ನನ್ನ ಬಗ್ಗೆ

ನನ್ನ ಫೋಟೋ

ನಿವೃತ್ತ ತಹಸೀಲ್ದಾರ್, ಕೆಳದಿ ಕವಿಮನೆತನದ ಪತ್ರಿಕೆ 'ಕವಿಕಿರಣ'ದ ಸಂಪಾದಕ.
ನನ್ನ ಕೃತಿಗಳು: 1.ಕವಿಸುಬ್ರಹ್ಮಣ್ಯಯ್ಯ - ಒಂದು ಜೀವಗೀತೆ (ವ್ಯಕ್ತಿ ಚಿತ್ರಣ), 2. ಮೂಢ ಉವಾಚ - ಮುಕ್ತಕಗಳು, 3. ಆದರ್ಶದ ಬೆನ್ನು ಹತ್ತಿ . .
ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಸೋಮವಾರ, ಜುಲೈ 9, 2012

ಅಭ್ಯಾಸ - ದುರಭ್ಯಾಸ


     ಎಂದಿನಂತೆ ಮಂಕ, ಮಡ್ಡಿ, ಮರುಳ, ಮೂಢರು ಸಾಯಂಕಾಲದ ವಾಕಿಂಗ್ ಮುಗಿಸಿ ಕಲ್ಲಿನ ಕಟ್ಟೆಯ ಮೇಲೆ ಕುಳಿತು ಮಾತಿನ ಓಟ ಮುಂದುವರೆಸಿದ್ದರು. ಮಂಕ ಮಡ್ಡಿಯ ಜೇಬಿನ ಕಡೆ ಕಣ್ಣು ಹಾಯಿಸಿದವನು ಕಡಲೆಕಾಯಿ ಮಾರುತ್ತಿದ್ದವನನ್ನು 'ಏಯ್, ಕಡಲೇಕಾಯೀ' ಅಂತ ಕರೆದ. ಅವನು ಬಂದಾಗ 'ಹತ್ತು ರೂಪಾಯಿ ಕಡಲೆಕಾಯಿ ಕೊಡು' ಅಂದ. ಅವನು ಕೊಟ್ಟ ಮೇಲೆ ಜೇಬಿಗೆ ಕೈಹಾಕಿಕೊಂಡು 'ಅಯ್ಯೋ, ಪ್ಯಾಂಟು ಬದಲಾಯಿಸಿದೆ, ಹಳೆಯ ಪ್ಯಾಂಟಿನಲ್ಲಿದ್ದ ದುಡ್ಡನ್ನು ಹಾಕಿಕೊಳ್ಳುವುದನ್ನೇ ಮರೆತೆ' ಅಂದ. ಉಳಿದವರು ಮಿಕಿಮಿಕಿ ಮುಖ ನೋಡಿಕೊಂಡು ಮಡ್ಡಿಯ ಕಡೆ ನೋಡಿದರು. ಮಡ್ಡಿ ದುಡ್ಡು ಕೊಟ್ಟ. ಅಷ್ಟು ಹೊತ್ತಿಗೆ ಮುಠ್ಠಾಳ ಸಹ ಜೊತೆಯಾದ. ಎಲ್ಲರೂ ಕಡಲೆಕಾಯಿಗೆ ಕೈ ಹಾಕಿದರು. 
ಮೂಢ:  ಲೋ, ಮಂಕ, ನೀನು ಹೀಗೆ ಮಾಡ್ತಾ ಇರೋದು ಇದೇ ಮೊದಲಲ್ಲ. ಈ ದುರಭ್ಯಾಸ ಬಿಟ್ಟುಬಿಡು. 
ಮಂಕ:  ನಾನೇನು ಮಾಡಲಿ, ಮರೆವು ಜಾಸ್ತಿ. ಇನ್ನು ಮುಂದೆ ಜೇಬಲ್ಲಿ ದುಡ್ಡು ಇರೋದನ್ನು ನೋಡಿಕೊಂಡು ಕಡಲೇಕಾಯಿಯವನನ್ನು ಕರೀತೀನಿ. ಈ ದುರಭ್ಯಾಸ ಅನ್ನೋದು ಮೆತ್ತನೆ ಕುರ್ಲಾನ್ ಬೆಡ್ ಇದ್ದ ಹಾಗೆ, ಮಲಗಿಕೊಳ್ಳೋದು ಸುಲಭ, ಏಳೋದು ಕಷ್ಟ.
ಮೂಢ:  ದುರಭ್ಯಾಸ ಬಯಸೋರು ನಾವೇ. ಆಮೇಲೆ ದುರಭ್ಯಾಸಗಳು ನಮ್ಮನ್ನೇ ಬಯಸುತ್ತವೆ. ಅವನ್ನು ನಾವು ಗೆಲ್ಲಬೇಕು, ಇಲ್ಲದಿದ್ದರೆ ಅವೇ ನಮ್ಮನ್ನು ಗೆಲ್ಲುತ್ತವೆ.
ಮಡ್ಡಿ:  ಅರ್ಥ ಆಗೋ ಹಾಗೆ ಮಾತನಾಡಿರೋ. ಪೆದ್ದ ಪೆದ್ದಾಗಿ ಮಾತಾಡ್ತೀರಿ. ನಿಮ್ಮ ಜೊತೆ ಸೇರಿಕೊಂಡು ನನ್ನನ್ನೂ ಎಲ್ಲರೂ ಪೆದ್ದ ಅಂತಾರೆ.
ಮರುಳ:  ನೀನು ಪೆದ್ದ ಅಲ್ಲದೇ ಇದ್ದರೆ ನಮಗೆ ಕಡಲೇಕಾಯಿ ಕೊಡಿಸ್ತಾ ಇದ್ಯಾ?
ಮುಠ್ಠಾಳ:  ದುರಭ್ಯಾಸದ ಹಾಗೆ ಒಳ್ಳೆಯ ಅಭ್ಯಾಸ ಸಹ ಕೆಟ್ಟದು ಕಣ್ರೋ. ನೀವೆಲ್ಲಾ ಬುರುಡೆ ಖಾಲಿ ಇದ್ದರೂ ಬುರುಡೆ ಬಿಡೋರು. ನಮ್ಮ ಮನೆಯಲ್ಲಿ ಸೇರಿಕೊಂಡರೆ ನಾನು ತಿಂಡಿ, ಕಾಫಿ ಕೊಡ್ತೀನಿ, ಪಾಪ ಅಂತ. ಇಲ್ಲಿ ಮಡ್ಡಿ ಕಡಲೆಕಾಯಿ ಕೊಡಿಸ್ತಾನೆ. ಈ ಒಳ್ಳೆಯ ಅಭ್ಯಾಸವೂ ದುರಭ್ಯಾಸವೇ ಅಲ್ಲವೇನೋ ಮಡ್ಡಿ? 
ಮಡ್ಡಿ:  ಹೋಗಲಿ ಬಿಡು, ಬದಲಿಗೆ ಬಿಟ್ಟಿ ಉಪದೇಶ ಕೊಡ್ತಾರಲ್ಲಾ! ಏಯ್, ಮೂಢಾ, ನಿನ್ನ ತಮ್ಮ ಬುರುಡೆ ಡಾಕ್ಟರ್ ಇದಾನಲ್ಲಾ, ಅವನ ಹತ್ತಿರ ಟ್ರೀಟ್‌ಮೆಂಟಿಗೆ ಅಂತ ತರಲೆ ಸುದ್ದಿ ಚಾನೆಲ್ಲಿನ ರಾಂಗನಾತ ಹೆಂಡತಿ ಜೊತೆ ಬಂದಿದ್ದನಂತೆ. ಯಾಕಂತೋ?
ಮೂಢ:  ಅವನನ್ನು ಬುರುಡೆ ಡಾಕ್ಟರ್ ಅನ್ನಬೇಡ. ಅವನು ಫೇಮಸ್ ಸೈಕಾಲಾಜಿಸ್ಟು. ಪ್ರತಿ ನಿತ್ಯ ಯಾವಾಗಲೂ ನಿತ್ಯಾ ನಿತ್ಯಾ ನಿತ್ಯಾ ಅಂತಾ ಇರ್ತಾನೆ ಅಂತ ರಾಂಗನಾತನ ಹೆಂಡತಿ ಅವನನ್ನು ಅಲ್ಲಿಗೆ ಕರೆದುಕೊಂಡು ಹೋಗಿ ಗೋಳಾಡಿದಳಂತೆ. ಲಿಮ್ಕಾ ರೆಕಾರ್ಡಿಗೆ ಸೇರಿಸಲಿಲ್ಲ ಅಂತ ಅವನಿಗೆ ತಲೆ ಕೆಟ್ಟ ಹಂಗೆ ಆಗಿದೆಯಂತೆ.
ಮಂಕ:  ಲಿಮ್ಕಾ ರೆಕಾರ್ಡಾ? ಯಾಕೆ?
ಮೂಢ:  ಹೂಂ. ಧಾರಾವಾಹಿಗಳು ೫೦೦೦-೬೦೦೦ ಎಪಿಸೋಡುಗಳು ಆಗ್ತಾ ಇರೋದು ಈಗ ಮಾಮೂಲು. ಅಜ್ಜ ನೋಡ್ತಾ ಇದ್ದ ಸೀರಿಯಲ್ ಅನ್ನು ಈಗ ಮೊಮ್ಮಗ ನೋಡ್ತಾ ಇದಾನೆ. ಆದರೆ ನಿತ್ಯಾನಂದನ ಸುದ್ದಿಯನ್ನು ಈರೀತಿ ಸೀರಿಯಲ್ ಆಗಿ ಪ್ರಕಟಿಸುತ್ತಿರುವುದು, ಅದೂ ನಿರಂತರವಾಗಿ ವಿಶೇಷ ಅಂತೆ. ಅಲ್ಲದೆ, ಯಾವುದೇ ಚಾನೆಲ್ಲಿನವರು ಯಾವುದೇ ಸುದ್ದಿಯನ್ನು ಇಷ್ಟು ದೀರ್ಘವಾಗಿ ಪ್ರಕಟಿಸಿಲ್ಲವಂತೆ. ಇದನ್ನು ಲಿಮ್ಕಾ ರೆಕಾರ್ಡಿಗೆ ಸೇರಿಸಲು ಬರೆದಿದ್ದಾರಂತೆ. ಲಿಮ್ಕಾದವರಿಂದ ಏನೂ ಉತ್ತರ ಬಂದಿಲ್ಲವಂತೆ. ಅದಕ್ಕೇ ಅವರಿಗೆ ತಲೆ ಕೆಟ್ಟ ಹಾಗೆ ಆಗಿದೆಯಂತೆ. ರಾಂಗನಾತ ನಿದ್ದೆ ಮಾಡುವಾಗಲೂ ನಿತ್ಯಾ, ನಿತ್ಯಾ ಅಂತ ಕನವರಿಸುತ್ತಾರಂತೆ. 
ಮರುಳ:  ನಿನ್ನ ತಮ್ಮ ಔಷಧಿ ಕೊಟ್ಟನಾ? ಈಗ ಸರಿ ಆದನಾ?
ಮೂಢ: ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕಂತೆ. ರಾಂಗನಾತ 15 ದಿನ ನಿತ್ಯಾನಂದನ ಸೇವೆ ಮಾಡಿಕೊಂಡಿದ್ದು ಬರಲಿ, ಆಮೇಲೆ ಎಲ್ಲಾ ಸರಿಯಾಗುತ್ತೆ ಅಂತ ನನ್ನ ತಮ್ಮ ಹೇಳಿದನಂತೆ.
ಮಡ್ಡಿ:  ಬಿಡ್ರೋ, ದೊಡ್ಡವರ ವಿಷಯ ನಮಗೇಕೆ. ನಮ್ಮದೇ ನಮಗೆ ಸಾಕಷ್ಟು ಇದೆ. ನೋಡು, ಮರುಳ ಎಷ್ಟು ಸಂಭಾವಿತ. ಆದರೆ ಅವನ ಮಗ ದಾರೀಲೇ ಕುಡ್ಕೊಂಡು ಬೀಳ್ತಿರ್ತಾನೆ. ಅವನಿಗೆ ಕುಡಿಯೋದನ್ನು ಯಾರು ಕಲಿಸಿದರೋ ಏನೋ. ಮರುಳ ಪಾಪ, ಒಳಗೆ ಕೊರಗಿದ್ದರೂ ಮೇಲೆ ಹೇಗೆ ನಗುನಗುತ್ತಾ ಇರ್ತಾನೆ! 
ಮೂಢ:  ಹೇಗೆ ಕುಡಿಯಬೇಕು, ಹೇಗೆ ಸಿಗರೇಟು ಸೇದಬೇಕು ಅನ್ನುವುದನ್ನು ಕಲಿಸಕ್ಕೆ ಯಾವುದಾದರೂ ಸ್ಕೂಲ್ ಇದೆಯಾ? ಇಲ್ಲ. ಕುಡಿಯುವುದನ್ನು ಹೇಗೆ ಬಿಡಬೇಕು ಅನ್ನುವುದನ್ನು ಹೇಳಿಕೊಡುವುದಕ್ಕೆ ತುಂಬಾ ಜನ ಇದಾರೆ. ಕೆಟ್ಟ ಅಭ್ಯಾಸ ಕಲಿಯುವುದಕ್ಕೆ ಯಾವ ಸ್ಕೂಲೂ ಬೇಡ, ಗುರುಗಳೂ ಬೇಡ. 
ಮರುಳ:  ಅದು ನಿಜ. ಯಾರೂ ಹೇಳಿಕೊಡದೇ ಇದ್ದರೂ 'ಅಪ್ಪ ಲೂಸಾ, ಅಮ್ಮ ಲೂಸಾ' ಹಾಡು ಕಲಿತು ಪೂರ್ತಿ ಹೇಳ್ತಾರೆ. ಆದರೆ ಹೇಳಿಕೊಟ್ಟರೂ ಸಹ 'ಜಯಭಾರತ ಜನನಿಯ ತನುಜಾತೆ' ಗೀತೆ ಪೂರ್ತಿ ಬಾಯಿಗೆ ಬರಲ್ಲ. ನನ್ನ ಕುಡುಕ ಮಗ ಕುಡಿದು ಹಾಳಾಗಲಿ, ನನಗೇನೂ ಬೇಸರವಿಲ್ಲ, ಆದರೆ ಅವನ ಸಂಸಾರಕ್ಕೂ ನೆಮ್ಮದಿಯಿಲ್ಲವಲ್ಲಾ ಅಂತ ನನಗೆ ಕೊರಗು ಕಣ್ರೋ. 
ಮಂಕ:  ಬೇಜಾರು ಮಾಡಿಕೋ ಬೇಡ. ದೇವರು ಇದ್ದಾನೆ. ಕುಡಿಯೋದು, ಸಿಗರೇಟು ಸೇದೋದು, ಇಂತಹ ದುರಭ್ಯಾಸಗಳು ಅವರನ್ನು ಮಾತ್ರ ಅಲ್ಲ ಅವರನ್ನು ನಂಬಿದವರನ್ನೂ ಹಾಳು ಮಾಡ್ತಾವೆ. ಗೊತ್ತಿಲ್ಲದಂತೆ ಅವರು ಕೆಳಕ್ಕೆ ಬೀಳ್ತಾನೇ ಹೋಗ್ತಾರೆ. ನಾವೂ ಹೇಳಿ ನೋಡ್ತೀವಿ. ಎಲ್ಲಾ ಸರಿಯಾಗುತ್ತೆ. ಯೋಚನೆ ಮಾಡಬೇಡ.
ಮರುಳ:  ನನ್ನ ಮಗ ಏನು ಹೇಳ್ತಾನೆ ಗೊತ್ತಾ? 'ಕುಡಿಯೋದು ನಿಮ್ಮ ದೃಷ್ಟಿಯಲ್ಲಿ ದುರಭ್ಯಾಸ ಇರಬಹುದು, ನನ್ನ ದೃಷ್ಟಿಯಲ್ಲಿ ಅಲ್ಲ. ಕುಡಿಯೋದರಿಂದಲೇ ನಾನು ಸರಿಯಾಗಿರೋದು' ಅಂತಾನೆ. ಹಾಳು ಬಿದ್ದು ಹೋಗಲಿ ಬಿಡು.
ಮುಠ್ಠಾಳ: (ಇದುವರೆವಿಗೂ ಎತ್ತಲೋ ನೋಡುತ್ತಿದ್ದವನು ಈಗ ಮೂಗು ತೂರಿಸಿದ):  ನಿಮಗೆ ಗೊತ್ತಾ? ನನಗೆ ಒಂದು ವಿಷಯ ಗೊತ್ತಾಯಿತು. ಒಳ್ಳೆಯ ಅಭ್ಯಾಸಗಳು ಇವೆಯಲ್ಲಾ, ಅವನ್ನು ಬಿಡುವುದು ಸುಲಭ. ಕೆಟ್ಟ ಅಭ್ಯಾಸಗಳನ್ನು ಬಿಡುವುದು ಕಷ್ಟ.
ಮಡ್ಡಿ:  ಕತ್ತಲೆ ಆಗ್ತಾ ಬಂತು. ಹೋಗೋಣವಾ? ಮೂಢರಾಜಾ, ನಿನ್ನ ಕೊನೆ ಮಾತು ಹೇಳಿಬಿಡು.
ಮೂಢ:  ಈ ಅಭ್ಯಾಸಗಳು, ಕೆಟ್ಟದ್ದೋ, ಒಳ್ಳೆಯದೋ, ನಾವು ಮಾಡಿಕೊಳ್ಳೋದು. ಅವನ್ನು ಹಿಡಿದುಕೊಂಡರೆ ಬಿಡಿಸಿಕೊಳ್ಳೋದು ಕಷ್ಟ. ಅವು ನಮ್ಮ ಕಂಟ್ರೋಲಿನಲ್ಲಿದ್ದರೆ ಒಳ್ಳೆಯದು. ಇಲ್ಲದಿದ್ದರೆ ಮುಗಿದೇ ಹೋಯಿತು. ನಿಮ್ಮ ಒಳ್ಳೆಯ ಗುಣಗಳಿಂದ ಕೆಟ್ಟ ಗುಣಗಳನ್ನು ಕಳೆದರೆ ಉಳಿಯುವುದೇ ಜನರು ನಿಮಗೆ ಕೊಡುವ ಬೆಲೆ.
ಮಂಕ:  ನಮ್ಮ ಬೆಲೆ ಎಷ್ಟು ಅಂತ ಆಮೇಲೆ ಲೆಕ್ಕ ಹಾಕೋಣ. ಅಯ್ಯಾ ಮುಠ್ಠಾಳ, ನಮಗೆ ನೀನೇ ಗತಿ. ತ್ರೀ ಬೈ ಫೈವ್ ಕಾಫಿ ಕೊಡಿಸಯ್ಯಾ, ತಂದೆ.
     'ನಿಮ್ಮ ಬೆಲೆ ನನಗೆ ಗೊತ್ತಿಲ್ವ' ಅಂದ ಮುಠ್ಠಾಳ ಎಲ್ಲರನ್ನೂ ಕರೆದುಕೊಂಡು ಕಾಫೀಶಾಪಿಗೆ ಹೊರಟ. 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ