ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಶುಕ್ರವಾರ, ಜುಲೈ 27, 2012

ಮೂಢ ಉವಾಚ - 86


ಜಗಕೆ ಕಾರಣ ಒಂದು ಆಧಾರ ಒಂದು
ಒಂದನೊಂದನು ಕಂಡು ಬೆರಗಾಯಿತೊಂದು |
ಚಂದಕಿಂತ ಚಂದ ಒಂದಕೊಂದರ ನಂಟು
ಆಧಾರಕಾಧಾರನವನೆ ಮೂಢ || ..೨೯೭


ಅಲ್ಲೆಲ್ಲ ಇಲ್ಲೆಲ್ಲ ಮೇಲೆಲ್ಲ ಕೆಳಗೆಲ್ಲ
ಎಲ್ಲಿಂದ ಎಲ್ಲಿಗೂ ಮುಗಿದುದೇ ಇಲ್ಲ |
ಅವನೊಬ್ಬನೇ ಜಗದ ಎಲ್ಲೆಯನು ಬಲ್ಲ
ಕಣ್ಣರಳಿ ಬೆರಗಾಗಿ ನಿಂತಿಹನು ಮೂಢ || ..೨೯೮


ನೆಲವ ಸೋಕದಿಹ ಅನ್ನವಿಹುದೇನು
ನೆಲವ ತಾಕದಿಹ ಪಾದಗಳು ಉಂಟೇನು |
ಮಡಿಯೆಂದು ಹಾರಾಡಿ ದಣಿವುದೇತಕೆ ಹೇಳು
ದೇವಗೇ ಇಲ್ಲ ಮಡಿ ನಿನಗೇಕೆ ಮೂಢ || ..೨೯೯


ಸವಿಗವಳದ ರುಚಿಯ ಕರವು ತಿಳಿದೀತೆ
ಸವಿಗಾನದ ಸವಿಯ ನಯನ ಸವಿದೀತೆ |
ಚೆಲುವು ಚಿತ್ತಾರಗಳ ಕಿವಿಯು ಕಂಡೀತೆ
ಅವರವರ ಭಾಗ್ಯ ಅವರದೊ ಮೂಢ || ..೩೦೦
***************
-ಕ.ವೆಂ.ನಾಗರಾಜ್.


ಮಂಗಳವಾರ, ಜುಲೈ 24, 2012

ವಿಶೇಷ ರೀತಿಯ ಹುಟ್ಟುಹಬ್ಬ


ದಿನಾಂಕ 22.7.2012ರ ಭಾನುವಾರ ನಮಗೆಲ್ಲಾ ಹಬ್ಬದ ವಾತಾವರಣ. ಎರಡು ಕಾರ್ಯಕ್ರಮಗಳು. ಎರಡರಲ್ಲೂ ತಿಪಟೂರು ಚಿನ್ಮಯ ಮಿಷನ್ನಿನ ಬ್ರಹ್ಮಚಾರಿ ಶ್ರೀ ಸುಧರ್ಮ ಚೈತ್ನಯರು ಪಾಲುಗೊಂಡಿದ್ದು ನಮ್ಮೆಲ್ಲರ ಸಂತಸವನ್ನು ಇಮ್ಮಡಿಗೊಳಿಸಿತ್ತು. ಹಾಸನದಲ್ಲಿ ಆರಂಭವಾದ ಚಿನ್ಮಯ ಸತ್ಸಂಗದಎರಡನೇ ತಿಂಗಳ ಕಾರ್ಯಕ್ರಮ ಒಂದಾದರೆ, ಎರಡನೆಯದು ಬೆಂಗಳೂರಿನಲ್ಲಿರುವ ಮಗುವಿನ ಹುಟ್ಟುಹಬ್ಬವನ್ನು ಹಾಸನದ ವೃದ್ಧಾಶ್ರಮದಲ್ಲಿ ಆಚರಿಸಿದುದು!! ವೇದಸುಧೆಯ ಗೌರವ ಸಂಪಾದಕರಾದ ಶ್ರೀ ಕವಿ ನಾಗರಾಜರದ್ದು ಯಾವಾಗಲೂ ವಿಶಿಷ್ಟವಾದ ಚಿಂತನೆ. ಬೆಂಗಳೂರಿನಲ್ಲಿರುವ ಮಗಳು ಬಿಂದು ಅಪ್ಪನಿಗೆ ಹೇಳಿದಳು,
"ಅಕ್ಷಯಳ ಹುಟ್ಟುಹಬ್ಬಕ್ಕೆ ಏನಾದರೂ ಒಂದಿಷ್ಟು ದಾನ ಕೊಡಬೇಕು, ಯಾವುದಾದರೂ ದೇವಸ್ಥಾನಕ್ಕೆ ಹಣ ಕೊಡೋಣ."
ನಾಗರಾಜ್ ಹೇಳಿದರು, "ನೋಡಮ್ಮಾ,  ಜೀವಂತ ದೇವರಿಗೆ ಕೊಟ್ಟರೆ ಸಾರ್ಥಕ ವಾಗುತ್ತೆ!"
"ಏನು ಹಾಗಂದ್ರೆ?" ಮಗಳು ಕೇಳಿದಳು.
"ನೋಡು ಬಿಂದು, ಈ ಸಮಾಜದಲ್ಲಿ ಜನರು ಒಳ್ಳೆಯ ರೀತಿಯಲ್ಲಿಯಲ್ಲಾಗಲೀ, ಕೆಟ್ಟ ರೀತಿಯಲ್ಲಾಗಲೀ  ಬೇಕಾದಷ್ಟು ಹಣ ಮಾಡ್ತಾರೆ, ಸಾಮಾನ್ಯವಾಗಿ ತಾವು ಮಾಡಿದ ಪಾಪ ಹೋಗಿಬಿಡುತ್ತೆ, ಅನ್ನೋ ಭ್ರಮೆಯಲ್ಲಿ ದೇವಸ್ಥಾನಗಳಿಗೆ ಸಾಕಷ್ಟು ಹಣ ಕೊಡ್ತಾರೆ. ಹಾಗಾಗಿ ದೇವಸ್ಥಾನಗಳಿಗೆ ಹಣ ಕೊಡುವ ಜನರು ಸಮಾಜದಲ್ಲಿ ಸಾಕಷ್ಟು ಇದ್ದಾರೆ. ಅದರ ಬದಲು  ನಿನ್ನ ಮಗಳ ಹುಟ್ಟುಹಬ್ಬವನ್ನು ಯಾವುದಾದರೂ  ಅನಾಥಾಶ್ರಮದಲ್ಲೋ, ಅಥವಾ ವೃದ್ಧಾಶ್ರಮದಲ್ಲೋ  ಮಾಡೋಣ. ಅಲ್ಲಿನ ನಿವಾಸಿಗಳೊಡನೆ ಸಂತೋಷ ಹಂಚಿಕೊಳ್ಳೋಣ. ಅವರೆಲ್ಲಾ ಜೀವಂತ ದೇವರುಗಳು. ಈ ದೇವರುಗಳ ಮನಸ್ಸನ್ನು ಸ್ವಲ್ಪ ಸಂತೋಷ ಪಡಿಸಿದರೆ ಭಗವಂತ ಮೆಚ್ಚುತ್ತಾನೆ."
ತಂದೆಯ ಮಾತಿಗೆ ಮಗಳು,ಅಳಿಯ ಒಪ್ಪಿದರು. "ನೀವೇ ಏನು ಬೇಕಾದರೂ ಪ್ಲಾನ್ ಮಾಡಿ, ಹಣ  ನಮ್ಮದು, ಪ್ಲಾನ್ ನಿಮ್ಮದು" ಎಂದರು. ಸರಿ. ಯೋಜನೆ ರೂಪಿಸಿದ್ದಾಯ್ತು. ಹೇಗೂ   ನಮಗೆಲ್ಲಾ ಪರಿಚಿತರಾದ  ಡಾ. ಹೆಬ್ಬಾರ್  ವೃದ್ಧಾಶ್ರಮವನ್ನು ನಡೆಸುತ್ತಿದ್ದಾರೆ, ಮಳೆಗಾಲ ಬೇರೆ!  ಅಲ್ಲಿನ ನಿವಾಸಿಗಳಿಗೆ  ಬೆಚ್ಚಗಿನ ಸ್ವೆಟರ್ ಮತ್ತು ಟವೆಲುಗಳನ್ನು ಕೊಡಲು ತೀರ್ಮಾನಿಸಿ ಕಾರ್ಯಕ್ರಮ ನಿಶ್ಚಯ ಗೊಳಿಸಿದ್ದಾಯ್ತು. ದಿನಾಂಕ 22.7.2012 ರಂದು ಸತ್ಸಂಗ ನಡೆಸಲು ತಿಪಟೂರು ಚಿನ್ಮಯ ಮಿಷನ್ನಿನ ಬ್ರಹ್ಮಚಾರಿ ಶ್ರೀ ಸುಧರ್ಮ ಚೈತನ್ಯರು ಬರುತ್ತಾರೆ, ಅವರಿಂದ ಅಲ್ಲೂ ಒಂದು ಸತ್ಸಂಗ ಮಾಡಿ  ಸ್ವೆಟರ್ ವಿತರಿಸಿ, ಎಲ್ಲರೊಡನೆ ಸಿಹಿ ಊಟಮಾಡಿಬರಲು ತೀರ್ಮಾನಿಸಿದೆವು.
     ಈಶಾವಾಸ್ಯಮ್ ನಲ್ಲಿ ಸಂಜೆ 6.00 ರಿಂದ 7.00 ರವರಗೆ ಸತ್ಸಂಗ ನಡೆದ ಕೂಡಲೇ ನಾಲ್ಕು ಕಾರುಗಳು ವೃದ್ಧಾಶ್ರಮತ್ತ ಹೊರಟವು. ವೃದ್ಧಾಶ್ರಮದಲ್ಲಿ ಕೆಲವು ಮಕ್ಕಳಿಗೂ  ಆಶ್ರಯ ಕೊಟ್ಟಿದ್ದಾರೆ. ಆ  ಮಕ್ಕಳಂತೂ ಕುಳಿದು ಕುಪ್ಪಳಿಸಿದವು. ಸುಧರ್ಮ ಚೈತನ್ಯರ ಸವಿಯಾದ ಮಾತುಗಳು, ಭಜನೆ, ಮಕ್ಕಳ ಒಡನಾಟದಿಂದ ಎಲ್ಲರೂ ಆನಂದ ಸಾಗರದಲ್ಲಿ ತೇಲಿದೆವು.  'ಅಕ್ಷಯಾ,  ನೀನು ನೂರ್ಕಾಲ ಬಾಳಮ್ಮಾ' ಎಂದು ಎಲ್ಲರೂ ಹರಸುತ್ತಾ ಬಿಂದು ಮತ್ತು  ಅವರ ಪತಿ ರಘು ಅವರ ಉದಾರತನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ, ಭಗವಂತನು  ಅವರ ಕುಟುಂಬಕ್ಕೆ ಆಯುರಾರೋಗ್ಯ ಐಶ್ವರ್ಯವನ್ನು ದಯಪಾಲಿಸಲೆಂದು ಹರಸಿದೆವು. ಅಂತೂ  ಒಂದು ವಿಶೇಷ ಕಾರ್ಯಕ್ರಮವನ್ನು ರೂಪಿಸಿದ ಕೀರ್ತಿ ಕವಿನಾಗರಾಜರಿಗೂ ಮತ್ತು ಅವರ  ಪತ್ನಿ ಶ್ರೀಮತಿ ಭಾರತಿಯವರಿಗೂ ಸಲ್ಲುತ್ತದೆ. ವೇದಸುಧೆಯ ಓದುಗ ಮಿತ್ರರೂ ಕೂಡ  ತಮ್ಮ ಮನೆಯ ಯಾವುದೇ ವಿಶೇಷ ಕಾರ್ಯಕ್ರಮಗಳನ್ನು ಈ ಆಶ್ರಮದಲ್ಲಿ ಆಚರಿಸಬಹುದೆಂದು ತಿಳಿಸುತ್ತಾ ಹೀಗೆ ಮುಂದೆ  ಬರುವ ಎಲ್ಲರಿಗೂ ತನ್ನ ಎಲ್ಲಾ ಸಹಕಾರವನ್ನೂ ನೀಡಲು ವೇದಸುಧೆ ಬಳಗ ಮತ್ತು ಹಾಸನದ ಚಿನ್ಮಯ ಸತ್ಸಂಗವು ಸಿದ್ಧವಿದೆ ಎಂದು ತಿಳಿಸಲು ಸಂತೋಷಿಸುತ್ತೇವೆ.

ಶ್ರೀ ಸುಧರ್ಮ ಚೈತನ್ಯರವರು ಸಾಂದರ್ಭಿಕವಾಗಿ  ಆಡಿದ ಮಾತುಗಳನ್ನು ಇಲ್ಲಿ ಅಲಿಸಬಹುದು: 


                    ವೃದ್ಧಾಶ್ರಮದಲ್ಲಿ ಒಟ್ಟು ಸುಮಾರು ಅರವತ್ತು ಜನ ನಿವಾಸಿಗಳಿದ್ದು  ಒಂದು ದಿನದ ಊಟೋಪಚಾರಕ್ಕೆ ಐದು ಸಾವಿರ ರೂಗಳನ್ನು ನಿಗದಿಪಡಿಸಿರುತ್ತಾರೆ. 

ಈಶಾವಾಸ್ಯಮ್ ನಲ್ಲಿ ಸತ್ಸಂಗದ ಒಂದು ನೋಟ

ಈಶಾವಾಸ್ಯಮ್ ನಲ್ಲಿ ಸತ್ಸಂಗದ ಒಂದು ನೋಟ

ಈಶಾವಾಸ್ಯಮ್ ನಲ್ಲಿ ಸತ್ಸಂಗದ ಒಂದು ನೋಟ

ಈಶಾವಾಸ್ಯಮ್ ನಲ್ಲಿ ಸತ್ಸಂಗದ ಒಂದು ನೋಟ

ವೃದ್ಧಾಶ್ರಮದ ಬಂಧುಗಳ ನಡುವೆ


ವೃದ್ಧಾಶ್ರಮದ ಬಂಧುಗಳ ನಡುವೆ

ವೃದ್ಧಾಶ್ರಮದ ಬಂಧುಗಳ ನಡುವೆ

ವೃದ್ಧಾಶ್ರಮದಲ್ಲಿರುವ ಮಕ್ಕಳೊಡನೆ

ವೃದ್ಧಾಶ್ರಮದ ಬಂಧುಗಳ ನಡುವೆ

ವೃದ್ಧಾಶ್ರಮದಲ್ಲಿರುವ ಮಕ್ಕಳೊಡನೆ

ವೃದ್ಧಾಶ್ರಮದಲ್ಲಿರುವ ಮಕ್ಕಳೊಡನೆ

ವೃದ್ಧಾಶ್ರಮದಲ್ಲಿರುವ ಮಕ್ಕಳೊಡನೆ

ವೃದ್ಧಾಶ್ರಮದಲ್ಲಿರುವ ಮಕ್ಕಳೊಡನೆ

ವೃದ್ಧಾಶ್ರಮದ ಬಂಧುಗಳ ನಡುವೆ

ವೃದ್ಧಾಶ್ರಮದ ಬಂಧುಗಳ ನಡುವೆ

ವೃದ್ಧಾಶ್ರಮದ ಬಂಧುಗಳ ನಡುವೆ

ವೃದ್ಧಾಶ್ರಮದಲ್ಲಿರುವ ಮಕ್ಕಳೊಡನೆ

ಬೆಂಗಳೂರಿನಲ್ಲಿರುವ ಮೊಮ್ಮಗಳ ಹುಟ್ಟುಹಬ್ಬವನ್ನು 
 ಹಾಸನದ ವೃದ್ಧಾಶ್ರಮದಲ್ಲಿ ಆಚರಿಸುವಾಗ 
 ಕವಿ ನಾಗರಾಜ್  ತಮ್ಮನ್ನು ತಾವು ಮರೆತಿದ್ದರು.

ವೃದ್ಧಾಶ್ರಮದ ಮಕ್ಕಳೊಡನೆ ಹೆಚ್.ಎಸ್.ರಮೇಶ್


                                          

  

-ಹರಿಹರಪುರ ಶ್ರೀಧರ್.

ಸೋಮವಾರ, ಜುಲೈ 16, 2012

ಆರು ಮಕ್ಕಳ ತಾಯಿ ಬಿನ್ನಾಣಗಿತ್ತಿ


ಆರು ಮಕ್ಕಳ ತಾಯಿ ಬಿನ್ನಾಣಗಿತ್ತಿ
ಚೆಲುವೆ ಮಾಯವ್ವ ಎಂಥ ಮಕ್ಕಳ ಹೆತ್ತಿ | || ಪ || 


ಸುಖವು ಸಿಕ್ಕುವುದೆಂದು ಕುಣಿಸುವನು ಒಬ್ಬ
ವಿವೇಕವನೆ ಮರೆಸಿ ತುಳಿಯುವವನೊಬ್ಬ
ಕೂಡಿಡುವ ಕಟಪವನು ಕಲಿಸುವವನೊಬ್ಬ
ಒಬ್ಬೊಬ್ಬರೇ ಸಾಕು ನರಬಾಳು ಹಾಳವ್ವ || ೧ ||


ನನದೆಂಬ ಭಾವವನು ಮೂಡಿಸುವನೊಬ್ಬ
ಸೊಕ್ಕಿನಿಂ ಮೆರೆಯೆನುತ ಉಬ್ಬಿಸುವನೊಬ್ಬ
ಉರಿವ ಒಡಲಿಗೆ ತುಪ್ಪ ಹಾಕುವನು ಒಬ್ಬ
ಒಬ್ಬೊಬ್ಬರೇ ಸಾಕು ನರಬಾಳು ಗೋಳವ್ವ || ೨ ||


ಅರಿಗಳಾರೆನಿಸಿ ಜಗದಿ ಮೆರೆದಿಹರವ್ವ್ವ
ಒಬ್ಬರಿಗೆ ಒಬ್ಬರು ಜೊತೆಯಾಗಿ ಇಹರವ್ವ
ಶೂರಾಧಿಶೂರರೇ ಮಣ್ಣು ಮುಕ್ಕಿಹರವ್ವ
ಮೋಹಿನಿ ಮಾಯವ್ವ ನಿಷ್ಕರುಣಿ ನೀನವ್ವ || ೩ ||


ಕಾಮ ಕ್ರೋಧಗಳು ಹಾಳು ಮಾಡಿದವವ್ವ
ಮದ ಮಚ್ಚರಗಳು ಚೂರಿ ಹಾಕಿಹವವ್ವ
ಲೋಭ ಮೋಹಗಳು ತುಳಿದಿಹವು ಕಾಣವ್ವ 
ಎಷ್ಟು ಕಾಡುತಿಯವ್ವ ದೇವರೇ ದಿಕ್ಕವ್ವ || ೪ ||
*************
-.ಕವೆಂ.ನಾಗರಾಜ್.

ಬುಧವಾರ, ಜುಲೈ 11, 2012

ಮೂಢ ಉವಾಚ - 85

ಬಯಸಿದರು ಸಾವೆ ಬಯಸದಿದ್ದರು ಸಾವೆ
ಬೇಡವೆಂದರೆ ನೀನು ಬರದಿಹುದೆ ಸಾವು |
ಬೇಡದಿರು ಮನವೆ ಬೇಡದಿಹ ಸಾವ
ಅಡ್ಡದಾರಿಯಲಿ ನುಗ್ಗದಿರು ಮೂಢ || ..293


ಜೀವವಿರುವ ದೇಹದಲ್ಲಿ ದೇವನಿರುವ ಕಾಣು
ಜೀವವಿರದ ದೇಹವದು ಹರಿದ ಬಟ್ಟೆ ತಾನು |
ಸುಟ್ಟರೂ ಹೂತರೂ ಅದಕೆ ತಿಳಿಯದಲ್ಲ
ಸಂಸ್ಕಾರ ಸಿಗಬೇಕು ಮನಕೆ ಮೂಢ || ..294


ಹುಟ್ಟು ಮೊದಲಲ್ಲ ಸಾವು ಕೊನೆಯಲ್ಲ
ಹುಟ್ಟು ಸಾವಿನ ಕೊಂಡಿ ಬದುಕಿನಾ ಬಂಡಿ |
ಹಿಂದಕೋ ಮುಂದಕೋ ಬಂಡಿ ಸಾಗುವುದು
ನಶಿಸಿದರೆ ಏರುವೆ ಹೊಸಬಂಡಿ ಮೂಢ || ..295


ಬಂಡಿಗೊಡೆಯನು ನೀನೆ ಪಯಣಿಗನು ನೀನೆ
ಅವನ ಕರುಣೆಯಿದು ಅಹುದಹುದು ತಾನೆ |
ಗುರಿಯ ಅರಿವಿರಲು ಸಾರ್ಥಕವು ಪಯಣ
ಗುರಿಯಿರದ ಪಯಣ ವ್ಯರ್ಥ ಮೂಢ || ..296
************
-ಕ.ವೆಂ.ನಾಗರಾಜ್.

ಸೋಮವಾರ, ಜುಲೈ 9, 2012

ಅಭ್ಯಾಸ - ದುರಭ್ಯಾಸ


     ಎಂದಿನಂತೆ ಮಂಕ, ಮಡ್ಡಿ, ಮರುಳ, ಮೂಢರು ಸಾಯಂಕಾಲದ ವಾಕಿಂಗ್ ಮುಗಿಸಿ ಕಲ್ಲಿನ ಕಟ್ಟೆಯ ಮೇಲೆ ಕುಳಿತು ಮಾತಿನ ಓಟ ಮುಂದುವರೆಸಿದ್ದರು. ಮಂಕ ಮಡ್ಡಿಯ ಜೇಬಿನ ಕಡೆ ಕಣ್ಣು ಹಾಯಿಸಿದವನು ಕಡಲೆಕಾಯಿ ಮಾರುತ್ತಿದ್ದವನನ್ನು 'ಏಯ್, ಕಡಲೇಕಾಯೀ' ಅಂತ ಕರೆದ. ಅವನು ಬಂದಾಗ 'ಹತ್ತು ರೂಪಾಯಿ ಕಡಲೆಕಾಯಿ ಕೊಡು' ಅಂದ. ಅವನು ಕೊಟ್ಟ ಮೇಲೆ ಜೇಬಿಗೆ ಕೈಹಾಕಿಕೊಂಡು 'ಅಯ್ಯೋ, ಪ್ಯಾಂಟು ಬದಲಾಯಿಸಿದೆ, ಹಳೆಯ ಪ್ಯಾಂಟಿನಲ್ಲಿದ್ದ ದುಡ್ಡನ್ನು ಹಾಕಿಕೊಳ್ಳುವುದನ್ನೇ ಮರೆತೆ' ಅಂದ. ಉಳಿದವರು ಮಿಕಿಮಿಕಿ ಮುಖ ನೋಡಿಕೊಂಡು ಮಡ್ಡಿಯ ಕಡೆ ನೋಡಿದರು. ಮಡ್ಡಿ ದುಡ್ಡು ಕೊಟ್ಟ. ಅಷ್ಟು ಹೊತ್ತಿಗೆ ಮುಠ್ಠಾಳ ಸಹ ಜೊತೆಯಾದ. ಎಲ್ಲರೂ ಕಡಲೆಕಾಯಿಗೆ ಕೈ ಹಾಕಿದರು. 
ಮೂಢ:  ಲೋ, ಮಂಕ, ನೀನು ಹೀಗೆ ಮಾಡ್ತಾ ಇರೋದು ಇದೇ ಮೊದಲಲ್ಲ. ಈ ದುರಭ್ಯಾಸ ಬಿಟ್ಟುಬಿಡು. 
ಮಂಕ:  ನಾನೇನು ಮಾಡಲಿ, ಮರೆವು ಜಾಸ್ತಿ. ಇನ್ನು ಮುಂದೆ ಜೇಬಲ್ಲಿ ದುಡ್ಡು ಇರೋದನ್ನು ನೋಡಿಕೊಂಡು ಕಡಲೇಕಾಯಿಯವನನ್ನು ಕರೀತೀನಿ. ಈ ದುರಭ್ಯಾಸ ಅನ್ನೋದು ಮೆತ್ತನೆ ಕುರ್ಲಾನ್ ಬೆಡ್ ಇದ್ದ ಹಾಗೆ, ಮಲಗಿಕೊಳ್ಳೋದು ಸುಲಭ, ಏಳೋದು ಕಷ್ಟ.
ಮೂಢ:  ದುರಭ್ಯಾಸ ಬಯಸೋರು ನಾವೇ. ಆಮೇಲೆ ದುರಭ್ಯಾಸಗಳು ನಮ್ಮನ್ನೇ ಬಯಸುತ್ತವೆ. ಅವನ್ನು ನಾವು ಗೆಲ್ಲಬೇಕು, ಇಲ್ಲದಿದ್ದರೆ ಅವೇ ನಮ್ಮನ್ನು ಗೆಲ್ಲುತ್ತವೆ.
ಮಡ್ಡಿ:  ಅರ್ಥ ಆಗೋ ಹಾಗೆ ಮಾತನಾಡಿರೋ. ಪೆದ್ದ ಪೆದ್ದಾಗಿ ಮಾತಾಡ್ತೀರಿ. ನಿಮ್ಮ ಜೊತೆ ಸೇರಿಕೊಂಡು ನನ್ನನ್ನೂ ಎಲ್ಲರೂ ಪೆದ್ದ ಅಂತಾರೆ.
ಮರುಳ:  ನೀನು ಪೆದ್ದ ಅಲ್ಲದೇ ಇದ್ದರೆ ನಮಗೆ ಕಡಲೇಕಾಯಿ ಕೊಡಿಸ್ತಾ ಇದ್ಯಾ?
ಮುಠ್ಠಾಳ:  ದುರಭ್ಯಾಸದ ಹಾಗೆ ಒಳ್ಳೆಯ ಅಭ್ಯಾಸ ಸಹ ಕೆಟ್ಟದು ಕಣ್ರೋ. ನೀವೆಲ್ಲಾ ಬುರುಡೆ ಖಾಲಿ ಇದ್ದರೂ ಬುರುಡೆ ಬಿಡೋರು. ನಮ್ಮ ಮನೆಯಲ್ಲಿ ಸೇರಿಕೊಂಡರೆ ನಾನು ತಿಂಡಿ, ಕಾಫಿ ಕೊಡ್ತೀನಿ, ಪಾಪ ಅಂತ. ಇಲ್ಲಿ ಮಡ್ಡಿ ಕಡಲೆಕಾಯಿ ಕೊಡಿಸ್ತಾನೆ. ಈ ಒಳ್ಳೆಯ ಅಭ್ಯಾಸವೂ ದುರಭ್ಯಾಸವೇ ಅಲ್ಲವೇನೋ ಮಡ್ಡಿ? 
ಮಡ್ಡಿ:  ಹೋಗಲಿ ಬಿಡು, ಬದಲಿಗೆ ಬಿಟ್ಟಿ ಉಪದೇಶ ಕೊಡ್ತಾರಲ್ಲಾ! ಏಯ್, ಮೂಢಾ, ನಿನ್ನ ತಮ್ಮ ಬುರುಡೆ ಡಾಕ್ಟರ್ ಇದಾನಲ್ಲಾ, ಅವನ ಹತ್ತಿರ ಟ್ರೀಟ್‌ಮೆಂಟಿಗೆ ಅಂತ ತರಲೆ ಸುದ್ದಿ ಚಾನೆಲ್ಲಿನ ರಾಂಗನಾತ ಹೆಂಡತಿ ಜೊತೆ ಬಂದಿದ್ದನಂತೆ. ಯಾಕಂತೋ?
ಮೂಢ:  ಅವನನ್ನು ಬುರುಡೆ ಡಾಕ್ಟರ್ ಅನ್ನಬೇಡ. ಅವನು ಫೇಮಸ್ ಸೈಕಾಲಾಜಿಸ್ಟು. ಪ್ರತಿ ನಿತ್ಯ ಯಾವಾಗಲೂ ನಿತ್ಯಾ ನಿತ್ಯಾ ನಿತ್ಯಾ ಅಂತಾ ಇರ್ತಾನೆ ಅಂತ ರಾಂಗನಾತನ ಹೆಂಡತಿ ಅವನನ್ನು ಅಲ್ಲಿಗೆ ಕರೆದುಕೊಂಡು ಹೋಗಿ ಗೋಳಾಡಿದಳಂತೆ. ಲಿಮ್ಕಾ ರೆಕಾರ್ಡಿಗೆ ಸೇರಿಸಲಿಲ್ಲ ಅಂತ ಅವನಿಗೆ ತಲೆ ಕೆಟ್ಟ ಹಂಗೆ ಆಗಿದೆಯಂತೆ.
ಮಂಕ:  ಲಿಮ್ಕಾ ರೆಕಾರ್ಡಾ? ಯಾಕೆ?
ಮೂಢ:  ಹೂಂ. ಧಾರಾವಾಹಿಗಳು ೫೦೦೦-೬೦೦೦ ಎಪಿಸೋಡುಗಳು ಆಗ್ತಾ ಇರೋದು ಈಗ ಮಾಮೂಲು. ಅಜ್ಜ ನೋಡ್ತಾ ಇದ್ದ ಸೀರಿಯಲ್ ಅನ್ನು ಈಗ ಮೊಮ್ಮಗ ನೋಡ್ತಾ ಇದಾನೆ. ಆದರೆ ನಿತ್ಯಾನಂದನ ಸುದ್ದಿಯನ್ನು ಈರೀತಿ ಸೀರಿಯಲ್ ಆಗಿ ಪ್ರಕಟಿಸುತ್ತಿರುವುದು, ಅದೂ ನಿರಂತರವಾಗಿ ವಿಶೇಷ ಅಂತೆ. ಅಲ್ಲದೆ, ಯಾವುದೇ ಚಾನೆಲ್ಲಿನವರು ಯಾವುದೇ ಸುದ್ದಿಯನ್ನು ಇಷ್ಟು ದೀರ್ಘವಾಗಿ ಪ್ರಕಟಿಸಿಲ್ಲವಂತೆ. ಇದನ್ನು ಲಿಮ್ಕಾ ರೆಕಾರ್ಡಿಗೆ ಸೇರಿಸಲು ಬರೆದಿದ್ದಾರಂತೆ. ಲಿಮ್ಕಾದವರಿಂದ ಏನೂ ಉತ್ತರ ಬಂದಿಲ್ಲವಂತೆ. ಅದಕ್ಕೇ ಅವರಿಗೆ ತಲೆ ಕೆಟ್ಟ ಹಾಗೆ ಆಗಿದೆಯಂತೆ. ರಾಂಗನಾತ ನಿದ್ದೆ ಮಾಡುವಾಗಲೂ ನಿತ್ಯಾ, ನಿತ್ಯಾ ಅಂತ ಕನವರಿಸುತ್ತಾರಂತೆ. 
ಮರುಳ:  ನಿನ್ನ ತಮ್ಮ ಔಷಧಿ ಕೊಟ್ಟನಾ? ಈಗ ಸರಿ ಆದನಾ?
ಮೂಢ: ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕಂತೆ. ರಾಂಗನಾತ 15 ದಿನ ನಿತ್ಯಾನಂದನ ಸೇವೆ ಮಾಡಿಕೊಂಡಿದ್ದು ಬರಲಿ, ಆಮೇಲೆ ಎಲ್ಲಾ ಸರಿಯಾಗುತ್ತೆ ಅಂತ ನನ್ನ ತಮ್ಮ ಹೇಳಿದನಂತೆ.
ಮಡ್ಡಿ:  ಬಿಡ್ರೋ, ದೊಡ್ಡವರ ವಿಷಯ ನಮಗೇಕೆ. ನಮ್ಮದೇ ನಮಗೆ ಸಾಕಷ್ಟು ಇದೆ. ನೋಡು, ಮರುಳ ಎಷ್ಟು ಸಂಭಾವಿತ. ಆದರೆ ಅವನ ಮಗ ದಾರೀಲೇ ಕುಡ್ಕೊಂಡು ಬೀಳ್ತಿರ್ತಾನೆ. ಅವನಿಗೆ ಕುಡಿಯೋದನ್ನು ಯಾರು ಕಲಿಸಿದರೋ ಏನೋ. ಮರುಳ ಪಾಪ, ಒಳಗೆ ಕೊರಗಿದ್ದರೂ ಮೇಲೆ ಹೇಗೆ ನಗುನಗುತ್ತಾ ಇರ್ತಾನೆ! 
ಮೂಢ:  ಹೇಗೆ ಕುಡಿಯಬೇಕು, ಹೇಗೆ ಸಿಗರೇಟು ಸೇದಬೇಕು ಅನ್ನುವುದನ್ನು ಕಲಿಸಕ್ಕೆ ಯಾವುದಾದರೂ ಸ್ಕೂಲ್ ಇದೆಯಾ? ಇಲ್ಲ. ಕುಡಿಯುವುದನ್ನು ಹೇಗೆ ಬಿಡಬೇಕು ಅನ್ನುವುದನ್ನು ಹೇಳಿಕೊಡುವುದಕ್ಕೆ ತುಂಬಾ ಜನ ಇದಾರೆ. ಕೆಟ್ಟ ಅಭ್ಯಾಸ ಕಲಿಯುವುದಕ್ಕೆ ಯಾವ ಸ್ಕೂಲೂ ಬೇಡ, ಗುರುಗಳೂ ಬೇಡ. 
ಮರುಳ:  ಅದು ನಿಜ. ಯಾರೂ ಹೇಳಿಕೊಡದೇ ಇದ್ದರೂ 'ಅಪ್ಪ ಲೂಸಾ, ಅಮ್ಮ ಲೂಸಾ' ಹಾಡು ಕಲಿತು ಪೂರ್ತಿ ಹೇಳ್ತಾರೆ. ಆದರೆ ಹೇಳಿಕೊಟ್ಟರೂ ಸಹ 'ಜಯಭಾರತ ಜನನಿಯ ತನುಜಾತೆ' ಗೀತೆ ಪೂರ್ತಿ ಬಾಯಿಗೆ ಬರಲ್ಲ. ನನ್ನ ಕುಡುಕ ಮಗ ಕುಡಿದು ಹಾಳಾಗಲಿ, ನನಗೇನೂ ಬೇಸರವಿಲ್ಲ, ಆದರೆ ಅವನ ಸಂಸಾರಕ್ಕೂ ನೆಮ್ಮದಿಯಿಲ್ಲವಲ್ಲಾ ಅಂತ ನನಗೆ ಕೊರಗು ಕಣ್ರೋ. 
ಮಂಕ:  ಬೇಜಾರು ಮಾಡಿಕೋ ಬೇಡ. ದೇವರು ಇದ್ದಾನೆ. ಕುಡಿಯೋದು, ಸಿಗರೇಟು ಸೇದೋದು, ಇಂತಹ ದುರಭ್ಯಾಸಗಳು ಅವರನ್ನು ಮಾತ್ರ ಅಲ್ಲ ಅವರನ್ನು ನಂಬಿದವರನ್ನೂ ಹಾಳು ಮಾಡ್ತಾವೆ. ಗೊತ್ತಿಲ್ಲದಂತೆ ಅವರು ಕೆಳಕ್ಕೆ ಬೀಳ್ತಾನೇ ಹೋಗ್ತಾರೆ. ನಾವೂ ಹೇಳಿ ನೋಡ್ತೀವಿ. ಎಲ್ಲಾ ಸರಿಯಾಗುತ್ತೆ. ಯೋಚನೆ ಮಾಡಬೇಡ.
ಮರುಳ:  ನನ್ನ ಮಗ ಏನು ಹೇಳ್ತಾನೆ ಗೊತ್ತಾ? 'ಕುಡಿಯೋದು ನಿಮ್ಮ ದೃಷ್ಟಿಯಲ್ಲಿ ದುರಭ್ಯಾಸ ಇರಬಹುದು, ನನ್ನ ದೃಷ್ಟಿಯಲ್ಲಿ ಅಲ್ಲ. ಕುಡಿಯೋದರಿಂದಲೇ ನಾನು ಸರಿಯಾಗಿರೋದು' ಅಂತಾನೆ. ಹಾಳು ಬಿದ್ದು ಹೋಗಲಿ ಬಿಡು.
ಮುಠ್ಠಾಳ: (ಇದುವರೆವಿಗೂ ಎತ್ತಲೋ ನೋಡುತ್ತಿದ್ದವನು ಈಗ ಮೂಗು ತೂರಿಸಿದ):  ನಿಮಗೆ ಗೊತ್ತಾ? ನನಗೆ ಒಂದು ವಿಷಯ ಗೊತ್ತಾಯಿತು. ಒಳ್ಳೆಯ ಅಭ್ಯಾಸಗಳು ಇವೆಯಲ್ಲಾ, ಅವನ್ನು ಬಿಡುವುದು ಸುಲಭ. ಕೆಟ್ಟ ಅಭ್ಯಾಸಗಳನ್ನು ಬಿಡುವುದು ಕಷ್ಟ.
ಮಡ್ಡಿ:  ಕತ್ತಲೆ ಆಗ್ತಾ ಬಂತು. ಹೋಗೋಣವಾ? ಮೂಢರಾಜಾ, ನಿನ್ನ ಕೊನೆ ಮಾತು ಹೇಳಿಬಿಡು.
ಮೂಢ:  ಈ ಅಭ್ಯಾಸಗಳು, ಕೆಟ್ಟದ್ದೋ, ಒಳ್ಳೆಯದೋ, ನಾವು ಮಾಡಿಕೊಳ್ಳೋದು. ಅವನ್ನು ಹಿಡಿದುಕೊಂಡರೆ ಬಿಡಿಸಿಕೊಳ್ಳೋದು ಕಷ್ಟ. ಅವು ನಮ್ಮ ಕಂಟ್ರೋಲಿನಲ್ಲಿದ್ದರೆ ಒಳ್ಳೆಯದು. ಇಲ್ಲದಿದ್ದರೆ ಮುಗಿದೇ ಹೋಯಿತು. ನಿಮ್ಮ ಒಳ್ಳೆಯ ಗುಣಗಳಿಂದ ಕೆಟ್ಟ ಗುಣಗಳನ್ನು ಕಳೆದರೆ ಉಳಿಯುವುದೇ ಜನರು ನಿಮಗೆ ಕೊಡುವ ಬೆಲೆ.
ಮಂಕ:  ನಮ್ಮ ಬೆಲೆ ಎಷ್ಟು ಅಂತ ಆಮೇಲೆ ಲೆಕ್ಕ ಹಾಕೋಣ. ಅಯ್ಯಾ ಮುಠ್ಠಾಳ, ನಮಗೆ ನೀನೇ ಗತಿ. ತ್ರೀ ಬೈ ಫೈವ್ ಕಾಫಿ ಕೊಡಿಸಯ್ಯಾ, ತಂದೆ.
     'ನಿಮ್ಮ ಬೆಲೆ ನನಗೆ ಗೊತ್ತಿಲ್ವ' ಅಂದ ಮುಠ್ಠಾಳ ಎಲ್ಲರನ್ನೂ ಕರೆದುಕೊಂಡು ಕಾಫೀಶಾಪಿಗೆ ಹೊರಟ. 

ಭಾನುವಾರ, ಜುಲೈ 1, 2012

ಪರಮಾತ್ಮನನ್ನು ಪೂಜಿಸುವ ಅಗತ್ಯವಿದೆಯೇ? ಪರಮಾತ್ಮನಿಗೆ ಆತ್ಮನ ಮೇಲೆ ಅಧಿಕಾರವಿದೆಯೇ?


     ದಿನಾಂಕ 13-06-2012ರಂದು  ವೇದಾಧ್ಯಾಯಿ  ಶ್ರೀ ಸುಧಾಕರಶರ್ಮರವರನ್ನು  ನನ್ನ ಕೆಲವು ಸಂಶಯಗಳಿಗೆ ಉತ್ತರ ಪಡೆಯುವ ಸಲುವಾಗಿ ಭೇಟಿ ಮಾಡಿದ್ದೆ. ಆ ಸಂದರ್ಭದಲ್ಲಿ ನಾನು ಕೇಳಿದ್ದ ಒಂದು ಪ್ರಶ್ನೆ ಇದು: 
    "ಶರ್ಮಾಜಿ, ಜೀವಾತ್ಮ, ಪರಮಾತ್ಮ ಮತ್ತು ಜಡ ಪ್ರಕೃತಿ - ಈ ಮೂರೂ ಸಂಗತಿಗಳು ಅನಾದಿ, ಅನಂತ ಮತ್ತು ಶಾಶ್ವತವಾದವುಗಳು ಎಂದು ಹೇಳುತ್ತಾರೆ. ಜೀವಾತ್ಮ ಸ್ವತಃ ಅನಾದಿ, ಅನಂತ ಮತ್ತು ಶಾಶ್ವತವಾಗಿರುವಾಗ ಪರಮಾತ್ಮನನ್ನು ಏಕೆ ಪೂಜಿಸಬೇಕು? ಆ ಪರಮಾತ್ಮನಿಗೆ ಜೀವಾತ್ಮರ ಮೇಲೆ ಯಾವ ರೀತಿಯ ಅಧಿಕಾರವಿದೆ? ಈ ವಿಚಾರದಲ್ಲಿ ಬೆಳಕು ಚೆಲ್ಲುವಿರಾ?"
       ಶರ್ಮರವರು ನೀಡಿದ ಉತ್ತರವನ್ನು ಅವರ ಧ್ವನಿಯಲ್ಲೇ ಕೇಳಿ:

     ವಿಡಿಯೋ ನೋಡುವುದು ಕೆಲವೊಮ್ಮೆ ಪ್ರಯಾಸವಾಗುತ್ತದೆ. ಹರಿಹರಪುರ ಶ್ರೀಧರ್ ಇದನ್ನು ಆಡಿಯೋ ಆಗಿ ಪರಿವರ್ತಿಸಿದ್ದಾರೆ. ಇಗೋ ಕೇಳಿ:






















-ಕ.ವೆಂ.ನಾಗರಾಜ್.