ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಬುಧವಾರ, ಮೇ 7, 2014

ನಾಟಕವಾದ ಇಲಾಖಾ ವಿಚಾರಣೆ

     ಇಲಾಖಾ ವಿಚಾರಣೆಗಳು ಎಷ್ಟು ಅರ್ಥಹೀನವಾಗಿವೆ ಎಂಬ ಬಗ್ಗೆ ಈಗಾಗಲೇ ಹಲವು ಉದಾಹರಣೆಗಳನ್ನು ನೋಡಿದೆವು. ಇಲಾಖಾ ವಿಚಾರಣೆ ಏಕೆ ಅರ್ಥ ಕಳೆದುಕೊಳ್ಳುತ್ತವೆ ಎಂಬುದಕ್ಕೆ ನಿದರ್ಶನವಾಗಿ ಒಂದು ಪ್ರಕರಣ ನಿಮ್ಮ ಮುಂದಿಡುವೆ. ಅದಕ್ಕೆ ಮುಂಚೆ ಒಂದು ಸ್ವಾರಸ್ಯಕರ ವಿಷಯ ಹೇಳುವೆ. ನಾನು ತಹಸೀಲ್ದಾರನಾಗಿ ಕಾರ್ಯ ನಿರ್ವಹಿಸುತ್ತಿದ್ದಾಗ ಒಂದು ಮಧ್ಯಾಹ್ನ ಒಂದು ಗ್ರಾಮದ ಸುಮಾರು ೨೦-೨೫ ಜನರು ನನಗೆ ಜೈಕಾರ ಘೋಷಣೆ ಮಾಡುತ್ತಾ ಬಂದಿದ್ದವರು ನನ್ನ ಛೇಂಬರಿಗೆ ಬಂದು ಮಾಲಾರ್ಪಣೆ ಮಾಡಿ ತಮ್ಮ ಗ್ರಾಮದ ಶಾಲೆಯ ಪಕ್ಕದ ಸರ್ಕಾರಿ ಜಮೀನನ್ನು ಒತ್ತುವರಿಯಿಂದ ತೆರವುಗೊಳಿಸಿದ್ದಕ್ಕೆ ನನ್ನನ್ನು ಅಭಿನಂದಿಸಿ ಹೋದರು. ನನಗೆ ಆಶ್ಚರ್ಯವಾಗಿತ್ತು, ಏಕೆಂದರೆ ಅಂತಹ ಯಾವುದೇ ಕ್ರಮ ನಾನು ತೆಗೆದುಕೊಂಡಿರಲಿಲ್ಲ. ಆ ಜಮೀನಿನ ವಿಷಯ ನ್ಯಾಯಾಲಯದಲ್ಲಿದ್ದು ಯಥಾಸ್ಥಿತಿ ಕಾಪಾಡಲು ನ್ಯಾಯಾಲಯದ ಆದೇಶವಿತ್ತು. ಹಾಗಾಗಿ ತಕ್ಷಣ ಗ್ರಾಮಕ್ಕೆ ಹೊರಡುವ ಸಲುವಾಗಿ ರೆವಿನ್ಯೂ ಇನ್ಸ್‌ಪೆಕ್ಟರರಿಗೆ ಕರೆಕಳುಹಿಸಿದರೆ ಆತ ಕೈಗೆ ಸಿಗಲಿಲ್ಲ. ಜಮೀನಿನ ಹತ್ತಿರ ಹೋಗಿ ನೋಡಿದರೆ ಆ ಜಮೀನಿನ ಸುತ್ತ ತಂತಿ ಬೇಲಿ ಹಾಕಿ ಒಂದು ಫಲಕ ನೇತುಹಾಕಿದ್ದರು. 'ಒತ್ತುವರಿ ತೆರವುಗಳಿಸಿ ಈ ಜಮೀನನ್ನು ಸರ್ಕಾರದ ಸುಪರ್ದಿಗೆ ಪಡೆಯಲಾಗಿದೆ. ಅತಿಕ್ರಮ ಪ್ರವೇಶ ಮಾಡಿದವರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು - ತಹಸೀಲ್ದಾರ್ ಮತ್ತು ತಾಲ್ಲೂಕು ದಂಡಾಧಿಕಾರಿ' ಎಂದು ಆ ಫಲಕದಲ್ಲಿತ್ತು. ಆ ಫಲಕವನ್ನು ತೆಗೆಸಿ, ಆರೀತಿ ಯಾರು ಮಾಡಿದವರು ಎಂದು ವಿಚಾರಿಸಿದರೆ ಗ್ರಾಮದಲ್ಲಿ ಯಾರೂ ಸರಿಯಾಗಿ ಮಾಹಿತಿ ಕೊಡಲಿಲ್ಲ. ಜೈಕಾರ ಹಾಕಿಕೊಂಡು ಬಂದಿದ್ದವರು ಅಲ್ಲಿರಲೇ ಇಲ್ಲ. ವಾಪಸು ಬಂದ ಮೇಲೆ ಸೂಕ್ಷ್ಮವಾಗಿ ಪಡೆದ ಮಾಹಿತಿಯ ಪ್ರಕಾರ ಸ್ಥಳೀಯ ರಾಜಕಾರಣಿಗಳೊಂದಿಗೆ ಷಾಮೀಲಾದ ರೆವಿನ್ಯೂ ಇನ್ಸ್‌ಪೆಕ್ಟರನ ಕುಮ್ಮಕ್ಕಿನಿಂದಲೇ ಇದು ನಡೆದಿದ್ದುದು ಗೊತ್ತಾಯಿತು. ಅಂದು ರಾತ್ರಿಯೇ ರೆವಿನ್ಯೂ ಇನ್ಸ್‌ಪೆಕ್ಟರನನ್ನು ಕರೆಸಿ ವಿಚಾರಿಸಿದರೆ ಆತ ತನಗೇನೂ ಗೊತ್ತಿಲ್ಲವೆಂದೇ ವಾದಿಸಿದ್ದ. ಅವನ ಕಾರ್ಯವ್ಯಾಪ್ತಿಯ ಗ್ರಾಮದಲ್ಲಿ ನ್ಯಾಯಾಲಯದ ಆದೇಶದ ಉಲ್ಲಂಘನೆ ಪ್ರಕರಣ ನಡೆಯಲು ಕಾರಣರಾದವರು ಯಾರು, ಆ ಫಲಕವನ್ನು ಹಾಕಿಸಿದವರು ಯಾರು ಈ ಕುರಿತು ವಿಚಾರಿಸಿ ಒಂದು ದಿನದ ಒಳಗೆ ವರದಿ ಸಲ್ಲಿಸಲು ತಿಳಿಸಿದೆ ಮತ್ತು ಇಂತಹ ಘಟನೆ ನಡೆಯಲು ಅವಕಾಶ ಕೊಟ್ಟಿದ್ದಕ್ಕೆ ಆತನ ಮತ್ತು ಸಂಬಂಧಿಸಿದ ಗ್ರಾಮಲೆಕ್ಕಿಗರ ಮೇಲೆ ಕ್ರಮ ತೆಗೆದುಕೊಳ್ಳಬಾರದೇಕೆಂದು ವಿವರಣೆ ಕೇಳಿ ನೋಟೀಸನ್ನೂ ನೀಡಿದೆ. ಊಹಿಸಿದ್ದಂತೆ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದವರು ಫಲಕದ ಫೋಟೋ ಸಹಿತ ನ್ಯಾಯಾಲಯಕ್ಕೆ ದೂರು ಅರ್ಜಿ ಸಹ ಸಲ್ಲಿಸಿದ್ದರು. ನನಗೆ ನ್ಯಾಯಾಲಯದಿಂದ ವಿವರಣೆ ಕೇಳಿ ಸಮನ್ಸ್ ಸಹ ಬಂದಿತ್ತು. ನ್ಯಾಯಾಲಯಕ್ಕೆ ವಸ್ತುಸ್ಥಿತಿ ವರದಿ ನೀಡಿದ್ದೆ. ರೆವಿನ್ಯೂ ಇನ್ಸ್ ಪೆಕ್ಟರ್ ಕಿತಾಪತಿ ಸ್ವಭಾವದವನಾಗಿದ್ದು ನಾನು ಮೇಲಾಧಿಕಾರಿಯಾಗಿದ್ದುದು ಅವನಿಗೆ ಕಷ್ಟವಾಗಿತ್ತು, ಕಾನೂನು ಬಾಹಿರ ಚಟುವಟಿಕೆಗಳನ್ನು ನಡೆಸಲು ಅಡ್ಡಿಯಾಗಿತ್ತು. ರಾಜಕೀಯ ಶಕ್ತಿ ಕೇಂದ್ರವಾಗಿದ್ದ ಆ ತಾಲ್ಲೂಕಿನ ರಾಜಕೀಯ ಪುಡಾರಿಗಳೊಂದಿಗೆ ಸಂಪರ್ಕವಿದ್ದ ಆತ ಅವರುಗಳ ಮೂಲಕ ಮತ್ತು ಜನರನ್ನು ಗುಂಪು ಕೂಡಿಸಿ ದೂರುಗಳನ್ನು ಹೇಳಿಸುವ ಮೂಲಕ ನನ್ನನ್ನು ಅಲ್ಲಿಂದ ಎತ್ತಂಗಡಿ ಮಾಡಲು ಸತತ ಪ್ರಯತ್ನ ನಡೆಸಿದ್ದ. ಅವು ಫಲಪ್ರದವಾಗಿರಲಿಲ್ಲ. ಹೀಗಾಗಿ ಅವನು ನನಗೆ ಕೆಟ್ಟ ಹೆಸರು ಬರುವಂತಹ ಪ್ರಕರಣಗಳನ್ನು ಸೃಷ್ಟಿಸುತ್ತಿದ್ದ. ಆದರೆ, ಅವನ ಇಂತಹ ಚಟುವಟಿಕೆಗಳ ವಿರುದ್ಧ ಕ್ರಮ ತೆಗೆದುಕೊಳ್ಳುವುದಕ್ಕೆ ಪೂರಕವಾದ ಸಾಕ್ಷ್ಯ/ದಾಖಲೆ ಸಿಗುತ್ತಿರಲಿಲ್ಲ. 
     ಹೀಗಿರುವಾಗ ಒಮ್ಮೆ ನನಗೆ ಮಾಹಿತಿ ಹಕ್ಕು ಆಯೋಗದಿಂದ ಒಂದು ಪ್ರಕರಣದಲ್ಲಿ ಅರ್ಜಿದಾರರಿಗೆ ಸೂಕ್ತ ಮಾಹಿತಿಯನ್ನು ಸಕಾಲದಲ್ಲಿ ಒದಗಿಸದಿದ್ದುದಕ್ಕೆ ನನಗೆ ದಂಡ ವಿಧಿಸಬಾರದೇಕೆಂದು ಕೇಳಿ ನೋಟೀಸು ಬಂದಿತು. ನನ್ನ ಹಿಂದಿನ ತಹಸೀಲ್ದಾರರ ಕಾಲದ ಆ ಪ್ರಕರಣದ  ವಿಷಯ ನನ್ನ ಗಮನಕ್ಕೇ ಬಂದಿರಲಿಲ್ಲ. ಕಡತಗಳನ್ನು ತೆಗೆಸಿ ನೋಡಲಾಗಿ ಸಂಬಂಧಿಸಿದ ಕಡತ ಕಾಣೆಯಾಗಿದ್ದು, ಇದೇ ರೆವಿನ್ಯೂ ಇನ್ಸ್‌ಪೆಕ್ಟರ್ ಹಿಂದೆ ಕಛೇರಿಯ ಗುಮಾಸ್ತನಾಗಿದ್ದ ಸಂದರ್ಭದಲ್ಲಿ ಸಂಬಂಧಿಸಿದ ಕಡತ ಕಣ್ಮರೆ ಮಾಡಿದ್ದು, ತನ್ನ ನಂತರದ ಗುಮಾಸ್ತರಿಗೆ ದುರುದ್ದೇಶಪೂರ್ವಕವಾಗಿ ಛಾರ್ಜು ಕೊಟ್ಟಿರದಿದ್ದುದು ಗೊತ್ತಾಯಿತು. ಆಗಲೇ ಹಿಂದಿನ ತಹಸೀಲ್ದಾರರು ಅವನಿಗೆ ನೋಟೀಸನ್ನೂ ಕೊಟ್ಟಿದ್ದರು. ರಾಜಕೀಯ ಪ್ರಭಾವದಿಂದ ವಿಷಯವನ್ನು ಮುಚ್ಚಿಹಾಕಲಾಗಿತ್ತು. ಇದನ್ನು ಬಳಸಿ ಅವನಿಗೆ ಪಾಠ ಕಲಿಸಲು ನಿರ್ಧರಿಸಿದ ನಾನು ಪುನಃ ಅವನಿಗೆ ನೋಟೀಸು ನೀಡಿ ೭ ದಿನಗಳ ಕಾಲಾವಕಾಶದಲ್ಲಿ ಕಡತ ಹಾಜರುಪಡಿಸದಿದ್ದರೆ ಶಿಸ್ತು ಕ್ರಮ ಕೈಗೊಳ್ಳುವುದಾಗಿ ಸೂಚನೆ ಕೊಟ್ಟೆ. ಅವನಿಂದ ಉತ್ತರ ಬರದಿದ್ದರಿಂದ ಜಿಲ್ಲಾಧಿಕಾರಿಯವರಿಗೆ ಪೂರಕ ದಾಖಲೆಗಳೊಂದಿಗೆ ವರದಿ ನೀಡಿದೆ. ಈ ಹಂತದಲ್ಲಿ ಕಳೆದ ೩-೪ ವರ್ಷಗಳಿಂದ ಸಿಕ್ಕದಿದ್ದ ಕಡತ ರೆಕಾರ್ಡು ಕೋಣೆಯಲ್ಲಿ ಸಿಕ್ಕಿತೆಂಬಂತೆ ಮಾಡಿದರು. ಮಾಹಿತಿ ಕೇಳಿದವರಿಗೆ ಪೂರ್ಣ ಮಾಹಿತಿ ನೀಡಿ ಮಾಹಿತಿ ಹಕ್ಕು ಆಯೋಗಕ್ಕೆ ವಿಳಂಬ ಮನ್ನಿಸುವಂತೆ ಕೋರಿ ವಿಳಂಬಕ್ಕೆ ಕಾರಣಗಳನ್ನು ವಿವರಿಸಿದೆ. ನನ್ನ ಒತ್ತಾಯದಿಂದಾಗಿ ಕಡತ ಕಣ್ಮರೆ ಮತ್ತು ಮಾಹಿತಿ ಹಕ್ಕು ಆಯೋಗದಿಂದ ನೋಟೀಸು ಬರಲು ಕಾರಣನಾದ ಆರೋಪಗಳ ಕುರಿತು ಆ ರೆವಿನ್ಯೂ ಇನ್ಸ್‌ಪೆಕ್ಟರನ ವಿರುದ್ಧ ಇಲಾಖಾ ವಿಚಾರಣೆಗೆ ಜಿಲ್ಲಾಧಿಕಾರಿಯವರು ಆದೇಶಿಸಿ, ಪಕ್ಕದ ತಾಲ್ಲೂಕಿನ ತಹಸೀಲ್ದಾರರನ್ನು ವಿಚಾರಣಾಧಿಕಾರಿಯಾಗಿ ಮತ್ತು ಅದೇ ಕಛೇರಿಯ ಶಿರಸ್ತೇದಾರರನ್ನು ಮಂಡನಾಧಿಕಾರಿಯಾಗಿ ನೇಮಿಸಿದ್ದರು. ಅಪರ ಜಿಲ್ಲಾಧಿಕಾರಿಯವರು ನನಗೆ, 'ಹೋಗಲಿ, ಬಿಟ್ಟುಬಿಡು' ಎಂದು ನನಗೆ ಹೇಳಿದ್ದಾಗಲೇ ವಿಚಾರಣೆ ಹೇಗಾಗಬಹುದೆಂದು ನನಗೆ ಗೊತ್ತಾಗಿತ್ತು ಮತ್ತು ಅವರು ಹಾಗೆ ಹೇಳಿದ್ದರ ಹಿನ್ನೆಲೆ ತಿಳಿದುಹೋಗಿತ್ತು. ವಿಚಾರಣಾಧಿಕಾರಿಯವರು ಈಚೆಗೆ ತಹಸೀಲ್ದಾರರಾಗಿ ಬಡ್ತಿ ಹೊಂದಿದವರಾಗಿದ್ದು ಆರೋಪಿ ನೌಕರರ ಸ್ನೇಹಿತರಾಗಿದ್ದರು. ಇನ್ನು ಮಂಡನಾಧಿಕಾರಿಯೂ ಆತನಿಗೆ ಪರಮಾಪ್ತ ಸ್ನೇಹಿತನಾಗಿದ್ದ. ಆ ಮಂಡನಾಧಿಕಾರಿ ಹಿಂದೊಮ್ಮೆ ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ ಬಿದ್ದಿದ್ದವನಾಗಿದ್ದು, ಆ ಕುರಿತು ವಿಚಾರಣೆ ಇನ್ನೂ ನಡೆಯುತ್ತಿತ್ತು. ಆ ಸಮಯದಲ್ಲಿ ನಾನು ಸೇವೆಯಿಂದ ಸ್ವ-ಇಚ್ಛಾ ನಿವೃತ್ತಿ ಪಡೆದೆ. ನಿವೃತ್ತನಾಗಿದ್ದರೂ, ವಿಚಾರಣೆ ಸಮಯದಲ್ಲಿ ಹಾಜರಾಗಿ ಸಾಕ್ಷ್ಯ ಹೇಳಿದೆ. ಮಂಡನಾಧಿಕಾರಿ ಪೂರಕ ದಾಖಲೆಗಳನ್ನು ವಿಚಾರಣೆ ಕಾಲದಲ್ಲಿ ಹಾಜರು ಪಡಿಸಿ ಗುರುತು ಮಾಡಿಸಲಿಲ್ಲ. ಅಲ್ಲೂ 'ಮ್ಯಾಚ್ ಫಿಕ್ಸ್' ಆಗಿತ್ತು. ಸಹಜವಾಗಿ ಆರೋಪಗಳು ಸಾಬೀತಾಗಲಿಲ್ಲವೆಂದು ವಿಚಾರಣಾಧಿಕಾರಿ ವರದಿ ಕೊಟ್ಟರು. ಸರಿಯಾಗಿ ವಿಚಾರಣೆ ನಡೆಸಲಿಲ್ಲವೆಂದು ಜಿಲ್ಲಾಧಿಕಾರಿಯವರಿಗೆ ನಾನು ದೂರಿದಾಗ ಅವರು ಅಪರ ಜಿಲ್ಲಾಧಿಕಾರಿಯವರಿಗೆ ವಿಚಾರಿಸಲು ಸೂಚಿಸಿದ್ದರು. ಆದರೆ ಆ ಅಪರ ಜಿಲ್ಲಾಧಿಕಾರಿಯವರು ಆರೋಪಿಯ ಬಗ್ಗೆ ಮೊದಲಿನಿಂದಲೇ ಮೃದುಧೋರಣೆ ಹೊಂದಿದ್ದುದರ ಹಿನ್ನೆಲೆ ಅರ್ಥವಾಗದುದಾಗಿರಲಿಲ್ಲ. ಪುನರ್ವಿಚಾರಣೆ ನಡೆಯಲಿಲ್ಲ. ಆ ರೆವಿನ್ಯೂ ಇನ್ಸ್ ಪೆಕ್ಟರ್ ಶಿರಸ್ತೇದಾರನಾಗಿ ಬಡ್ತಿ ಹೊಂದಿದ.
     ಇಲ್ಲಿಗೆ ಅರ್ಥಹೀನ ಇಲಾಖಾ ವಿಚಾರಣೆಗಳ ಕುರಿತ ನಿದರ್ಶನಗಳ ಸರಣಿಯನ್ನು ಮುಕ್ತಾಯಗೊಳಿಸುವೆ. ಮುಂದಿನ ಲೇಖನದಲ್ಲಿ ಇಲಾಖಾ ವಿಚಾರಣೆಗಳು ಅರ್ಥಪೂರ್ಣವೆನಿಸಲು ಅನುಸರಿಸಬಹುದಾದ ಕ್ರಮಗಳ ಕುರಿತು ವಿವೇಚಿಸೋಣ.
-ಕ.ವೆಂ.ನಾಗರಾಜ್.
**************
7.05.2014ರ ಜನಹಿತ ಪತ್ರಿಕೆಯಲ್ಲಿ ಪ್ರಕಟಿತ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ