ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಮಂಗಳವಾರ, ಫೆಬ್ರವರಿ 22, 2011

ಒಲವಿನ ಒರತೆ ಬತ್ತದಿರಲಿ

ನೋವಿನಲ್ಲಿ ನಲಿವು
     ದುಃಖದಲ್ಲಿದ್ದಾಗ, ಕಷ್ಟದಲ್ಲಿದ್ದಾಗ ಸ್ಪಂದಿಸುವವರನ್ನು ನೆನೆಸಿಕೊಳ್ಳಬೇಕು. ಸುಖವಾಗಿದ್ದಾಗ, ಸಮೃದ್ಧಿಯಾಗಿದ್ದಾಗ ಜೊತೆಗಿದ್ದವರೆಲ್ಲಾ ನಮ್ಮ ಕಷ್ಟಕ್ಕೆ, ದುಃಖಕ್ಕೆ ಸ್ಪಂದಿಸುತ್ತಾರೆಂದು ಹೇಳುವಂತಿಲ್ಲ. ಪ್ರತಿಯೊಬ್ಬರಲ್ಲೂ ಒಳ್ಳೆಯ, ಕೆಟ್ಟ ಗುಣಗಳು ಇರುತ್ತವೆ. ಒಳ್ಳೆಯ ಗುಣಗಳು ಹೊರಹೊಮ್ಮಿದಾಗ ಮಾತ್ರ ಅವರು ನಮಗೆ ಪ್ರಿಯರಾಗುತ್ತಾರೆ.  ಎರಡು ಘಟನೆಗಳು ನನಗೆ ನೆನಪಿಗೆ ಬರುತ್ತಲೇ ಇರುತ್ತವೆ.
ಘಟನೆ -೧: 
ಚಿಂತಿಸಬೇಡಿ, ನಾನು ನಿಮ್ಮೊಂದಿಗಿದ್ದೇನೆ!
     ಅಂದು ನನ್ನ ಮನಸ್ಸಿಗೆ ನೋವಾಗುವಂತಹ ಘಟನೆ ನಡೆದಿತ್ತು. ಅದನ್ನು ತಪ್ಪಿಸಲಾಗಲೀ, ತಡೆಯಲಾಗಲೀ ನನಗೆ ಆಗಿರಲಿಲ್ಲ. ನನ್ನ ಕೈಮೀರಿದ ವಿಷಯವಾಗಿದ್ದರೂ ವೈಯಕ್ತಿಕವಾಗಿ ನನ್ನ ತಪ್ಪಿಲ್ಲದಿದ್ದರೂ ಅಂತಹ ಪ್ರಸಂಗಕ್ಕೆ ನಾನು ಹೊಣೆ ಹೊರಬೇಕಿತ್ತು. ದೂಷಿಸಲು ಯಾರಾದರೂ ಬೇಕಿತ್ತು. ಅದು ನಾನೇ ಅಗುವ ಎಲ್ಲಾ ಸಂಭವವೂ ಇತ್ತು. ನನಗೆ ತಡೆಯಲಾಗದಷ್ಟು ದುಃಖವಾಗಿತ್ತು. ಯಾರಿಗೂ ಕಾಣದಂತೆ ಹೊರಗೆ ಹೋಗಿ ಗಿಡದ ಮರೆಯಲ್ಲಿ ನಿಂತು ಕಣ್ಣು ಒರೆಸಿಕೊಳ್ಳುತ್ತಿದ್ದೆ. ನನ್ನ ತಮ್ಮನ ಮಗ ಅದನ್ನು ಗಮನಿಸಿ (ಬಹುಷಃ ಆತ ನನ್ನನ್ನು ಮೊದಲಿನಿಂದ ಗಮನಿಸುತ್ತಿದ್ದಿರಬೇಕು) "ದೊಡ್ಡಪ್ಪ, ಬನ್ನಿ, ಕರೆಯುತ್ತಿದ್ದಾರೆ"ಎಂದು ಕರೆದ. ಯಾರೂ ನನ್ನನ್ನು ಕರೆದಿರಲಿಲ್ಲ. ಅವನು ಅಂದು ಸಾಯಂಕಾಲ ನನ್ನನ್ನು ಕಾರಿನಲ್ಲಿ ಬಸ್ ನಿಲ್ದಾಣಕ್ಕೆ ಬಿಡಲು ಬಂದವನು ನಾನು ಮೌನವಾಗಿದ್ದುದನ್ನು ಗಮನಿಸಿ ನನ್ನ ತೊಡೆಯ ಮೇಲೆ ಕೈಯಿಟ್ಟು "ದೊಡ್ಡಪ್ಪ, ಚಿಂತೆ ಮಾಡಬೇಡಿ, ನಾನು ನಿಮ್ಮೊಂದಿಗಿದ್ದೇನೆ" ಎಂದು ಹೇಳಿದ್ದು ಅವನ ಹೃದಯದಿಂದ ಬಂದ ಮಾತಾಗಿತ್ತು. ಬಿರುಬೇಸಿಗೆಯ ಬಿಸಿಲಿನ ಝಳದಿಂದ ತತ್ತರಿಸಿ ಗಂಟಲು ಒಣಗಿದ್ದವನಿಗೆ ಶೀತಲ ತಂಗಾಳಿ ಸೋಕಿದ ಅನುಭವವಾಗಿತ್ತು. ಕಣ್ಣಂಚಿನಿಂದ ಜಿನುಗಿದ ನೀರು ಒರೆಸಿಕೊಂಡೆ.
ಘಟನೆ -೨:
ಸಮಾಧಾನ ಮಾಡಿಕೋ, ತಾತ!

     ಬೆಂಗಳೂರಿನಲ್ಲಿ ಎಲ್.ಕೆ.ಜಿ.ಯಲ್ಲಿ ಓದುತ್ತಿರುವ ನಾಲ್ಕು ವರ್ಷದ ನನ್ನ ಮೊಮ್ಮಗಳು ಅಕ್ಷಯಳಿಗೆ ದಸರಾ ರಜ ಬಂದಾಗ ಕೆಲವು ದಿನ ನಮ್ಮೊಡನೆ ಇರಲಿ ಎಂದು ಹಾಸನಕ್ಕೆ ಕರೆದುಕೊಂಡು ಬಂದಿದ್ದೆ. ಅವಳಿಗೂ ಖುಷಿಯಾಗಿತ್ತು. ದಿನ ಕಳೆದಿದ್ದೇ ಗೊತ್ತಾಗುತ್ತಿರಲಿಲ್ಲ. ದಿನವೆಲ್ಲಾ ಅವಳೊಂದಿಗೆ ಆಡಬೇಕು, ರಾತ್ರಿ ಮಲಗುವ ಮುನ್ನ ೩-೪ ಕಥೆಗಳನ್ನಾದರೂ ಹೇಳಬೇಕು, ಆನಂತರವೇ ಅವಳು ಮಲಗುತ್ತಿದ್ದುದು. ನನಗೆ ಆಗಾಗ್ಗೆ ಮಧ್ಯರಾತ್ರಿಯಲ್ಲಿ ಉಸಿರಾಟದ ತೊಂದರೆ ಉಂಟಾಗುತ್ತಿತ್ತು. ಗಂಟಲಿನ ಹತ್ತಿರ ತಡೆಯುಂಟಾಗಿ ಉಸಿರನ್ನು ಒಳಕ್ಕೆ ಎಳೆದುಕೊಳ್ಳುವುದು, ಬಿಡುವುದಕ್ಕೆ ಹರಸಾಹಸ ಪಡಬೇಕಾಗುತ್ತಿತ್ತು. ಹೀಗಾದಾಗ ಧಡಕ್ಕನೆ ಎಚ್ಚರವಾಗಿ ಪರದಾಡಿಬಿಡುತ್ತಿದ್ದೆ. ಗಡಬಡಿಸಿ ಓಡಾಡುವುದು, ಹಾಗೂ ಹೀಗೂ ಸ್ವಲ್ಪ ಗಾಳಿ ಒಳಕ್ಕೆ ಹೋದಾಗ ಸುಧಾರಿಸಿಕೊಂಡು ನೀರು ಕುಡಿಯುವುದು, ಮೈಮೇಲಿನ ಷರ್ಟು, ಬನಿಯನ್‌ಗಳನ್ನು ಕಳಚಿ ಹಾಕಿ, ಎದೆ, ಗಂಟಲುಗಳಿಗೆ ವಿಕ್ಸ್ ಹಚ್ಚಿಕೊಂಡು ಹತ್ತು ನಿಮಿಷ ಜೋರಾಗಿ ಫ್ಯಾನು ಹಾಕಿಕೊಂಡು ಓಡಾಡಿದ ನಂತರ ಸಮಾಧಾನವಾಗಿ ಮಲಗಲು ಸಾಧ್ಯವಾಗುತ್ತಿತ್ತು. ಒರಗು ದಿಂಬು ಇಟ್ಟುಕೊಂಡು ಒರಗಿ ಕುಳಿತುಕೊಂಡ ಸ್ಥಿತಿಯಲ್ಲಿ ಮಲಗುತ್ತಿದ್ದೆ. ಒಂದು ದಿನ ನನ್ನ ಅಂತ್ಯ ಹೀಗೇ ಆಗುತ್ತದೆಯೇನೋ ಎಂದು ಎಷ್ಟೋ ಸಲ ನನಗೆ ಅನ್ನಿಸುತ್ತಿತ್ತು, ಮೊಮ್ಮಗಳು ಬಂದು ನಾಲ್ಕು ದಿನವಾಗಿತ್ತು. ಅಂದು ರಾತ್ರಿ ಕಥೆ ಕೇಳಿ ಅವಳು ಮಲಗಿದಾಗ ರಾತ್ರಿ ಹನ್ನೊಂದು ಹೊಡೆದಿತ್ತು. ರಾತ್ರಿ ಸುಮಾರು ೧೨-೩೦ರ ಹೊತ್ತಿಗೆ ನನಗೆ ಉಸಿರಾಟದ ತೊಂದರೆ ಕಾಣಿಸಿಕೊಂಡು ಧಡಕ್ಕನೆ ಎದ್ದ ರಭಸಕ್ಕೆ ನನ್ನ ಪಕ್ಕ ಮಲಗಿದ್ದ ಮೊಮ್ಮಗಳಿಗೂ ಎಚ್ಚರವಾಯಿತು. ನನ್ನ ಪತ್ನಿ ಮೊಮ್ಮಗಳ ಆಟ, ಊಟಗಳ ಜೊತೆಗೆ ಹಬ್ಬದ ಕೆಲಸ, ಮನೆಕೆಲಸ ಕಾರ್ಯಗಳನ್ನೂ ಮಾಡಿ ಸುಸ್ತಾಗಿ ಮಲಗಿದ್ದು ಅವಳಿಗೆ ಎಚ್ಚರವಾಗಲಿಲ್ಲ. ಮೊಮ್ಮಗಳು ಎದ್ದು ಕುಳಿತು "ಏನಾಯಿತು, ತಾತ, ಸಮಾಧಾನ ಮಾಡಿಕೋ ತಾತ, ನೀರು ಕೊಡಲಾ, ಹಾಲು ಕುಡೀತೀಯಾ" ಎಂದು ವಿಚಾರಿಸಿದಾಗ ನನಗೆ ಹೃದಯ ತುಂಬಿ ಬಂತು. ಎದ್ದಿದ್ದ ರಭಸಕ್ಕೆ ನನಗೆ ಸ್ವಲ್ಪ ಉಸಿರಾಡಲು ಅನುಕೂಲವಾಯಿತು. ಇಟ್ಟುಕೊಂಡಿದ್ದ ನೀರು ಕುಡಿದೆ. ಮೊಮ್ಮಗಳು ನನ್ನ ಎದೆ, ಬೆನ್ನು ಸವರುತ್ತಿದ್ದಳು. ಅವಳನ್ನು ಬಾಚಿ ತಬ್ಬಿಕೊಂಡೆ. ಅವಳೂ ನನ್ನ ತಲೆ ಸವರಿ ನನ್ನ ಕೆನ್ನೆಗೆ ಮುತ್ತು ಕೊಟ್ಟಾಗ ನಾನು ನಿಜಕ್ಕೂ ಧನ್ಯನಾಗಿದ್ದೆ. ನನಗೆ ಸಮಾಧಾನವಾಗಿತ್ತು. ನಾನು ದಿಂಬಿಗೆ ಒರಗಿದಂತೆ ಮಲಗಿದಾಗ ಅವಳೂ ನನ್ನನ್ನು ಒರಗಿಕೊಂಡೇ ನಿದ್ದೆ ಮಾಡಿದ್ದಳು. ಏನೂ ಅರಿಯದ ನಾಲ್ಕು ವರ್ಷದ ಪುಟಾಣಿ ತೋರಿದ ಮಮತೆಯನ್ನು ನಾನು ಹೇಗೆ ಮರೆಯಲಿ?
-ಕ.ವೆಂ.ನಾಗರಾಜ್.

ಸೋಮವಾರ, ಫೆಬ್ರವರಿ 21, 2011

ಸೋಲದಿರು

ದೂಷಿಸದಿರು ಮನವೆ ಪರರು ಕಾರಣರಲ್ಲ
ನಿನ್ನೆಣಿಕೆ ತಪ್ಪಾಗಿ ಕಂಡಿರುವೆ ನೋವ |
ವಿಧಿಯು ಕಾರಣವಲ್ಲ ಹಣೆಬರಹ ಮೊದಲಲ್ಲ
ಕೊರಗಿದರೆ ಫಲವಿಲ್ಲ ದಣಿಯದಿರು ಮನವೆ ||


ಉಗ್ರವಾಗಿಹ ಮನವೆ ತಾಳು ತಾಳೆಲೆ ನೀನು
ವಿವೇಕ ನಲುಗೀತು ಕೆರಳದಿರು ತಾಳು |
ವ್ಯಗ್ರತೆಯ ನಿಗ್ರಹಿಸಿ ಸಮಚಿತ್ತದಲಿ ನಡೆಯೆ
ಸೋಲಿನ ಅನುಭವವೆ ಗೆಲುವಿಗಾಸರೆಯು ||


ಮೂಢನಂತಾಡದಿರು ಮತಿಗೆಟ್ಟು ನರಳದಿರು
ಮೈ ಕೊಡವಿ ಮೇಲೆದ್ದು ಅಡಿಯನಿಡು ಧೀರ |
ಸೋಲದಿರೆಲೆ ಜೀವ ಕಾಯ್ವ ನಮ್ಮನು ದೇವ
ಛಲಬಿಡದೆ ಮುನ್ನಡೆದು ಉಳಿಸು ಸ್ವಂತಿಕೆಯ ||


ಲೋಕದೊಪ್ಪಿಗೆ ಬೇಕೆ ಪರರ ಮನ್ನಣೆಯೇಕೆ
ದಾರಿ ಸರಿಯಿರುವಾಗ ಅಳುಕು ಅಂಜಿಕೆಯೇಕೆ |
ಒಳಮನವು ಒಪ್ಪಿರಲು ಚಂಚಲತೆ ಇನ್ನೇಕೆ
ಪಯಣಿಗನೆ ನೀ ಸಾಗು ದಾರಿ ನಿಚ್ಛಳವಿರಲು ||
***************
-ಕ.ವೆಂ.ನಾಗರಾಜ್.



ಶುಕ್ರವಾರ, ಫೆಬ್ರವರಿ 11, 2011

ಮೊರೆ

ದಿನಾಂಕ 30-01-2011ರಂದು ಹಾಸನದಲ್ಲಿ ನಡೆದ 'ವೇದಸುಧೆ' ಅಂತರ್ಜಾಲ ತಾಣದ ವಾರ್ಷಿಕೋತ್ಸವದಲ್ಲಿ ಶ್ರೀಮತಿ ಲಲಿತಾರಮೇಶರವರು ರಾಗ ಸಂಯೋಜಿಸಿ ಹಾಡಿದ ಕವಿನಾಗರಾಜರ ರಚನೆ:


Untitled from hariharapurasridhar on Vimeo.
--ಹರಿಹರಪುರ ಶ್ರೀಧರ್.
ಸಾಹಿತ್ಯ:
ಮೊರೆ
ಸರಿಸಿಬಿಡು ಮೂಢಮನ ಆವರಿತ ಪೊರೆಯಾ
ತೆರೆದುಬಿಡು ಕಿಟಕಿಯನು ಒಳಬರಲಿ ಬೆಳಕು|
ರೂಢಿರಾಡಿಯಲಿ ಸಿಲುಕಿ ತೊಳಲಾಡುತಿಹೆ ನಾನು
ಕರುಣೆದೋರೈ ದೇವ ಸತ್ಪಥದಿ ಮುನ್ನಡೆಸು||

ಸರ್ವರೊಳ್ಳಿತ ಬಯಸಿ ಸ್ವಂತಹಿತ ಕಡೆಗಿಟ್ಟೆ

ಸರ್ವದೂಷಿತನಾಗಿ ನೆಲೆಗಾಣದಿದೆ ಮನವು|
ಅರಿಗಳಾರರ ಬಂದಿ ದಿಕ್ಕೆಟ್ಟು ಕುಳಿತಿರುವೆ
ಸದ್ಗುರುವೆ ಕೃಪೆದೋರಿ ಹಿಡಿದೆತ್ತಿ ಸಂತಯಿಸು||

ಪಂಡಿತನು ನಾನಲ್ಲ ಪಾಂಡಿತ್ಯವೆನಗಿಲ್ಲ
ಒಳಮನದ ನುಡಿಯೊಂದೆ ಆಸರೆಯು ನನಗೆಲ್ಲ|
ಹುಲುಮನುಜ ನಾನಾಗಿ ಭಾವಬಂಧಿಯು ನಾನು
ಸಮಚಿತ್ತ ಕರುಣಿಸೈ ನೆಮ್ಮದಿಯ ನೀ ನೀಡು||
************
-ಕ.ವೆಂ.ನಾ.

ಗುರುವಾರ, ಫೆಬ್ರವರಿ 10, 2011

ಮೂಢ ಉವಾಚ -43 : ಮಾತು

ಮಾತಾಗಲಿ ಮುತ್ತು ತರದಿರಲಿ ಆಪತ್ತು
ಮಾತು ನಿಜವಿರಲಿ ನೋವು ತರದಿರಲಿ |
ಪ್ರಿಯವಾದ ಹಿತವಾದ ನುಡಿಗಳಾಡುವನು
ಜನಾನುರಾಗಿ ನುಡಿಯೋಗಿ  ಮೂಢ ||


ಮಾತಿಗೆ ಮಾತು ತರದಿರದೆ ಆಪತ್ತು
ವಾದ ವಿವಾದದಲಿ ಪ್ರೀತಿಯೇ ತೂತು |
ಎಲ್ಲರ ಮಾತುಗಳನಾಲಿಸುವನೊಬ್ಬನೆ
ಪ್ರತಿಯಾಡದ ಪರಮಾತ್ಮನೊಬ್ಬನೆ ಮೂಢ ||


ಮಾತಿನಲಿ ಹಿತವಿರಲಿ ಮಿತಿ ಮೀರದಿರಲಿ
ಮಾತಿನಿಂದಲೆ ಸ್ನೇಹ ಮಾತಿನಿಂ ದ್ವೇಷ |
ಮಾತಿನಿಂದಲೆ ಒಳಿತು ಮಾತಿನಿಂ ಕೆಡುಕು
ಮಾತು ಮುತ್ತಂತಿರಲಿ ಮೂಢ ||


ಮಾತು ಕಟ್ಟೀತು ಮಾತು ಕೆಡಿಸೀತು
ಮಾತು ಉಳಿಸೀತು ಮಾತು ಕಲಿಸೀತು |
ಮಾತು ಅಳಿಸೀತು ಮಾತು ನಲಿಸೀತು
ಅನುಭವದ ಮಾತು ಮುತ್ತು ಮೂಢ ||
*************
-ಕ.ವೆಂ.ನಾಗರಾಜ್.

ಮಂಗಳವಾರ, ಫೆಬ್ರವರಿ 8, 2011

ಸೇವಾ ಪುರಾಣ -32: ಹೊಳೆನರಸಿಪುರ -ಅನುಭವ ಭರಪೂರ -6; ಆತ್ಮಹತ್ಯೆಗೆ ಯತ್ನಿಸಿದ್ದ ಕೈದಿ


     ಜೈಲಿಗೆ ಹಲವು ಸ್ವಭಾವ, ವ್ಯಕ್ತಿತ್ವಗಳವರು ಬಂದಿಗಳಾಗಿ ಬರುತ್ತಿದ್ದರು. ಅವರುಗಳ ಆರೋಗ್ಯ, ಅನಾರೋಗ್ಯ, ಬೇಕು, ಬೇಡಗಳ ಕುರಿತು ಗಮನಿಸುತ್ತಿರಬೇಕಿತ್ತು. ಒಮ್ಮೆ ಗಂಧದ ಮರ ಕಳ್ಳಸಾಗಾಣಿಕೆ ಸಂಬಂಧ ಬಂದಿಯಾಗಿದ್ದ ಇಬ್ಬರಿಗೆ ನ್ಯಾಯಾಲಯದಲ್ಲಿ ೭ವರ್ಷಗಳ ಕಠಿಣ ಶಿಕ್ಷೆಯ ಆದೇಶವಾಗಿ ಅವರನ್ನು ನ್ಯಾಯಾಲಯದಿಂದ ವಾಪಸು ಜೈಲಿಗೆ ಕರೆತಂದಾಗ ಸಾಯಂಕಾಲವಾಗಿತ್ತು. ಶಿಕ್ಷೆಗೊಳಗಾದ ಕೈದಿಗಳನ್ನು ಉಪಕಾರಾಗೃಹದಲ್ಲಿ ಇಟ್ಟುಕೊಳ್ಳಲು ಅವಕಾಶವಿರಲಿಲ್ಲವಾದ್ದರಿಂದ ಅವರನ್ನು ಮೈಸೂರಿಗೋ, ಬಳ್ಳಾರಿ ಜೈಲಿಗೋ ಕಳಿಸಬೇಕಿತ್ತು. ಮರುದಿನ ಬೆಳಿಗ್ಗೆ ಅವರನ್ನು ಮೈಸೂರು ಜೈಲಿಗೆ ಕಳಿಸಲು ವಾರೆಂಟ್ ಸಿದ್ಧಪಡಿಸಲು ಗುಮಾಸ್ತರಿಗೆ ಸೂಚನೆ ಕೊಟ್ಟು ಹೋಗಿದ್ದೆ. ಅಂದು ರಾತ್ರಿ ಸುಮಾರು ಎಂಟು ಗಂಟೆ ಸಮಯವಿರಬಹುದು, ಜೈಲಿನ ಒಬ್ಬ ಗಾರ್ಡು ಮನೆಗೆ ಓಡುತ್ತಾ ಬಂದು ಶಿಕ್ಷೆಗೊಳಗಾದ ಒಬ್ಬ ಕೈದಿ ಆತ್ಮಹತ್ಯೆಗೆ ಪ್ರಯತ್ನಿಸುತ್ತಿದ್ದಾನೆಂದೂ ಅವನನ್ನು ಕಟ್ಟಿ ಹಾಕಿದ್ದೇವೆಂದೂ ತಿಳಿಸಿದಾಗ ತಕ್ಷಣ ಜೈಲಿಗೆ ಹೋಗಿ ನೋಡಿದೆ. ಆ ಕೈದಿ ನನ್ನನ್ನು ಕಂಡವನೇ "ಸಾರ್, ನನ್ನದೇನೂ ತಪ್ಪಿಲ್ಲ. ನಾನೇನೂ ಮಾಡಿಲ್ಲ. ನನ್ನನ್ನು ನಂಬಿದವರ ಗತಿಯೇನು ಸಾರ್? ಇನ್ನು ೭ ವರ್ಷ ಅವರು ಹೇಗಿರುತ್ತಾರೆ ಸಾರ್'" ಎಂದು ಗೋಳಿಟ್ಟ. ಇನ್ನೊಬ್ಬ ಕೈದಿ ನಿರ್ಲಿಪ್ತನಾಗಿ ನೋಡುತ್ತಿದ್ದ. ನಾನು ಅವನನ್ನು ಸಮಾಧಾನ ಮಾಡಿ "ಮೇಲಿನ ಕೋರ್ಟಿಗೆ ಅಪೀಲು ಹಾಕಬಹುದು. ಯಾರಾದರೂ ಒಳ್ಳೆಯ ಲಾಯರ್ ಇಟ್ಟುಕೊಂಡು ಅಪೀಲು ಹಾಕು. ಅನುಭವ ಬದುಕಲು ಕಲಿಸುತ್ತೆ. ನೀನೇನೂ ಹೆದರಬೇಡ. ನಿನ್ನ ಮನೆಯವರುಗಳು ಹೇಗೋ ಜೀವನ ಮಾಡುತ್ತಾರೆ. ಮುಂದೆ ಒಳ್ಳೆಯದಾಗುತ್ತೆ. ಬದುಕಿ ಸಾಧಿಸಬೇಕು. ಸತ್ತರೆ ನಿನ್ನ ಮನೆಯವರಿಗೂ ಇನ್ನೂ ತೊಂದರೆ ಜಾಸ್ತಿ ಆಗಲ್ಲವೆ? ನೀನು ಸತ್ತರೆ ನಿನ್ನ ಮನೆಯವರೂ ಹೆದರಿ ಏನಾದರೂ ಮಾಡಿಕೊಂಡರೆ ಏನು ಸಾಧಿಸಿದಂತೆ ಆಯಿತು? ನಿನಗೆ ಲಾಯರ್ ಇಡಲು ಹಣದ ಸಮಸ್ಯೆ ಇದ್ದರೆ ಕೋರ್ಟಿಗೆ ಹೇಳಿದರೆ ಅವರೇ ಒಬ್ಬರು ಲಾಯರ ಸಹಾಯ ಒದಗಿಸುತ್ತಾರೆ" ಎಂದೆಲ್ಲಾ ಹೇಳಿದೆ. ಅವನು ಒಪ್ಪಿದಂತೆ ತೋರಿದರೂ ನನಗೆ ಧೈರ್ಯವಿರಲಿಲ್ಲ. ಸಹಕೈದಿಗಳಿಂದ ಅವನು ತನ್ನ ಮರ್ಮಾಂಗವನ್ನು ಹಿಸುಕಿಕೊಂಡು ಸಾಯಲು ಪ್ರಯತ್ನಿಸಿದ್ದನೆಂದು ತಿಳಿಯಿತು. ಅವನ ಕೈಗಳನ್ನು ಬೆನ್ನ ಹಿಂದಿರಿಸಿ ಬೇಡಿ ಹಾಕಿಸಿ ಗಮನಿಸುತ್ತಿರಲು ಹಾಗೂ ಬೆಳಿಗ್ಗೆ ಕೂಡಲೆ ಅವನನ್ನು ಮೈಸೂರು ಜೈಲಿಗೆ ತಲುಪುವವರೆಗೂ ಜೋಪಾನವಾಗಿ ನೋಡಿಕೊಳ್ಳಲು ಗಾರ್ಡುಗಳಿಗೆ ಸೂಚಿಸಿದೆ. ನನಗೆ ವೈಯಕ್ತಿಕವಾಗಿ ಆತ ತನ್ನ ಜೊತೆಗಾರನಿಂದಾಗಿ ಈ ಪ್ರಕರಣದಲ್ಲಿ ಸಿಲುಕಿರಬಹುದೆಂದು ಅನ್ನಿಸಿತ್ತು. ಮರುದಿನ ಬೆಳಿಗ್ಗೆ ಎದ್ದತಕ್ಷಣ ಮಾಡಿದ ಮೊದಲ ಕೆಲಸವೆಂದರೆ ಜೈಲಿಗೆ ಭೇಟಿ ಕೊಟ್ಟಿದ್ದು ಮತ್ತು ಅವನಿಗೆ ಇನ್ನೊಮ್ಮೆ ಧೈರ್ಯ ಹೇಳಿದ್ದು. ಕಾಫಿ ತರಿಸಿ ಅವನಿಗೂ ಕೊಟ್ಟು ನಾನೂ ಕುಡಿದು ಅವನನ್ನು ಮೈಸೂರಿಗೆ ಬೀಳ್ಕೊಟ್ಟೆ.

ಸೋಮವಾರ, ಫೆಬ್ರವರಿ 7, 2011

ಅಂತಿಮ ವಿದಾಯ

     ಮಧ್ಯ ರಾತ್ರಿಯ ೧೨ ಘಂಟೆ ಇನ್ನೇನು ಸಮೀಪಿಸುತ್ತಿರುವ ಸಮಯದಲ್ಲಿ ಇದನ್ನು ಬರೆದಿರುವೆ. ಇನ್ನು ಕೆಲವೇ ಕ್ಷಣಗಳಲ್ಲಿ ನಾನು ನಿಮ್ಮೆಲ್ಲರಿಂದ ಶಾಶ್ವತವಾಗಿ ದೂರ ಹೋಗುತ್ತಿದ್ದೇನೆ. ಎಲ್ಲಾ ಮುಗಿಯಿತು. ನನ್ನನ್ನು ಮರೆತುಬಿಡಿ. ಹಾಯಾಗಿರಿ. ನನ್ನನ್ನು ಹುಡುಕುವ ವ್ಯರ್ಥ ಪ್ರಯತ್ನ ಮಾಡದಿರಿ. ನೀವು ಬಯಸಿದರೂ ನಾನು ಇನ್ನೆಂದೂ ನಿಮಗೆ ಸಿಗುವುದಿಲ್ಲ ಮತ್ತು ನಿಮ್ಮ ಜೀವನದಲ್ಲಿ ಮತ್ತಿನ್ನೆಂದೂ ಪ್ರವೇಶಿಸುವುದಿಲ್ಲ. ನಾನು ವಿದಾಯ ಹೇಳುತ್ತಿರುವ ಸಮಯದಲ್ಲಿ ನೀವು ಗಾಢ ನಿದ್ದೆಯಲ್ಲಿದ್ದು ನಿಮ್ಮನ್ನು ಎಬ್ಬಿಸಿ ವಿದಾಯ ಹೇಳುವುದು ನನಗೆ ಸರಿಕಾಣಲಿಲ್ಲ. ನಿಮಗೆ ಎಚ್ಚರವಾಗಿ ನೋಡಿದಾಗ ನಾನಿಲ್ಲದಿರುವುದನ್ನು ಗುರುತಿಸುವಿರಿ. ತಪ್ಪು ತಿಳಿಯಬೇಡಿ. ನಾನು ನಿಮ್ಮನ್ನೆಲ್ಲಾ ತುಂಬಾ ಪ್ರೀತಿಸುತ್ತೇನೆ. ನಿಮ್ಮ ಮುಂದಿನ ದಿನಗಳು ಚೆನ್ನಾಗಿರಲಿ, ನಿಮಗೆ ಉಜ್ವಲ ಭವಿಷ್ಯವಿರಲಿ ಎಂದು ಮನತುಂಬಿ ಹಾರೈಸುತ್ತೇನೆ. ನಿಮಗೆ ಏನನ್ನಿಸುವುದೋ ಗೊತ್ತಿಲ್ಲ. ಚೆನ್ನಾಗಿರಿ ಎಂದು ಮತ್ತೊಮ್ಮೆ ಹೃದಯದುಂಬಿ ಬಯಸುವೆ.

ನಿಮ್ಮ ಒಲವಿನ,


'ಈದಿನ (TODAY)'

(ಸ್ಫೂರ್ತಿ: ನನಗೆ ಬಂದ ಒಂದು 'ಸಮೋಸ')

ಬುಧವಾರ, ಫೆಬ್ರವರಿ 2, 2011

ಮೂಢ ಉವಾಚ -42 : ಅರಿವು-2

ಜನಿಸಿದವನೆಂದು ಸಾಯದಿಹನೇನು
ಚಿಂತಿಸಿದೊಡೆ ಓಡಿ ಪೋಪುದೆ ಸಾವು |
ಸಾವಿನ ಭಯಮರೆತು ಸಂತಸವ ಕಾಣು
ಅರಿವಿನಿಂ ಬಾಳಲದುವೆ ಬದುಕು ಮೂಢ ||


ಹೊರಗಣ್ಣು ತೆರೆದಿರಲು ಬೀಳುವ ಭಯವಿಲ್ಲ
ಒಳಗಣ್ಣು ತೆರೆದಿರಲು ಪತನದ ಭಯವಿಲ್ಲ|
ತಪ್ಪೊಪ್ಪಿ ನಡೆವವರು ಹಿರಿಯರೆಂದೆನಿಸುವರು
ತಪ್ಪೆ ಸರಿಯೆಂದವರು ಜಾರುವರು ಮೂಢ ||


ಬರುವಾಗ ತರಲಾರೆ ಹೋಗುವಾಗ ಒಯ್ಯೆ
ಇಹುದು ಬಹುದೆಲ್ಲ ಸಂಚಿತಾರ್ಜಿತ ಫಲವು |
ಸಿರಿ ಸಂಪದದೊಡೆಯ ನೀನಲ್ಲ ನಿಜದಿ ದೇವ
ಅಟ್ಟಡುಗೆಯುಣ್ಣದೆ ಫಲವಿಲ್ಲ ಮೂಢ||
-ಕ.ವೆಂ.ನಾಗರಾಜ್.