ಹಾಸನದಲ್ಲಿ ಅದರಲ್ಲೂ ವಿಶೇಷವಾಗಿ ಹೊಳೆನರಸಿಪುರದಲ್ಲಿ ರಾಜಕೀಯ ಜನಜೀವನದಲ್ಲಿ ಹಾಸುಹೊಕ್ಕಾಗಿಬಿಟ್ಟಿದೆ. ಇಷ್ಟವಿರಲಿ, ಇಲ್ಲದಿರಲಿ ರಾಜಕೀಯ ದೈನಂದಿನ ಜೀವನದ ಮೇಲೂ ಪ್ರಭಾವ ಬೀರಿರುವುದು, ಬೀರುತ್ತಿರುವುದು, ಬೀರುವುದು ಸಾಮಾನ್ಯವಾಗಿದೆ. ನಾನು ಈಗ ಹೇಳಹೊರಟಿರುವುದು ಇಂದಿನ ಸ್ಥಿತಿಯಲ್ಲ, ೨೮ ವರ್ಷಗಳ ಹಿಂದಿನ ಸ್ಥಿತಿ. ನಾಲ್ಕು ವರ್ಷಗಳು ಹೊಳೆನರಸಿಪುರದ ತಾಲ್ಲೂಕು ಆಡಳಿತ ಶಿರಸ್ತೇದಾರನಾಗಿ ಮತ್ತು ಎರಡು ವರ್ಷಗಳು ಹಳ್ಳಿಮೈಸೂರು ಉಪತಹಸೀಲ್ದಾರನಾಗಿ ಕೆಲಸ ನಿರ್ವಹಿಸಿದ್ದೆ. ಮೊದಲ ಎರಡು ವರ್ಷಗಳು ಜಿಲ್ಲೆಯ ರಾಜಕೀಯ ಶಕ್ತಿಕೇಂದ್ರಗಳಾಗಿದ್ದ ಪುಟ್ಟಸ್ವಾಮಿಗೌಡರು ಮತ್ತು ದೇವೇಗೌಡರು ಒಂದಾಗಿದ್ದ ಕಾಲ, ನಂತರದ ಎರಡು ವರ್ಷಗಳು ಅವರವರಲ್ಲಿ ಮುಸುಕಿನ ಯುದ್ಧ ನಡೆದ ಕಾಲ ಮತ್ತು ಕೊನೆಯ ಎರಡು ವರ್ಷಗಳು ಅವರು ಬದ್ಧವೈರಿಗಳಾಗಿ ಪರಿವರ್ತಿತರಾದ ಕಾಲ. 'ಕೋಣಗಳೆರಡುಂ ಹೋರೆ ಗಿಡಕೆ ಮಿತ್ತು' ಎಂಬಂತೆ ಜನರ ಸ್ಥಿತಿಯಾಗಿತ್ತು. ಬದಲಾದ ರಾಜಕೀಯದ ಪರಿಸ್ಥಿತಿಯಲ್ಲಿ ಕುಟುಂಬದ ಸದಸ್ಯರುಗಳು, ಸೋದರರು, ಬಂಧುಗಳ ನಡುವೆ ಸಹ ಬಿರುಕು ಮೂಡಿತ್ತು ಎಂದರೆ ಅದು ಉತ್ಪ್ರೇಕ್ಷೆಯಂತೂ ಅಲ್ಲ. ಅಧಿಕಾರಿಗಳು ಮತ್ತು ನೌಕರರ ಸ್ಥಿತಿ ಅನುಭವಿಸಿದವರಿಗೇ ಗೊತ್ತು. ವಿವಾಹ ಸಂಬಂಧಗಳನ್ನು ಮಾಡುವಾಗ ಸಹ ಸಂಬಂಧಿಸಿದವರ ರಾಜಕೀಯ ಬದ್ಧತೆ/ನಿಲುವುಗಳೂ ಪಾತ್ರ ವಹಿಸುತ್ತಿದ್ದವು ಎಂದರೆ ಪರಿಸ್ಥಿತಿ ಊಹಿಸಿಕೊಳ್ಳಬಹುದು.
ರಾಜಕೀಯವೆಂದರೆ ಜನರ ಸೇವೆ ಮಾಡುವುದು ಎಂದರೆ ಇಂದು ಯಾರೂ ನಂಬುವುದಿಲ್ಲ. ರಾಜಕೀಯ ಮಾಡುವುದೆಂದರೆ ತಮ್ಮ ಬೇಳೆ ಬೇಯಿಸಿಕೊಳ್ಳುವುದು ಎಂದೇ ಅರ್ಥ. ರಾಜಕೀಯ ಎಷ್ಟು ಹೆಮ್ಮರವಾಗಿ ಬೆಳೆದಿದೆಯೆಂದರೆ ಅದು ಇಲ್ಲದ ಕ್ಷೇತ್ರವೇ -ಸಾಹಿತ್ಯ, ಧಾರ್ಮಿಕ, ಶೈಕ್ಷಣಿಕ, ದೈನಂದಿನ ಚಟುವಟಿಕೆ, ದೇಶದ ರಕ್ಷಣೆ, ಇತ್ಯಾದಿ ಎಲ್ಲವೂ ಸೇರಿದಂತೆ - ಇಲ್ಲ. ರಾಜಕೀಯದ ಪರಮಗುರಿಯೆಂದರೆ ಅಧಿಕಾರ ಪಡೆಯುವುದು, ಅದನ್ನು ಸಾಧಿಸಲು ಏನು ಬೇಕಾದರೂ ಮಾಡುವುದು! ಅಧಿಕಾರ ಏಕೆ ಬೇಕು? ಜನರ ಸೇವೆ ಮಾಡುವ ಸಲುವಾಗಿ ಎಂದು ತಿಳಿಯುವವರು ಮುಗ್ಧರೇ ಸರಿ! ಅಧಿಕಾರವೇ ಪರಮಗುರಿಯಾದ ರಾಜಕೀಯದಲ್ಲಿ ತಮಗೆ ಅನುಕೂಲವಾದ ವಾತಾವರಣ ನಿರ್ಮಾಣಕ್ಕೆ ಹೆಣಗುತ್ತಿರುವ, ಅದಕ್ಕಾಗಿ ದಿನದ ಇಪ್ಪತ್ತನಾಲ್ಕು ಗಂಟೆಗಳೂ ಸಾಕಾಗದ ರಾಜಕೀಯ ಧುರೀಣರುಗಳು ನಮ್ಮ ಕಣ್ಣ ಮುಂದೆಯೇ ಇದ್ದಾರೆ. ಅವರುಗಳ ಮೊದಲ ಕಣ್ಣು ಸರ್ಕಾರಿ ಅಧಿಕಾರಿಗಳು, ನೌಕರರ ಮೇಲೆ. ತಮಗೆ ಬೇಕಾದ ನೌಕರರನ್ನು, ಅದರಲ್ಲೂ ತಮ್ಮ ಜಾತಿಯವರನ್ನು ತಮ್ಮ ಕ್ಷೇತ್ರದಲ್ಲಿರುವಂತೆ ನೋಡಿಕೊಳ್ಳುವುದು ಅವರ ಆದ್ಯತೆ. ತಮ್ಮ ಮಾತು ಕೇಳದ ಅಧಿಕಾರಿಗಳು, ನೌಕರರನ್ನು ಹೆದರಿಸುವುದು, ಕಿರುಕುಳ ಕೊಡುವುದು, ಗೂಬೆ ಕೂರಿಸುವುದು, ತಾವಾಗಿಯೇ ವರ್ಗ ಮಾಡಿಸಿಕೊಂಡು ಹೋಗುವಂತೆ ಮಾಡುವುದು ಅವರಿಗೆ ಕಷ್ಟವೇನಲ್ಲ. ಹಾಗೆ ಮಾಡಿ ಉಳಿದವರ ಮೇಲೆ ಹೆಚ್ಚಿನ ನಿಯಂತ್ರಣ ಪಡೆಯುತ್ತಾರೆ. ಹೊಳೆನರಸಿಪುರದಲ್ಲಿ ಅಧಿಕಾರಿಗಳು, ನೌಕರರ ಮಾತುಗಳು, ಕೆಲಸಗಳ ಬಗ್ಗೆ ರಾಜಕೀಯ ಧುರೀಣರಿಗೆ ವರದಿ ಕೊಡುವ, ಚಾಡಿ ಹೇಳುವ ನೌಕರರ ಒಂದು ಸಮೂಹವೇ ಇತ್ತು. ಇದಕ್ಕೆ ಕಾರಣವೆಂದರೆ ತಾವು ನಿಷ್ಠರೆಂದು ತೋರಿಸಿಕೊಳ್ಳುವುದು, ತಮಗೆ ತೊಂದರೆಯಾಗದಿರುವಂತೆ ನೋಡಿಕೊಳ್ಳುವುದು, ತಾವು ಹೆಚ್ಚಿನ ಅನುಕೂಲ ಪಡೆಯುವುದೇ ಆಗಿತ್ತು. ಅಂತಹ ನಿಷ್ಠೆಯ ಪರಾಕಾಷ್ಠತೆಯನ್ನು ಅಲ್ಲಿ ನಾನು ಕಂಡಿದ್ದೆ. ಉದಾಹರಣೆಗೆ ಹೇಳಬೇಕೆಂದರೆ, ಪ್ರತಿದಿನ ಬೆಳಿಗ್ಗೆ ಸುಮಾರು ೭ ಗಂಟೆಯ ಸುಮಾರಿಗೆ ಇಲಾಖೆಯೊಂದರ ೩-೪ ಲಾರಿಗಳು ಪಟ್ಟಣದ ವೃತ್ತದ ಬಳಿ ನಿಲ್ಲುತ್ತಿದ್ದವು. ಆ ಲಾರಿಗಳಲ್ಲಿ ಜನರುಗಳನ್ನು ಹತ್ತಿಸಿಕೊಂಡು ಧುರೀಣರ ಜಮೀನುಗಳ ಬಳಿಗೆ ಬಿಟ್ಟು ಬರಲಾಗುತ್ತಿತ್ತು. ಸಾಯಂಕಾಲ ಕೆಲಸ ಮುಗಿಸಿದ ನಂತರ ವಾಪಸು ಕರೆತರುತ್ತಿದ್ದವು. ಆ ರೀತಿ ಹತ್ತುತ್ತಿದ್ದ ಜನರ ಪೈಕಿ ಕೆಲವರು ಸರ್ಕಾರಿ ನೌಕರರೂ (ಶಿಕ್ಷಕರೂ ಸೇರಿ) ಇದ್ದುದನ್ನು ಗಮನಿಸಿದ್ದೇನೆ. ಅವರುಗಳು ತಾವೂ ಕೆಲಸ ಮಾಡಿದ್ದೇವೆಂದು ತೋರಿಸಿಕೊಂಡು ಧುರೀಣರ ಮುಂದೆ ನಿಷ್ಠ ಸೇವಕರಂತೆ ಕೈಕಟ್ಟಿ ನಿಲ್ಲುತ್ತಿದ್ದುದನ್ನು ಕಂಡಿದ್ದೇನೆ. ಧುರೀಣರ ಹಿಂಬಾಲಕರಾಗಿ ಕೆಲಸ ಮಾಡುತ್ತಿದ್ದ ಸರ್ಕಾರಿ ನೌಕರರ ಸರ್ಕಾರಿ ಕೆಲಸಕಾರ್ಯಗಳಲ್ಲಿ ಏನಾದರೂ ಅಡಚಣೆಯಾದರೆ, ಲೋಪವಾದರೆ ಮೇಲಾಧಿಕಾರಿಗಳು ವಿಚಾರಿಸುವ ಧೈರ್ಯ ಮಾಡುತ್ತಿರಲಿಲ್ಲ. ಬದಲಾಗಿ ಅಧಿಕಾರಿಗಳೇ ತಮಗೆ ಅನುಕೂಲ ಮಾಡಿಸಿಕೊಳ್ಳಲು ಇಂತಹ ಮಧ್ಯವರ್ತಿ ನೌಕರರ ಸಹಾಯವನ್ನೇ ಬಯಸುತ್ತಿದ್ದುದು ವಿಪರ್ಯಾಸ. ಶಾಲೆಯ ಮುಖವನ್ನೇ ಸರಿಯಾಗಿ ನೋಡದಿದ್ದ ಶಿಕ್ಷಕರೊಬ್ಬರನ್ನು ಆದರ್ಶ ಶಿಕ್ಷಕರೆಂದು ಸನ್ಮಾನಿಸಲಾಗಿತ್ತು.
ಹೀಗೊಂದು ವರ್ಗಾವಣೆ
ಇದು ಸುಮಾರು ಇಪ್ಪತ್ತೈದು ವರ್ಷಗಳ ಹಿಂದಿನ ಘಟನೆಯಾದರೂ ನನ್ನ ನೆನಪಿನಲ್ಲಿ ಉಳಿದಿದೆ. ನಾನಾಗ ಹೊಳೆನರಸಿಪುರದಲ್ಲಿ ಉಪತಹಸೀಲ್ದಾರನಾಗಿದ್ದೆ. ಆಗ ಕ್ಷೇತ್ರಾಭಿವೃದ್ಧಿ ಅಧಿಕಾರಿ ಕಛೇರಿ ಮತ್ತು ತಾಲ್ಲೂಕು ಅಭಿವೃದ್ಧಿ ಮಂಡಳಿ ಇತ್ತು. ಈಗ ರಾಜ್ಯ ಮಟ್ಟದ ನಾಯಕರಾಗಿರುವವರು ಆಗ ತಾಲ್ಲೂಕು ಅಭಿವೃದ್ಧಿ ಮಂಡಳಿ ಅಧ್ಯಕ್ಷರಾಗಿದ್ದರು. ತಿಂಗಳಿಗೆ ಒಮ್ಮೆ ನಡೆಯುವ ತಾಲ್ಲೂಕು ಅಭಿವೃದ್ಧಿ ಮಂಡಳಿ ಸಭೆಗೆ ನಾನು ಹಾಜರಾಗುತ್ತಿದ್ದೆ. ಒಮ್ಮೆ ಸಭೆ ನಡೆಯುವ ೧೫ ನಿಮಿಷಗಳ ಮುಂಚೆ ಸಭೆ ನಡೆಯುವ ಸಭಾಂಗಣದಲ್ಲಿ ಕುಳಿತಿದ್ದೆ. ಅಧ್ಯಕ್ಷರು ಅರ್ಧ ಘಂಟೆ ತಡವಾಗಿ ಬಂದರು. ಸಬಾಂಗಣಕ್ಕೆ ಬರುವ ಮುನ್ನ ಅಧ್ಯಕ್ಷರು ಅವರ ಕೊಠಡಿಯಲ್ಲಿ ಕುಳಿತು ಕೆಲಕಾಲ ಸಮಾಲೋಚಿಸಿ ಸಭೆಗೆ ಬರುತ್ತಿದ್ದರು. ಆ ಸಮಯದಲ್ಲಿ ಅವರ ಕೊಠಡಿಯ ಹೊರಗೆ ಕ್ಷೇತ್ರಾಭಿವೃದ್ಧಿ ಅಧಿಕಾರಿಯ ಜವಾನ ನಾರಾಯಣ (ಹೆಸರು ಬದಲಿಸಿದೆ) ಗಟ್ಟಿ ಧ್ವನಿಯಲ್ಲಿ ಕೂಗಾಡುತ್ತಿದ್ದ. ಇನ್ನೊಬ್ಬ ಜವಾನ ರಂಗೇಗೌಡ ಅವನನ್ನು ಸುಮ್ಮನಿರಿಸುತ್ತಿದ್ದ. ಅವರ ನಡುವಿನ ಸಂಭಾಷಣೆ ಹೀಗಿತ್ತು:
ರಂಗೇಗೌಡ: ಏ ಸುಮ್ಮನಿರೋ. ಒಳಗಡೆ ಅಧ್ಯಕ್ಷರು ಅವ್ರೆ.
ನಾರಾಯಣ: ಇದ್ದರೆ ಇರಲಿ ಬಿಡೋ, ಅವರೇನು ದ್ಯಾವರಾ?
ರಂ: ಏನು ಕುಡಕೊಂಡು ಬಂದಿದೀಯಾ? ಸ್ವಲ್ಪ ನಿಧಾನಕ್ಕೆ ಮಾತಾಡು. ಅವರಿಗೆ ಕೇಳುತ್ತೆ.
ನಾ: ಕುಡಿಯಾಕೆ ನೀನು ದುಡ್ ಕೊಟ್ಟಿದ್ಯಾ? ಕೇಳಿದ್ರೆ ಕೇಳ್ಲಿ ಬುಡು. ನಾನೇನು ಆಡಬಾರದ್ದು ಮಾತಾಡ್ತಿದೀನಾ?
ರಂ: ಸುಮ್ಕಿರ್ಲಾ. ಆಮ್ಯಾಕೆ ಎಡವಟ್ಟಾಯ್ತದೆ.
ನಾ: ಏನ್ಲಾ ಆಯ್ತದೆ? ನರ್ಸೀಪುರದಲ್ಲಿ ಬರೀ ಅಪ್ಪ ಮಕ್ಕಳದೇ ದರಬಾರು. ಎಲ್ಲಾ ಅವರು ಏಳ್ದಾಗೇ ನಡೀಬೇಕು.ಬಡವರ ಕಸ್ಟ ಯಾವ ನನ್ಮಗ ಕೇಳ್ತಾನೆ?
ರಂ: ಬ್ಯಾಡ ಸುಮ್ಕಿರ್ಲಾ. ಯಾಕೋ ನಿಂಗೆ ಗಾಸಾರ ಸರಿ ಇರಾಂಗ್ ಕಾಣಾಕಿಲ್ಲ.
ನಾ: ಏನ್ ಮಾಡ್ತಾರ್ಲಾ? ಟ್ರಾನ್ ಫರ್ ಮಾಡ್ತಾರೇನ್ಲಾ? ಮಾಡ್ಲಿ ಬುಡ್ಲಾ? ಅದಕ್ಕೆಲ್ಲಾ ನಾ ಯದರಾಕಿಲ್ಲ. ಆಸನ ಬುಟ್ ಯಲ್ಲಿಗಾದರೂ ಟ್ರಾನ್‌ಫರ್ ಮಾಡ್ಲಿ. ಓಗ್ತೀನ್ ಕಣ್ಲಾ.
ಒಳಗಡೆ ಅಧ್ಯಕ್ಷರು ಅಧಿಕಾರಿಗಳೊಂದಿಗೆ ಸಮಾಲೋಚಿಸುವುದನ್ನು ಬಿಟ್ಟು ಅವರ ಮಾತುಗಳನ್ನೇ ಕೇಳಿಸಿಕೊಳ್ಳುತ್ತಿದ್ದರು. ಬಿ.ಡಿ.ಓ.ರವರು ’ನಾರಾಯಣ ಒಳ್ಳೆಯವನೇ. ಯಾವತ್ತೂ ಹೀಗಾಡಿರಲಿಲ್ಲ. ಕುಡಕೊಂಡು ಬಂದಿದ್ದಾನೋ ಏನೋ’ ಎಂದು ಸ್ವಗತದಂತೆ ಹೇಳಿದರು. ಆಮೇಲೆ ಅವರೇ ಹೊರಬಂದು ನಾರಾಯಣನನ್ನು ಗದರಿಸಿ ಕಳಿಸಿದರು. ಆಗಲೂ ನಾರಾಯಣ "ಏನಾಯ್ತದೆ ಆಗ್ಲಿ ಬುಡಿ ಸಾರ್. ಟ್ರಾನ್‌ಫರ್ ಮಾಡಿದ್ರೆ ಮಾಡ್ಲಿ. ಆಸನ ಬುಟ್ ಎಲ್ ಆಕ್ತಾರೆ ಆಕ್ಲಿ, ಓಯ್ತೀನಿ" ಎನ್ನುತ್ತಲೇ ಅಲ್ಲಿಂದ ಜಾಗ ಖಾಲಿ ಮಾಡಿದ.
ಅಧ್ಯಕ್ಷರಿಗೂ ಅಂದು ಮೂಡಿರಲಿಲ್ಲ. ಸಭೆ ಬೇಗ ಮುಕ್ತಾಯ ಕಂಡಿತು. ಸಭೆ ಮುಗಿದ ತಕ್ಷಣ ಅಧ್ಯಕ್ಷರು ಹಾಸನಕ್ಕೆ ಹೊರಟರು. ಮಧ್ಯಾಹ್ನ ನಾಲ್ಕು ಘಂಟೆ ವೇಳೆಗೆ ವಾಪಸು ಬರುವಾಗ ನಾರಾಯಣನನ್ನು ಹಾಸನಕ್ಕೆ ವರ್ಗಾವಣೆ ಮಾಡಿದ ಆದೇಶವನ್ನು ಕೈಲಿ ಹಿಡಿದುಕೊಂಡೇ ಬಂದಿದ್ದರು. ಬಿ.ಡಿ.ಓ.ರಿಗೆ ಹೇಳಿ ನಾರಾಯಣನನ್ನು ಆ ಕೂಡಲೇ ಕಛೇರಿಯಿಂದ ರಿಲೀವ್ ಮಾಡಿಸಿದರು. ಮರುದಿನ ಹಾಸನದ ಕಛೇರಿಯಲ್ಲಿ ಡ್ಯೂಟಿ ರಿಪೋರ್ಟು ಮಾಡಿಕೊಂಡು ಸಾಯಂಕಾಲ ಹೊಳೆನರಸೀಪುರಕ್ಕೆ ಬಂದ ನಾರಾಯಣ ಸೀದಾ ಅಧ್ಯಕ್ಷರ ಮನೆಗೆ ಹೋದ. ಅವರಿಗೆ ಅಡ್ಡಬಿದ್ದು "ಬುದ್ಧೀ, ತ್ಯಪ್ ತಿಳಿಬ್ಯಾಡಿ. ನಾನ್ ನಿಮ್ ಸಿಸ್ಯ. ಬಡವ. ನೆನ್ನೆ ನಾನು ಕುಡಿದಿರಲಿಲ್ಲ ಬುದ್ಧೀ. ನಂಗೆ ಆಸನಕ್ಕೇ ಟ್ರಾನ್‌ಫರ್ ಬ್ಯಾಕಾಗಿತ್ತು ಬುದ್ಧೀ. ನನ್ನ ಎಂಡ್ರಿಗೆ ಉಸಾರಿಲ್ಲ. ಆಪ್ಲೇಸನ್ ಆಗಬ್ಯಾಕು. ಅದ್ಕೇ ಇಂಗ್ಮಾಡ್ದೆ. ನನ್ನ ತ್ಯಪ್ ಒಟ್ಟೆಗಾಕ್ಕಳಿ ಬುದ್ಧೀ" ಎಂದು ಹೇಳಿದಾಗ ಅಧ್ಯಕ್ಷರು ಸುಸ್ತು. "ಎಲಾ ಇವ್ನಾ!" ಅಂದುಕೊಂಡು ಸುಮ್ಕಾದರು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ