ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಶನಿವಾರ, ಏಪ್ರಿಲ್ 26, 2014

ಹೀಗೂ ಉಂಟು!

ಅರ್ಥವಿಲ್ಲದ ಇಲಾಖಾ ವಿಚಾರಣೆಗಳು - ೪: 
ಹೀಗೂ ಉಂಟು!
     ಹಣ ನುಂಗಿ ದಕ್ಕಿಸಿಕೊಂಡ ಮತ್ತು ಕೆಲಸ ಮಾಡದೆಯೂ ಸುಮಾರು ಎಂಟು ವರ್ಷಗಳ ಕಾಲ ಸಂಬಳ ಪಡೆದು ಸಹಜ ನಿವೃತ್ತಿಯಾದ ನೌಕರನ, ಸಾರ್ವಜನಿಕರಿಗೆ ಸೇರಬೇಕಾದ ಟನ್ನುಗಟ್ಟಲೆ ಅಕ್ಕಿ, ಗೋಧಿಗಳನ್ನು ಅಧಿಕಾರಿಗಳೇ ಕಾಳಸಂತೆಯಲ್ಲಿ ಮಾರಿ ರೆಡ್ ಹ್ಯಾಂಡಾಗಿ ಸಿಕ್ಕಿಹಾಕಿಕೊಂಡರೂ ಶಿಕ್ಷೆಯಾಗದೆ ಪಾರಾದ, ಭೂರಹಿತ ಕೃಷಿಕಾರ್ಮಿಕರ ಹೆಸರಿನಲ್ಲಿ ೫೦ ಎಕರೆ ಅರಣ್ಯ ಪ್ರದೇಶವನ್ನು ಐವರು ಕೋಟ್ಯಾಧೀಶ್ವರರು ನುಂಗಿ ನೀರು ಕುಡಿದ ಸಂಗತಿಗಳನ್ನು ಹಿಂದಿನ ಲೇಖನಗಳಲ್ಲಿ ಕಂಡೆವು. ಹಣ ದುರುಪಯೋಗ ಮಾಡಿಕೊಂಡುದು ತಿಳಿದರೂ ಮೇಲಾಧಿಕಾರಿಗಳೇ ರಕ್ಷಣೆಗೆ ನಿಂತ ಪ್ರಕರಣದ ಕುರಿತು ಈಗ ನೋಡೋಣ.
     ಅವನು ಒಬ್ಬ ಗ್ರಾಮಲೆಕ್ಕಿಗ, ಹೆಸರು ಫರ್ನಾಂಡಿಸ್ ಎಂದಿಟ್ಟುಕೊಳ್ಳೋಣ. ಇದು ೩೦ ವರ್ಷಗಳ ಹಿಂದಿನ ಘಟನೆ. ಬ್ಯಾಂಕಿನ ನಕಲಿ ಸೀಲು ಮಾಡಿಟ್ಟುಕೊಂಡು ವಸೂಲು ಮಾಡಿದ ಪೂರ್ಣ ಹಣ ಗುಳುಂ ಮಾಡಿಯೂ ದಕ್ಕಿಸಿಕೊಂಡಿದ್ದ ಒಬ್ಬನ ಕಥೆ ಹಿಂದೆಯೇ ಹೇಳಿರುವೆ. ಇವನು ಅಷ್ಟು ಪ್ರಚಂಡನಲ್ಲವಾದರೂ ಅವನ ತಮ್ಮನೆನ್ನಬಹುದು. ಇವನು ಮಾಡುತ್ತಿದ್ದುದೇನೆಂದರೆ, ವಸೂಲಾದ ಸರ್ಕಾರಿ ಬಾಕಿಗಳನ್ನು ಬೇರೆ ಬೇರೆ ಶೀರ್ಷಿಕೆಗಳಲ್ಲಿ ಬೇರೆ ಬೇರೆ ಚಲನ್ನುಗಳಲ್ಲಿ ಬರೆದು ಬ್ಯಾಂಕಿಗೆ ಜಮ ಮಾಡಬೇಕಿದ್ದು, ಇವನು ವಸೂಲಾದ ನೀರು ತೆರಿಗೆ, ನಿರ್ವಹಣಾಕರಗಳನ್ನು ಹೊರತುಪಡಿಸಿ ಉಳಿದೆಲ್ಲಾ ಹಣ ಜಮಾ ಮಾಡುತ್ತಿದ್ದ. ಈ ಬಾಬಿನಲ್ಲಿ ಬರುತ್ತಿದ್ದ ಹಣ ಜಾಸ್ತಿ ಇದ್ದುದರಿಂದ ಹೀಗೆ ಮಾಡುತ್ತಿದ್ದನೇನೋ! ಈ ಕೆಲಸ ಸುಮಾರು ೪ ವರ್ಷಗಳ ವರೆಗೆ ನಡೆದಿದ್ದರೂ ಯಾರೊಬ್ಬರ ಗಮನಕ್ಕೆ ಬಂದಿರಲಿಲ್ಲವೆಂದರೆ ಆಶ್ಚರ್ಯವೇ ಸರಿ. ನಂತರದಲ್ಲಿ ಗ್ರಹಚಾರವಶಾತ್ ಒಬ್ಬರು ಉಪತಹಸೀಲ್ದಾರರು ಅವನ ದಫ್ತರ್ ತನಿಖೆ ಮಾಡಿದಾಗ ಈ ವಿಷಯ ಹೊರಬಿದ್ದಿತ್ತು. ತಕ್ಷಣದಲ್ಲಿ ಅವರು ಗ್ರಾಮಲೆಕ್ಕಿಗ ಆ ತಾಲ್ಲೂಕಿನಲ್ಲಿ ಕೆಲಸ ಮಾಡುತ್ತಿದ್ದ ದಿನದಿಂದಲೂ ಪರಿಶೀಲಿಸಿದಾಗ ಸುಮಾರು ೬೦ ಸಾವಿರ ರೂ. ದುರುಪಯೋಗವಾಗಿದ್ದು ಗೊತ್ತಾಯಿತು. ೩೦ ವರ್ಷಗಳ ಹಿಂದಿನ ೬೦ ಸಾವಿರವೆಂದರೆ ಈಗಿನ ಬೆಲೆ ಎಷ್ಟು ಎಂಬುದನ್ನು ನಿಮ್ಮ ಊಹೆಗೇ ಬಿಡುವೆ. ವಿಷಯ ಜಿಲ್ಲಾಧಿಕಾರಿಯವರ ಗಮನಕ್ಕೆ ತರಲಾಯಿತು. ಗ್ರಾಮಲೆಕ್ಕಿಗನನ್ನು ಅಮಾನತ್ತಿನಲ್ಲಿ ಇರಿಸಿದರು. ಈ ಹಂತದಲ್ಲಿ ಅವನಿಂದ ದುರುಪಯೋಗವಾದ ಹಣವನ್ನು ಕಟ್ಟಿಸಲು ಪ್ರಯತ್ನಿಸಲಾಯಿತು. ಕ್ರಿಮಿನಲ್ ಮೊಕದ್ದಮೆ ಹೂಡುವ ಭಯ ತೋರಿಸಿದ್ದಾಯಿತು. ಆದರೆ, ಕಟ್ಟಲು ಅವನಲ್ಲಿ ಬಿಡಿಗಾಸೂ ಇರಲಿಲ್ಲ. ಸಿಕ್ಕ ಹಣವನ್ನೆಲ್ಲಾ ಆತ ಬಾಂಬೆ, ಮದರಾಸುಗಳಿಗೆ ಹೋಗಿ ಹೆಣ್ಣು, ಹೆಂಡಗಳಿಗೆ ಸುರಿದುಬಿಟ್ಟಿದ್ದ ಅವನು ಅಕ್ಷರಶಃ ಪಾಪರ್ ಆಗಿದ್ದ. ಸಂಬಳ ಬಿಟ್ಟರೆ ಬೇರೆ ಗತಿಯಿರಲಿಲ್ಲ. ಉಪತಹಸೀಲ್ದಾರ್, ರೆವಿನ್ಯೂ ಇನ್ಸಪೆಕ್ಟರ್ ಜೊತೆಗೂಡಿ ಬೇರೊಂದು ತಾಲ್ಲೂಕಿನಲ್ಲಿದ್ದ ಫರ್ನಾಂಡಿಸನ ತಂದೆಯನ್ನು ಕಂಡು, ಹಣ ಕಟ್ಟದಿದ್ದರೆ ಮಗ ಜೈಲಿಗೆ ಹೋಗುತ್ತಾನೆಂದು ತಿಳಿಸಿದಾಗ ಮನೆಯ ಮರ್ಯಾದೆಗೆ ಅಂಜಿದ ಆ ಬಡಪಾಯಿ ರೈತ ತನ್ನ ಹೆಸರಿನಲ್ಲಿದ್ದ ಜೀವನಾಧಾರವಾಗಿದ್ದ ಎರಡೂವರೆ ಎಕರೆ ಜಮೀನಿನಲ್ಲಿ ಎರಡು ಎಕರೆ ಜಮೀನು ಮಾರಿ, ಮಗ ನುಂಗಿ ಹಾಕಿದ್ದ ಹಣವನ್ನು ಸರ್ಕಾರಕ್ಕೆ ಕಟ್ಟಿದ. ಮರ್ಯಾದೆಗೆ ಅಂಜುವ ಅಪ್ಪನಿಗೆ ಮನೆಹಾಳು ಮಗ! 
     ಜಿಲ್ಲಾಧಿಕಾರಿಯವರಿಂದ ಇಲಾಖಾ ವಿಚಾರಣೆ ಏಕೆ ಮಾಡಬಾರದೆಂದು ಸಂಬಂಧಿಸಿದ ಗ್ರಾಮಲೆಕ್ಕಿಗ, ಅವನ ಲೆಕ್ಕಪತ್ರಗಳನ್ನು ಸರಿಯಾಗಿ ಪರಿಶೀಲಿಸದಿದ್ದ ರೆವಿನ್ಯೂ ಇನ್ಸ್ ಪೆಕ್ಟರುಗಳು, ಗುಮಾಸ್ತರುಗಳು, ಉಪತಹಸೀಲ್ದಾರರುಗಳು ಸೇರಿದಂತೆ ೧೩ ನೌಕರರುಗಳಿಗೆ ನೋಟೀಸುಗಳು ಜಾರಿಯಾದವು. ಒಬ್ಬ ಚಾಣಾಕ್ಷ ಉಪತಹಸೀಲ್ದಾರ ಜಿಲ್ಲಾಧಿಕಾರಿಯವರಿಗೆ ವರದಿ ಸಲ್ಲಿಸುವಾಗ ತನ್ನ ಹೆಸರಿನ ಬದಲಿಗೆ ನನ್ನ ಹೆಸರನ್ನು ಸೇರಿಸಿದ್ದರಿಂದ ನನಗೂ ನೋಟೀಸು ಬಂದಿತ್ತು. ವಾಸ್ತವಾಂಶ ತಿಳಿಸಿ ನಾನು ಉತ್ತರಿಸಿದ್ದೆ. ಫರ್ನಾಂಡಿಸ್ ಜಿಲ್ಲಾಧಿಕಾರಿಯವರ ಕಛೇರಿಯ ಹಿರಿಯ ಆಧಿಕಾರಿಗೆ ಐದು ಸಾವಿರ ರೂ. ನೈವೇದ್ಯ ಅರ್ಪಿಸಿ ಕೈಮುಗಿದು ಬಚಾವು ಮಾಡಲು ಕೋರಿಕೊಂಡ. ಕಾಣಿಕೆಯಿಂದ ಸಂತೃಪ್ತರಾದ ಅಧಿಕಾರಿಯ ಸಲಹೆಯಂತೆ ತಹಸೀಲ್ದಾರರು ಸರ್ಕಾರಕ್ಕೆ ಬರಬೇಕಾಗಿದ್ದ ಹಣ ಪೂರ್ಣವಾಗಿ ಬಂದಿರುವುದರಿಂದ ನೌಕರರಿಗೆ ಎಚ್ಚರಿಕೆ ನೀಡಿ ಪ್ರಕರಣ ಮುಗಿಸಬಹುದೆಂದು ಪತ್ರ ಬರೆದರು. ವಿಷಯ ಮುಗಿದೇಹೋಯಿತು. ವಿಚಾರಣೆ ನಡೆಯಲೇ ಇಲ್ಲ. ಒಂದು ವೇಳೆ ವಿಚಾರಣೆ ನಡೆದಿದ್ದರೆ, ತಾತ್ಕಾಲಿಕವಾಗಿಯಾದರೂ ಹಣ ದುರುಪಯೋಗವಾಗಿದ್ದುದು ರುಜುವಾತಾಗಿ ಫರ್ನಾಂಡಿಸ್ ನೌಕರಿ ಕಳೆದುಕೊಳ್ಳುತ್ತಿದ್ದ! ಈ ಪ್ರಕರಣದಲ್ಲಿ ಯಾವುದೋ ಒಂದು ಸಂದರ್ಭದ ಹಣ ದುರುಪಯೋಗವಾಗಿರಲಿಲ್ಲ. ಸತತವಾಗಿ ೪ ವರ್ಷಗಳ ಕಾಲ ಪ್ರತಿತಿಂಗಳೂ ವಸೂಲಾದ ಸರ್ಕಾರಿ ಹಣವನ್ನು ಸ್ವಂತಕ್ಕೆ ಬಳಸಿಕೊಂಡುದು ಸಣ್ಣ ಅಪರಾಧವಾಗಿರಲಿಲ್ಲ. ಇಂತಹ ಅಪರಾಧ ಮಾಡಿಯೂ ಒಬ್ಬ ನೌಕರನ ವಿರುದ್ಧ ಇಲಾಖಾ ವಿಚಾರಣೆಯೇ ನಡೆಯಲಿಲ್ಲವೆಂದರೆ ಭ್ರಷ್ಠ ವ್ಯವಸ್ಥೆಯ ಬಗ್ಗೆ ಏನು ಹೇಳಬೇಕೋ ತಿಳಿಯದು. ಅವನಿಗೆ ಸಹಕರಿಸಿದ ಅಥವ ಗಮನಿಸದೆ ಕರ್ತವ್ಯಲೋಪ ಮಾಡಿದ ಇತರ ೧೩ ಸಹೋದ್ಯೋಗಿಗಳೂ ಬಚಾವಾದರು. ಮೇಲಾಧಿಕಾರಿ ಪ್ರಾಮಾಣಿಕರಾಗಿದ್ದಿದ್ದರೆ, ಕಥೆಯೇ ಬೇರೆಯದಿರುತ್ತಿತ್ತು. ಜಡ್ಡುಗಟ್ಟಿದ ವ್ಯವಸ್ಥೆ ಸುಧಾರಣೆಯಾಗಬೇಕೆಂದರೆ ಜನರು ಜಾಗೃತರಾಗುವುದೊಂದೇ ಮಾರ್ಗ.
-ಕ.ವೆಂ.ನಾಗರಾಜ್.
**************
ದಿನಾಂಕ 23-04-2014ರ ಜನಹಿತ ಪತ್ರಿಕೆಯ ಅಂಕಣ 'ಜನಕಲ್ಯಾಣ'ದಲ್ಲಿ ಪ್ರಕಟಿತ

ಗುರುವಾರ, ಏಪ್ರಿಲ್ 24, 2014

ಉಪ್ಪು ತಿಂದ ಮೇಲೆ . . . 3/3

 ಹಿಂದಿನ ಭಾಗಕ್ಕೆ ಲಿಂಕ್: ಉಪ್ಪು ತಿಂದ ಮೇಲೆ . . .2/3
ಮುಂದೆ:
   ಸಲೀಮನ ಹೆಂಡತಿ ಶಾಕಿರಾಬಾನು ಕಿರಣನಿಗೆ ಫೋನು ಮಾಡಿದ್ದಳು, "ಭಯ್ಯಾ, ಸಲೀಂ ಎಲ್ಲಿದಾರೆ? ಎರಡು ದಿನದಿಂದಾ ಫೋನು ಮಾಡಿಲ್ಲ. ಅವರ ಫೋನು ಸ್ವಿಚಾಫ್ ಆಗಿದೆ. ನಿಮಗೇನಾದರೂ ಗೊತ್ತಾ?" ಕಿರಣ, "ನಾನು ಮೊನ್ನೇನೇ ವಾಪಸು ಬಂದೆ. ಅವನು ಇನ್ನೂ ಏನೋ ಕೆಲಸ ಇದೆ. ಬರೋದು ಒಂದು ವಾರ ಆಗುತ್ತೆ ಅಂತ ಹೇಳಿದ್ದ. ಅದಕ್ಕೇ ನಾನು ಬಸ್ಸಿನಲ್ಲಿ ವಾಪಸ್ಸು ಬಂದುಬಿಟ್ಟೆ" ಅಂದ. ಆಕೆ, "ಅವರು ಬರೋದು ಎಷ್ಟು ದಿನ ಆದರೂ ದಿನಕ್ಕೆ ಎರಡು ಮೂರು ಸಲ ನನಗೆ ಫೋನು ಮಾಡುತ್ತಾರೆ. ಈಸಲ ಮಾಡಲಿಲ್ಲವಲ್ಲಾ, ಅದಕ್ಕೇ ಗಾಬರಿ ಆಗಿದೆ". "ಅವನದು ಎಂಥದೋ ಚೀಟಿ ವ್ಯವಹಾರ ಅಂತೆ. ತಲೆ ಕೆಡಿಸಿಕೊಂಡಿದ್ದ. ಅದಕ್ಕೇ ಫೋನು ಮಾಡಿಲ್ಲವೇನೋ. ನೀವು ಗಾಬರಿ ಮಾಡಿಕೊಳ್ಳಬೇಡಿ. ಫೋನು ಮಾಡ್ತಾನೆ ಬಿಡಿ" ಎಂದು ಸಮಾಧಾನ ಮಾಡಿದ.
     ಇದಾಗಿ ಎರಡು ದಿನಗಳು ಕಳೆದಿದ್ದವು. ಅಂದು ರಾತ್ರಿ ಒಂಬತ್ತು ಗಂಟೆಯ ವೇಳೆಗೆ ಪೋಲಿಸ್ ಜೀಪು ಕಿರಣನ ಮನೆಯ ಮುಂದೆ ನಿಂತಿತ್ತು. 'ಕಿರಣ್ ಇದ್ದಾರಾ?' ಎಂದು ಕೇಳಿ ಬಾಗಿಲು ಬಡಿದವರಿಗೆ ಕಿರಣನೇ ಬಾಗಿಲು ತೆಗೆದ. ದಫೇದಾರ, "ಸಾಹೇಬ್ರು ಕರಿತಿದಾರೆ. ಬರಬೇಕಂತೆ" ಎಂದದ್ದಕ್ಕೆ ಕಾರಣ ವಿಚಾರಿಸಿದಾಗ, 'ನಂಗೊತ್ತಿಲ್ಲ' ಎಂಬ ಉತ್ತರ ಬಂತು. ಬೆಳಿಗ್ಗೆ ಬರುತ್ತೇನೆಂದರೂ ಕೇಳದೆ, "ಒಂದೈದು ನಿಮಿಷದ ಕೆಲಸ. ಏನೋ ಕೇಳಬೇಕಂತೆ. ಬಂದು ಹೋಗಿ ಸಾರ್" ಎಂದು ಬಲವಂತದಿಂದ ಕಿರಣನನ್ನು ಜೀಪಿನಲ್ಲಿ ಕೂರಿಸಿಕೊಂಡರು. ಪೋಲಿಸ್ ಠಾಣೆ ತಲುಪುತ್ತಿದ್ದಂತೆಯೇ ಅವರ ವರಸೆಯೇ ಬದಲಾಯಿತು. ಬನ್ನಿ ಸಾರ್, ಹೋಗಿ ಸಾರ್ ಅನ್ನುತ್ತಿದ್ದ ದಫೇದಾರ, ಕಿರಣನನ್ನು ಕತ್ತು ಹಿಡಿದು ಠಾಣೆಯ ಒಳಕ್ಕೆ ದೂಡಿದ ರಭಸಕ್ಕೆ ಅವನು ಗೋಡೆಗೆ ಡಿಕ್ಕಿ ಹೊಡೆದು ಬಿದ್ದಿದ್ದ. ಏನಾಗುತ್ತಿದೆ ಎಂದು ತಿಳಿಯದೆ ಅವನು ಕಕ್ಕಾಬಿಕ್ಕಿಯಾಗಿದ್ದಾಗಲೇ ಇನ್ನೊಬ್ಬ ಪೇದೆ ಜಾಡಿಸಿ ಅವನ ಬೆನ್ನಿಗೆ ಒದ್ದಿದ್ದ. ಸಬ್ಬಿನಿಸ್ಪೆಕ್ಟರ್ ರೌಂಡ್ಸಿಗೆ ಹೋಗಿದ್ದವರು ಇನ್ನೂ ಬಂದಿರದಿದ್ದರಿಂದ ಅವನನ್ನು ಸೆಲ್ಲಿನೊಳಗೆ ದೂಡಿ ಬೀಗ ಹಾಕಿದರು. ಕಿರಣನಿಗೆ ಏನೋ ಎಡವಟ್ಟಾಗಿದೆ, ತಾನು ಮಾಡಿದ ಕೆಲಸದ ಸುಳಿವು ಅವರಿಗೆ ಸಿಕ್ಕಿರಬಹುದೆಂದು ಅಂದುಕೊಂಡು ಗಾಬರಿಯಾಗಿ ಮುದುರಿ ಕುಳಿತು ಏನು ಹೇಳಬೇಕೆಂದು ಮನಸ್ಸಿನಲ್ಲೇ ಲೆಕ್ಕ ಹಾಕತೊಡಗಿದ.
     'ಆ ಬದ್ಮಾಶ್ ಇದ್ದನೇನ್ರೋ?' ಎನ್ನುತ್ತಲೇ ಒಳಬಂದಿದ್ದ ಸಬ್ಬಿನಿಸ್ಪೆಕ್ಟರರ ಧ್ವನಿ ಕೇಳಿಯೇ ಕಿರಣ ನಡುಗಿಬಿಟ್ಟಿದ್ದ. 'ಇನ್ನು ನನ್ನ ಕಥೆ ಮುಗಿಯಿತು' ಎಂದು ಮನಸ್ಸಿನಲ್ಲೇ ದೇವರನ್ನು ಪ್ರಾರ್ಥಿಸಿದ, 'ಈ ಕುತ್ತಿನಿಂದ ಒಮ್ಮೆ ಹೊರಬಂದರೆ ಸಾಕು. ನಾನು ಇನ್ನು ಮುಂದೆ ಯಾವ ತಪ್ಪೂ ಮಾಡುವುದಿಲ್ಲ, ದೇವರೇ ಕಾಪಾಡು'. ಪಿ.ಸಿ. ಒಬ್ಬ ಸೆಲ್ಲಿನೊಳಗಿಂದ ಕಿರಣನ ಕುತ್ತಿಗೆ ಪಟ್ಟಿ ಹಿಡಿದು ದರದರ ಎಳೆದುತಂದು ನಿಲ್ಲಿಸಿದ. ತಲೆ ತಗ್ಗಿಸಿ ನಿಂತಿದ್ದ ಕಿರಣನ ಗದ್ದವನ್ನು ಲಾಠಿಯಿಂದ ಮೇಲಕ್ಕೆತ್ತುತ್ತಾ ಸಬ್ಬಿನಿಸ್ಪೆಕ್ಟರ್ ಗದರಿಸಿದ:
"ಮಗನೇ, ಸಲೀಮನಿಗೆ ಏನು ಮಾಡಿದೆ ಹೇಳು. ನಾನು ಬಾಯಿ ಬಿಡಿಸೋ ಮುಂಚೆಯೇ ನೀನೇ ಬಾಯಿ ಬಿಟ್ಟರೆ ಬದುಕಿಕೊಳ್ತೀಯ. ಬೊಗಳು."
"ಸಾರ್, ನಾನೇನೂ ಮಾಡಿಲ್ಲ ಸಾರ್. ಭಾನುವಾರ ನಾನೂ, ಸಲೀಂ ಬೆಂಗಳೂರಿಗೆ ಹೋಗಿದ್ದೆವು. ಅವತ್ತು ಸಂಜೆಗೇ ನಾನು ವಾಪಸು ಬಂದೆ. ಅವನು ಎಂಥದೋ ಚೀಟಿ ವ್ಯವಹಾರ ಅಂತ ಇನ್ನೂ ಒಂದು ವಾರ ಇರ್ತೀನಿ ಅಂತ ಹೇಳಿದ್ದ. ಅಷ್ಟೇ ನನಗೆ ಗೊತ್ತಿರೋದು ಸಾರ್."
     ರಪ್ಪನೆ ಬೀಸಿದ ಲಾಠಿಯಿಂದ ಬಿದ್ದ ಪೆಟ್ಟಿನಿಂದ ಅವನ ಎಡತೋಳು ಮುರಿದೇಹೋಯಿತು ಎನ್ನುವಂತೆ ಆಗಿ ನೋವಿನಿಂದ ಚೀರುತ್ತಾ ಕಿರಣ ಹೇಳಿದ,
"ಪ್ಲೀಸ್ ಹೊಡೀಬೇಡಿ ಸಾರ್. ನಾನು ಹೇಳ್ತಾ ಇರೋದು ನಿಜಾ ಸಾರ್".
"ಬೆಂಗಳೂರಿಗೆ ಎಷ್ಟು ಹೊತ್ತಿಗೆ ಹೋದಿರಿ? ಏನೇನು ಮಾಡಿದಿರಿ?"
"ಸಾರ್, ಬೆಳಿಗ್ಗೆ ಹತ್ತು ಅಥವ ಹತ್ತೂವರೆ ಹೊತ್ತಿಗೆ ಅಲ್ಲಿದ್ದಿವಿ ಸಾರ್. ಒಟ್ಟಿಗೇ ತಿಂಡಿ ತಿಂದೆವು. ನಾನು ನನ್ನ ಚಿಕ್ಕಪ್ಪನ ಮನೆಗೆ ಹೋಗಿ ಮಧ್ಯಾಹ್ನ ಸಿಗ್ತೀನಿ ಅಂತ ಹೇಳಿ ಹೋದವನು, ಮಧ್ಯಾಹ್ನ ೩ ಗಂಟೆ ಹೊತ್ತಿಗೆ ಹೋಟೆಲ್ ರೂಮ್ ಹತ್ತಿರ ಬಂದೆ. ಅವನು ಮಲಗಿದ್ದ. ಸ್ವಲ್ಪ ಹೊತ್ತು ಮಾತನಾಡುತ್ತಿದ್ದು, ಅವನಿಗೆ ಹೇಳಿ ನಾನು ವಾಪಸು ಬಂದೆ. ಇಷ್ಟೇ ಸಾರ್ ನಡೆದಿದ್ದು. ನಿಮ್ಮಾಣೆ ನಿಜ ಸಾರ್."
"ನನ್ನಾಣೆ ಅಂತೀಯಾ" ಅನ್ನುತ್ತಾ ಬಿದ್ದ ಬಲವಾದ ಮತ್ತೊಂದು ಲಾಠಿ ಏಟಿನ ಪೆಟ್ಟಿಗೆ ಅಳುತ್ತಾ ಕುಕ್ಕರಿಸಿದ ಕಿರಣ.
"ಹೋಟೆಲ್ ರೂಮ್ ಬುಕ್ ಮಾಡಿದ್ದವರು ಯಾರು?"
"ಸಲೀಮನೇ ಬುಕ್ ಮಾಡಿದ್ದ ಸಾರ್. ಅವನು ಇನ್ನೂ ಕೆಲವು ದಿವಸ ಅಲ್ಲೇ ಇರುತ್ತಿದ್ದನಲ್ಲಾ, ಅದಕ್ಕೆ."
"ಸಲೀಮ ಅಲ್ಲ, ಬುಕ್ ಮಾಡಿದ್ದು ನೀನು. ಅದು ಸರಿ ರಮೇಶ ಅಂತ ಸುಳ್ಳು ಹೆಸರಿನಲ್ಲಿ ಏಕೆ ಬುಕ್ ಮಾಡಿದ್ದೆ?"
"ನಾನು ಮಾಡಿಲ್ಲ ಸಾರ್. ಸಲೀಮನೇ ಮಾಡಿದಾನೆ. ಯಾಕೆ ಬೇರೆ ಹೆಸರಿನಲ್ಲಿ ಬುಕ್ ಮಾಡಿದ ಅಂತ ಅವನನ್ನೇ ಕೇಳಬೇಕು, ಸಾರ್."
     ಇದನ್ನು ಕೇಳಿದ ಸಬ್ಬಿನಿಸ್ಪೆಕ್ಟರ್ ಎದ್ದು ಬಂದವರೇ ರಪರಪನೆ ಕಿರಣನಿಗೆ ಬಾರಿಸತೊಡಗಿದರು. "ಬದ್ಮಾಶ್, ನೀನು ಸುಲಭಕ್ಕೆ ಬಾಯಿ ಬಿಡಲ್ಲ. ನಿನಗೆ ಹೇಗೆ ಬಾಯಿ ಬಿಡಿಸಬೇಕು ಅಂತ ನನಗೆ ಚೆನ್ನಾಗಿ ಗೊತ್ತಿದೆ. ರಮೇಶ ಅನ್ನೋ ಹೆಸರಿನಲ್ಲಿ ರೂಮು ಬುಕ್ ಮಾಡಿದರೂ ರಿಜಿಸ್ಟರಿನಲ್ಲಿ ಸೈನು ಮಾಡುವಾಗ ಕಿರಣ ಅಂತ ಮರೆತು ಸೈನು ಮಾಡಿದಾಗಲೇ ನೀನು ಸಿಕ್ಕಿಬಿದ್ದೆ ಬಿಡು" ಎಂದಾಗ ಕಿರಣನ ಜಂಘಾಬಲ ಉಡುಗಿಹೋಯಿತು. 'ಬೆಳಿಗ್ಗೆ ಹೊತ್ತಿಗೆ ಎಲ್ಲಾ ಸರಿಯಾಗಿ ಹೇಳಿಬಿಡು. ನಿನ್ನಪ್ಪನ್ನ ಕೊಂದ ಪಾಪೀನೂ ನೀನೇ ಅನ್ನೋದಕ್ಕೂ ನಮಗೆ ಸಾಕ್ಷಿ ಸಿಕ್ಕಿದೆ' ಎಂಬ ಮಾತಂತೂ ಅವನನ್ನು ಪಾತಾಳಕ್ಕೆ ದೂಡಿಬಿಟ್ಟಿತ್ತು.
     ಬಿದ್ದ ಪೆಟ್ಟಿನ ನೋವುಗಳಿಂದ ರಾತ್ರಿಯೆಲ್ಲಾ ನರಳುತ್ತಾ ಇದ್ದ ಕಿರಣನಿಗೆ ನರಕದರ್ಶನವಾದಂತಾಗಿತ್ತು. ಮೈಮೇಲೆ ಅಂಡರ್ ವೇರ್ ಬಿಟ್ಟರೆ ಬೇರೆ ಬಟ್ಟೆ ಉಳಿಸಿರಲಿಲ್ಲ. ಮರುದಿನ ಬೆಳಿಗ್ಗೆ ಎಂಟು ಗಂಟೆಯ ವೇಳೆಗೇ ಸಬ್ಬಿನಿಸ್ಪೆಕ್ಟರರ ಆಗಮನವಾಯಿತು. ಕಾಲಿನ ಪಾದದ ಗೆಣ್ಣುಗಳ ಮೇಲೆ ಹೊಡೆದಿದ್ದರಿಂದ ಪಾದ ಊರಿದರೇ ಪ್ರಾಣ ಹೋಗುವಂತಾಗಿದ್ದ ಕಿರಣನನ್ನು ತಂದು ಅವರ ಮುಂದೆ ನಿಲ್ಲಿಸಿದ್ದರು. ಅಲ್ಲೇ ಬೆಂಚಿನ ಮೇಲೆ ಕುಳಿತಿದ್ದ ಶಾಕಿರಾಬಾನು ಕಿರಣನನ್ನು ಕಂಡವಳೇ ರೋಷದಿಂದ ಚಪ್ಪಲಿಯಿಂದ ಹೊಡೆಯಲು ಧಾವಿಸುತ್ತಿದ್ದಂತೆಯೇ ಇಬ್ಬರು ಮಹಿಳಾ ಪೋಲಿಸರು ಆಕೆಯನ್ನು ತಡೆದು ಕೂರಿಸಿದ್ದರು. ಶಾಕಿರಾಬಾನು ಎಲ್ಲವನ್ನೂ ಹೇಳಿಬಿಟ್ಟಳು. 'ಅಪ್ಪನನ್ನೇ ಕೊಂದ ಹರಾಮಕೋರ್ ಸಾರ್ ಇವನು. ನನ್ನ ಗಂಡನನ್ನೂ ಬಲಿ ತೆಗೆದುಕೊಂಡುಬಿಟ್ಟ' ಎಂದು ಅತ್ತಳು. ಸಲೀಮನ ಮನೆಯಲ್ಲೇ ಎಲ್ಲಾ ಮಾತುಕತೆಗಳಾಗುತ್ತಿದ್ದು, ಶಾಕಿರಾಗೆ ಎಲ್ಲವೂ ತಿಳಿದಿತ್ತು. ಸಲೀಮನೂ ಅವಳಿಗೆ ಹೇಳಿದ್ದ. ಹೀಗಾಗಿ ಸಣ್ಣಸ್ವಾಮಿಯ ಕೊಲೆ ಮಾಡಿದವನು ಕಿರಣನೇ ಎಂಬುದು ಜಾಹಿರಾಗಿಬಿಟ್ಟಿತು. 'ಇನ್ನು ಸತ್ಯ ಹೇಳದಿದ್ದರೆ ಉಳಿಗಾಲವಿಲ್ಲ'ವೆಂದುಕೊಂಡ ಕಿರಣ ಅದನ್ನು ಒಪ್ಪಿಕೊಂಡ. 'ದೇವರಂಥ ತಂದೇನ ಕೊಂದುಬಿಟ್ಟೆ ಸಾರ್. ಆ ಸಲೀಮನ ಮಾತು ಕೇಳಿ ಹಾಳಾಗಿಬಿಟ್ಟೆ. ಅವನು ಅದನ್ನೇ ನೆಪ ಮಾಡಿಕೊಂಡು ಬ್ಲಾಕ್ ಮೇಲ್ ಮಾಡುತ್ತಾ ಹಣ ಕೀಳುತ್ತಲೇ ಹೋದ ಸಾರ್. ಅವನು ಇದ್ದರೆ ತನ್ನ ತಂದೆಯ ಕೊಲೆ ಮಾಡಿದ್ದು ತಾನೇ ಎಂದು ಯಾವತ್ತಾದರೂ ಹೊರಬರುತ್ತೆ ಅಂತ ಅವನನ್ನೂ ಮುಗಿಸಿಬಿಟ್ಟೆ ಸಾರ್'- ಕಿರಣ ಹೇಳಿದ್ದನ್ನೆಲ್ಲಾ ಧ್ವನಿಮುದ್ರಣ ಮಾಡಿಕೊಂಡದ್ದಲ್ಲದೆ, ಲಿಖಿತ ಹೇಳಿಕೆ ಸಹ ಪಡೆದರು. ಕಿರಣ ಬೆಂಗಳೂರಿನ ಹೋಟೆಲಿನಲ್ಲಿ ಮದ್ಯದಲ್ಲಿ ವಿಷ ಬೆರೆಸಿ ಅವನ ಸಾವಿಗೆ ಕಾರಣನಾಗಿದ್ದ. ಸಲೀಮನ ಕಾರಿನಿಂದಾಗಿ ಮತ್ತು ಹೋಟೆಲಿನ ರಿಜಿಸ್ಟರಿನಲ್ಲಿ ಕಿರಣ ತನ್ನ ಸಹಿಯನ್ನೇ ಮರೆತು ಮಾಡಿದ್ದರಿಂದಾಗಿ ಪೋಲಿಸರು ಸಲೀಮನ ಮನೆ ಹುಡುಕಿಕೊಂಡು ಬಂದಿದ್ದರು. ಶಾಕಿರಾಬಾನು ಕೊಟ್ಟ ಮಾಹಿತಿ ಅದುವರೆಗ ಮುಚ್ಚಿದ್ದ ರಹಸ್ಯದ ತೆರೆಯನ್ನು ಸರಿಸಿತ್ತು. ಪ್ರಾಥಮಿಕ ವಿಚಾರಣೆ ನಂತರ ಹೆಚ್ಚಿನ ವಿಚಾರಣೆಗೆ ಬೆಂಗಳೂರು ಪೋಲಿಸರು ಕಿರಣನನ್ನು ಕರೆದೊಯ್ದರು. ಸ್ಥಳೀಯ ಠಾಣೆಯಲ್ಲಿ ಸಹ ಸಣ್ಣಸ್ವಾಮಿಯ ಕೊಲೆಯ ಕಡತ ಮತ್ತೆ ಧೂಳು ಕೊಡವಿಕೊಂಡು ಮೇಲೆ ಬಂದಿತ್ತು.
* * * *
ಕೊನೆಯಲ್ಲಿ ಒಂದು ಚೂರು ಕೊಸರು:
     ಇದು ಸತ್ಯಘಟನೆಗೆ ಕೊಟ್ಟಿರುವ ಕಥೆಯ ರೂಪ. ಹೆಸರು, ಸ್ಥಳಗಳನ್ನು ಬದಲಾಯಿಸಿರುವೆ. ಕಲ್ಪನೆಯ ಎಳೆಗಳನ್ನೂ ಮೂಲಕ್ಕೆ ಧಕ್ಕೆಯಾಗದಂತೆ ಸೇರಿಸಿರುವೆ. ಕಥೆಯ ಕಿರಣ ನನ್ನ ಅಧೀನ ನೌಕರನಾಗಿದ್ದ. ಅಮಾನತ್ತಿನಲ್ಲಿದ್ದ ಗ್ರಾಮಲೆಕ್ಕಿಗ ಕಿರಣನನ್ನು ಪುನರ್ನೇಮಿಸಿ ನಾನು ತಹಸೀಲ್ದಾರನಾಗಿ ಕೆಲಸ ಮಾಡುತ್ತಿದ್ದ ತಾಲ್ಲೂಕು ಕೇಂದ್ರದಿಂದ ಐದು ಕಿ.ಮೀ. ದೂರದ ಸ್ಥಳಕ್ಕೆ ನೇಮಿಸಿ ಆದೇಶ ಬಂದಿತ್ತು. ತಾಲ್ಲೂಕಿನ ಇನ್ನೊಂದು ಹೋಬಳಿಯಲ್ಲಿ ಗ್ರಾಮಲೆಕ್ಕಿಗರ ಹುದ್ದೆಗಳು ಹೆಚ್ಚಾಗಿ ಖಾಲಿಯಿದ್ದುದರಿಂದ ಅವನನ್ನು ಆ ಹೋಬಳಿಯ ಒಂದು ವೃತ್ತಕ್ಕೆ ನಿಯೋಜಿಸಿ ಛಾರ್ಜು ವಹಿಸಿಕೊಳ್ಳಲು ಆದೇಶಿಸಿದ್ದೆ ಮತ್ತು ಅದನ್ನು ಸ್ಥಿರೀಕರಿಸಲು ಜಿಲ್ಲಾಧಿಕಾರಿಯವರಿಗೆ ಬರೆದಿದ್ದೆ. ಆ ವೃತ್ತ ತಾಲ್ಲೂಕು ಕೇಂದ್ರದಿಂದ ಸುಮಾರು ೩೦ ಕಿ.ಮೀ. ದೂರದಲ್ಲಿತ್ತು. ಅಂದು ಮಧ್ಯಾಹ್ನವೇ ಜಿಲ್ಲಾ ಕೇಂದ್ರದಿಂದ ರಾಜ್ಯಮಟ್ಟದ ಪ್ರಭಾವಿ ರಾಜಕಾರಣಿಯವರು ದೂರವಾಣಿ ಮೂಲಕ ನನ್ನ ಕ್ರಮದ ಬಗ್ಗೆ ಆಕ್ಷೇಪಿಸಿ, ತಾವೇ ಅವನನ್ನು ಮೊದಲಿದ್ದ ಸ್ಥಳಕ್ಕೆ ಹಾಕಿಸಿದ್ದಾಗಿಯೂ, ಕೂಡಲೇ ಅವನನ್ನು ಅದೇ ಸ್ಥಳಕ್ಕೆ ಕೆಲಸಕ್ಕೆ ಹಾಕಬೇಕೆಂದೂ ಒಂದು ರೀತಿಯ ಬೆದರಿಕೆಯ ಧ್ವನಿಯಲ್ಲಿ ಮಾತನಾಡಿದ್ದರು. ನಾನು, 'ಅವರ ಮಾತಿನಂತೆಯೇ ಆತನನ್ನು ಈಗಲೇ ಆ ಸ್ಥಳಕ್ಕೆ ಮತ್ತೆ ಹಾಕಿದರೆ ಆಡಳಿತದಲ್ಲಿ ಬಿಗಿ ಹೊರಟುಹೋಗುತ್ತದೆ, ಅಧೀನ ಸಿಬ್ಬಂದಿಯಿಂದ ಕೆಲಸ ತೆಗೆದುಕೊಳ್ಳುವುದು ಕಷ್ಟವಾಗುತ್ತದೆ. ಒಂದೆರಡು ತಿಂಗಳು ಅಲ್ಲಿ ಕೆಲಸ ಮಾಡಲಿ. ಆಮೇಲೆ ತಮ್ಮ ಮಾತಿನಂತೆಯೇ ಅವನನ್ನು ಅದೇ ಸ್ಥಳಕ್ಕೆ ನಿಯೋಜಿಸುತ್ತೇನೆ' ಎಂದು ಅವರನ್ನು ಒಪ್ಪಿಸಿದ್ದೆ. ಮರುದಿನ ಸ್ಥಳೀಯ ಪುರಸಭೆ ಕೌನ್ಸಿಲರರು ಒಂದು ಹಿಂಡು ಜನರೊಂದಿಗೆ ನನ್ನ ಛೇಂಬರಿಗೆ ಬಂದು ಗ್ರಾಮಲೆಕ್ಕಿಗನನ್ನು ದೂರದ ಸ್ಥಳಕ್ಕೆ ಹಾಕಬಾರದೆಂದು ಗಲಾಟೆ ಮಾಡಿದ್ದರು. ಅವರೂ ಹಿರಿಯ ರಾಜಕಾರಣಿಯ ಕುಮ್ಮಕ್ಕಿನಿಂದಲೇ ಬಂದಿದ್ದವರೆಂದು ತಿಳಿಯಲು ಕಷ್ಟವೇನಿರಲಿಲ್ಲ. ಅವರನ್ನು ಗದರಿಸಿ ಕಳುಹಿಸಿದ್ದೆ. ಅವರು ಹೋದ ನಂತರ ಮತ್ತೆ ಆ ಹಿರಿಯ ರಾಜಕಾರಣಿಗೆ ಫೋನು ಮಾಡಿ, 'ಒಂದೆರಡು ತಿಂಗಳ ನಂತರ ಅವನನ್ನು ಮತ್ತೆ ಮೊದಲಿದ್ದ ಸ್ಥಳಕ್ಕೆ ಖಂಡಿತಾ ಹಾಕುವುದಾಗಿಯೂ, ದಯವಿಟ್ಟು ಸಹಕರಿಸಬೇಕೆಂದು' ಕೋರಿದ ಮೇಲೆ ಅವರು ಸುಮ್ಮನಾಗಿದ್ದರು. ಇದಾಗಿ ಒಂದೆರಡು ತಿಂಗಳ ನಂತರದಲ್ಲಿ ಸ್ನೇಹಿತನ ಕೊಲೆ ಮಾಡಿ ಸಿಕ್ಕಿಬಿದ್ದಿದ್ದ ಕಿರಣನಿಗೆ ಮೊದಲು ನೇಮಕವಾಗಿದ್ದ ಸ್ಥಳದಲ್ಲಿ ಕೆಲಸ ಮಾಡಲು ಅವಕಾಶವಾಗಲೇ ಇಲ್ಲ. ನನಗೂ ತದನಂತರದ ಒಂದೆರಡು ತಿಂಗಳಲ್ಲಿ ಆ ತಾಲ್ಲೂಕಿನಿಂದ ಎತ್ತಂಗಡಿಯಾಗಿತ್ತು.
-ಕ.ವೆಂ.ನಾಗರಾಜ್.

ಸೋಮವಾರ, ಏಪ್ರಿಲ್ 21, 2014

ಉಪ್ಪು ತಿಂದ ಮೇಲೆ . . . 2/3

ಹಿಂದಿನ ಭಾಗಕ್ಕೆ ಲಿಂಕ್: ಉಪ್ಪು ತಿಂದ ಮೇಲೆ . . .1/3
ಮುಂದೆ:
  ಮರುದಿನ ಬೆಳಿಗ್ಗೆ ಒಂಬತ್ತು ಗಂಟೆಯ ವೇಳೆಗೆ ಪೋಲಿಸ್ ಜೀಪು ಮನೆ ಮುಂದೆ ಬಂದು ನಿಂತಿತು. ಮನೆಯ ಒಳಗೆ ಬಂದ ಸಬ್ಬಿನಿಸ್ಪೆಕ್ಟರ್, ಗಾಬರಿಯಾಗಿದ್ದ ರಾಜಮ್ಮ, ಕಿರಣರನ್ನು ಕುರಿತು 'ಸಣ್ಣಸ್ವಾಮಿ ಬಂದರೇನಮ್ಮಾ?" ಎಂದು ಕೇಳಿದರು. ಇಲ್ಲವೆಂದು ತಲೆಯಾಡಿಸಿದಾಗ, 'ನಿನ್ನೆ ಹೊರಗೆ ಹೋಗುವಾಗ ಯಾವ ಬಟ್ಟೆ ಹಾಕಿಕೊಂಡಿದ್ದರು?' ಎಂಬ ಪ್ರಶ್ನೆಗೆ, ರಾಜಮ್ಮನಿಂದ, 'ನಶ್ಯದ ಬಣ್ಣದ ಶರಟು, ಬೂದು ಬಣ್ಣದ ಪ್ಯಾಂಟು ಹಾಕಿಕೊಂಡು ಹೋಗಿದ್ದರು' ಎಂಬ ಉತ್ತರ ಬಂತು. 'ಸ್ವಲ್ಪ ನಮ್ಮ ಜೊತೆ ಬನ್ನಿಮ್ಮಾ' ಎಂದು ರಾಜಮ್ಮನನ್ನೂ, ಜೊತೆಗೆ ಕಿರಣನನ್ನೂ ಕರೆದುಕೊಂಡು ಹೋದ ಜೀಪು ಸೀದಾ ಸರ್ಕಾರಿ ಆಸ್ಪತ್ರೆಯ ಶವಾಗಾರದ ಬಳಿ ನಿಂತಿತು. ರಾಜಮ್ಮ ಕೆಟ್ಟದನ್ನು ನೆನೆಸಿಕೊಂಡು ಅಳಲೂ ಆಗದೆ ಗಾಬರಿಯಾಗಿ ತೇಲುಗಣ್ಣು ಮಾಡಿದ್ದರು. ಸಬ್ಬಿನಿಸ್ಪೆಕ್ಟರರು, 'ಗಾಬರಿಯಾಗಬೇಡಿರಮ್ಮಾ. ನೋಡಿ ಅಲ್ಲಿ ಒಂದು ಬಾಡಿ ಇದೆ. ನಿಮ್ಮ ಮನೆಯವರದು ಅಲ್ಲದೆಯೂ ಇರಬಹುದು. ನೋಡಿ ಹೇಳೀಮ್ಮಾ' ಎಂದರು. ರಾಜಮ್ಮ ಆ ದೇಹವನ್ನು ನೋಡಿದೊಡನೆಯೇ ಮೂರ್ಛೆ ತಪ್ಪಿಬಿದ್ದರು. ಅದು ಸಣ್ಣಸ್ವಾಮಿಯದೇ ದೇಹವಾಗಿತ್ತು. 
     ಊರಿನ ಹೊರವಲಯದಲ್ಲಿ ಸ್ಮಶಾಣದ ಸಮೀಪದ ಪೊದೆಯಲ್ಲಿ ಕೆಲವು ನಾಯಿಗಳು ಗೋಣೀಚೀಲವನ್ನು ಎಳೆದಾಡುತ್ತಿದ್ದು, ಹರಿದ ಚೀಲ ಒಳಗಿಂದ ಹೊರಗೆ ಇಣುಕಿದ್ದ ಕೈಯನ್ನು ಕಚ್ಚಿ ತಿನ್ನುತ್ತಿದ್ದವು. ಇದನ್ನು ಗಮನಿಸಿದ ಬೆಳಗಿನ ವಾಕಿಂಗಿಗೆ ಹೋಗಿಬರುತ್ತಿದ್ದ ಕೆಲವರು  ನಾಯಿಗಳನ್ನು ಓಡಿಸಿ ಪೋಲಿಸ್ ಠಾಣೆಗೆ ಫೋನು ಮಾಡಿದ್ದರು. ಪೋಲಿಸರು ಧಾವಿಸಿ ಮಹಜರ್ ಮಾಡಿ, ಫೋಟೋಗಳನ್ನು ತೆಗೆದುಕೊಂಡು ಶವವನ್ನು ಶವಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ತಂದಿದ್ದರು. ಅನುಮಾನದ ಮೇಲೆ ಸಣ್ಣಸ್ವಾಮಿಯ ಮನೆಗೆ ಹೋಗಿ ವಿಚಾರಿಸಿದ್ದರು. ಅನುಮಾನ ಧೃಢಪಟ್ಟಿತ್ತು. ಹೆಚ್ಚಿನ ವಿಚಾರಣೆಗಾಗಿ ರಾಜಮ್ಮ ಮತ್ತು ಕಿರಣರನ್ನು ಠಾಣೆಗೆ ಕರೆದೊಯ್ದಿದ್ದರು. ರಾಜಮ್ಮ ಅಂದು ದಿನಪೂರ್ತಿ ಮನೆಯಲ್ಲೇ ಇದ್ದುದನ್ನು ಅಕ್ಕಪಕ್ಕದ ಮನೆಯವರು ಖಚಿತಪಡಿಸಿದರು. ಕಿರಣ ಅಂದು ತಿರುಮಲೂರಿಗೆ ಹೋಗಿ ತನ್ನೊಂದಿಗೇ ಸಾಯಂಕಾಲದವರೆಗೂ ಇದ್ದುದನ್ನು ಅಲ್ಲಿನ ಗಣೇಶಪ್ಪ ಹೇಳಿದರು. ಪೆಟ್ರೋಲ್ ಬಂಕಿನ ಮಾಲಿಕನೂ ಕಿರಣ ಕೆಲಸ ಕೇಳಿ ತಮ್ಮ ಮನೆಗೆ ಬಂದಿದ್ದನೆಂದು ಹೇಳಿಕೆ ಕೊಟ್ಟರು. ಸಣ್ಣಸ್ವಾಮಿ ಕೊಲೆಯಾಗುವ ಮುನ್ನ ಅವರನ್ನು ಕಂಡಿದ್ದವರು ಅವರ ಪತ್ನಿ ರಾಜಮ್ಮ ಮಾತ್ರ. ಹೀಗಾಗಿ ಎಷ್ಟೋ ಪ್ರಕರಣಗಳನ್ನು ಭೇದಿಸಿದ್ದ ಸಬ್ಬಿನಿಸ್ಪೆಕ್ಟರರಿಗೆ ಇದೊಂದು ಕಗ್ಗಂಟಾಗಿತ್ತು. ತಮಗೆ ತಿಳಿಸದೆ ಊರನ್ನು ಬಿಟ್ಟು ಹೋಗಬಾರದೆಂದು, ಕರೆಕಳಿಸಿದಾಗ ಕೂಡಲೇ ಬರಬೇಕೆಂದು ಇಬ್ಬರಿಂದಲೂ ಮುಚ್ಚಳಿಕೆ ಬರೆಸಿಕೊಂಡು ಕಳಿಸಿದರು.
* * * *
     ಸಣ್ಣಸ್ವಾಮಿಯ ಪತ್ನಿ ರಾಜಮ್ಮಳಿಗೆ ಬರಬೇಕಾದ ಬಾಕಿ ಸಂಬಳ, ಕುಟುಂಬ ಪಿಂಚಣಿ, ಗ್ರಾಚುಯಿಟಿ, ರಜಾ ಸಂಬಳ, ಸಮೂಹ ವಿಮೆ ಹಣ, ಇತ್ಯಾದಿಗಳು ಇತ್ಯರ್ಥವಾಗಲು ಆರು ತಿಂಗಳು ಹಿಡಿಯಿತು. ಸಲೀಮನೂ ಇದಕ್ಕಾಗಿ ಓಡಾಡಿ ಸಹಾಯ ಮಾಡಿದ್ದ. ನಂತರದ ಒಂದು ದಿನ ಸಲೀಮನ ಮನೆಯಲ್ಲಿ ಸೇರಿ ಮಾತನಾಡುವುದೆಂದು ಕಿರಣ, ಸಲೀಮ ಮಾತನಾಡಿಕೊಂಡಿದ್ದಂತೆ ಅಂದು ಸಾಯಂಕಾಲ ಸೇರಿದ್ದರು. ಕಿರಣನೇ ಶುರು ಮಾಡಿದ: 'ಸಲೀಮ, ನಾವು ಅವತ್ತು ಮಾತನಾಡಿಕೊಂಡಿದ್ದಂತೆ ಬರುವ ಹಣದಲ್ಲಿ ಮೂವತ್ತು ಪರ್‍ಸೆಂಟ್ ತಂದಿದೀನಿ. ನೋಡು, ಈ ಬ್ಯಾಗಲ್ಲಿ ಮೂರೂವರೆ ಲಕ್ಷ ಇದೆ. ಲೆಕ್ಕ ಹಾಕಿಕೋ'. ಸಲೀಮ, "ಪ್ರಾವಿಡೆಂಟ್ ಫಂಡಿಂದ ಏಳೂವರೆ ಲಕ್ಷ ಬಂತಲ್ಲಾ, ಅದರಲ್ಲಿ ಮೂವತ್ತು ಪರ್‍ಸೆಂಟ್ ಕೊಡಲಿಲ್ಲವಲ್ಲಾ? ಇನ್ನೂ ಇನ್ಶೂರೆನ್ಸ್ ಹಣ ಬರಬೇಕು ಅಲ್ಲವಾ?" ಕಿರಣ ರೇಗಿದ, "ಪ್ರಾವಿಡೆಂಟ್ ಹಣ ನಮ್ಮಪ್ಪ ಕೂಡಿಟ್ಟ ಹಣ. ಇನ್ಶೂರೆನ್ಸ್ ಹಣಾನೂ ಅಷ್ಟೆ, ಅಪ್ಪ ಸಂಬಳದಿಂದ ಕಟ್ಟಿದ್ದ ಹಣ. ಅದರಲ್ಲಿ ಹೇಗೋ ಕೊಡಕ್ಕಾಗತ್ತೆ? ನೀನು ಹೊಸ ತರಲೆ ಮಾಡಬೇಡ". ಸಲೀಮ, "ನನಗೆ ಅದೆಲ್ಲಾ ಗೊತ್ತಿಲ್ಲ. ನನಗೆ ಎಲ್ಲದರಲ್ಲೂ ಪಾಲು ಬರಲೇಬೇಕು". ಇಬ್ಬರಲ್ಲೂ ಬಹಳ ಹೊತ್ತು ಜಟಾಪಟಿ ನಡೆಯಿತು. ಜೋರು ಜೋರಾಗಿ ಮಾತು ನಡೆದಾಗ, ಕೈ ಮಿಲಾಯಿಸುವ ಹಂತಕ್ಕೂ ಬಂದಿದ್ದಾಗ ಒಂದೆರಡು ಸಲ ಸಲೀಮನ ಪತ್ನಿ ಶಾಕಿರಾಬಾನು ಆತಂಕದಿಂದ ಇಣಕಿ ನೋಡಿ ಹೋಗಿದ್ದಳು. ಕೊನೆಯಲ್ಲಿ ಇನ್ನೂ ನಾಲ್ಕು ಲಕ್ಷ ಸಲೀಮನಿಗೆ ಕೊಡುವುದೆಂದು ಮನಸ್ಸಿಲ್ಲದ ಮನಸ್ಸಿನಿಂದ ಕಿರಣ ಒಪ್ಪಿದ. ಕಿರಣ ಈ ನಾಲ್ಕು ಲಕ್ಷವನ್ನೂ ಒಮ್ಮೆಗೇ ಕೊಡದೆ ಕಂತಿನಲ್ಲಿ ಹಾಗೂ ಹೀಗೂ ಸಲೀಮನಿಗೆ ತಲುಪಿಸುವಾಗ ನಾಲ್ಕೈದು ತಿಂಗಳು ತಡ ಮಾಡಿದ್ದ. ಅಷ್ಟರಲ್ಲಿ ಕಿರಣನಿಗೆ ಅನುಕಂಪದ ಮೇಲೆ ಗ್ರಾಮಲೆಕ್ಕಿಗನಾಗಿ ಹತ್ತಿರದ ಹಳ್ಳಿಗೆ ನೇಮಿಸಿ ಆದೇಶವೂ ಬಂದಿತು.
     ಸಲೀಮನಿಗೆ ಕಿರಣ ಚಿನ್ನದ ಮೊಟ್ಟೆ ಇಡುವ ಕೋಳಿಯಂತೆ ಕಂಡಿದ್ದ. ಆಗಾಗ್ಗೆ ಐದು ಸಾವಿರ, ಎರಡು ಸಾವಿರ, ಹೀಗೆ ಕೇಳಿ ಪಡೆಯುತ್ತಿದ್ದ. ಇಷ್ಟವಿಲ್ಲದಿದ್ದರೂ, 'ಇದೇ ಕೊನೆ ಸಲ' ಎಂದು ಹೇಳಿ ಕೊಡುತ್ತಿದ್ದ ಕಿರಣ, ಅವನ ಕಾಟ ತಡೆಯದಾದಾಗ, 'ಸಲೀಮ, ನೋಡು, ನೀನು ಐದು ಸಾವಿರ ಕೇಳ್ತಾ ಇದೀಯಾ, ತೊಗೋ, ಹತ್ತು ಸಾವಿರ ಕೊಡ್ತಾ ಇದೀನಿ. ಇನ್ನು ಮುಂದೆ ನೀನು ನನ್ನನ್ನು ಮಾತನಾಡಿಸುವುದಕ್ಕೆ ಬರಲೇಬಾರದು. ಅರ್ಧಕ್ಕಿಂತ ಹೆಚ್ಚು ಹಣ ನಿನಗೇ ಕೊಟ್ಟಿದೀನಿ. ನಿನಗೆ ಇನ್ನೂ ತೃಪ್ತಿ ಇಲ್ಲವಲ್ಲಾ. ನೀನು ಏನು ಮಾಡ್ತೀಯೋ ಮಾಡಿಕೋ ಹೋಗು. ಇನ್ನು ಮುಂದೆ ನಾನು ಒಂದು ಪೈಸೆ ಕೊಡಲ್ಲ' ಎಂದಿದ್ದ. ಸಲೀಮ ಮಾತನಾಡದೆ ನಗುತ್ತಾ ಹಣ ಪಡೆದು ಹೋಗಿದ್ದ.
     ನಂತರ ಒಂದು ತಿಂಗಳು ಕಾಣಿಸಿಕೊಳ್ಳದಿದ್ದ ಸಲೀಮ, ಒಂದು ದಿನ ಇದ್ದಕ್ಕಿದ್ದಂತೆ ಬಂದವನು, "ಕಿರಣ, ಇದೇ ಕೊನೆ ಸಲ. ಮತ್ತೆ ಇನ್ನು ಯಾವತ್ತೂ ಬರೋದೇ ಇಲ್ಲ. ಹತ್ತು ಸಾವಿರ ತುರ್ತಾಗಿ ಬೇಕಾಗಿದೆ. ಹೊಸ ಟ್ಯಾಕ್ಸಿ ಸಾಲದ ಕಂತು ಕಟ್ಟಲು ಸಾಲದಾಗಿದೆ. ಇಲ್ಲ ಅನ್ನಬೇಡ" ಅಂದ. ಕಿರಣ, "ಕೊಡಕ್ಕಾಗಲ್ಲ. ಏನು ಬೇಕಾದರೂ ಮಾಡಿಕೋ" ಅಂದ. ಸಲೀಮ, "ಹೋಗಲಿ ಬಿಡು. ಇನ್ಸ್‌ಪೆಕ್ಟರ್ ಹತ್ರ ಹೋಗ್ತೀನಿ. ನಡೆದಿದ್ದೆಲ್ಲಾ ಹೇಳಿಬಿಡ್ತೀನಿ" ಎಂದ. ಕಿರಣ. "ಏನು ಹೆದರಿಸ್ತೀಯಾ? ನಿನ್ನೂ ಒದ್ದು ಒಳಗೆ ಹಾಕ್ತಾರೆ" ಅಂದ. "ನನ್ನನ್ನು ಯಾಕೆ ಹಾಕ್ತಾರೆ? ಅಪ್ಪ ಮಗ ಟ್ಯಾಕ್ಸಿ ಬಾಡಿಗೆಗೆ ತೆಗೆದುಕೊಂಡಿದ್ದರು. ದಾರಿಯಲ್ಲಿ ಹೋಗ್ತಾ ಮಗ ಅಪ್ಪನ್ನ ಸಾಯಿಸಿದ. ವಿಷಯ ಬಾಯಿ ಬಿಟ್ಟರೆ ನನ್ನನ್ನೂ ಮುಗಿಸಿಬಿಡ್ತೀನಿ ಅಂತ ಹೆದರಿಸಿದ. ಹೆದರಿ ಸುಮ್ಮನಿದ್ದೆ ಅಂತ ಹೇಳ್ತೀನಿ". ಕಿರಣ ನಡುಗಿಬಿಟ್ಟ. "ದಮ್ಮಯ್ಯ ಅಂತೀನಿ. ಪ್ರಾಣ ಹಿಂಡಬೇಡ ಕಣೋ. ನಿನಗೆ ಹಣ ಸುರಿಯಕ್ಕೆ ದೇವರಂಥಾ ಅಪ್ಪನ್ನ ಕೊಂದುಬಿಟ್ಟೆನಲ್ಲಾ. ಎಂಥಾ ಪಾಪಿ ಆಗಿಬಿಟ್ಟೆ ನಾನು. ಆಯ್ತು. ಹತ್ತು ಸಾವಿರ ಸಾಯಂಕಾಲ ಕೊಡ್ತೀನಿ. ನಿನ್ನ ಕಾಲಿಗೆ ಬೇಕಾದ್ರೆ ಬೀಳ್ತೀನಿ. ಇನ್ನು ಮುಂದೆ ನನ್ನನ್ನು ಹೀಗೆಲ್ಲಾ ಕಾಡಬೇಡ ಕಣೋ" ಎಂದ ಕಿರಣನಿಗೆ ಅಭಯ ಕೊಟ್ಟು ಸಲೀಮ ಕಾಲ್ಕಿತ್ತ.
     'ಅಂದು ಹತ್ತು ಸಾವಿರ ತೆಗೆದುಕೊಂಡು ಹೋಗಿದ್ದವನು ಇವತ್ತು ಮತ್ತೆ ಐದು ಸಾವಿರ ಕೇಳ್ತಾ ಇದಾನೆ. ಇವತ್ತು ಕೊಟ್ಟರೂ ಮತ್ತೆ ಕೇಳಲ್ಲಾ ಅನ್ನುವುದು ಏನು ಗ್ಯಾರಂಟಿ?' ಎಂದು ಯೋಚಿಸುತ್ತಿದ್ದ ಕಿರಣನಿಗೆ ತಲೆ ಚಿಟ್ಟು ಹಿಡಿದುಹೋಯಿತು. 'ಹಣದ ಆಸೆಗೆ ಅಪ್ಪನನ್ನೇ ಕೊಂದೆ. ಆದರೆ ಹಣ ಸಲೀಮನ ಕೈಸೇರುತ್ತಿದೆ' ಎಂದು ಅವನ ಮೇಲೆ ಸಿಟ್ಟು ಉಕ್ಕಿಬರುತ್ತಿದ್ದರೂ ಏನೂ ಮಾಡಲಾಗದ ಅಸಹಾಯಕ ಸ್ಥಿತಿಯಲ್ಲಿ ಸಿಕ್ಕಿಬಿದ್ದಿದ್ದ. ಸಂಜೆ ಸ್ಟೇಡಿಯಮ್ಮಿನ ಹತ್ತಿರ ಹೋದಾಗ ಸಲೀಮ ಅವನಿಗಿಂತ ಮುಂಚೆಯೇ ಬಂದು ಮಾಮೂಲು ಜಾಗದಲ್ಲಿ ಕುಳಿತಿದ್ದುದನ್ನು ಕಂಡು ಮೈ ಉರಿದುಹೋದರೂ ತೋರ್ಪಡಿಸಿಕೊಳ್ಳದೆ ಪಕ್ಕ ಹೋಗಿ ಕುಳಿತ. ಕಿರಣನೇ, "ಸಲೀಮ, ನೀನು ಕೇಳಿದ್ದಕ್ಕಿಂತಲೂ ಹೆಚ್ಚು ದುಡ್ಡು ನಿನಗೆ ಸಿಕ್ಕಿದೆ. ಆದರೂ ಈರೀತಿ ಗೋಳುಗುಟ್ಟಿಸೋದು ಸರೀನಾ? ನಿನ್ನ ಭಾಮೈದಂಗೆ ಆಕ್ಸಿಡೆಂಟ್ ಅಂತ ಸುಳ್ಳು ಬೇರೆ ಹೇಳ್ತೀಯಲ್ಲಾ, ಅವನು ಈಗ ನಾನು ಬರುವಾಗ ದಾರಿಯಲ್ಲೇ ಸಿಕ್ಕಿದ್ದ. ಹಿಂಗೆ ಯಾಕೆ ಮಾಡ್ತೀಯಾ?" ಸಲೀಮನ ನಗುವೇ ಅವನ ಉತ್ತರವಾಗಿತ್ತು. "ದುಡ್ಡಿದೆ ಅಂತ ಏನೇನೋ ಹಲ್ಲಂಡೆ ವ್ಯವಹಾರ ಮಾಡಕ್ಕೆ ಹೋಗಿ ಸಿಕ್ಕಿಹಾಕಿಕೊಂಡಿದೀನಿ ಕಣೋ. ಹಾಕಿರೋ ದುಡ್ಡು ಉಳಿಸಿಕೊಳ್ಳೋದಕ್ಕಾದರೂ ಖರ್ಚು ಮಾಡಬೇಕು. ಅದಕ್ಕೇ ನಿನ್ನನ್ನು ಕೇಳಿದ್ದು ಕಣೋ. ನಿನ್ನ ಮೇಲಾಣೆ, ಇನ್ನು ನಿನ್ನ ಹತ್ತಿರ ಮತ್ತೆ ದುಡ್ಡು ಕೇಳಲ್ಲ" ಅಂದ. ಸ್ವಲ್ಪ ಹೊತ್ತಿನ ಮೌನದ ನಂತರ ಕಿರಣ ಐದು ಸಾವಿರ ರೂ. ಕೊಡುತ್ತಾ ಹೇಳಿದ, "ನನಗೆ ಬೆಂಗಳೂರಿನಲ್ಲಿ ಸ್ವಲ್ಪ ಕೆಲಸ ಇದೆ. ನಿನಗೆ ಅನುಕೂಲ ಆದಾಗ ನಿನ್ನ ಟ್ಯಾಕ್ಸೀಲೇ ಹೋಗಿಬರೋಣ. ಯೋಚನೆ ಮಾಡಬೇಡ, ಡೀಸೆಲ್ ನಿನಗೂ ಹಾಕಿಸ್ತೀನಿ, ನಿನ್ನ ಗಾಡಿಗೂ ಹಾಕಿಸ್ತೀನಿ". ಸಲೀಮ ನಗುತ್ತಾ, "ಅದನ್ನು ಹೇಳಬೇಕಾ? ನನಗೂ ಬೆಂಗಳೂರಿನಲ್ಲಿ ಕೆಲಸ ಇದೆ. ಈ ಭಾನುವಾರ ಹೋಗೋಣ". ತಿನ್ನುತ್ತಿದ್ದ ಕಡಲೆಕಾಯಿಯೂ ಮುಗಿಯಿತು. ಅವರ ಮಾತುಕತೆಗಳೂ ಮುಗಿದು ಇಬ್ಬರೂ ಜಾಗ ಖಾಲಿ ಮಾಡಿದರು.
. . . .(ಮುಂದುವರೆಯುವುದು)

ಭಾನುವಾರ, ಏಪ್ರಿಲ್ 20, 2014

ಉಪ್ಪು ತಿಂದ ಮೇಲೆ . . .1/3

     ಎರಡನೆಯ ಸಲ ಮತ್ತೆ ಫೋನು ರಿಂಗಣಿಸಿದಾಗ ಮನಸ್ಸಿಲ್ಲದ ಮನಸ್ಸಿನಿಂದ ಕಿರಣ ಕರೆ ಸ್ವೀಕರಿಸಿ, "ಸಲೀಮ್, ನಾನು ಅರ್ಜೆಂಟ್ ಕೆಲಸದಲ್ಲಿದೀನಿ. ಆಮೇಲೆ ಮಾತಾಡ್ತೀನಿ" ಎಂದು ಫೋನ್ ಕಟ್ ಮಾಡಿದ. ಆದರೆ ಮತ್ತೆ ಫೋನು ರಿಂಗಣಿಸಿತು. ಸಲೀಮನೇ ಕರೆ ಮಾಡಿದ್ದ. ಕರೆ ಸ್ವೀಕರಿಸಿ ರೇಗಬೇಕೆಂದುಕೊಂಡವನಿಗೆ ಸಲೀಮನೇ, "ಹೋಲ್ಡಾನ್, ಗೆಳೆಯಾ ಹೋಲ್ಡಾನ್. ನೀನು ಯಾವ ಅರ್ಜೆಂಟ್ ಕೆಲಸದಲ್ಲೂ ಇಲ್ಲ ಅಂತ ನನಗೆ ಚೆನ್ನಾಗಿ ಗೊತ್ತು. ನಾನು ನಿನ್ನ ಆಫೀಸ್ ಮುಂದುಗಡೆಯಿಂದಾನೇ ಮಾತಾಡ್ತಾ ಇದೀನಿ. ನೀನು ಈಗ ತಾನೇ ಒಳಗೆ ಹೋಗಿ ಕೂತಿದ್ದೀಯಾ ಅಂತಾನೂ ಗೊತ್ತು. ನಾನೇನೂ ನಿನ್ನ ಟೈಮ್ ವೇಸ್ಟ್ ಮಾಡಲ್ಲ. ಒಂದು ಐದು ಸಾವಿರ ದುಡ್ಡು ಬೇಕಿತ್ತು. ನನಗೆ ನಿನ್ನ ಬಿಟ್ರೆ ಯಾರಿದಾರೆ? ಅದಕ್ಕೆ ಬಂದೆ. ಇಲ್ಲಾ ಅನ್ನಬೇಡ" ಅಂದ. ಕಿರಣ ಹೊರಗೆ ಬಂದು ನೋಡಿದರೆ ಸಲೀಮ ಅಲ್ಲಿ ನಗುತ್ತಾ ನಿಂತಿದ್ದುದನ್ನು ಕಂಡು ಮೈ ಉರಿಯಿತು. ಆದರೂ ಹೊರಗೆ ತೋರಿಸಿಕೊಳ್ಳದೆ, "ಕಳೆದ ವಾರವಿನ್ನೂ ಹತ್ತು ಸಾವಿರ ಇಸ್ಕೊಂಡಿದ್ದೆ. ಈಗ ಮತ್ತೆ ಐದು ಸಾವಿರಾನಾ? ನನಗೆ ದಯವಿಟ್ಟು ಹಿಂಸೆ ಮಾಡಬೇಡ. ಇದೇ ಕೊನೆ ಸಲ ಅಂತ ಪ್ರತಿಸಲಾನೂ ಹೇಳ್ತೀಯಾ. ಮತ್ತೆ ಮತ್ತೆ ಬಂದು ಪ್ರಾಣ ಹಿಂಡ್ತೀಯಲ್ಲೋ" ಅಂದ. ಸಲೀಮ ಹೇಳಿದ, "ನಾನೂ ಮತ್ತೆ ಕೇಳಬಾರದೂ ಅಂತಾನೇ ಇದ್ದೆ ಕಣೋ. ಏನು ಮಾಡಲಿ, ನನ್ನ ಭಾವಮೈದಂಗೆ ಆಕ್ಸಿಡೆಂಟ್ ಆಗಿ ಆಸ್ಪತ್ರೇಲಿ ಇದಾನೆ. ತುರ್ತಾಗಿ ದುಡ್ಡು ಬೇಕಿತ್ತು ಬಂದೆ. ನಿಜಕ್ಕೂ ಇದೇ ಕೊನೆ ಸಲ. ಮತ್ತೆ ನಿನ್ನಾಣೆಗೆ ನಿನ್ನ ಹತ್ರ ದುಡ್ ಕೇಳಲ್ಲ". "ಇವತ್ತು ಸಾಯಂಕಾಲ ಸ್ಟೇಡಿಯಮ್ ಹತ್ತಿರ ಬಾ. ಅಲ್ಲೇ ಮಾತಾಡೋಣ" ಎಂದ ಕಿರಣನಿಗೆ ಸಲೀಮ, "ಖಂಡಿತಾ ಬರ್ತೀನಿ. ನೀನು ದುಡ್ ಕೊಡೋದ್ ಮಾತ್ರ ಮರೀಬೇಡ" ಎಂದು ಹೇಳಿದವನೇ ಕೈಬೀಸುತ್ತಾ ಟ್ಯಾಕ್ಸಿ ಚಲಾಯಿಸಿಕೊಂಡು ಹೊರಟ.
     ಕಿರಣನಿಗೆ ತಲೆ ಕೆಟ್ಟುಹೋಯಿತು. ಗ್ರಾಮಲೆಕ್ಕಿಗನಾಗಿ ಕೆಲಸ ಸಿಕ್ಕಿ ಇನ್ನೂ ಆರು ತಿಂಗಳಾಗಿತ್ತಷ್ಟೇ. ಈ ಸಲೀಮನಿಂದ ಹೇಗೆ ಪಾರಾಗುವುದೆಂದು ತಿಳಿಯದೆ ಕುರ್ಚಿಯ ಮೇಲೆ ಕುಳಿತು ಚಿಂತಿಸಲಾರಂಭಿಸಿದ. ಜಾತಿ ಸರ್ಟಿಫಿಕೇಟು, ಪೆನ್ಶನ್ನು, ಆ ಕೆಲಸ, ಈ ಕೆಲಸ ಎಂದು ಬಂದವರಿಗೆ ಸಬೂಬು ಹೇಳಿ ಮಧ್ಯಾಹ್ನ ಬರಲು ಹೇಳಿ ಬೈಕು ಹತ್ತಿ ಸೀದಾ ಮನೆಗೆ ಹೋಗಿ ಮಲಗಿಬಿಟ್ಟ. ತಲೆ ಸಿಡಿದು ಹೋಗುತ್ತಿತ್ತು. ಮನಸ್ಸು ಹಿಂದಿನ ಘಟನೆಗಳನ್ನು ಮೆಲುಕು ಹಾಕಿತು.
     ಹಾಗೂ ಹೀಗೂ ಬಿ.ಎ. ಡಿಗ್ರಿ ಮುಗಿಸಿದ ಕಿರಣನಿಗೆ ಎಲ್ಲೂ ನೌಕರಿ ಸಿಗಲಿಲ್ಲ. ಅಪ್ಪ ಸಣ್ಣಸ್ವಾಮಿ ಕೃಷಿ ಇಲಾಖೆಯಲ್ಲಿ ಸೂಪರಿಂಟೆಂಡೆಂಟ್ ಆಗಿದ್ದ. ನೌಕರಿ ಸಿಕ್ಕದ ಮಗನಿಗೆ ಒಂದು ಸಣ್ಣ ದಿನಸಿ ಅಂಗಡಿ ಇಟ್ಟುಕೊಟ್ಟು ವ್ಯಾಪಾರ ಮಾಡಲು ಕೂರಿಸಿದ. ಉಡಾಳ ಕಿರಣನಿಗೆ ಅದರಲ್ಲಿ ಆಸಕ್ತಿಯಿರಲಿಲ್ಲ. ಹೀಗಾಗಿ ನಷ್ಟ ಅನುಭವಿಸಿ ಅಂಗಡಿಯನ್ನು ಆರೇ ತಿಂಗಳಲ್ಲಿ ಮುಚ್ಚಬೇಕಾಯಿತು. ಅಂಗಡಿಯಲ್ಲಿ ಬರುತ್ತಿದ್ದ ಹಣ ಸಲೀಮ ಮತ್ತು ಇತರ ಗೆಳೆಯರೊಂದಿಗೆ ಕುಡಿಯುವುದಕ್ಕೆ, ತಿನ್ನುವುದಕ್ಕೆ, ಇಸ್ಪೀಟು ಆಡುವುದಕ್ಕೆ ಬಳಸಿದರೆ ಅಂಗಡಿ ಮುಚ್ಚದೆ ಇನ್ನೇನಾಗುತ್ತದೆ. ಅಪ್ಪನ ಬೈಗುಳ, ಬುದ್ಧಿವಾದಗಳು ಅವನ ತಲೆಗೆ ನಾಟುತ್ತಿರಲಿಲ್ಲ. ಒಮ್ಮೆ ಖರ್ಚಿಗೆ ಕಿರಣ ಅಪ್ಪನಲ್ಲಿ ಹಣ ಕೇಳಿದಾಗ, ಮಾತಿಗೆ ಮಾತು ಬೆಳೆದು ಅಪ್ಪ ಸಿಟ್ಟಿನ ಭರದಲ್ಲಿ ಮಗನಿಗೆ ಕೆನ್ನೆಗೆ ಹೊಡೆದಿದ್ದ. ಕಿರಣ ಒಬ್ಬನೇ ಇದ್ದಿದ್ದರೆ ಅವನಿಗೆ ಏನೂ ಅನ್ನಿಸುತ್ತಿರಲಿಲ್ಲವೇನೋ, ಆದರೆ ಹೊಡೆಸಿಕೊಂಡಾಗ ಸಲೀಮ ಅಲ್ಲೇ ಇದ್ದುದು ಅವನಿಗೆ ಅವಮಾನವಾದಂತಾಗಿತ್ತು. ಧುಮುಗುಟ್ಟುತ್ತಾ ಸಲೀಮನೊಂದಿಗೆ ಹೊರಟುಬಿಟ್ಟ. ಎರಡು ದಿನ ಮನೆಗೆ ಹೋಗಿರಲಿಲ್ಲ. ವ್ಯಾಪಾರ ಮಾಡಲು ಮನಸ್ಸಿಲ್ಲ, ಕೆಲಸ ಮಾಡಲು ಬೇರೆ ನೌಕರಿಯಿಲ್ಲ. ಕುಡಿಯುವುದಕ್ಕೆ, ಇಸ್ಪೀಟು ಆಡುವುದಕ್ಕೆ ಕಾಸು ಬೇಕು. ಏನು ಮಾಡಬೇಕೆಂದು ತೋಚದವನಿಗೆ ಸಲೀಮನ ಸಲಹೆ ಆಪ್ಯಾಯಮಾನವಾಗಿ ಕಂಡಿತ್ತು. ಸಲೀಮ ಕೇಳಿದ್ದ:
"ನಿನ್ನ ಅಪ್ಪನಿಗೆ ಇನ್ನೂ ಎಷ್ಟು ವರ್ಷ ಸರ್ವಿಸಿದೆ?"
"ವರ್ಷ ಎಲ್ಲಿ ಬಂತು, ಇನ್ನು ಆರು ತಿಂಗಳಿಗೆ ರಿಟೈರಾಗ್ತಾರೆ. ಮುಂದೆ ಏನು ಮಾಡೋದೋ ತೋಚ್ತಾ ಇಲ್ಲ ಕಣೋ."
"ಸರ್ವಿಸಿನಲ್ಲಿ ಇದ್ದಾಗ್ಲೇ ಸತ್ರೆ ಮಕ್ಕಳಿಗೆ ನೌಕರಿ ಕೊಡ್ತಾರೆ. ಹೆಂಡ್ತಿಗೆ ಫ್ಯಾಮಿಲೀ ಪೆನ್ಶನ್ನೂ ಬರುತ್ತೆ ಅಲ್ವೇನೋ?"
"ಅದೇನೋ ಸರಿ. ನಮ್ಮಪ್ಪ ಈ ಆರು ತಿಂಗಳಲ್ಲಿ ಸಾಯ್ತಾರಾ? ಅವರ ಆರೋಗ್ಯ ಸರಿಯಿಲ್ಲ. ಆದರೂ ಈಗಲೇ ಅಂತೂ ಸಾಯಲ್ಲ."
ಸಲೀಮ ಗುಟ್ಟಾಗಿ ಕಿವಿಯಲ್ಲಿ ಏನೋ ಹೇಳಿದ. ನಂತರ ಬಹಳ ಹೊತ್ತು ಇಬ್ಬರೂ ಗುಸು ಗುಸು ಮಾತಾಡಿದರು. ಕಿರಣ ಮನೆಗೆ ವಾಪಸು ಹೋದ. ಮಾಮೂಲಿನಂತೆ ಇರತೊಡಗಿದ.
     ನಂತರದಲ್ಲಿ ಒಂದು ದಿನ ಸಣ್ಣಸ್ವಾಮಿ ಬೆಳಿಗ್ಗೆ ಎಂದಿನಂತೆ ಕಛೇರಿಗೆ ನಡೆದು ಹೊರಟಿದ್ದಾಗ ರಸ್ತೆಯ ತಿರುವಿನಲ್ಲಿ ಸಲೀಮ ತನ್ನ ಟ್ಯಾಕ್ಸಿ ನಿಲ್ಲಿಸಿಕೊಂಡು ಯಾರ ಹತ್ತಿರವೋ ಮೊಬೈಲಿನಲ್ಲಿ ಮಾತನಾಡುತ್ತಿದ್ದವನು ಇವರನ್ನು ಕಂಡೊಡನೇ, "ಬನ್ನಿ ಸಾರ್. ನಾನೂ ಆಕಡೇನೇ ಹೋಗ್ತಾ ಇದೀನಿ. ನಿಮ್ಮನ್ನು ಆಫೀಸಿಗೆ ಬಿಟ್ಟು ಹೋಗ್ತೀನಿ" ಅಂತ ಕರೆದ. ಮಗನ ಗೆಳೆಯ ಅಂತ ಅವರೂ ಕಾರು ಹತ್ತಿ ಕುಳಿತರು. ಕಾರು ಚಲಿಸುತ್ತಿದ್ದಂತೆಯೇ ಹಿಂದಿನ ಸೀಟಿನಲ್ಲಿ ಮಗನೂ ಇರುವುದನ್ನು ಕಂಡರು. ಅಸಮಾಧಾನದಿಂದ ಅವನನ್ನು ನೋಡುತ್ತಾ ಕೇಳಿದರು, "ತಿರುಮಲೂರಿಗೆ ಹೋಗಲಿಲ್ಲವಾ?" "ಹೋಗ್ತೀನಪ್ಪಾ. ಸಲೀಮ ತಿರುಮಲೂರು ಮಾರ್ಗವಾಗೇ ಹೋಗ್ತಾ ಇದಾನೆ. ನನಗೆ ಡ್ರಾಪ್ ಕೊಡ್ತಾನೆ"- ಕಿರಣನ ಉತ್ತರ. ಸಣ್ಣಸ್ವಾಮಿ ಸಲೀಮನನ್ನು ಉದ್ದೇಶಿಸಿ, "ತಿರುಮಲೂರಿನಲ್ಲಿ ನನ್ನ ನೆಂಟ ಗಣೇಶಪ್ಪ ಇದಾನೆ. ಅಲ್ಲಿ ಪೆಟ್ರೋಲ್ ಬಂಕಿನ ಮೇನೇಜರ್ ಪೋಸ್ಟ್ ಕಿರಣಂಗೆ ಕೊಡಿಸ್ತೀನಿ ಅಂತ ಹೇಳಿದಾನೆ. ಅಲ್ಲಾದರೂ ಜಿತವಾಗಿ ಕೆಲಸ ಮಾಡು ಅಂತ ನೀನಾದರೂ ಹೇಳು ಸಲೀಮ" ಅಂದರು. ಸಲೀಮ ಸುಮ್ಮನೆ ನಕ್ಕ. ಮುಂದುವರೆಯುತ್ತಿದ್ದಂತೆ ಕಾರಿನ ಕಿಟಕಿಯ ಬಣ್ಣದ ಗಾಜುಗಳು ಮೇಲೇರಿದವು. ಜನಸಂಚಾರ ಹೆಚ್ಚು ಇಲ್ಲದ ರಸ್ತೆಯಲ್ಲಿ ಕಾರು ಚಲಿಸಿದಾಗ, 'ಟ್ರಾಫಿಕ್ ಅವಾಯ್ಡ್ ಮಾಡಲು ಈ ರಸ್ತೆಯಲ್ಲಿ ಹೋಗುತ್ತಿರುವುದಾಗಿ' ಸಲೀಮನ ವಿವರಣೆ ಬಂದಿತು. ಅಷ್ಟರಲ್ಲಿ ಸಣ್ಣಸ್ವಾಮಿಯ ಕುತ್ತಿಗೆಗೆ ಒಂದು ಬಟ್ಟೆಯ ಕುಣಿಕೆ ಬಲವಾಗಿ ಬಿಗಿಯಲ್ಪಟ್ಟಿತು. ಕೃಶ ಶರೀರ ಹೆಚ್ಚು ಪ್ರತಿರೋಧ ತೋರದೆ ಕುಸಿಯಿತು.
                        ****
    ಗಂಡ ಮಧ್ಯಾಹ್ನವೂ ಊಟಕ್ಕೆ ಬರಲಿಲ್ಲ. ಸಾಯಂಕಾಲ ಬೇಗ ಬರ್ತೀನಿ, ದೇವಸ್ಥಾನಕ್ಕೆ ಹೋಗೋಣ ಅಂದಿದ್ದವರು ರಾತ್ರಿ ಎಂಟಾದರೂ ಬರಲಿಲ್ಲವಲ್ಲ ಅಂತ ರಾಜಮ್ಮ ಆತಂಕದಿಂದ ವರಾಂಡಾದಲ್ಲೇ ಕಾದು ಕುಳಿತಿದ್ದರು. ತುಂಬಾ ಹೊತ್ತು ಕುಳಿತಿರಲಾರದೆ ಚಡಪಡಿಸುತ್ತಾ ಓಡಾಡುತ್ತಲೂ ಇದ್ದರು. ಈ ಹಾಳಾದ ಕಿರಣ ತಿರುಮಲೂರಿಗೆ ಹೋಗ್ತೀನಿ ಅಂತ ಹೇಳಿ ಬೆಳಿಗ್ಗೆ ಹೋದವನು ಇನ್ನೂ ಬಂದಿಲ್ಲ ಅಂದುಕೊಳ್ಳುತ್ತಿರುವಾಗಲೇ ಕಿರಣ ಬಂದಿದ್ದ. ಸೀದಾ ತನ್ನ ರೂಮಿಗೆ ಹೋಗುತ್ತಿದ್ದವನನ್ನು ತಡೆದು, "ಅಪ್ಪ ಇನ್ನೂ ಬಂದಿಲ್ಲ ಕಣೋ, ಮಧ್ಯಾಹ್ನ ಊಟಕ್ಕೂ ಬರಲಿಲ್ಲ. ನೀನು ಹೋಗಿ ಒಂದು ಸಲ ನೋಡಿಕೊಂಡು ಬಾರೋ" ಅಂದರು. "ಬರ್ತಾರೆ, ಬಿಡಮ್ಮಾ. ಏನೋ ಕೆಲಸ ಜಾಸ್ತಿ ಇರಬೇಕು" ಅಂದ ಕಿರಣನಿಗೆ ರಾಜಮ್ಮ, "ಇಲ್ಲಾ ಕಣೋ ಅವರು ಯಾವತ್ತೂ ಇಷ್ಟು ಲೇಟು ಮಾಡಿರಲಿಲ್ಲ ಕಣೋ. ಹೋಗ್ಬಾರೋ" ಅಂತಾ ಬೇಡುವ ಧ್ವನಿಯಲ್ಲಿ ಹೇಳಿದರು. ಕಿರಣ ಬೈಕು ಹತ್ತಿ ಹೊರಗೆ ಹೋದವನು ಅರ್ಧ ಘಂಟೆ ನಂತರ ವಾಪಸು ಬಂದ. "ಆಫೀಸು ಬಾಗಿಲು ಹಾಕಿತ್ತಮ್ಮಾ. ಹಳೇಪೇಟೇಲಿ ಇರೋ ಕ್ಲರ್ಕ್ ರಂಗಪ್ಪನ ಮನೆಗೆ ಹೋಗಿ ಬಂದೆ. ಅಪ್ಪ ಇವತ್ತು ಆಫೀಸಿಗೇ ಹೋಗಿಲ್ಲವಂತೆ ಕಣಮ್ಮಾ. ರಜಾನೂ ಹಾಕಿಲ್ಲವಂತೆ. ಎಲ್ಲಿಗೆ ಹೋಗಿದಾರೆ ಅಂತ ನನ್ನನ್ನೇ ಕೇಳಿದರು" ಎಂದು ಹೇಳಿದ್ದನ್ನು ಕೇಳಿ ರಾಜಮ್ಮ ಕುಸಿದು ಕುಳಿತರು. ದುಂಬಾಲು ಬಿದ್ದು ಸಣ್ಣಸ್ವಾಮಿಯ ಸ್ನೇಹಿತರ ಮನೆಗೆಲ್ಲಾ ಅವನೊಂದಿಗೆ ಹೋಗಿಬಂದರು. ಸಣ್ಣಸ್ವಾಮಿಯ ಆಪ್ತ ಸ್ನೇಹಿತ ರುದ್ರಪ್ಪ ಹೇಳಿದಂತೆ ಪೋಲಿಸ್ ಕಂಪ್ಲೇಂಟ್ ಕೊಡಲು ತಾಯಿ ಮಗ ಪೋಲಿಸ್ ಠಾಣೆಗೆ ಹೋದರು. ರುದ್ರಪ್ಪನೂ ಜೊತೆಗೆ ಬಂದಿದ್ದ.
     ದೂರು ತೆಗೆದುಕೊಳ್ಳಲು ಸತಾಯಿಸಿದ್ದ ದಫೇದಾರ ಸಬ್ ಇನ್ಸ್‌ಪೆಕ್ಟರ್ ಬರುವವರೆಗೂ ದೂರು ತೆಗೆದುಕೊಂಡಿರಲಿಲ್ಲ. ಅರ್ಧ ಗಂಟೆ ನಂತರದಲ್ಲಿ ಬಂದಿದ್ದ ಸಬ್ಬಿನಿಸ್ಪೆಕ್ಟರ್ ರಾಜಮ್ಮನ ಗೋಳು ನೋಡಲಾರದೆ ದೂರು ತೆಗೆದುಕೊಳ್ಳಲು ಪೇದೆಗೆ ಸೂಚಿಸಿದ್ದರು. 'ಮನೆಯಲ್ಲಿ ಏನಾದರೂ ಜಗಳ ಆಗಿತ್ತಾ? ಅವರಿಗೆ ಆಗದವರು ಯಾರಾದರೂ ಇದ್ದಾರಾ?, ನೆಂಟರಿಷ್ಟರು, ಸ್ನೇಹಿತರು ಯಾರಾದರೊಂದಿಗೆ ಜಗಳ ಆಗಿತ್ತಾ? ಯಾವುದಾದರೂ ಕೋರ್ಟ್ ಕೇಸ್ ಇದೆಯಾ?' ಇತ್ಯಾದಿ ಪ್ರಶ್ನೆಗಳಿಗೆ 'ಅಂತಹುದೇನೂ ಇಲ್ಲ. ಅವರು ಕಾಣೆ ಆಗೋದಿಕ್ಕೆ ಕಾರಣವೇ ಇಲ್ಲ' ಎಂದು ತಾಯಿ, ಮಗ ಇಬ್ಬರೂ ಹೇಳಿದ್ದರು. 'ಸಣ್ಣಸ್ವಾಮಿ ತುಂಬಾ ಸಂಭಾವಿತ' ಅಂತ ರುದ್ರಪ್ಪನ ಶಿಫಾರಸೂ ಸೇರಿತು. 'ವಿಚಾರಿಸ್ತೀವಿ. ಬರ್ತಾರೆ ಬಿಡಮ್ಮಾ. ಏನೋ ಕಾರಣ ಇರತ್ತೆ, ಎಲ್ಲಿಗೋ ಹೋಗಿರ್ತಾರೆ. ಬಂದ ಮೇಲೆ ತಿಳಿಸದೇ ಇರಬೇಡಿ' ಎಂದು ಹೇಳಿ ಸಬ್ಬಿನಿಸ್ಪೆಕ್ಟರ್ ಅವರನ್ನು ಸಾಗಹಾಕಿದರು. ಅಳುತ್ತಲೇ ರಾಜಮ್ಮ ಮನೆಗೆ ಬಂದರು. ಅಂದು ರಾತ್ರಿ ಊಟ ಮಾಡಲು ಮನಸ್ಸಾಗದೆ ಹಾಗೇ ಇದ್ದವರಿಗೆ ಅದು ಯಾವಾಗಲೋ ನಿದ್ದೆ ಬಂದಿತ್ತು.

. . .(ಮುಂದುವರೆಯುವುದು)

ಗುರುವಾರ, ಏಪ್ರಿಲ್ 17, 2014

ಭೂಮಿ ನುಂಗಿ ಅರಗಿಸಿಕೊಂಡವರು!

ಅರ್ಥವಿಲ್ಲದ ಇಲಾಖಾ ವಿಚಾರಣೆಗಳು -
ಭೂಮಿ ನುಂಗಿ ಅರಗಿಸಿಕೊಂಡವರು!
     ಹಿಂದಿನ ಲೇಖನದಲ್ಲಿ ಸಾರ್ವಜನಿಕರಿಗೆ ತಲುಪಬೇಕಾಗಿದ್ದ ಸಾವಿರಾರು ಟನ್ನುಗಳಷ್ಟು ಪಡಿತರ ಆಹಾರ ಸಾಮಗ್ರಿಗಳು ಕಾಳಸಂತೆಯ ಮೂಲಕ ವಿಲೇವಾರಿಯಾಗಿ ಹೇಗೆ ಅಧಿಕಾರಿಗಳ ಮತ್ತು ಅಂಗಡಿ ಮಾಲಿಕರುಗಳ ಜೇಬುಗಳು ಭರ್ತಿಯಾದವು ಮತ್ತು ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಹೇಗೆ ಪಾರಾದರು ಎಂಬುದನ್ನು ತಿಳಿದೆವು. ಈಗ ಭೂಗಳ್ಳತನದ ಒಂದು ಕಿರುದರ್ಶನ ಮಾಡೋಣ. ಭೂಗಳ್ಳತನ ಹೆಚ್ಚಲು ಯಾರು ಕಾರಣ, ಭೂಗಳ್ಳತನ ಮಾಡಿಯೂ ಹೇಗೆ ತಪ್ಪಿಸಿಕೊಳ್ಳಬಹುದು ಎಂಬುದನ್ನು ನೋಡಿ ಆಶ್ಚರ್ಯಪಡೋಣ.
     ಕಳೆದ ವರ್ಷ ಒಂದು ಮಾಸಪತ್ರಿಕೆಗಾಗಿ ವಿಶೇಷ ಸಂದರ್ಶನ ಲೇಖನ ಸಿದ್ಧಪಡಿಸಲು ಒಬ್ಬರು ಸರ್ಕಾರದ ಹಿರಿಯ ಆಧಿಕಾರಿಯವರ ಸಂದರ್ಶನ ನಡೆಸಿದ್ದೆ. ಆಗ ಅವರು ಹೇಳಿದ್ದ ಈ ಸಂಗತಿ ಪ್ರಜ್ಞಾವಂತರನ್ನು ಬೆಚ್ಚಿಬೀಳಿಸುತ್ತದೆ. ಮೈಸೂರು ಜಿಲ್ಲೆಯ ಬಿಳಿಗಿರಿರಂಗನಬೆಟ್ಟದಲ್ಲಿ ಕಾಯ್ದಿಟ್ಟ ಅರಣ್ಯ ಪ್ರದೇಶದಲ್ಲಿ ೫೦ ಎಕರೆ ಜಾಗವನ್ನು ೫ ಜನರಿಗೆ ಭೂರಹಿತ ಕೃಷಿಕಾರ್ಮಿಕರಿಗೆ ಮಂಜೂರು ಮಾಡಿದ್ದರು. ಭೂರಹಿತ ಕೃಷಿಕಾರ್ಮಿಕರೆಂದರೆ ಸ್ವತಃ ಜಮೀನು ಇಲ್ಲದೆ ಜೀವನೋಪಾಯಕ್ಕಾಗಿ ಕೃಷಿ ಜಮೀನುಗಳಲ್ಲಿ ಕೂಲಿ ಕೆಲಸ ಮಾಡಿ ಹೊಟ್ಟೆ ಹೊರೆಯುವವರು. ಈ ಪ್ರಕರಣದಲ್ಲಿ ಜಮೀನು ಮಂಜೂರಾತಿ ಪಡೆದ ಭೂರಹಿತ ಕೃಷಿಕಾರ್ಮಿಕರ ಪೈಕಿ ಶ್ರೀಯುತರಾದ ಸುಬ್ಬರಾವ್, ಕೃಷ್ಣಮೂರ್ತಿ, ರಜನೀಕಾಂತ್ ಇವರುಗಳೂ ಸೇರಿದ್ದರು. ಇವರು ಯಾರೂ ಮೈಸೂರು ಜಿಲ್ಲೆಯವರಲ್ಲ, ಬೆಂಗಳೂರಿನ ಸದಾಶಿವನಗರದಲ್ಲಿದ್ದವರು. ಸುಬ್ಬರಾವ್ ಅನ್ನುವವರು ಅಖಿಲ ಭಾರತ ಮಟ್ಟದ ಕೈಗಾರಿಕಾ ಸಂಸ್ಥೆಯೊಂದರ ಅಧ್ಯಕ್ಷರು. ಸುಪ್ರಸಿದ್ಧ ರಜನೀಕಾಂತ್ ಬಗ್ಗೆ ತಿಳಿಯದವರಾರು? ಎಲ್ಲರೂ ಕೋಟ್ಯಾಧೀಶ್ವರರೇ. ಇವರುಗಳು ಭೂರಹಿತ ಕೃಷಿಕಾರ್ಮಿಕರು ಎಂದು ಪ್ರಮಾಣಪತ್ರ ಕೊಟ್ಟವರು, ಅದನ್ನು ಒಪ್ಪಿ ಜಮೀನು ಮಂಜೂರು ಮಾಡುವವರನ್ನು ಏನೆಂದು ಹೇಳಬೇಕು? ಇವರುಗಳು ಯಾರೂ ಭೂರಹಿತ ಕೃಷಿಕಾರ್ಮಿಕರಲ್ಲ, ಕೋಟ್ಯಾಧೀಶ್ವರರು, ಇವರುಗಳು ಭೂರಹಿತ ಕೃಷಿಕಾರ್ಮಿಕರು ಎಂದು ಧೃಢೀಕರಣ ಪತ್ರ ಪಡೆದಿದ್ದರೆ ಅದು ತಪ್ಪು ಎಂದು ಹೇಳಲು ಯಾವ ಕಾನೂನಿನ ತಿಳಿವಳಿಕೆಯೂ ಅಗತ್ಯವಿಲ್ಲ. ಸಾಮಾನ್ಯ ತಿಳುವಳಿಕಸ್ಥನಿರಲಿ, ಮೂರ್ಖನಿಗೂ ಗೊತ್ತಾಗುವ ಸಂಗತಿಯಿದು. 
     ಪ್ರಾಮಾಣಿಕ ಅಧಿಕಾರಿಯಾಗಿದ್ದ ನಂಜನಗೂಡಿನ ಅಸಿಸ್ಟೆಂಟ್ ಕಮಿಷನರರ ಗಮನಕ್ಕೆ ಈ ವಿಷಯ ಗೊತ್ತಾಗಿ ಅವರು ಸ್ವತಃ ಪರಿಶೀಲನೆ ನಡೆಸಿ ಮಾಹಿತಿ ಸಂಗ್ರಹಿಸಿ ಜಿಲ್ಲಾಧಿಕಾರಿಯವರಿಗೆ ಜಮೀನನ್ನು ವಾಪಸು ಸರ್ಕಾರದ ಸುಪರ್ದಿಗೆ ತೆಗೆದುಕೊಳ್ಳಲು ಶಿಫಾರಸು ಮಾಡಿ ವಿವರವಾದ ವರದಿ ಸಲ್ಲಿಸಿದ್ದರು. ಅಸಿಸ್ಟೆಂಟ್ ಕಮಿಷನರರ ವರದಿಯನ್ನು ಜಿಲ್ಲಾಧಿಕಾರಿಯವರು ಹಗುರವಾಗಿ ಪರಿಗಣಿಸುವಂತಿರಲಿಲ್ಲ. ಹಾಗಾಗಿ ಜಿಲ್ಲಾಧಿಕಾರಿಯವರು ಸಂಬಂಧಿಸಿದ ಮಂಜೂರಾತಿದಾರರಿಗೆ ನೋಟೀಸು ಕೊಟ್ಟು ವಿಚಾರಣೆ ನಡೆಸಿದರು. ಹಲವಾರು ತಿಂಗಳುಗಳು ವಿಚಾರಣೆಯಲ್ಲಿ ಕಳೆಯಿತು. ಅಂತಿಮವಾಗಿ ಅವರು ತೆಗೆದುಕೊಂಡ ನಿರ್ಣಯವೆಂದರೆ ಮಂಜೂರಿದಾರರು ಮಂಜೂರಾದ ಜಮೀನನ್ನು ಸಾಗುವಳಿಗೆ ತರುವುದಕ್ಕೆ ಬಹು ದೊಡ್ಡ ಹಣವನ್ನು ವೆಚ್ಚ ಮಾಡಿದ್ದಾರೆ, ಆದ್ದರಿಂದ ಜಮೀನನ್ನು ಮರಳಿ ಸರ್ಕಾರಕ್ಕೆ ತೆಗೆದುಕೊಳ್ಳುವುದು ಸೂಕ್ತವಲ್ಲ ಎಂದು! ನಿಜವಾದ ಭೂರಹಿತ ಕೃಷಿಕಾರ್ಮಿಕರಿಗೆ ದಿನನಿತ್ಯದ ಊಟಕ್ಕೇ ತತ್ವಾರವಾಗಿರುವಾಗ, ಈ ರಾಜ್ಯಮಟ್ಟದ, ರಾಷ್ಟ್ರಮಟ್ಟದ ಪ್ರತಿಷ್ಠಿತ ಭೂರಹಿತ ಕೃಷಿಕಾರ್ಮಿಕರು ಬಹಳ ದೊಡ್ಡ ಮೊತ್ತವನ್ನು ಮಂಜೂರಾದ ಜಮೀನಿಗೆ ಖರ್ಚು ಮಾಡಿದ್ದಾರೆ ಎಂದು ಮಂಜೂರಾತಿಯನ್ನು ಖಾಯಂಗೊಳಿಸಿ ಆದೇಶಿಸಿದ್ದರು.  ಈ ನಿರ್ಧಾರ ಸರಿಯಾದುದಲ್ಲವೆಂದು ಪ್ರಕರಣದ ಅರಿವಿದ್ದ ಯಾರಿಗೇ ಆಗಲಿ ಗೊತ್ತಾಗದಿರದು. ಪ್ರೊಬೇಷನರಿ ಅಸಿಸ್ಟೆಂಟ್ ಕಮಿಷನರರು ಐ.ಎ.ಎಸ್. ಕೇಡರಿನವರಾಗಿದ್ದು, ಅವರಿಗೆ ಈ ಅದೇಶ ಸರಿಕಾಣದೇ ಸರ್ಕಾರದ ಮುಖ್ಯ ಕಾರ್ಯದರ್ಶಿಯವರಿಗೆ ದೂರು ಸಲ್ಲಿಸಿದರು. ಆ ದೂರು ಲೋಕಾಯುಕ್ತಕ್ಕೆ ಹೋಯಿತು. ವಿಚಾರಣೆಗೆ ಆದೇಶವಾಯಿತು. ಸಂಬಂಧಿಸಿದ ತಹಸೀಲ್ದಾರ್, ರೆವಿನ್ಯೂ ಇನ್ಸ್‌ಪೆಕ್ಟರ್, ಸರ್ವೆಯರ್, ಗ್ರಾಮಲೆಕ್ಕಿಗರು ಎಲ್ಲರೂ ಅಮಾನತ್ತುಗೊಂಡರು. ಇಲಾಖಾ ವಿಚಾರಣೆಯೂ ನಡೆಯಿತು. ದೂರು ನೀಡಿದ್ದ ಅಸಿಸ್ಟೆಂಟ್ ಕಮಿಷನರರು ಸಾಕ್ಷ್ಯ ಸಹ ಹೇಳಿದ್ದರು, ಮಂಜೂರಾತಿಯಲ್ಲಿ ಅಕ್ರಮವಾಗಿದೆಯೆಂದು ತಿಳಿಸಿದ್ದರು. ದಾಖಲಾತಿಗಳೂ ಸತ್ಯ ಹೇಳುತ್ತಿದ್ದವು. ಆದರೂ, ಕೆಲವು ವರ್ಷಗಳ ನಂತರ ಎಲ್ಲರೂ ನಿರಪರಾಧಿಗಳೆಂದು ಆದೇಶವಾಯಿತು. ಕಾಲಕ್ರಮೇಣ ಪ್ರಕರಣ ಮುಚ್ಚಿಹೋಯಿತು. ಜನರೂ ಮರೆತುಬಿಟ್ಟರು. ನಂತರದಲ್ಲಿ ಆರೋಪಿಗಳಾಗಿದ್ದವರು ಸೇವಾಹಿರಿತನದ ಕಾರಣದಿಂದ ಬಡ್ತಿಯ ಬಹುಮಾನಗಳನ್ನೂ ಪಡೆದರು. ಲೋಪ ಇಲಾಖಾ ವಿಚಾರಣೆ ನಡೆಯುವ ರೀತಿಯಲ್ಲಿ, ನಡೆಸುವ ರೀತಿಯಲ್ಲಿ ಇದೆ ಎಂಬುದನ್ನು ತಿಳಿಯಲು ಕಾನೂನು ಪಂಡಿತರೇ ಆಗಬೇಕಿಲ್ಲ. ಹರ ಕೊಲ್ಲಲ್ ನರ ಕಾಯ್ವನೇ? ಹೊಲವನ್ನು ರಕ್ಷಿಸಬೇಕಾದ ಬೇಲಿಯೇ ಹೊಲವನ್ನು ಮೇಯತೊಡಗಿದರೆ ಮಾಡುವುದಾದರೂ ಏನು? ಜನರು ಜಾಗೃತರಾಗುವವರೆಗೂ ಇಂತಹ ಪರಿಸ್ಥಿತಿಗೆ ಮುಕ್ತಿ ಸಿಗದು.
-ಕ.ವೆಂ.ನಾಗರಾಜ್.
**************
ದಿನಾಂಕ 16-04-2014ರ ಜನಹಿತ ಪತ್ರಿಕೆಯ 'ಜನಕಲ್ಯಾಣ' ಅಂಕಣದಲ್ಲಿ ಪ್ರಕಟಿತವಾಗಿದೆ:

ಹಿಂದಿನ ಲೇಖನಕ್ಕೆ ಲಿಂಕ್ ಇದು: ಲೂಟಿಕೋರರಿಗಿದು ಸುಭಿಕ್ಷಕಾಲ


ಸೋಮವಾರ, ಏಪ್ರಿಲ್ 14, 2014

ಅಹಿಂಸೆಯೋ? ಹಿಂಸೆಯೋ?

     ಒಬ್ಬ ಸಣಕಲ ವ್ಯಕ್ತಿ ಧಡೂತಿ ಪೈಲ್ವಾನನನ್ನು ಕುರಿತು, 'ಈ ಸಲ ನಿನ್ನನ್ನು ಸುಮ್ಮನೆ ಬಿಟ್ಟಿದ್ದೇನೆ. ಮತ್ತೊಮ್ಮೆ ನನ್ನ ತಂಟೆಗೆ ಬಂದರೆ ನಿನ್ನ ಗತಿ ನೆಟ್ಟಗಿರುವುದಿಲ್ಲ" ಎಂದಾಗ ಪೈಲ್ವಾನ ನಕ್ಕು ಸುಮ್ಮನಿರುತ್ತಾನೆ ಎಂದಿಟ್ಟುಕೊಳ್ಳಿ. ಈಗ ಅಹಿಂಸಾ ತತ್ವವನ್ನು ಪಾಲಿಸಿದವರು ಯಾರು? ಸಣಕಲನೋ, ಪೈಲ್ವಾನನೋ? ನಿಜವಾಗಿ ಹೇಳಬೇಕೆಂದರೆ ಪೈಲ್ವಾನನೇ ಅಹಿಂಸಾ ತತ್ವ ಪಾಲಿಸಿದವನು. ಏಕೆಂದರೆ ಸಣಕಲನ ಮಾತು ಕೇಳಿ ಆತ ತಿರುಗಿಸಿ ಅವನ ಮುಸುಡಿಯ ಮೇಲೆ ಗುದ್ದಿಬಿಡಬಹುದಿತ್ತು. ಹಾಗೆ ಗುದ್ದಿದರೂ ಸಣಕಲ ತಿರುಗಿ ಏನೂ ಮಾಡುವಂತಿರಲಿಲ್ಲ. ಹಿಂಸೆ ಮಾಡಲು ಅವಕಾಶವಿದ್ದರೂ ಮಾಡದಿರುವುದೇ ನಿಜವಾದ ಅಹಿಂಸೆ. ಜಗತ್ತು ಮತ್ತು ಜೀವಗಳ ಉಗಮ ಕಾಲದಿಂದಲೂ ಹಿಂಸೆ, ಅಹಿಂಸೆಗಳ ತಾಕಲಾಟ ಸಾಗುತ್ತಿದೆ, ಸಾಗುತ್ತಲೇ ಇರುತ್ತದೆ.
     ಅಹಿಂಸೆಯ ಕೇಂದ್ರಭಾಗದಲ್ಲಿ ಪ್ರೀತಿಯ ತತ್ವವಿದೆ. ಇದನ್ನು ಅರ್ಥ ಮಾಡಿಕೊಳ್ಳುವುದು ಕಷ್ಟವೇನಲ್ಲ. ಎಲ್ಲಿ ಪ್ರೀತಿಯಿರುತ್ತದೋ ಅಲ್ಲಿ ಅಹಿಂಸೆಯಿರುತ್ತದೆ. ಮಾನವನಂತೆ ವಿವೇಚನಾ ಸಾಮರ್ಥ್ಯವಿಲ್ಲದ ಪ್ರಾಣಿಗಳಲ್ಲೂ ಇದನ್ನು ಗುರುತಿಸಬಹುದು. ತಮ್ಮ ಮರಿ, ಸಮೂಹ, ಕುಟುಂಬಗಳನ್ನು ಪ್ರೀತಿಯಿಂದ ಕಾಣುವ ಅವು ಇತರ ಪ್ರಾಣಿಗಳನ್ನು ಕಂಡಾಗ ಕಾದಾಡುತ್ತವೆ, ಬಲಿ ತೆಗೆದುಕೊಳ್ಳುತ್ತವೆ. ಮಾನವರಲ್ಲೂ ಅಷ್ಟೆ, ತಮ್ಮವರು ಅನ್ನುವವರ ಬಗ್ಗೆ ಕೆಡುಕನ್ನು ಅವರು ಬಯಸುವುದಿಲ್ಲ. ಈ ತತ್ವವನ್ನು ವಿಶಾಲವಾಗಿ ನೋಡುತ್ತಾ ಹೋದರೆ ಅಹಿಂಸೆ ಅನ್ನುವುದು ದೇವರ ಗುಣ, ದೇವಮಾನವರ ಗುಣ ಅನ್ನುವುದು ಗೊತ್ತಾಗುತ್ತದೆ. ಅಹಿಂಸೆ ಹೃದಯದಿಂದ ಮೆದುಳಿಗೆ ಮೂಡಿ ಬರುವಂತಹದು. ದೇವರಲ್ಲಿ ಮತ್ತು ಜೀವರಲ್ಲಿ ನಂಬಿಕೆ ಇರುವವರಿಗೆ ಅಹಿಂಸೆ ಅರ್ಥವಾಗುತ್ತದೆ. ಅಹಿಂಸೆ ಮತ್ತು ಸತ್ಯಗಳು ಅವಿನಾಭಾವ ಸಂಬಂಧವಿರುವಂತಹವು.
     ಅಹಿಂಸೆಯ ಮಹತ್ವ ಅರ್ಥವಾಗಬೇಕೆಂದರೆ ಹಿಂಸೆಯ ಪರಿಣಾಮಗಳನ್ನು ತಿಳಿಯಬೇಕು. ಒಂದು ಗಾದೆಯಿದೆ, ಹಿಂಸೆ ಪ್ರತಿಹಿಂಸೆಗೆ ಪ್ರಚೋದಿಸುತ್ತದೆ. ಹಿಂಸೆ, ಮಾನಸಿಕವಿರಬಹುದು, ದೈಹಿಕವಿರಬಹುದು ಅದು ಕೊಟ್ಟವರಿಗೂ, ಪಡೆದವರಿಗೂ ಕೇಡು ಮಾಡದೇ ಇರದು. ಹಿಂಸೆ ಕೊಟ್ಟವರಿಗೆ ತಮಗೆ ಪ್ರತಿಯಾಗಿ ತೊಂದರೆ ಮಾಡಿಯಾರೆಂಬ ಭಯ ಕಾಡುತ್ತಿರುತ್ತದೆ. ಅವರು ವಿಶ್ವಾಸ, ಸ್ನೇಹಗಳನ್ನು ಕಳೆದುಕೊಳ್ಳುತ್ತಾರೆ. ಹಿಂಸೆ ಅನುಭವಿಸಿದವರೂ ಸೇಡು ತೀರಿಸಿಕೊಳ್ಳಲು ಹಪಹಪಿಸುತ್ತಾರೆ. ಹಿಂಸೆ ಕೊಟ್ಟವರು ಬಲಶಾಲಿಯಾಗಿದ್ದರೆ ಅವಮಾನದಿಂದ ಕುದಿಯುತ್ತಾರೆ ಮತ್ತು ಸೂಕ್ತ ಸಂದರ್ಭಕ್ಕಾಗಿ ಕಾಯುತ್ತಾರೆ. ಇದರಿಂದಾಗಿ ದೈನಂದಿನ ಚಟುವಟಿಕೆಗಳು ಕುಂಠಿತಗೊಳ್ಳುತ್ತವೆ/ಏರುಪೇರಾಗುತ್ತವೆ. ಮುಂದುವರೆಯುವುದಕ್ಕೆ ಹಿನ್ನಡೆಯಾಗುತ್ತದೆ. ಹಿಂಸೆ ದುರ್ಬಲರ ಮತ್ತು ಪ್ರೀತಿಯಿಂದ ಗೆಲ್ಲಲು ಸಾಧ್ಯವಾಗದ ಹತಾಶ ವ್ಯಕ್ತಿಗಳ ಆಯುಧ. ಭಯಪಡಿಸಿ ಜನರನ್ನು ಆಳುವುದು ಶಾಶ್ವತದ್ದಾಗಿರುವುದಿಲ್ಲ. ಒಮ್ಮೆ ಆ ರೀತಿ ಆಳಿದವರು ದುರ್ಬಲರಾದರೆಂದರೆ ಅವರೂ ಪ್ರತಿಹಿಂಸೆಯ ಬಲಿಪಶುಗಳಾಗುತ್ತಾರೆ. ಸರ್ವಾಧಿಕಾರಿಗಳಾಗಿ ಭಯಪಡಿಸಿ ದೇಶಗಳನ್ನು ಆಳಿದವರು ಕೊನೆಯಲ್ಲಿ ಅಮಾನುಷ ಅಂತ್ಯ ಕಂಡ ಅನೇಕ ಘಟನೆಗಳಿಗೆ ಇತಿಹಾಸ ಸಾಕ್ಷಿಯಾಗಿದೆ. ಅದೇ ನೈಜ ಕಾಳಜಿಯಿಂದ ಆಳಿದವರು ಸೋತಾಗಲೂ ಗೌರವ ಉಳಿಸಿಕೊಂಡಿರುವ ನಿದರ್ಶನಗಳೂ ಕಣ್ಣ ಮುಂದಿವೆ.
     ಅಹಿಂಸೆಯ ಶತ್ರು ಕೋಪ ಮತ್ತು ದುರಭಿಮಾನಗಳು. ಅವು ಅಹಿಂಸೆಯನ್ನು ನುಂಗಿ ನೀರು ಕುಡಿಯುತ್ತವೆ. ಕೋಪ ಮತ್ತು ದುರಭಿಮಾನಗಳು ಸಾಮಾನ್ಯರ ಆಸ್ತಿಗಳು. ಅಸಾಮಾನ್ಯರಷ್ಟೇ ಅವನ್ನು ಗೆಲ್ಲಬಲ್ಲರು. ಹಾಗಾಗಿ ಅಹಿಂಸೆ ಅನ್ನುವುದು ಸಾಧಕರ/ಸಜ್ಜನರ ಸ್ವತ್ತು. ಅಹಿಂಸೆ ಅನ್ನುವುದು ಬೆಳವಣಿಗೆಯ ಸಂಕೇತ. ಎಲ್ಲಿಯವರೆಗೆ ನಾವು ಇತರರನ್ನು ಹಿಂಸಿಸುತ್ತಿರುತ್ತೇವೆಯೋ ಅಲ್ಲಿಯವರೆಗೆ ನಾವು ಅಸುರರಾಗಿರುತ್ತೇವೆ, ಮಾನವರಾಗಿರುವುದಿಲ್ಲ. ಕೆಲವು ಸಂದರ್ಭಗಳಲ್ಲಿ ಅಹಿಂಸಾತ್ಮಕರಾಗಿರಲು ನಮಗೆ ಹೆಚ್ಚು ಶಕ್ತಿ, ಹಿಂಸೆ ಮಾಡದಿರಲು ಅಗಾಧ ಮಾನಸಿಕ ಬಲ ಇರಬೇಕಾಗುತ್ತದೆ. ಅಹಿಂಸಾತತ್ವ ಪಾಲಿಸುವವರಿಂದಾಗಿ ಜಗತ್ತು ಸ್ವಲ್ಪವಾದರೂ ಶಾಂತಿಯಿಂದಿದೆ. ಇಲ್ಲವಾದಲ್ಲಿ ಜಗತ್ತು ನಿರಂತರ ರಣಾಂಗಣವಾಗಿರುತ್ತಿತ್ತು!
     ಅಯೋಧ್ಯೆಯ ಜ್ವಲಂತ ಉದಾಹರಣೆ ನಮ್ಮ ಮುಂದಿದೆ. ಅಯೋಧ್ಯೆ, ಮಥುರೆ ಮತ್ತು ವಾರಣಾಸಿಗಳಲ್ಲಿದ್ದ ಹಿಂದೂ ದೇವಾಲಯಗಳನ್ನು ಹಿಂದೊಮ್ಮೆ ಮುಸ್ಲಿಮ್ ಆಕ್ರಮಣಕಾರರು ಕೆಡವಿ ಮಸೀದಿಗಳನ್ನು ಕಟ್ಟಿದ್ದರು. ಅಯೋಧ್ಯೆಯಲ್ಲಿ ರಾಮಮಂದಿರ ಕೆಡವಿ ಬಾಬರಿ ಮಸೀದಿ ತಲೆಯೆತ್ತಿತ್ತು. ಬಾಬರಿ ಮಸೀದಿ ಸಹ ಹಲವು ವರ್ಷಗಳ ಹಿಂದೆ ಧ್ವಂಸಗೊಂಡಿತು. ಆದರೆ ವಿವಾದ ಮಾತ್ರ ನಿಲ್ಲದೆ ಮುಂದುವರೆದಿದೆ. ಇತರ ಧರ್ಮ/ಮತ/ವಿಚಾರಗಳ ಬಗೆಗಿನ ಅಹನೆಯೇ ಸಮಸ್ಯೆಯ ಮೂಲವಾಗಿದೆ. ಇದು ನಿಲ್ಲುವುದೆಂದಿಗೆ? ಮಹಾವೀರನ 'ಬಾಳು, ಬಾಳಗೊಡು' ಎಂಬ ಕರೆಯನ್ನು ಕೇಳುವವರು ಯಾರು?  ರಾಜಕಾರಣಿಗಳು ಇದನ್ನೇ ಬಂಡವಾಳ ಮಾಡಿಕೊಂಡು ಸಮಸ್ಯೆ ಇತ್ಯರ್ಥವಾಗದಿರುವಂತೆ ನೋಡಿಕೊಂಡು ಸ್ವಂತದ ಲಾಭ ಪಡೆಯುವುದಕ್ಕೆ ಮಾತ್ರ ಗಮನ ಹರಿಸುತ್ತಿರುವುದರಿಂದ ಇದು ಸದ್ಯಕ್ಕೆ ಪರಿಹಾರ ಕಾಣುವ ಲಕ್ಷಣಗಳಿಲ್ಲ.
     ಅಹಿಂಸಾತತ್ವ ವೈಯಕ್ತಿಕ ಸಾಧನೆಗೆ ಅತ್ಯುನ್ನತವಾದ ಸಾಧನ. ಇದನ್ನು ಅಳವಡಿಸಿಕೊಂಡವನು ಅಜಾತಶತ್ರುವೆನಿಸುತ್ತಾನೆ. ಹೆಚ್ಚಿನ ಧರ್ಮ, ಮತಗಳು ಅಹಿಂಸೆಗೆ ಮಹತ್ವ ನೀಡಿವೆ. ಆದರೆ ಆಯಾ ಧರ್ಮದ ತಿರುಳನ್ನು ಸರಿಯಾಗಿ ಗ್ರಹಿಸದ, ತಮ್ಮ ಧರ್ಮ/ಮತವೇ ಶ್ರೇಷ್ಠ ಎಂದು ಭಾವಿಸುವುದರೊಂದಿಗೆ ಇತರ ಧರ್ಮ/ಆದರ್ಶಗಳನ್ನು ದ್ವೇಷಿಸುವ ಮನೋಭಾವದ ಕೆಳಸ್ತರದ ಧರ್ಮಾನುಯಾಯಿಗಳು ಹಿಂಸೆಗೆ ಎಳಸುವುದನ್ನು ಕಾಣುತ್ತಿದ್ದೇವೆ. ಹಿಂದೂ, ಬೌದ್ಧ, ಜೈನ ಧರ್ಮಗಳಲ್ಲಿ ಅಹಿಂಸೆಗೆ ಉನ್ನತ ಸ್ಥಾನ ನೀಡಿವೆ. ಇಸ್ಲಾಮ್ ಮತದಲ್ಲೂ ಅಹಿಂಸೆಗೆ ಪ್ರಾಧಾನ್ಯತೆ ಇದ್ದರೂ, ಇತರ ಧರ್ಮೀಯರ ಕುರಿತ ಅಸಹನೆ ಅಶಾಂತಿಗೆ ಎಡೆ ಮಾಡಿಕೊಡುವುದನ್ನು ಕಾಣುತ್ತೇವೆ. ಗಡಿನಾಡ ಗಾಂಧಿ ಎಂದೇ ಹೆಸರಾಗಿದ್ದ ಖಾನ್ ಅಬ್ದುಲ್ ಗಫಾರ್ ಖಾನರ ಈ ಮಾತು ಮನನೀಯವಾಗಿದೆ: 'ಯಾರನ್ನೇ ಆಗಲಿ, ಮಾತಿನಿಂದಾಗಲೀ ಅಥವ ಕೃತಿಯಿಂದಾಗಲೀ ನೋಯಿಸದಿರುವ ಮತ್ತು ದೇವರ ಸ್ಟೃಯ ಜೀವಗಳ ಅನುಕೂಲ ಮತ್ತು ಸಂತೋಷಕ್ಕಾಗಿ ಶ್ರಮಿಸುವ ಮನುಷ್ಯನೇ ಮುಸ್ಲಿಮ. ಸಹಮನುಷ್ಯರನ್ನು ಪ್ರೀತಿಸುವುದೇ ದೇವರ ಮೇಲಿನ ನಂಬಿಕೆ'. ಇದನ್ನು ಅನುಸರಿಸಿದರೆ ಸಮಸ್ಯೆ ಎಲ್ಲಿ ಬಂದೀತು? ಆದರೆ . . .?
     ದಕ್ಷಿಣ ಆಫ್ರಿಕಾದ ವರ್ಣಭೇದ ನೀತಿಯ ವಿರುದ್ಧ ಮತ್ತು ಭಾರತದ ಸ್ವಾತಂತ್ರ್ಯ ಹೋರಾಟದ ಸಂದರ್ಭಗಳಲ್ಲಿ ಗಾಂಧೀಜಿಯ ನೇತೃತ್ವದಲ್ಲಿ ನಡೆದ ಅಹಿಂಸಾತ್ಮಕ ವಿಧಾನದ ಹೋರಾಟಗಳು ಉಲ್ಲೇಖನೀಯವಾಗಿವೆ. ಅಹಿಂಸಾತ್ಮಕ ಹೋರಾಟಗಳಿಗೆ ನ್ಯಾಯ, ನೀತಿ, ಮೌಲ್ಯಗಳಿಗೆ ಬೆಲೆ ಕೊಡುವಂತಹವರು ಮಾತ್ರ ಪರಿಗಣಿಸಿಯಾರು. ಕುಟಿಲತೆ, ಕುತಂತ್ರಗಳಿಗೆ ಹೆಸರಾದ ಬ್ರಿಟಿಷರು ಅಹಿಂಸಾತ್ಮಕ ಹೋರಾಟಕ್ಕೆ ಹೆದರಿ ಕಾಲ್ಕಿತ್ತರು ಎಂದು ಹೇಳುವುದು ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ಅಪಚಾರ ಮಾಡಿದಂತೆ ಆಗುತ್ತದೆ. ಅವರು ಅಹಿಂಸೆಗೆ ಬೆಲೆ ಕೊಡುವವರಾಗಿದ್ದರೆ ಜಲಿಯನ್‌ವಾಲಾಬಾಗಿನಲ್ಲಿ ಅಹಿಂಸಾತ್ಮಕವಾಗಿ ನಡೆಸಲಾಗುತ್ತಿದ್ದ ಸಭೆಯನ್ನು ಸುತ್ತುವರೆದು ನಿರ್ದಯವಾಗಿ ಗುಂಡಿನ ಸರಿಮಳೆಗೈದು ಮಕ್ಕಳು, ಮುದುಕರೆನ್ನದೆ ಸಾವಿರಾರು ಭಾರತೀಯರನ್ನು ಹತ್ಯೆ ಮಾಡುತ್ತಿರಲಿಲ್ಲ. ಗಂಡುಗಲಿಗಳಾದ ಸುಭಾಷ್ ಚಂದ್ರ ಬೋಸ್, ಚಂದ್ರಶೇಖರ ಆಜಾದ್, ಭಗತ್ ಸಿಂಗ್, ಸಾವರ್ಕರ್, ವಾಸುದೇವ ಬಲವಂತ ಫಡಕೆ, ಶಿವಾಜಿ, ಕಿತ್ತೂರು ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ, ದೊಂಡಿಯವಾಘನಂತಹ ಅಸಂಖ್ಯ ವೀರ ಶೂರರ ಕೆಚ್ಚೆದೆಯ ಹೋರಾಟಗಳು, ಬಲಿದಾನಗಳನ್ನು ಕಡೆಗಣಿಸಿದರೆ ದ್ರೋಹವೆಸಗಿದಂತೆ ಆಗುತ್ತದೆ. ಇಂತಹವರನ್ನು ಎದುರಿಸಿ ಹಣ್ಣಾಗಿದ್ದ, ಎರಡನೆಯ ವಿಶ್ವಯುದ್ಧದ ಪರಿಣಾಮಗಳನ್ನು ಎದುರಿಸಬೇಕಾಗಿದ್ದ ಸಂದರ್ಭದಲ್ಲಿ ಈ ಸತ್ಯಾಗ್ರಹಗಳೂ ಸೇರಿಕೊಂಡು ಬ್ರಿಟಿಷರು ದೇಶ ಬಿಟ್ಟು ಹೊರಡಬೇಕಾಯಿತು. ಇಂದು ಗಾಂಧಿಯ ಅನುಯಾಯಿಗಳೆಂದು ಹೇಳಿಕೊಳ್ಳುತ್ತಿರುವವರು ಮೇಲೆ ಹೆಸರಿಸಿದಂತಹ ದೇಶಪ್ರೇಮಿಗಳನ್ನು ಕಡೆಗಣಿಸುತ್ತಿರುವುದು ನಿಜಕ್ಕೂ ಅಕ್ಷಮ್ಯವೇ ಸರಿ. ಕೆಲವು ಅನಿವಾರ್ಯ ಸಂದರ್ಭಗಳಲ್ಲಿ ಶತ್ರುಗಳ ವಿರುದ್ಧ ತಕ್ಕ ರೀತಿಯಲ್ಲಿ ವರ್ತಿಸಬೇಕಾಗುತ್ತದೆ. ನೆರೆ ದೇಶ ನಮ್ಮ ಸೈನಿಕರ ರುಂಡಗಳನ್ನು ಕಡಿದು ಚೆಲ್ಲುವಾಗ, ಅಹಿಂಸೆಯ ಮಂತ್ರ ಜಪಿಸಿದರೆ ಅದು ಹೇಡಿತನವೆನಿಸುತ್ತದೆ. ಅಹಿಂಸೆ ನಮ್ಮ ಮೂಲಮಂತ್ರವಾಗಬೇಕು ನಿಜ, ಆದರೆ ಅದು ಹೇಡಿತನದ ಮುಖವಾಡವಾಗಬಾರದು.
     ಇತ್ತೀಚೆಗೆ ಅಣ್ಣಾ ಹಜಾರೆಯವರ ನೇತೃತ್ವದಲ್ಲಿ ಭ್ರಷ್ಠಾಚಾರದ ವಿರುದ್ಧ ಪ್ರಬಲ ಲೋಕಪಾಲ್ ಮಸೂದೆ ಜಾರಿಗಾಗಿ ದೇಶಾದ್ಯಂತ ಅದ್ಭುತ ಹೋರಾಟ ನಡೆಯಿತು. ಏನೋ ಒಳ್ಳೆಯದು ಆಗಿಯೇ ಬಿಡುತ್ತದೆ ಎಂದು ದೇಶದ ಜನತೆ ಆಶಾಭಾವದಿಂದ ನೋಡುತ್ತಿದ್ದಂತೆಯೇ ಚಳುವಳಿಯನ್ನು ಹತ್ತಿಕ್ಕುವ ಕೆಲಸವನ್ನು ಆಡಳಿತ ಪಕ್ಷ ಮತ್ತು ವಿರೋಧಪಕ್ಷಗಳವರು ಚಾಣಾಕ್ಷತನದಿಂದ ಮಾಡಿದರು. ಇಂದು ಆಡಳಿತದಲ್ಲಿ ಇರುವ ಹೆಚ್ಚಿನ ಜನಪ್ರತಿನಿಧಿಗಳಾದರೂ ಎಂತಹವರು? ಕೋಟಿ ಕೋಟಿ ಹಣವನ್ನು ಅಕ್ರಮ ರೀತಿಯಲ್ಲಿ ಸಂಗ್ರಹಿಸಿದವರು, ದೇಶದ ಸಂಪತ್ತನ್ನು ಲೂಟಿ ಮಾಡಿದವರು, ಭೂಗತ ದೊರೆಗಳು/ಅವರ ಕೃಪಾಪೋಷಿತರು. ಎಲ್ಲೋ ಅಲ್ಲೊಬ್ಬರು, ಇಲ್ಲೊಬ್ಬರು ಕರಿ ಕಾರ್ಮೋಡದಲ್ಲಿನ ಬೆಳ್ಳಿಮಿಂಚಿನಂತೆ ಸಜ್ಜನ ರಾಜಕಾರಣಿಗಳೂ ಇರಬಹುದು. ಆದರೆ ಅವರು ಮೂಲೆಗೆ ಒತ್ತರಿಸಲ್ಪಟ್ಟಿದ್ದಾರೆ. ಇಂತಹ ಬಲಾಢ್ಯರುಗಳು ಎಂತಹ ಪ್ರಬಲ ಜನಹೋರಾಟವನ್ನೂ ಹತ್ತಿಕ್ಕುವ ಸಾಮರ್ಥ್ಯ ಹೊಂದಿದ್ದಾರೆ. ಸಿ.ಬಿ.ಐ., ಪೋಲಿಸ್, ಅಧಿಕಾರಿಗಳನ್ನು ದಾಳಗಳಾಗಿ ಬಳಸಿಕೊಂಡು ವಿರೋಧಿಗಳನ್ನು ಹತ್ತಿಕ್ಕುತ್ತಾರೆ, ಸಾಧ್ಯವಾದರೆ ಕೊಂಡುಕೊಂಡೂಬಿಡುತ್ತಾರೆ. ಭಂಡತನವನ್ನು ಎಗ್ಗಿಲ್ಲದೆ ಪ್ರದರ್ಶಿಸಿ ತಮ್ಮ ವಿರುದ್ಧ ಯಾರಾದರೂ ಮಾತನಾಡಿದರೆ ಹುಷಾರ್ ಎಂಬ ಸಂದೇಶವನ್ನು ರವಾನಿಸುತ್ತಾರೆ. ಇನ್ನು ಸಾಮಾನ್ಯ ಜನರು ಹೋರಾಡುವುದಿರಲಿ, ಮಾತನಾಡಲೂ ಹಿಂಜರಿಯುವ ಪರಿಸ್ಥಿತಿ ಇದೆ. ಇದನ್ನು ಅಹಿಂಸಾ ಮಾರ್ಗದಿಂದ ಸರಿದಾರಿಗೆ ತರಬಹುದೆ? ಹಾಗೆಂದು ಹಿಂಸಾಮಾರ್ಗದಿಂದಲೂ ಪರಿಹಾರ ಸಾಧ್ಯವಿಲ್ಲ. ಹಿಂಸಾಮಾರ್ಗದಿಂದ ಬದಲಾವಣೆ ತರಬಯಸುವ ನಕ್ಸಲರು, ಕಮ್ಯೂನಿಸ್ಟರು ಜನರಿಂದಲೂ ದೂರವಾಗುವುದಲ್ಲದೆ, ಇತರರ ಪ್ರಾಣಹರಣದ ಜೊತೆಗೆ ತಮ್ಮ ಜೀವಗಳನ್ನೂ ಪಣಕ್ಕಿಡಬೇಕಾಗುತ್ತದೆ. ಜನರಿಂದ ಸ್ವತಃ ದೂರವಾಗಿ, ತಾವೂ ಒಂದೊಮ್ಮೆ ಹತರಾಗಿ ಸಾಧಿಸುವುದಾದರೂ ಏನನ್ನು?
ಭುಗಿಲೆದ್ದ ಜ್ವಾಲಾಗ್ನಿ ಮನೆಯನ್ನೆ ಸುಟ್ಟೀತು
ಹದವರಿತ ಬೆಂಕಿಯದು ಅಟ್ಟುಣಬಡಿಸೀತು |
ಕ್ರೋಧಾಗ್ನಿ ತರದಿರದೆ ಬಾಳಿನಲಿ ವಿರಸ
ಹದವರಿತ ಕೋಪವದು ಹಿತಕಾರಿ ಮೂಢ ||
     ಮಾರ್ಟಿನ್ ಲೂಥರ್ ಕಿಂಗ್ ಹೇಳುತ್ತಾರೆ: "ಹಿಂಸೆಯಿಂದ ವರ್ಣಭೇದವನ್ನು ಹತ್ತಿಕ್ಕುವುದು ಅವ್ಯವಹಾರಿಕ ಮತ್ತು ಅನೈತಿಕ. ಹಿಂಸೆ ಪರಿವರ್ತಿಸುವ ಬದಲಿಗೆ ಒತ್ತಾಯಿಸುತ್ತದೆ, ಪ್ರೀತಿಗಿಂತ ದ್ವೇಷ ಮೂಡಿಸುತ್ತದೆ, ಸಹೋದರತ್ವವನ್ನು ನಾಶ ಮಾಡುತ್ತದೆ. ಅದು ಅನುಭವಿಸಿದವರಲ್ಲಿ ಕಹಿಯನ್ನು, ನಾಶ ಮಾಡುವವರಲ್ಲಿ ಕ್ರೂರತೆಯನ್ನು ಉಂಟುಮಾಡುತ್ತದೆ."  ಲೂಥರ್ ಕಿಂಗರ ವಿಚಾರವನ್ನು ಒಪ್ಪದ ಜಾರ್ಜ್ ಜಾಕ್ಸನ್ ಹೇಳುತ್ತಾರೆ: "ಅಹಿಂಸಾ ವಿಧಾನ ಒಂದು ಸುಳ್ಳು ಆದರ್ಶ. ಅದು ವಿರೋಧಿಗಳು ನ್ಯಾಯ, ನೀತಿಗಳನ್ನು ಮಾನ್ಯ ಮಾಡುವರೆಂದು ಆಶಿಸುತ್ತದೆ. ಆದರೆ ಅವರು ಅಂತಹ ಮನೋಭಾವದವರಾಗಿರದಿದ್ದರೆ ಮತ್ತು ನ್ಯಾಯ, ನೀತಿ, ಧರ್ಮ ಪಾಲಿಸಿದರೆ ಕಳೆದುಕೊಳ್ಳುವುದೇ ಹೆಚ್ಚು ಎಂದಾದರೆ, ಅವರ ಪ್ರತಿಕ್ರಿಯೆ ಸಕಾರಾತ್ಮಕವಾಗಿರುವುದಿಲ್ಲ." ಇಲ್ಲಿಯೇ ಸಮಸ್ಯೆ ಬರುವುದು. ಎರಡೂ ಹೇಳಿಕೆಗಳು ಪರಸ್ಪರ ವಿರುದ್ಧವಾಗಿದ್ದರೂ ಎರಡರಲ್ಲೂ ಸತ್ಯಾಂಶವಿದೆ. ಹಾಗಾದರೆ ಏನು ಮಾಡಬೇಕು? ಮಧ್ಯಮ ಮಾರ್ಗ ಅತ್ಯುತ್ತಮವಾಗಿದೆ. ಜಾಣನಿಗೆ ಮಾತಿನ ಪೆಟ್ಟಾದರೆ ಕೋಣನಿಗೆ ದೊಣ್ನೆಯ ಪೆಟ್ಟೇ ಬೀಳಬೇಕು. ಸಮಯ, ಸಂದರ್ಭ, ಪರಿಸ್ಥಿತಿಗೆ ಅನುಗುಣವಾಗಿ ನಿರ್ಧರಿಸಬೇಕಿರುವುದೇ ಒಳ್ಳೆಯದು. 'ಅಸತ್ಯ, ಅನ್ಯಾಯಗಳ ವಿರುದ್ಧ ತಲೆಬಾಗುವುದು ಹೇಡಿತನ'ವೆಂಬುದು ಅಹಿಂಸಾ ತತ್ವವನ್ನು ಪ್ರತಿಪಾದಿಸಿದ ಗಾಂಧಿಯವರದೇ ಹೇಳಿಕೆಯೆಂಬುದನ್ನು ಮರೆಯದಿರೋಣ. ಅಹಿಂಸೆ ಅನ್ನುವುದು ಸಮಸ್ಯೆಯನ್ನು ಇತ್ಯರ್ಥಪಡಿಸದೆ ಕೇವಲ ಮುಂದೂಡುವದಕ್ಕಾಗಿ ಬಳಸುವ ಅಸ್ತ್ರವಾದರೆ, ವೈಯಕ್ತಿಕವಾಗಿ ನಾನು ಅಂತಹ ಸಂದರ್ಭದಲ್ಲಿ ಹಿಂಸೆಯನ್ನು ಬೆಂಬಲಿಸುತ್ತೇನೆ. ಭ್ರಷ್ಠರನ್ನು ದಾರಿಯಲ್ಲಿ ತಡೆದು ನಿಲ್ಲಿಸಿ ಪ್ರಶ್ನಿಸುವ ಎದೆಗಾರಿಕೆಯನ್ನು ಜನರು ಬೆಳೆಸಿಕೊಳ್ಳಬೇಕಿದೆ. ಇಂತಹ ಕೆಲಸ ಮಾಡುವವರನ್ನು 'ಇದೆಲ್ಲಾ ನಮಗೇಕೆ' ಎಂದು ಸುಮ್ಮನಿರದೆ ಬೆಂಬಲಿಸುವ ಕನಿಷ್ಠ ಕಾರ್ಯವನ್ನಾದರೂ ನಾವು ಮಾಡಬೇಕಿದೆ. ದುಷ್ಟರು, ಭ್ರಷ್ಠರು ಪೆಟ್ಟು ತಿನ್ನುವ ಸಂದರ್ಭದಲ್ಲಿ ಸಜ್ಜನರೆನಿಸಿಕೊಂಡವರೂ ಮೂಕಪ್ರೇಕ್ಷಕರಾಗಿರದೆ ತಮ್ಮ ಪಾಲಿನ ಪೆಟ್ಟನ್ನೂ ಅಳುಕದೆ ಕೊಡಲು ಹಿಂದೆ ಮುಂದೆ ನೋಡಬಾರದು. ಅಹಿಂಸೆ ಅತ್ಯುತ್ತಮವಾದ ಜೀವನವಿಧಾನ. ಆದರೆ, ಅದನ್ನು ಭಂಡರು, ನೀಚರು, ಸ್ವಾರ್ಥಿಗಳ ವಿರುದ್ಧ ಬಳಸುವುದು ಕಷ್ಟ. ಅವರಿಗೆ ಅವರ ರೀತಿಯಲ್ಲೇ ಉತ್ತರಿಸಬೇಕಾಗುತ್ತದೆ. ಶ್ರೀಕೃಷ್ಣನಂತಹ ಶ್ರೇಷ್ಠ ರಾಜನೀತಿಜ್ಞ, ಚಾಣಕ್ಯನಂತಹ ಮೇಧಾವಿಗಳು ಬೋಧಿಸಿರುವುದು ಇದನ್ನೇ. ನಮ್ಮ ಕುಟಿಲ ರಾಜಕಾರಣಿಗಳು ಅನ್ಯಾಯ, ಭ್ರಷ್ಠಾಚಾರಗಳನ್ನು ವಿರೋಧಿಸುವವರನ್ನು ಹಿಂಸಾಮಾರ್ಗಿಗಳು, ಬಲಪಂಥೀಯರು, ಇತ್ಯಾದಿ ಹೆಸರಿಸಿ ಹತ್ತಿಕ್ಕುವುದರಲ್ಲಿ, ಸಾಮಾನ್ಯ ಜನರನ್ನು ದಾರಿ ತಪ್ಪಿಸುವಲ್ಲಿ ಪ್ರವೀಣರು. ಆದರೆ, ಜನರು ಎಚ್ಚೆತ್ತರೆ ಇಂತಹ ಕುಟಿಲತೆ ಸದಾ ಕಾಲಕ್ಕೂ ನಡೆಯದು.
     ಅಹಿಂಸಾಮಾರ್ಗ ನಮ್ಮ ಜೀವನವಿಧಾನವಾಗಲಿ. ಆದರೆ ಇತರರ ಹಿಂಸೆಯನ್ನು ವಿನಾಕಾರಣ ಸಹಿಸದಿರುವ ಮನೋಭಾವವೂ ನಮ್ಮದಿರಲಿ. ಅಜ್ಞಾತಕವಿಯ ಈ ಸಾಲುಗಳು ವಿಶ್ವಮನುಕುಲದ ಪ್ರಾರ್ಥನೆಯಾಗಲು ತಕ್ಕದಿದೆ:
"ದೀನರ್ಗೆ ನೋವನಿತ್ತು | ಸಂಪತ್ತ ಗಳಿಸದಂತೆ |
ನೀ ನೀಡು ಶುದ್ಧಮತಿಯಾ | ಪರಹಿಂಸೆಗೆಳೆಸದಂತೆ ||"
-ಕ.ವೆಂ,ನಾಗರಾಜ್.
**************
[14.04.2014ರ ಜನಮಿತ್ರ ಪತ್ರಿಕೆಯಲ್ಲಿ ಪ್ರಕಟಿತ]

ಶನಿವಾರ, ಏಪ್ರಿಲ್ 12, 2014

ಅರ್ಥ ಕಳೆದುಕೊಂಡ ಇಲಾಖಾ ವಿಚಾರಣೆಗಳು - ೨: ಲೂಟಿಕೋರರಿಗಿದು ಸುಭಿಕ್ಷಕಾಲ

     ಹಣ ದುರುಪಯೋಗದ ಕಾರಣದಿಂದ ಸೇವೆಯಿಂದ ವಜಾಗೊಂಡಿದ್ದ ಗ್ರಾಮಲೆಕ್ಕಿಗನೊಬ್ಬ ಉಚ್ಛನ್ಯಾಯಾಲಯದಲ್ಲಿ ಇಲಾಖಾ ವಿಚಾರಣೆ ನ್ಯಾಯಯುತವಾಗಿ ನಡೆದಿಲ್ಲವೆಂದು ಮೇಲುಮನವಿ ಸಲ್ಲಿಸಿ, ಅದನ್ನು ನ್ಯಾಯಾಲಯವು ಎತ್ತಿಹಿಡಿದು ಅವನನ್ನು ಸೇವೆಗೆ ತೆಗೆದುಕೊಂಡು ಅಗತ್ಯವೆನಿಸಿದರೆ ಪುನರ್ವಿಚಾರಣೆ ನಡೆಸಲು ಆದೇಶಿಸಿದ್ದರೂ, ಪುನರ್ವಿಚಾರಣೆ ನಡೆಸದೆ ಆತ ವಜಾಗೊಂಡ ನಂತರದಿಂದ ನ್ಯಾಯಾಲಯದ ಆದೇಶವಾಗುವವರೆಗಿನ ಎಂಟು ವರ್ಷಗಳ ಸಂಬಳವನ್ನು ಆತ ಕೆಲಸ ಮಾಡಿರದಿದ್ದರೂ ಧಾರೆಯೆರೆದುದಲ್ಲದೆ, ನಿರಾತಂಕವಾಗಿ ವಯೋನಿವೃತ್ತಿಯಾಗುವವರೆಗೆ ಮುಂದಿನ ಸೇವೆ ಪೂರ್ಣಗೊಳಿಸಿ ಪಿಂಚಣಿ ಮತ್ತಿತರ ಸೌಲಭ್ಯಕ್ಕೆ ಪಾತ್ರನನ್ನಾಗಿಸಿದ ಅಸಮರ್ಪಕ ಆಡಳಿತದ ಕುರಿತು ಹಿಂದಿನ ಲೇಖನದಲ್ಲಿ ವಿವರಿಸಲಾಗಿತ್ತು. ಈಗ ಸಾರ್ವಜನಿಕ ವಿತರಣೆಗೆ ಮೀಸಲಾಗಿದ್ದ ಟನ್ನುಗಟ್ಟಲೆ ಆಹಾರ ಪದಾರ್ಥಗಳನ್ನು ಲೂಟಿ ಹೊಡೆದು ಜೇಬು ತುಂಬಿಸಿಕೊಂಡಿದ್ದ ಅಧಿಕಾರಿಗಳು ದಾಖಲೆ ಸಹಿತ ಸಿಕ್ಕಿಬಿದ್ದರೂ ಶಿಕ್ಷೆಯಾಗದೆ ತಪ್ಪಿಸಿಕೊಂಡುದಲ್ಲದೇ ಮುಂದೆ ಹೆಚ್ಚಿನ ಬಡ್ತಿಗಳನ್ನೂ ಪಡೆದ ಪ್ರಕರಣದ ಕುರಿತು ನೋಡೋಣ.
     ಎರಡು ದಶಕಗಳ ಹಿಂದೆ ಬಿಜಾಪುರ ಜಿಲ್ಲೆಯಲ್ಲಿ ಆಹಾರ ಇಲಾಖೆಯ ಉಪನಿರ್ದೇಶಕರಾಗಿದ್ದವರೊಬ್ಬರು ಮಾಡಿದ ಅವ್ಯವಹಾರದ ಪ್ರಸಂಗವಿದು. ಪ್ರತಿ ತಿಂಗಳೂ ೩೦೦ ನ್ಯಾಯಬೆಲೆ ಅಂಗಡಿಗಳಿಗೆ ಪಡಿತರ ಸಾಮಗ್ರಿಗಳನ್ನು ಬಿಡುಗಡೆ ಮಾಡುವಾಗ ಆಯ್ಕೆ ಮಾಡಿದ ೫೦ ಅಂಗಡಿಗಳಿಗೆ ಅಕ್ಕಿ ಮತ್ತು ಬೇರೆ ೫೦ ಅಂಗಡಿಗಳಿಗೆ ಗೋಧಿಯನ್ನು ಬಿಡುಗಡೆ ಮಾಡುತ್ತಿರಲಿಲ್ಲ. ಅದರ ಮುಂದಿನ ತಿಂಗಳಿನಲ್ಲಿ ಹಿಂದಿನ ತಿಂಗಳಲ್ಲಿ ಬಿಡುಗಡೆ ಮಾಡದಿದ್ದ ಅಂಗಡಿಗಳಿಗೆ ದಾಸ್ತಾನು ಬಿಡುಗಡೆ ಮಾಡುತ್ತಿದ್ದರು ಹಾಗೂ ಇನ್ನು ಬೇರೆ ಬೇರೆ ತಲಾ ೫೦ ಅಂಗಡಿಗಳಿಗೆ ಅಕ್ಕಿ, ಗೋಧಿಯನ್ನು ಹಂಚಿಕೆ ಮಾಡುತ್ತಿರಲಿಲ್ಲ. ಹೀಗೆ ಇದನ್ನು ರೊಟೇಶನ್ನಿನಂತೆ ಮಾಡುತ್ತಿದ್ದರು. ಪ್ರತಿ ತಿಂಗಳಿನಲ್ಲಿಯೂ ೫೦ ಅಂಗಡಿಗಳಿಗೆ ಬಿಡುಗಡೆ ಮಾಡಬೇಕಾಗಿದ್ದ ಪ್ರಮಾಣದ ಅಕ್ಕಿ ಮತ್ತು ೫೦ ಅಂಗಡಿಗಳಿಗೆ ಹೋಗಬೇಕಾಗಿದ್ದ ಗೋಧಿ ಮೂಟೆಗಳು ಸೋಲಾಪುರದ ದಾರಿ ಹಿಡಿಯುತ್ತಿದ್ದವು. ಅಲ್ಲಿ ಅದನ್ನು ಹಿಟ್ಟು, ರವೆಗಳಾಗಿ ಪರಿವರ್ತಿಸಿ ಮುಕ್ತ ಮಾರುಕಟ್ಟೆಯಲ್ಲಿ ಮಾರಲಾಗುತ್ತಿತ್ತು. ಪ್ರತಿ ತಿಂಗಳೂ ಆ ನೂರು ಅಂಗಡಿಗಳ ವ್ಯಾಪ್ತಿಯ ಗ್ರಾಹಕರಿಗೆ ಅಕ್ಕಿ, ಗೋಧಿಗಳು ಸಿಗುತ್ತಿರಲಿಲ್ಲ. ದಾಸ್ತಾನು ಕಡಿಮೆ ಬಂದಿದ್ದು, ಮುಂದಿನ ತಿಂಗಳು ಹಂಚಿಕೆಯಾಗುತ್ತದೆಂದು ಗ್ರಾಹಕರಿಗೆ ತಿಳಿಸಲಾಗುತ್ತಿತ್ತು. ಹೀಗೆ ಬಹಳ ಕಾಲದಿಂದ ನಡೆಯುತ್ತಿದ್ದ ವ್ಯವಹಾರದಿಂದ ಆ ಉಪನಿರ್ದೇಶಕರು ಆರ್ಥಿಕವಾಗಿ ಭಾರೀಕುಳ ಆದರು. 
     ಒಮ್ಮೆ ಬಿಜಾಪುರದ ಜಿಲ್ಲಾಧಿಕಾರಿಯವರ ಕೈಗೆ ಹೀಗೆ ಆಹಾರ ಪದಾರ್ಥದ ಕಳ್ಳಸಾಗಣೆಯಾಗುತ್ತಿದ್ದಾಗಲೇ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದರು. [ಪ್ರಾಮಾಣಿಕ ಜಿಲ್ಲಾಧಿಕಾರಿಯಾಗಿದ್ದ ಅವರು ಈಗ ಸರ್ಕಾರದ ಉನ್ನತ ಅಧಿಕಾರಿಗಳಲ್ಲಿ ಒಬ್ಬರಾಗಿದ್ದಾರೆ]. ಜಿಲ್ಲಾಧಿಕಾರಿಯವರು ಸಹಾಯಕ ಆಯುಕ್ತರೊಂದಿಗೆ ಸ್ವತಃ ಸಗಟು ಗೋಡೌನಿಗೆ ಹೋಗಿ ಸತತವಾಗಿ ಐದು ದಿನಗಳ ಕಾಲ ಅ"ರತ ತಪಾಸಣೆ ಮಾಡಿದರು. ತಪಾಸಣೆಯ ನಂತರದಲ್ಲಿ ದಾಸ್ತಾನಿನಲ್ಲಿ ವ್ಯತ್ಯಾಸ ಇರುವುದು, ಅವ್ಯವಹಾರ ನಡೆದಿರುವುದು ಧೃಢಪಟ್ಟಿತು. ಉಪನಿರ್ದೇಶಕರು ಜಿಲ್ಲಾಮಟ್ಟದ ಅಧಿಕಾರಿಯಾಗಿದ್ದರಿಂದ ಅವರ ವಿರುದ್ಧ ಸರ್ಕಾರದ ಮಟ್ಟದಲ್ಲೇ ಕ್ರಮ ಜರುಗಿಸಬೇಕಿದ್ದಿತು. ಬೇರೆ ಜಿಲ್ಲಾಧಿಕಾರಿಯವರಾಗಿದ್ದರೆ ಪ್ರಕರಣ ಮುಚ್ಚಿಹೋಗುತ್ತಿತ್ತೋ ಏನೋ! ಆದರೆ, ಆ ಜಿಲ್ಲಾಧಿಕಾರಿಯವರು ಸ್ವತಃ ಮುತುವರ್ಜಿ ವಹಿಸಿ ಯಾವುದೇ ಮಾಹಿತಿಗಳನ್ನೂ ಬಿಡದಂತೆ ದಾಖಲೆಗಳ ಸಹಿತ ವರದಿ ಸಿದ್ಧಪಡಿಸಿಕೊಂಡು ಗೃಹ ಇಲಾಖೆಯ ಕಮಿಷನರರನ್ನು ಮುಖತಃ ಭೇಟಿ ಮಾಡಿ ಪ್ರಕರಣದ ಗಂಭೀರತೆಯನ್ನು ವಿವರಿಸಿದರು. ಆ ಸಂದರ್ಭದಲ್ಲಿ ಆಹಾರ ಮಂತ್ರಿಯಾಗಿದ್ದ ಶ್ರೀಮತಿ ಮನೋರಮಾ ಮಧ್ವರಾಜರನ್ನೂ ಅವರ ಮನೆಗೇ ಹೋಗಿ ಭೇಟಿ ಮಾಡಿ ಅವ್ಯವಹಾರದ ವಿಷಯ ಗಮನಕ್ಕೆ ತಂದರು. ಸಾರ್ವಜನಿಕರಿಗೆ ಸೇರಬೇಕಾಗಿದ್ದ ಆಹಾರದ ಲೂಟಿ ಮಾಡಿರುವವರಿಗೆ ತಕ್ಕ ಶಿಕ್ಷೆಯಾಗಬೇಕೆಂದು ಕೋರಿಕೊಂಡರು. ಆಹಾರ ಮಂತ್ರಿಗಳೂ ಒಪ್ಪಿ, ಸಿ.ಒ.ಡಿ. ತನಿಖೆಗೂ ಆದೇಶ ಮಾಡಿದರು. ಫಲಶೃತಿಯಾಗಿ ಉಪನಿರ್ದೇಶಕರು ಮತ್ತು ಫುಡ್ ಇನ್ಸ್‌ಪೆಕ್ಟರರ ಬಂಧನವಾಯಿತು. ಎರಡು ದಿನಗಳ ಕಾಲ ಅವರು ಜೈಲಿನಲ್ಲಿದ್ದರು. ನಂತರ ಜಾಮೀನಿನ ಮೇಲೆ ಹೊರಬಂದರು. 
     ೧೯೯೪ರಲ್ಲಿ ನಡೆದ ಈ ಪ್ರಕರಣದಲ್ಲಿ ೨೦೦೮ರವರೆವಿಗೂ ಸುಮಾರು ೧೪ ವರ್ಷಗಳ ಕಾಲ ದೀರ್ಘ ಅವಧಿಯವರೆಗೆ ವಿಚಾರಣೆ ನಡೆಯಿತು. ಸಿ.ಒ.ಡಿ. ತನಿಖೆಯಲ್ಲಿ ಉಪನಿರ್ದೇಶಕರು ಮಾಡಿದ ಅಪರಾಧ ರುಜುವಾತಾಗಿತ್ತು. ಸಿ.ಒ.ಡಿ.ಯವರು ತನಿಖೆ ನಡೆಸಬಹುದು, ತಪ್ಪಿತಸ್ಥರೆಂದು ತೀರ್ಮಾನಿಸಬಹುದು, ಆದರೆ ಅವರಿಗೆ ಶಿಕ್ಷೆ ಕೊಡಲು ಬರುವುದಿಲ್ಲ. ಕೇವಲ ಸರ್ಕಾರಕ್ಕೆ ವರದಿ ಸಲ್ಲಿಸಬಹುದಷ್ಟೆ. ಆ ಕೆಲಸವನ್ನು ಅವರು ಸರಿಯಾಗಿ ಮಾಡಿದರು. ನಂತರದಲ್ಲಿ ಸರ್ಕಾರದ ಕಡೆಯಿಂದ ಇಲಾಖಾ ವಿಚಾರಣೆ ನಡೆತು. ಅಧಿಕಾರಿಗಳು ಜಿಲ್ಲಾಧಿಕಾರಿಯವರನ್ನು (ಅಷ್ಟು ಹೊತ್ತಿಗೆ ಅವರು ಬಿಜಾಪುರದಿಂದ ಬೇರೆಡೆಗೆ ವರ್ಗವಾಗಿದ್ದರು) 'ಏನೋ ತಪ್ಪು ಮಾಡಿಬಿಟ್ಟಿದ್ದೇವೆ. ದಯವಿಟ್ಟು ನಮ್ಮನ್ನು ಕ್ಷಮಿಸಿ ಬಿಟ್ಟುಬಿಡಿ, ನಮ್ಮ ವಿರುದ್ಧ ಸಾಕ್ಷಿ ಹೇಳಬೇಡಿ' ಎಂದು ಪರಿಪರಿಯಾಗಿ ಬೇಡಿಕೊಂಡಿದ್ದರು. ಆದರೆ ಆ ಜಿಲ್ಲಾಧಿಕಾರಿಯವರು ಕರ್ತವ್ಯದ ದೃಷ್ಟಿಯಿಂದ ಮಾಡಬೇಕಾದ ಎಲ್ಲವನ್ನೂ ಮಾಡಿದರು. ಸಿ.ಒ.ಡಿ.ಯವರ ಮುಂದೆಯೂ, ಇಲಾಖಾ ವಿಚಾರಣಾಧಿಕಾರಿಯವರ ಮುಂದೆಯೂ ನೈಜ ಸಾಕ್ಷ್ಯ ಹೇಳಿದರು. ನಂತರದಲ್ಲಿ ಏನು ಆಯಿತೋ, ಹೇಗೆ ಆಯಿತೋ ಗೊತ್ತಿಲ್ಲ, ಅಧಿಕಾರಿಗಳು ನಿರ್ದೋಷಿಗಳಾಗಿ ಹೊರಬಂದರು! ಕಾನೂನುಗಳನ್ನು ಹೇಗೆ ತಿರುಚಬಹುದೆಂಬುದು ಮತ್ತು ಹೇಗೆ ಸುಲಭವಾಗಿ ಪಾರಾಗಬಹುದೆಂಬುದು ಜಾಹೀರಾಯಿತು. ವಿಶೇಷವೆಂದರೆ ಈ ಪ್ರಕರಣದಲ್ಲಿ ರಾಜಕಾರಣಿಗಳ ಹಸ್ತಕ್ಷೇಪವಿರಲಿಲ್ಲ. ಈ ಪ್ರಕರಣದಲ್ಲಿ ಸಾರ್ವಜನಿಕರಿಗೆ ಸೇರಬೇಕಾಗಿದ್ದ ಟನ್ನುಗಟ್ಟಲೆ ಅಕ್ಕಿ, ಗೋಧಿಗಳು ಕಾಳಸಂತೆಯ ಪಾಲಾಗಿದ್ದು ಸತ್ಯ, ಸಂಬಂಧಿತ ಅಧಿಕಾರಿಗಳು ದುಂಡಗಾಗಿದ್ದು ಸತ್ಯ, ಜಿಲ್ಲಾಧಿಕಾರಿಯವರು ಪ್ರಾಮಾಣಿಕವಾಗಿ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕೆಂದು ಕ್ರಮ ಜರುಗಿಸಿದ್ದು ಸತ್ಯ, ಸಿ.ಒ.ಡಿ. ತನಿಖೆಯಲ್ಲಿ ಆರೋಪ ರುಜುವಾತಾಗಿದ್ದೂ ಸತ್ಯ, ಕೊನೆಗೆ ಇಲಾಖಾ ವಿಚಾರಣೆಯಲ್ಲಿ ಮಾತ್ರ ಸಂಬಂಧಿಸಿದವರು ನಿರ್ದೋಷಿಗಳೆಂದು ತೀರ್ಮಾನವಾಗಿ, ಅವರುಗಳು ಗೆಲುವಿನ ನಗೆ ಬೀರಿ, ಬರಬೇಕಾಗಿದ್ದ ಬಾಕಿ ಸಂಬಳ-ಸಾರಿಗೆಗಳನ್ನು ಪಡೆದುದಲ್ಲದೆ ಬಡ್ತಿಗಳನ್ನೂ ಪಡೆದು ಉನ್ನತ ಹುದ್ದೆಗಳಿಗೆ ಏರಿದ್ದೂ ಸತ್ಯವೇ!! ಇಲಾಖಾ ವಿಚಾರಣೆ ಸರಿಯಾಗಿ ನಡೆದಿದ್ದರೆ ಹೀಗಾಗುತ್ತಿತ್ತೆ? ಪುನರ್ವಿಚಾರಣೆಗೆ ಅವಕಾಶವಿತ್ತಲ್ಲವೆ? ಜನಪರ ಕಾಳಜಿಯ ಅಧಿಕಾರಿಗಳು ಮತ್ತು ಜಾಗೃತ ಜನರು ಮಾತ್ರ ಪರಿಸ್ಥಿತಿ ಸುಧಾರಿಸಬಲ್ಲರು.
-ಕ.ವೆಂ.ನಾಗರಾಜ್.
**************
ದಿನಾಂಕ 9-04-2014ರ 'ಜನಹಿತ' ಪತ್ರಿಕೆಯಲ್ಲಿ ಪ್ರಕಟಿತ.

ಹಿಂದಿನ ಲೇಖನಕ್ಕೆ ಲಿಂಕ್: ತಿಂದೂ ಹೋದ, ಕೊಂಡೂ ಹೋದ

ಗುರುವಾರ, ಏಪ್ರಿಲ್ 10, 2014

ನಿಂದಕರಿರಬೇಕು!

ನಿಂದಕರ ವಂದಿಸುವೆ ನಡೆಯ ತೋರಿಹರು
ಮನೆಮುರುಕರಿಂ ಮನವು ಮಟ್ಟವಾಗಿಹುದು |
ಕುಹಕಿಗಳ ಹರಸುವೆ ಮತ್ತೆ ಪೀಡಕರ
ಜರೆವವರು ಗುರುವಾಗರೇ ಮೂಢ ||
     ದೂರುವವರು, ದೂಷಿಸುವವರು ಇರುವ ಕಾರಣದಿಂದಲೇ ಜನರು ತಮ್ಮ ನಡವಳಿಕೆಯ ಬಗ್ಗೆ ಎಚ್ಚರದಿಂದಿರುತ್ತಾರೆ. ಪಕ್ಷಿಗಳಿಗೆ ಅಪಾಯವಿರದಿರುತ್ತಿದ್ದರೆ ಅವು ನಿರಾತಂಕವಾಗಿ ಓಡಾಡಿಕೊಂಡಿದ್ದು ಹಾರುವುದನ್ನೇ ಮರೆತುಬಿಡುತ್ತಿದ್ದವಲ್ಲವೇ? ಅದೇ ರೀತಿ ನಿಂದಕರಿಂದಾಗಿ ಜನರು ತಪ್ಪು ಮಾಡಬಯಸುವುದಿಲ್ಲ. ದೂರುವುದು, ದೂಷಿಸುವುದು ಒಂದು ಹಂತದವರೆಗೆ ಒಳ್ಳೆಯದು. ತಪ್ಪನ್ನು ಸರಿಯಾಗಿಸುವ ದೃಷ್ಟಿಯಿಂದ ಮಾಡುವ ನಿಂದನೆಗಳು ಒಳ್ಳೆಯದು. ಆದರೆ ನಿಂದನೆ, ದೂಷಣೆಗಳನ್ನೇ ಹವ್ಯಾಸವಾಗಿರಿಸಿಕೊಂಡ, ದೂಷಣೆಯಲ್ಲೇ ಮತ್ತು ಅದರಿಂದ ಇತರರಿಗೆ ಆಗುವ ಹಿಂಸೆಯಿಂದಲೇ ಸಂತೋಷ ಪಡುವ ಮನೋಭಾವ ಹೊಂದಿದ ಕೆಲವು ವಿಕ್ಷಿಪ್ತ ಮನಸ್ಕರಿಂದ ಸಮಸ್ಯೆಗೆ ಪರಿಹಾರ ಸಿಗುವುದಿರಲಿ, ಸಮಸ್ಯೆ ಇನ್ನೂ ಜಟಿಲವಾಗುತ್ತದೆ. ತಪ್ಪು ಕಂಡು ಹಿಡಿಯುವುದು ಸುಲಭ; ದೂರುವುದೂ ಸುಲಭ; ಆದರೆ ಅದಕ್ಕೆ ಪರಿಹಾರದ ದಾರಿಯನ್ನು ಸೂಚಿಸುವುದು ಮತ್ತು ಅದರಂತೆ ನಡೆಯುವುದು ಉತ್ತಮವಾದ ನಡವಳಿಕೆಯೆನಿಸುತ್ತದೆ. ಮನಸ್ಸು ಶಾಂತ ಸ್ಥಿತಿಯಲ್ಲಿ ಇರಬೇಕೆಂದರೆ ಮೊದಲು ಇತರರಲ್ಲಿ ತಪ್ಪು ಕಂಡು ಹಿಡಿಯಲು ಹೋಗದೆ, ತಮ್ಮ ತಪ್ಪುಗಳನ್ನು ಗುರುತಿಸಿಕೊಂಡು ತಿದ್ದಿ ನಡೆಯುವುದನ್ನು ಅಭ್ಯಸಿಸಬೇಕು. ಇತರರ ತಪ್ಪುಗಳ ಬಗ್ಗೆಯೇ ಚಿಂತಿಸುವುದು ಮತ್ತು ಎತ್ತಿ ಆಡುವುದರಿಂದ ಹಾಳಾಗುವುದು ಅವರ ನೆಮ್ಮದಿಯೇ. ನೆಮ್ಮದಿ ಹಾಳಾಗುವುದೆಂದರೆ ನಾಶದ ಹಾದಿ ಹಿಡಿದಂತೆಯೇ ಸರಿ. 
ಅದರದು ಮನ ಕುಹಕಿಗಳ ಕುಟುಕಿಗೆ
ಬೆದರದು ತನು ಪಾತಕಿಗಳ ಧಮಕಿಗೆ |
ಮುದುಡುವುದು ಮನವು ಕದಡುವುದು
ಪ್ರಿಯರ ಹೀನೈಕೆಗೆ ಹೀಗೇಕೋ ಮೂಢ ||
     ಸಂಸ್ಕೃತದ ಒಬ್ಬ ಹೆಸರಾಂತ ಕವಿ ಭಾರವಿಯ ಕಥೆ ಇಲ್ಲಿ ಪ್ರಸ್ತುತವೆನಿಸುತ್ತದೆ. ಬುದ್ಧಿವಂತ ಮತ್ತು ಉತ್ತಮ ಕವಿಯಾಗಿದ್ದ ಭಾರವಿಯ ಬಗ್ಗೆ ಸುತ್ತಮುತ್ತಲಿನ ಜನರು ಮೆಚ್ಚುಗೆಯ ಮಾತನಾಡುತ್ತಿದ್ದರು. ಆದರೆ ಭಾರವಿಯ ತಂದೆ ಮಾತ್ರ ಅವನನ್ನು 'ನೀನೇನು ಮಹಾ ಮೇಧಾವಿ ಎಂದು ಮೂದಲಿಸುತ್ತಿದ್ದರು. ತಂದೆಯ ಮೆಚ್ಚುಗೆ ಗಳಿಸಲು ಅವನು ಮಾಡಿದ ಪ್ರಯತ್ನಗಳು ಕೈಗೂಡದಿದ್ದಾಗ, ತನ್ನ ವಿದ್ಯೆಯನ್ನು ಎಲ್ಲರೂ ಗೌರವಿಸುತ್ತಿದ್ದರೂ ತನ್ನ ತಂದೆ ಮಾತ್ರ ಹೀಯಾಳಿಸುತ್ತಿದ್ದರಿಂದ ಮನನೊಂದ ಭಾರವಿಗೆ ತಂದೆಯ ಮೇಲೆ ದ್ವೇಷಭಾವನೆ ಒಡಮೂಡಿತು. ಅದು ಎಷ್ಟರ ಮಟ್ಟಿಗೆ ಹೋಗಿತ್ತೆಂದರೆ, ಒಂದು ದಿನದ ಮನೆಯ ಅಟ್ಟದ ಮೇಲೆ ಹಿಟ್ಟು ಬೀಸುವ ಕಲ್ಲನ್ನು ಇಟ್ಟುಕೊಂಡು ಅಡಗಿ ಕುಳಿತಿದ್ದ ಭಾರವಿ, ರಾತ್ರಿ ತಂದೆ ಮಲಗಿದ ಸಂದರ್ಭದಲ್ಲಿ ಆತನ ತಲೆಯ ಮೇಲೆ ಅದನ್ನು ಎತ್ತಿ ಹಾಕಿ ಕೊಲ್ಲಲು ಹೊಂಚು ಹಾಕಿದ್ದ. ಅಂದು ರಾತ್ರಿ ಊಟದ ನಂತರ ಮಲಗುವ ವೇಳೆಯಲ್ಲಿ ಭಾರವಿಯ ತಾಯಿ, ತನ್ನ ಗಂಡನೊಂದಿಗೆ ಮಾತನಾಡುತ್ತಾ, "ನೀವು ಅದೇಕೆ ಭಾರವಿಯನ್ನು ಸದಾ ಮೂದಲಿಸುತ್ತಿರುತ್ತೀರಿ? ಅವನು ನಿಜಕ್ಕೂ ಎಷ್ಟೊಂದು ಜಾಣ. ಎಲ್ಲರೂ ಅವನನ್ನು ಹೊಗಳುವಾಗ ನನಗಂತೂ ಬಹಳ ಸಂತೋಷವಾಗುತ್ತಿರುತ್ತದೆ" ಎಂದಳು. ಅದಕ್ಕೆ ಭಾರವಿಯ ತಂದೆ, "ನನಗೇನು ಸಂತೋಷವಾಗುವುದಿಲ್ಲವೆಂದು ತಿಳಿದೆಯಾ? ಅವನಂತಹ ಮಗನನ್ನು ಪಡೆದಿದ್ದಕ್ಕೆ ನನಗೆ ಹೆಮ್ಮೆ ಅನಿಸುತ್ತದೆ. ಅವನನ್ನು ಹೊಗಳಿದರೆ, ಅವನ ಸಾಧನೆ ಮೊಟಕಾಗುತ್ತದೆ. ಅವನು ಇನ್ನೂ ಹೆಚ್ಚು ಹೆಚ್ಚು ಬೆಳೆದು ಪ್ರಖ್ಯಾತಿ ಹೊಂದಬೇಕು. ಅದಕ್ಕೋಸ್ಕರ ಹಾಗೆ ಮಾಡುತ್ತಿದ್ದೆ. ಹೋಗಲಿ ಬಿಡು, ನಿನಗೆ ನೋವಾಗುವುದಾದರೆ ಇನ್ನು ಮುಂದೆ ಸುಮ್ಮನಿದ್ದುಬಿಡುತ್ತೇನೆ" ಎಂದನಂತೆ. ಆ ಮಾತುಕತೆಯನ್ನು ಭಾರವಿ ಕೇಳಿಸಿಕೊಂಡಿರದಿದ್ದರೆ ತಂದೆಯನ್ನು ಕೊಂದುಬಿಡುತ್ತಿದ್ದನೇನೋ! ಪಶ್ಚಾತ್ತಾಪದ ಭಾರದಿಂದ ಕುಸಿದು ಅಟ್ಟದಿಂದ ಕೆಳಗಿಳಿದು ಬಂದ ಭಾರವಿ ತಂದೆಯ ಕಾಲು ಹಿಡಿದು ಕಣ್ಣೀರುಗರೆಯುತ್ತಾ ಕ್ಷಮೆ ಕೇಳಿದನಂತೆ. ನಂತರದಲ್ಲಿ ಭಾರವಿಯ ಅಹಂ ಕ್ಷೀಣಿಸಿ ನಿಜವಾದ ಪಂಡಿತನಾಗಿ ಬೆಳೆದ ಎನ್ನುತ್ತಾರೆ. ಇಲ್ಲಿ ಮಗ ಮುಂದಕ್ಕೆ ಬರಲೆಂಬ ಕಾರಣದಿಂದ ತಂದೆ ಆತನನ್ನು ಮೂದಲಿಸುತ್ತಿದ್ದ ಎಂಬುದನ್ನು ಗಮನಿಸಬೇಕು. ಮಕ್ಕಳ ಪ್ರಗತಿಗಾಗಿ ಇಂತಹ ಬ್ರೇಕುಗಳನ್ನು ಪೋಷಕರು ಜಾಣತನದಿಂದ ಬಳಸಬೇಕು. ಏಕೆಂದರೆ ಸೂಕ್ಷ್ಮ ಮನಸ್ಸಿನ ಇಂದಿನ ಮಕ್ಕಳು ಅನಾಹುತಗಳನ್ನು ಮಾಡಿಕೊಂಡಿರುವ ಸುದ್ದಿಗಳನ್ನು ಕಾಣುತ್ತಿರುತ್ತೇವೆ, ಕೇಳುತ್ತಿರುತ್ತೇವೆ.
     ಅಷ್ಟಕ್ಕೂ ಒಬ್ಬರನ್ನೊಬ್ಬರು ದೂರುವುದಾದರೂ ಏಕೆ? ಈ ಪ್ರಪಂಚದಲ್ಲಿ ಒಬ್ಬರು ಇದ್ದಂತೆ ಇನ್ನೊಬ್ಬರು ಇರುವುದಿಲ್ಲ. ಒಬ್ಬೊಬ್ಬರ ಸ್ವಭಾವ ಒಂದೊಂದು ತರಹ. ಎಲ್ಲರೂ ತಮ್ಮಂತೆಯೇ ಇರಬೇಕು, ತಮ್ಮಂತೆಯೇ ವಿಚಾರ ಹೊಂದಿರಬೇಕು, ತಮ್ಮ ವಿಚಾರವನ್ನು ಎಲ್ಲರೂ ಒಪ್ಪಬೇಕು ಎಂಬ ಅಂತರ್ಗತ ಅನಿಸಿಕೆಯೇ ದೂರುವುದಕ್ಕೆ ಮೂಲ. ಒಂದೇ ಕುಟುಂಬದ ಸದಸ್ಯರುಗಳೂ, ಒಂದೇ ಸಂಘ-ಸಂಸ್ಥೆಯ ಸದಸ್ಯರುಗಳೂ, ಆತ್ಮೀಯರೆಂದು ಭಾವಿಸುವ ಸ್ನೇಹಿತರ ವಲಯದಲ್ಲೂ ಪರಸ್ಪರ ಹೊಂದಾಣಿಕೆ ಆಗದ ಅನೇಕ ಸಂಗತಿಗಳು ಇರುತ್ತವೆ. ಆದರೂ ಇವರುಗಳು ಹೊಂದಿಕೊಂಡು ಹೋಗುವುದಕ್ಕೆ ಹೆಚ್ಚಿನ ಸಂಗತಿಗಳು ಪರಸ್ಪರರಿಗೆ ಒಪ್ಪಿಗೆಯಾಗುವುದೇ ಕಾರಣ. ನಾವು ಇತರರೊಂದಿಗೆ ಹೊಂದಿಕೊಂಡುಹೋಗುತ್ತೇವೆಂದರೆ ಅವರ ನ್ಯೂನತೆಗಳನ್ನು ನಾವು ಸಹಿಸಿಕೊಳ್ಳುತ್ತೇವೆ ಎಂದು ಅರ್ಥ. ಹಾಗೆಯೇ, ಇತರರು ನಮ್ಮೊಂದಿಗೆ ವಿಶ್ವಾಸವಾಗಿರುತ್ತಾರೆಂದರೆ ಅವರು ನಮ್ಮ ತಪ್ಪುಗಳನ್ನು ಸಹಿಸಿಕೊಳ್ಳುತ್ತಾರೆ ಎಂದು ತಿಳಿಯಬೇಕು.
     ಕಾಂಗ್ರೆಸ್ ಪಕ್ಷದಲ್ಲಿ ಮದ್ಯಪಾನ ನಿಷೇಧ ಮಾಡಬೇಕೆಂಬ ಮನಸ್ಸಿನವರೂ ಇದ್ದಾರೆ; ನಿರುದ್ಯೋಗಿಗಳಿಗೆ ಮದ್ಯದಂಗಡಿಗಳನ್ನು ತೆರೆಯಲು ಲೈಸೆನ್ಸ್ ಕೊಡಬೇಕೆನ್ನುವವರೂ ಇರುತ್ತಾರೆ. ಇದನ್ನು ಕಾಂಗ್ರೆಸ್ಸಿನ ತಪ್ಪು ಎನ್ನಲಾಗುತ್ತದೆಯೇ? ಭಾರತದ ಸ್ವಾತಂತ್ರ್ಯಕ್ಕಾಗಿ ಪ್ರಾಣವನ್ನೇ ಪಣಕ್ಕಿಟ್ಟು ಹೋರಾಡಿದ, ಅಂಡಮಾನಿನ ನರಕ ಸದೃಶ ಕಾರಾಗೃಹದಲ್ಲಿ ಕಠಿಣ ಶಿಕ್ಷೆ ಅನುಭವಿಸಿ ಅರೆಜೀವವಾದ ವೀರ ಸಾವರ್ಕರರ ಕುರಿತು ಅಂಡಮಾನಿನ ಜೈಲಿನ ಕಂಬದಲ್ಲಿ ಇದ್ದ ಲೇಖವನ್ನು ಕಾಂಗ್ರೆಸ್ ಮಂತ್ರಿ ಮಣಿಶಂಕರ ಅಯ್ಯರರು ಅಳಿಸಿಹಾಕಿಸುತ್ತಾರೆ. ಸ್ವಹಿತಾಸಕ್ತಿಯಿಂದ ಕೆಲವು ಕಾಂಗ್ರೆಸ್ಸಿಗರು ಮಾಡುವ ಇಂತಹ ಕುಕೃತ್ಯಗಳಿಗೆ ಕಾಂಗ್ರೆಸ್ ಪಕ್ಷವನ್ನು ದೂಷಿಸಬೇಕೆ? ಹಿಂದೂ ಮಹಾಸಭಾದ ನಾಥುರಾಮ ಗೋಡ್ಸೆ ಗಾಂಧಿ ಹತ್ಯೆ ಮಾಡಿದ್ದಕ್ಕಾಗಿ ಆರೆಸ್ಸೆಸ್ಸನ್ನು ದೂಷಿಸುವುದು ಎಷ್ಟರ ಮಟ್ಟಿಗೆ ಸರಿ? ದೂಷಿಸುವಾಗ ಪೂರ್ವಾಗ್ರಹ ಪೀಡಿತರಾಗುತ್ತಾರೆಂಬುದಕ್ಕೆ ಇವನ್ನು ಉದಾಹರಿಸಿದ್ದಷ್ಟೆ. ಒಬ್ಬ ವ್ಯಕ್ತಿ ಯಾವುದಾದರೂ ಒಂದು ಸಂಘಕ್ಕೋ, ಸಂಸ್ಥೆಗೋ, ಒಂದು ವಿಚಾರಕ್ಕೋ ಸಹಮತಿ ಹೊಂದಿದ್ದಾನೆಂದಾಕ್ಷಣ ಅವನು ಮಾಡುವ ಎಲ್ಲಾ ಕೆಲಸಗಳಿಗೂ ಆ ಸಂಘ/ಸಂಸ್ಥೆ/ವಿಚಾರವನ್ನು ಹೊಣೆಯಾಗಿಸಬಾರದಲ್ಲವೇ? ಸರ್ಕಾರದ ಹಿರಿಯ ಅಧಿಕಾರಿಯಾಗಿರುವ ಶ್ರೀ ಮದನಗೋಪಾಲರನ್ನು ಅವರು ರಾಯಚೂರಿನಲ್ಲಿ ಜಿಲ್ಲಾಧಿಕಾರಿಯಾಗಿದ್ದಾಗ ನಕ್ಸಲೈಟ್ ಎಂಬ ಹಣೆಪಟ್ಟಿ ಹಚ್ಚಿ ಅಮಾನತ್ತು ಮಾಡಿದ್ದರು. ಅಮಾನತ್ತಿಗೆ ಮೂರು ಕಾರಣಗಳನ್ನು ಕೊಟ್ಟಿದ್ದರು: ಒಂದು, ಅವರು ಕೆಲಸಗಳನ್ನು ನಿರ್ಲಕ್ಷಿಸಿ ಹಳ್ಳಿಗಳಲ್ಲಿ ಪರಿಶಿಷ್ಟ-ಜಾತಿ/ಪಂಗಡಗಳ ಕಾಲೋನಿಗಳಲ್ಲಿ ಪ್ರವಾಸ ಮಾಡುತ್ತಾರೆಂದು, ಎರಡು, ಭ್ರಷ್ಟಾಚಾರದ ವಿರುದ್ಧ ಮಾತನಾಡಿ ಸರ್ಕಾರವನ್ನು ಟೀಕಿಸುತ್ತಾರೆಂದು, ಮತ್ತು ಮೂರು, ಪರ್ಯಾಯ ಮೌಲ್ಯಗಳ ಬಗ್ಗೆ ಮಾತನಾಡಿ ಜನರನ್ನು ಬೇರೆ ನಾಯಕತ್ವದ ಬಗ್ಗೆ ಪ್ರಚೋದಿಸುತ್ತಾರೆಂದು. ಅವರು ಭಾರತ ಸರ್ಕಾರಕ್ಕೆ ಮೇಲುಮನವಿ ಮಾಡಿಕೊಂಡರು. ಸರ್ಕಾರ ಕೊನೆಗೆ ಅಮಾನತ್ತು ರದ್ದು ಪಡಿಸಿತು. ಇದೇ ಅಧಿಕಾರಿಯನ್ನು ಅವರು ಹಿಂದೆ ನಂಜನಗೂಡಿನಲ್ಲಿ ಉಪವಿಭಾಗಾಧಿಕಾರಿಯಾಗಿದ್ದಾಗ ಅಕ್ರಮವಾಗಿ ಕೇರಳದ ಮೂಲಕ ಗೋವುಗಳನ್ನು ಸಾಗಿಸುತ್ತಿದ್ದ ವಾಹನವನ್ನು ತಡೆದು ಕೇಸು ದಾಖಲಿಸಿದಾಗ ಆರೆಸ್ಸೆಸ್ಸಿನವರೆಂದು ಪ್ರಚಾರ ಮಾಡಿದ್ದರು. 
ಮರುಭೂಮಿಯಲೊಂದು ತರುವ ಕಾಣಲಹುದೆ?
ಖೂಳತನದ ಖಳನೊಳಿತು ಮಾಡುವನೆ? |
ಕೊಂಕುಸುರುವ ಡೊಂಕ ಮನವೊಡೆವ ಕೆಡುಕನ
ಪುಣ್ಣನರಸುವ ನೊಣನೆಂದೆಣಿಸು ಮೂಢ ||
     ಕೆಲವರು ಕೆಲವೊಂದು ವಿಷಯಗಳಿಗೆ ಸಂಬಂಧಿಸಿದಂತೆ ಬದಲಾಗದ ಅಭಿಪ್ರಾಯಗಳನ್ನು ಹೊಂದಿರುತ್ತಾರೆ. ಅಂತಹವರು ಮುಂದೊಮ್ಮೆ ತಮ್ಮ ಅಭಿಪ್ರಾಯ ತಪ್ಪೆಂದು ಕಂಡಾಗಲೂ ತಿದ್ದಿಕೊಳ್ಳಲು ಮನಸ್ಸು ಮಾಡುವುದಿಲ್ಲ. ತಾವು ತಿಳಿದಿರುವುದೇ ಸತ್ಯ, ಇತರರು ಹೇಳುವುದೆಲ್ಲಾ ಸುಳ್ಳು, ತಪ್ಪು ಎಂದೇ ವಾದಿಸುತ್ತಾರೆ. ಹಾಗೆ ವಾದಿಸುವಾಗ ಉದ್ವೇಗದಿಂದ ಅನುಚಿತ ಪದಗಳನ್ನೂ ಬಳಸುತ್ತಾರೆ. ಇದು ಹಲವರ ಮನಸ್ಸನ್ನು ನೋಯಿಸುತ್ತದೆ. ಇದಕ್ಕೆ ಮದ್ದಿಲ್ಲ. 'ಕಾಮಾಲೆ ಕಣ್ಣಿನವರಿಗೆ ಲೋಕವೆಲ್ಲಾ ಹಳದಿ' ಎನ್ನುವಂತೆ ಅವರು ಕೆಲವು ವಿಚಾರಗಳಿಗೆ ಸಂಬಂಧಿಸಿದಂತೆ ತಮ್ಮದೇ ಅಭಿಪ್ರಾಯ ಹೊಂದಿದ್ದು, ಇತರರ ವಿಚಾರಗಳನ್ನು ಒಪ್ಪದೇ ದೂಷಿಸುತ್ತಲೇ ಇರುತ್ತಾರೆ. ಪ್ರಪಂಚವನ್ನು ಅದು ಇದ್ದಂತೆಯೇ ನೋಡುವ, ಒಪ್ಪುವ ಮನಸ್ಸು ಇರಬೇಕು. ಮುಕ್ತ ಮನಸ್ಸಿನಿಂದ ಅಭಿಪ್ರಾಯಿಸಬೇಕು. ತಿದ್ದುವ, ತಿದ್ದಿಕೊಳ್ಳುವ  ಕೆಲಸವನ್ನು ಮೊದಲು ನಮ್ಮಿಂದಲೇ ಆರಂಭಿಸಬೇಕು. ಯಾರನ್ನಾದರೂ ದೂಷಿಸಿ, ಹಂಗಿಸಿ ಬದಲಾಯಿಸುತ್ತೇವೆ ಎನ್ನುವುದು ಅಸಾಧ್ಯದ ಮಾತು. ಪ್ರೀತಿಸುವವರ ಮಾತನ್ನು ಎಲ್ಲರೂ ಗೌರವಿಸುತ್ತಾರೆ, ದ್ವೇಷಿಸುವವರ ಮಾತನ್ನು ಯಾರೂ ಕೇಳಲಾರರು. ಬದಲಾವಣೆ ಹೃದಯದಿಂದ ಬರಬೇಕು, ಶುದ್ಧ ಮನಸ್ಸಿನಿಂದ ಬರಬೇಕು. ಶುದ್ಧ ಹೃದಯ, ಮನಸ್ಸುಗಳು ಇರುವವರಿಗೆ ಇತರರು ಅಶುದ್ಧರು ಎಂದು ಅನ್ನಿಸುವುದೇ ಇಲ್ಲ. ನಮ್ಮಲ್ಲೇ ಇಲ್ಲದುದನ್ನು ಇತರರಿಂದ ನಿರೀಕ್ಷಿಸಲಾಗುವುದೇ? 
     ಇನ್ನು ಕೆಲವರು ಇರುತ್ತಾರೆ. ಅವರು ಪ್ರತಿ ವಿಷಯದಲ್ಲೂ ಮೂಗು ತೂರಿಸುವವರು, ಪ್ರತಿ ವಿಷಯದಲ್ಲೂ ಒಂದಲ್ಲಾ ಒಂದು ತಪ್ಪು ಕಂಡು ಹಿಡಿಯುವ ಮನೋಭಾವದವರು. ಇಂತಹವರನ್ನು 'ಮುಖ ಪರಚುವವರು' ಎನ್ನಬಹುದು. ಸಾಮಾನ್ಯವಾಗಿ ತಾವೊಬ್ಬ ಪಂಡಿತ, ಹಿರಿಯ, ಹೆಚ್ಚು ತಿಳಿದವನು ಎಂದುಕೊಂಡಿರುವವರಲ್ಲಿ ಈ ಸ್ವಭಾವ ಕಾಣಬರುತ್ತದೆ. ತಮ್ಮ ಪಾಂಡಿತ್ಯದ ಕುರಿತು ಇತರರ ಗಮನ ಸೆಳೆಯುವುದು ಅವರ ಉದ್ದೇಶವಿರಬಹುದು. ಕೆಲವು ಸಮಯದ ಹಿಂದೆ ಒಂದು ಸಭೆಯಲ್ಲಿ ಹಿರಿಯರೊಬ್ಬರು ಉಪನ್ಯಾಸ ಮಾಡುತ್ತಾ ಒಬ್ಬ ಕವಿಯ ಕವನವನ್ನು ಸಾಂದರ್ಭಿಕವಾಗಿ ಉಲ್ಲೇಖಿಸಿ ಅರ್ಥ ವಿಶ್ಲೇಷಣೆ ಮಾಡುತ್ತಿದ್ದಾಗ, ಎದ್ದು ನಿಂತ ಮಹನೀಯರೊಬ್ಬರು ಆ ಹಿರಿಯರು ಮಾಡಿದ ಅರ್ಥವಿಶ್ಲೇಷಣೆ ತಪ್ಪು, ಅದು ಹಾಗಿರಬೇಕು, ಹೀಗಿರಬೇಕು ಎಂದು ವಾದಿಸತೊಡಗಿದರು. ಸಭಿಕರಿಗೆ ಹಿರಿಯರ ಉಪನ್ಯಾಸ ಮೆಚ್ಚುಗೆಯಾಗಿತ್ತು. ವಾದದಲ್ಲಿ ತೊಡಗಿದ್ದವರ ಬಗ್ಗೆ ಅಸಮಾಧಾನ ಮೂಡಿತ್ತು. ಒಂದು ಸಣ್ಣ ವಿಚಾರವನ್ನು ಎತ್ತಿಕೊಂಡು ರಸಾಭಾಸ ಮಾಡಿದ್ದರಿಂದ ಉಪನ್ಯಾಸಕರಿಗೂ ಬೇಸರವಾಗಿ ಮುಂದೆ ಉಪನ್ಯಾಸ ನೀರಸವಾಗಿ ಮುಗಿದಿತ್ತು. ಈ ವಿಷಯವನ್ನು ಉಪನ್ಯಾಸದ ನಂತರದಲ್ಲಿ ಹಿರಿಯರೊಂದಿಗೆ ಪ್ರತ್ಯೇಕವಾಗಿ ಚರ್ಚಿಸಿದ್ದರೆ ಅವರು ನಿಜಕ್ಕೂ ದೊಡ್ಡವರೆನಿಸುತ್ತಿದ್ದರಲ್ಲವೇ?
     ದೂಷಿಸುವವರನ್ನು ದೂಷಿಸುವ ಅಗತ್ಯವಿಲ್ಲ. ಒಂದು ರೀತಿಯಲ್ಲಿ ಅವರು ಒಳ್ಳೆಯದನ್ನೇ ಮಾಡುತ್ತಾರೆ.  ಸದುದ್ದೇಶದಿಂದ, ತಪ್ಪನ್ನು ಸರಿ ಮಾಡುವ ಕಾರಣದಿಂದ ಮಾಡುವ ದೂರು ಒಳಿತು ಮಾಡುತ್ತದೆ, ತಿದ್ದಿಕೊಂಡು ನಡೆಯಲು ಸಹಕಾರಿಯಾಗುತ್ತದೆ. ಮುಂದೆ ಎಚ್ಚರಿಕೆಯಿಂದ ನಡೆಯಬೇಕೆಂಬುದನ್ನು ಕಲಿಸುತ್ತದೆ. ಪೂರ್ವಾಗ್ರಹದ ಮತ್ತು ದುರುದ್ದೇಶದ ದೂರುಗಳೂ ಸಹ ನಮ್ಮ ಅನುಭವದ ಖಜಾನೆ ತುಂಬಲು ಸಹಕಾರಿಯಾಗುತ್ತವೆ. ಬೆಳೆಯುವ ಲಕ್ಷಣವೆಂದರೆ, ಇತರರ ತಪ್ಪುಗಳನ್ನು ಗಮನಿಸಿ ದೂರುವ ಪ್ರವೃತ್ತಿ ಬಿಟ್ಟು, ನಮ್ಮ ಸ್ವಂತದ ತಪ್ಪುಗಳನ್ನು ಗುರುತಿಸಿ ತಿದ್ದಿಕೊಂಡು ನಡೆಯಲು ಪ್ರಯತ್ನಿಸುವುದು. ಬೆಳಗ್ಗೆ ಎದ್ದ ತಕ್ಷಣ ಬೆಳಕು, ಶಕ್ತಿ, ಆಹಾರ, ಜೀವನ ಮತ್ತು ನಮಗೆ ಅಗತ್ಯವಾದ ಎಲ್ಲವನ್ನೂ ಕೊಟ್ಟಿರುವ ಭಗವಂತನಿಗೆ/ದಿವ್ಯ ಶಕ್ತಿಗೆ ಧನ್ಯವಾದ ಅರ್ಪಿಸಬೇಕು. ಹೀಗೆ ಧನ್ಯವಾದ ಅರ್ಪಿಸಲು ಕಾರಣವಿಲ್ಲವೆಂದು ನಾವು ಭಾವಿಸಿದರೆ, ತಪ್ಪು ನಮ್ಮಲ್ಲಿಯೇ ಇರುತ್ತದೆ. ನಾವು ನಮ್ಮ ಹಿರಿಯರನ್ನು, ಸೋದರ-ಸೋದರಿಯರನ್ನು, ಸಮಾಜವನ್ನು ದೂರುತ್ತೇವೆ, ನಮ್ಮನ್ನು ಮಾತ್ರ ದೂರಿಕೊಳ್ಳುವುದಿಲ್ಲ. ಬದಲಾಗಬೇಕಾದುದು ಅವರುಗಳಲ್ಲ, ನಾವೇ ಎಂಬ ಅರಿವು ಮೂಡಿದರೆ ನಾವು ಇತರರನ್ನು ದೂರುವುದಿಲ್ಲ. ನಮ್ಮ ಅತ್ಯಂತ ಘೋರವಾದ ತಪ್ಪುಗಳನ್ನೂ ನಾವು ಕ್ಷಮಿಸಿಕೊಂಡುಬಿಡುತ್ತೇವೆ. ಹಾಗಿರುವಾಗ, ಇತರರ ಸಣ್ಣ ಪುಟ್ಟ ತಪ್ಪುಗಳನ್ನು ಕ್ಷಮಿಸುವಷ್ಟಾದರೂ ನಾವು ದೊಡ್ಡವರಾಗಬಾರದೆ?  ದೂರುಗಳಿಂದ ಪಾಠ ಕಲಿಯೋಣ, ಪೂರ್ವಾಗ್ರಹದ ದೂರುಗಳನ್ನು ನಿರ್ಲಕ್ಷಿಸೋಣ, ಇತರರನ್ನು ದೂರದಿರೋಣ.
ನಿಂದನೆಯ ನುಡಿಗಳು ಅಡಿಯನೆಳೆಯುವುವು
ಮೆಚ್ಚುಗೆಯ ಸವಿಮಾತು ಪುಟಿದೆಬ್ಬಿಸುವುದು |
ಪರರ ನಿಂದಿಪರ ಜಗವು ಹಿಂದಿಕ್ಕುವುದು
ವಂದಿತನಾಗು ನಲ್ನುಡಿಯೊಡೆಯನಾಗು ಮೂಢ || 
-ಕ.ವೆಂ.ನಾಗರಾಜ್.
[7-04-2014ರ ಜನಮಿತ್ರ ಪತ್ರಿಕೆಯಲ್ಲಿ ಪ್ರಕಟಿತ 'ಚಿಂತನ']

ಗುರುವಾರ, ಏಪ್ರಿಲ್ 3, 2014

ತಿಂದೂ ಹೋದ, ಕೊಂಡೂ ಹೋದ!

     ಹಾಸನದ ಪರಿಪೂರ್ಣ ಚಾರಿಟಬಲ್ ಟ್ರಸ್ಟ್ ವತಿಯಿಂದ ಹೊಸ ಜಿಲ್ಲಾ ಪತ್ರಿಕೆ 'ಜನಹಿತ' ಯುಗಾದಿಯ ದಿನದಿಂದ ಪ್ರಾರಂಭವಾಗಿದೆ. ಈ ಪತ್ರಿಕೆಯಲ್ಲಿ 'ಜನಕಲ್ಯಾಣ' ಹೆಸರಿನಲ್ಲಿ  ಆಡಳಿತಾತ್ಮಕ ವಿಷಯಗಳಿಗೆ ಸಂಬಂಧಿಸಿದ ವಿಷಯಗಳನ್ನು ಕುರಿತಂತೆ ನನ್ನ ಅಂಕಣ ಪ್ರಕಟವಾಗುತ್ತಿದ್ದು, ಅರ್ಥ ಕಳೆದುಕೊಂಡ ಇಲಾಖಾ ವಿಚಾರಣೆಗಳ ಬಗ್ಗೆ ಮೊದಲ ಲೇಖನ ಮಾಲಿಕೆ 2.04.2014ರಿಂದ  'ತಿಂದೂ ಹೋದ, ಕೊಂಡೂ ಹೋದ' ಎಂಬ ಲೇಖನದೊಂದಿಗೆ ಪ್ರಾರಂಭವಾಗಿದೆ.  ಪ್ರಕಟಿತ ಲೇಖನ ನಿಮ್ಮ ಗಮನಕ್ಕೆ ಪ್ರಸ್ತುತಪಡಿಸಿರುವೆ. ನಿಮ್ಮ ಅಭಿಪ್ರಾಯ, ಸಲಹೆಗಳಿಗೆ ಸ್ವಾಗತ.

     ಸರ್ಕಾರೀ ಸೇವಾ ನಿಯಮಗಳನ್ನು ಉಲ್ಲಂಘಿಸಿದ, ತರವಲ್ಲದ ರೀತಿಯಲ್ಲಿ ನಡೆದುಕೊಳ್ಳುವ, ಹಣ ದುರುಪಯೋಗದ ಮತ್ತು ಇಂತಹ ಪ್ರಕರಣಗಳಲ್ಲಿ ಇಲಾಖಾ ವಿಚಾರಣೆಗಳ ಅಗತ್ಯ ಬೀಳುತ್ತದೆ. ನೌಕರರಿಗೆ ಅವರ ಮೇಲಾಧಿಕಾರಿಯಿಂದ ಕಾರಣ ಕೇಳಿ ನೋಟೀಸು ಕೊಡಲಾಗುತ್ತದೆ. ನೋಟೀಸಿಗೆ ನೌಕರ ಕೊಡುವ ಉತ್ತರ ಸಮರ್ಪಕವಿರದಿದ್ದಲ್ಲಿ/ ಉತ್ತರವನ್ನೇ ಕೊಡದಿದ್ದಲ್ಲಿ ಶಿಸ್ತು ಕ್ರಮ ಕೈಗೊಳ್ಳಲು ಶಿಸ್ತು ಪ್ರಾಧಿಕಾರಕ್ಕೆ ಕಛೇರಿಯ ಅಧಿಕಾರಿ ಪೂರಕ ವಿವರಗಳು, ದಾಖಲಾತಿಗಳೊಂದಿಗೆ ವರದಿ ಕೊಡುತ್ತಾರೆ. ಶಿಸ್ತು ಪ್ರಾಧಿಕಾರಿ ಅದನ್ನು ಪರಿಶೀಲಿಸಿ ಕ್ರಮ ಅಗತ್ಯವೆನಿಸಿದರೆ ಆಪಾದನೆಗಳು, ಆಪಾದನೆಗಳ ಪೂರ್ಣ ವಿವರಗಳು, ಸಮರ್ಥಿಸುವ ದಾಖಲೆಗಳ ಪಟ್ಟಿ. ಸಾಕ್ಷಿಗಳ ಪಟ್ಟಿಗಳೊಂದಿಗೆ ನೌಕರನಿಗೆ ಶಿಸ್ತು ಕ್ರಮ ಏಕೆ ತೆಗೆದುಕೊಳ್ಳಬಾರದೆಂದು ಕಾರಣ ಕೇಳಿ ನೋಟೀಸು ಕೊಡುತ್ತಾರೆ. ನೌಕರನ ಉತ್ತರ ಸಮರ್ಪಕವಿರದಿದ್ದಲ್ಲಿ ಇಲಾಖಾ ವಿಚಾರಣೆಗೆ ಆದೇಶಿಸಿ ವಿಚಾರಣಾಧಿಕಾರಿಯನ್ನು ಮತ್ತು ಪ್ರಕರಣವನ್ನು ಸರ್ಕಾರದ ಪರವಾಗಿ ಮಂಡಿಸಲು ಮಂಡನಾಧಿಕಾರಿಯನ್ನು ನೇಮಿಸುತ್ತಾರೆ. ವಿಚಾರಣಾಧಿಕಾರಿ ಆರೋಪಗಳ ಸತ್ಯಾಸತ್ಯತೆ ಬಗ್ಗೆ ವಿಚಾರಣೆ ನಡೆಸಿ ಆರೋಪಗಳು ರುಜುವಾತಾದವೇ, ಇಲ್ಲವೇ ಎಂಬ ಬಗ್ಗೆ ವರದಿಯನ್ನು ಶಿಸ್ತು ಪ್ರಾಧಿಕಾರಕ್ಕೆ ಸಲ್ಲಿಸುತ್ತಾರೆ. ಆರೋಪಗಳು ರುಜುವಾತಾಗಿದ್ದರೆ, ವಿಚಾರಣಾಧಿಕಾರಿಯ ಆದೇಶದ ಪ್ರತಿಯೊಂದಿಗೆ ನೌಕರನಿಗೆ ಸೂಕ್ತ ಶಿಕ್ಷೆ ನೀಡಬಾರದೇಕೆಂಬ ಬಗ್ಗೆ ಪುನಃ ನೋಟೀಸು ನೀಡಿ, ಆತನಿಂದ ಬರುವ ಉತ್ತರ ಗಮನಿಸಿ ಶಿಕ್ಷೆಯ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳಲಾಗುತ್ತದೆ. ಈ ಎಲ್ಲಾ ಪ್ರಕ್ರಿಯೆಗಳು ಪೂರ್ಣಗೊಳ್ಳಲು ದೀರ್ಘ ಅವಧಿ ಬೇಕೆಂಬುದು ಯಾರಿಗೂ ಅರ್ಥವಾಗುತ್ತದೆ. ಆರೋಪಗಳು ಗುರುತರವಾಗಿದ್ದರೆ, ನೌಕರನನ್ನು ಅಮಾನತ್ತಿನಲ್ಲಿರಿಸಲಾಗಿರುತ್ತದೆ. ಅಂತಹ ಪ್ರಕರಣಗಳಲ್ಲಿ ಸಾಮಾನ್ಯವಾಗಿ ಕೆಲವು ತಿಂಗಳ ನಂತರ ಅವನನ್ನು ಪುನಃ ಸೇವೆಗೆ ತೆಗೆದುಕೊಂಡು ಬೇರೆ ಕಛೇರಿಗೆ ನಿಯೋಜಿಸುತ್ತಾರೆ. ಎಚ್ಚರಿಕೆ ನೀಡುವುದು, ವಾರ್ಷಿಕ ವೇತನ ಬಡ್ತಿಗಳನ್ನು ತಡೆ ಹಿಡಿಯುವುದು, ಹಿಂಬಡ್ತಿ ನೀಡುವುದು, ಇತ್ಯಾದಿಗಳು ಸೇರಿದಂತೆ ಸೇವೆಯಿಂದ ವಜಾಗೊಳಿಸುವ ಶಿಕ್ಷೆ ನೀಡಲೂ ಶಿಸ್ತು ಪ್ರಾಧಿಕಾರಿಗೆ ಅಧಿಕಾರವಿರುತ್ತದೆ.
     ಸರ್ಕಾರದ ಇಲಾಖೆಗಳಲ್ಲಿ ಕಾರ್ಯದಕ್ಷತೆ ಹೆಚ್ಚಿಸಲು, ಸುಗಮ, ಜನಪರ ಆಡಳಿತ ನೀಡಲು ಇಲಾಖಾ ವಿಚಾರಣೆಗಳು ಪ್ರಮುಖ ಪಾತ್ರ ವಹಿಸಬಲ್ಲವು. ದೌರ್ಭಾಗ್ಯವಶಾತ್ ಭ್ರಷ್ಟಾಚಾರದ ಕರಿನೆರಳು ಬಿದ್ದು ಇವು ಕೇವಲ ಅರ್ಥಹೀನ ಪ್ರಕ್ರಿಯೆಗಳಾಗಿಬಿಟ್ಟಿರುವುದು ದುರ್ದೈವ. ಎಲ್ಲಾ ಇಲಾಖಾ ವಿಚಾರಣೆಗಳೂ ಹೀಗಾಗಿವೆ ಎನ್ನಲಾಗದಿದ್ದರೂ ಅರ್ಥಪೂರ್ಣ ವಿಚಾರಣೆಗಳು ಬೆರಳೆಣಿಕೆಯಷ್ಟು ಮಾತ್ರ ಎನ್ನಬಹುದು. ಇಲಾಖಾ ವಿಚಾರಣೆ ವ್ಯರ್ಥವೆನಿಸಿದ ಕೆಲವು ಪ್ರಸಂಗಗಳನ್ನು ನಿಮ್ಮೊಡನೆ ಹಂಚಿಕೊಳ್ಳುವೆ.
ತಿಂದೂ ಹೋದ, ಕೊಂಡೂ ಹೋದ!
     ಅವನೊಬ್ಬ ಗ್ರಾಮಲೆಕ್ಕಿಗ, ಹೆಸರು ಖಲಂದರ್ ಎಂದಿಟ್ಟುಕೊಳ್ಳೋಣ. ಪ್ರತಿ ತಿಂಗಳೂ ತಾನು ವಸೂಲು ಮಾಡಿದ ಕಂದಾಯ, ಸರ್ಕಾರೀ ಬಾಕಿ, ಇತ್ಯಾದಿಗಳ ಖಾತೆ, ಖಿರ್ದಿ ಬರೆದು ಸಂಬಂಧಿಸಿದ ಲೆಕ್ಕ ರ್ಶೀಕೆಗಳಿಗೆ ಜಮಾ ಮಾಡಲು ಬ್ಯಾಂಕ್ ಚಲನ್ನುಗಳನ್ನು ಬರೆದು ಶಿರಸ್ತೇದಾರರಿಂದ ಮೇಲುಸಹಿ ಮಾಡಿಸಿಕೊಳ್ಳುತ್ತಿದ್ದ. ಎಲ್ಲರನ್ನೂ ಚೆನ್ನಾಗಿ ಮಾತನಾಡಿಸುತ್ತಿದ್ದ ಅವನು ಧಾರಾಳಿಯೂ ಆಗಿದ್ದರಿಂದ ಎಲ್ಲರಿಗೂ ಅವನು ಆಪ್ತನೆನಿಸಿದ್ದ. ಹಣ ಬ್ಯಾಂಕಿಗೆ ಜಮಾ ಆದಮೇಲೆ ತಾಲ್ಲೂಕು ಕಛೇರಿಯ ಡಿಸಿಬಿ (ಡಿಮ್ಯಾಂಡ್-ಕಲೆಕ್ಷನ್-ಬ್ಯಾಲೆನ್ಸ್ = ಬೇಡಿಕೆ-ವಸೂಲಿ-ಶಿಲ್ಕು) ವಹಿಯಲ್ಲಿ ವಿವರ ಬರೆಯುತ್ತಿದ್ದ. ಕಛೇರಿ ಗುಮಾಸ್ತರು ಅದನ್ನು ಖಜಾನೆಯಿಂದ ಬರುವ ಶೆಡ್ಯೂಲುಗಳೊಂದಿಗೆ ತಾಳೆ ನೋಡಬೇಕಾದುದು ಕ್ರಮವಾದರೂ, ಖಜಾನೆಯಿಂದ ಶೆಡ್ಯೂಲುಗಳು ತಿಂಗಳುಗಳು ತಡವಾಗಿ ಬರುತ್ತಿದ್ದುದರಿಂದ ತಾಳೆ ನೋಡುವ ಕೆಲಸ ಸಾಮಾನ್ಯವಾಗಿ ಆಗುತ್ತಿರಲಿಲ್ಲ. ದಫ್ತರ್ ತನಿಖೆ ಮಾಡುವಾಗಲೋ, ಲೆಕ್ಕ ಪರಿಶೋಧನೆ ಮಾಡುವಾಗಲೋ ವ್ಯತ್ಯಾಸವಿದ್ದರೆ ಪರಿಶೀಲಿಸಿ ನೋಡುತ್ತಾರೆ. ಸಾಮಾನ್ಯವಾಗಿ ಯಾವುದೋ ಲೆಕ್ಕ ಶೀರ್ಷಿಕೆಗೆ ಹೋಗಬೇಕಾದ ಹಣ ಇನ್ನು ಯಾವುದೋ ಶೀರ್ಷಿಕೆಗೆ ಜಮಾ ಆಗಿ ವ್ಯತ್ಯಾಸವಾಗುತ್ತಿರುತ್ತದೆ. ಕಂದಾಯ ಲೆಕ್ಕ ಪರಿಶೀಲಕರು ಎಲ್ಲಾ ಗ್ರಾಮಲೆಕ್ಕಿಗರುಗಳ ಲೆಕ್ಕವನ್ನು ಪರಿಶೀಲಿಸುವುದಿಲ್ಲ. ಪರಿಶೀಲನಾ ಅವಧಿಯಲ್ಲಿ ಲಭ್ಯವಿರುವವರ ಲೆಕ್ಕಗಳನ್ನು ಮಾತ್ರ ಪರಿಶೀಲಿಸುತ್ತಾರೆ. ಜಾಣ ಖಲಂದರ್ ಆ ಕಛೇರಿಯಲ್ಲಿ ೪-೫ ವರ್ಷಗಳಿಂದ ಕೆಲಸ ಮಾಡಿದ್ದರೂ ಆ ಅವಧಿಯಲ್ಲಿ ಒಮ್ಮೆಯೂ ಅವನ ಲೆಕ್ಕ ಪರಿಶೋಧನೆ ಆಗದಂತೆ ನೋಡಿಕೊಂಡಿದ್ದ. ಖಲಂದರನ ಮಿತ್ರ ಗ್ರಾಮಲೆಕ್ಕಿಗನ, ಅವನ ಹೆಸರು ರಮೇಶ ಎಂದಿರಲಿ, ಲೆಕ್ಕ ಪರಿಶೋಧನೆ ಸಂದರ್ಭದಲ್ಲಿ ಒಂದು ತಿಂಗಳ ಕಂದಾಯದ ಹಣ ಖಜಾನೆಯ ಲೆಕ್ಕದಲ್ಲಿ ಜಮಾ ಆಗದೆ ಇರುವುದು ಕಂಡುಬಂದಿತ್ತು. ಖಿರ್ದಿಯಲ್ಲಿ ಮಾತ್ರ ಹಣ ಬ್ಯಾಂಕಿಗೆ ಸಂದಾಯವಾದ ಕುರಿತು ಬ್ಯಾಂಕಿನ 'ಕ್ಯಾಶ್ ರಿಸೀವ್ಡ್' ಸೀಲು ಇತ್ತು. ಅನುಮಾನದಿಂದ ಬ್ಯಾಂಕಿನಲ್ಲಿ ವಿಚಾರಿಸಿದಾಗ ಆ ಮೊಬಲಗು ಬ್ಯಾಂಕಿಗೆ ಜಮಾ ಆಗಿಲ್ಲದುದು ಖಚಿತವಾಗಿತ್ತು. ರಮೇಶನಿಗೆ ನೋಟೀಸು ಕೊಟ್ಟು ವಿಚಾರಿಸಿದಾಗ ತಾನು ಒಂದು ವಾರ ರಜೆಯಲ್ಲಿದ್ದುದರಿಂದ ಹಣವನ್ನು ಮಿತ್ರ ಖಲಂದರ್ ಮೂಲಕ ಬ್ಯಾಂಕಿಗೆ ಕಟ್ಟಿಸಿದ್ದಾಗಿ ತಿಳಿಸಿದ್ದ. ಶಿರಸ್ತೇದಾರರಿಗೆ ಅನುಮಾನ ಬಂದು ಖಲಂದರನ ಖಾತೆ-ಖಿರ್ದಿಗಳನ್ನು ಪಡೆದು ಪರಿಶೀಲಿಸಿದಾಗ ಖಲಂದರ್ ಕಛೇರಿಗೆ ಬಂದ ಮೊದಲ ಎರಡು ತಿಂಗಳ ಹಣ ಹೊರತುಪಡಿಸಿ ನಂತರದ ಯಾವುದೇ ತಿಂಗಳ ಹಣ ಸರ್ಕಾರಕ್ಕೆ ಜಮಾ ಅಗಿರದೇ ಇದ್ದುದು ಗೊತ್ತಾಯಿತು. ಅವನೇ ಬ್ಯಾಂಕಿನ ಖೋಟಾ ಸೀಲು ಮಾಡಿಸಿಕೊಂಡು ಹಣ ಜಮಾ ಆದ ಬಗ್ಗೆ ಖಿರ್ದಿಯಲ್ಲಿ ಒತ್ತುತ್ತಿದ್ದುದು ಗೊತ್ತಾಗಿಹೋಯಿತು. ಬಹಳ ದೊಡ್ಡ ಮೊತ್ತದ ಹಣ ಲಪಟಾವಣೆಯಾಗಿತ್ತು. ಮಿತ್ರ ರಮೇಶನ ಹಣವನ್ನೂ ಬ್ಯಾಂಕಿಗೆ ಜಮಾ ಮಾಡದೇ ತನ್ನ ಖೋಟಾ ಸೀಲು ಒತ್ತಿದ್ದರಿಂದ ಈ ಹಗರಣ ಬೆಳಕಿಗೆ ಬಂದಿತ್ತು. ಜಿಲ್ಲಾಧಿಕಾರಿಯವರಿಗೆ ವರದಿ ಹೋಯಿತು. ಗ್ರಾಮಲೆಕ್ಕಿಗ, ಆ ಐದು ವರ್ಷಗಳಲ್ಲಿ ಕೆಲಸ ಮಾಡಿದ್ದ ಡಿಸಿಬಿ ಗುಮಾಸ್ತರುಗಳು, ರೆವಿನ್ಯೂ ಇನ್ಸ್ ಪೆಕ್ಟರುಗಳು, ಶಿರಸ್ತೇದಾರರುಗಳ ಮೇಲೆ ಇಲಾಖಾ ವಿಚಾರಣೆ ನಡೆಸಲಾಯಿತು. ಸುಮಾರು ೨-೩ ವರ್ಷಗಳ ಕಾಲ ವಿಚಾರಣೆ ನಡೆದು ಆರೋಪಿಗಳು ತಪ್ಪಿತಸ್ಥರೆಂದು ತೀರ್ಮಾನಿಸಿದರು. ಖಲಂದರನನ್ನು ಸೇವೆಯಿಂದ ವಜಾ ಮಾಡಲಾಯಿತು. ಗುಮಾಸ್ತರುಗಳ, ರೆವಿನ್ಯೂ ಇನ್ಸ್ ಪೆಕ್ಟರುಗಳ ಎರಡೆರಡು ವಾರ್ಷಿಕ ಇಂಕ್ರಿಮೆಂಟುಗಳನ್ನು, ಶಿರಸ್ತೇದಾರರ ೪ ವಾರ್ಷಿಕ ಇಂಕ್ರಿಮೆಂಟುಗಳನ್ನು ತಡೆಹಿಡಿದು ಆದೇಶವಾಯಿತು. ಅವರುಗಳ ಬಡ್ತಿಗೂ ಇದರಿಂದ ತೊಂದರೆಯಾಯಿತು.
     ವಜಾಗೊಂಡ ಖಲಂದರ್ ಸುಮ್ಮನೇ ಕೂರಲಿಲ್ಲ. ತನ್ನದೇ ಆದ ಒಂದು ಪೆಪ್ಪರಮೆಂಟ್ ತಯಾರಿಕಾ ಘಟಕ ಸ್ಥಾಪಿಸಿದ. ಅದೇ ಸಮಯಕ್ಕೆ ತನ್ನನ್ನು ಸೇವೆಯಿಂದ ವಜಾ ಮಾಡಿದ ಆದೇಶವನ್ನು ಪ್ರಶ್ನಿಸಿ ಉಚ್ಛನ್ಯಾಯಾಲಯದಲ್ಲಿ ಮೇಲುಮನವಿಯನ್ನೂ ಸಲ್ಲಿಸಿದ. ಪೆಪ್ಪರಮೆಂಟ್ ತಯಾರಿಕೆ ಮತ್ತು ಮಾರಾಟದಿಂದಲೂ ಒಳ್ಳೆಯ ಲಾಭ ಮಾಡಿದ ಅವನು ದೊಡ್ಡ ಬಂಗಲೆಯಂತಹ ಮನೆ ಕಟ್ಟಿಕೊಂಡು ಕಾರಿನಲ್ಲಿ ಸೂಟು ಬೂಟು ಧರಿಸಿ ಓಡಾಡತೊಡಗಿದ. ಉಚ್ಛನ್ಯಾಯಾಲಯದಲ್ಲಿ ೬-೭ ವರ್ಷಗಳು ವಿಚಾರಣೆ ನಡೆದು ಆ ಗ್ರಾಮಲೆಕ್ಕಿಗ ನಿರ್ದೋಷಿಯೆಂದು ತೀರ್ಮಾನವಾಗಿತ್ತು. ಇಲಾಖಾ ವಿಚಾರಣೆ ಸರಿಯಾಗಿ ನಡೆಸಿರಲಿಲ್ಲವೆಂದೂ, ಬ್ಯಾಂಕಿನವರನ್ನು ವಿಚಾರಣೆ ನಡೆಸಿಯೇ ಇಲ್ಲವೆಂದೂ, ತನ್ನ ಮುಗ್ಧತೆಯನ್ನು ಬ್ಯಾಂಕಿನವರು ದುರುಪಯೋಗಪಡಿಸಿಕೊಂಡಿದ್ದರೆಂದೂ ಅವನು ಮುಂದಿಟ್ಟ ವಾದವನ್ನು ಒಪ್ಪಿದ ನ್ಯಾಯಾಲಯ, ಸರ್ಕಾರ ಆರೋಪಗಳನ್ನು ಸಾಬೀತುಗೊಳಿಸುವಲ್ಲಿ ವಿಫಲವಾಗಿದೆಯೆಂದು, ಸರಿಯಾಗಿ ವಿಚಾರಣೆ ನಡೆಸಿಲ್ಲವೆಂದು ಹಾಗೂ ಅವನನ್ನು ಮರಳಿ ಸೇವೆಗೆ ತೆಗೆದುಕೊಂಡು ಹಿಂದಿನ ಪೂರ್ಣ ಅವಧಿಯ ವೇತನವನ್ನು ಪಾವತಿಸಲು ಮತ್ತು ಅಗತ್ಯವೆನಿಸಿದರೆ ಹೊಸದಾಗಿ ಇಲಾಖಾ ವಿಚಾರಣೆ ನಡೆಸಬಹುದೆಂದೂ ತಿಳಿಸಿತ್ತು. ಕಾರಿನಲ್ಲಿ ಟ್ರಿಮ್ಮಾಗಿ ಬಂದ ಖಲಂದರನನ್ನು ಜಿಲ್ಲಾಧಿಕಾರಿಯವರು ಸೇವೆಗೆ ತೆಗೆದುಕೊಳ್ಳಲೇಬೇಕಾಯಿತು ಮತ್ತು ಹಳೆಯ ಎಂಟು ವರ್ಷಗಳ ಸಂಬಳವನ್ನು ಅವನು ಕೆಲಸ ಮಾಡಿರದಿದ್ದರೂ ಅವನಿಗೆ ಕೊಡಲೇಬೇಕಾಯಿತು. ಅವನೋ ನಂತರದಲ್ಲಿ, ತನ್ನ ಪರವಾಗಿ ಇನ್ನೊಬ್ಬನನ್ನು ನೇಮಿಸಿಕೊಂಡು ಅವನಿಗೆ ತನ್ನ ಅರ್ಧ ಸಂಬಳ ಕೊಟ್ಟು ಬರವಣಿಗೆ ಕೆಲಸ ಮಾಡಿಸುತ್ತಿದ್ದ. ಸಂಬಳ ತೆಗೆದುಕೊಳ್ಳಲು ಮತ್ತು ಅನಿವಾರ್ಯ ಸಂದರ್ಭಗಳಲ್ಲಿ ಮಾತ್ರ ಅವನು ಕಛೇರಿಗೆ ಹೋಗುತ್ತಿದ್ದ. ಕಛೇರಿಯಲ್ಲಿ ಕುಳಿತು ಮಾಡುವ ಕೆಲಸವಲ್ಲವಾದ್ದರಿಂದ ಮತ್ತು ತಕ್ಷಣದ ಮೇಲಿನ ಅಧಿಕಾರಿಗಳು ಮತ್ತು ಇತರರನ್ನು 'ಚೆನ್ನಾಗಿ' ನೋಡಿಕೊಳ್ಳುತ್ತಿದ್ದರಿಂದ ಹಾಗೂ ಸರ್ಕಾರಿ ಕೆಲಸಕ್ಕೆ ತೊಂದರೆಯಾಗದಿದ್ದುದರಿಂದ  ಇದಕ್ಕೆ ಯಾರಿಂದಲೂ ಅಡ್ಡಿ ಬರಲಿಲ್ಲ. ಜಿಲ್ಲಾಧಿಕಾರಿಯವರು ಹೊಸದಾಗಿ ಇಲಾಖಾ ವಿಚಾರಣೆ ನಡೆಸಲು ಹೊಸ ಆರೋಪ ಪಟ್ಟಿ ತಯಾರಿಸಲು ತಹಸೀಲ್ದಾರರಿಗೆ ಸೂಚಿಸಿದರು. ಹಳೆಯ ಕಡತಗಳನ್ನು ಪರಿಶೀಲಿಸಿ ಆರೋಪ ಪಟ್ಟಿ ತಯಾರಿಸಲು ನೋಡಿದರೆ ಸಂಬಂಧಿಸಿದ ಕಡತಗಳು, ದಾಖಲೆಗಳು ಸಿಗಲೇ ಇಲ್ಲ. ಹಿಂದಿನ ಇಲಾಖಾ ವಿಚಾರಣಾ ಕಡತದಿಂದಲೂ ಮುಖ್ಯವಾದ ಮೂಲ ದಾಖಲಾತಿಗಳೇ ಕಣ್ಮರೆಯಾಗಿದ್ದವು. ಅವರ ಮೇಲೆ ಇವರು, ಇವರ ಮೇಲೆ ಅವರು ತಪ್ಪು ಹೊರಿಸುತ್ತಲೇ, ಪತ್ರ ವ್ಯವಹಾರಗಳನ್ನು ಮಾಡುತ್ತಲೇ ವರ್ಷಗಳು ಉರುಳಿದವು. ಖಲಂದರನ ಆದರಾತಿಥ್ಯಗಳಿಗೆ ಮರುಳಾದವರು ಅವನ ಸಹಕಾರಕ್ಕೆ ನಿಂತಿದ್ದರು.  ಕ್ರಮೇಣ ಎಲ್ಲರಿಗೂ ವಿಷಯ ಮರೆತೇ ಹೋಯಿತು. ಅವನೂ ಪೂರ್ಣ ಸೇವೆ ಸಲ್ಲಿಸಿ ಸೇವಾನಿವೃತ್ತನೂ ಆದ, ಪಿಂಚಣಿಯನ್ನೂ ಪಡೆದ ಎಂಬಲ್ಲಿಗೆ ವ್ಯರ್ಥ ಇಲಾಖಾ ವಿಚಾರಣಾ ಪ್ರಸಂಗಗಳ ಈ ಅಧ್ಯಾಯ ಮುಗಿದುದು.


ಮಂಗಳವಾರ, ಏಪ್ರಿಲ್ 1, 2014

ಪುರುಸೊತ್ತಿಲ್ಲವೇ?

     'ನಿನ್ನೆ ಕಾರ್ಯಕ್ರಮ ಎಷ್ಟು ಚೆನ್ನಾಗಿತ್ತು ಗೊತ್ತಾ? ನೀನು ಯಾಕೋ ಬರಲಿಲ್ಲ?' ಎಂಬ ಪ್ರಶ್ನೆಗೆ ಅವನು ಉತ್ತರಿಸಿದ್ದ, 'ಏನ್ ಮಾಡಲೋ? ನನಗಂತೂ ಒಂದ್ ನಿಮಿಷಾನೂ ಪುರುಸೊತ್ತೇ ಇರಲ್ಲ.' ಆದರೆ ನಿಜವಾದ ಸಂಗತಿಯೆಂದರೆ ಕಾರ್ಯಕ್ರಮ ನಡೆದ ಸಮಯದಲ್ಲಿ ಆತ ತನ್ನ ಗೆಳೆಯನೊಂದಿಗೆ ಬಾರಿನಲ್ಲಿ ಕುಡಿಯುತ್ತಾ ಕುಳಿತಿದ್ದ. ಹಾಗಾಗಿ ಅವನಿಗೆ ಪುರುಸೊತ್ತಿರಲಿಲ್ಲ. ಈ 'ಪುರುಸೊತ್ತಿಲ್ಲ' ಅನ್ನುವುದನ್ನು ಸಾಮಾನ್ಯವಾಗಿ ಎಲ್ಲರೂ ಬಳಸುತ್ತೇವೆ. ಅಷ್ಟಕ್ಕೂ ಈ 'ಪುರುಸೊತ್ತು' ಅಂದರೆ ಏನು? ಏನಾದರೂ ಮಾಡಲು ಅಗತ್ಯವಾದ ಸಮಯ ಅಷ್ಟೇ. ನಾವು ಸಮಯದೊಂದಿಗೇ  ಇರುತ್ತೇವೆ, ಆದರೆ ನಮಗೆ ಸಮಯವೇ ಇರುವುದಿಲ್ಲ! ಈ ಸಮಯ ಅನ್ನುವುದು ಒಬ್ಬರಿಗೆ ಒಂದೊಂದು ತರಹ ಇರುತ್ತದೆಯೇ? ಒಬ್ಬರಿಗೆ ೨೪ ಗಂಟೆ, ಇನ್ನೊಬ್ಬರಿಗೆ ೨೦ ಗಂಟೆಯಂತೆ ಇರುತ್ತದೆಯೇ? ಎಲ್ಲರಿಗೂ ಇರುವುದು ಇಪ್ಪನಾಲ್ಕೇ ಗಂಟೆಗಳು! ವಿವೇಕಾನಂದ, ಬುದ್ಧ, ಬಸವಣ್ಣ, ಮಹಾವೀರ, ಮಹಾತ್ಮ ಗಾಂಧಿ, ಗೋಳ್ವಾಲ್ಕರ್, ಚಂದ್ರಶೇಖರ ಆಜಾದ್, ಭಗತ್ ಸಿಂಗ್, ಆಶ್ಫಾಕ್ ಉಲ್ಲಾ ಮುಂತಾದವರಿಗೆ ಇದ್ದದ್ದು, ಈಗ ನಮ್ಮ ನಡುವೆಯೇ ಇರುವ ಸಿದ್ಧಗಂಗಾ ಶ್ರೀಗಳು, ಪಂ. ಸುಧಾಕರ ಚತುರ್ವೇದಿಯವರು, ಸಚಿನ್ ತೆಂಡೂಲ್ಕರ್ ಮುಂತಾದವರಿಗೂ ಇರುವುದು ಇತರ ನಮ್ಮ ನಿಮ್ಮೆಲ್ಲರಿಗೂ ಇರುವಷ್ಟೇ ಸಮಯ! ಸಮಯ ನಿಜವಾದ ಸಮತಾವಾದಿ. ಅದು ಶ್ರೀಮಂತರಿಗೆ, ಬಡವರಿಗೆ, ಆ ಜಾತಿಯವರಿಗೆ, ಈ ಜಾತಿಯವರಿಗೆ, ದಲಿತರಿಗೆ, ಮುಂದುವರೆದವರಿಗೆ, ಕರಿಯರಿಗೆ, ಬಿಳಿಯರಿಗೆ, ದಡ್ಡರಿಗೆ, ಜಾಣರಿಗೆ, ಚಿಕ್ಕವರಿಗೆ, ದೊಡ್ಡವರಿಗೆ, ಗಂಡಸರಿಗೆ, ಹೆಂಗಸರಿಗೆ, ಇತ್ಯಾದಿ ಯಾವುದೇ ಭೇದ ಮಾಡದೇ ಎಲ್ಲರಿಗೂ ಒಂದೇ ರೀತಿಯ ಸಮಯ ಕೊಡುತ್ತದೆ. 
     ಒಬ್ಬ ಯಶಸ್ವಿ ವ್ಯಕ್ತಿಗೆ, ಮಾಡಲು ಬೇಕಾದಷ್ಟು ಕೆಲಸಗಳು ಇದ್ದವರಿಗೆ ಸಮಯ ಸಿಗುತ್ತದೆ. ಆದರೆ ಸೋಮಾರಿಗಳಿಗೆ ಸಿಗುವುದಿಲ್ಲ. ಚಟುವಟಿಕೆಯಿಂದ ಕೂಡಿದ ವ್ಯಕ್ತಿ ತಾನು ಮಾಡಬೇಕೆಂದಿರುವ ಎಲ್ಲಾ ಕೆಲಸಗಳಿಗೂ ಪುರುಸೊತ್ತು ಮಾಡಿಕೊಳ್ಳುತ್ತಾನೆ, ಅರ್ಥಾತ್ ಸಮಯ ಹೊಂದಿಸಿಕೊಳ್ಳುತ್ತಾನೆ. ಅವನು ಸಮಯವನ್ನು ಹೇಗೆ ವಿನಿಯೋಗಿಸಬೇಕೆಂದು ಯೋಜಿಸುತ್ತಾನೆ, ಸಿಗುವ ಸಣ್ಣ ಅವಕಾಶವನ್ನೂ ಉಪಯೋಗಿಸಿಕೊಳ್ಳುತ್ತಾನೆ. ಅದು ಒಬ್ಬ ಯಶಸ್ವಿಯ ಗುಣ, ಸಾಧಕನ ಲಕ್ಷಣ. ಪುರುಸೊತ್ತಿಲ್ಲ ಅನ್ನುವವರು ಸಾಮಾನ್ಯವಾಗಿ ಸಮಯವನ್ನು ಹೇಗೆ ಉಪಯೋಗಿಸಿಕೊಳ್ಳಬೇಕೆಂಬ ಬಗ್ಗೆ ತಲೆ ಕೆಡಿಸಿಕೊಳ್ಳದೆ, ಗೊತ್ತು ಗುರಿಯಿಲ್ಲದೆ ಹೇಗೋ ಕೆಲಸ ಮಾಡುವವರು ಎಂದು ಗೊತ್ತಾಗಿಬಿಡುತ್ತದೆ. ಸಾಧಕರಿಗೂ, ಸಾಮಾನ್ಯರಿಗೂ ಇರುವ ವ್ಯತ್ಯಾಸ ಅವರು ಉಪಯೋಗಿಸಿಕೊಳ್ಳುವ ಸಮಯದ ರೀತಿಯಲ್ಲಿದೆ. ಈ ಸಮಯ ಅನ್ನುವುದು ಎಲ್ಲರಿಗೂ ಉಚಿತವಾಗಿ ಸಿಗುತ್ತದೆ, ಅದಕ್ಕಾಗಿ ಯಾರೂ ಹಣ ಕೊಡಬೇಕಿಲ್ಲ. ಹಾಗೆಂದು ಅದಕ್ಕೆ ಬೆಲೆಯಿಲ್ಲ ಎನ್ನಲಾಗುವುದಿಲ್ಲ, ಅದು ಅಮೂಲ್ಯವಾದುದು. ಅದನ್ನು ಕೊಳ್ಳಲಾಗುವುದಿಲ್ಲ. ಅದನ್ನು ನಾವು ಇಟ್ಟುಕೊಳ್ಳಬಹುದು, ಖರ್ಚು ಮಾಡಬಹುದು. ಆದರೆ ಒಮ್ಮೆ ಅದನ್ನು ಕಳೆದುಕೊಂಡರೆ ಅದನ್ನು ಪುನಃ ಪಡೆಯಲಾಗುವುದೇ ಇಲ್ಲ! 
     'ಹೇಗೋ ಜೀವನ ನಡೆಸಿದರಾಯಿತು' ಅನ್ನುವವರು ಸಮಯದ ಬಗ್ಗೆ ಮಹತ್ವ ಕೊಡಲಾರರು. 'ಹುಟ್ಟಿದ, ಇದ್ದ, ಒಂದು ದಿನ ಸತ್ತ' ಎಂಬ ರೀತಿಯಲ್ಲಿ ಬಾಳಿದವರನ್ನು ಸಮಾಜವಿರಲಿ, ಅವರ ಕುಟುಂಬಸ್ಥರೇ ಕಾಲಾನಂತರದಲ್ಲಿ ಮರೆತುಬಿಡುತ್ತಾರೆ. ನೂರು ವರ್ಷಗಳು ಪೂರ್ಣವಾಗಿ ಬಾಳುವವರ ಸಂಖ್ಯೆ ಕಡಿಮೆ. ಸರಾಸರಿ ೮೦ರಿಂದ೯೦ ವರ್ಷದವರೆಗೆ ಬದುಕುತ್ತಾರೆ ಎಂದಿಟ್ಟುಕೊಳ್ಳೋಣ. ಇದರಲ್ಲಿ ಸುಮಾರು ಮೂರನೆಯ ಒಂದು ಭಾಗದಷ್ಟು, ಕೆಲವರಿಗೆ ಅದಕ್ಕೂ ಹೆಚ್ಚು,  ಅವಧಿ ನಿದ್ದೆಯಲ್ಲಿ ಕಳೆದುಹೋಗುತ್ತದೆ. ಬಾಲ್ಯ ಮತ್ತು ಮುಪ್ಪಿನ ಅವಧಿಯಲ್ಲಿ ಸುಮಾರು ಮೂರನೆಯ ಒಂದು ಭಾಗ ಕಳೆಯುತ್ತದೆ. ಉಳಿಯುವ ಮೂರನೆಯ ಒಂದರಷ್ಟು ಭಾಗದಲ್ಲಿ ಸಂಸಾರದ ಜಂಜಾಟ, ಕಾಯಿಲೆ-ಕಸಾಲೆಗಳು, ಇನ್ನಿತರ ಸಂಗತಿಗಳಿಗೆ ಸಮಯ ಕೊಡಬೇಕು. ಇಷ್ಟೆಲ್ಲಾ ಆಗಿ ಉಳಿಯುವ ಅವಧಿಯಲ್ಲಿ ಏನಾದರೂ ಸಾಧನೆ ಮಾಡುವುದಾದರೆ ಮಾಡಬೇಕು ಎಂದರೆ ಸಮಯದ ಮಹತ್ವದ ಅರಿವು ನಮಗೆ ಆಗುತ್ತದೆ. ಇಷ್ಟಾಗಿಯೂ ಸಾಧನೆ ಮಾಡುವವರಿದ್ದಾರೆ ಎಂದರೆ ಅವರು ಸಮಯದ ಸದ್ವಿನಿಯೋಗ ಮಾಡಿಕೊಳ್ಳುವವರು, ಸಮಯದ ಮಹತ್ವ ಅರಿತವರೇ ಸರಿ. ನಿಜವಾಗಿಯೂ ಸಮಯದ ಅಭಾವವಿಲ್ಲ. ಇರುವುದು ಇರುವ ಸಮಯವನ್ನು ಸರಿಯಾಗಿ ಉಪಯೋಗಿಸಿಕೊಳ್ಳುವುದರ ಜಾಣತನದ ಅಭಾವ ಅಷ್ಟೆ. ಹೆಚ್ಚಿನ ಸಮಯ ಹಳೆಯ ಕಷ್ಟ-ನಷ್ಟಗಳ ಕುರಿತು ಚಿಂತಿಸುವುದರಲ್ಲಿ, ಹಗಲು ಕನಸು ಕಾಣುತ್ತಾ ಮನಸ್ಸಿನಲ್ಲೇ ಮಹಲುಗಳನ್ನು ಕಟ್ಟುವುದರಲ್ಲಿ ಕಳೆದುಹೋಗುತ್ತದೆ. ಸಮಯದ ಒಂದೊಂದು ಕ್ಷಣವೂ ಅಂತಿಮವೇ, ಏಕೆಂದರೆ ಆ ಕ್ಷಣಗಳು ಮತ್ತೆ ಸಿಗುವುದೇ ಇಲ್ಲ ಎಂಬ ಅರಿವು ಇದ್ದವರು ಸಮಯದ ಸದುಪಯೋಗ ಮಾಡಿಕೊಳ್ಳುತ್ತಾರೆ. ನಿಜವಾದ ವಿಚಾರವೆಂದರೆ ಸಮಯ ವ್ಯರ್ಥವಾಗುವುದಿಲ್ಲ, ವ್ಯರ್ಥವಾಗುವುದು ನಮ್ಮ ಜೀವನ, ಇರುವ ಸಮಯವನ್ನು ಉಪಯೋಗಿಸಿಕೊಳ್ಳದಿದ್ದರೆ!
ಸಿಕ್ಕಾಗ ಸಮಯವನು ತಕ್ಕಾಗಿ ಬಳಸಿದೊಡೆ
ಸಿಕ್ಕದುದು ಸಿಕ್ಕುವುದು ದಕ್ಕದುದು ದಕ್ಕುವುದು |
ಕಳೆಯಿತೆಂದರೆ ಒಮ್ಮೆ ಸಿಕ್ಕದದು ಜಾಣ
ಕಾಲದ ಮಹತಿಯಿದು ಕಾಣು ಮೂಢ ||
     ಸಾಧನೆಗೆ ಲಭ್ಯವಾಗುವ ಸಮಯವೇ ಕಡಿಮೆ ಇರುವಾಗ, 'ಹೊತ್ತೇ ಹೋಗುವುದಿಲ್ಲ' ಎನ್ನುವವರು, 'ಟೈಮ್ ಕಳೆಯಲು' ಏನಾದರೂ ಮಾಡಬೇಕಲ್ಲಾ ಎಂದು ಅಲ್ಲಿ, ಇಲ್ಲಿ ಅಡ್ಡಾಡುವವರು, ಇಸ್ಪೀಟು ಆಡುವವರು, ಪಾರ್ಕಿನ ಕಟ್ಟೆಗಳು, ಬೆಂಚುಗಳಲ್ಲಿ ಕುಳಿತು ಹರಟುವವರು, ಇತರರ ವಿಚಾರಗಳಲ್ಲಿ ಮೂಗು ತೂರಿಸುವವರು, ಮುಂತಾದವರು ನಮ್ಮ ನಡುವೆಯೇ ಕಂಡುಬರುತ್ತಾರೆ. ಇವರುಗಳಿಗೆ 'ಮಾಡಬೇಕಾದ' ಕೆಲಸಗಳನ್ನು ಮಾಡಲು ಮಾತ್ರ ಪುರುಸೊತ್ತು ಸಿಗುವುದಿಲ್ಲ. ಸಮಯ ಕಳೆಯುವವರಿಗೆ ವಾಸ್ತವವಾಗಿ ಸಮಯವೇ ಅವರನ್ನು ಕಳೆಯುತ್ತಿದೆ ಎಂಬುದರ ಅರಿವಾಗುವುದಿಲ್ಲ. ಇಂತಹ ಪ್ರವೃತ್ತಿಯಿಂದ ಇವರು ಸ್ವತಃ ತೊಂದರೆಗಳನ್ನೂ ಅನುಭವಿಸುತ್ತಾರೆ. ಆದರೆ ಆಗ 'ಕಾಲ ಮಿಂಚಿದ ಮೇಲೆ ಚಿಂತಿಸಿದಂತೆ' ಆಗಿರುತ್ತದೆ. ಅವರು ಆಗ ಹೇಳುವುದೇನೆಂದರೆ, 'ನಮ್ಮ ಟೈಮೇ ಸರಿಯಿಲ್ಲ'. ಸರಿಯಿಲ್ಲದಿರುವುದು ಟೈಮೋ. ಅವರೋ? ಇಲ್ಲಿ ಇನ್ನೊಂದು ಅಪಾಯವೂ ಇದೆ. ದುಡಿದು ಉಣ್ಣುವವರು ಸಮಯವನ್ನು ಗೌರವಿಸುವವರಾದರೆ, ಈ ಮಾಡಬೇಕಾದ ಕೆಲಸಗಳನ್ನು ಮಾಡಲು ಪುರುಸೊತ್ತು ಮಾಡಿಕೊಳ್ಳದೆ, 'ದುಡಿಯದೇ' ಉಣ್ಣಬಯಸುವವರಲ್ಲಿ ಕೆಲವರಾದರೂ ಶ್ರಮಪಡದೇ ಹಣ ಗಳಿಸಲು ಕಳ್ಳತನ, ದರೋಡೆ, ವಂಚನೆ, ಇತ್ಯಾದಿಗಳಲ್ಲಿ ತೊಡಗಿ ಸಮಾಜಕಂಟಕರೂ ಆಗುವವರಿರುತ್ತಾರೆ.
     ಸಮಯ ಅದ್ಭುತ ಸಂಜೀವಿನಿ ಇದ್ದಂತೆ. ಅದು ನೋವನ್ನು ಮರೆಸುತ್ತದೆ, ಸತ್ಯವನ್ನು ಹೊರತರುತ್ತದೆ, ಪಾಪಿಗಳನ್ನು ಶಿಕ್ಷಿಸುತ್ತದೆ, ನ್ಯಾಯ ನೀಡುತ್ತದೆ. ಅದು ಕಿಲಾಡಿ ಕೂಡಾ! ಕಾಯುವವರಿಗೆ ದೀರ್ಘವಾಗಿರುತ್ತದೆ, ಭಯಪಡುವವರ ಹತ್ತಿರ ಧಾವಿಸುತ್ತದೆ, ಶೋಕಿಸುವವರಿಗೆ, ಚಿಂತಿಸುವವರಿಗೆ ಅತಿ ಉದ್ದವಾಗಿರುತ್ತದೆ, ಸಂತೋಷಪಡುವವರಿಗೆ ಚಿಕ್ಕದಾಗಿರುತ್ತದೆ, ಆದರೆ ಅದನ್ನು ಪ್ರೀತಿಸುವವರಿಗೆ ಮಾತ್ರ ಶಾಶ್ವತವಾಗಿರುತ್ತದೆ. ಸಂತೋಷವಾಗಿರುವುದಕ್ಕೆ ಸಮಯ ಕಂಡುಕೊಳ್ಳದಿದ್ದರೆ, ದುಃಖ ಪಡುವುದಕ್ಕೆ ಸಮಯ ಬಂದುಬಿಡುತ್ತದೆ.
     'ಕಾಲಾಯ ತಸ್ಮೈ ನಮಃ'. ನಾವು ವಿಳಂಬ ಮಾಡಬಹುದು. ಸಮಯ ಮಾತ್ರ ವಿಳಂಬಿಸುವುದೇ ಇಲ್ಲ. ಸಾಮಾನ್ಯವಾಗಿ ಸಮಯಪಾಲನೆ ಮಾಡುವವರು ಮೌಲ್ಯಗಳಿಗೆ ಮಹತ್ವ ಕೊಡುವವರಾಗಿರುತ್ತಾರೆ ಎಂಬುದು ಅಂತಹವರನ್ನು ಗಮನಿಸಿದರೆ ಗೊತ್ತಾಗುತ್ತದೆ. ಏನನ್ನಾದರೂ ಸಾಧಿಸಬೇಕೆಂದರೆ ಮೊದಲು ನಾವು ಮಾಡಬೇಕಾದ ಕೆಲಸಗಳೇನು, ಅದಕ್ಕಾಗಿ ಕೊಡುವ ಸಮಯವೇನು ಎಂಬುದನ್ನು ನಿರ್ಧರಿಸಿ ತಕ್ಕಂತೆ ಯೋಜಿಸಬೇಕು. ಮನಸ್ಸಿನಲ್ಲಿ ದೊಡ್ಡ ದೊಡ್ಡ ಯೋಜನೆಗಳನ್ನು ಇಟ್ಟುಕೊಂಡು, ಮನಸ್ಸಿನಲ್ಲೇ ಲೆಕ್ಕ ಹಾಕುತ್ತಾ ಕುಳಿತುಬಿಟ್ಟರೆ ಯೋಜನೆಗಳು ಕನಸಿನಲ್ಲೇ ಉಳಿಯುತ್ತವೆ. ಕನಸು ನನಸಾಗಬೇಕಾದರೆ ಅದಕ್ಕಾಗಿ ಬೇಕಾದ ನಿಶ್ಚಿತ ಸಮಯವನ್ನು ಅದಕ್ಕೆ ಕೊಡಲೇಬೇಕು. 
     ನಮ್ಮ ಏಳಿಗೆಯಲ್ಲಿ, ಅಭಿವೃದ್ಧಿಯಲ್ಲಿ ಸುತ್ತಲಿನ ಸಮಾಜದ ಕೊಡುಗೆ ಅಪಾರವಾಗಿದೆ. ಆ ಸಮಾಜಕ್ಕೆ ನಾವೂ ಏನಾದರೂ ಕೊಡದೇ ಇದ್ದರೆ ನಾವು ಸಾಲಗಾರರಾಗಿಬಿಡುತ್ತೇವೆ. ಸಮಾಜದ ಋಣ ತೀರಿಸಲು ಸಮಾಜಕ್ಕಾಗಿಯೂ ದಿನದ ಸ್ವಲ್ಪ ಕಾಲವನ್ನಾದರೂ ಮೀಸಲಿಡುವುದು ನಮ್ಮ ಕರ್ತವ್ಯವಾಗಬೇಕು. ದಿನನಿತ್ಯದ ಕೆಲಸಗಳು, ನಿದ್ದೆ, ಮನೆಕೆಲಸಗಳು, ವ್ಯಾಯಾಮ, ಅಧ್ಯಯನ, ಧ್ಯಾನ, ಇತ್ಯಾದಿಗಳಿಗೆ ನಿಗದಿತ ಸಮಯವನ್ನು ಧಾರಾಳವಾಗಿ ಕೊಟ್ಟರೂ, ದಿನಕ್ಕೆ ಒಂದೆರಡು ಗಂಟೆಗಳನ್ನಾದರೂ ಸಮಾಜ, ದೇಶ, ಧರ್ಮ ಸಂಬಂಧಿತ ಕೆಲಸಗಳಿಗೆ ಸಮಯಾವಕಾಶ ಮಾಡಿಕೊಳ್ಳುವುದು ಕಷ್ಟವೇನಲ್ಲ. ಕಷ್ಟ ಸಮಯದ ಅಭಾವದ್ದಲ್ಲ, ಸೋಮಾರಿ ಮನಸ್ಸಿನದು ಎಂಬುದು ನಮಗೇ ಗೊತ್ತಾಗುತ್ತದೆ. ಸ್ವಂತ ಕೆಲಸಗಳಿಗಲ್ಲದೆ ಸಮಾಜ, ದೇಶಕ್ಕಾಗಿ, ಜನಸೇವೆಗಾಗಿ ಸಮಯವನ್ನು ಮೀಸಲಾಗಿಡುವವರೇ ದೊಡ್ಡವರು ಎನಿಸಿಕೊಳ್ಳುವವರು. ಮನಸ್ಸು ಮಾಡಿದರೆ ನಾವೂ ದೊಡ್ಡವರಾಗಬಹುದು! ನಮಗೂ ಸಮಯವಿದೆ!!
-ಕ.ವೆಂ.ನಾಗರಾಜ್.
**************
[31-03-2014ರ ಜನಮಿತ್ರ ಪತ್ರಿಕೆಯಲ್ಲಿ ಪ್ರಕಟಿತ.]