ಜೈಲಿಗೆ ಹಲವು ಸ್ವಭಾವ, ವ್ಯಕ್ತಿತ್ವಗಳವರು ಬಂದಿಗಳಾಗಿ ಬರುತ್ತಿದ್ದರು. ಅವರುಗಳ ಆರೋಗ್ಯ, ಅನಾರೋಗ್ಯ, ಬೇಕು, ಬೇಡಗಳ ಕುರಿತು ಗಮನಿಸುತ್ತಿರಬೇಕಿತ್ತು. ಒಮ್ಮೆ ಗಂಧದ ಮರ ಕಳ್ಳಸಾಗಾಣಿಕೆ ಸಂಬಂಧ ಬಂದಿಯಾಗಿದ್ದ ಇಬ್ಬರಿಗೆ ನ್ಯಾಯಾಲಯದಲ್ಲಿ ೭ವರ್ಷಗಳ ಕಠಿಣ ಶಿಕ್ಷೆಯ ಆದೇಶವಾಗಿ ಅವರನ್ನು ನ್ಯಾಯಾಲಯದಿಂದ ವಾಪಸು ಜೈಲಿಗೆ ಕರೆತಂದಾಗ ಸಾಯಂಕಾಲವಾಗಿತ್ತು. ಶಿಕ್ಷೆಗೊಳಗಾದ ಕೈದಿಗಳನ್ನು ಉಪಕಾರಾಗೃಹದಲ್ಲಿ ಇಟ್ಟುಕೊಳ್ಳಲು ಅವಕಾಶವಿರಲಿಲ್ಲವಾದ್ದರಿಂದ ಅವರನ್ನು ಮೈಸೂರಿಗೋ, ಬಳ್ಳಾರಿ ಜೈಲಿಗೋ ಕಳಿಸಬೇಕಿತ್ತು. ಮರುದಿನ ಬೆಳಿಗ್ಗೆ ಅವರನ್ನು ಮೈಸೂರು ಜೈಲಿಗೆ ಕಳಿಸಲು ವಾರೆಂಟ್ ಸಿದ್ಧಪಡಿಸಲು ಗುಮಾಸ್ತರಿಗೆ ಸೂಚನೆ ಕೊಟ್ಟು ಹೋಗಿದ್ದೆ. ಅಂದು ರಾತ್ರಿ ಸುಮಾರು ಎಂಟು ಗಂಟೆ ಸಮಯವಿರಬಹುದು, ಜೈಲಿನ ಒಬ್ಬ ಗಾರ್ಡು ಮನೆಗೆ ಓಡುತ್ತಾ ಬಂದು ಶಿಕ್ಷೆಗೊಳಗಾದ ಒಬ್ಬ ಕೈದಿ ಆತ್ಮಹತ್ಯೆಗೆ ಪ್ರಯತ್ನಿಸುತ್ತಿದ್ದಾನೆಂದೂ ಅವನನ್ನು ಕಟ್ಟಿ ಹಾಕಿದ್ದೇವೆಂದೂ ತಿಳಿಸಿದಾಗ ತಕ್ಷಣ ಜೈಲಿಗೆ ಹೋಗಿ ನೋಡಿದೆ. ಆ ಕೈದಿ ನನ್ನನ್ನು ಕಂಡವನೇ "ಸಾರ್, ನನ್ನದೇನೂ ತಪ್ಪಿಲ್ಲ. ನಾನೇನೂ ಮಾಡಿಲ್ಲ. ನನ್ನನ್ನು ನಂಬಿದವರ ಗತಿಯೇನು ಸಾರ್? ಇನ್ನು ೭ ವರ್ಷ ಅವರು ಹೇಗಿರುತ್ತಾರೆ ಸಾರ್'" ಎಂದು ಗೋಳಿಟ್ಟ. ಇನ್ನೊಬ್ಬ ಕೈದಿ ನಿರ್ಲಿಪ್ತನಾಗಿ ನೋಡುತ್ತಿದ್ದ. ನಾನು ಅವನನ್ನು ಸಮಾಧಾನ ಮಾಡಿ "ಮೇಲಿನ ಕೋರ್ಟಿಗೆ ಅಪೀಲು ಹಾಕಬಹುದು. ಯಾರಾದರೂ ಒಳ್ಳೆಯ ಲಾಯರ್ ಇಟ್ಟುಕೊಂಡು ಅಪೀಲು ಹಾಕು. ಅನುಭವ ಬದುಕಲು ಕಲಿಸುತ್ತೆ. ನೀನೇನೂ ಹೆದರಬೇಡ. ನಿನ್ನ ಮನೆಯವರುಗಳು ಹೇಗೋ ಜೀವನ ಮಾಡುತ್ತಾರೆ. ಮುಂದೆ ಒಳ್ಳೆಯದಾಗುತ್ತೆ. ಬದುಕಿ ಸಾಧಿಸಬೇಕು. ಸತ್ತರೆ ನಿನ್ನ ಮನೆಯವರಿಗೂ ಇನ್ನೂ ತೊಂದರೆ ಜಾಸ್ತಿ ಆಗಲ್ಲವೆ? ನೀನು ಸತ್ತರೆ ನಿನ್ನ ಮನೆಯವರೂ ಹೆದರಿ ಏನಾದರೂ ಮಾಡಿಕೊಂಡರೆ ಏನು ಸಾಧಿಸಿದಂತೆ ಆಯಿತು? ನಿನಗೆ ಲಾಯರ್ ಇಡಲು ಹಣದ ಸಮಸ್ಯೆ ಇದ್ದರೆ ಕೋರ್ಟಿಗೆ ಹೇಳಿದರೆ ಅವರೇ ಒಬ್ಬರು ಲಾಯರ ಸಹಾಯ ಒದಗಿಸುತ್ತಾರೆ" ಎಂದೆಲ್ಲಾ ಹೇಳಿದೆ. ಅವನು ಒಪ್ಪಿದಂತೆ ತೋರಿದರೂ ನನಗೆ ಧೈರ್ಯವಿರಲಿಲ್ಲ. ಸಹಕೈದಿಗಳಿಂದ ಅವನು ತನ್ನ ಮರ್ಮಾಂಗವನ್ನು ಹಿಸುಕಿಕೊಂಡು ಸಾಯಲು ಪ್ರಯತ್ನಿಸಿದ್ದನೆಂದು ತಿಳಿಯಿತು. ಅವನ ಕೈಗಳನ್ನು ಬೆನ್ನ ಹಿಂದಿರಿಸಿ ಬೇಡಿ ಹಾಕಿಸಿ ಗಮನಿಸುತ್ತಿರಲು ಹಾಗೂ ಬೆಳಿಗ್ಗೆ ಕೂಡಲೆ ಅವನನ್ನು ಮೈಸೂರು ಜೈಲಿಗೆ ತಲುಪುವವರೆಗೂ ಜೋಪಾನವಾಗಿ ನೋಡಿಕೊಳ್ಳಲು ಗಾರ್ಡುಗಳಿಗೆ ಸೂಚಿಸಿದೆ. ನನಗೆ ವೈಯಕ್ತಿಕವಾಗಿ ಆತ ತನ್ನ ಜೊತೆಗಾರನಿಂದಾಗಿ ಈ ಪ್ರಕರಣದಲ್ಲಿ ಸಿಲುಕಿರಬಹುದೆಂದು ಅನ್ನಿಸಿತ್ತು. ಮರುದಿನ ಬೆಳಿಗ್ಗೆ ಎದ್ದತಕ್ಷಣ ಮಾಡಿದ ಮೊದಲ ಕೆಲಸವೆಂದರೆ ಜೈಲಿಗೆ ಭೇಟಿ ಕೊಟ್ಟಿದ್ದು ಮತ್ತು ಅವನಿಗೆ ಇನ್ನೊಮ್ಮೆ ಧೈರ್ಯ ಹೇಳಿದ್ದು. ಕಾಫಿ ತರಿಸಿ ಅವನಿಗೂ ಕೊಟ್ಟು ನಾನೂ ಕುಡಿದು ಅವನನ್ನು ಮೈಸೂರಿಗೆ ಬೀಳ್ಕೊಟ್ಟೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ