ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಬುಧವಾರ, ಮೇ 14, 2014

ಇಲಾಖಾ ವಿಚಾರಣೆ: ಸುಧಾರಣೆ ಹೇಗೆ?

    ಸರ್ಕಾರೀ ಸೇವಾ ನಿಯಮಗಳನ್ನು ಉಲ್ಲಂಘಿಸಿದ, ನೌಕರರಿಗೆ ತರವಲ್ಲದ ರೀತಿಯಲ್ಲಿ ನಡೆದುಕೊಳ್ಳುವ, ಹಣ ದುರುಪಯೋಗ ಮಾಡಿಕೊಳ್ಳುವ ಮುಂತಾದ ಪ್ರಕರಣಗಳಲ್ಲಿ ಇಲಾಖಾ ವಿಚಾರಣೆಗಳ ಅಗತ್ಯ ಬೀಳುತ್ತದೆ. ಶಿಸ್ತು ಪ್ರಾಧಿಕಾರಿಂದ ನೇಮಿಸಲ್ಪಡುವ ವಿಚಾರಣಾಧಿಕಾರಿ ಆರೋಪಗಳ ಸತ್ಯಾಸತ್ಯತೆ ಬಗ್ಗೆ ವಿಚಾರಣೆ ನಡೆಸಿ ಆರೋಪಗಳು ರುಜುವಾತಾದವೇ, ಇಲ್ಲವೇ ಎಂಬ ಬಗ್ಗೆ ವರದಿಯನ್ನು ಶಿಸ್ತು ಪ್ರಾಧಿಕಾರಕ್ಕೆ ಸಲ್ಲಿಸುತ್ತಾರೆ. ಆರೋಪಗಳು ರುಜುವಾತಾಗಿದ್ದರೆ, ವಿಚಾರಣಾಧಿಕಾರಿಯ ಆದೇಶದ ಪ್ರತಿಯೊಂದಿಗೆ ನೌಕರನಿಗೆ ಸೂಕ್ತ ಶಿಕ್ಷೆ ನೀಡಬಾರದೇಕೆಂಬ ಬಗ್ಗೆ ಪುನಃ ನೋಟೀಸು ನೀಡಿ, ಆತನಿಂದ ಬರುವ ಉತ್ತರ ಗಮನಿಸಿ ಶಿಕ್ಷೆಯ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳಲಾಗುತ್ತದೆ. ಎಚ್ಚರಿಕೆ ನೀಡುವುದು, ವಾರ್ಷಿಕ ವೇತನ ಬಡ್ತಿಗಳನ್ನು ತಡೆ ಹಿಡಿಯುವುದು, ಹಿಂಬಡ್ತಿ ನೀಡುವುದು, ಇತ್ಯಾದಿಗಳು ಸೇರಿದಂತೆ ಸೇವೆಯಿಂದ ವಜಾಗೊಳಿಸುವ ಶಿಕ್ಷೆ ನೀಡಲು ಶಿಸ್ತು ಪ್ರಾಧಿಕಾರಿಗೆ ಅಧಿಕಾರವಿರುತ್ತದೆ.
     ಸರ್ಕಾರದ ಇಲಾಖೆಗಳಲ್ಲಿ ಕಾರ್ಯದಕ್ಷತೆ ಹೆಚ್ಚಿಸಲು, ಸುಗಮ, ಜನಪರ ಆಡಳಿತ ನೀಡಲು ಇಲಾಖಾ ವಿಚಾರಣೆಗಳು ಪ್ರಮುಖ ಪಾತ್ರ ವಹಿಸಬಲ್ಲವು. ದೌರ್ಭಾಗ್ಯವಶಾತ್ ಭ್ರಷ್ಟಾಚಾರದ ಕರಿನೆರಳು ಬಿದ್ದು ಇವು ಕೇವಲ ಅರ್ಥಹೀನ ಪ್ರಕ್ರಿಯೆಗಳಾಗಿಬಿಟ್ಟಿರುವುದು ದುರ್ದೈವ. ಇಷ್ಟೇ ಆಗಿದ್ದರೆ ಪರವಾಗಿಲ್ಲ, ಕೆಲವೊಮ್ಮೆ ಭ್ರಷ್ಠರನ್ನು ರಕ್ಷಿಸುವ ಸಾಧನಗಳೂ ಆಗಿವೆ ಎಂದರೆ ಬೇಸರವಾಗುತ್ತದೆ. ಎಲ್ಲಾ ಇಲಾಖಾ ವಿಚಾರಣೆಗಳೂ ಹೀಗಾಗಿವೆ ಎಂದು ಹೇಳಲಾಗದಿದ್ದರೂ ನೈಜ ಮತ್ತು ಅರ್ಥಪೂರ್ಣ ವಿಚಾರಣೆಗಳು ಬೆರಳೆಣಿಕೆಯಷ್ಟು ಮಾತ್ರ ಎನ್ನಬಹುದು. ಇದಕ್ಕೆ ಕಾರಣಗಳನ್ನು ಹುಡುಕುತ್ತಾ ಹೋದಾಗ ಕಂಡು ಬರುವ ಸಂಗತಿಗಳಿವು: .
ಹುಟ್ಟುವ ಮೊದಲೇ ಸಾಯುವ ವಿಚಾರಣೆಗಳು:
    ಸಣ್ಣ ಪುಟ್ಟ ತಪ್ಪುಗಳನ್ನು ಮಾನವೀಯತೆಯ ನೆಲೆಯಲ್ಲಿ ಕ್ಷಮಿಸುವ ಸಂಗತಿಗಳನ್ನು ಈ ವ್ಯಾಪ್ತಿಯಲ್ಲಿ ಸೇರಿಸಿಲ್ಲ. ಅಪರೂಪಕ್ಕೆ ಅನಿವಾರ್ಯವಾಗಿ ತಡವಾಗಿ ಬರುವ ನೌಕರರು, ಉದ್ದೇಶವಿಲ್ಲದೆ, ಗೊತ್ತಿಲ್ಲದೆ ಮಾಡುವ ಸಣ್ಣ ತಪ್ಪುಗಳು, ಮುಂತಾದುವನ್ನು ಎಚ್ಚರಿಕೆ ನೀಡಿ ಮುಂದೆ ಈ ರೀತಿ ಮಾಡದಿರಲು ತಿಳುವಳಿಕೆ ನೀಡಿ ಮಂಗಳ ಹಾಡಲಾಗುವ ಪ್ರಕರಣಗಳನ್ನೂ ಗಣಿಸುವ ಅಗತ್ಯವಿಲ್ಲ. ಅದರೆ ಶಿಸ್ತು ಕ್ರಮ ಅಗತ್ಯವಿದ್ದೂ ಯಾವ ಕ್ರಮವನ್ನೂ ಅನುಸರಿಸದೆ ಮುಕ್ತಾಯ ಮಾಡುವ ಸಂಗತಿಗಳೇ ಹೆಚ್ಚು ಎಂಬುದು ಸಾಮಾನ್ಯ ಅನುಭವ. ೧೫ ದಿನಗಳಿಗಿಂತ ಹೆಚ್ಚು ಕಾಲ ಒಬ್ಬ ನೌಕರ ಅನಧಿಕೃತ ಗೈರುಹಾಜರಾದನೆಂದರೆ ಅದು ಗುರುತರ ಅಪರಾಧವೇ. ಸಾಬೀತಾದರೆ ನೌಕರಿಂದ ವಜಾ ಮಾಡಬಹುದಾಗಿರುತ್ತದೆ. ಕೆಲವರು ತಿಂಗಳುಗಟ್ಟಲೆ ಗೈರುಹಾಜರಾದ ಪ್ರಕರಣಗಳಲ್ಲೂ ಕಛೇರಿಯ ಮುಖ್ಯಸ್ಥರ ಅದಕ್ಷತೆಯ ಕಾರಣದಿಂದ ಯಾವುದೇ ಕ್ರಮ ಆಗದೆ, ಅವರುಗಳು ಸಂಬಳವನ್ನೂ ಪಡೆದ ನಿದರ್ಶನಗಳಿವೆ. ಇಂತಹ ಅದಕ್ಷತೆಯಿಂದ ವಯೋನಿವೃತ್ತಿ ಅವಧಿ ನಂತರವೂ ಸೇವೆಯಲ್ಲಿ ಮುಂದುವರೆದು ಸಂಬಳ ಪಡೆದವರೂ ಇದ್ದಾರೆ. ಇಂತಹ ಪ್ರಕರಣಗಳಿಗೆ ಕಾರಣಗಳೆಂದರೆ: ೧. ಕಛೇರಿ ಮುಖ್ಯಸ್ಥರ ಅಸಮರ್ಪಕ ಕಾರ್ಯವೈಖರಿ, ೨. ಭ್ರಷ್ಟಾಚಾರ - ಸಂಬಂಧಿಸಿದವರಿಂದ ಲಂಚ ಪಡೆದು ಪ್ರಕರಣ ಮುಚ್ಚಿಹಾಕುವುದು, ಈ ತಪ್ಪನ್ನೇ ಬಂಡವಾಳ ಮಾಡಿಕೊಂಡು ಆ ನೌಕರನನ್ನು ಆಗಾಗ್ಗೆ ಶೋಷಿಸುವುದು, ೩. ಶಿಸ್ತು ಪ್ರಾಧಿಕಾರದ ಅಧಿಕಾರಿಗಳ ಹಸ್ತಕ್ಷೇಪ (ಇಲ್ಲೂ ಭ್ರಷ್ಟಾಚಾರವೇ ಪ್ರಧಾನ ಅಂಶ), ೪. ರಾಜಕಾರಣಿಗಳ ಹಸ್ತಕ್ಷೇಪ.
ವಿಫಲಗೊಳ್ಳುವ ವಿಚಾರಣೆಗಳು:
     ದಕ್ಷ ಅಧಿಕಾರಿಗಳಿದ್ದು ಶಿಸ್ತುಕ್ರಮ ಕೈಗೊಂಡ ಪ್ರಕರಣಗಳಲ್ಲೂ ಹೆಚ್ಚಿನ ವಿಚಾರಣೆಗಳು ವಿಫಲವಾಗಿ ಆರೋಪಿಗಳು ಪಾರಾಗುತ್ತಾರೆ ಎಂಬುದು ವಿಡಂಬನೆಯೇ ಸರಿ. ಇದಕ್ಕೆ ಮೂಲಕಾರಣಗಳನ್ನು ವಿಶ್ಲೇಷಿಸಿದರೆ ಕಾಣುವ ಸಂಗತಿಗಳು ಇವು: ೧. ದಕ್ಷ ವಿಚಾರಣಾಧಿಕಾರಿಗಳು ಮತ್ತು ಮಂಡನಾಧಿಕಾರಿಗಳನ್ನು ನೇಮಿಸದಿರುವುದು, ೨. ಆರೋಪ ಪಟ್ಟಿ ತಯಾರಿಸುವಲ್ಲಿ ಲೋಪ, ೩. ವಿಚಾರಣಾ ನಿಯಮಗಳು, ಕಾನೂನುಗಳ ತಿಳುವಳಿಕೆಯಲ್ಲಿನ ಕೊರತೆ, ೩. ಭ್ರಷ್ಟತೆ, ೪. ಇತರ ಅಧಿಕಾರಿಗಳ ಮತ್ತು ರಾಜಕಾರಣಿಗಳ ಹಸ್ತಕ್ಷೇಪ, ೪. ವಕೀಲರುಗಳು ಸರ್ಕಾರದ ಪರವಾಗಿ ಆಗಲೀ, ಆರೋಪಿ ನೌಕರರ ಪರವಾಗಿ ಆಗಲೀ ಹಾಜರಾಗಲು ಅವಕಾಶವಿಲ್ಲದಿರುವುದು. ೫. ಮಂಡನಾಧಿಕಾರಿ ಆರೋಪಗಳನ್ನು ಸಾಬೀತುಪಡಿಸಲು ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸದಿರುವುದು. ೬. ಆರೋಪಿಗಳು, ವಿಚಾರಣಾಧಿಕಾರಿಗಳು, ಮಂಡನಾಧಿಕಾರಿಗಳು ಸಹೋದ್ಯೋಗಿಗಳಾಗಿರುವುದು ಅಥವ ಆಪ್ತರಾಗಿರುವುದು, ಇತ್ಯಾದಿ, ಇತ್ಯಾದಿ.
ಕುರಿ ಕಾಯುವ ತೋಳಗಳು:
     ಒಂದು ಶಿಸ್ತು ಕ್ರಮ ಯಶಸ್ವಿಯಾಗಿ ಜರುಗಬೇಕೆಂದರೆ ಪ್ರಾಥಮಿಕವಾಗಿ ಆರೋಪಿಯ ವಿರುದ್ಧದ ಆರೋಪ ಪಟ್ಟಿಯನ್ನು ಸರಿಯಾಗಿ ಸಿದ್ಧಪಡಿಸುವುದಲ್ಲದೆ, ಆರೋಪಗಳನ್ನು ಸಮರ್ಥಿಸುವ ಪೂರಕ ದಾಖಲೆಗಳು ಮತ್ತು ಸಾಕ್ಷಿದಾರರ ವಿವರಗಳನ್ನು ವಿಚಾರಣಾಧಿಕಾರಿಯವರಿಗೆ ಒದಗಿಸಬೇಕು. ಆದರೆ, ಅಸಮರ್ಪಕ ಕಾರ್ಯವೈಖರಿಯಿಂದಾಗಿ ಮತ್ತು ಕೆಲವೊಮ್ಮೆ ಉದ್ದೇಶಪೂರ್ವಕವಾಗಿ ಆರೋಪ ಪಟ್ಟಿ ಸಿದ್ಧಪಡಿಸುವಾಗಲೇ ಅದರಲ್ಲಿ ಹುರುಳಿಲ್ಲದಂತೆ ಆಗಿರುತ್ತದೆ. ಅಗತ್ಯದ ದಾಖಲೆಗಳನ್ನು ಉಲ್ಲೇಖಿಸಿಯೇ ಇರುವುದಿಲ್ಲ. ಸಂಬಂಧಪಟ್ಟ ಸಾಕ್ಷಿಗಳನ್ನು ಕೈಬಿಟ್ಟು, ಸಂಬಂಧಪಡದವರನ್ನು ಸಾಕ್ಷಿಗಳಾಗಿ ಹೆಸರಿಸಿರುವ ಪ್ರಕರಣಗಳು ಇವೆ. 
     ಒಬ್ಬ ಅಸಮರ್ಪಕ ಮತ್ತು ಇಲಾಖಾ ವಿಚಾರಣೆ ನಡೆಸುವ ರೀತಿ ಗೊತ್ತಿಲ್ಲದ ಅಧಿಕಾರಿಯನ್ನು ವಿಚಾರಣಾಧಿಕಾರಿಯಾಗಿ ನೇಮಿಸಿದರೆ ಎಷ್ಟರಮಟ್ಟಿಗೆ ವಿಚಾರಣೆಯಲ್ಲಿ ಸತ್ಯಾಸತ್ಯತೆ ತಿಳಿದೀತು? ಅದೇ ರೀತಿ ಇಲಾಖಾ ವಿಚಾರಣೆಯಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸಬೇಕಾದ ಮಂಡನಾಧಿಕಾರಿಗಳು ಸರಿಯಾಗಿ ತಮ್ಮ ಕಾರ್ಯ ನಿರ್ವಹಿಸದ ಕಾರಣಕ್ಕಾಗಿಯೇ ಬಹುತೇಕ ವಿಚಾರಣೆಗಳು ವಿಫಲಗೊಳ್ಳುತ್ತವೆ. ಮಂಡನಾಧಿಕಾರಿ ಆರೋಪಗಳನ್ನು ಸಾಬೀತುಪಡಿಸಲು ಸಾಕ್ಷಿಗಳ ವಿಚಾರಣೆ ಸರಿಯಾಗಿ ಮಾಡಬೇಕು, ಪೂರಕ ದಾಖಲೆಗಳನ್ನು ವಿಚಾರಣಾಧಿಕಾರಿಗಳ ಮುಂದೆ ಇಡಬೇಕು, ಅಗತ್ಯವಿದ್ದರೆ ಆರೋಪ ಪಟ್ಟಿಯಲ್ಲಿ ಸೇರಿರದ, ಆದರೆ ವಿಚಾರಣೆಗೆ ಅಗತ್ಯವೆನಿಸಿದ ದಾಖಲೆಗಳನ್ನು ಹಾಜರುಪಡಿಸುವ, ಹೊಸ ಸಾಕ್ಷಿಗಳನ್ನು ಕರೆಸುವ ಅವಕಾಶಗಳನ್ನು ಉಪಯೋಗಿಸಿಕೊಳ್ಳಬೇಕು. ಈ ಕಾರಣದಿಂದ ಸ್ವತಃ ಪ್ರಾಮಾಣಿಕ ಜಿಲ್ಲಾಧಿಕಾರಿಯವರೇ ಖುದ್ದು ಆಸಕ್ತಿ ವಹಿಸಿದ ಪ್ರಕರಣಗಳಲ್ಲೂ ಗುರುತರ ಆರೋಪಗಳಿಂದ ಆರೋಪಿಗಳು ಪಾರಾಗಿದ್ದ ಬಗ್ಗೆ ಹಿಂದಿನ ಲೇಖನಗಳಲ್ಲಿ ನೋಡಿದೆವಲ್ಲವೆ?
ಏನು ಮಾಡಬಹುದು?
೧. ಇಲಾಖಾ ವಿಚಾರಣೆಗಳನ್ನು ನಡೆಸುವ ಸಲುವಾಗಿಯೇ ಪ್ರತ್ಯೇಕ ವಿಭಾಗ ತೆರೆದು, ಅಲ್ಲಿ ಸೇವಾ ನಿಯಮಗಳು, ಕಾಯದೆಗಳ ಅರಿವು ಇರುವವರು ಮಾತ್ರ ಇರಬೇಕು. ನಿಷ್ಪಕ್ಷಪಾತಿಗಳು ಮತ್ತು ಪ್ರಾಮಾಣಿಕರೆಂದು ಗುರುತಿಸಲ್ಪಟ್ಟವರನ್ನು ಅಲ್ಲಿ ನೇಮಕವಾಗುವಂತೆ ನೋಡಿಕೊಂಡರೆ ಉತ್ತಮ.
೨. ಆರೋಪ ಪಟ್ಟಿಗಳನ್ನು ಲೋಪಗಳಿಲ್ಲದಂತೆ ಸಿದ್ಧಪಡಿಸಬೇಕು. ಪೂರಕ ದಾಖಲೆ ಮತ್ತು ಸಾಕ್ಷ್ಯಗಳ ವಿವರವಿರುವಂತೆ ನೋಡಿಕೊಳ್ಳಬೇಕು. ನ್ಯೂನತೆಗಳಿಗೆ ಸಂಬಂಧಿಸಿದ ಕಛೇರಿ ಮುಖ್ಯಸ್ಥರನ್ನು ಹೊಣೆಗಾರರನ್ನಾಗಿ ಮಾಡಬೇಕು.
೩. ರಾಜಕೀಯ ಮತ್ತು ಇತರರ ಹಸ್ತಕ್ಷೇಪಗಳು ಶಿಕ್ಷಾರ್ಹ ಅಪರಾಧಗಳಾಗಬೇಕು.
೪. ಸ್ವತಃ ಇಲಾಖಾ ವಿಚಾರಣೆಗಳನ್ನಾಗಲೀ, ಇನ್ನಿತರ ವಿಚಾರಣೆಗಳನ್ನಾಗಲೀ ಎದುರಿಸುತ್ತಿರುವವರನ್ನು, ನೌಕರರು ಕೆಲಸ ಮಾಡುತ್ತಿರುವ ಕಛೇರಿಯ ಆಧಿಕಾರಿಗಳನ್ನು ವಿಚಾರಣಾಧಿಕಾರಿ ಅಥವ ಮಂಡನಾಧಿಕಾರಿಯಾಗಿ ನೇಮಿಸಬಾರದು.
೫. ವಿಚಾರಣೆ ಅಸಮರ್ಪಕವಾಗಿ ನಡೆದುದು ತಿಳಿದರೆ, ಪುನರ್ವಿಚಾರಣೆಗೆ ಆದೇಶಿಸುವುದಲ್ಲದೆ, ಪುನರ್ವಿಚಾರಣೆಯಲ್ಲಿ ಅಸಮರ್ಪಕ ವಿಚಾರಣೆ ನಡೆದುದು ಖಚಿತವಾದರೆ, ಅದಕ್ಕೆ ಕಾರಣರಾದವರಿಗೆ ದಂಡ ವಿಧಿಸಲು ಅವಕಾಶವಿರಬೇಕು.
೬. ಇಲಾಖಾ ವಿಚಾರಣೆಗಳ ಕುರಿತು ಸೂಕ್ತ ತರಬೇತಿಯನ್ನು ಕಾಲಕಾಲಕ್ಕೆ ಎಲ್ಲಾ ಕಛೇರಿ ಮುಖ್ಯಸ್ಥರುಗಳಿಗೆ ಮತ್ತು ಹಿರಿಯ ನೌಕರರುಗಳಿಗೆ ನೀಡುತ್ತಿರಬೇಕು.
     ಒಟ್ಟಾರೆಯಾಗಿ ಹೇಳಬೇಕೆಂದರೆ, ಸುಧಾರಣೆಗೆ ಸಾಕಷ್ಟು ಅವಕಾಶಗಳಿವೆ. ಆದರೆ ಮೇಲಾಧಿಕಾರಿಗಳ, ಆಡಳಿತದ ಮುಖ್ಯಸ್ಥರುಗಳ, ನಮ್ಮನ್ನಾಳುವವರ ಮನೋಭಾವದಲ್ಲಿ ಬದಲಾವಣೆಯಾಗದಿದ್ದರೆ ಎಲ್ಲವೂ ವ್ಯರ್ಥವಾಗುತ್ತವೆ. ಯಾವುದೇ ಸುಧಾರಣೆ ಮೇಲಿನಿಂದ ಬರಬೇಕು. ಇಂದಿನ ಪರಿಸ್ಥಿತಿ ಹೇಗಿದೆಯೆಂದರೆ, ಉನ್ನತ ಸ್ಥಾನಗಳಲ್ಲಿರುವವರು ಭ್ರಷ್ಟಾತಿಭ್ರಷ್ಟರಾಗಿದ್ದು ಇತರರನ್ನು, ಕೆಳಗಿನವರನ್ನು ಮಾತ್ರ ಬೊಟ್ಟು ಮಾಡಿ ತೋರಿಸಲಾಗುತ್ತಿದೆ. ತೋಳಗಳು ಕುರಿಗಳನ್ನು ಕಾಯುತ್ತಿವೆ. ಜನಜಾಗೃತಿಯೇ ಇದಕ್ಕೆ ಮದ್ದು.
-ಕ.ವೆಂ. ನಾಗರಾಜ್.
***************
14.5.2014ರ ಜನಹಿತ ಪತ್ರಿಕೆಯ ಅಂಕಣ 'ಜನಕಲ್ಯಾಣ'ದಲ್ಲಿ ಪ್ರಕಟಿತ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ