ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಮಂಗಳವಾರ, ಜನವರಿ 6, 2015

ಮನಸ್ಸೇ ಪ್ರಪಂಚ, ಪ್ರಪಂಚವೇ ಮನಸ್ಸು !


     ಜ್ಞಾನ ದೊಡ್ಡದು, ಜ್ಞಾನಕ್ಕೆ ಆಧಾರವಾದ ಮಾತು ಅದಕ್ಕಿಂತ ದೊಡ್ಡದು ಎಂಬ ಬಗ್ಗೆ ತಿಳಿದುಕೊಂಡೆವು. ಈ ಜ್ಞಾನ ಮತ್ತು ಮಾತುಗಳಿಗೂ ಒಬ್ಬ ಯಜಮಾನನಿದ್ದಾನೆ. ಅವನೇ ಮನಸ್ಸು! ಭಾಷೆಯ ಮೂಲಕ ಮೂಡುವ ಎಲ್ಲಾ ಅಭಿವ್ಯಕ್ತಿಗಳು ಮನಸ್ಸಿನಿಂದಲೇ ನಿಯಂತ್ರಿತವಾದವು. ಮನಸ್ಸು ನಿಷ್ಕ್ರಿಯವಾಗಿದ್ದರೆ, ಮಾತೂ ಇಲ್ಲ, ಜ್ಞಾನವೂ ಸೊನ್ನೆ. ಆದ್ದರಿಂದ ಮನಸ್ಸು ಈ ಎರಡಕ್ಕಿಂತಲೂ ದೊಡ್ಡದಾಗಿದೆ. ಮನಸ್ಸಿನಲ್ಲಿ ಜ್ಞಾನವೂ ಇದೆ, ಮಾತೂ ಇದೆ. ಇದೇ ಮನಸ್ಸಿನ ಶಕ್ತಿ. ನಾವು ಏನನ್ನೇ ಮಾಡಲಿ, ಏನನ್ನೇ ಮಾತನಾಡಲಿ, ಮೊದಲು ಮನಸ್ಸು ಅದನ್ನು ನಿರ್ಧರಿಸುತ್ತದೆ. ನಾವು, "ಹೀಗೆ ಮಾಡೋಣ, ಹಾಗೆ ಮಾಡೋಣ" ಎಂದು ಮೊದಲು ಅಂದುಕೊಳ್ಳುತ್ತೇವೆ, ನಂತರ ಮಾಡಲು ಹೊರಡುತ್ತೇವೆ, ಮಾಡುತ್ತೇವೆ.
     ಜೀವನದಲ್ಲಿ ಮನಸ್ಸು ಪ್ರಧಾನವಾದದ್ದು, ಇದು ಎಲ್ಲರಿಗೂ ತಿಳಿದದ್ದೇ. ವ್ಯಾವಹಾರಿಕವಾಗಿ ಹೇಳಬೇಕೆಂದರೆ ನಾವು ಅಂದರೆ ನಮ್ಮ ಮನಸ್ಸೇ ಆಗಿದೆ. 'ನಾನು' ಅನ್ನುತ್ತೇವೆ. ಈ 'ನಾನು' ಅಂದರೆ ಯಾರು? ಈ 'ನಾನು' ಎಂದರೆ ಮನಸ್ಸು ಬಿಟ್ಟು ಮತ್ತೇನೂ ಅಲ್ಲವೆಂದು ಅಂದುಕೊಳ್ಳುತ್ತೇವೆ. ಹಾಗಾದರೆ ಈ ಮನಸ್ಸು ನಮ್ಮತನವನ್ನು ಹೊಂದಿದೆ. 'ನಾನು' ಎಂದರೆ ಮನಸ್ಸಲ್ಲವೆಂಬುದು ತರ್ಕಿಸಿದಾಗ ಗೊತ್ತಾಗುತ್ತಾ ಹೋಗುತ್ತದೆ. ಕನ್ನಡಿ ಬೆಳಕನ್ನು ಪ್ರತಿಫಲಿಸಿದಂತೆ ಮನಸ್ಸು ಆತ್ಮನನ್ನು ಪ್ರತಿಫಲಿಸುತ್ತಿದೆಯಷ್ಟೆ. ಆದ್ದರಿಂದ ವ್ಯಾವಹಾರಿಕ ಉದ್ದೇಶಗಳಿಗೆ ಮನಸ್ಸು ಎಂದರೆ ಆತ್ಮ ಅರ್ಥಾತ್ 'ನಾನು' ಆಗಿರುತ್ತದೆ. ಈ ಪ್ರಪಂಚದಲ್ಲಿ ನಾವು ಏನು ಸಾಧಿಸುತ್ತೇವೆಯೋ ಅದೆಲ್ಲದಕ್ಕೂ ಮನಸ್ಸೇ ಕಾರಣವಾಗಿದೆ, ಏಕೆಂದರೆ ಪ್ರಪಂಚವೆಂದರೆ ನಮ್ಮ ಅನುಭವಕ್ಕೆ ಏನು ಬರುತ್ತದೆಯೋ ಅದೇ ಆಗಿದೆ. ನಮ್ಮ ಜೀವನದಲ್ಲಿ ಗಳಿಸುವ ಅನುಭವಗಳೆಲ್ಲವೂ ನಮ್ಮ ಕ್ರಿಯೆಗಳ ಕಾರಣಗಳಿಂದಲೇ ಬಂದಿದೆ ಮತ್ತು ಆ ಕ್ರಿಯೆಗಳ ಹಿಂದೆ ಅವನ್ನು ಮಾಡಿಸಿದ ಮನಸ್ಸು ಕೆಲಸ ಮಾಡಿದೆ. ಆದ್ದರಿಂದ ನಮ್ಮ ಅನುಭವಗಳು, ಎಲ್ಲಾ ಕಾರ್ಯಗಳು ನಿಯಂತ್ರಿಸಲ್ಪಟ್ಟಿರುವುದು ಮನಸ್ಸಿನಿಂದಲೇ ಆಗಿದೆ. ಆದ್ದರಿಂದ ಒಂದು ಅರ್ಥದಲ್ಲಿ ಮನಸ್ಸೇ ಪ್ರಪಂಚವಾಗಿದೆ.
     ಧ್ಯಾನದಲ್ಲಿ ಮನಸ್ಸು ಪ್ರಧಾನ ಪಾತ್ರ ವಹಿಸುತ್ತದೆ. ಮನಸ್ಸು ಏನನ್ನು ಚಿಂತಿಸಲು ಸಾಧ್ಯವೋ ಅಷ್ಟನ್ನು ಧ್ಯಾನದ ಮಿತಿಯಲ್ಲಿ ತರಲು ಸಾಧ್ಯ. ಸಾಮಾನ್ಯರಾದ ನಾವುಗಳು ಧ್ಯಾನದಲ್ಲಿ ತಲುಪಬಹುದಾದ ಅಂತಿಮ ಘಟ್ಟ ಇದು. ಮನಸ್ಸಿನ ಚಿಂತನಾಧಾಟಿಯನ್ನು ಮೀರಿ ಏನು ಮಾಡಲಾದೀತು? ಆದ್ದರಿಂದ ಮನಸ್ಸಿನ ಎಲ್ಲಾ ಸಾಧ್ಯತೆಗಳನ್ನು ಒಟ್ಟುಗೂಡಿಸಿ ಕಲಾತ್ಮಕವಾಗಿ, ಸುಂದರವಾಗಿ, ನಮ್ಮ ತಿಳುವಳಿಕೆಯ ಮಟ್ಟಕ್ಕೆ ಪರಿಪೂರ್ಣ ಅನ್ನುವ ಒಂದು ನಿರ್ದಿಷ್ಟ ರೀತಿಗೆ ತಂದುಕೊಂಡಲ್ಲಿ 'ಪರಿಪೂರ್ಣ' ಅನ್ನುವುದರ ಕಲ್ಪನೆ ನಮಗೆ ಬಂದೀತು! ಯಾವುದೇ ಸಂಗತಿಯಿರಲಿ, ವಿಚಾರವಿರಲಿ, ಅದರ ಪರಿಪೂರ್ಣತೆಯ ಹಂತಕ್ಕೆ ಮನಸ್ಸನ್ನು ಕರೆದೊಯ್ಯಬೇಕು. ಮನಸ್ಸು ಚಂಚಲಗೊಳ್ಳಲು ಕಾರಣವೆಂದರೆ ನಾವು ಏನನ್ನು ಧ್ಯಾನಿಸುತ್ತಿರುತ್ತೇವೆಯೋ ಅದಕ್ಕಿಂತ ಹೊರತಾಗಿ, ಅದಕ್ಕಿಂತ ಮೇಲಿನದು ಮತ್ತೇನೋ ಇದೆಯೆಂಬ ಸೂಕ್ಷ್ಮ ಭಾವನೆ ಬರುವುದೇ ಆಗಿದೆ. ಮನಸ್ಸನ್ನು ಧ್ಯಾನದಲ್ಲಿ ಕೇಂದ್ರೀಕರಿಸಲು ಮನಸ್ಸು ಚಿಂತಿಸಲು ಸಾಧ್ಯವಿರುವ ಪ್ರತಿಯೊಂದು ಒಳ್ಳೆಯ ವಿಚಾರಗಳನ್ನು ಒಳಗೊಂಡಂತೆ ಇರುವಂತಹ ಸಂಗತಿಯಾದರೆ ಉತ್ತಮವಾಗಿರುತ್ತದೆ.
     'ನಾನು' ಅಂದರೆ ಮನಸ್ಸು ಎಂದು ಅಂದುಕೊಂಡರೆ ನಾವು ಮನಸ್ಸಿನ ಯಜಮಾನರಾಗಿರಬೇಕು. ಆದರೆ ಹಾಗೆ ಇದೆಯೇ? ಮನಸ್ಸು ವಿವಿಧ ದಿಕ್ಕುಗಳಲ್ಲಿ ಹೊಯ್ದಾಡುತ್ತಲೇ ಇರುತ್ತದೆ. ಮನಸೆಂಬ ಗಾಳಿ ಬೀಸಿದೆಡೆಗೆ ನಾವು ಹೋಗುತ್ತಿರುತ್ತೇವೆ. ಮನಸ್ಸು ನಮ್ಮ ಯಜಮಾನನಂತೆ ವರ್ತಿಸುತ್ತದೆ. ಆದ್ದರಿಂದ ಮನಸ್ಸು ಅನ್ನುವುದು 'ನಾನು' ಹೇಳಿದಂತೆ ಕೇಳದಿದ್ದಾಗ, ಮನಸ್ಸು ಅನ್ನುವುದು ನಮ್ಮ ನಿಜವಾದ 'ನಾನು' ಅಥವ ಆತ್ಮ ಆಗಲಾರದು. ಧ್ಯಾನ ಅನ್ನುವುದು ಈ 'ನಾನು' ಮತ್ತು ಮನಸ್ಸನ್ನು ಒಟ್ಟುಗೂಡಿಸಿ ಮನಸ್ಸನ್ನು ನಿಯಂತ್ರಿಸಲು ಇರುವ ಸಾಧನವಾಗಿದೆ. ಯಾವುದೇ ವಿಷಯಕ್ಕೆ ಸಂಬಂಧಿಸಿದಂತೆ ನಾವು ಯಜಮಾನರೆನಿಸಿಕೊಳ್ಳಬೇಕೆಂದರೆ ಅದರ ಮೇಲೆ ನಮ್ಮ ನಿಯಂತ್ರಣವಿರಬೇಕು. ಮನಸ್ಸನ್ನು ನಿಯಂತ್ರಿಸಿ ಅದನ್ನು ಹತೋಟಿಯಲ್ಲಿ ಇಟ್ಟುಕೊಳ್ಳಬಹುದಾದ ಸಾಧನವೆಂದರೆ ಧ್ಯಾನವೇ ಆಗಿದೆ.
     ಮನಸ್ಸಿನ ಚಂಚಲತೆ ಕುರಿತು ಈ ಉದಾಹರಣೆಯನ್ನು ಒಮ್ಮೆ ಹೇಳಿದ್ದೆ. ಪ್ರಸ್ತುತವೆನಿಸಿರುವುದರಿಂದ ಮತ್ತೆ ಉಲ್ಲೇಖಿಸುವೆ. ಕುಡಿಯುವುದು ಒಳ್ಳೆಯದಲ್ಲ ಎಂದು ಎಲ್ಲರಿಗೂ ಗೊತ್ತಿದೆ. ಕುಡುಕನ ಮನಸ್ಸೂ ಹೇಳುತ್ತದೆ, 'ಬೇಡ, ಕುಡಿಯಬೇಡ, ಒಳ್ಳೆಯದಲ್ಲ' ಅಂತ. ಆದರೆ, 'ಜೀವನದ ಅವಧಿ ಕಡಿಮೆ. ಇರುವಷ್ಟು ದಿನ ಮಜಾ ಮಾಡಿ, ಖುಷಿಪಟ್ಟು ಹೋಗೋಣ' ಎಂದು ಉಪದೇಶಿಸುವ ಅದೇ ಮನಸ್ಸು 'ಕುಡಿ, ಮಜಾ ಮಾಡು. ನಿನಗೆ ಅದರಿಂದ ಸಂತೋಷ ಸಿಗುವುದಾದರೆ ಅದನ್ನು ಏಕೆ ಕಳೆದುಕೊಳ್ಳುತ್ತೀಯೆ' ಎಂದು ಪ್ರಚೋದಿಸುತ್ತದೆ. ಹಾಗೂ ಡೋಲಾಯಮಾನ ಸ್ಥಿತಿ ಮುಂದುವರೆದರೆ,  ಮಧ್ಯಮ ಮಾರ್ಗ ಸೂಚಿಸಿ ಹೇಳುತ್ತದೆ: 'ಇದೊಂದು ಸಲ ಕುಡಿದು ಬಿಡು, ಆಮೇಲೆ ಕುಡಿಯದಿದ್ದರಾಯಿತು.' ಕೊನೆಗೆ ಅವನು ಯೋಚನೆ ಮುಂದುವರೆಸಿದ್ದಂತೆಯೇ ಅವನ ಕಾಲುಗಳು ಬಾರಿನ ಹಾದಿ ಹಿಡಿದಿರುತ್ತವೆ.
     'ಯಾರು ಏನೇ ಅನ್ನಲಿ, ನನ್ನ ಮನಸ್ಸು ಒಪ್ಪಿದಂತೆ ಮಾಡುತ್ತೇನೆ, ಅದರಿಂದ ನನಗೆ ಸಂತೋಷವಾಗುತ್ತದೆ' ಎಂದು ಸಮರ್ಥಿಸಿಕೊಳ್ಳುತ್ತೇವೆ. ಖ ಅಂದರೆ ಇಂದ್ರಿಯ, ಸು-ಖ ಅಂದರೆ,  ಯಾವುದು ಇಂದ್ರಿಯಕ್ಕೆ ಒಳ್ಳೆಯದಾಗಿ ಕಾಣುತ್ತೋ ಅದು ಸುಖ, ದುಃ-ಖ ಅಂದರೆ, ಯಾವುದು ಇಂದ್ರಿಯಕ್ಕೆ ಕೆಟ್ಟದಾಗಿ ಕಾಣುತ್ತೋ ಅದು ದುಃಖ. ವಾಸ್ತವವಾಗಿ ಆಲೋಚನೆ ಮಾಡಿ ನೋಡಿದರೆ, ನಾವು ಸುಖ ಎಂದು ತಿಳಿದುಕೊಂಡಿರುವುದು ದುಃಖವೇ ಆಗಿರಬಹುದು, ದುಃಖ ಎಂದು ತಿಳಿದುಕೊಂಡಿರುವುದು ಸುಖವೇ ಆಗಿರಬಹುದು, ತತ್ಕಾಲಕ್ಕೆ ಸಂತೋಷವಾಯಿತು ಅನ್ನಿಸುವ ಕ್ರಿಯೆಗಳು ನಂತರ ಮನಃಕ್ಲೇಷಕ್ಕೆ ಈಡು ಮಾಡಬಹುದು. ಈಗ ಕಷ್ಟ ಅನ್ನಿಸುವ ಸಂಗತಿಗಳು ನಂತರದಲ್ಲಿ ಸಂತೋಷ ಕೊಡುವುದೂ ಇದೆ. ಇಂದ್ರಿಯಗಳು ಆರೋಗ್ಯವಾಗಿದ್ದರೆ ಸುಖ, ದುಃಖ ನಮಗೆ ಗೊತ್ತಾಗೋದು. ಒಂದೇ ಮನಸ್ಸು ಹಲವು ರೀತಿಗಳಲ್ಲಿ ಹೇಳುತ್ತದೆ. ಮನಸ್ಸು ಹೇಳಿದಂತೆ ಕೇಳಿದರೆ ಒಳ್ಳೆಯದೂ ಆಗಬಹುದು, ಕೆಟ್ಟದೂ ಆಗಬಹುದು.
     ನಿದ್ದೆ ಮಾಡಿದಾಗ ಆ ಮನಸ್ಸು ಎಲ್ಲಿರುತ್ತದೆ? ಮನಸ್ಸು ಅಂತಿರಲಿ, ನಾವೇ ಇರುವುದಿಲ್ಲ. ನಿದ್ದೆಯಲ್ಲಿ 'ನಾನು' ಇಲ್ಲ, ಜಗತ್ತೂ ಇಲ್ಲ, ದೇವರೂ ಇಲ್ಲ, ಯಾರೂ ಇಲ್ಲ. ಏನೂ ಇಲ್ಲ, ಶೂನ್ಯ. ಆಗ ಸುಖವೂ ಇಲ್ಲ, ದುಃಖವೂ ಇಲ್ಲ. ವಿಚಾರಗಳ ಗೊಂದಲವಿಲ್ಲ. ದ್ವೈತ, ಅದ್ವೈತ, ತ್ರೈತ, ಇತ್ಯಾದಿ ಯಾವ 'ತ'ಗಳೂ ಇಲ್ಲ. ಧರ್ಮಗಳಿಲ್ಲ, ಜಾತಿ, ಮತ, ಪಂಗಡಗಳಿಲ್ಲ. ಅದೇ ಎಚ್ಚರವಾದ ತಕ್ಷಣ, ಮೊದಲು 'ನಾನು' ಏಳುತ್ತದೆ. ಆ 'ನಾನು'ಗೆ ಜಗತ್ತು ಕಾಣುತ್ತದೆ, ಇದಕ್ಕೆಲ್ಲಾ ಕಾರಣನಾದ 'ಅವನು' ಇದ್ದಾನೆ ಅನ್ನುತ್ತದೆ. ಅಂದರೆ ನಾನು ಬೇರೆ, ಜಗತ್ತು ಬೇರೆ, ದೇವರು ಬೇರೆ ಎಂದು ಅಂದುಕೊಳ್ಳುತ್ತದೆ. ನಿದ್ದೆಯಲ್ಲಿ ಇರದ ಸಂಗತಿಗಳು, ಎಚ್ಚರವಾದಾಗ ಬರುತ್ತವೆ. ನಾನು ತಹಸೀಲ್ದಾರ್, ನಾನು ಇಂಜನಿಯರ್, ನಾನು ಪ್ರಧಾನ ಮಂತ್ರಿ ಅನ್ನುವುದೆಲ್ಲಾ ಹುಟ್ಟುವುದು ಎಚ್ಚರವಾದಾಗ ಮಾತ್ರ, ನಿದ್ದೆಯಲ್ಲಿ ಅವು ಯಾವುವೂ ಇರುವುದಿಲ್ಲ. ಮನಸ್ಸಿನ ಮೇಲೆ ಮಾಯಾ ಮೋಹಿನಿ ಆಡುವ ಆಟಗಳಿವು.
     ಹೀಗಿರುವಾಗ ದೇವರು ಮನುಷ್ಯನಿಗೆ ಕೊಟ್ಟಿರುವ ವಿವೇಚನಾ ಶಕ್ತಿಯನ್ನು ಬಳಸಿಕೊಂಡು ಸರಿ-ತಪ್ಪುಗಳ ಸರಿಯಾದ ವಿಶ್ಲೇಷಣೆ ಮಾಡಿ ಮುನ್ನಡೆಯುವುದು ಸೂಕ್ತ. ಮನಸ್ಸಿನಲ್ಲಿ ದ್ವಂದ್ವವಿದ್ದು, ವಿವೇಚನಾ ಶಕ್ತಿ ಹೇಳಿದ ವಿಚಾರ ಕಡೆಗಣಿಸಿ 'ಯಾರು ಏನಾದರೂ ಅಂದುಕೊಳ್ಳಲಿ, ಹೀಗೆ ಮಾಡಿದರೆ ನನ್ನ ಮನಸ್ಸಿಗೆ ಸಂತೋಷವಾಗುತ್ತದೆ' ಎಂದು ಮಾಡಿದರೆ ಒಳಮನಸ್ಸು ನಿಮ್ಮನ್ನು ಪ್ರಶ್ನಿಸದೇ ಇರುವುದಿಲ್ಲ. ಹೀಗೆ ಮಾಡು ಎನ್ನುವುದೇ ಮನಸ್ಸು, ಹೀಗೇಕೆ ಮಾಡಿದೆ ಎಂದು ಪ್ರಶ್ನಿಸುವುದೂ ಅದೇ ಮನಸ್ಸೇ. ಮನಸ್ಸು ನಮ್ಮನ್ನು ನಿಯಂತ್ರಿಸುವ ಬದಲು, ಮನಸ್ಸನ್ನು ಹತೋಟಿಯಲ್ಲಿಟ್ಟುಕೊಳ್ಳಲು ಪ್ರಯತ್ನಿಸುವುದೇ ದ್ವಂದ್ವವನ್ನು ಕೊನೆಗೊಳಿಸಲು ಸರಿಯಾದ ದಾರಿ. ಕೆಲವು ಸಂದರ್ಭಗಳಲ್ಲಿ ಅಂತರಾತ್ಮ ಒಪ್ಪುವಂತೆ ನಡೆದುಕೊಳ್ಳಲು ಕಷ್ಟವಾಗಬಹುದು. ಅನಿವಾರ್ಯವಾಗಿ ಹಾಗೆ ಮಾಡಿದ್ದನ್ನು ಸಮರ್ಥಿಸಿಕೊಳ್ಳಲು ಹೋಗದೆ ಸರಿಯಾದ ಹಾದಿಯಲ್ಲಿ ನಡೆಯಲು ನಮ್ಮ ಪ್ರಯತ್ನ ಮುಂದುವರೆಸುವುದು ಸೂಕ್ತ.
     ಮನಸ್ಸಿನ ನಿಯಂತ್ರಣ ಒಂದು ಅಂತರಂಗದ ಆಟ. ಈ ಅಟದಲ್ಲಿ ನಾವು ಕೆಲವೊಮ್ಮೆ ಗೆಲ್ಲುತ್ತೇವೆ, ಕೆಲವೊಮ್ಮೆ ಸೋಲುತ್ತೇವೆ, ಕೆಲವೊಮ್ಮೆ ಎಡವುತ್ತೇವೆ. ಈ ಆಟ ಆಡಲು ಚತುರತೆ, ಎಚ್ಚರಿಕೆ, ಹೃದಯದ ಶ್ರೀಮಂತಿಕೆ, ಯೋಜಿಸುವ ಸಾಮರ್ಥ್ಯ, ತಾಳ್ಮೆ, ಸಹನೆ, ಇತ್ಯಾದಿಗಳೆಲ್ಲವೂ ಇರಬೇಕಾಗುತ್ತದೆ. ಗೆದ್ದಾಗ ಮೈಮರೆಯದೆ, ಸೋತಾಗ ಕುಗ್ಗದೆ ಇರುವ ಮನೋಭಾವವಿರಬೇಕಾಗುತ್ತದೆ.
     ಭಗವದ್ಗೀತೆಯಲ್ಲಿ ಅರ್ಜುನ ಶ್ರೀಕೃಷ್ಣನಿಗೆ ಕೇಳುವ ಈ ಪ್ರಶ್ನೆ ನಮ್ಮ ಪ್ರಶ್ನೆಯೂ ಆಗಿದೆ: ಅಥಕೇನ ಪ್ರಯುಕ್ತೋಯಂ ಪಾಪಂ ಚರತಿ ಪೂರುಷಃ | ಅನಿಚ್ಛನ್ನಪಿ ವಾರ್ಷ್ಣೇಯ ಬಲಾರ್ದಿವ ನಿಯೋಜಿತಃ || (೩.೩೬) - 'ಇಷ್ಟವಿಲ್ಲದಿದ್ದರೂ ಬಲವಂತವಾಗಿ ಮಾಡಲ್ಪಡುವವನಂತೆ ಮನುಷ್ಯನು ಪಾಪವನ್ನು ಮಾಡಲು ಇರುವ ಪ್ರೇರಣೆಯಾದರೂ ಎಂತಹುದು?' ಎಂಬ ಈ ಪ್ರಶ್ನೆ 'ಕುಡಿಯುವುದು ಕೆಟ್ಟದ್ದು ಎಂದು ಕುಡುಕನಿಗೇ ಗೊತ್ತಿದ್ದರೂ ಆತ ಏಕೆ ಕುಡಿಯುತ್ತಾನೆ?' ಎಂದು ಕೇಳಿದಂತೆ ಇದೆ. ಶ್ರೀಕೃಷ್ಣ ಹೇಳುತ್ತಾನೆ: "ಕಾಮ, ಕ್ರೋಧಗಳು ರಜೋಗುಣದಿಂದ ಹುಟ್ಟಿದ್ದು ಇವುಗಳನ್ನು ತೃಪ್ತಿಗೊಳಿಸಲಾಗದು. ಹೊಗೆಯಿಂದ ಬೆಂಕಿ, ಧೂಳಿನಿಂದ ಕನ್ನಡಿ ಮುಚ್ಚಿ ಹೋಗುವಂತೆ ಈ ಪ್ರಪಂಚ ಕಾಮ-ಕ್ರೋಧಗಳಿಂದ ಮುಚ್ಚಿಹೋಗಿದೆ. ಇಂದ್ರಿಯಗಳು, ಬುದ್ಧಿ, ಮನಸ್ಸು ಇವುಗಳು ಕಾಮದ ನೆಲೆವೀಡುಗಳು. ಆದ್ದರಿಂದ ಇಂದ್ರಿಯಗಳನ್ನು ನಿಗ್ರಹಿಸಿ, ಜ್ಞಾನ-ವಿಜ್ಞಾನಗಳನ್ನು ನಾಶ ಮಾಡುವ ಕಾಮವನ್ನು ಹತ್ತಿಕ್ಕಬೇಕು." ಮುಂದುವರೆದು ಹೇಳುತ್ತಾನೆ: 'ವಿಷಯಗಳಿಗಿಂತ ಇಂದ್ರಿಯಗಳು ಹೆಚ್ಚಿನವು, ಇಂದ್ರಿಯಗಳಿಗಿಂತ ಮನಸ್ಸು ಹೆಚ್ಚಿನದು, ಬುದ್ಧಿಯು ಮನಸ್ಸಿಗಿಂತ ಹೆಚ್ಚಿನದು. ಈ ಬುದ್ಧಿಗಿಂತಲೂ ಆತ್ಮ ಶ್ರೇಷ್ಠವಾದುದು.' ಆತ್ಮ ಜ್ಞಾನವನ್ನು ಅರಿಯುವ ಅಂತರಂಗದ ಆಟ ಆಡಲು ತೊಡಗಿದಾಗ ಸತ್ಯಾಸತ್ಯತೆಯ ಅರಿವು ಗೊತ್ತಾಗುತ್ತಾ ಹೋಗುತ್ತದೆ. ಈ ಅಟದಲ್ಲಿ ಗೆಲ್ಲಬೇಕೆಂದರೆ ಮೊದಲು ಮನಸ್ಸನ್ನು ನಿಯಂತ್ರಿಸಬೇಕೆಂಬ ಧೃಡವಾದ ಸಂಕಲ್ಪ ಹೊಂದಬೇಕು, ಮನಸ್ಸಿನ ಸ್ವಭಾವವನ್ನು ಅರಿಯಬೇಕು ಮತ್ತು ಅದಕ್ಕಾಗಿ ನಮ್ಮದೇ ಆದ ತಂತ್ರಗಳು, ರೀತಿ-ನೀತಿಗಳನ್ನು ರೂಪಿಸಿಕೊಂಡು ಅವುಗಳನ್ನು ಬುದ್ದಿವಂತಿಕೆಯಿಂದ, ಪ್ರಾಮಾಣಿಕತೆಯಿಂದ ಜಾರಿಗೆ ತರಬೇಕು. ವಜ್ರವನ್ನು ವಜ್ರ ಕತ್ತರಿಸುವಂತೆ ಮನಸ್ಸಿನ ಚಂಚಲತೆಯನ್ನು ನಿಗ್ರಹಿಸಲು ಬೇಕಿರುವುದು ಮಾನಸಿಕ ಬಲವೇ ಹೊರತು ಮತ್ತಾವುದರಿಂದಲೂ ಅದು ಜಗ್ಗುವುದಿಲ್ಲ.
      ಸಾಧನೆಯ ಮೊದಲ ಹಂತ ಜ್ಞಾನದೊಡೆಯರಾಗುವುದು. ಎರಡನೆಯ ಹಂತ ನಾವಾಡುವ ಮಾತುಗಳಿಗೆ ಒಡೆಯರಾಗುವುದು. ಮೂರನೆಯ ಹಂತವೇ 'ನಾನು' ಎಂದು ನಾವು ಅಂದುಕೊಂಡಿರುವ ನಮ್ಮ ಮನಸ್ಸುಗಳಿಗೆ ಯಜಮಾನರಾಗುವುದು!
ಪರಮಾತ್ಮ ನೀಡಿಹನು ಪರಮ ಸಂಪತ್ತು
ವಿವೇಚಿಪ ಶಕ್ತಿ ಮೇಣ್ ಮನಸಿನ ಬಲವು |
ನಿನಗೆ ನೀನೆ ಮಿತ್ರ ಸರಿಯಾಗಿ ಬಳಸಿದೊಡೆ
ಇಲ್ಲದಿರೆ ನಿನಗೆ ನೀನೆ ಅರಿಯು ಮೂಢ ||
-ಕ.ವೆಂ.ನಾಗರಾಜ್.  
***************
ದಿನಾಂಕ 5.1.2015ರ ಜನಮಿತ್ರ ಪತ್ರಿಕೆಯ 'ಚಿಂತನ' ಅಂಕಣದಲ್ಲಿ ಪ್ರಕಟಿತ:


12 ಕಾಮೆಂಟ್‌ಗಳು:

  1. ಪ್ರತ್ಯುತ್ತರಗಳು
    1. swara kamath
      ಪ್ರತಿ ಕ್ಷಣವು ನಮ್ಮನ್ನು ನಿಯಂತ್ರಿಸುವ ಮನಸ್ಸನ್ನು ಹಿಡಿತದಲ್ಲಿರಿಸಲು ಪ್ರತಿದಿನ ಮಾಡುವ ಧ್ಯಾನ,ಯೋಗಬ್ಯಾಸ ದಿಂದ ಸಾದ್ಯವೆಂಬುದು ಸಾಧಕರಿಂದ ದೃಡಪಟ್ಟಿದೆ.ನಿರಂತರ ನಮ್ಮ ಪ್ರಯತ್ನ ಬೇಕಷ್ಟೆ.ಈ ಸಂದರ್ಭದಲ್ಲಿ ನನಗೆ ಮಾನ್ಯ ಡಿ.ವಿ.ಜಿ.ಅವರ ಕಗ್ಗದ ಸಾಲುಗಳು ನೆನಪಾಗುತ್ತದೆ.
      ಮನವನಾಳ್ವುದು ಹಟದ ಮಗುವನಾಳುವ ನಯದೆ|
      ಇನಿತನಿತು ಸವಿಯುಣಿಸು ಸವಿಕಥೆಗಳಿಂದೆ||
      ಅನುಕೂಲಿಸದು ಬರಿ ಕೂಗು ಬಡಿತಗಳಿನದು|
      ಇನಿತಿತ್ತು ಮರಸಿನಿತ- ಮಂಕುತಿಮ್ಮ||
      ಸುಂದರ ಲೇಖನ ನಾಗರಾಜರೆ, ವಂದನೆಗಳು,ರಮೇಶ ಕಾಮತ್

      kavinagaraj
      ನೀವು ಹೇಳಿರುವುದು ನಿಜ, ರಮೇಶ ಕಾಮತರೇ. ಡಿವಿಜಿಯವರ ಮಾತು ಮಂತ್ರಸಮಾನ. ಮುಂದಿನ ಲೇಖನಗಳಲ್ಲಿ ನೀವು ಹೇಳಿದ ಸಂಗತಿಗಳ ಪ್ರಸ್ತಾಪ ಮಾಡುವೆ. ಧನ್ಯವಾದಗಳು

      ಅಳಿಸಿ
  2. 'ಸರಿಯಾಗಿ ಬಳಸಿದೊಡೆ' ಮನಸ್ಸನ್ನು ಗೆಲ್ಲಬಲ್ಲೆವು ಇಹಪರವನ್ನೂ ಎಂದು ಕಣ್ಣು ತೆರೆಸಿದಿರಿ.

    ಪ್ರತ್ಯುತ್ತರಅಳಿಸಿ
    ಪ್ರತ್ಯುತ್ತರಗಳು
    1. nageshamysore
      ಜ್ಞಾನ - ಮಾತು - ಮನಸಿನ ಶಕ್ತಾಯುಧದ ಮುಖೇನ ನಾನೆಂಬ ಅಹಮಿಕೆಯನ್ನು ಹದ್ದುಬಸ್ತಿನಲ್ಲಿಟ್ಟುಕೊಂಡರೆ ಚಿತ್ತ ಚಾಂಚಲ್ಯದ ಕಪಟ ಮಾಯೆಯನ್ನು ಅಧಿಗಮಿಸಿ ಜಿತೇಂದ್ರಿಯತ್ವದತ್ತ ನಡೆಯಬಹುದೆನ್ನುವುದನ್ನು ಸೊಗಸಾಗಿ ನಿರೂಪಿಸಿದ ತೂಕದ ಬರಹ. ಧನ್ಯವಾದಗಳು ಕವಿಗಳೆ :-)

      kavinagaraj
      ಪ್ರತಿವಂದನೆಗಳು, ನಾಗೇಶರೇ.

      ಅಳಿಸಿ
    2. ಗಣೇಶ
      >>ವಜ್ರವನ್ನು ವಜ್ರ ಕತ್ತರಿಸುವಂತೆ ಮನಸ್ಸಿನ ಚಂಚಲತೆಯನ್ನು ನಿಗ್ರಹಿಸಲು ಬೇಕಿರುವುದು ಮಾನಸಿಕ ಬಲವೇ ಹೊರತು ಮತ್ತಾವುದರಿಂದಲೂ ಅದು ಜಗ್ಗುವುದಿಲ್ಲ.
      -ಈ ನಿಗ್ರಹ, ಧ್ಯಾನ, ಯೋಗ ಎಲ್ಲಾ ಕಷ್ಟ. ನನ್ನ ಮನಸ್ಸು ಬಹಳ ಒಳ್ಳೆಯದು. ಅದಕ್ಕೆ ನಿಯಂತ್ರಣದ ಅಗತ್ಯವೇ ಇಲ್ಲ. :)

      kavinagaraj
      ನಿಮ್ಮ ಮನಸ್ಸು ಒಳ್ಳೆಯದು. ನಮ್ಮೆಲ್ಲರ ಮನಸ್ಸುಗಳೂ ಹೀಗೆಯೇ ಒಳ್ಳೆಯದಾಗಲಿ. ಧನ್ಯವಾದ, ಗಣೇಶರೇ.

      ಅಳಿಸಿ