ಪಾಪಶೇಷ
ದೇವಸ್ಥಾನದ ಅರ್ಚಕನಾಗಿದ್ದ ಮೂಢ ಬೆಳಿಗ್ಗೆ ಬೇಗ ಎದ್ದು ದೇವಸ್ಥಾನಕ್ಕೆ ಹೋಗಿ ಶುಚಿಗೊಳಿಸುವ ಕಾರ್ಯದಲ್ಲಿ ತೊಡಗಿದ್ದ. ದೇವಸ್ಥಾನದ ಮಾರ್ಗವಾಗಿ ಹೋಗುತ್ತಿದ್ದ ಮಂಕ ದೇವಸ್ಥಾನದ ಒಳಗೆ ಬಂದು ದೇವರಿಗೆ ನಮಸ್ಕಾರ ಮಾಡಿದ. ಆಳೆತ್ತರದ ದೇವರ ವಿಗ್ರಹದ ಹಿಂದೆ ಶುಚಿ ಕಾರ್ಯದಲ್ಲಿ ತೊಡಗಿದ್ದ ಮೂಢನನ್ನು ಮಂಕ ಗಮನಿಸಲಿಲ್ಲ. ಯಾರೂ ಇಲ್ಲವೆಂದುಕೊಂಡು ಮಂಕ ಕಣ್ಣು ಮುಚ್ಚಿ ಕೈಮುಗಿದು ಗಟ್ಟಿಯಾಗಿ ಪ್ರಾರ್ಥಿಸಿದ:
"ಓ ದೇವರೇ, ನನಗೆ ಜೀವನವೇ ಬೇಸರವಾಗಿದೆ. ಯಾವುದೇ ವಿಷಯಕ್ಕೆ, ಲೋಪಕ್ಕೆ ತಪ್ಪಿರಲಿ, ಇಲ್ಲದಿರಲಿ, ನನ್ನ ಹೆಂಡತಿ ನನ್ನನ್ನೇ ದೋಷಗಾರನನ್ನಾಗಿ ಮಾಡುತ್ತಾಳೆ. ಮಕ್ಕಳ ಎದುರಿಗೆ, ಅವರಿವರ ಎದುರಿಗೆ ನನ್ನ ಬಗ್ಗೆ ಚುಚ್ಚಿ ಮಾತಾಡುತ್ತಾಳೆ, ಪರೋಕ್ಷವಾಗಿ ಹಂಗಿಸುತ್ತಾಳೆ. ಏನಾದರೂ ಹೇಳಹೋದರೆ ರಂಪ ರಾಮಾಯಣ ಮಾಡುತ್ತಾಳೆ. ನನಗೆ ಏನು ಮಾಡಬೇಕೆಂದು ತೋಚುತ್ತಿಲ್ಲ. ಅವಳಿಗೆ ನೀನೇ ಒಳ್ಳೆಯ ಬುದ್ಧಿ ಕೊಡಬೇಕು, ದೇವರೇ".
ಮೂಢನಿಗೆ ನಗು ಬಂತು. ವಿಗ್ರಹದ ಹಿಂದಿನಂದಲೇ 'ವತ್ಸಾ' ಎಂದ. ಗಾಬರಿಯಿಂದ ಕಣ್ಣು ಬಿಟ್ಟು ನೋಡಿದ ಮಂಕನಿಗೆ ಯಾರೂ ಕಾಣಲಿಲ್ಲ. ದೇವರೇ ಮಾತನಾಡಿದನೇ ಎಂದುಕೊಂಡು ಕೈಮುಗಿದು ಬಾಯಿಬಿಟ್ಟುಕೊಂಡು ನೋಡುತ್ತಾ ನಿಂತ. ಅಶರೀರ ವಾಣಿ ಮುಂದುವರೆಯಿತು.
"ಇದಕ್ಕೆ ನಿನ್ನ ಪೂರ್ವಜನ್ಮದ ಪಾಪಶೇಷವೇ ಕಾರಣ. ನೀನು ತಿರುಗಿ ಮಾತನಾಡುತ್ತಲೇ ಇದ್ದರೆ ನಿನ್ನ ನಿನ್ನ ಪೂರ್ವ ಕರ್ಮ ಕಳೆಯುವುದಿಲ್ಲ. ಹಿಂದಿನ ಜನ್ಮದ ದೋಷ ಹೋಗುವವರೆಗೆ ಸುಮ್ಮನಿದ್ದರೆ ನಿನಗೆ ಒಳ್ಳೆಯದಾಗುತ್ತದೆ. ಚಿಂತಿಸಬೇಡ".
ಕಣ್ಣು ಕಣ್ಣು ಬಿಟ್ಟು ಬಾಯಿ ಬಿಟ್ಟುಕೊಂಡು ನಿಂತಿದ್ದ ಮಂಕ ಮತ್ತೊಮ್ಮೆ ದೇವರಿಗೆ ಅಡ್ಡಬಿದ್ದ. ಮನೆಗೆ ಹೋದೊಡನೆ ಪತ್ನಿ ಶುರು ಮಾಡಿದಳು . . "ಹಾಲು ತರಲು ಹೋದವರು ಬರಿಕೈಲಿ ಬಂದಿದೀರಲ್ರೀ. ಏನು ಹೇಳೋದು ನಿಮ್ಮ ಬುದ್ಧಿಗೆ....". ಮಂಕ ಮಾತನಾಡದೆ ಮತ್ತೆ ಹೋಗಿ ಹಾಲು ತಂದ. ಹೆಂಡತಿ ಏನೇ ಅಂದರೂ ಸುಮ್ಮನಿರುವುದನ್ನು ಅಭ್ಯಾಸ ಮಾಡಿಕೊಂಡ. ಕೆಲವೇ ದಿನಗಳಲ್ಲಿ ಗಂಡ ತಾನು ಏನೇ ಅಂದರೂ ಸುಮ್ಮನಿರುವುದನ್ನು ಗಮನಿಸಿದ ಪತ್ನಿಗೆ ಕಸಿವಿಸಿಯಾಗತೊಡಗಿತು. ಗಂಡ ತನ್ನೊಡನೆ ಜಗಳಮಾಡಲಿ, ತನ್ನನ್ನು ಬಯ್ಯಲಿ ಎಂದು ಕಾಲು ಕೆರೆದು ಜಗಳ ತೆಗೆದರೂ ಆತ ಸುಮ್ಮನಿರುವುದನ್ನು ಕಂಡ ಪತ್ನಿಗೆ ಮುಜುಗುರವಾಯಿತು. 'ಇಂತಹ ಒಳ್ಳೆಯ ಗಂಡನಿಗೆ ಅನ್ನುತ್ತಿದ್ದೆನಲ್ಲಾ' ಎಂದು ಮರುಗಿದಳು. 'ದೇವರು' ಅಭಯ ಕೊಟ್ಟಿದ್ದಂತೆ ಮಂಕನಿಗೆ ಮುಂದೆ ಒಳ್ಳೆಯ ದಿನಗಳು ಬಂದವು.