ಜಗಕೆ ಕಾರಣ ಒಂದು ಆಧಾರ ಒಂದು
ಒಂದನೊಂದನು ಕಂಡು ಬೆರಗಾಯಿತೊಂದು |
ಚಂದಕಿಂತ ಚಂದ ಒಂದಕೊಂದರ ನಂಟು
ಆಧಾರಕಾಧಾರನವನೆ ಮೂಢ || ..೨೯೭
ಅಲ್ಲೆಲ್ಲ ಇಲ್ಲೆಲ್ಲ ಮೇಲೆಲ್ಲ ಕೆಳಗೆಲ್ಲ
ಎಲ್ಲಿಂದ ಎಲ್ಲಿಗೂ ಮುಗಿದುದೇ ಇಲ್ಲ |
ಅವನೊಬ್ಬನೇ ಜಗದ ಎಲ್ಲೆಯನು ಬಲ್ಲ
ಕಣ್ಣರಳಿ ಬೆರಗಾಗಿ ನಿಂತಿಹನು ಮೂಢ || ..೨೯೮
ನೆಲವ ಸೋಕದಿಹ ಅನ್ನವಿಹುದೇನು
ನೆಲವ ತಾಕದಿಹ ಪಾದಗಳು ಉಂಟೇನು |
ಮಡಿಯೆಂದು ಹಾರಾಡಿ ದಣಿವುದೇತಕೆ ಹೇಳು
ದೇವಗೇ ಇಲ್ಲ ಮಡಿ ನಿನಗೇಕೆ ಮೂಢ || ..೨೯೯
ಸವಿಗವಳದ ರುಚಿಯ ಕರವು ತಿಳಿದೀತೆ
ಸವಿಗಾನದ ಸವಿಯ ನಯನ ಸವಿದೀತೆ |
ಚೆಲುವು ಚಿತ್ತಾರಗಳ ಕಿವಿಯು ಕಂಡೀತೆ
ಅವರವರ ಭಾಗ್ಯ ಅವರದೊ ಮೂಢ || ..೩೦೦
***************
-ಕ.ವೆಂ.ನಾಗರಾಜ್.
ನಿಜ ಎಷ್ಟೆ ಸವಿಗವಳವಾದರು ತಾನೆ ಅದನ್ನು ಕಲಸಿ ತುತ್ತು ಮಾಡಿದರು ಅದರ ರುಚಿಯನ್ನು ಕೈ ಅರಿಯಲಾರದು, ಅವರವರ ಬಾಗ್ಯ ಅವರಿಗೆ
ಪ್ರತ್ಯುತ್ತರಅಳಿಸಿಆ ತುತ್ತನ್ನು ಬಾಯಿಗೆ ನೀಡಿ ಸಂತೋಷ ಕೊಡುವ ಭಾಗ್ಯ ಕೈಗೆ ಇದೆ! ಅವರವರ ಭಾಗ್ಯ ಅವರದು. ಧನ್ಯವಾದ, ಪಾರ್ಥರೇ.
ಪ್ರತ್ಯುತ್ತರಅಳಿಸಿ