ಅರ್ಥವಿಲ್ಲದ ಇಲಾಖಾ ವಿಚಾರಣೆಗಳು - ೫
ತಿಂದರೂ ದಕ್ಕಿಸಿಕೊಳ್ಳಲಾಗಲಿಲ್ಲ!
ಇಲಾಖಾ ವಿಚಾರಣೆ ನಡೆಯದಿರಲು ನಾನೇ ಕಾರಣನಾಗಿದ್ದ ಪ್ರಸಂಗವೊಂದನ್ನು ಇಲ್ಲಿ ಉಲ್ಲೇಖಿಸುವೆ. ಇದೂ ಸಹ ದಶಕಗಳ ಹಿಂದಿನ ಕಥೆ. ತಿಮ್ಮೇನಹಳ್ಳಿ ವೃತ್ತದ ಗ್ರಾಮಲೆಕ್ಕಿಗ -ಹೆಸರು ರಾಮೇಗೌಡ ಎಂದಿರಲಿ, ನಿವೃತ್ತಿಗೆ ೩ ವರ್ಷಗಳಿದ್ದವು- ಒಳ್ಳೆಯ ಕೆಲಸಗಾರನೇನೂ ಆಗಿರಲಿಲ್ಲ. ಸರ್ಕಾರಿ ಬಾಕಿ ವಸೂಲಿಯಲ್ಲಿ ಇತರ ಎಲ್ಲಾ ಗ್ರಾಮಲೆಕ್ಕಿಗರುಗಳಿಗಿಂತಲೂ ತೀರಾ ಹಿಂದಿರುತ್ತಿದ್ದ ಈತ ಈ ಕಾರಣಕ್ಕಾಗಿ ಪ್ರತಿ ಸಿಬ್ಬಂದಿ ಸಭೆಯಲ್ಲೂ ನನ್ನಿಂದ ಬೈಸಿಕೊಳ್ಳುತ್ತಿದ್ದ. ಸರ್ಕಾರಿ ಬಾಕಿ ವಸೂಲಿಗೆ ಆದ್ಯತೆ ಕೊಟ್ಟಿದ್ದ ನಾನು ಒಂದು ಅಲಿಖಿತ ನಿಯಮ ಪಾಲಿಸುತ್ತಿದ್ದೆ. ಜನರು ತಮ್ಮ ಕೆಲಸಗಳಿಗೆ ಬಂದ ಸಂದರ್ಭದಲ್ಲಿ ಅವರು ಸರ್ಕಾರಿ ಬಾಕಿ ಪಾವತಿಸಿರುವುದನ್ನು ಖಚಿತಪಡಿಸಿಕೊಂಡು, ಪಾವತಿಸಿರದಿದ್ದಲ್ಲಿ ಪಾವತಿಸಿದ ನಂತರ ಅವರ ಕೆಲಸ ಮಾಡಿಕೊಡುತ್ತಿದ್ದೆ. ಹೀಗಾಗಿ ಜನರಿಗೂ ಅದು ಅಭ್ಯಾಸವಾಗಿ ಕಛೇರಿಗೆ ಬರುವಾಗ ಕಂದಾಯ, ಇತ್ಯಾದಿ ಪಾವತಿಸಿದ ರಸೀದಿಗಳನ್ನು ತೆಗೆದುಕೊಂಡು ಬರುತ್ತಿದ್ದರು. ಒಮ್ಮೆ ತಿಮ್ಮೇನಹಳ್ಳಿಯ ಒಬ್ಬ ರೈತ ಖಾತೆ ಬದಲಾವಣೆಗೆ ಬಂದಿದ್ದವನು ತಾನು ಕಟ್ಟಿದ್ದ ರೂ.೨೫೦೦ರ ರಸೀದಿ ನನಗೆ ತೋರಿಸಿದ್ದ. ನನಗೆ ಆಶ್ಚರ್ಯವಾಯಿತು. ಏಕೆಂದರೆ ರಾಮೇಗೌಡ ಹಿಂದಿನ ತಿಂಗಳು ಸರ್ಕಾರಕ್ಕೆ ಕಟ್ಟಿದ್ದ ವಸೂಲು ಮಾಡಿದ ಒಟ್ಟು ಮೊಬಲಗೇ ರೂ. ೯೫೦ ಆಗಿತ್ತು. ಆ ರಸೀದಿಯನ್ನು ಸ್ವೀಕೃತಿ ಪತ್ರ ನೀಡಿ ಆ ರೈತನಿಂದ ಪಡೆದು ಅವನ ಕೆಲಸ ಮಾಡಿಕೊಟ್ಟು, ರಾಮೇಗೌಡನ ಮೂಲ ರಸೀದಿ ತರಿಸಿ ಪರಿಶೀಲಿಸಿದೆ. ಮೂಲ ರಸೀದಿಯಲ್ಲಿ ಆ ರೈತನ ಹೆಸರಿನಲ್ಲಿ ಇದ್ದ ಮೊಬಲಗು ೧೫೦ ಮಾತ್ರ ಆಗಿತ್ತು. ತಕ್ಷಣ ಅವನು ವಸೂಲಿ ಮಾಡಿದ ಇತರ ಕೆಲವು ರೈತರುಗಳ ರಸೀದಿಗಳನ್ನೂ ಪಡೆದು ಪರಿಶೀಲಿಸಿದಾಗ ರೈತರ ಹೆಸರಿನಲ್ಲಿ ಇದ್ದ ಮತ್ತು ಮೂಲ ರಸೀದಿಯಲ್ಲಿ ಇದ್ದ ಮೊಬಲಗುಗಳು ಬೇರೆಯೇ ಆಗಿದ್ದವು. ರಸೀದಿ ಹಾಕುವಾಗ ಡಬಲ್ ಸೈಡ್ ಕಾರ್ಬನ್ ಉಪಯೋಗಿಸಿ ರಸೀದಿ ಬರೆದು ಎರಡನೆಯ ಪ್ರತಿಯನ್ನು ರೈತರಿಗೆ ಕೊಡಬೇಕಿತ್ತು. ಮೂಲ ರಸೀದಿಯ ಹಿಂಭಾಗದಲ್ಲಿ ಸಹ ಕಾರ್ಬನ್ ಅಚ್ಚು ದಾಖಲಾಗಿ ತಿದ್ದುವಿಕೆಗೆ ಅವಕಾಶವಾಗದಿರಲಿ ಎಂಬುದು ಅದರ ಉದ್ದೇಶವಿತ್ತು. ರೈತರಿಗೆ ಎರಡನೆಯ ಪ್ರತಿಯನ್ನು ಮಾತ್ರ ಪ್ರತ್ಯೇಕ ಬರೆದುಕೊಟ್ಟು, ನಂತರ ಡಬಲ್ ಸೈಡ್ ಕಾರ್ಬನ್ ಉಪಯೋಗಿಸಿ ಮೂಲ ರಸೀದಿಯನ್ನು ಕಡಿಮೆ ಮೊಬಲಗಿಗೆ ಪ್ರತ್ಯೇಕವಾಗಿ ಬರೆದು ರಾಮೇಗೌಡ ಚಾಣಾಕ್ಷತನ ತೋರಿದ್ದ. ಇದು ಗೊತ್ತಾಗಿ ಆತನ ಎಲ್ಲಾ ಕಡತಗಳು, ಖಾತೆ, ಖಿರ್ದಿಗಳನ್ನು ವಶಪಡಿಸಿಕೊಂಡೆ.
ಅಂದು ರಾತ್ರಿ ಸುಮಾರು ಎಂಟು ಗಂಟೆಯ ಹೊತ್ತಿಗೆ ನನ್ನ ಮನೆಗೆ ಬಂದ ರಾಮೇಗೌಡ ನನ್ನ ಕಾಲು ಹಿಡಿದುಕೊಂಡು ಜೋರಾಗಿ ಅಳತೊಡಗಿದ. ಮನೆಯಲ್ಲಿದ್ದ ನನ್ನ ಪತ್ನಿ ಮತ್ತು ಪುಟ್ಟ ಮಕ್ಕಳು ಗಾಬರಿಯಾಗಿದ್ದರು. ಅವನನ್ನು ಬಲವಂತವಾಗಿ ಕುರ್ಚಿಯಲ್ಲಿ ಕೂರಿಸಿ "ಏನು ಹೇಳಬೇಕೋ ಸರಿಯಾಗಿ ಹೇಳು, ನಾಟಕ ಬೇಡ" ಎಂದು ಗದರಿಸಿದೆ. ಅವನು, "ಸಾರ್, ನನ್ನ ಸರ್ವಿಸಿನಲ್ಲೇ ಇಂಥಾ ಕೆಲಸ ಮಾಡಿರಲಿಲ್ಲ. ವಿಧಿಯಿಲ್ಲದೆ ಈಗ ಹೀಗೆ ಮಾಡಿದೆ. ಎರಡು ತಿಂಗಳಿನಿಂದ ಮಾತ್ರ ಈ ರೀತಿ ಮಾಡಿದೀನಿ ಸಾರ್. ನನ್ನ ಅಳಿಯ ದೀಪಾವಳಿ ಹಬ್ಬಕ್ಕೆ ಮನೆಗೆ ಬಂದವನು ಉಡುಗೊರೆಯಾಗಿ ಮಾವ ಸ್ಕೂಟರ್ ತೆಗೆಸಿಕೊಡಲಿ ಅಂತ ಮಗಳ ಮೂಲಕ ಬಲವಂತ ಮಾಡಿದ್ದ ಸಾರ್. ನನ್ನ ಹತ್ತಿರ ಹಣ ಇರಲಿಲ್ಲ. ೧೮೦೦೦ ರೂ. ಸಾಲ ಮಾಡಿ ಸ್ಕೂಟರ್ ತೆಗೆದುಕೊಟ್ಟೆ. ಅದಕ್ಕೋಸ್ಕರ ಹೀಗೆ ಮಾಡಿದೆ. ಕ್ರಮೇಣ ಹೊಂದಿಸಿ ಸರಿ ಮಾಡ್ತೀನಿ ಸಾರ್. ನೀವು ಡಿ.ಸಿ.ಗೆ ಬರೆದರೆ ನನ್ನ ನೌಕರಿ ಹೋಗುತ್ತೆ. ನನಗೆ ಇರೋದು ಒಂದೆರಡು ವರ್ಷ ಸರ್ವಿಸು ಅಷ್ಟೆ. ನಾನು ಮುಳುಗಿ ಹೋಗ್ತೀನಿ. ಅದೂ ಅಲ್ಲದೆ ಮರ್ಯಾದೆ ಪ್ರಶ್ನೆ ಸಾರ್. ತಲೆ ಎತ್ತಿ ನಡೆಯೋಕ್ಕೆ ಆಗಲ್ಲ. ನೀವು ಕೈಬಿಟ್ಟರೆ ನಾನು ಖಂಡಿತಾ ನೇಣು ಹಾಕಿಕೊಂಡು ಸಾಯ್ತೀನಿ, ಫಾಲಿಡಾಲ್ ಕುಡೀತೀನಿ. ಇದು ನಿಮ್ಮಾಣೆ ಸತ್ಯ ಸಾರ್" ಅಂದಾಗ ನನಗೆ ಏನು ಹೇಳಬೇಕೋ ತೋಚಲಿಲ್ಲ. "ಆಯ್ತು, ಎರಡು ದಿನ ಯೋಚಿಸಿ ನಿನಗೆ ಹೇಳಿಯೇ ಮುಂದಿನ ಕ್ರಮ ತೆಗೆದುಕೊಳ್ಳುತ್ತೇನೆ" ಎಂದು ಭರವಸೆ ಕೊಟ್ಟ ಮೇಲೆಯೇ ಅವನು ಕಣ್ಣು ಒರೆಸಿಕೊಂಡು ಹೋದದ್ದು. ನನ್ನ ಪತ್ನಿ 'ಅವನಿಗೆ ತೊಂದರೆ ಮಾಡಬೇಡಿ' ಅಂದರೆ, ನನ್ನ ಪುಟ್ಟ ಮಕ್ಕಳು ನನ್ನನ್ನು ಕೆಟ್ಟವನೆಂಬಂತೆ ನೋಡಿದ್ದರು. ಅಂದು ರಾತ್ರಿಯೆಲ್ಲಾ ಯೋಚಿಸಿ ಒಂದು ನಿರ್ಧಾರಕ್ಕೆ ಬಂದೆ.
ಮರುದಿನ ಮಧ್ಯಾಹ್ನ ರಾಮೇಗೌಡನನ್ನು ಕರೆದುಕೊಂಡು ಹೋಗಿ ಪ್ರವಾಸಿ ಮಂದಿರದ ಕೊಠಡಿಯಲ್ಲಿ ಕುಳಿತು, ಅವನಿಂದಲೇ ಖಾತೆ, ಖಿರ್ದಿಗಳನ್ನು ಪರಿಶೀಲಿಸಿ ಅವನ ವೃತ್ತದ ಎಲ್ಲಾ ರೈತರುಗಳಿಂದ ವಸೂಲು ಮಾಡಲು ಬಾಕಿಯಿರುವ ಮೊಬಲಗನ್ನು ಲೆಕ್ಕ ಹಾಕಿಸಿದೆ. ಅವುಗಳಲ್ಲಿ ಮೂಲ ರಸೀದಿಯಲ್ಲಿ ಬರೆದ ಮೊಬಲಗುಗಳನ್ನು ಮಾತ್ರ ವಸೂಲಾದಂತೆ ತೋರಿಸಿದ್ದು, ಉಳಿದ ವಸೂಲು ಮಾಡಬೇಕಾದ ಮೊಬಲಗು ರೂ. ೪೨೦೦೦ ಆಗಿತ್ತು. ಪ್ರತಿ ಬಾಕಿ ಮೊಬಲಗಿಗೂ ರಸೀದಿಗಳನ್ನು ಹಾಕಿ, ಪೂರ್ಣ ರೂ. ೪೨೦೦೦ ಮೊಬಲಗನ್ನು ಸರ್ಕಾರಕ್ಕೆ ಜಮಾ ಮಾಡಿದರೆ ಮಾತ್ರ ಬಿಡುವುದಾಗಿ ಅವನಿಗೆ ತಿಳಿಸಿದೆ. "ಸಾರ್, ನಾನು ಉಪಯೋಗಿಸಿಕೊಂಡದ್ದು ರೂ. ೧೫೦೦೦ ಮಾತ್ರ. ನನಗೆ ಬರೆ ಹಾಕಬೇಡಿ ಸಾರ್" ಅಂತ ಗೋಗರೆದ. "ನೋಡು, ನೀನು ಕಳೆದುಕೊಳ್ಳುವುದು ಏನೂ ಇಲ್ಲ. ಈಗಾಗಲೇ ವಸೂಲು ಮಾಡಿರುವವರಿಂದ ನೀನು ವಸೂಲು ಮಾಡುವ ಅಗತ್ಯ ಬರುವುದಿಲ್ಲ. ವಸೂಲು ಮಾಡಿರದಿದ್ದವರಿಂದ ರಸೀದಿ ಕೊಟ್ಟು ಹಣ ಪಡೆದುಕೋ. ಹೇಗೂ ನಿನಗೆ ವಸೂಲು ಮಾಡಲು ಈ ತಿಂಗಳಿನಲ್ಲಿ ಇನ್ನೂ ಹತ್ತು ದಿವಸ ಸಮಯ ಇದೆ. ಅವರಿಂದ ಹಣ ಬರಲಿ, ಬಿಡಲಿ. ಈ ತಿಂಗಳಂತೂ ನೀನು ಪೂರ್ತಾ ಹಣ ಕಟ್ಟಲೇಬೇಕು. ಕೊಡದಿದ್ದವರಿಂದ ನಿಧಾನವಾಗಿಯಾದರೂ ನೀನು ಹಣ ಕಟ್ಟಿರುವುದರಿಂದ ವಸೂಲು ಮಾಡಿಕೊಂಡೇ ಮಾಡಿಕೊಳ್ಳುತ್ತೀಯ. ನಿನಗೆ ನಷ್ಟವೇನೂ ಆಗುವುದಿಲ್ಲ" ಎಂದೆ. ಅವನು ಎರಡು ತಿಂಗಳ ಕಾಲಾವಕಾಶ ಕೇಳಿದರೂ ನಾನು ಒಪ್ಪಲಿಲ್ಲ. ಆ ತಿಂಗಳು ಅವನು ಕಷ್ಟಪಟ್ಟು ರೂ.೨೫೦೦೦ ವಸೂಲು ಮಾಡಿ, ಉಳಿದ ರೂ. ೧೭೦೦೦ ಅನ್ನು ಸಾಲ ಮಾಡಿ ಪೂರ್ಣ ಬಾಕಿ ಮೊಬಲಗನ್ನು ಸರ್ಕಾರಕ್ಕೆ ಕಟ್ಟಿದ. ಆ ತಿಂಗಳ ಸಿಬ್ಬಂದಿ ಸಭೆಯಲ್ಲಿ ಸರ್ಕಾರಿ ಬಾಕಿಯನ್ನು ಪೂರ್ಣವಾಗಿ ವಸೂಲು ಮಾಡಿದ ಅವನನ್ನು ಅಭಿನಂದಿಸಿ ಹೂವಿನಹಾರ ತರಿಸಿ ಅವನ ಕೊರಳಿಗೆ ಹಾಕಿದಾಗ ಅವನು ತೋರಿದ್ದ ಮುಖಭಾವ ಇನ್ನೂ ನೆನಪಿಗೆ ಬರುತ್ತಿದೆ. 'ರಾಮೇಗೌಡನಂತಹವರೇ ಪೂರ್ಣ ಸರ್ಕಾರಿ ಬಾಕಿ ವಸೂಲು ಮಾಡಿರುವಾಗ ನಿಮಗೇನಾಗಿದೆ' ಎಂದು ಇತರ ಸಿಬ್ಬಂದಿಗೂ ವಸೂಲಿ ಕಾರ್ಯ ಚುರುಕುಗೊಳಿಸಲು ಹುರಿದುಂಬಿಸಿದ್ದೆ. ನಾನು ಇಲಾಖಾ ವಿಚಾರಣೆಗೆ ವರದಿಸದಿದ್ದುದಕ್ಕೆ ಕಾರಣಗಳಿದ್ದವು. ಅವನು ಹೆಚ್ಚು ವಸೂಲು ಮಾಡಿ ಕಡಿಮೆ ರಸೀದಿ ಹಾಕಿದ್ದ ಎಲ್ಲಾ ರಸೀದಿಗಳನ್ನೂ ಸಂಗ್ರಹಿಸಬೇಕಿತ್ತು. ಇಲ್ಲದಿದ್ದರೆ ಎಷ್ಟು ರಸೀದಿಗಳು ಇದ್ದವೋ ಅಷ್ಟು ಮಾತ್ರ ಆರೋಪ ಪಟ್ಟಿಯಲ್ಲಿ ಸೇರಿಸಬಹುದಾಗಿತ್ತು. ಇನ್ನೊಂದು, ಅನತಿ ಸಮಯದ ಹಿಂದೆ ಹಣ ದುರುಪಯೋಗವಾಗಿದ್ದರೂ ಲಂಚ ಪಡೆದು ವಿಚಾರಣೆಯೇ ನಡೆಯದಂತೆ ನೋಡಿಕೊಂಡಿದ್ದ ಹಿರಿಯ ಅಧಿಕಾರಿಯೇ ಆ ಸ್ಥಾನದಲ್ಲಿ ಇನ್ನೂ ಇದ್ದುದು. ಮತ್ತೊಂದು, ಈ ಕಾರಣದಿಂದಲಾದರೂ, ಸಂಪೂರ್ಣ ಸರ್ಕಾರಿ ಬಾಕಿ ವಸೂಲು ಮಾಡಲು ಸಾಧ್ಯವಿದ್ದುದು. ಅಂದಿನ ಪರಿಸ್ಥಿತಿಯಲ್ಲಿ ಇದಕ್ಕಿಂತ ಒಳ್ಳೆಯ ಮಾರ್ಗ ನನಗೆ ತೋಚಿರಲಿಲ್ಲ. ರಾಮೇಗೌಡ ಮುಂದೆ ಪೂರ್ಣ ಸೇವೆ ಸಲ್ಲಿಸಿ ನಿವೃತ್ತನೂ ಆದ, ಕೆಲವು ವರ್ಷಗಳ ಹಿಂದೆ ದೈವಾಧೀನನೂ ಆದ. ನಾನೂ ನಿವೃತ್ತನಾಗಿರುವೆ. ನನ್ನ ಮತ್ತು ರಾಮೇಗೌಡನ ಮಧ್ಯೆ ಮಾತ್ರ ಇದ್ದ ಸತ್ಯ ಈಗ ಹೊರಗೆಡವಿ ನಿರಾಳನಾಗಿರುವೆ.
-ಕ.ವೆಂ.ನಾಗರಾಜ್.
**************
'ಜನಹಿತ' ಪತ್ರಿಕೆಯ ನನ್ನ ಅಂಕಣ 'ಜನಕಲ್ಯಾಣ'ದಲ್ಲಿ 30-04-2014ರಲ್ಲಿ ಪ್ರಕಟಿತ:
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ