ಕರ್ಮಕಿಂ ಮಿಗಿಲು ಜ್ಞಾನಕಿಂ ಮಿಗಿಲು
ಯೋಗಕಿಂ ಮಿಗಿಲು ಭಕ್ತಿಯ ಹೊನಲು |
ಮೂರರ ಗುರಿಯೆ ಭಕ್ತಿ ತಾನಾಗಿರಲು
ಭಕ್ತಿಯೇ ಸಿರಿ ನೀನರಿಯೊ ಮೂಢ || ..305
ಭಕ್ತಿಯದು ಸಿದ್ಧಿಸಲು ಏಕಾಂತವಿರಬೇಕು
ದೇವ ಸುಜನರೊಡೆ ಕೂಡಿಯಾಡಲುಬೇಕು |
ಗುರುಕರುಣೆಯಲಿ ನಲಿಯುತಿರಬೇಕು
ನಿರ್ಮಮದಿ ಸಚ್ಚಿದಾನಂದ ಮೂಢ || ..306
ನಯನ ನೋಡುವುದು ತನಗಾಗಿ ಅಲ್ಲ
ಕಿವಿಯು ಕೇಳುವುದು ತನಗಲ್ಲವೇ ಅಲ್ಲ |
ದೇಹವಿದು ದಣಿಯುವುದು ದೇಹಕೆಂದಲ್ಲ
ಯಾರಿಗಾಗೆಂದು ಗೊತ್ತಿಹುದೆ ಮೂಢ || ..307
ತನ್ನಿಷ್ಟ ಬಂದಂತೆ ನಯನ ನೋಡುವುದೆ?
ತಮ್ಮಿಚ್ಛೆಯಂತೆ ಕೈಕಾಲು ಆಡುವುವೆ? |
ತನುವಿನೊಳಗಿಹ ಅವನಿಚ್ಛೆಯೇ ಪರಮ
ಅವನಿರುವವರೆಗೆ ಆಟವೋ ಮೂಢ || ..308
*********************
-ಕ.ವೆಂ.ನಾಗರಾಜ್.
ಭಕ್ತಿಯ ನಿರ್ವಚನ ಮತ್ತು ನಯನದ ಭಾಷ್ಯ ದಿಟವಾಗಿದೆ ಮತ್ತು ಮನೋಜ್ಞವಾಗಿ ರಚಿತವಾಗಿದೆ.
ಪ್ರತ್ಯುತ್ತರಅಳಿಸಿಧನ್ಯವಾದ, ಬದರೀನಾಥರೇ.
ಪ್ರತ್ಯುತ್ತರಅಳಿಸಿ