ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಗುರುವಾರ, ಜನವರಿ 12, 2012

ನಾನು ಮತ್ತು ಕವಿ ನಾಗರಾಜ್


     ಹೊಗಳಿದರೆ ಯಾರಿಗೆ ತಾನೇ ಸಂತೋಷವಾಗುವುದಿಲ್ಲ? ನನ್ನ ಕುರಿತು ಹೊಗಳಿ 'ಬಂಧು ಬಳಗ' ತಾಣದಲ್ಲಿ ಹರಿಹರಪುರ ಶ್ರೀಧರ್ ಬರೆದ ಲೇಖನವಿದು.
***************
    ಕವಿನಾಗರಾಜರ ಮತ್ತು ಕವಿಸುರೇಶರ ಮಿತ್ರತ್ವ ಮತ್ತು ಮಾನ್ಯ ಸು. ರಾಮಣ್ಣನವರ ಮಾರ್ಗದರ್ಶನ ....... ಈ ಅಂಶಗಳು ಕವಿಮನೆತನದ  ಸಮಾವೇಶದಲ್ಲಿ  ನಾನು ಇರುವಂತೆ ಪ್ರೇರೇಪಿಸಿತು.  ಈ ಸಮಾವೇಶಕ್ಕಾಗಿ ನಾಗರಾಜರು ಹಲವಾರು ತಿಂಗಳುಗಳಿಂದ ನಡೆಸುತ್ತಿದ್ದ ತಯಾರಿಯನ್ನು ನಾನು ಕಣ್ಣಾರೆ ಕಂಡಿದ್ದೆ. ಅವರ ಸತತ ಪ್ರಯತ್ನ, ಕವಿಕಿರಣಕ್ಕಾಗಿ ಅವರ ಸಿದ್ಧತೆ,ಶ್ರಮ, ಇವೆಲ್ಲವನ್ನೂ ನಾನು ಗಮನಿಸಿದ್ದೆ. ನಾಗರಾಜರು ಕಳೆದ ೪೦ ವರ್ಷಗಳಿಂದ ನನ್ನ ಮಿತ್ರರು ಮಾತ್ರವಲ್ಲ ಅಣ್ಣನ ಸಮಾನರು. ಅವರೊಡನೆ ಹಾಸನದಲ್ಲಿ ಸಾಮಾಜಿಕ ಚಟುವಟಿಕೆಗಳಲ್ಲಿ ಇತ್ತೀಚೆಗೆ ನಾನು ಜೋಡಿಸಿಕೊಂಡಿರುವಷ್ಟು ಬಹುಷ: ಬೇರೆ ಯಾರೂ ಜೋಡಿಸಿಕೊಂಡಿರಲಾರರು. ನಾಲ್ಕು ದಶಕಗಳ ಹಿಂದಿನ ಮಾತು ಬೇರೆ. ಆಗ  ಕರ್ನಾಟಕ  ಬ್ಯಾಂಕಿನಲ್ಲಿ  ಉದ್ಯೋಗದಲ್ಲಿದ್ದ ಜಯಪ್ರಕಾಶ್ ಮತ್ತು ಗೀತಾ ಲಾರಿ  ಟ್ರಾಸ್ಪೋರ್ಟ್  ನ  ಶ್ರೀನಿವಾಸಪ್ರಭುಗಳೊಡನೆ ಶ್ರೀ ನಾಗರಾಜರು ಆರ್.ಎಸ್.ಎಸ್. ಕೆಲಸವನ್ನು ಹಾಸನದಲ್ಲಿ ಸಕ್ರಿಯವಾಗಿ ಮಾಡಿತ್ತಿದ್ದರು.ನಾನೂ ಕೂಡ  ಆರ್.ಎಸ್.ಎಸ್. ಕೆಲಸ ಮಾಡುತ್ತಿದ್ದರೂ ಇವರುಗಳಿಗಿಂತ ನಾನು ಮೂರ್ನಾಲ್ಕು ವರ್ಷ ಕಿರಿಯ. ಹಾಗಾಗಿ ನನಗೆ ಬಾಲಕರು  ಮತ್ತು ಕಿಶೋರರೇ ಹೆಚ್ಚಾಗಿ ಇರುತ್ತಿದ್ದ   ಶೈಲೇಂದ್ರ  ಶಾಖೆಯ ಮುಖ್ಯ ಶಿಕ್ಷಕನಾಗಿ ಜವಾಬ್ದಾರಿ ಇತ್ತು. ನಾನು  ಆಗ ಹಾಸನದಲ್ಲಿ ಐ.ಟಿ.ಐ. ನಲ್ಲಿ ಓದುತ್ತಿದ್ದೆ. ಓದುವ ಸಮಯ ಹೊರತಾಗಿ ಮಿಕ್ಕಿದ್ದೆಲ್ಲಾ ಶಾಖೆಯ ಕೆಲಸವೇ!! ಈ ಮೂವರಂತೂ ಇಡೀ ಹಾಸನ ನಗರವನ್ನು ಸೈಕಲ್ ನಲ್ಲಿ ಸುತ್ತಿ  ತರುಣರನ್ನು ಸಂಘಟಿಸುತ್ತಿದ್ದರು. ಆ ಸಮಯದಲ್ಲಿ [೧೯೭೩] ಹತ್ತು ತಿಂಗಳು ನಾನು ಹಾಸನದಲ್ಲಿದ್ದರೂ ಅದು ನನ್ನ ಮುಂದಿನ ಜೀವನವನ್ನು ರೂಪಿಸಿತ್ತು. ಆನಂತರ ಬೆಂಗಳೂರು, ಕೆ.ಜಿ.ಎಫ್, ಎಲ್ಲಾ ಸುತ್ತಾಡಿ ಪುನ: ೧೯೭೯ ಕ್ಕೆ ಹಾಸನ ಜಿಲ್ಲೆಗೆ ಬಂದರೂ ಅರಸೀಕೆರೆ ಸಮೀಪದ ಗಂಡಸಿ ಮತ್ತು ಹೊಳೇನರಸೀಪುರಗಳಲ್ಲಿ  ೧೯೯೨ ರವರೆಗೂ ಕೆ.ಇ.ಬಿ.ಯಲ್ಲಿ ಸೇವೆ ಸಲ್ಲಿಸಿದವನು ಅ೯೯೨ ಜೂನ್ ಮಾಸದಲ್ಲಿ ಪುನ: ಹಾಸನಕ್ಕೆ ಬಂದೆ. ಆಗ ಪುನ: ಶುರುವಾಯ್ತು    ನಾಗರಾಜರ  ಸಹವಾಸ ಮತ್ತು  ಸಾಮಾಜಿಕ ಚಟುವಟಿಕೆಗಳು. ಸೇವಾಭಾರತಿಯ ಹೆಸರಲ್ಲಿ  ನಾವುಗಳು ಹಾಸನದಲ್ಲಿ ಮಾಡಿದ ಚಟುವಟಿಕೆಯಂತೂ ಅವಿಸ್ಮರಣೀಯ.  ಸೇವಾಭಾರತಿಯ ಚಟುವಟಿಕೆಯು ನಮ್ಮಿಬ್ಬರನ್ನೂ ಬಲು ಹತ್ತಿರಕ್ಕೆ ತಂದಿತ್ತು. ಅದಕ್ಕಾಗಿ ಇಷ್ಟೆಲ್ಲಾ ಬರೆಯಬೇಕಾಯ್ತು. ೧೯೭೯ ರಿಂದ ೧೯೯೨ ರ ವರಗೆ ಸಂಘದ ಅನ್ಯಾನ್ಯ ಜವಾಬ್ದಾರಿಗಳನ್ನು  ಹಾಸನ ಜಿಲ್ಲಾ ಮಟ್ಟದಲ್ಲಿ ನಿರ್ವಹಿಸಿದರೂ ಆನಂತರದ ಸೇವಾಭಾರತಿಯ ಚಟುವಟಿಕೆಗಳನ್ನು ಮಾತ್ರ ಮರೆಯಲು ಸಾಧ್ಯವೇ ಇಲ್ಲ. ಆ ಒಂದು ಚಟುವಟಿಕೆಗಳೇ ನನ್ನ ನಾಗರಾಜರ ನಡುವೆ ಸಂಬಂಧವನ್ನು ಬೆಸೆಯಲು ಕಾರಣವಾಯ್ತು. ಆನಂತರ ನಾಗರಾಜರು ಶಿವಮೊಗ್ಗ, ಶಿಕಾರಿಪುರ, ಸೇಡಮ್, ಉಜಿರೆ ಮುಂತಾದ ಕಡೆಗಳಲ್ಲಿ   ತಹಸೀಲ್ದಾರರಾಗಿ ಸೇವೆಮಾಡಿ  ಸ್ವಯಮ್ ನಿವೃತ್ತಿ ಪಡೆದು ಹಾಸನಕ್ಕೆ ಹಿಂದಿರುಗಿದಮೇಲೆ  ಪುನ: ನಮ್ಮ ಸಂಬಂಧ ಗಟ್ಟಿಯಾಯ್ತು.  ಅದಾಗಲೇ ನಾನು ಅಂತರ್ಜಾಲದಲ್ಲಿ  ಸಾಕಷ್ಟು ಬರವಣಿಗೆ ಮಾಡುತ್ತಿದ್ದೆ, ಸಂಪದದಲ್ಲಿ ಒಂದೆರಡು ವರ್ಷಗಳು ಬರೆದ ಮೇಲೆ "ನೆಮ್ಮದಿಗಾಗಿ" ಎಂಬ ಸ್ವಂತ ಬ್ಲಾಗ್ ಮಾಡಿದೆ. ಅನಂತರ     ಸಂಸ್ಕೃತಿ ಪರಂಪರೆಗಳನ್ನು ಬಿಂಭಿಸುವ  ಅಂತರ್ ಜಾಲ ತಾಣವನ್ನು  ಮಾಡಬೇಕೆಂಬ ಆಕಾಂಕ್ಷೆಯಿಂದ ," ವೇದಸುಧೆ" ಬ್ಲಾಗ್  ಆರಂಭಿಸಿದೆ." ಎಲ್ಲರಿಗಾಗಿ ವೇದ " ಎಂಬ ವಿಚಾರವನ್ನಿಟ್ಟುಕೊಂಡು ಆರಂಭವಾದ ಬ್ಲಾಗ್  ಹಲವರ ಮೆಚ್ಚುಗೆಗೆ ಪಾತ್ರವಾಯ್ತು. ಆಗ  ನಾಗರಾಜರನ್ನು  "ನೀವೂ ವೇದಸುಧೆಯಲ್ಲಿ ಬರೆಯಬಾರದೇಕೆ? ಎಂದು ಕೇಳಿ  ಶ್ರೀ ಸುಧಾಕರ ಚತುರ್ವೇದಿಯವರ "ವೇದೋಕ್ತ ಜೀವನ ಪಥ" ಪುಸ್ತಕವನ್ನು ಅವರ ಕೈಗಿತ್ತು  ನೀವು ಇದನ್ನು ದಾರಾವಾಹಿಯಾಗಿ  ವೇದಸುಧೆಯಲ್ಲಿ ಬರೆಯಿರಿ ಎಂದು ಕೇಳಿಕೊಂಡೆ. ಅವರು ಪ್ರಾರಂಭಿಸಿಯೇಬಿಟ್ಟರು.  ಅದೇ ಸಮಯಕ್ಕೆ ಅವರದೇ ಆದ "ಕವಿಮನ" ಮತ್ತು 'ವೇದಜೀವನ' ಬ್ಲಾಗ್ ಗಳೂ ಆರಂಭವಾದವು. 'ಕವಿಕಿರಣ'ವೂ ಆರಂಭವಾಯ್ತು. ಅಂತೂ ಇಂತೂ ಕಳೆದ ಎರಡು ವರ್ಷಗಳಿಂದ ನಾವಿಬ್ಬರೂ ಅಂತರ್ಜಾಲದಲ್ಲಿ   ನಮ್ಮ  ಚಟುವಟಿಕೆಗಳನ್ನು ಆರಂಭಿಸಿ ಕಳೆದ ವರ್ಷದಿಂದ  ನಾಗರಾಜರು  ಗೌರವ ಸಂಪಾದಕರಾಗಿ ವೇದಸುಧೆಯನ್ನು ಮುನ್ನಡೆಸುತ್ತಿದ್ದಾರೆ. ...
....ಹೀಗಿದೆ ನಮ್ಮ ಗೆಳೆತನ, ಜೊತೆಗೆ ಕವಿಸುರೇಶರೂ ವೇದಸುಧೆಯ ಒಬ್ಬ ಪ್ರಮುಖ ಲೇಖಕರು ಮತ್ತು ಬಲು ಆತ್ಮೀಯರಾಗಿ ಬಿಟ್ಟಿದ್ದಾರೆ. ನಾಗರಾಜರು ನನ್ನನ್ನು ತಮ್ಮನೆಂದು ತಿಳಿದಿದ್ದರೆ ನನಗೊಬ್ಬ ಕವಿ ಸುರೇಶರ ಹೆಸರಿನ ತಮ್ಮನೇ ಇದ್ದಾನೆ. ಕವಿ ಸುರೇಶರು ನನ್ನ ಸ್ವಂತ ತಮ್ಮನಿಗಿಂತ ಹೆಚ್ಚಾಗಿ ಬಾಂಧವ್ಯ ಉಳಿಸಿಕೊಂಡಿದ್ದಾರೆ. ಸಮಾವೇಶದ ಪ್ರಾಯೋಜಕರಾದ ಕುಮಾರಸ್ವಾಮಿಯವರೂ ಕೂಡ ಸಂಘಕಾರ್ಯುದಲ್ಲಿ ಗೆಳೆಯರು. ಸಮಾವೇಶ ನಡೆದ ಶಾಲೆಯ ಮುಖ್ಯಸ್ಥರಾದ ಶ್ರೀಯುತ ಕೃಷ್ಣಸ್ವಾಮಿಗಳು ನಮ್ಮೆಲ್ಲರಿಗೂ  ಆತ್ಮೀಯ ಹಿತೈಶಿಗಳು. ಹೀಗಿರುವಾಗ ನಾನು ಸಮಾವೇಶದಲ್ಲಿ ಪಾಲ್ಗೊಳ್ಳದಿದ್ದರೆ ಭಾರೀ ತಪ್ಪಾಗುತ್ತಿತ್ತು. ನಿಜಸ್ಥಿತಿ ಹೇಳಬೇಕೆಂದರೆ  ನನ್ನ ಆರೋಗ್ಯ ಅಷ್ಟಾಗಿ ಚೆನ್ನಾಗಿರಲಿಲ್ಲ.  ಹಾಗಾಗಿ ಲವಲವಿಕೆ ಇರಲಿಲ್ಲ. ಆದರೂ ಯಾಂತ್ರಿಕವಾಗಿ  ಕಾರ್ಯಕ್ರಮಗಳ ಚಿತ್ರೀಕರಣ ವನ್ನು ನನ್ನ ಕೈಲಾದ ಮಟ್ಟಿಗೆ ಮಾಡಿರುವೆ.  ಸಮಾವೇಶವು  ಯಶಸ್ವಿಯಾಗಿದ್ದು ಎಲ್ಲರಿಗೂ ಸಂತೋಷ ತಂದಿದೆ. ಆದರೆ ಅದರ ಹಿಂದಿರುವ  ನಾಗರಾಜರ  ಪರಿಶ್ರಮ ಮಾತ್ರ  ವಿವರಿಸಲು ಅಸಾಧ್ಯ.  ಅವರ ಅರವತ್ತನೇ ವಯಸ್ಸಿನಲ್ಲಿ  ಮೂವತ್ತು ವಯಸ್ಸಿನ ತರುಣರಂತೆ ಪರಿಶ್ರಮ ಹಾಕಿದ್ದರು. ಅವರಿಗೆ ಭಗವಂತನು ಇನ್ನೂ ಹೆಚ್ಚು  ಆರೋಗ್ಯ ನೀಡಲೆಂದು ಪ್ರಾರ್ಥಿಸುತ್ತಾ  ನನ್ನ  ಮಾತು ಮುಗಿಸುವೆ. ನನ್ನ ಪುರಾಣದಿಂದ ನಿಮಗೆ ಬೇಸರವಾಗಿರಬಹುದು. ಕ್ಷಮೆ ಇರಲಿ.
-ಹರಿಹರಪುರ ಶ್ರೀಧರ್.

3 ಕಾಮೆಂಟ್‌ಗಳು:

  1. ಆತ್ಮೀಯ ಶ್ರೀಧರ್ ರವರೇ,

    ನಿಮ್ಮ ಮಾತುಗಳಿಗೆ ನನ್ನ ಸಂಪೂರ್ಣ ಸಹಮತವಿದೆ. ಹಾಸನದಲ್ಲಿ ನಡೆದ ಈ ಯಶಸ್ವೀ ಕಾರ್ಯಕ್ರಮಕ್ಕೆ ನನ್ನಣ್ಣ ನಾಗರಾಜನ ಯೋಜನೆ, ಯೋಚನೆ ಮತ್ತು ಶ್ರಮಗಳು ಮುಖ್ಯ ಕಾರಣಗಳು. ಮನೆತನದವರ ಎಲ್ಲರೂ ಈ ಯಶಸ್ಸಿನಲ್ಲಿ ಭಾಗಿಗಳು ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ಪ್ರತಿವರ್ಷ ಆಯೋಜಿತವಾಗುತ್ತಿರುವ ಈ ಸಮಾವೇಶದ ಪೂರ್ವಭಾವಿ ಕೆಲಸಗಳು ಮಾತ್ರ ಒಂದಿಬ್ಬರೇ ನಿರ್ವಹಿಸುತ್ತಿರುವುದೂ ಕೂಡ ಗಮನಿಸಬೇಕಾದ ಅಂಶ. ಇದುವರೆಗೆ ಸದುದ್ದೇಶದಿಂದ ನಡೆದುಬರುತ್ತಿರುವ ಈ ಸತ್ಸಂಪ್ರದಾಯವನ್ನು ಮುಂದುವರಿಸುವಲ್ಲಿ ಮುಂದೆ ಅನೇಕರು, ಅದರಲ್ಲೂ ವಿಶೇಷವಾಗಿ ನಮ್ಮ 'ಯುವಕವಿ'ಗಳು ನಮ್ಮ ಹೆಗಲುಗೂಡಿಸುವರೆಂಬ ನಂಬಿಕೆ ಮತ್ತು ಸದಾಶಯ ನಮ್ಮದು. ಅಲ್ಲಿಯವರೆಗೆ ನಿಮ್ಮಂತಹವ ಇಂತಹ ಮೆಚ್ಚಿನ, ನೆಚ್ಚಿನ ಮತ್ತು ಪ್ರೋತ್ಸಾಹದಾಯಕ ನುಡಿಗಳೇ ನಮಗೆ ಆಸರೆ. HATS OFF TO YOU RAJU!!

    ಪ್ರತ್ಯುತ್ತರಅಳಿಸಿ
  2. ನಾಗರಾಜರೆ ನಿಮ್ಮನ್ನು ಹೊಗಳಿದರೆ ನಿಮಗೆ ಮಾತ್ರ ಏಕೆ ಸಂತಸ ?
    ನಮಗು ಎಲ್ಲರಿಗು ಸಂತಸವೆ
    ಪಾರ್ಥಸಾರಥಿ

    ಪ್ರತ್ಯುತ್ತರಅಳಿಸಿ