ಆರು ಮಕ್ಕಳ ತಾಯಿ ಬಿನ್ನಾಣಗಿತ್ತಿ
ಚೆಲುವೆ ಮಾಯವ್ವ ಎಂಥ ಮಕ್ಕಳ ಹೆತ್ತಿ | || ಪ ||
ಸುಖವು ಸಿಕ್ಕುವುದೆಂದು ಕುಣಿಸುವನು ಒಬ್ಬ
ವಿವೇಕವನೆ ಮರೆಸಿ ತುಳಿಯುವವನೊಬ್ಬ
ಕೂಡಿಡುವ ಕಟಪವನು ಕಲಿಸುವವನೊಬ್ಬ
ಒಬ್ಬೊಬ್ಬರೇ ಸಾಕು ನರಬಾಳು ಹಾಳವ್ವ || ೧ ||
ನನದೆಂಬ ಭಾವವನು ಮೂಡಿಸುವನೊಬ್ಬ
ಸೊಕ್ಕಿನಿಂ ಮೆರೆಯೆನುತ ಉಬ್ಬಿಸುವನೊಬ್ಬ
ಉರಿವ ಒಡಲಿಗೆ ತುಪ್ಪ ಹಾಕುವನು ಒಬ್ಬ
ಒಬ್ಬೊಬ್ಬರೇ ಸಾಕು ನರಬಾಳು ಗೋಳವ್ವ || ೨ ||
ಅರಿಗಳಾರೆನಿಸಿ ಜಗದಿ ಮೆರೆದಿಹರವ್ವ್ವ
ಒಬ್ಬರಿಗೆ ಒಬ್ಬರು ಜೊತೆಯಾಗಿ ಇಹರವ್ವ
ಶೂರಾಧಿಶೂರರೇ ಮಣ್ಣು ಮುಕ್ಕಿಹರವ್ವ
ಮೋಹಿನಿ ಮಾಯವ್ವ ನಿಷ್ಕರುಣಿ ನೀನವ್ವ || ೩ ||
ಕಾಮ ಕ್ರೋಧಗಳು ಹಾಳು ಮಾಡಿದವವ್ವ
ಮದ ಮಚ್ಚರಗಳು ಚೂರಿ ಹಾಕಿಹವವ್ವ
ಲೋಭ ಮೋಹಗಳು ತುಳಿದಿಹವು ಕಾಣವ್ವ
ಎಷ್ಟು ಕಾಡುತಿಯವ್ವ ದೇವರೇ ದಿಕ್ಕವ್ವ || ೪ ||
*************
-.ಕವೆಂ.ನಾಗರಾಜ್.
ಅರಿಷಡ್ವರ್ಗಗಳ ಆಟವನ್ನು ಸುಂದರ ಸಾಲುಗಳಲ್ಲಿ ಹೆಣೆದಿರುವಿರು. ತುಂಬಾ ಸರಳವಾಗಿಯೂ ಸುಬೋಧವಾಗಿಯೂ ಇರುವ ಈ ಕವಿತೆ ಶ್ಲಾಘನೀಯ.
ಪ್ರತ್ಯುತ್ತರಅಳಿಸಿನಿಮ್ಮ ಅನಿಸಿಕೆ ನನಗೆ ಮುದ ನೀಡಿದೆ, ರವಿಯವರೇ. ವಂದನೆಗಳು.
ಅಳಿಸಿತುಂಬಾ ಚೆನ್ನಾಗಿದೆ.
ಪ್ರತ್ಯುತ್ತರಅಳಿಸಿಜನಪದ ಗೀತೆ ಅಂದ್ಕೊಂಡು ಓದೋಕೆ ಶುರುಮಾಡಿದೆ.
ಆಮೇಲೆ ನಿಮ್ಮದೇ ರಚನೆ ಅಂತ ಗೊತ್ತಾಯ್ತು. :)
ಸ್ವರ್ಣಾ
ಸೋದರಿ, ಜಾನಪದ ಧಾಟಿಯಲ್ಲೇ ಬರೆದದ್ದು. ನಿಮಗೆ ಒಪ್ಪಿಗೆಯಾಯಿತಲ್ಲಾ, ಸಂತೋಷ.
ಅಳಿಸಿಆತ್ಮೀಯ ನಾಗರಾಜ್,
ಪ್ರತ್ಯುತ್ತರಅಳಿಸಿನೀವು ಬರೆದಿರುವ ಈ ಕವನ ನನಗೆ ರಾಗ ಹಾಕಲು ಕಳುಹಿಸಿರಬಹುದೆಂದು ಭಾವಿಸಿ "ಗುಜರಿ ತೋಡಿ" ರಾಗವನ್ನು ಹಾಕಬಹುದೆಂದು ಪ್ರಯತ್ನಿಸಿದೆ. ನನಗೆ ನಿಜಕ್ಕೂ ಆಶ್ಚರ್ಯವಾಯಿತು. ಒಂದು ಅರ್ಧ ತಾಳದ ವೆತ್ಯಾಸವು ಇಲ್ಲದೆ ಹೊಂದಿಕೊಂಡಿತು. ಕವನ ಬರೆದ ನಿಮ್ಮ ಖುಶಿಗಿಂತ, ಹಾಡಿದಾಗ ಆದ ನನ್ನ ಖುಷಿ ಆಕ್ಷಣದಲ್ಲಿ ಹೆಚ್ಚೆನಿಸಿತು. ನೀವು ಸಿಕ್ಕಾಗ ಹಾಡುತ್ತೇನೆ.
ಧನ್ಯವಾದಗಳು.
ಪ್ರಕಾಶ್
ಸಾರ್ಥಕವೆನಿಸಿತು. ಇದನ್ನು ಓದಿ ಧನ್ಯನಾದೆ, ಪ್ರಕಾಶರೇ. ನನಗೆ ರಾಗ, ತಾಳಗಳ ಅರಿವಿಲ್ಲ.
ಅಳಿಸಿಗುರುವಾರ ನಿಮ್ಮ ಸಿರಿಕಂಠದಿಂದ ಕೆಲಲು ನಾನು ರಡಿ!
ಅಳಿಸಿನಾಗರಾಜ ಸರ್ ಅದ್ಬುತವಾಗಿ ಮೂಡಿಬಂದಿವೆ ನಿಮ್ಮ ಆರುಮಕ್ಕಳ ತಾಯಿಯ ಬಿನ್ನಾಣದ ಕವನ. ಹೇಗೆ ಹೊಳೆಯಿತು ಇಂತಹ ಕಲ್ಪನೆ ಅದಕ್ಕೆ ಮೂಲವೇನೊ ಕೇಳಬಹುದೆ.
ಪ್ರತ್ಯುತ್ತರಅಳಿಸಿಮಿತ್ರ ಹರಿಹರಪುರ ಶ್ರೀಧರ್ 'ಯೇಗ್ದಾಗೆಲ್ಲಾ ಐತೆ' ಪುಸ್ತಕವನ್ನು ಓದಲು ಕೊಟ್ಟಿದ್ದರು. ಅದರಲ್ಲಿನ ಈ ಪ್ಯಾರಾ ನನ್ನ ಮನದೊಳಗೆ ಹೊಕ್ಕಿತು:
ಅಳಿಸಿಒಂದು ದಿನ ಮಾತಿನ ಮಧ್ಯೆ ಸ್ವಾಮಿಗಳು 'ಒಬ್ಬಾಯಮ್ಮ ಇದಾಳೆ. ಆಯಮ್ಮ ಆರು ಮಕ್ಕಳನ್ನು ಹಡೆದವ್ಳೆ. ಆ ಆರೂ ಜನಾನೂ ಒಳ್ಳೆ ಒಗ್ಗಟ್ಟಾಗಿರ್ತಾರೆ. ಒಬ್ಬನ್ ಬಿಟ್ ಒಬ್ಬನಿರಲ್ಲ.'ಎಂಥಾ ಒಳ್ಳೆ ಹುಡುಗರಪ್ಪ' ಅಂತಾ ನೀನೇನಾರಾ ಒಬ್ಬನ್ನ ಹತ್ರ ಕರಕೊಂಡ್ರೆ ಆರೂ ಜನಾನೂ ಬಂದ್ ಬಿಡ್ತಾರೆ. ಯಾಕಂದ್ರೆ ಅಂಥ ಒಗ್ಗಟ್ಟು ಅವರದು. ನೀನೂ ಅವ್ರು ಕುಟೆ ಆಟ ಆಡ್ಕೊಂಡು ಕಾಲ ಕಳೀತೀಯ. ಅವ್ರ ತಾಯಿ ಇದಾಳ್ ನೀಡು-ಆಯಮ್ಮ 'ನನ್ ಮಕ್ಳು ಎಲ್ಲಿಗೋದ್ವು' ಅಂತ ಹುಡಿಕ್ಕಾಡಿಕೊಂಡು ಬತ್ತಾಳೆ. ನಿನ್ ತಾವ ಅವಿರದ್ನ ಕಂಡು ಸಿಟ್ಟಾಗಿ, ನಿನ್ನಿಡಕೊಂಡು ಕೆನ್ನೆ ಕೆನ್ನೆಗೆ ಒದ್ದು, ಕಾಲಾಗ್ ತುಳ್ದು ಒಸಗ್ಹಾಕಿ ತನ್ನ ಮಕ್ಳುನ್ನ ಕರಕೊಂಡು ಅದೇ ಹೋಗ್ತಾಳೆ. ನಿನ್ ಕಥೇನೇ ಮುಗಿದೋಯ್ತು... ಅಂಥೋಳು ಆ ಯಮ್ಮ' ಅಂದರು. ಪಕ್ಕದಲ್ಲಿದ್ದವರು 'ಯಾರ್ ಸ್ವಾಮಿ ಆಯಮ್ಮ?' ಎಂದು ಕೇಳಿದಾಗ: 'ಲೇ ಆಯಮ್ಮ ಮಾಯಮ್ಮ ಕಣೋ' ಎಂದು ನಕ್ಕರು.
ಇದೇ ನನ್ನ ಈ ರಚನೆಗೆ ಪ್ರೇರಣೆ.
ಆಸಕ್ತಿಗೆ ಧನ್ಯವಾದ ಪಾರ್ಥರೇ.
ಲೇಖಕರು ಈ ಕಾಮೆಂಟ್ ಅನ್ನು ತೆಗೆದು ಹಾಕಿದ್ದಾರೆ.
ಪ್ರತ್ಯುತ್ತರಅಳಿಸಿನಾನು ಸಹ ಆ ಪುಸ್ತಕ ಓದಿದ್ದೆ ಆದರೆ ಇಂತವೆಲ್ಲ ಹೊಳೆಯಲೆ ಇಲ್ಲ ನೋಡಿ
ಪ್ರತ್ಯುತ್ತರಅಳಿಸಿಹಹ್ಹ ಹ್ಹಹ್ಹ....
..
ನಿಜ ಹೂವಿನ ಸುವಾಸನೆ ಅರಿಯಲು ಅಂತಹುದೆ ಸಂಸ್ಕಾರವಿರಬೇಕು
ಶ್ರೀಧರ್ ಮತ್ತು ಪಾರ್ಥರಿಗೆ ಧನ್ಯವಾದಗಳು.
ಅಳಿಸಿಉಲೂಕಯಾತುಂ ಶುಶುಲೂಕಯಾತುಂ ಜಹಿ ಶ್ವಯಾತುಂ ಉತ ಕೋಕಯಾತುಮ್|
ಪ್ರತ್ಯುತ್ತರಅಳಿಸಿಸುಪರ್ಣಯಾತುಂ ಉತ ಗೃಧ್ರಯಾತುಂ ದೃಷದೇವ ಪ್ರಮೃಣ ರಕ್ಷ ಇಂದ್ರ||
(ಋಗ್ವೇದ.7.104.22.)
ನಮ್ಮೊಳಗಿರುವ ಗೂಬೆಯ ನಡೆ (ಮೋಹ), ತೋಳನ ನಡೆ (ಕ್ರೋಧ), ನಾಯಿಯ ನಡೆ (ಮಾತ್ಸರ್ಯ), ಕೋಕಪಕ್ಷಿಯ ನಡೆ (ಕಾಮ)
ಗರುಡನ ನಡೆ (ಮದ), ಹದ್ದಿನ ನಡೆ (ಲೋಭ) - ಇವುಗಳನ್ನು ಹೇ ಭಗವಂತ ಕಲ್ಲಿನಿಂದ ತಿಕ್ಕಿ ತೀಡಿಹಾಕಿಬಿಡು.
ಸಹೃದಯರ ಪ್ರಾರ್ಥನೆ, ಚಿಂತನೆಗಳು ಎಲ್ಲ ಕಾಲಕ್ಕೂ ಒಂದೇ!!
ಈ ಭಾವವು ಜಾನಪದದಲ್ಲಿ ಬಂದರೆ ಹೇಗಿರಬಹುದು.
ಮತ್ತೊಮ್ಮೆ ನಿಮ್ಮ ಕವನ ಓದಿದರೆ ಉತ್ತರ ಅಲ್ಲೇ ಇದೆ!!!!!
ನಿಮ್ಮ ಪ್ರತಿಕ್ರಿಯೆಗೆ ವಂದನೆ, ಶರ್ಮಾಜಿ.
ಪ್ರತ್ಯುತ್ತರಅಳಿಸಿ