ಎರಡನೆಯ ಸಲ ಮತ್ತೆ ಫೋನು ರಿಂಗಣಿಸಿದಾಗ ಮನಸ್ಸಿಲ್ಲದ ಮನಸ್ಸಿನಿಂದ ಕಿರಣ ಕರೆ ಸ್ವೀಕರಿಸಿ, "ಸಲೀಮ್, ನಾನು ಅರ್ಜೆಂಟ್ ಕೆಲಸದಲ್ಲಿದೀನಿ. ಆಮೇಲೆ ಮಾತಾಡ್ತೀನಿ" ಎಂದು ಫೋನ್ ಕಟ್ ಮಾಡಿದ. ಆದರೆ ಮತ್ತೆ ಫೋನು ರಿಂಗಣಿಸಿತು. ಸಲೀಮನೇ ಕರೆ ಮಾಡಿದ್ದ. ಕರೆ ಸ್ವೀಕರಿಸಿ ರೇಗಬೇಕೆಂದುಕೊಂಡವನಿಗೆ ಸಲೀಮನೇ, "ಹೋಲ್ಡಾನ್, ಗೆಳೆಯಾ ಹೋಲ್ಡಾನ್. ನೀನು ಯಾವ ಅರ್ಜೆಂಟ್ ಕೆಲಸದಲ್ಲೂ ಇಲ್ಲ ಅಂತ ನನಗೆ ಚೆನ್ನಾಗಿ ಗೊತ್ತು. ನಾನು ನಿನ್ನ ಆಫೀಸ್ ಮುಂದುಗಡೆಯಿಂದಾನೇ ಮಾತಾಡ್ತಾ ಇದೀನಿ. ನೀನು ಈಗ ತಾನೇ ಒಳಗೆ ಹೋಗಿ ಕೂತಿದ್ದೀಯಾ ಅಂತಾನೂ ಗೊತ್ತು. ನಾನೇನೂ ನಿನ್ನ ಟೈಮ್ ವೇಸ್ಟ್ ಮಾಡಲ್ಲ. ಒಂದು ಐದು ಸಾವಿರ ದುಡ್ಡು ಬೇಕಿತ್ತು. ನನಗೆ ನಿನ್ನ ಬಿಟ್ರೆ ಯಾರಿದಾರೆ? ಅದಕ್ಕೆ ಬಂದೆ. ಇಲ್ಲಾ ಅನ್ನಬೇಡ" ಅಂದ. ಕಿರಣ ಹೊರಗೆ ಬಂದು ನೋಡಿದರೆ ಸಲೀಮ ಅಲ್ಲಿ ನಗುತ್ತಾ ನಿಂತಿದ್ದುದನ್ನು ಕಂಡು ಮೈ ಉರಿಯಿತು. ಆದರೂ ಹೊರಗೆ ತೋರಿಸಿಕೊಳ್ಳದೆ, "ಕಳೆದ ವಾರವಿನ್ನೂ ಹತ್ತು ಸಾವಿರ ಇಸ್ಕೊಂಡಿದ್ದೆ. ಈಗ ಮತ್ತೆ ಐದು ಸಾವಿರಾನಾ? ನನಗೆ ದಯವಿಟ್ಟು ಹಿಂಸೆ ಮಾಡಬೇಡ. ಇದೇ ಕೊನೆ ಸಲ ಅಂತ ಪ್ರತಿಸಲಾನೂ ಹೇಳ್ತೀಯಾ. ಮತ್ತೆ ಮತ್ತೆ ಬಂದು ಪ್ರಾಣ ಹಿಂಡ್ತೀಯಲ್ಲೋ" ಅಂದ. ಸಲೀಮ ಹೇಳಿದ, "ನಾನೂ ಮತ್ತೆ ಕೇಳಬಾರದೂ ಅಂತಾನೇ ಇದ್ದೆ ಕಣೋ. ಏನು ಮಾಡಲಿ, ನನ್ನ ಭಾವಮೈದಂಗೆ ಆಕ್ಸಿಡೆಂಟ್ ಆಗಿ ಆಸ್ಪತ್ರೇಲಿ ಇದಾನೆ. ತುರ್ತಾಗಿ ದುಡ್ಡು ಬೇಕಿತ್ತು ಬಂದೆ. ನಿಜಕ್ಕೂ ಇದೇ ಕೊನೆ ಸಲ. ಮತ್ತೆ ನಿನ್ನಾಣೆಗೆ ನಿನ್ನ ಹತ್ರ ದುಡ್ ಕೇಳಲ್ಲ". "ಇವತ್ತು ಸಾಯಂಕಾಲ ಸ್ಟೇಡಿಯಮ್ ಹತ್ತಿರ ಬಾ. ಅಲ್ಲೇ ಮಾತಾಡೋಣ" ಎಂದ ಕಿರಣನಿಗೆ ಸಲೀಮ, "ಖಂಡಿತಾ ಬರ್ತೀನಿ. ನೀನು ದುಡ್ ಕೊಡೋದ್ ಮಾತ್ರ ಮರೀಬೇಡ" ಎಂದು ಹೇಳಿದವನೇ ಕೈಬೀಸುತ್ತಾ ಟ್ಯಾಕ್ಸಿ ಚಲಾಯಿಸಿಕೊಂಡು ಹೊರಟ.
ಕಿರಣನಿಗೆ ತಲೆ ಕೆಟ್ಟುಹೋಯಿತು. ಗ್ರಾಮಲೆಕ್ಕಿಗನಾಗಿ ಕೆಲಸ ಸಿಕ್ಕಿ ಇನ್ನೂ ಆರು ತಿಂಗಳಾಗಿತ್ತಷ್ಟೇ. ಈ ಸಲೀಮನಿಂದ ಹೇಗೆ ಪಾರಾಗುವುದೆಂದು ತಿಳಿಯದೆ ಕುರ್ಚಿಯ ಮೇಲೆ ಕುಳಿತು ಚಿಂತಿಸಲಾರಂಭಿಸಿದ. ಜಾತಿ ಸರ್ಟಿಫಿಕೇಟು, ಪೆನ್ಶನ್ನು, ಆ ಕೆಲಸ, ಈ ಕೆಲಸ ಎಂದು ಬಂದವರಿಗೆ ಸಬೂಬು ಹೇಳಿ ಮಧ್ಯಾಹ್ನ ಬರಲು ಹೇಳಿ ಬೈಕು ಹತ್ತಿ ಸೀದಾ ಮನೆಗೆ ಹೋಗಿ ಮಲಗಿಬಿಟ್ಟ. ತಲೆ ಸಿಡಿದು ಹೋಗುತ್ತಿತ್ತು. ಮನಸ್ಸು ಹಿಂದಿನ ಘಟನೆಗಳನ್ನು ಮೆಲುಕು ಹಾಕಿತು.
ಹಾಗೂ ಹೀಗೂ ಬಿ.ಎ. ಡಿಗ್ರಿ ಮುಗಿಸಿದ ಕಿರಣನಿಗೆ ಎಲ್ಲೂ ನೌಕರಿ ಸಿಗಲಿಲ್ಲ. ಅಪ್ಪ ಸಣ್ಣಸ್ವಾಮಿ ಕೃಷಿ ಇಲಾಖೆಯಲ್ಲಿ ಸೂಪರಿಂಟೆಂಡೆಂಟ್ ಆಗಿದ್ದ. ನೌಕರಿ ಸಿಕ್ಕದ ಮಗನಿಗೆ ಒಂದು ಸಣ್ಣ ದಿನಸಿ ಅಂಗಡಿ ಇಟ್ಟುಕೊಟ್ಟು ವ್ಯಾಪಾರ ಮಾಡಲು ಕೂರಿಸಿದ. ಉಡಾಳ ಕಿರಣನಿಗೆ ಅದರಲ್ಲಿ ಆಸಕ್ತಿಯಿರಲಿಲ್ಲ. ಹೀಗಾಗಿ ನಷ್ಟ ಅನುಭವಿಸಿ ಅಂಗಡಿಯನ್ನು ಆರೇ ತಿಂಗಳಲ್ಲಿ ಮುಚ್ಚಬೇಕಾಯಿತು. ಅಂಗಡಿಯಲ್ಲಿ ಬರುತ್ತಿದ್ದ ಹಣ ಸಲೀಮ ಮತ್ತು ಇತರ ಗೆಳೆಯರೊಂದಿಗೆ ಕುಡಿಯುವುದಕ್ಕೆ, ತಿನ್ನುವುದಕ್ಕೆ, ಇಸ್ಪೀಟು ಆಡುವುದಕ್ಕೆ ಬಳಸಿದರೆ ಅಂಗಡಿ ಮುಚ್ಚದೆ ಇನ್ನೇನಾಗುತ್ತದೆ. ಅಪ್ಪನ ಬೈಗುಳ, ಬುದ್ಧಿವಾದಗಳು ಅವನ ತಲೆಗೆ ನಾಟುತ್ತಿರಲಿಲ್ಲ. ಒಮ್ಮೆ ಖರ್ಚಿಗೆ ಕಿರಣ ಅಪ್ಪನಲ್ಲಿ ಹಣ ಕೇಳಿದಾಗ, ಮಾತಿಗೆ ಮಾತು ಬೆಳೆದು ಅಪ್ಪ ಸಿಟ್ಟಿನ ಭರದಲ್ಲಿ ಮಗನಿಗೆ ಕೆನ್ನೆಗೆ ಹೊಡೆದಿದ್ದ. ಕಿರಣ ಒಬ್ಬನೇ ಇದ್ದಿದ್ದರೆ ಅವನಿಗೆ ಏನೂ ಅನ್ನಿಸುತ್ತಿರಲಿಲ್ಲವೇನೋ, ಆದರೆ ಹೊಡೆಸಿಕೊಂಡಾಗ ಸಲೀಮ ಅಲ್ಲೇ ಇದ್ದುದು ಅವನಿಗೆ ಅವಮಾನವಾದಂತಾಗಿತ್ತು. ಧುಮುಗುಟ್ಟುತ್ತಾ ಸಲೀಮನೊಂದಿಗೆ ಹೊರಟುಬಿಟ್ಟ. ಎರಡು ದಿನ ಮನೆಗೆ ಹೋಗಿರಲಿಲ್ಲ. ವ್ಯಾಪಾರ ಮಾಡಲು ಮನಸ್ಸಿಲ್ಲ, ಕೆಲಸ ಮಾಡಲು ಬೇರೆ ನೌಕರಿಯಿಲ್ಲ. ಕುಡಿಯುವುದಕ್ಕೆ, ಇಸ್ಪೀಟು ಆಡುವುದಕ್ಕೆ ಕಾಸು ಬೇಕು. ಏನು ಮಾಡಬೇಕೆಂದು ತೋಚದವನಿಗೆ ಸಲೀಮನ ಸಲಹೆ ಆಪ್ಯಾಯಮಾನವಾಗಿ ಕಂಡಿತ್ತು. ಸಲೀಮ ಕೇಳಿದ್ದ:
"ನಿನ್ನ ಅಪ್ಪನಿಗೆ ಇನ್ನೂ ಎಷ್ಟು ವರ್ಷ ಸರ್ವಿಸಿದೆ?"
"ವರ್ಷ ಎಲ್ಲಿ ಬಂತು, ಇನ್ನು ಆರು ತಿಂಗಳಿಗೆ ರಿಟೈರಾಗ್ತಾರೆ. ಮುಂದೆ ಏನು ಮಾಡೋದೋ ತೋಚ್ತಾ ಇಲ್ಲ ಕಣೋ."
"ಸರ್ವಿಸಿನಲ್ಲಿ ಇದ್ದಾಗ್ಲೇ ಸತ್ರೆ ಮಕ್ಕಳಿಗೆ ನೌಕರಿ ಕೊಡ್ತಾರೆ. ಹೆಂಡ್ತಿಗೆ ಫ್ಯಾಮಿಲೀ ಪೆನ್ಶನ್ನೂ ಬರುತ್ತೆ ಅಲ್ವೇನೋ?"
"ಅದೇನೋ ಸರಿ. ನಮ್ಮಪ್ಪ ಈ ಆರು ತಿಂಗಳಲ್ಲಿ ಸಾಯ್ತಾರಾ? ಅವರ ಆರೋಗ್ಯ ಸರಿಯಿಲ್ಲ. ಆದರೂ ಈಗಲೇ ಅಂತೂ ಸಾಯಲ್ಲ."
ಸಲೀಮ ಗುಟ್ಟಾಗಿ ಕಿವಿಯಲ್ಲಿ ಏನೋ ಹೇಳಿದ. ನಂತರ ಬಹಳ ಹೊತ್ತು ಇಬ್ಬರೂ ಗುಸು ಗುಸು ಮಾತಾಡಿದರು. ಕಿರಣ ಮನೆಗೆ ವಾಪಸು ಹೋದ. ಮಾಮೂಲಿನಂತೆ ಇರತೊಡಗಿದ.
ನಂತರದಲ್ಲಿ ಒಂದು ದಿನ ಸಣ್ಣಸ್ವಾಮಿ ಬೆಳಿಗ್ಗೆ ಎಂದಿನಂತೆ ಕಛೇರಿಗೆ ನಡೆದು ಹೊರಟಿದ್ದಾಗ ರಸ್ತೆಯ ತಿರುವಿನಲ್ಲಿ ಸಲೀಮ ತನ್ನ ಟ್ಯಾಕ್ಸಿ ನಿಲ್ಲಿಸಿಕೊಂಡು ಯಾರ ಹತ್ತಿರವೋ ಮೊಬೈಲಿನಲ್ಲಿ ಮಾತನಾಡುತ್ತಿದ್ದವನು ಇವರನ್ನು ಕಂಡೊಡನೇ, "ಬನ್ನಿ ಸಾರ್. ನಾನೂ ಆಕಡೇನೇ ಹೋಗ್ತಾ ಇದೀನಿ. ನಿಮ್ಮನ್ನು ಆಫೀಸಿಗೆ ಬಿಟ್ಟು ಹೋಗ್ತೀನಿ" ಅಂತ ಕರೆದ. ಮಗನ ಗೆಳೆಯ ಅಂತ ಅವರೂ ಕಾರು ಹತ್ತಿ ಕುಳಿತರು. ಕಾರು ಚಲಿಸುತ್ತಿದ್ದಂತೆಯೇ ಹಿಂದಿನ ಸೀಟಿನಲ್ಲಿ ಮಗನೂ ಇರುವುದನ್ನು ಕಂಡರು. ಅಸಮಾಧಾನದಿಂದ ಅವನನ್ನು ನೋಡುತ್ತಾ ಕೇಳಿದರು, "ತಿರುಮಲೂರಿಗೆ ಹೋಗಲಿಲ್ಲವಾ?" "ಹೋಗ್ತೀನಪ್ಪಾ. ಸಲೀಮ ತಿರುಮಲೂರು ಮಾರ್ಗವಾಗೇ ಹೋಗ್ತಾ ಇದಾನೆ. ನನಗೆ ಡ್ರಾಪ್ ಕೊಡ್ತಾನೆ"- ಕಿರಣನ ಉತ್ತರ. ಸಣ್ಣಸ್ವಾಮಿ ಸಲೀಮನನ್ನು ಉದ್ದೇಶಿಸಿ, "ತಿರುಮಲೂರಿನಲ್ಲಿ ನನ್ನ ನೆಂಟ ಗಣೇಶಪ್ಪ ಇದಾನೆ. ಅಲ್ಲಿ ಪೆಟ್ರೋಲ್ ಬಂಕಿನ ಮೇನೇಜರ್ ಪೋಸ್ಟ್ ಕಿರಣಂಗೆ ಕೊಡಿಸ್ತೀನಿ ಅಂತ ಹೇಳಿದಾನೆ. ಅಲ್ಲಾದರೂ ಜಿತವಾಗಿ ಕೆಲಸ ಮಾಡು ಅಂತ ನೀನಾದರೂ ಹೇಳು ಸಲೀಮ" ಅಂದರು. ಸಲೀಮ ಸುಮ್ಮನೆ ನಕ್ಕ. ಮುಂದುವರೆಯುತ್ತಿದ್ದಂತೆ ಕಾರಿನ ಕಿಟಕಿಯ ಬಣ್ಣದ ಗಾಜುಗಳು ಮೇಲೇರಿದವು. ಜನಸಂಚಾರ ಹೆಚ್ಚು ಇಲ್ಲದ ರಸ್ತೆಯಲ್ಲಿ ಕಾರು ಚಲಿಸಿದಾಗ, 'ಟ್ರಾಫಿಕ್ ಅವಾಯ್ಡ್ ಮಾಡಲು ಈ ರಸ್ತೆಯಲ್ಲಿ ಹೋಗುತ್ತಿರುವುದಾಗಿ' ಸಲೀಮನ ವಿವರಣೆ ಬಂದಿತು. ಅಷ್ಟರಲ್ಲಿ ಸಣ್ಣಸ್ವಾಮಿಯ ಕುತ್ತಿಗೆಗೆ ಒಂದು ಬಟ್ಟೆಯ ಕುಣಿಕೆ ಬಲವಾಗಿ ಬಿಗಿಯಲ್ಪಟ್ಟಿತು. ಕೃಶ ಶರೀರ ಹೆಚ್ಚು ಪ್ರತಿರೋಧ ತೋರದೆ ಕುಸಿಯಿತು.
****
ಗಂಡ ಮಧ್ಯಾಹ್ನವೂ ಊಟಕ್ಕೆ ಬರಲಿಲ್ಲ. ಸಾಯಂಕಾಲ ಬೇಗ ಬರ್ತೀನಿ, ದೇವಸ್ಥಾನಕ್ಕೆ ಹೋಗೋಣ ಅಂದಿದ್ದವರು ರಾತ್ರಿ ಎಂಟಾದರೂ ಬರಲಿಲ್ಲವಲ್ಲ ಅಂತ ರಾಜಮ್ಮ ಆತಂಕದಿಂದ ವರಾಂಡಾದಲ್ಲೇ ಕಾದು ಕುಳಿತಿದ್ದರು. ತುಂಬಾ ಹೊತ್ತು ಕುಳಿತಿರಲಾರದೆ ಚಡಪಡಿಸುತ್ತಾ ಓಡಾಡುತ್ತಲೂ ಇದ್ದರು. ಈ ಹಾಳಾದ ಕಿರಣ ತಿರುಮಲೂರಿಗೆ ಹೋಗ್ತೀನಿ ಅಂತ ಹೇಳಿ ಬೆಳಿಗ್ಗೆ ಹೋದವನು ಇನ್ನೂ ಬಂದಿಲ್ಲ ಅಂದುಕೊಳ್ಳುತ್ತಿರುವಾಗಲೇ ಕಿರಣ ಬಂದಿದ್ದ. ಸೀದಾ ತನ್ನ ರೂಮಿಗೆ ಹೋಗುತ್ತಿದ್ದವನನ್ನು ತಡೆದು, "ಅಪ್ಪ ಇನ್ನೂ ಬಂದಿಲ್ಲ ಕಣೋ, ಮಧ್ಯಾಹ್ನ ಊಟಕ್ಕೂ ಬರಲಿಲ್ಲ. ನೀನು ಹೋಗಿ ಒಂದು ಸಲ ನೋಡಿಕೊಂಡು ಬಾರೋ" ಅಂದರು. "ಬರ್ತಾರೆ, ಬಿಡಮ್ಮಾ. ಏನೋ ಕೆಲಸ ಜಾಸ್ತಿ ಇರಬೇಕು" ಅಂದ ಕಿರಣನಿಗೆ ರಾಜಮ್ಮ, "ಇಲ್ಲಾ ಕಣೋ ಅವರು ಯಾವತ್ತೂ ಇಷ್ಟು ಲೇಟು ಮಾಡಿರಲಿಲ್ಲ ಕಣೋ. ಹೋಗ್ಬಾರೋ" ಅಂತಾ ಬೇಡುವ ಧ್ವನಿಯಲ್ಲಿ ಹೇಳಿದರು. ಕಿರಣ ಬೈಕು ಹತ್ತಿ ಹೊರಗೆ ಹೋದವನು ಅರ್ಧ ಘಂಟೆ ನಂತರ ವಾಪಸು ಬಂದ. "ಆಫೀಸು ಬಾಗಿಲು ಹಾಕಿತ್ತಮ್ಮಾ. ಹಳೇಪೇಟೇಲಿ ಇರೋ ಕ್ಲರ್ಕ್ ರಂಗಪ್ಪನ ಮನೆಗೆ ಹೋಗಿ ಬಂದೆ. ಅಪ್ಪ ಇವತ್ತು ಆಫೀಸಿಗೇ ಹೋಗಿಲ್ಲವಂತೆ ಕಣಮ್ಮಾ. ರಜಾನೂ ಹಾಕಿಲ್ಲವಂತೆ. ಎಲ್ಲಿಗೆ ಹೋಗಿದಾರೆ ಅಂತ ನನ್ನನ್ನೇ ಕೇಳಿದರು" ಎಂದು ಹೇಳಿದ್ದನ್ನು ಕೇಳಿ ರಾಜಮ್ಮ ಕುಸಿದು ಕುಳಿತರು. ದುಂಬಾಲು ಬಿದ್ದು ಸಣ್ಣಸ್ವಾಮಿಯ ಸ್ನೇಹಿತರ ಮನೆಗೆಲ್ಲಾ ಅವನೊಂದಿಗೆ ಹೋಗಿಬಂದರು. ಸಣ್ಣಸ್ವಾಮಿಯ ಆಪ್ತ ಸ್ನೇಹಿತ ರುದ್ರಪ್ಪ ಹೇಳಿದಂತೆ ಪೋಲಿಸ್ ಕಂಪ್ಲೇಂಟ್ ಕೊಡಲು ತಾಯಿ ಮಗ ಪೋಲಿಸ್ ಠಾಣೆಗೆ ಹೋದರು. ರುದ್ರಪ್ಪನೂ ಜೊತೆಗೆ ಬಂದಿದ್ದ.
ದೂರು ತೆಗೆದುಕೊಳ್ಳಲು ಸತಾಯಿಸಿದ್ದ ದಫೇದಾರ ಸಬ್ ಇನ್ಸ್‌ಪೆಕ್ಟರ್ ಬರುವವರೆಗೂ ದೂರು ತೆಗೆದುಕೊಂಡಿರಲಿಲ್ಲ. ಅರ್ಧ ಗಂಟೆ ನಂತರದಲ್ಲಿ ಬಂದಿದ್ದ ಸಬ್ಬಿನಿಸ್ಪೆಕ್ಟರ್ ರಾಜಮ್ಮನ ಗೋಳು ನೋಡಲಾರದೆ ದೂರು ತೆಗೆದುಕೊಳ್ಳಲು ಪೇದೆಗೆ ಸೂಚಿಸಿದ್ದರು. 'ಮನೆಯಲ್ಲಿ ಏನಾದರೂ ಜಗಳ ಆಗಿತ್ತಾ? ಅವರಿಗೆ ಆಗದವರು ಯಾರಾದರೂ ಇದ್ದಾರಾ?, ನೆಂಟರಿಷ್ಟರು, ಸ್ನೇಹಿತರು ಯಾರಾದರೊಂದಿಗೆ ಜಗಳ ಆಗಿತ್ತಾ? ಯಾವುದಾದರೂ ಕೋರ್ಟ್ ಕೇಸ್ ಇದೆಯಾ?' ಇತ್ಯಾದಿ ಪ್ರಶ್ನೆಗಳಿಗೆ 'ಅಂತಹುದೇನೂ ಇಲ್ಲ. ಅವರು ಕಾಣೆ ಆಗೋದಿಕ್ಕೆ ಕಾರಣವೇ ಇಲ್ಲ' ಎಂದು ತಾಯಿ, ಮಗ ಇಬ್ಬರೂ ಹೇಳಿದ್ದರು. 'ಸಣ್ಣಸ್ವಾಮಿ ತುಂಬಾ ಸಂಭಾವಿತ' ಅಂತ ರುದ್ರಪ್ಪನ ಶಿಫಾರಸೂ ಸೇರಿತು. 'ವಿಚಾರಿಸ್ತೀವಿ. ಬರ್ತಾರೆ ಬಿಡಮ್ಮಾ. ಏನೋ ಕಾರಣ ಇರತ್ತೆ, ಎಲ್ಲಿಗೋ ಹೋಗಿರ್ತಾರೆ. ಬಂದ ಮೇಲೆ ತಿಳಿಸದೇ ಇರಬೇಡಿ' ಎಂದು ಹೇಳಿ ಸಬ್ಬಿನಿಸ್ಪೆಕ್ಟರ್ ಅವರನ್ನು ಸಾಗಹಾಕಿದರು. ಅಳುತ್ತಲೇ ರಾಜಮ್ಮ ಮನೆಗೆ ಬಂದರು. ಅಂದು ರಾತ್ರಿ ಊಟ ಮಾಡಲು ಮನಸ್ಸಾಗದೆ ಹಾಗೇ ಇದ್ದವರಿಗೆ ಅದು ಯಾವಾಗಲೋ ನಿದ್ದೆ ಬಂದಿತ್ತು.
. . .(ಮುಂದುವರೆಯುವುದು)
ಗಣೇಶ
ಪ್ರತ್ಯುತ್ತರಅಳಿಸಿ:( ತಪ್ಪಾ ಮಾಡಿದ ಮೇಲೆ ಶಿಕ್ಷೆ ಅನುಭವಿಸಲೇ ಬೇಕು.. http://www.youtube.com/watch?v=i7GhWOhWLQk
ನಾಗೇಶ ಮೈಸೂರು
+1. ಜತೆಗೆ ತಪ್ಪಿಗೆ ಶಿಕ್ಷೆ ಅನುಭವಿಸುವಾಗಿನ ಸಂಕಟ, ಯಾತನೆ ಮತ್ತಷ್ಟು ತಪ್ಪೆಸಗುವಂತೆ ಪ್ರಲೋಭಿಸಿ, ಮತ್ತಷ್ಟು ನೀರು ಕುಡಿಯುವಂತೆ ಮಾಡುವ ಡಬಲ್ ಪರಿಣಾಮದ ಕಾಟ ಬೇರೆ..
kavinagaraj
ಡಬಲ್ ತಪ್ಪಿಗೆ ಡಬಲ್ ಶಿಕ್ಷೆ! ಆಗಲೇಬೇಕು. ದನ್ಯವಾದ, ನಾಗೇಶರೆ.
kavinagaraj
:) ಗಣೇಶರೇ, ಈಗಲೇ ಅಂತ್ಯ ಹೇಳಲೆಬಾರ್ದು!! ಹಾಡಿನ ಲಿಖಿಗೆ ಧನ್ಯವಾದಗಳು.