ಒಬ್ಬ ಸಣಕಲ ವ್ಯಕ್ತಿ ಧಡೂತಿ ಪೈಲ್ವಾನನನ್ನು ಕುರಿತು, 'ಈ ಸಲ ನಿನ್ನನ್ನು ಸುಮ್ಮನೆ ಬಿಟ್ಟಿದ್ದೇನೆ. ಮತ್ತೊಮ್ಮೆ ನನ್ನ ತಂಟೆಗೆ ಬಂದರೆ ನಿನ್ನ ಗತಿ ನೆಟ್ಟಗಿರುವುದಿಲ್ಲ" ಎಂದಾಗ ಪೈಲ್ವಾನ ನಕ್ಕು ಸುಮ್ಮನಿರುತ್ತಾನೆ ಎಂದಿಟ್ಟುಕೊಳ್ಳಿ. ಈಗ ಅಹಿಂಸಾ ತತ್ವವನ್ನು ಪಾಲಿಸಿದವರು ಯಾರು? ಸಣಕಲನೋ, ಪೈಲ್ವಾನನೋ? ನಿಜವಾಗಿ ಹೇಳಬೇಕೆಂದರೆ ಪೈಲ್ವಾನನೇ ಅಹಿಂಸಾ ತತ್ವ ಪಾಲಿಸಿದವನು. ಏಕೆಂದರೆ ಸಣಕಲನ ಮಾತು ಕೇಳಿ ಆತ ತಿರುಗಿಸಿ ಅವನ ಮುಸುಡಿಯ ಮೇಲೆ ಗುದ್ದಿಬಿಡಬಹುದಿತ್ತು. ಹಾಗೆ ಗುದ್ದಿದರೂ ಸಣಕಲ ತಿರುಗಿ ಏನೂ ಮಾಡುವಂತಿರಲಿಲ್ಲ. ಹಿಂಸೆ ಮಾಡಲು ಅವಕಾಶವಿದ್ದರೂ ಮಾಡದಿರುವುದೇ ನಿಜವಾದ ಅಹಿಂಸೆ. ಜಗತ್ತು ಮತ್ತು ಜೀವಗಳ ಉಗಮ ಕಾಲದಿಂದಲೂ ಹಿಂಸೆ, ಅಹಿಂಸೆಗಳ ತಾಕಲಾಟ ಸಾಗುತ್ತಿದೆ, ಸಾಗುತ್ತಲೇ ಇರುತ್ತದೆ.
ಅಹಿಂಸೆಯ ಕೇಂದ್ರಭಾಗದಲ್ಲಿ ಪ್ರೀತಿಯ ತತ್ವವಿದೆ. ಇದನ್ನು ಅರ್ಥ ಮಾಡಿಕೊಳ್ಳುವುದು ಕಷ್ಟವೇನಲ್ಲ. ಎಲ್ಲಿ ಪ್ರೀತಿಯಿರುತ್ತದೋ ಅಲ್ಲಿ ಅಹಿಂಸೆಯಿರುತ್ತದೆ. ಮಾನವನಂತೆ ವಿವೇಚನಾ ಸಾಮರ್ಥ್ಯವಿಲ್ಲದ ಪ್ರಾಣಿಗಳಲ್ಲೂ ಇದನ್ನು ಗುರುತಿಸಬಹುದು. ತಮ್ಮ ಮರಿ, ಸಮೂಹ, ಕುಟುಂಬಗಳನ್ನು ಪ್ರೀತಿಯಿಂದ ಕಾಣುವ ಅವು ಇತರ ಪ್ರಾಣಿಗಳನ್ನು ಕಂಡಾಗ ಕಾದಾಡುತ್ತವೆ, ಬಲಿ ತೆಗೆದುಕೊಳ್ಳುತ್ತವೆ. ಮಾನವರಲ್ಲೂ ಅಷ್ಟೆ, ತಮ್ಮವರು ಅನ್ನುವವರ ಬಗ್ಗೆ ಕೆಡುಕನ್ನು ಅವರು ಬಯಸುವುದಿಲ್ಲ. ಈ ತತ್ವವನ್ನು ವಿಶಾಲವಾಗಿ ನೋಡುತ್ತಾ ಹೋದರೆ ಅಹಿಂಸೆ ಅನ್ನುವುದು ದೇವರ ಗುಣ, ದೇವಮಾನವರ ಗುಣ ಅನ್ನುವುದು ಗೊತ್ತಾಗುತ್ತದೆ. ಅಹಿಂಸೆ ಹೃದಯದಿಂದ ಮೆದುಳಿಗೆ ಮೂಡಿ ಬರುವಂತಹದು. ದೇವರಲ್ಲಿ ಮತ್ತು ಜೀವರಲ್ಲಿ ನಂಬಿಕೆ ಇರುವವರಿಗೆ ಅಹಿಂಸೆ ಅರ್ಥವಾಗುತ್ತದೆ. ಅಹಿಂಸೆ ಮತ್ತು ಸತ್ಯಗಳು ಅವಿನಾಭಾವ ಸಂಬಂಧವಿರುವಂತಹವು.
ಅಹಿಂಸೆಯ ಮಹತ್ವ ಅರ್ಥವಾಗಬೇಕೆಂದರೆ ಹಿಂಸೆಯ ಪರಿಣಾಮಗಳನ್ನು ತಿಳಿಯಬೇಕು. ಒಂದು ಗಾದೆಯಿದೆ, ಹಿಂಸೆ ಪ್ರತಿಹಿಂಸೆಗೆ ಪ್ರಚೋದಿಸುತ್ತದೆ. ಹಿಂಸೆ, ಮಾನಸಿಕವಿರಬಹುದು, ದೈಹಿಕವಿರಬಹುದು ಅದು ಕೊಟ್ಟವರಿಗೂ, ಪಡೆದವರಿಗೂ ಕೇಡು ಮಾಡದೇ ಇರದು. ಹಿಂಸೆ ಕೊಟ್ಟವರಿಗೆ ತಮಗೆ ಪ್ರತಿಯಾಗಿ ತೊಂದರೆ ಮಾಡಿಯಾರೆಂಬ ಭಯ ಕಾಡುತ್ತಿರುತ್ತದೆ. ಅವರು ವಿಶ್ವಾಸ, ಸ್ನೇಹಗಳನ್ನು ಕಳೆದುಕೊಳ್ಳುತ್ತಾರೆ. ಹಿಂಸೆ ಅನುಭವಿಸಿದವರೂ ಸೇಡು ತೀರಿಸಿಕೊಳ್ಳಲು ಹಪಹಪಿಸುತ್ತಾರೆ. ಹಿಂಸೆ ಕೊಟ್ಟವರು ಬಲಶಾಲಿಯಾಗಿದ್ದರೆ ಅವಮಾನದಿಂದ ಕುದಿಯುತ್ತಾರೆ ಮತ್ತು ಸೂಕ್ತ ಸಂದರ್ಭಕ್ಕಾಗಿ ಕಾಯುತ್ತಾರೆ. ಇದರಿಂದಾಗಿ ದೈನಂದಿನ ಚಟುವಟಿಕೆಗಳು ಕುಂಠಿತಗೊಳ್ಳುತ್ತವೆ/ಏರುಪೇರಾಗುತ್ತವೆ. ಮುಂದುವರೆಯುವುದಕ್ಕೆ ಹಿನ್ನಡೆಯಾಗುತ್ತದೆ. ಹಿಂಸೆ ದುರ್ಬಲರ ಮತ್ತು ಪ್ರೀತಿಯಿಂದ ಗೆಲ್ಲಲು ಸಾಧ್ಯವಾಗದ ಹತಾಶ ವ್ಯಕ್ತಿಗಳ ಆಯುಧ. ಭಯಪಡಿಸಿ ಜನರನ್ನು ಆಳುವುದು ಶಾಶ್ವತದ್ದಾಗಿರುವುದಿಲ್ಲ. ಒಮ್ಮೆ ಆ ರೀತಿ ಆಳಿದವರು ದುರ್ಬಲರಾದರೆಂದರೆ ಅವರೂ ಪ್ರತಿಹಿಂಸೆಯ ಬಲಿಪಶುಗಳಾಗುತ್ತಾರೆ. ಸರ್ವಾಧಿಕಾರಿಗಳಾಗಿ ಭಯಪಡಿಸಿ ದೇಶಗಳನ್ನು ಆಳಿದವರು ಕೊನೆಯಲ್ಲಿ ಅಮಾನುಷ ಅಂತ್ಯ ಕಂಡ ಅನೇಕ ಘಟನೆಗಳಿಗೆ ಇತಿಹಾಸ ಸಾಕ್ಷಿಯಾಗಿದೆ. ಅದೇ ನೈಜ ಕಾಳಜಿಯಿಂದ ಆಳಿದವರು ಸೋತಾಗಲೂ ಗೌರವ ಉಳಿಸಿಕೊಂಡಿರುವ ನಿದರ್ಶನಗಳೂ ಕಣ್ಣ ಮುಂದಿವೆ.
ಅಹಿಂಸೆಯ ಶತ್ರು ಕೋಪ ಮತ್ತು ದುರಭಿಮಾನಗಳು. ಅವು ಅಹಿಂಸೆಯನ್ನು ನುಂಗಿ ನೀರು ಕುಡಿಯುತ್ತವೆ. ಕೋಪ ಮತ್ತು ದುರಭಿಮಾನಗಳು ಸಾಮಾನ್ಯರ ಆಸ್ತಿಗಳು. ಅಸಾಮಾನ್ಯರಷ್ಟೇ ಅವನ್ನು ಗೆಲ್ಲಬಲ್ಲರು. ಹಾಗಾಗಿ ಅಹಿಂಸೆ ಅನ್ನುವುದು ಸಾಧಕರ/ಸಜ್ಜನರ ಸ್ವತ್ತು. ಅಹಿಂಸೆ ಅನ್ನುವುದು ಬೆಳವಣಿಗೆಯ ಸಂಕೇತ. ಎಲ್ಲಿಯವರೆಗೆ ನಾವು ಇತರರನ್ನು ಹಿಂಸಿಸುತ್ತಿರುತ್ತೇವೆಯೋ ಅಲ್ಲಿಯವರೆಗೆ ನಾವು ಅಸುರರಾಗಿರುತ್ತೇವೆ, ಮಾನವರಾಗಿರುವುದಿಲ್ಲ. ಕೆಲವು ಸಂದರ್ಭಗಳಲ್ಲಿ ಅಹಿಂಸಾತ್ಮಕರಾಗಿರಲು ನಮಗೆ ಹೆಚ್ಚು ಶಕ್ತಿ, ಹಿಂಸೆ ಮಾಡದಿರಲು ಅಗಾಧ ಮಾನಸಿಕ ಬಲ ಇರಬೇಕಾಗುತ್ತದೆ. ಅಹಿಂಸಾತತ್ವ ಪಾಲಿಸುವವರಿಂದಾಗಿ ಜಗತ್ತು ಸ್ವಲ್ಪವಾದರೂ ಶಾಂತಿಯಿಂದಿದೆ. ಇಲ್ಲವಾದಲ್ಲಿ ಜಗತ್ತು ನಿರಂತರ ರಣಾಂಗಣವಾಗಿರುತ್ತಿತ್ತು!
ಅಯೋಧ್ಯೆಯ ಜ್ವಲಂತ ಉದಾಹರಣೆ ನಮ್ಮ ಮುಂದಿದೆ. ಅಯೋಧ್ಯೆ, ಮಥುರೆ ಮತ್ತು ವಾರಣಾಸಿಗಳಲ್ಲಿದ್ದ ಹಿಂದೂ ದೇವಾಲಯಗಳನ್ನು ಹಿಂದೊಮ್ಮೆ ಮುಸ್ಲಿಮ್ ಆಕ್ರಮಣಕಾರರು ಕೆಡವಿ ಮಸೀದಿಗಳನ್ನು ಕಟ್ಟಿದ್ದರು. ಅಯೋಧ್ಯೆಯಲ್ಲಿ ರಾಮಮಂದಿರ ಕೆಡವಿ ಬಾಬರಿ ಮಸೀದಿ ತಲೆಯೆತ್ತಿತ್ತು. ಬಾಬರಿ ಮಸೀದಿ ಸಹ ಹಲವು ವರ್ಷಗಳ ಹಿಂದೆ ಧ್ವಂಸಗೊಂಡಿತು. ಆದರೆ ವಿವಾದ ಮಾತ್ರ ನಿಲ್ಲದೆ ಮುಂದುವರೆದಿದೆ. ಇತರ ಧರ್ಮ/ಮತ/ವಿಚಾರಗಳ ಬಗೆಗಿನ ಅಹನೆಯೇ ಸಮಸ್ಯೆಯ ಮೂಲವಾಗಿದೆ. ಇದು ನಿಲ್ಲುವುದೆಂದಿಗೆ? ಮಹಾವೀರನ 'ಬಾಳು, ಬಾಳಗೊಡು' ಎಂಬ ಕರೆಯನ್ನು ಕೇಳುವವರು ಯಾರು? ರಾಜಕಾರಣಿಗಳು ಇದನ್ನೇ ಬಂಡವಾಳ ಮಾಡಿಕೊಂಡು ಸಮಸ್ಯೆ ಇತ್ಯರ್ಥವಾಗದಿರುವಂತೆ ನೋಡಿಕೊಂಡು ಸ್ವಂತದ ಲಾಭ ಪಡೆಯುವುದಕ್ಕೆ ಮಾತ್ರ ಗಮನ ಹರಿಸುತ್ತಿರುವುದರಿಂದ ಇದು ಸದ್ಯಕ್ಕೆ ಪರಿಹಾರ ಕಾಣುವ ಲಕ್ಷಣಗಳಿಲ್ಲ.
ಅಹಿಂಸಾತತ್ವ ವೈಯಕ್ತಿಕ ಸಾಧನೆಗೆ ಅತ್ಯುನ್ನತವಾದ ಸಾಧನ. ಇದನ್ನು ಅಳವಡಿಸಿಕೊಂಡವನು ಅಜಾತಶತ್ರುವೆನಿಸುತ್ತಾನೆ. ಹೆಚ್ಚಿನ ಧರ್ಮ, ಮತಗಳು ಅಹಿಂಸೆಗೆ ಮಹತ್ವ ನೀಡಿವೆ. ಆದರೆ ಆಯಾ ಧರ್ಮದ ತಿರುಳನ್ನು ಸರಿಯಾಗಿ ಗ್ರಹಿಸದ, ತಮ್ಮ ಧರ್ಮ/ಮತವೇ ಶ್ರೇಷ್ಠ ಎಂದು ಭಾವಿಸುವುದರೊಂದಿಗೆ ಇತರ ಧರ್ಮ/ಆದರ್ಶಗಳನ್ನು ದ್ವೇಷಿಸುವ ಮನೋಭಾವದ ಕೆಳಸ್ತರದ ಧರ್ಮಾನುಯಾಯಿಗಳು ಹಿಂಸೆಗೆ ಎಳಸುವುದನ್ನು ಕಾಣುತ್ತಿದ್ದೇವೆ. ಹಿಂದೂ, ಬೌದ್ಧ, ಜೈನ ಧರ್ಮಗಳಲ್ಲಿ ಅಹಿಂಸೆಗೆ ಉನ್ನತ ಸ್ಥಾನ ನೀಡಿವೆ. ಇಸ್ಲಾಮ್ ಮತದಲ್ಲೂ ಅಹಿಂಸೆಗೆ ಪ್ರಾಧಾನ್ಯತೆ ಇದ್ದರೂ, ಇತರ ಧರ್ಮೀಯರ ಕುರಿತ ಅಸಹನೆ ಅಶಾಂತಿಗೆ ಎಡೆ ಮಾಡಿಕೊಡುವುದನ್ನು ಕಾಣುತ್ತೇವೆ. ಗಡಿನಾಡ ಗಾಂಧಿ ಎಂದೇ ಹೆಸರಾಗಿದ್ದ ಖಾನ್ ಅಬ್ದುಲ್ ಗಫಾರ್ ಖಾನರ ಈ ಮಾತು ಮನನೀಯವಾಗಿದೆ: 'ಯಾರನ್ನೇ ಆಗಲಿ, ಮಾತಿನಿಂದಾಗಲೀ ಅಥವ ಕೃತಿಯಿಂದಾಗಲೀ ನೋಯಿಸದಿರುವ ಮತ್ತು ದೇವರ ಸ್ಟೃಯ ಜೀವಗಳ ಅನುಕೂಲ ಮತ್ತು ಸಂತೋಷಕ್ಕಾಗಿ ಶ್ರಮಿಸುವ ಮನುಷ್ಯನೇ ಮುಸ್ಲಿಮ. ಸಹಮನುಷ್ಯರನ್ನು ಪ್ರೀತಿಸುವುದೇ ದೇವರ ಮೇಲಿನ ನಂಬಿಕೆ'. ಇದನ್ನು ಅನುಸರಿಸಿದರೆ ಸಮಸ್ಯೆ ಎಲ್ಲಿ ಬಂದೀತು? ಆದರೆ . . .?
ದಕ್ಷಿಣ ಆಫ್ರಿಕಾದ ವರ್ಣಭೇದ ನೀತಿಯ ವಿರುದ್ಧ ಮತ್ತು ಭಾರತದ ಸ್ವಾತಂತ್ರ್ಯ ಹೋರಾಟದ ಸಂದರ್ಭಗಳಲ್ಲಿ ಗಾಂಧೀಜಿಯ ನೇತೃತ್ವದಲ್ಲಿ ನಡೆದ ಅಹಿಂಸಾತ್ಮಕ ವಿಧಾನದ ಹೋರಾಟಗಳು ಉಲ್ಲೇಖನೀಯವಾಗಿವೆ. ಅಹಿಂಸಾತ್ಮಕ ಹೋರಾಟಗಳಿಗೆ ನ್ಯಾಯ, ನೀತಿ, ಮೌಲ್ಯಗಳಿಗೆ ಬೆಲೆ ಕೊಡುವಂತಹವರು ಮಾತ್ರ ಪರಿಗಣಿಸಿಯಾರು. ಕುಟಿಲತೆ, ಕುತಂತ್ರಗಳಿಗೆ ಹೆಸರಾದ ಬ್ರಿಟಿಷರು ಅಹಿಂಸಾತ್ಮಕ ಹೋರಾಟಕ್ಕೆ ಹೆದರಿ ಕಾಲ್ಕಿತ್ತರು ಎಂದು ಹೇಳುವುದು ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ಅಪಚಾರ ಮಾಡಿದಂತೆ ಆಗುತ್ತದೆ. ಅವರು ಅಹಿಂಸೆಗೆ ಬೆಲೆ ಕೊಡುವವರಾಗಿದ್ದರೆ ಜಲಿಯನ್‌ವಾಲಾಬಾಗಿನಲ್ಲಿ ಅಹಿಂಸಾತ್ಮಕವಾಗಿ ನಡೆಸಲಾಗುತ್ತಿದ್ದ ಸಭೆಯನ್ನು ಸುತ್ತುವರೆದು ನಿರ್ದಯವಾಗಿ ಗುಂಡಿನ ಸರಿಮಳೆಗೈದು ಮಕ್ಕಳು, ಮುದುಕರೆನ್ನದೆ ಸಾವಿರಾರು ಭಾರತೀಯರನ್ನು ಹತ್ಯೆ ಮಾಡುತ್ತಿರಲಿಲ್ಲ. ಗಂಡುಗಲಿಗಳಾದ ಸುಭಾಷ್ ಚಂದ್ರ ಬೋಸ್, ಚಂದ್ರಶೇಖರ ಆಜಾದ್, ಭಗತ್ ಸಿಂಗ್, ಸಾವರ್ಕರ್, ವಾಸುದೇವ ಬಲವಂತ ಫಡಕೆ, ಶಿವಾಜಿ, ಕಿತ್ತೂರು ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ, ದೊಂಡಿಯವಾಘನಂತಹ ಅಸಂಖ್ಯ ವೀರ ಶೂರರ ಕೆಚ್ಚೆದೆಯ ಹೋರಾಟಗಳು, ಬಲಿದಾನಗಳನ್ನು ಕಡೆಗಣಿಸಿದರೆ ದ್ರೋಹವೆಸಗಿದಂತೆ ಆಗುತ್ತದೆ. ಇಂತಹವರನ್ನು ಎದುರಿಸಿ ಹಣ್ಣಾಗಿದ್ದ, ಎರಡನೆಯ ವಿಶ್ವಯುದ್ಧದ ಪರಿಣಾಮಗಳನ್ನು ಎದುರಿಸಬೇಕಾಗಿದ್ದ ಸಂದರ್ಭದಲ್ಲಿ ಈ ಸತ್ಯಾಗ್ರಹಗಳೂ ಸೇರಿಕೊಂಡು ಬ್ರಿಟಿಷರು ದೇಶ ಬಿಟ್ಟು ಹೊರಡಬೇಕಾಯಿತು. ಇಂದು ಗಾಂಧಿಯ ಅನುಯಾಯಿಗಳೆಂದು ಹೇಳಿಕೊಳ್ಳುತ್ತಿರುವವರು ಮೇಲೆ ಹೆಸರಿಸಿದಂತಹ ದೇಶಪ್ರೇಮಿಗಳನ್ನು ಕಡೆಗಣಿಸುತ್ತಿರುವುದು ನಿಜಕ್ಕೂ ಅಕ್ಷಮ್ಯವೇ ಸರಿ. ಕೆಲವು ಅನಿವಾರ್ಯ ಸಂದರ್ಭಗಳಲ್ಲಿ ಶತ್ರುಗಳ ವಿರುದ್ಧ ತಕ್ಕ ರೀತಿಯಲ್ಲಿ ವರ್ತಿಸಬೇಕಾಗುತ್ತದೆ. ನೆರೆ ದೇಶ ನಮ್ಮ ಸೈನಿಕರ ರುಂಡಗಳನ್ನು ಕಡಿದು ಚೆಲ್ಲುವಾಗ, ಅಹಿಂಸೆಯ ಮಂತ್ರ ಜಪಿಸಿದರೆ ಅದು ಹೇಡಿತನವೆನಿಸುತ್ತದೆ. ಅಹಿಂಸೆ ನಮ್ಮ ಮೂಲಮಂತ್ರವಾಗಬೇಕು ನಿಜ, ಆದರೆ ಅದು ಹೇಡಿತನದ ಮುಖವಾಡವಾಗಬಾರದು.
ಇತ್ತೀಚೆಗೆ ಅಣ್ಣಾ ಹಜಾರೆಯವರ ನೇತೃತ್ವದಲ್ಲಿ ಭ್ರಷ್ಠಾಚಾರದ ವಿರುದ್ಧ ಪ್ರಬಲ ಲೋಕಪಾಲ್ ಮಸೂದೆ ಜಾರಿಗಾಗಿ ದೇಶಾದ್ಯಂತ ಅದ್ಭುತ ಹೋರಾಟ ನಡೆಯಿತು. ಏನೋ ಒಳ್ಳೆಯದು ಆಗಿಯೇ ಬಿಡುತ್ತದೆ ಎಂದು ದೇಶದ ಜನತೆ ಆಶಾಭಾವದಿಂದ ನೋಡುತ್ತಿದ್ದಂತೆಯೇ ಚಳುವಳಿಯನ್ನು ಹತ್ತಿಕ್ಕುವ ಕೆಲಸವನ್ನು ಆಡಳಿತ ಪಕ್ಷ ಮತ್ತು ವಿರೋಧಪಕ್ಷಗಳವರು ಚಾಣಾಕ್ಷತನದಿಂದ ಮಾಡಿದರು. ಇಂದು ಆಡಳಿತದಲ್ಲಿ ಇರುವ ಹೆಚ್ಚಿನ ಜನಪ್ರತಿನಿಧಿಗಳಾದರೂ ಎಂತಹವರು? ಕೋಟಿ ಕೋಟಿ ಹಣವನ್ನು ಅಕ್ರಮ ರೀತಿಯಲ್ಲಿ ಸಂಗ್ರಹಿಸಿದವರು, ದೇಶದ ಸಂಪತ್ತನ್ನು ಲೂಟಿ ಮಾಡಿದವರು, ಭೂಗತ ದೊರೆಗಳು/ಅವರ ಕೃಪಾಪೋಷಿತರು. ಎಲ್ಲೋ ಅಲ್ಲೊಬ್ಬರು, ಇಲ್ಲೊಬ್ಬರು ಕರಿ ಕಾರ್ಮೋಡದಲ್ಲಿನ ಬೆಳ್ಳಿಮಿಂಚಿನಂತೆ ಸಜ್ಜನ ರಾಜಕಾರಣಿಗಳೂ ಇರಬಹುದು. ಆದರೆ ಅವರು ಮೂಲೆಗೆ ಒತ್ತರಿಸಲ್ಪಟ್ಟಿದ್ದಾರೆ. ಇಂತಹ ಬಲಾಢ್ಯರುಗಳು ಎಂತಹ ಪ್ರಬಲ ಜನಹೋರಾಟವನ್ನೂ ಹತ್ತಿಕ್ಕುವ ಸಾಮರ್ಥ್ಯ ಹೊಂದಿದ್ದಾರೆ. ಸಿ.ಬಿ.ಐ., ಪೋಲಿಸ್, ಅಧಿಕಾರಿಗಳನ್ನು ದಾಳಗಳಾಗಿ ಬಳಸಿಕೊಂಡು ವಿರೋಧಿಗಳನ್ನು ಹತ್ತಿಕ್ಕುತ್ತಾರೆ, ಸಾಧ್ಯವಾದರೆ ಕೊಂಡುಕೊಂಡೂಬಿಡುತ್ತಾರೆ. ಭಂಡತನವನ್ನು ಎಗ್ಗಿಲ್ಲದೆ ಪ್ರದರ್ಶಿಸಿ ತಮ್ಮ ವಿರುದ್ಧ ಯಾರಾದರೂ ಮಾತನಾಡಿದರೆ ಹುಷಾರ್ ಎಂಬ ಸಂದೇಶವನ್ನು ರವಾನಿಸುತ್ತಾರೆ. ಇನ್ನು ಸಾಮಾನ್ಯ ಜನರು ಹೋರಾಡುವುದಿರಲಿ, ಮಾತನಾಡಲೂ ಹಿಂಜರಿಯುವ ಪರಿಸ್ಥಿತಿ ಇದೆ. ಇದನ್ನು ಅಹಿಂಸಾ ಮಾರ್ಗದಿಂದ ಸರಿದಾರಿಗೆ ತರಬಹುದೆ? ಹಾಗೆಂದು ಹಿಂಸಾಮಾರ್ಗದಿಂದಲೂ ಪರಿಹಾರ ಸಾಧ್ಯವಿಲ್ಲ. ಹಿಂಸಾಮಾರ್ಗದಿಂದ ಬದಲಾವಣೆ ತರಬಯಸುವ ನಕ್ಸಲರು, ಕಮ್ಯೂನಿಸ್ಟರು ಜನರಿಂದಲೂ ದೂರವಾಗುವುದಲ್ಲದೆ, ಇತರರ ಪ್ರಾಣಹರಣದ ಜೊತೆಗೆ ತಮ್ಮ ಜೀವಗಳನ್ನೂ ಪಣಕ್ಕಿಡಬೇಕಾಗುತ್ತದೆ. ಜನರಿಂದ ಸ್ವತಃ ದೂರವಾಗಿ, ತಾವೂ ಒಂದೊಮ್ಮೆ ಹತರಾಗಿ ಸಾಧಿಸುವುದಾದರೂ ಏನನ್ನು?
ಭುಗಿಲೆದ್ದ ಜ್ವಾಲಾಗ್ನಿ ಮನೆಯನ್ನೆ ಸುಟ್ಟೀತು
ಹದವರಿತ ಬೆಂಕಿಯದು ಅಟ್ಟುಣಬಡಿಸೀತು |
ಕ್ರೋಧಾಗ್ನಿ ತರದಿರದೆ ಬಾಳಿನಲಿ ವಿರಸ
ಹದವರಿತ ಕೋಪವದು ಹಿತಕಾರಿ ಮೂಢ ||
ಮಾರ್ಟಿನ್ ಲೂಥರ್ ಕಿಂಗ್ ಹೇಳುತ್ತಾರೆ: "ಹಿಂಸೆಯಿಂದ ವರ್ಣಭೇದವನ್ನು ಹತ್ತಿಕ್ಕುವುದು ಅವ್ಯವಹಾರಿಕ ಮತ್ತು ಅನೈತಿಕ. ಹಿಂಸೆ ಪರಿವರ್ತಿಸುವ ಬದಲಿಗೆ ಒತ್ತಾಯಿಸುತ್ತದೆ, ಪ್ರೀತಿಗಿಂತ ದ್ವೇಷ ಮೂಡಿಸುತ್ತದೆ, ಸಹೋದರತ್ವವನ್ನು ನಾಶ ಮಾಡುತ್ತದೆ. ಅದು ಅನುಭವಿಸಿದವರಲ್ಲಿ ಕಹಿಯನ್ನು, ನಾಶ ಮಾಡುವವರಲ್ಲಿ ಕ್ರೂರತೆಯನ್ನು ಉಂಟುಮಾಡುತ್ತದೆ." ಲೂಥರ್ ಕಿಂಗರ ವಿಚಾರವನ್ನು ಒಪ್ಪದ ಜಾರ್ಜ್ ಜಾಕ್ಸನ್ ಹೇಳುತ್ತಾರೆ: "ಅಹಿಂಸಾ ವಿಧಾನ ಒಂದು ಸುಳ್ಳು ಆದರ್ಶ. ಅದು ವಿರೋಧಿಗಳು ನ್ಯಾಯ, ನೀತಿಗಳನ್ನು ಮಾನ್ಯ ಮಾಡುವರೆಂದು ಆಶಿಸುತ್ತದೆ. ಆದರೆ ಅವರು ಅಂತಹ ಮನೋಭಾವದವರಾಗಿರದಿದ್ದರೆ ಮತ್ತು ನ್ಯಾಯ, ನೀತಿ, ಧರ್ಮ ಪಾಲಿಸಿದರೆ ಕಳೆದುಕೊಳ್ಳುವುದೇ ಹೆಚ್ಚು ಎಂದಾದರೆ, ಅವರ ಪ್ರತಿಕ್ರಿಯೆ ಸಕಾರಾತ್ಮಕವಾಗಿರುವುದಿಲ್ಲ." ಇಲ್ಲಿಯೇ ಸಮಸ್ಯೆ ಬರುವುದು. ಎರಡೂ ಹೇಳಿಕೆಗಳು ಪರಸ್ಪರ ವಿರುದ್ಧವಾಗಿದ್ದರೂ ಎರಡರಲ್ಲೂ ಸತ್ಯಾಂಶವಿದೆ. ಹಾಗಾದರೆ ಏನು ಮಾಡಬೇಕು? ಮಧ್ಯಮ ಮಾರ್ಗ ಅತ್ಯುತ್ತಮವಾಗಿದೆ. ಜಾಣನಿಗೆ ಮಾತಿನ ಪೆಟ್ಟಾದರೆ ಕೋಣನಿಗೆ ದೊಣ್ನೆಯ ಪೆಟ್ಟೇ ಬೀಳಬೇಕು. ಸಮಯ, ಸಂದರ್ಭ, ಪರಿಸ್ಥಿತಿಗೆ ಅನುಗುಣವಾಗಿ ನಿರ್ಧರಿಸಬೇಕಿರುವುದೇ ಒಳ್ಳೆಯದು. 'ಅಸತ್ಯ, ಅನ್ಯಾಯಗಳ ವಿರುದ್ಧ ತಲೆಬಾಗುವುದು ಹೇಡಿತನ'ವೆಂಬುದು ಅಹಿಂಸಾ ತತ್ವವನ್ನು ಪ್ರತಿಪಾದಿಸಿದ ಗಾಂಧಿಯವರದೇ ಹೇಳಿಕೆಯೆಂಬುದನ್ನು ಮರೆಯದಿರೋಣ. ಅಹಿಂಸೆ ಅನ್ನುವುದು ಸಮಸ್ಯೆಯನ್ನು ಇತ್ಯರ್ಥಪಡಿಸದೆ ಕೇವಲ ಮುಂದೂಡುವದಕ್ಕಾಗಿ ಬಳಸುವ ಅಸ್ತ್ರವಾದರೆ, ವೈಯಕ್ತಿಕವಾಗಿ ನಾನು ಅಂತಹ ಸಂದರ್ಭದಲ್ಲಿ ಹಿಂಸೆಯನ್ನು ಬೆಂಬಲಿಸುತ್ತೇನೆ. ಭ್ರಷ್ಠರನ್ನು ದಾರಿಯಲ್ಲಿ ತಡೆದು ನಿಲ್ಲಿಸಿ ಪ್ರಶ್ನಿಸುವ ಎದೆಗಾರಿಕೆಯನ್ನು ಜನರು ಬೆಳೆಸಿಕೊಳ್ಳಬೇಕಿದೆ. ಇಂತಹ ಕೆಲಸ ಮಾಡುವವರನ್ನು 'ಇದೆಲ್ಲಾ ನಮಗೇಕೆ' ಎಂದು ಸುಮ್ಮನಿರದೆ ಬೆಂಬಲಿಸುವ ಕನಿಷ್ಠ ಕಾರ್ಯವನ್ನಾದರೂ ನಾವು ಮಾಡಬೇಕಿದೆ. ದುಷ್ಟರು, ಭ್ರಷ್ಠರು ಪೆಟ್ಟು ತಿನ್ನುವ ಸಂದರ್ಭದಲ್ಲಿ ಸಜ್ಜನರೆನಿಸಿಕೊಂಡವರೂ ಮೂಕಪ್ರೇಕ್ಷಕರಾಗಿರದೆ ತಮ್ಮ ಪಾಲಿನ ಪೆಟ್ಟನ್ನೂ ಅಳುಕದೆ ಕೊಡಲು ಹಿಂದೆ ಮುಂದೆ ನೋಡಬಾರದು. ಅಹಿಂಸೆ ಅತ್ಯುತ್ತಮವಾದ ಜೀವನವಿಧಾನ. ಆದರೆ, ಅದನ್ನು ಭಂಡರು, ನೀಚರು, ಸ್ವಾರ್ಥಿಗಳ ವಿರುದ್ಧ ಬಳಸುವುದು ಕಷ್ಟ. ಅವರಿಗೆ ಅವರ ರೀತಿಯಲ್ಲೇ ಉತ್ತರಿಸಬೇಕಾಗುತ್ತದೆ. ಶ್ರೀಕೃಷ್ಣನಂತಹ ಶ್ರೇಷ್ಠ ರಾಜನೀತಿಜ್ಞ, ಚಾಣಕ್ಯನಂತಹ ಮೇಧಾವಿಗಳು ಬೋಧಿಸಿರುವುದು ಇದನ್ನೇ. ನಮ್ಮ ಕುಟಿಲ ರಾಜಕಾರಣಿಗಳು ಅನ್ಯಾಯ, ಭ್ರಷ್ಠಾಚಾರಗಳನ್ನು ವಿರೋಧಿಸುವವರನ್ನು ಹಿಂಸಾಮಾರ್ಗಿಗಳು, ಬಲಪಂಥೀಯರು, ಇತ್ಯಾದಿ ಹೆಸರಿಸಿ ಹತ್ತಿಕ್ಕುವುದರಲ್ಲಿ, ಸಾಮಾನ್ಯ ಜನರನ್ನು ದಾರಿ ತಪ್ಪಿಸುವಲ್ಲಿ ಪ್ರವೀಣರು. ಆದರೆ, ಜನರು ಎಚ್ಚೆತ್ತರೆ ಇಂತಹ ಕುಟಿಲತೆ ಸದಾ ಕಾಲಕ್ಕೂ ನಡೆಯದು.
ಅಹಿಂಸಾಮಾರ್ಗ ನಮ್ಮ ಜೀವನವಿಧಾನವಾಗಲಿ. ಆದರೆ ಇತರರ ಹಿಂಸೆಯನ್ನು ವಿನಾಕಾರಣ ಸಹಿಸದಿರುವ ಮನೋಭಾವವೂ ನಮ್ಮದಿರಲಿ. ಅಜ್ಞಾತಕವಿಯ ಈ ಸಾಲುಗಳು ವಿಶ್ವಮನುಕುಲದ ಪ್ರಾರ್ಥನೆಯಾಗಲು ತಕ್ಕದಿದೆ:
"ದೀನರ್ಗೆ ನೋವನಿತ್ತು | ಸಂಪತ್ತ ಗಳಿಸದಂತೆ |
ನೀ ನೀಡು ಶುದ್ಧಮತಿಯಾ | ಪರಹಿಂಸೆಗೆಳೆಸದಂತೆ ||"
-ಕ.ವೆಂ,ನಾಗರಾಜ್.
**************
[14.04.2014ರ ಜನಮಿತ್ರ ಪತ್ರಿಕೆಯಲ್ಲಿ ಪ್ರಕಟಿತ]
ಈ ಲೇಖನಕ್ಕೆ ಪೂರ್ಣ - ಸಹಮತ -- ಈ ಅಹಿಂಸಾ ಚಳುವಳಿಯಿಂದ -- ಭಾರತಕ್ಕೆ ಸಿಗಬೇಕಾಗಿದ್ದ ಸ್ವತಂತ್ರ "ಮುಂದೂಡಲ್ಪಟ್ಟಿತು" ಎಂದು ಕೆಲವು ಹಿರಿಯರ ಅಭಿಪ್ರಾಯ ವಾಗಿತ್ತು | " ಹಿಂಸೆ" ಯು ತಪ್ಪೇ ಆಗಿರಬಹುದು -- ಆದರೆ " ಪ್ರತಿ ಹಿಂಸೆ " ಇಲ್ಲದಿದ್ದಲ್ಲಿ ಹಿಂಸಕರು ಹಿಂಸೆಯನ್ನು ಸರ್ವ ನಾಶದ ಎಲ್ಲೆ ಮೀರುವಷ್ಟೂ ಮುಂದುವರಿಸುವ ಸಾಧ್ಯತೆ ಇದೆ ||
ಪ್ರತ್ಯುತ್ತರಅಳಿಸಿಧನ್ಯವಾದಗಳು, ಈಶ್ವರಭಟ್ಟರೇ.
ಅಳಿಸಿPrakash H N Narasimaiah
ಅಳಿಸಿgood article....
abdul
"ಅಹಿಂಸೆಯ ಶತ್ರು ಕೋಪ ಮತ್ತು ದುರಭಿಮಾನಗಳು' - ಮುತ್ತಿನಂಥ ಮಾತುಗಳು.
ಬಲಿಷ್ಠ ವ್ಯಕ್ತಿಗೆ ನಿರ್ಬಲಿನಿಗಿಂತ ಹೆಚ್ಚಿನ ಜವಾಬ್ದಾರಿ ಇರುತ್ತದೆ. ಅದನ್ನು ಎಷ್ಟು ವಿವೇಚನಕಾರಿಯಾಗಿ ಮತ್ತು ಪರಿಣಾಮಕಾರಿಯಾಗಿ ಉಪಯೋಗಿಸುತ್ತಾನೆ ಎನ್ನುವುದರ ಮೇಲೆ ಅವಲಂಬಿತ ಸಮಾಜದ ಶಾಂತಿ ಮತ್ತು ಸಹನೆ. ತರ್ಕ ಕುತರ್ಕಗಳು ವಾದ ವಿವಾದದ ಸಮಯ ಯಶಸ್ಸನ್ನು ತಂದು ಕೊಟ್ಟರೂ ಅದರ ಒಟ್ಟಾರೆ ಉದ್ದೇಶ ಮಾತ್ರ ಈಡೇರುವುದಿಲ್ಲ. ಒಂದು ಒಳ್ಳೆಯ ಲೇಖನಕ್ಕಾಗಿ ವಂದನೆಗಳು.
kavinagaraj
ಧನ್ಯವಾದ, ಅಬ್ದುಲ್ಲರೇ. ಪ್ರಕಾಶರೇ, ವಂದನೆಗಳು.
Sridhar Bandri
ಅಳಿಸಿಕವಿಗಳೆ,
ಕೆಲವು ಕಿಡಿಗೇಡಿಗಳು ರಸ್ತೆಯಲ್ಲಿ ಹೆಂಗಸರನ್ನು (ಬಹುಶಃ ಕಾಂಗ್ರೆಸ್ ಕಾರ್ಯಕರ್ತೆಯರನ್ನು) ಪೀಡಿಸುತ್ತಿದ್ದಾಗ ಅಹಿಂಸಾವಾದಿಗಳ ಕಾಂಗ್ರೆಸ್ಸಿಗರು ಹಿಂಸೆ ಮಾಡಬಾರದೆಂದು ಸುಮ್ಮನೇ ಇದ್ದರಂತೆ. ಸ್ವಲ್ಪ ಸಮಯದ ನಂತರ ಅಲ್ಲಿಗೆ ಬಂದ ಮಹಾತ್ಮ ಗಾಂಧಿಯವರು ಆ ಹೆಂಗಸರಿಂದ ವಿಷಯ ತಿಳಿದು ಇತರೇ ಸ್ವಯಂಸೇವಕರನ್ನು ಅವರು ಏನೂ ಪ್ರತಿಕ್ರಿಯೆಯನ್ನು ತೋರದೇ ಸುಮ್ಮನೇ ಇದ್ದದ್ದೇಕೆ ಎಂದು ಕೇಳಿದರಂತೆ. ಆಗ ಆ ಕಾರ್ಯಕರ್ತರು ಮೇಲಿನಂತೆ ಉತ್ತರಿಸಿದಾಗ, ಗಾಂಧೀಜಿಯವರು, "ಹೇಡಿತನ ಮತ್ತು ಹಿಂಸೆ ಎರಡರಲ್ಲಿ ಒಂದನ್ನು ಆಯ್ದುಕೊಳ್ಳುವ ಪ್ರಸಂಗ ಬಂದರೆ ನಾನು ಹಿಂಸೆಯನ್ನೇ ಆರಿಸಿಕೊಳ್ಳುತ್ತೇನೆ" ಎಂದು ಅವರಿಗೆ ಹೇಳಿ, ಇನ್ನು ಮುಂದೆ ಅಂತಹ ವಿಷಯಗಳಲ್ಲಿ ಸುಮ್ಮನೆ ಇರಬೇಡಿ ಎಂದು ಹೇಳಿದರಂತೆ. (ಆದರೆ ಆಮೇಲೆ ಅದನ್ನು ಮತ್ತು ಅವರ ಅನುಯಾಯಿಗಳು ಎಷ್ಟರ ಮಟ್ಟಿಗೆ ಪಾಲಿಸಿದರೆನ್ನುವುದು ಬೇರೆ ವಿಷಯ). ಹಾಗಾಗಿ ಹಿಂಸೆಗೊಳಗಾದಾಗ ಪ್ರತಿರೋಧವನ್ನು ಒಡ್ಡುವುದೇ ಸರಿಯಾದ ಕ್ರಮ.
Kavi Nagaraj
ತಮಾಷೆಯೆನಿಸಿದರೂ ಸ್ವಾರಸ್ಯಕರವಾದ ನನ್ನ ಅನುಭವ ನೋಡಿ. ಗಾಂಧೀಜಿಯವರ ಫೋಟೋ ಮತ್ತು ಅವರ ಹೇಳಿಕೆ 'ಅಸತ್ಯ ಅನ್ಯಾಯಗಳ ವಿರುದ್ಧ ತಲೆಬಾಗುವುದು ಹೇಡಿತನ' ಇದ್ದ ಕರಪತ್ರ ತುರ್ತು ಪರಿಸ್ಥಿತಿ ಕಾಲದಲ್ಲಿ ನನ್ನ ವಿರುದ್ಧವಾಗಿ ಪೋಲಿಸರು ಕ್ರಿಮಿನಲ್ ಕೇಸಿನಲ್ಲಿ ಬಳಸಿದ್ದ ಸಾಕ್ಷ್ಯವಾಗಿತ್ತು! :)
Sridhar Bandri
ಅಳಿಸಿಬಹುಶಃ "Irony of Life" ಅಂದರೆ ಇದೇ ಏನೋ?