಗಳು ಮತ್ತು ಪುಸ್ತಕ ಮುದ್ರಿಸಿದ ಬಾಲಾಜಿ ಪ್ರಿಂಟರ್ಸಿನ ಶ್ರೀ ಪಾಂಡುರಂಗರವರನ್ನು ಸನ್ಮಾನಿಸಲಾಯಿತು.

     ಇದೇ ಸಂದರ್ಭದಲ್ಲಿ ಟ್ರಸ್ಟಿನ ಉದ್ದೇಶಕ್ಕೆ ಪೂರಕವಾಗಿ ಪ್ರಾರಂಭಿಕ ನಡೆಯಾಗಿ ಸಕಲೇಶಪುರ ತಾ. ಬಾಗೆ, ಜಮ್ಮನಹಳ್ಳಿ ಮತ್ತು ಅಂಬೇಡ್ಕರ್ ನಗರದ ೧೮೦ ಮಕ್ಕಳಿಗೆ ಸಮವಸ್ತ್ರಗಳನ್ನು ಉಚಿತವಾಗಿ ತಲುಪಿಸುವ ಸಲುವಾಗಿ ಸಂಬಂಧಿಸಿದ ಶಾಲಾ ಮುಖ್ಯಸ್ಥರಿಗೆ ಕೊಡಲಾಯಿತು. ಹಳೇಬೀಡಿನ ಶ್ರೀ ಕೇಶವಮೂರ್ತಿಯವರು ಕಿಡ್ನಿ ವೈಫಲ್ಯಕ್ಕೆ ತುತ್ತಾಗಿ ಡಯಾಲಿಸಿಸ್ ಮಾಡಿಸಿಕೊಳ್ಳುತ್ತಿದ್ದು ಅವರಿಗೆ ನೆರವಾಗುವ ಸಲುವಾಗಿ ರೂ. ೧೫೦೦೦/- ಚೆಕ್ ನೀಡಲಾಯಿತು. ಶಿವಮೊಗ್ಗ ಜಿಲ್ಲೆ ಹೊಸನಗರ ತಾ. ಗರ್ತಿಕೆರೆಯ ರಾ.ಸ್ವ.ಸಂ. ಪ್ರೇರಿತ ಶಾಲೆಯ ಉಪಯೋಗಕ್ಕೆ ಯು.ಪಿ.ಎಸ್. ಖರೀದಿಸಲು ರೂ. ೧೫೦೦೦/- ಚೆಕ್ ಅನ್ನು ಶಾಲೆಯ ಕಾರ್ಯದರ್ಶಿ ಶ್ರೀ ರಾಘವೇಂದ್ರರವರಿಗೆ ನೀಡಲಾಯಿತು. ಟ್ರಸ್ಟಿನ ಧ್ಯೇಯೋದ್ದೇಶಗಳನ್ನು ಕುರಿತು ಶ್ರೀ ಕ.ವೆಂ. ನಾಗರಾಜ್ ಮಾತನಾಡಿದರು. ಪ್ರೊ. ನರಹರಿಯವರು ಟ್ರಸ್ಟಿನ ಉದ್ದೇಶವನ್ನು ಮನಸಾರೆ ಶ್ಲಾಘಿಸಿ ಎಲ್ಲರೂ ಈ ಕಾರ್ಯದಲ್ಲಿ ಜೊತೆಗೂಡಲು ಕರೆ ನೀಡಿದರು. ಭಾವುಕರಾಗಿ ಮಾತನಾಡಿದ ಶ್ರೀ ಸುಬ್ರಹ್ಮಣ್ಯ ಪತ್ನಿಯ ನೆನಪನ್ನು ಉಳಿಸುವ ಮತ್ತು ಆಕೆಯ ಆಶಯದಂತೆ ಸಾಮಾಜಿಕ, ಧಾರ್ಮಿಕ ಚಟುವಟಿಕೆಗಳಿಗೆ, ಬಡ ವಿದ್ಯಾರ್ಥಿಗಳ ಶೈಕ್ಷಣಿಕ ಉದ್ದೇಶಕ್ಕೆ, ಬಡ ರೋಗಿಗಳು ಮತ್ತು ಅಸಹಾಯಕರಿಗೆ ನೆರವು ನೀಡುವ ಕಾರ್ಯವನ್ನು ಮುಂದುವರೆಸುವುದಾಗಿ ಹೇಳಿ ಎಲ್ಲಾ ಬಂಧುಗಳು ಮತ್ತು ಸ್ನೇಹಿತರ ಸಹಕಾರ ಕೋರಿದರು. ಉತ್ತಮ ಮೇಲ್ಪಂಕ್ತಿ ಹಾಕಿಕೊಟ್ಟಿರುವ ಶ್ರೀ ಸುಬ್ರಹ್ಮಣ್ಯರಿಗೆ ಹೃತ್ಪೂರ್ವಕ ಅಭಿನಂದನೆಗಳು.
-ಕ.ವೆಂ.ನಾಗರಾಜ್.
                              ಸಮಾರಂಭದ ಕೆಲವು ದೃಷ್ಯಗಳು:






8 ಕಾಮೆಂಟ್‌ಗಳು:

  1. ಕಲಿಯುಗ ಕನ್ನಡ ಚಿತ್ರದಲ್ಲಿ ರಾಜೇಶ್ ಒಂದು ಮಾತು ಹೇಳುತ್ತಾರೆ..

    ನಾ ಸಾವು ಬರೋತನಕ ಸಾಯಲು ಬಯೋಸೋದಿಲ್ಲ..
    ಸತ್ತ ಮೇಲೂ ಬದುಕೋಕೆ ಇಷ್ಟ ಪಡ್ತೀನಿ ..

    ಅದ್ಭುತ ಮಾತುಗಳು.. ಶ್ರೀಯುತರ ಸಾಮಾಜಿಕ ಕಳಕಳಿ ಶ್ಲಾಘನೀಯ.. ತಮ್ಮ ನೋವಿನ ನಡುವೆಯೂ ಸಮಾಜದ ನೋವುಗಳಿಗೆ ಸ್ಪಂದಿಸುತ್ತಾ.. ಅವರ ನಲಿವಲ್ಲಿ ತಮ್ಮ ಸಾರ್ಥಕತೆ ಕಾಣುವ ಅವರು ಮನಸ್ಥಿತಿಗೆ ಒಂದು ಸಲಾಂ..

    ಇದನ್ನು ಪರಿಚಯಯಿಸಿದ ನಿಮಗೆ ಧನ್ಯವಾದಗಳು..

    ಪ್ರತ್ಯುತ್ತರಅಳಿಸಿ
  2. ಚಿಕ್ಕ ಚಿಕ್ಕ ಕುಟುಂಬಕ್ಕೇ ಸೀಮಿತವಾಗಿ ಹೊರಗಿನ ಸಮಾಜದಲ್ಲಿ ತೊಡಗಿಸಿಕೊಳ್ಳದಿರುವ, ಇತರರ ಬಗ್ಗೆ ಕಾಳಜಿಯೇ ಇಲ್ಲದಿರುವ ಈಗಿನ ಪರಿಸ್ಥಿತಿಯಲ್ಲಿ ಟ್ರಸ್ಟ್ನನ ಅದ್ಯಕ್ಷರು ಉಪಾಧ್ಯಕ್ಷರು ಹಾಗೂ ಇತರ ಟ್ರ‍ಸ್ಟೀಗಳ ಈ ಆಲೋಚನೆ ನಿಜಕ್ಕೂ ಅಭಿನಂದನೀಯ ಮತ್ತು ಅನುಕರಣೀಯ.ಶುಭ ಹಾರೈಕೆಗಳು.

    ಪ್ರತ್ಯುತ್ತರಅಳಿಸಿ