ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಮಂಗಳವಾರ, ಆಗಸ್ಟ್ 28, 2012

ಮೂಢ ಉವಾಚ - 88



ಕರ್ಮಕಿಂ ಮಿಗಿಲು ಜ್ಞಾನಕಿಂ ಮಿಗಿಲು
ಯೋಗಕಿಂ ಮಿಗಿಲು ಭಕ್ತಿಯ ಹೊನಲು |
ಮೂರರ ಗುರಿಯೆ ಭಕ್ತಿ ತಾನಾಗಿರಲು
ಭಕ್ತಿಯೇ ಸಿರಿ ನೀನರಿಯೊ ಮೂಢ || ..305

ಭಕ್ತಿಯದು ಸಿದ್ಧಿಸಲು ಏಕಾಂತವಿರಬೇಕು
ದೇವ ಸುಜನರೊಡೆ ಕೂಡಿಯಾಡಲುಬೇಕು |
ಗುರುಕರುಣೆಯಲಿ ನಲಿಯುತಿರಬೇಕು 
ನಿರ್ಮಮದಿ ಸಚ್ಚಿದಾನಂದ ಮೂಢ || ..306


ನಯನ ನೋಡುವುದು ತನಗಾಗಿ ಅಲ್ಲ
ಕಿವಿಯು ಕೇಳುವುದು ತನಗಲ್ಲವೇ ಅಲ್ಲ |
ದೇಹವಿದು ದಣಿಯುವುದು ದೇಹಕೆಂದಲ್ಲ
ಯಾರಿಗಾಗೆಂದು ಗೊತ್ತಿಹುದೆ ಮೂಢ || ..307

ತನ್ನಿಷ್ಟ ಬಂದಂತೆ ನಯನ ನೋಡುವುದೆ?
ತಮ್ಮಿಚ್ಛೆಯಂತೆ ಕೈಕಾಲು ಆಡುವುವೆ? |
ತನುವಿನೊಳಗಿಹ ಅವನಿಚ್ಛೆಯೇ ಪರಮ
ಅವನಿರುವವರೆಗೆ ಆಟವೋ ಮೂಢ || ..308
*********************
-ಕ.ವೆಂ.ನಾಗರಾಜ್.


ಮಂಗಳವಾರ, ಆಗಸ್ಟ್ 14, 2012

ಹೀಗೊಂದು ಮಾದರಿ ಶ್ರದ್ಧಾಂಜಲಿ ಸಭೆ




     ಹಾಸನದ ನನ್ನ ಬಂಧು ಹಾಗೂ ಮಿತ್ರರಾದ ಪತ್ರಕರ್ತ ಪ್ರಭಾಕರರ ಕಿರಿಯ ಸಹೋದರ  ರಮೇಶಬಾಬು 30-07-2012 ರಂದು ವಿಧಿವಶನಾದ ಸಂದರ್ಭದಲ್ಲಿ ಪ್ರಭಾಕರ್ ಮತ್ತು ಸೋದರರು ದಿಟ್ಟ ನಿರ್ಧಾರ ತಳೆದು ಆತನ ದೇಹವನ್ನು ಮೃತನ ಇಚ್ಛೆಯಂತೆ ಹಾಸನದ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಹಿಮ್ಸ್)ಗೆ ದಾನ ಮಾಡಿದರು. ಉಳಿದ ಕ್ರಿಯಾಕರ್ಮಗಳನ್ನು ನಡೆದುಕೊಂಡು ಬಂದ ಸಂಪ್ರದಾಯದಂತೆ ನೆರವೇರಿಸಿದರು. ಮೂರ್ಛೆ ರೋಗದಿಂದ ಬಳಲುತ್ತಿದ್ದ ರಮೇಶಬಾಬು ಅವಿವಾಹಿತರಾಗಿದ್ದು ನಿಧನರಾದಾಗ ಆತನ ವಯಸ್ಸು ಕೇವಲ 45 ವರ್ಷಗಳು. ದಿನಾಂಕ 11-08-2012 ರಂದು ಪ್ರಭಾಕರ್ ಸೋದರರು ಅಂತಿಮ ಕಲಾಪವನ್ನು (ವೈಕುಂಠ ಸಮಾರಾಧನೆ)  ಶ್ರದ್ಧಾಂಜಲಿ ಕಾರ್ಯಕ್ರಮವಾಗಿ ಆಚರಿಸಿದರು. ಹಾಸನದ ಶ್ರೀ ಸೀತಾರಾಮಾಂಜನೇಯ ದೇವಸ್ಥಾನದ ಸಭಾಂಗಣದಲ್ಲಿ ನಡೆದ ಈ ಕಾರ್ಯಕ್ರಮ ಕೇವಲ ಮೃತ ವ್ಯಕ್ತಿಗೆ ಶ್ರದ್ಧಾಂಜಲಿ ಅರ್ಪಿಸುವುದಕ್ಕೆ ಮೀಸಲಾಗಿರದೆ ಜನಜಾಗೃತಿ ಮತ್ತು ಅರಿವು ಮೂಡಿಸುವ ಕಾರ್ಯಕ್ರಮವಾಗಿ ನಡೆದುದು ವಿಶೇಷವೇ ಸರಿ. 
     ರಮೇಶಬಾಬು ಮೂರ್ಛೆ ರೋಗದಿಂದ ನರಳಿ ಕೊನೆಯುಸಿರೆಳೆದವರು. ಮೂರ್ಛೆರೋಗದ ಬಗ್ಗೆ ಜನರಿಗೆ ಅನೇಕ ತಪ್ಪು ತಿಳುವಳಿಕೆಗಳಿದ್ದು ಅದನ್ನು ಹೋಗಲಾಡಿಸುವ ಕುರಿತು ಅರಿವು ಮೂಡಿಸುವ ಕೆಲಸ ಅಗತ್ಯವೆಂದು ಭಾವಿಸಿ ಮೆದುಳು ಮತ್ತು ನರರೋಗ ತಜ್ಞರಾದ ಡಾ. ಹಾಲಪ್ರಶಾಂತ್‌ರವರನ್ನು, ದೇಹದಾನದ ಮಹತ್ವ ವಿವರಿಸಲು ಹಿಮ್ಸ್ ನ ಸಹಾಯಕ ಪ್ರೊಫೆಸರ್ ಡಾ. ಸಿ.ಎಸ್. ಮಂಜುನಾಥರವರನ್ನು ಹಾಗೂ ವೇದದ ಹಿನ್ನೆಲೆಯಲ್ಲಿ ದೇಹ ಮತ್ತು ಜೀವಗಳ ಸಂಬಂಧ, ಶ್ರಾದ್ಧ ಎಂದರೇನು ಎಂಬುದನ್ನು ತಿಳಿಸಲು ಬೇಲೂರಿನ ವೇದಾಧ್ಯಾಯಿ ಶ್ರೀ ವಿಶ್ವನಾಥಶರ್ಮರವರನ್ನು ಪ್ರಭಾಕರ್ ಸೋದರರು ಆಹ್ವಾನಿಸಿ ಅವರಿಂದ ಉಪನ್ಯಾಸಗಳನ್ನು ಏರ್ಪಡಿಸಿದ್ದರು. 
     ಮೂರ್ಛೆ ರೋಗದ ಕುರಿತು ಸಾಮಾನ್ಯವಾಗಿ ಇರುವ ತಪ್ಪು ತಿಳಿವಳಿಕೆಗಳನ್ನು ಬಿಡಿಸಿ ಹೇಳಿದ ಡಾ. ಹಾಲಪ್ರಶಾಂತರು ಒಂದು ಅನಿಮೇಟೆಡ್ ಕಿರುಚಲನಚಿತ್ರ ತೋರಿಸಿ ವಿವರಣೆ ನೀಡಿದ್ದು ಗಮನ ಸೆಳೆಯಿತು. ಮೂರ್ಛೆ ತಪ್ಪಿದರೆ ಏನು ಮಾಡಬೇಕು, ಏನು ಮಾಡಬಾರದು ಎಂಬ ಬಗ್ಗೆ ಸಾಧಾರ ಮಾಹಿತಿ ನೀಡಿದ್ದಲ್ಲದೆ ಸಭಿಕರು ಕೇಳಿದ ಸಂದೇಹಗಳಿಗೆ ಸೂಕ್ತ ಉತ್ತರಗಳನ್ನು ನೀಡಿದರು. ಸಕಾಲದಲ್ಲಿ ಸೂಕ್ತ ಚಿಕಿತ್ಸೆ ಪಡೆದುಕೊಂಡರೆ ರೋಗವನ್ನು ಗುಣಪಡಿಸಬಹುದೆಂದು ತಿಳಿಸಿದರು.
     ದೇಹದಾನ ಮಾಡುವುದರಿಂದ ಏನು ಪ್ರಯೋಜನ, ಹೇಗೆ ದೇಹದಾನ ಮಾಡಬಹುದು ಎಂಬ ಬಗ್ಗೆ ಮಾಹಿತಿ ನೀಡಿದ ಡಾ. ಸಿ.ಎಸ್. ಮಂಜುನಾಥರು ಸಹ ಸಭಿಕರ ಸಂದೇಹಗಳಿಗೆ ಸೂಕ್ತ ವಿವರ ತಿಳಿಸಿದರು. ದೇಹದಾನ ಮಾಡುವುದಕ್ಕೆ ಸಂಬಂಧಿಸಿದ ಅರ್ಜಿ ನಮೂನೆಗಳನ್ನು ಆಸಕ್ತ ಸಭಿಕರು ಪಡೆದುಕೊಂಡರು.
     ಶ್ರೀ ವಿಶ್ವನಾಥ ಶರ್ಮರವರು ಜೀವಾತ್ಮ ಅವಿನಾಶಿಯಾಗಿದ್ದು ಅದಕ್ಕೆ ಹುಟ್ಟು ಸಾವುಗಳಿಲ್ಲವೆಂದೂ, ಅದು ದೇಹದಲ್ಲಿದ್ದಾಗ ಆ ಮಾಧ್ಯಮದ ಮೂಲಕ ಮಾಡುವ ಕರ್ಮಗಳಿಗನುಸಾರವಾಗಿ ಫಲ ಪಡೆಯುವುದೆಂದೂ, ತಾನು ಮಾಡಿದ ಕರ್ಮಕ್ಕೆ ತಾನೇ ಹೊಣೆಯೆಂದೂ, ಇತರರು ಮಾಡುವ ಕರ್ಮಗಳ ಫಲ ಇತರರಿಗೇ ಹೊರತು ಅದಕ್ಕಲ್ಲವೆಂದೂ ವೇದ ಮಂತ್ರಗಳನ್ನು ಉಲ್ಲೇಖಿಸಿ ಹೇಳುತ್ತಾ ಮೃತರ ಆತ್ಮಕ್ಕೆ ಉತ್ತಮ ಫಲ ಸಿಗಲೆಂದು ಆಶಿಸೋಣವೆಂದರು. 
     ಮಿತ್ರ ಪ್ರಭಾಕರ್ ಸ್ವಾಗತ ಮತ್ತು ವಂದನಾರ್ಪಣೆ ಹಾಗೂ ಮಿತ್ರ ಹರಿಹರಪುರ ಶ್ರೀಧರ ನಿರೂಪಣೆ ಮಾಡಿದ ವಿಭಿನ್ನ ರೀತಿಯ ಈ ಶ್ರದ್ಧಾಂಜಲಿ ಸಭೆ ಅನುಕರಣೀಯವೆನ್ನಲೇಬೇಕು. ರೂಢಿಗತ ರೀತಿಯಲ್ಲಿ ಉತ್ತರಕ್ರಿಯೆಗಳನ್ನು ನಡೆಸದಿರುವುದಕ್ಕೆ, ಸಾಂಪ್ರದಾಯಿಕರ ಅಸಮಾಧಾನಗಳನ್ನು ಎದುರಿಸುವುದಕ್ಕೆ ದಿಟ್ಟತನವಿರಬೇಕು. ಅಂತಹ ದಿಟ್ಟತನ ತೋರಿಸಿದ ಪ್ರಭಾಕರ್ ಮತ್ತು ಸೋದರರಿಗೆ ಅಭಿನಂದನೆಗಳು. ಏನೇ ಆಗಲಿ, ಇಂತಹ ಕ್ರಿಯೆಗಳು ಮನಸ್ಸಿನಲ್ಲಿ ವೈಚಾರಿಕ ತರಂಗಗಳನ್ನು ಎಬ್ಬಿಸಿ ಜಿಜ್ಞಾಸೆ ನಡೆಸಲು ಸಹಕಾರಿ ಎಂಬುದಂತೂ ಸತ್ಯ. 
ಶ್ರೀಯುತರಾದ ಪ್ರಭಾಕರ್, ವಿಶ್ವನಾಥಶರ್ಮ, ಡಾ. ಮಂಜುನಾಥ್, ಡಾ. ಹಾಲಪ್ರಶಾಂತ್


ಭಾನುವಾರ, ಆಗಸ್ಟ್ 12, 2012

ಬದನೆಕಾಯಿ ಮತ್ತು ಪ್ರಖ್ಯಾತ ಹಿಂದೂಸ್ತಾನಿ ಗಾಯಕ



     ಇದು 14 ವರ್ಷಗಳ ಹಿಂದಿನ ಘಟನೆ. ನಾನಾಗ ಬೇಲೂರಿನಲ್ಲಿ ಉಪತಹಸೀಲ್ದಾರನಾಗಿದ್ದೆ. ಜಿಲ್ಲೆಯಲ್ಲಿ ಹೊಯ್ಸಳ ಮಹೋತ್ಸವ ಸಡಗರದಿಂದ ನಡೆದಿತ್ತು. ಬೇಲೂರಿನಲ್ಲಿ ಒಂದು ದಿನ ಮತ್ತು ತಾಲ್ಲೂಕಿನ ಪುಷ್ಪಗಿರಿಯ ಬಯಲು ರಂಗ ಮಂದಿರದಲ್ಲಿ ಎರಡು ದಿನಗಳ ಕಾರ್ಯಕ್ರಮ ಏರ್ಪಾಡಾಗಿತ್ತು. ತಾಲ್ಲೂಕಿಗೆ ಬರುವ ಗಣ್ಯರ, ಕಲಾವಿದರುಗಳ, ಹಿರಿಯ ಅಧಿಕಾರಿಗಳ ಶಿಷ್ಟಾಚಾರದ ವ್ಯವಸ್ಥೆಯ - ಸ್ವಾಗತ, ವಸತಿ ಮತ್ತು ಊಟೋಪಚಾರಗಳು ಸೇರಿದಂತೆ - ಹೊಣೆಗಾರಿಕೆಯನ್ನು ಜಿಲ್ಲಾಧಿಕಾರಿಯವರು ನನಗೆ ವಹಿಸಿದ್ದರು. ಪುಷ್ಪಗಿರಿಯಲ್ಲಿ (ಹಳೇಬೀಡಿನಿಂದ ಸುಮಾರು 5 ಕಿ.ಮೀ. ದೂರವಿರುವ ಒಂದು ಗ್ರಾಮ) ಅಂದು ಸಂಜೆ ಹೆಸರುವಾಸಿಯಾದ ಹಿಂದುಸ್ತಾನೀ ಗಾಯಕರಿಂದ ಗಾಯನದ ಕಾರ್ಯಕ್ರಮ ನಡೆದಿತ್ತು. ಅವರೊಡನೆ ಅವರ ಮಗಳೂ ಹಾಡುತ್ತಿದ್ದಳು. ಸ್ಥಳೀಯರಿಗೆ ಅದು ರುಚಿಸುತ್ತಿರಲಿಲ್ಲ. ಗಾಯಕರು ಆಲಾಪನೆ ಮಾಡುತ್ತಿದ್ದಂತೆ ಸೇರಿದ್ದ ಗ್ರಾಮಸ್ಥರೂ ರಾಗ ತೆಗೆಯುತ್ತಿದ್ದರು. ಜಿಲ್ಲಾಧಿಕಾರಿಯವರು ಹಿಂದೂಸ್ತಾನೀ ಗಾಯನವನ್ನು ಇಷ್ಟಪಡುತ್ತಿದ್ದು, ಸ್ವತಃ ಆಸಕ್ತಿ ವಹಿಸಿ ಅವರನ್ನು ಕಾರ್ಯಕ್ರಮ ನೀಡಲು ಆಹ್ವಾನಿಸಿದ್ದರಲ್ಲದೆ ತಮ್ಮ ಕುಟುಂಬವರ್ಗದ ಸಹಿತ ಕಾರ್ಯಕ್ರಮ ವೀಕ್ಷಿಸಲು ಬಂದಿದ್ದು ಜನರ ಪ್ರತಿಕ್ರಿಯೆ ಅವರಿಗೆ ಮುಜುಗರ ಉಂಟುಮಾಡಿತ್ತು. ನಮ್ಮನ್ನೆಲ್ಲಾ ಕರೆಸಿ ಜನಗಳ ನಡುವೆ ಅಲ್ಲಲ್ಲಿ ಇದ್ದು ರಸಭಂಗ ಉಂಟುಮಾಡುವುದನ್ನು ತಡೆಯಲು ತಾಕೀತು ಮಾಡಿದರು. ನಮ್ಮ ಸಿಬ್ಬಂದಿಗೆ ಗಾಯಕರ ರಾಗಕ್ಕೆ ತಮ್ಮದೇ ರಾಗ ಸೇರಿಸುತ್ತಿದ್ದ ಜನರನ್ನು ತಡೆದು ಹೊರಗೆ ಕಳಿಸುವುದೇ ಕೆಲಸವಾಯಿತು. ನಮ್ಮೆಲ್ಲರ ಶ್ರಮದಿಂದ ತಕ್ಕಮಟ್ಟಿಗೆ ಪರಿಸ್ಥಿತಿ ಹದಕ್ಕೆ ಬಂದಿತು. 
      ಕಾರ್ಯಕ್ರಮ ಮುಗಿಯುವ  ವೇಳೆಗೆ ಗಾಯಕರಿಗೆ ಊಟದ ವ್ಯವಸ್ಥೆ ಆಗಬೇಕಿತ್ತು. ಊಟಕ್ಕೆ ಏನು ಬಯಸುತ್ತಾರೆಂದು ಕೇಳಿ ಅವರು ಹೇಳಿದ ಪದಾರ್ಥವನ್ನು (ಅದರ ಹೆಸರು ನನಗೆ ನೆನಪಿಲ್ಲ) ತರಲು 40 ಕಿ.ಮೀ. ದೂರದ ಹಾಸನಕ್ಕೆ ಕಾರಿನಲ್ಲಿ ಹೋದ ರಾಜಸ್ವ ನಿರೀಕ್ಷಕರು ಹಾಸನದ ಹಾಸನ ಮೊಟೆಲ್ (ಅರೆಸರ್ಕಾರಿ ಒಡೆತನದ ಸ್ಟಾರ್ ಹೋಟೆಲ್)ನಿಂದ 3 ಪ್ಲೇಟಿಗಾಗುವಷ್ಟು ಆ ಪದಾರ್ಥವನ್ನು ಹಾಟ್ ಬಾಕ್ಸಿನಲ್ಲಿ ಇರಿಸಿಕೊಂಡು ತಂದಿದ್ದರು. ಅದರ ಬೆಲೆ ರೂ. 850/- ಆಗಿತ್ತಂತೆ. ಅದೆಂಥಹಾ ಪದಾರ್ಥವೆಂದು ನಾನು ಕುತೂಹಲದಿಂದ ನೋಡಿದರೆ ಅದು ದಪ್ಪ ಗಾತ್ರದ ಗುಂಡು ಬದನೆಕಾಯಿಯನ್ನು ಬೇಯಿಸಿ ಮಸಾಲೆ ಸೇರಿಸಿ ಕಮಲದ ಹೂವಿನಂತೆ ಕತ್ತರಿಸಿ ಅಂದವಾಗಿ ಜೋಡಿಸಿದ ತಿಂಡಿಯಾಗಿತ್ತು. ಬದನೆಕಾಯಿ ಪಲ್ಯದ ವಾಸನೆ ಬರುತ್ತಿತ್ತು. ಇದಕ್ಕೆ 850/- ರೂಪಾಯಿಯೇ ಎಂದು ಅಚ್ಚರಿಪಟ್ಟಿದ್ದೆ. ದೊಡ್ಡವರ ಸಹವಾಸ ಸಾಕು ಅನ್ನಿಸಿತ್ತು. ಊಟಕ್ಕೆ ಆ ಗಾಯಕರು ತಮ್ಮ ಮಗಳೊಂದಿಗೆ ಕುಳಿತು ನನಗೆ ಕೇಳಿದ್ದ ಪ್ರಶ್ನೆ ಇದು: "ರೋಡ್ ಸೈಡ್ ಡಾಬಾ ಸೇ ಲಾಯಾ ಕ್ಯಾ?" ಒಳಗೊಳಗೆ ಸಿಟ್ಟು ಉಕ್ಕಿ ಬರುತ್ತಿದ್ದರೂ ನಿರ್ವಿಕಾರ ಮುಖಭಾವದಿಂದ ಒಂದು ನಿಮಿಷ ಬಿಟ್ಟು ನಾನು ಕೊಟ್ಟಿದ್ದ ಉತ್ತರ 'ನಹಿ' ಎಂದು ಮಾತ್ರ. ದೊಡ್ಡವರೆನಿಸಿಕೊಂಡವರ ಸಣ್ಣತನದ ದರ್ಶನ ನನಗಾಗಿತ್ತು. 

ಬುಧವಾರ, ಆಗಸ್ಟ್ 1, 2012

ಮೂಢ ಉವಾಚ - 87


ಚಿತ್ತವದು ದೂರವಿರೆ ರೂಪ ರಸ ಗಂಧದಿಂ
ಮೇಣ್ ಕೇಳದಿರೆ ಶಬ್ದ ತಿಳಿಯದಿರೆ ಸ್ಪರ್ಶ |
ನಿಂತೀತು ಮನವು ದೇವಸಾಮೀಪ್ಯದಲಿ
ಭಕ್ತಿಯೇ ಸಾಧನವು ಇದಕೆ ಮೂಢ || ..301


ದೇವನನು ಬಯಸುವ ಉತ್ಕಟತೆ ಭಕ್ತಿ
ಪ್ರೀತಿಯಾಮೃತದ ರಸಧಾರೆ ಭಕ್ತಿ |
ಭಕ್ತಿಯದು ಸಾಧಿಸಲು ಬೇರೇನು ಬೇಕಿಲ್ಲ
ಒಳಗೊಳಗೆ ಆನಂದ ಚಂದ ಮೂಢ || ..302


ಬಯಕೆಯದು ದೂರಾಗಿ ತೃಪ್ತಿ ಸಿಕ್ಕುವುದು
ಮತ್ಸರದ ನೆರಳಿರದೆ ನೆಲೆಸೀತು ಶಾಂತತೆಯು |
ಭಕ್ತಿಯೊಂದಿರಲಾಗಿ ಚಿರಸುಖವು ಸಿಕ್ಕೀತು
ನಿತ್ಯನೂತನ ಶಕ್ತಿ ಭಕ್ತಿ ಮೂಢ || ..303


ತಂತ್ರಗಳು ಬೇಕಿಲ್ಲ ಮಂತ್ರಗಳ ಹಂಗಿಲ್ಲ
ನಿಜಭಕ್ತನಾದವಗೆ ಕಟ್ಟುಪಾಡುಗಳಿಲ್ಲ |
ಚಂಚಲಿತ ಮನಕಿರಲಿ ರೀತಿನೀತಿಗಳು
ನಡೆದದ್ದೆ ದಾರಿ ಸಾಧಕಗೆ ಮೂಢ || ..304
**************
-ಕ.ವೆಂ.ನಾಗರಾಜ್.