ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಬುಧವಾರ, ಮಾರ್ಚ್ 30, 2011

ಮೂಢ ಉವಾಚ -47

ಹಸಿವು
ಹಸಿವ ತಣಿಸಲು ಹೆಣಗುವರು ನರರು
ಏನೆಲ್ಲ ಮಾಡುವರು ಜೀವ ಸವೆಸುವರು |
ಆ ಪರಿಯ ಕಳಕಳಿ ಕಲಿಕೆಯಲಿ ಬರಲಿ
ಒಳಿತು ಬಯಸುವುದರಲಿರಲಿ ಮೂಢ ||


ಪರಮಾತ್ಮನೆಂಬುವನು ಎಲ್ಲಿಹನು ಕೇಳಿ
ದೇವಭಕ್ತರೆ ಹೇಳಿ ಅರಿತವರೆ ತಿಳಿ ಹೇಳಿ |
ದೇವನಿರದಿಹನೆ ಜೀವಿಗಳ ಉದರದಲಿ
ಹಸಿವಿನಿಂದಲೆ ಇಹನು ದೇವ ಮೂಢ ||

ಅಂಗವಿಕಲ
ಕಾಮಿಗೆ ಕಣ್ಣಿಲ್ಲ ಕ್ರೋಧಿಗೆ ತಲೆಯಿಲ್ಲ
ಮದಕೆ ಮೆದುಳಿಲ್ಲ ಮೋಹದ ಕಿವಿಮಂದ |
ಲೋಭಿಯ ಕೈಮೊಟಕು ಮತ್ಸರಿ ರೋಗಿಷ್ಟ
ಅಂವಿಕಲನಾಗದಿರೆಲೋ ಮೂಢ ||


ಕೋಪದ ಫಲ
ಕೋಪದಿಂದ ಜನಿಪುದಲ್ತೆ ಅವಿವೇಕ
ಅವಿವೇಕದಿಂದಲ್ತೆ ವಿವೇಚನೆಯು ಮಾಯ |
ವಿವೇಕಮರೆಯಾಗೆ ಬುದ್ಧಿಯೇ ನಾಶ
ಬುದ್ಧಿಯಿರದಿದ್ದೇನು ಫಲ ಮೂಢ ||
******************
-ಕ.ವೆಂ.ನಾಗರಾಜ್.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ