ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಭಾನುವಾರ, ಆಗಸ್ಟ್ 12, 2012

ಬದನೆಕಾಯಿ ಮತ್ತು ಪ್ರಖ್ಯಾತ ಹಿಂದೂಸ್ತಾನಿ ಗಾಯಕ



     ಇದು 14 ವರ್ಷಗಳ ಹಿಂದಿನ ಘಟನೆ. ನಾನಾಗ ಬೇಲೂರಿನಲ್ಲಿ ಉಪತಹಸೀಲ್ದಾರನಾಗಿದ್ದೆ. ಜಿಲ್ಲೆಯಲ್ಲಿ ಹೊಯ್ಸಳ ಮಹೋತ್ಸವ ಸಡಗರದಿಂದ ನಡೆದಿತ್ತು. ಬೇಲೂರಿನಲ್ಲಿ ಒಂದು ದಿನ ಮತ್ತು ತಾಲ್ಲೂಕಿನ ಪುಷ್ಪಗಿರಿಯ ಬಯಲು ರಂಗ ಮಂದಿರದಲ್ಲಿ ಎರಡು ದಿನಗಳ ಕಾರ್ಯಕ್ರಮ ಏರ್ಪಾಡಾಗಿತ್ತು. ತಾಲ್ಲೂಕಿಗೆ ಬರುವ ಗಣ್ಯರ, ಕಲಾವಿದರುಗಳ, ಹಿರಿಯ ಅಧಿಕಾರಿಗಳ ಶಿಷ್ಟಾಚಾರದ ವ್ಯವಸ್ಥೆಯ - ಸ್ವಾಗತ, ವಸತಿ ಮತ್ತು ಊಟೋಪಚಾರಗಳು ಸೇರಿದಂತೆ - ಹೊಣೆಗಾರಿಕೆಯನ್ನು ಜಿಲ್ಲಾಧಿಕಾರಿಯವರು ನನಗೆ ವಹಿಸಿದ್ದರು. ಪುಷ್ಪಗಿರಿಯಲ್ಲಿ (ಹಳೇಬೀಡಿನಿಂದ ಸುಮಾರು 5 ಕಿ.ಮೀ. ದೂರವಿರುವ ಒಂದು ಗ್ರಾಮ) ಅಂದು ಸಂಜೆ ಹೆಸರುವಾಸಿಯಾದ ಹಿಂದುಸ್ತಾನೀ ಗಾಯಕರಿಂದ ಗಾಯನದ ಕಾರ್ಯಕ್ರಮ ನಡೆದಿತ್ತು. ಅವರೊಡನೆ ಅವರ ಮಗಳೂ ಹಾಡುತ್ತಿದ್ದಳು. ಸ್ಥಳೀಯರಿಗೆ ಅದು ರುಚಿಸುತ್ತಿರಲಿಲ್ಲ. ಗಾಯಕರು ಆಲಾಪನೆ ಮಾಡುತ್ತಿದ್ದಂತೆ ಸೇರಿದ್ದ ಗ್ರಾಮಸ್ಥರೂ ರಾಗ ತೆಗೆಯುತ್ತಿದ್ದರು. ಜಿಲ್ಲಾಧಿಕಾರಿಯವರು ಹಿಂದೂಸ್ತಾನೀ ಗಾಯನವನ್ನು ಇಷ್ಟಪಡುತ್ತಿದ್ದು, ಸ್ವತಃ ಆಸಕ್ತಿ ವಹಿಸಿ ಅವರನ್ನು ಕಾರ್ಯಕ್ರಮ ನೀಡಲು ಆಹ್ವಾನಿಸಿದ್ದರಲ್ಲದೆ ತಮ್ಮ ಕುಟುಂಬವರ್ಗದ ಸಹಿತ ಕಾರ್ಯಕ್ರಮ ವೀಕ್ಷಿಸಲು ಬಂದಿದ್ದು ಜನರ ಪ್ರತಿಕ್ರಿಯೆ ಅವರಿಗೆ ಮುಜುಗರ ಉಂಟುಮಾಡಿತ್ತು. ನಮ್ಮನ್ನೆಲ್ಲಾ ಕರೆಸಿ ಜನಗಳ ನಡುವೆ ಅಲ್ಲಲ್ಲಿ ಇದ್ದು ರಸಭಂಗ ಉಂಟುಮಾಡುವುದನ್ನು ತಡೆಯಲು ತಾಕೀತು ಮಾಡಿದರು. ನಮ್ಮ ಸಿಬ್ಬಂದಿಗೆ ಗಾಯಕರ ರಾಗಕ್ಕೆ ತಮ್ಮದೇ ರಾಗ ಸೇರಿಸುತ್ತಿದ್ದ ಜನರನ್ನು ತಡೆದು ಹೊರಗೆ ಕಳಿಸುವುದೇ ಕೆಲಸವಾಯಿತು. ನಮ್ಮೆಲ್ಲರ ಶ್ರಮದಿಂದ ತಕ್ಕಮಟ್ಟಿಗೆ ಪರಿಸ್ಥಿತಿ ಹದಕ್ಕೆ ಬಂದಿತು. 
      ಕಾರ್ಯಕ್ರಮ ಮುಗಿಯುವ  ವೇಳೆಗೆ ಗಾಯಕರಿಗೆ ಊಟದ ವ್ಯವಸ್ಥೆ ಆಗಬೇಕಿತ್ತು. ಊಟಕ್ಕೆ ಏನು ಬಯಸುತ್ತಾರೆಂದು ಕೇಳಿ ಅವರು ಹೇಳಿದ ಪದಾರ್ಥವನ್ನು (ಅದರ ಹೆಸರು ನನಗೆ ನೆನಪಿಲ್ಲ) ತರಲು 40 ಕಿ.ಮೀ. ದೂರದ ಹಾಸನಕ್ಕೆ ಕಾರಿನಲ್ಲಿ ಹೋದ ರಾಜಸ್ವ ನಿರೀಕ್ಷಕರು ಹಾಸನದ ಹಾಸನ ಮೊಟೆಲ್ (ಅರೆಸರ್ಕಾರಿ ಒಡೆತನದ ಸ್ಟಾರ್ ಹೋಟೆಲ್)ನಿಂದ 3 ಪ್ಲೇಟಿಗಾಗುವಷ್ಟು ಆ ಪದಾರ್ಥವನ್ನು ಹಾಟ್ ಬಾಕ್ಸಿನಲ್ಲಿ ಇರಿಸಿಕೊಂಡು ತಂದಿದ್ದರು. ಅದರ ಬೆಲೆ ರೂ. 850/- ಆಗಿತ್ತಂತೆ. ಅದೆಂಥಹಾ ಪದಾರ್ಥವೆಂದು ನಾನು ಕುತೂಹಲದಿಂದ ನೋಡಿದರೆ ಅದು ದಪ್ಪ ಗಾತ್ರದ ಗುಂಡು ಬದನೆಕಾಯಿಯನ್ನು ಬೇಯಿಸಿ ಮಸಾಲೆ ಸೇರಿಸಿ ಕಮಲದ ಹೂವಿನಂತೆ ಕತ್ತರಿಸಿ ಅಂದವಾಗಿ ಜೋಡಿಸಿದ ತಿಂಡಿಯಾಗಿತ್ತು. ಬದನೆಕಾಯಿ ಪಲ್ಯದ ವಾಸನೆ ಬರುತ್ತಿತ್ತು. ಇದಕ್ಕೆ 850/- ರೂಪಾಯಿಯೇ ಎಂದು ಅಚ್ಚರಿಪಟ್ಟಿದ್ದೆ. ದೊಡ್ಡವರ ಸಹವಾಸ ಸಾಕು ಅನ್ನಿಸಿತ್ತು. ಊಟಕ್ಕೆ ಆ ಗಾಯಕರು ತಮ್ಮ ಮಗಳೊಂದಿಗೆ ಕುಳಿತು ನನಗೆ ಕೇಳಿದ್ದ ಪ್ರಶ್ನೆ ಇದು: "ರೋಡ್ ಸೈಡ್ ಡಾಬಾ ಸೇ ಲಾಯಾ ಕ್ಯಾ?" ಒಳಗೊಳಗೆ ಸಿಟ್ಟು ಉಕ್ಕಿ ಬರುತ್ತಿದ್ದರೂ ನಿರ್ವಿಕಾರ ಮುಖಭಾವದಿಂದ ಒಂದು ನಿಮಿಷ ಬಿಟ್ಟು ನಾನು ಕೊಟ್ಟಿದ್ದ ಉತ್ತರ 'ನಹಿ' ಎಂದು ಮಾತ್ರ. ದೊಡ್ಡವರೆನಿಸಿಕೊಂಡವರ ಸಣ್ಣತನದ ದರ್ಶನ ನನಗಾಗಿತ್ತು. 

3 ಕಾಮೆಂಟ್‌ಗಳು:

  1. ದೊಡ್ಡವರೂ ದೊಡ್ಡವರಾಗಿರುವುದು ಅಪರೂಪ ಅಲ್ವಾ ಸಾರ್. ಎಡಕೈನಲ್ಲಿ ಸಿಗರೇಟ್ ಉರಿಸುತ್ತಲೇ ಧೂಮಪಾನದ ದುಷ್ಪರಿಣಾಮಗಳ ಲೆಕ್ಚರ್ ಕೊಡುವವರನ್ನು ನೋಡಿದ್ದೇನೆ.

    ಇವರನ್ನೆಲ್ಲ ನೋಡಿದರೆ ಬರೀ ದೂರದಿಂದಲೇ ದೊಡ್ಡವರನ್ನು ನೋಡಿ ಸಂತೋಷ ಪಡುವುದು ಒಳ್ಳೆಯದೇನೋ!

    ಪ್ರತ್ಯುತ್ತರಅಳಿಸಿ
  2. :) ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ ಅನ್ನುವ ಗಾದೆ ಹುಟ್ಟಿದ್ದು ಇಂತಹ ಕಾರಣಗಳಿಂದಲೇ. ದನ್ಯವಾದ, ಬದರಿನಾಥರೇ.

    ಪ್ರತ್ಯುತ್ತರಅಳಿಸಿ
    ಪ್ರತ್ಯುತ್ತರಗಳು
    1. Nataraju Seegekote Mariyappa
      nice article sir..

      Shivaram Kaansen
      KRISHNAA NEE BEYGANE BAARO emba haadannu HINDUSTHAANIyaru haadidare KRISHNA ODI HOGUTTHAANE ashte ! BHAARATHEEYA sangeethakke PARSI berake aadameley HINDUSTAANI huttirabeku !

      Vijayalaxmi Subbrao
      ಆ ಖಾದ್ಯದ ‌ಹೆಸರು ಎಣ್ಮುಳಗಾಯಿ.(ಬದನೇಕಾಯಿರ ಎಣ್ಣೆ ಗಾಯಿ)ರೊಟ್ಟಿ ಜೊತೆ ತಿನ್ನುವ ವಿಶೇಷ ಖಾದ್ಯ.ಆದರೆ ಕೆಲವರು ತಿನ್ನ ಲಿಕ್ಕಾಗಿಯೇ ಬದುಕುತ್ತಾರೆ.ಗಾದೆ ಇದೆಯಲ್ಲ,.....‌‌‌‌‌.‌
      ....‌‌‌.........‌.‌‌ಬಲ್ಲನೇ ಮರುಘದ ಘಮವಾ?

      ಅಳಿಸಿ