ನಿಂದಕರ ವಂದಿಸುವೆ ನಡೆಯ ತೋರಿಹರು
ಮನೆಮುರುಕರಿಂ ಮನವು ಮಟ್ಟವಾಗಿಹುದು |
ಕುಹಕಿಗಳ ಹರಸುವೆ ಮತ್ತೆ ಪೀಡಕರ
ಜರೆವವರು ಗುರುವಾಗರೇ ಮೂಢ ||
ದೂರುವವರು, ದೂಷಿಸುವವರು ಇರುವ ಕಾರಣದಿಂದಲೇ ಜನರು ತಮ್ಮ ನಡವಳಿಕೆಯ ಬಗ್ಗೆ ಎಚ್ಚರದಿಂದಿರುತ್ತಾರೆ. ಪಕ್ಷಿಗಳಿಗೆ ಅಪಾಯವಿರದಿರುತ್ತಿದ್ದರೆ ಅವು ನಿರಾತಂಕವಾಗಿ ಓಡಾಡಿಕೊಂಡಿದ್ದು ಹಾರುವುದನ್ನೇ ಮರೆತುಬಿಡುತ್ತಿದ್ದವಲ್ಲವೇ? ಅದೇ ರೀತಿ ನಿಂದಕರಿಂದಾಗಿ ಜನರು ತಪ್ಪು ಮಾಡಬಯಸುವುದಿಲ್ಲ. ದೂರುವುದು, ದೂಷಿಸುವುದು ಒಂದು ಹಂತದವರೆಗೆ ಒಳ್ಳೆಯದು. ತಪ್ಪನ್ನು ಸರಿಯಾಗಿಸುವ ದೃಷ್ಟಿಯಿಂದ ಮಾಡುವ ನಿಂದನೆಗಳು ಒಳ್ಳೆಯದು. ಆದರೆ ನಿಂದನೆ, ದೂಷಣೆಗಳನ್ನೇ ಹವ್ಯಾಸವಾಗಿರಿಸಿಕೊಂಡ, ದೂಷಣೆಯಲ್ಲೇ ಮತ್ತು ಅದರಿಂದ ಇತರರಿಗೆ ಆಗುವ ಹಿಂಸೆಯಿಂದಲೇ ಸಂತೋಷ ಪಡುವ ಮನೋಭಾವ ಹೊಂದಿದ ಕೆಲವು ವಿಕ್ಷಿಪ್ತ ಮನಸ್ಕರಿಂದ ಸಮಸ್ಯೆಗೆ ಪರಿಹಾರ ಸಿಗುವುದಿರಲಿ, ಸಮಸ್ಯೆ ಇನ್ನೂ ಜಟಿಲವಾಗುತ್ತದೆ. ತಪ್ಪು ಕಂಡು ಹಿಡಿಯುವುದು ಸುಲಭ; ದೂರುವುದೂ ಸುಲಭ; ಆದರೆ ಅದಕ್ಕೆ ಪರಿಹಾರದ ದಾರಿಯನ್ನು ಸೂಚಿಸುವುದು ಮತ್ತು ಅದರಂತೆ ನಡೆಯುವುದು ಉತ್ತಮವಾದ ನಡವಳಿಕೆಯೆನಿಸುತ್ತದೆ. ಮನಸ್ಸು ಶಾಂತ ಸ್ಥಿತಿಯಲ್ಲಿ ಇರಬೇಕೆಂದರೆ ಮೊದಲು ಇತರರಲ್ಲಿ ತಪ್ಪು ಕಂಡು ಹಿಡಿಯಲು ಹೋಗದೆ, ತಮ್ಮ ತಪ್ಪುಗಳನ್ನು ಗುರುತಿಸಿಕೊಂಡು ತಿದ್ದಿ ನಡೆಯುವುದನ್ನು ಅಭ್ಯಸಿಸಬೇಕು. ಇತರರ ತಪ್ಪುಗಳ ಬಗ್ಗೆಯೇ ಚಿಂತಿಸುವುದು ಮತ್ತು ಎತ್ತಿ ಆಡುವುದರಿಂದ ಹಾಳಾಗುವುದು ಅವರ ನೆಮ್ಮದಿಯೇ. ನೆಮ್ಮದಿ ಹಾಳಾಗುವುದೆಂದರೆ ನಾಶದ ಹಾದಿ ಹಿಡಿದಂತೆಯೇ ಸರಿ.
ಅದರದು ಮನ ಕುಹಕಿಗಳ ಕುಟುಕಿಗೆ
ಬೆದರದು ತನು ಪಾತಕಿಗಳ ಧಮಕಿಗೆ |
ಮುದುಡುವುದು ಮನವು ಕದಡುವುದು
ಪ್ರಿಯರ ಹೀನೈಕೆಗೆ ಹೀಗೇಕೋ ಮೂಢ ||
ಸಂಸ್ಕೃತದ ಒಬ್ಬ ಹೆಸರಾಂತ ಕವಿ ಭಾರವಿಯ ಕಥೆ ಇಲ್ಲಿ ಪ್ರಸ್ತುತವೆನಿಸುತ್ತದೆ. ಬುದ್ಧಿವಂತ ಮತ್ತು ಉತ್ತಮ ಕವಿಯಾಗಿದ್ದ ಭಾರವಿಯ ಬಗ್ಗೆ ಸುತ್ತಮುತ್ತಲಿನ ಜನರು ಮೆಚ್ಚುಗೆಯ ಮಾತನಾಡುತ್ತಿದ್ದರು. ಆದರೆ ಭಾರವಿಯ ತಂದೆ ಮಾತ್ರ ಅವನನ್ನು 'ನೀನೇನು ಮಹಾ ಮೇಧಾವಿ ಎಂದು ಮೂದಲಿಸುತ್ತಿದ್ದರು. ತಂದೆಯ ಮೆಚ್ಚುಗೆ ಗಳಿಸಲು ಅವನು ಮಾಡಿದ ಪ್ರಯತ್ನಗಳು ಕೈಗೂಡದಿದ್ದಾಗ, ತನ್ನ ವಿದ್ಯೆಯನ್ನು ಎಲ್ಲರೂ ಗೌರವಿಸುತ್ತಿದ್ದರೂ ತನ್ನ ತಂದೆ ಮಾತ್ರ ಹೀಯಾಳಿಸುತ್ತಿದ್ದರಿಂದ ಮನನೊಂದ ಭಾರವಿಗೆ ತಂದೆಯ ಮೇಲೆ ದ್ವೇಷಭಾವನೆ ಒಡಮೂಡಿತು. ಅದು ಎಷ್ಟರ ಮಟ್ಟಿಗೆ ಹೋಗಿತ್ತೆಂದರೆ, ಒಂದು ದಿನದ ಮನೆಯ ಅಟ್ಟದ ಮೇಲೆ ಹಿಟ್ಟು ಬೀಸುವ ಕಲ್ಲನ್ನು ಇಟ್ಟುಕೊಂಡು ಅಡಗಿ ಕುಳಿತಿದ್ದ ಭಾರವಿ, ರಾತ್ರಿ ತಂದೆ ಮಲಗಿದ ಸಂದರ್ಭದಲ್ಲಿ ಆತನ ತಲೆಯ ಮೇಲೆ ಅದನ್ನು ಎತ್ತಿ ಹಾಕಿ ಕೊಲ್ಲಲು ಹೊಂಚು ಹಾಕಿದ್ದ. ಅಂದು ರಾತ್ರಿ ಊಟದ ನಂತರ ಮಲಗುವ ವೇಳೆಯಲ್ಲಿ ಭಾರವಿಯ ತಾಯಿ, ತನ್ನ ಗಂಡನೊಂದಿಗೆ ಮಾತನಾಡುತ್ತಾ, "ನೀವು ಅದೇಕೆ ಭಾರವಿಯನ್ನು ಸದಾ ಮೂದಲಿಸುತ್ತಿರುತ್ತೀರಿ? ಅವನು ನಿಜಕ್ಕೂ ಎಷ್ಟೊಂದು ಜಾಣ. ಎಲ್ಲರೂ ಅವನನ್ನು ಹೊಗಳುವಾಗ ನನಗಂತೂ ಬಹಳ ಸಂತೋಷವಾಗುತ್ತಿರುತ್ತದೆ" ಎಂದಳು. ಅದಕ್ಕೆ ಭಾರವಿಯ ತಂದೆ, "ನನಗೇನು ಸಂತೋಷವಾಗುವುದಿಲ್ಲವೆಂದು ತಿಳಿದೆಯಾ? ಅವನಂತಹ ಮಗನನ್ನು ಪಡೆದಿದ್ದಕ್ಕೆ ನನಗೆ ಹೆಮ್ಮೆ ಅನಿಸುತ್ತದೆ. ಅವನನ್ನು ಹೊಗಳಿದರೆ, ಅವನ ಸಾಧನೆ ಮೊಟಕಾಗುತ್ತದೆ. ಅವನು ಇನ್ನೂ ಹೆಚ್ಚು ಹೆಚ್ಚು ಬೆಳೆದು ಪ್ರಖ್ಯಾತಿ ಹೊಂದಬೇಕು. ಅದಕ್ಕೋಸ್ಕರ ಹಾಗೆ ಮಾಡುತ್ತಿದ್ದೆ. ಹೋಗಲಿ ಬಿಡು, ನಿನಗೆ ನೋವಾಗುವುದಾದರೆ ಇನ್ನು ಮುಂದೆ ಸುಮ್ಮನಿದ್ದುಬಿಡುತ್ತೇನೆ" ಎಂದನಂತೆ. ಆ ಮಾತುಕತೆಯನ್ನು ಭಾರವಿ ಕೇಳಿಸಿಕೊಂಡಿರದಿದ್ದರೆ ತಂದೆಯನ್ನು ಕೊಂದುಬಿಡುತ್ತಿದ್ದನೇನೋ! ಪಶ್ಚಾತ್ತಾಪದ ಭಾರದಿಂದ ಕುಸಿದು ಅಟ್ಟದಿಂದ ಕೆಳಗಿಳಿದು ಬಂದ ಭಾರವಿ ತಂದೆಯ ಕಾಲು ಹಿಡಿದು ಕಣ್ಣೀರುಗರೆಯುತ್ತಾ ಕ್ಷಮೆ ಕೇಳಿದನಂತೆ. ನಂತರದಲ್ಲಿ ಭಾರವಿಯ ಅಹಂ ಕ್ಷೀಣಿಸಿ ನಿಜವಾದ ಪಂಡಿತನಾಗಿ ಬೆಳೆದ ಎನ್ನುತ್ತಾರೆ. ಇಲ್ಲಿ ಮಗ ಮುಂದಕ್ಕೆ ಬರಲೆಂಬ ಕಾರಣದಿಂದ ತಂದೆ ಆತನನ್ನು ಮೂದಲಿಸುತ್ತಿದ್ದ ಎಂಬುದನ್ನು ಗಮನಿಸಬೇಕು. ಮಕ್ಕಳ ಪ್ರಗತಿಗಾಗಿ ಇಂತಹ ಬ್ರೇಕುಗಳನ್ನು ಪೋಷಕರು ಜಾಣತನದಿಂದ ಬಳಸಬೇಕು. ಏಕೆಂದರೆ ಸೂಕ್ಷ್ಮ ಮನಸ್ಸಿನ ಇಂದಿನ ಮಕ್ಕಳು ಅನಾಹುತಗಳನ್ನು ಮಾಡಿಕೊಂಡಿರುವ ಸುದ್ದಿಗಳನ್ನು ಕಾಣುತ್ತಿರುತ್ತೇವೆ, ಕೇಳುತ್ತಿರುತ್ತೇವೆ.
ಅಷ್ಟಕ್ಕೂ ಒಬ್ಬರನ್ನೊಬ್ಬರು ದೂರುವುದಾದರೂ ಏಕೆ? ಈ ಪ್ರಪಂಚದಲ್ಲಿ ಒಬ್ಬರು ಇದ್ದಂತೆ ಇನ್ನೊಬ್ಬರು ಇರುವುದಿಲ್ಲ. ಒಬ್ಬೊಬ್ಬರ ಸ್ವಭಾವ ಒಂದೊಂದು ತರಹ. ಎಲ್ಲರೂ ತಮ್ಮಂತೆಯೇ ಇರಬೇಕು, ತಮ್ಮಂತೆಯೇ ವಿಚಾರ ಹೊಂದಿರಬೇಕು, ತಮ್ಮ ವಿಚಾರವನ್ನು ಎಲ್ಲರೂ ಒಪ್ಪಬೇಕು ಎಂಬ ಅಂತರ್ಗತ ಅನಿಸಿಕೆಯೇ ದೂರುವುದಕ್ಕೆ ಮೂಲ. ಒಂದೇ ಕುಟುಂಬದ ಸದಸ್ಯರುಗಳೂ, ಒಂದೇ ಸಂಘ-ಸಂಸ್ಥೆಯ ಸದಸ್ಯರುಗಳೂ, ಆತ್ಮೀಯರೆಂದು ಭಾವಿಸುವ ಸ್ನೇಹಿತರ ವಲಯದಲ್ಲೂ ಪರಸ್ಪರ ಹೊಂದಾಣಿಕೆ ಆಗದ ಅನೇಕ ಸಂಗತಿಗಳು ಇರುತ್ತವೆ. ಆದರೂ ಇವರುಗಳು ಹೊಂದಿಕೊಂಡು ಹೋಗುವುದಕ್ಕೆ ಹೆಚ್ಚಿನ ಸಂಗತಿಗಳು ಪರಸ್ಪರರಿಗೆ ಒಪ್ಪಿಗೆಯಾಗುವುದೇ ಕಾರಣ. ನಾವು ಇತರರೊಂದಿಗೆ ಹೊಂದಿಕೊಂಡುಹೋಗುತ್ತೇವೆಂದರೆ ಅವರ ನ್ಯೂನತೆಗಳನ್ನು ನಾವು ಸಹಿಸಿಕೊಳ್ಳುತ್ತೇವೆ ಎಂದು ಅರ್ಥ. ಹಾಗೆಯೇ, ಇತರರು ನಮ್ಮೊಂದಿಗೆ ವಿಶ್ವಾಸವಾಗಿರುತ್ತಾರೆಂದರೆ ಅವರು ನಮ್ಮ ತಪ್ಪುಗಳನ್ನು ಸಹಿಸಿಕೊಳ್ಳುತ್ತಾರೆ ಎಂದು ತಿಳಿಯಬೇಕು.
ಕಾಂಗ್ರೆಸ್ ಪಕ್ಷದಲ್ಲಿ ಮದ್ಯಪಾನ ನಿಷೇಧ ಮಾಡಬೇಕೆಂಬ ಮನಸ್ಸಿನವರೂ ಇದ್ದಾರೆ; ನಿರುದ್ಯೋಗಿಗಳಿಗೆ ಮದ್ಯದಂಗಡಿಗಳನ್ನು ತೆರೆಯಲು ಲೈಸೆನ್ಸ್ ಕೊಡಬೇಕೆನ್ನುವವರೂ ಇರುತ್ತಾರೆ. ಇದನ್ನು ಕಾಂಗ್ರೆಸ್ಸಿನ ತಪ್ಪು ಎನ್ನಲಾಗುತ್ತದೆಯೇ? ಭಾರತದ ಸ್ವಾತಂತ್ರ್ಯಕ್ಕಾಗಿ ಪ್ರಾಣವನ್ನೇ ಪಣಕ್ಕಿಟ್ಟು ಹೋರಾಡಿದ, ಅಂಡಮಾನಿನ ನರಕ ಸದೃಶ ಕಾರಾಗೃಹದಲ್ಲಿ ಕಠಿಣ ಶಿಕ್ಷೆ ಅನುಭವಿಸಿ ಅರೆಜೀವವಾದ ವೀರ ಸಾವರ್ಕರರ ಕುರಿತು ಅಂಡಮಾನಿನ ಜೈಲಿನ ಕಂಬದಲ್ಲಿ ಇದ್ದ ಲೇಖವನ್ನು ಕಾಂಗ್ರೆಸ್ ಮಂತ್ರಿ ಮಣಿಶಂಕರ ಅಯ್ಯರರು ಅಳಿಸಿಹಾಕಿಸುತ್ತಾರೆ. ಸ್ವಹಿತಾಸಕ್ತಿಯಿಂದ ಕೆಲವು ಕಾಂಗ್ರೆಸ್ಸಿಗರು ಮಾಡುವ ಇಂತಹ ಕುಕೃತ್ಯಗಳಿಗೆ ಕಾಂಗ್ರೆಸ್ ಪಕ್ಷವನ್ನು ದೂಷಿಸಬೇಕೆ? ಹಿಂದೂ ಮಹಾಸಭಾದ ನಾಥುರಾಮ ಗೋಡ್ಸೆ ಗಾಂಧಿ ಹತ್ಯೆ ಮಾಡಿದ್ದಕ್ಕಾಗಿ ಆರೆಸ್ಸೆಸ್ಸನ್ನು ದೂಷಿಸುವುದು ಎಷ್ಟರ ಮಟ್ಟಿಗೆ ಸರಿ? ದೂಷಿಸುವಾಗ ಪೂರ್ವಾಗ್ರಹ ಪೀಡಿತರಾಗುತ್ತಾರೆಂಬುದಕ್ಕೆ ಇವನ್ನು ಉದಾಹರಿಸಿದ್ದಷ್ಟೆ. ಒಬ್ಬ ವ್ಯಕ್ತಿ ಯಾವುದಾದರೂ ಒಂದು ಸಂಘಕ್ಕೋ, ಸಂಸ್ಥೆಗೋ, ಒಂದು ವಿಚಾರಕ್ಕೋ ಸಹಮತಿ ಹೊಂದಿದ್ದಾನೆಂದಾಕ್ಷಣ ಅವನು ಮಾಡುವ ಎಲ್ಲಾ ಕೆಲಸಗಳಿಗೂ ಆ ಸಂಘ/ಸಂಸ್ಥೆ/ವಿಚಾರವನ್ನು ಹೊಣೆಯಾಗಿಸಬಾರದಲ್ಲವೇ? ಸರ್ಕಾರದ ಹಿರಿಯ ಅಧಿಕಾರಿಯಾಗಿರುವ ಶ್ರೀ ಮದನಗೋಪಾಲರನ್ನು ಅವರು ರಾಯಚೂರಿನಲ್ಲಿ ಜಿಲ್ಲಾಧಿಕಾರಿಯಾಗಿದ್ದಾಗ ನಕ್ಸಲೈಟ್ ಎಂಬ ಹಣೆಪಟ್ಟಿ ಹಚ್ಚಿ ಅಮಾನತ್ತು ಮಾಡಿದ್ದರು. ಅಮಾನತ್ತಿಗೆ ಮೂರು ಕಾರಣಗಳನ್ನು ಕೊಟ್ಟಿದ್ದರು: ಒಂದು, ಅವರು ಕೆಲಸಗಳನ್ನು ನಿರ್ಲಕ್ಷಿಸಿ ಹಳ್ಳಿಗಳಲ್ಲಿ ಪರಿಶಿಷ್ಟ-ಜಾತಿ/ಪಂಗಡಗಳ ಕಾಲೋನಿಗಳಲ್ಲಿ ಪ್ರವಾಸ ಮಾಡುತ್ತಾರೆಂದು, ಎರಡು, ಭ್ರಷ್ಟಾಚಾರದ ವಿರುದ್ಧ ಮಾತನಾಡಿ ಸರ್ಕಾರವನ್ನು ಟೀಕಿಸುತ್ತಾರೆಂದು, ಮತ್ತು ಮೂರು, ಪರ್ಯಾಯ ಮೌಲ್ಯಗಳ ಬಗ್ಗೆ ಮಾತನಾಡಿ ಜನರನ್ನು ಬೇರೆ ನಾಯಕತ್ವದ ಬಗ್ಗೆ ಪ್ರಚೋದಿಸುತ್ತಾರೆಂದು. ಅವರು ಭಾರತ ಸರ್ಕಾರಕ್ಕೆ ಮೇಲುಮನವಿ ಮಾಡಿಕೊಂಡರು. ಸರ್ಕಾರ ಕೊನೆಗೆ ಅಮಾನತ್ತು ರದ್ದು ಪಡಿಸಿತು. ಇದೇ ಅಧಿಕಾರಿಯನ್ನು ಅವರು ಹಿಂದೆ ನಂಜನಗೂಡಿನಲ್ಲಿ ಉಪವಿಭಾಗಾಧಿಕಾರಿಯಾಗಿದ್ದಾಗ ಅಕ್ರಮವಾಗಿ ಕೇರಳದ ಮೂಲಕ ಗೋವುಗಳನ್ನು ಸಾಗಿಸುತ್ತಿದ್ದ ವಾಹನವನ್ನು ತಡೆದು ಕೇಸು ದಾಖಲಿಸಿದಾಗ ಆರೆಸ್ಸೆಸ್ಸಿನವರೆಂದು ಪ್ರಚಾರ ಮಾಡಿದ್ದರು.
ಮರುಭೂಮಿಯಲೊಂದು ತರುವ ಕಾಣಲಹುದೆ?
ಖೂಳತನದ ಖಳನೊಳಿತು ಮಾಡುವನೆ? |
ಕೊಂಕುಸುರುವ ಡೊಂಕ ಮನವೊಡೆವ ಕೆಡುಕನ
ಪುಣ್ಣನರಸುವ ನೊಣನೆಂದೆಣಿಸು ಮೂಢ ||
ಕೆಲವರು ಕೆಲವೊಂದು ವಿಷಯಗಳಿಗೆ ಸಂಬಂಧಿಸಿದಂತೆ ಬದಲಾಗದ ಅಭಿಪ್ರಾಯಗಳನ್ನು ಹೊಂದಿರುತ್ತಾರೆ. ಅಂತಹವರು ಮುಂದೊಮ್ಮೆ ತಮ್ಮ ಅಭಿಪ್ರಾಯ ತಪ್ಪೆಂದು ಕಂಡಾಗಲೂ ತಿದ್ದಿಕೊಳ್ಳಲು ಮನಸ್ಸು ಮಾಡುವುದಿಲ್ಲ. ತಾವು ತಿಳಿದಿರುವುದೇ ಸತ್ಯ, ಇತರರು ಹೇಳುವುದೆಲ್ಲಾ ಸುಳ್ಳು, ತಪ್ಪು ಎಂದೇ ವಾದಿಸುತ್ತಾರೆ. ಹಾಗೆ ವಾದಿಸುವಾಗ ಉದ್ವೇಗದಿಂದ ಅನುಚಿತ ಪದಗಳನ್ನೂ ಬಳಸುತ್ತಾರೆ. ಇದು ಹಲವರ ಮನಸ್ಸನ್ನು ನೋಯಿಸುತ್ತದೆ. ಇದಕ್ಕೆ ಮದ್ದಿಲ್ಲ. 'ಕಾಮಾಲೆ ಕಣ್ಣಿನವರಿಗೆ ಲೋಕವೆಲ್ಲಾ ಹಳದಿ' ಎನ್ನುವಂತೆ ಅವರು ಕೆಲವು ವಿಚಾರಗಳಿಗೆ ಸಂಬಂಧಿಸಿದಂತೆ ತಮ್ಮದೇ ಅಭಿಪ್ರಾಯ ಹೊಂದಿದ್ದು, ಇತರರ ವಿಚಾರಗಳನ್ನು ಒಪ್ಪದೇ ದೂಷಿಸುತ್ತಲೇ ಇರುತ್ತಾರೆ. ಪ್ರಪಂಚವನ್ನು ಅದು ಇದ್ದಂತೆಯೇ ನೋಡುವ, ಒಪ್ಪುವ ಮನಸ್ಸು ಇರಬೇಕು. ಮುಕ್ತ ಮನಸ್ಸಿನಿಂದ ಅಭಿಪ್ರಾಯಿಸಬೇಕು. ತಿದ್ದುವ, ತಿದ್ದಿಕೊಳ್ಳುವ ಕೆಲಸವನ್ನು ಮೊದಲು ನಮ್ಮಿಂದಲೇ ಆರಂಭಿಸಬೇಕು. ಯಾರನ್ನಾದರೂ ದೂಷಿಸಿ, ಹಂಗಿಸಿ ಬದಲಾಯಿಸುತ್ತೇವೆ ಎನ್ನುವುದು ಅಸಾಧ್ಯದ ಮಾತು. ಪ್ರೀತಿಸುವವರ ಮಾತನ್ನು ಎಲ್ಲರೂ ಗೌರವಿಸುತ್ತಾರೆ, ದ್ವೇಷಿಸುವವರ ಮಾತನ್ನು ಯಾರೂ ಕೇಳಲಾರರು. ಬದಲಾವಣೆ ಹೃದಯದಿಂದ ಬರಬೇಕು, ಶುದ್ಧ ಮನಸ್ಸಿನಿಂದ ಬರಬೇಕು. ಶುದ್ಧ ಹೃದಯ, ಮನಸ್ಸುಗಳು ಇರುವವರಿಗೆ ಇತರರು ಅಶುದ್ಧರು ಎಂದು ಅನ್ನಿಸುವುದೇ ಇಲ್ಲ. ನಮ್ಮಲ್ಲೇ ಇಲ್ಲದುದನ್ನು ಇತರರಿಂದ ನಿರೀಕ್ಷಿಸಲಾಗುವುದೇ?
ಇನ್ನು ಕೆಲವರು ಇರುತ್ತಾರೆ. ಅವರು ಪ್ರತಿ ವಿಷಯದಲ್ಲೂ ಮೂಗು ತೂರಿಸುವವರು, ಪ್ರತಿ ವಿಷಯದಲ್ಲೂ ಒಂದಲ್ಲಾ ಒಂದು ತಪ್ಪು ಕಂಡು ಹಿಡಿಯುವ ಮನೋಭಾವದವರು. ಇಂತಹವರನ್ನು 'ಮುಖ ಪರಚುವವರು' ಎನ್ನಬಹುದು. ಸಾಮಾನ್ಯವಾಗಿ ತಾವೊಬ್ಬ ಪಂಡಿತ, ಹಿರಿಯ, ಹೆಚ್ಚು ತಿಳಿದವನು ಎಂದುಕೊಂಡಿರುವವರಲ್ಲಿ ಈ ಸ್ವಭಾವ ಕಾಣಬರುತ್ತದೆ. ತಮ್ಮ ಪಾಂಡಿತ್ಯದ ಕುರಿತು ಇತರರ ಗಮನ ಸೆಳೆಯುವುದು ಅವರ ಉದ್ದೇಶವಿರಬಹುದು. ಕೆಲವು ಸಮಯದ ಹಿಂದೆ ಒಂದು ಸಭೆಯಲ್ಲಿ ಹಿರಿಯರೊಬ್ಬರು ಉಪನ್ಯಾಸ ಮಾಡುತ್ತಾ ಒಬ್ಬ ಕವಿಯ ಕವನವನ್ನು ಸಾಂದರ್ಭಿಕವಾಗಿ ಉಲ್ಲೇಖಿಸಿ ಅರ್ಥ ವಿಶ್ಲೇಷಣೆ ಮಾಡುತ್ತಿದ್ದಾಗ, ಎದ್ದು ನಿಂತ ಮಹನೀಯರೊಬ್ಬರು ಆ ಹಿರಿಯರು ಮಾಡಿದ ಅರ್ಥವಿಶ್ಲೇಷಣೆ ತಪ್ಪು, ಅದು ಹಾಗಿರಬೇಕು, ಹೀಗಿರಬೇಕು ಎಂದು ವಾದಿಸತೊಡಗಿದರು. ಸಭಿಕರಿಗೆ ಹಿರಿಯರ ಉಪನ್ಯಾಸ ಮೆಚ್ಚುಗೆಯಾಗಿತ್ತು. ವಾದದಲ್ಲಿ ತೊಡಗಿದ್ದವರ ಬಗ್ಗೆ ಅಸಮಾಧಾನ ಮೂಡಿತ್ತು. ಒಂದು ಸಣ್ಣ ವಿಚಾರವನ್ನು ಎತ್ತಿಕೊಂಡು ರಸಾಭಾಸ ಮಾಡಿದ್ದರಿಂದ ಉಪನ್ಯಾಸಕರಿಗೂ ಬೇಸರವಾಗಿ ಮುಂದೆ ಉಪನ್ಯಾಸ ನೀರಸವಾಗಿ ಮುಗಿದಿತ್ತು. ಈ ವಿಷಯವನ್ನು ಉಪನ್ಯಾಸದ ನಂತರದಲ್ಲಿ ಹಿರಿಯರೊಂದಿಗೆ ಪ್ರತ್ಯೇಕವಾಗಿ ಚರ್ಚಿಸಿದ್ದರೆ ಅವರು ನಿಜಕ್ಕೂ ದೊಡ್ಡವರೆನಿಸುತ್ತಿದ್ದರಲ್ಲವೇ?
ದೂಷಿಸುವವರನ್ನು ದೂಷಿಸುವ ಅಗತ್ಯವಿಲ್ಲ. ಒಂದು ರೀತಿಯಲ್ಲಿ ಅವರು ಒಳ್ಳೆಯದನ್ನೇ ಮಾಡುತ್ತಾರೆ. ಸದುದ್ದೇಶದಿಂದ, ತಪ್ಪನ್ನು ಸರಿ ಮಾಡುವ ಕಾರಣದಿಂದ ಮಾಡುವ ದೂರು ಒಳಿತು ಮಾಡುತ್ತದೆ, ತಿದ್ದಿಕೊಂಡು ನಡೆಯಲು ಸಹಕಾರಿಯಾಗುತ್ತದೆ. ಮುಂದೆ ಎಚ್ಚರಿಕೆಯಿಂದ ನಡೆಯಬೇಕೆಂಬುದನ್ನು ಕಲಿಸುತ್ತದೆ. ಪೂರ್ವಾಗ್ರಹದ ಮತ್ತು ದುರುದ್ದೇಶದ ದೂರುಗಳೂ ಸಹ ನಮ್ಮ ಅನುಭವದ ಖಜಾನೆ ತುಂಬಲು ಸಹಕಾರಿಯಾಗುತ್ತವೆ. ಬೆಳೆಯುವ ಲಕ್ಷಣವೆಂದರೆ, ಇತರರ ತಪ್ಪುಗಳನ್ನು ಗಮನಿಸಿ ದೂರುವ ಪ್ರವೃತ್ತಿ ಬಿಟ್ಟು, ನಮ್ಮ ಸ್ವಂತದ ತಪ್ಪುಗಳನ್ನು ಗುರುತಿಸಿ ತಿದ್ದಿಕೊಂಡು ನಡೆಯಲು ಪ್ರಯತ್ನಿಸುವುದು. ಬೆಳಗ್ಗೆ ಎದ್ದ ತಕ್ಷಣ ಬೆಳಕು, ಶಕ್ತಿ, ಆಹಾರ, ಜೀವನ ಮತ್ತು ನಮಗೆ ಅಗತ್ಯವಾದ ಎಲ್ಲವನ್ನೂ ಕೊಟ್ಟಿರುವ ಭಗವಂತನಿಗೆ/ದಿವ್ಯ ಶಕ್ತಿಗೆ ಧನ್ಯವಾದ ಅರ್ಪಿಸಬೇಕು. ಹೀಗೆ ಧನ್ಯವಾದ ಅರ್ಪಿಸಲು ಕಾರಣವಿಲ್ಲವೆಂದು ನಾವು ಭಾವಿಸಿದರೆ, ತಪ್ಪು ನಮ್ಮಲ್ಲಿಯೇ ಇರುತ್ತದೆ. ನಾವು ನಮ್ಮ ಹಿರಿಯರನ್ನು, ಸೋದರ-ಸೋದರಿಯರನ್ನು, ಸಮಾಜವನ್ನು ದೂರುತ್ತೇವೆ, ನಮ್ಮನ್ನು ಮಾತ್ರ ದೂರಿಕೊಳ್ಳುವುದಿಲ್ಲ. ಬದಲಾಗಬೇಕಾದುದು ಅವರುಗಳಲ್ಲ, ನಾವೇ ಎಂಬ ಅರಿವು ಮೂಡಿದರೆ ನಾವು ಇತರರನ್ನು ದೂರುವುದಿಲ್ಲ. ನಮ್ಮ ಅತ್ಯಂತ ಘೋರವಾದ ತಪ್ಪುಗಳನ್ನೂ ನಾವು ಕ್ಷಮಿಸಿಕೊಂಡುಬಿಡುತ್ತೇವೆ. ಹಾಗಿರುವಾಗ, ಇತರರ ಸಣ್ಣ ಪುಟ್ಟ ತಪ್ಪುಗಳನ್ನು ಕ್ಷಮಿಸುವಷ್ಟಾದರೂ ನಾವು ದೊಡ್ಡವರಾಗಬಾರದೆ? ದೂರುಗಳಿಂದ ಪಾಠ ಕಲಿಯೋಣ, ಪೂರ್ವಾಗ್ರಹದ ದೂರುಗಳನ್ನು ನಿರ್ಲಕ್ಷಿಸೋಣ, ಇತರರನ್ನು ದೂರದಿರೋಣ.
ನಿಂದನೆಯ ನುಡಿಗಳು ಅಡಿಯನೆಳೆಯುವುವು
ಮೆಚ್ಚುಗೆಯ ಸವಿಮಾತು ಪುಟಿದೆಬ್ಬಿಸುವುದು |
ಪರರ ನಿಂದಿಪರ ಜಗವು ಹಿಂದಿಕ್ಕುವುದು
ವಂದಿತನಾಗು ನಲ್ನುಡಿಯೊಡೆಯನಾಗು ಮೂಢ ||
-ಕ.ವೆಂ.ನಾಗರಾಜ್.
[7-04-2014ರ ಜನಮಿತ್ರ ಪತ್ರಿಕೆಯಲ್ಲಿ ಪ್ರಕಟಿತ 'ಚಿಂತನ']
[7-04-2014ರ ಜನಮಿತ್ರ ಪತ್ರಿಕೆಯಲ್ಲಿ ಪ್ರಕಟಿತ 'ಚಿಂತನ']
ನಿಂದಕರಿರಬೇಕು.. ಇರಬೇಕು.. ಇರಬೇಕು..
ಪ್ರತ್ಯುತ್ತರಅಳಿಸಿಹಂದಿಯಿದ್ದರೆ ಕೇರಿ ಹ್ಯಾಂಗ ಶುದ್ಧಿಯೋ ಹಾಂಗ.. ಎಂದು ಪುರಂದರ ದಾಸರು ಹಾಡಿದ್ದಾರೆ..
ವಂದನೆಗಳು.
ಪ್ರತ್ಯುತ್ತರಅಳಿಸಿnageshamysore on April 12, 2014 - 7:05am
ಅಳಿಸಿಕವಿಗಳೆ ಬಹುಶಃ ನಿಂದಕರಿರದಿದ್ದರೆ ಜೀವನದಲ್ಲಿ ತ್ವರಿತವಾಗಿ ಮೇಲೇರಲು ಅಥವ ರಣೋತ್ಸಾಹದಿಂದ ಮುನ್ನುಗ್ಗಲಿಕ್ಕೆ ಪ್ರೇರಣೆಯೆ ಇರುವುದಿಲ್ಲವೇನೊ? ಇದು ನಿಂದಕರು ಪ್ರಾಯಶಃ ತಮಗರಿವಿಲ್ಲದೆಯೆ ಮಾಡುವ ಪರೋಕ್ಷ ಉಪಕಾರ, ಸಹಾಯವಿರಬೇಕು!
kavinagaraj on April 12, 2014 - 4:30pm
ನಿಂದಕರು ಒಂದು ರೀತಿಯಲ್ಲಿ ನಮ್ಮತನವನ್ನು ಉಳಿಸಿಕೊಳ್ಳಲು, ಬೆಳೆಸಲು 'catalyst' ಗಳಿದ್ದಂತೆ| ಧನ್ಯವಾದ, ನಾಗೇಶರೇ.
Sammilana Suresh
ಅಳಿಸಿSathya....
Sachchidananda Hegde
Kavi Nagaraj, in anticipation of your permission, I have shared this on my Timeline. Thank you very much.
venkatesh on April 13, 2014 - 6:25pm
ಅಳಿಸಿನಿಂದಕರಿದ್ದರೆ ಸೊಗಸು ! ಆದರೆ ಮೋದಿಯವರಿಗೆ ಯಾರೋ ಮೂರ್ಖ ಹೇಳಿದನಲ್ಲ, ಅವರನ್ನು ಕಡಿದು ತುಂಡು ತುಂಡು ಮಾಡತೀನಿ ಅನ್ನೋರು ಬೇಡ ಸಧ್ಯ !
kavinagaraj on April 14, 2014 - 9:19am
ಧನ್ಯವಾದ ವೆಂಕಟೇಶರೇ. ಅಂತಹ ಮಾತುಗಳೂ ಮೋದಿಯವರಿಗೆ ಮತ್ತಷ್ಟು ಬಲ ನೀಡಿದವು!