ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಶುಕ್ರವಾರ, ಜನವರಿ 30, 2015

ಮನೋಕೇಂದ್ರೀಕರಣ - ಯಶಸ್ಸಿಗೆ ಕಾರಣ



     ಹಿಂದಿನ ಲೇಖನದಲ್ಲಿ ನೆನಪಿನ ಶಕ್ತಿ ಅನ್ನುವುದು ಇಚ್ಛಾಶಕ್ತಿ ಅಥವ ಸಂಕಲ್ಪಕ್ಕಿಂತ ಮಿಗಿಲೆಂಬುದನ್ನು ಕಂಡುಕೊಂಡೆವು. ಈ ನೆನಪಿನ ಶಕ್ತಿಗಿಂತ ಮೇಲಿನ ಸಂಗತಿಯೊಂದಿದೆ. ಸಾಮಾನ್ಯ ನೆನಪಿಗಿಂತ ಮೇಲಿನದು ಮನೋಕೇಂದ್ರೀಕರಣ ಅಥವ ಧ್ಯಾನ. ಅದೊಂದು ಉತ್ತಮವಾದ ಗುಣ. ನಾವು ನಮ್ಮ ಎಷ್ಟರಮಟ್ಟಿಗೆ ಕೇಂದ್ರೀಕರಿಸಲು ಸಾಧ್ಯವೋ, ಅರ್ಥಾತ್ ಧ್ಯಾನಿಸುತ್ತೇವೆಯೋ, ಅಷ್ಟರ ಮಟ್ಟಿಗೆ ಇತರರಿಗಿಂತ ಮೇಲಿರುತ್ತೇವೆ. ಕೇಂದ್ರೀಕರಿಸುವುದೆಂದರೆ ಮನಸ್ಸಿನ ಸ್ಥಿರತೆ ಹೊಂದುವುದು. ಎಲ್ಲೆಲ್ಲಿ ನಾವು ಯಾವುದೇ ರೀತಿಯ ಧೃಡತೆಯನ್ನು, ಯಾವುದೇ ರೀತಿಯ ಸ್ಥಿರತೆಯನ್ನು ಕಾಣುತ್ತೇವೆಯೋ, ಅಲ್ಲಿ ಕೇಂದ್ರೀಕರಣ ಇರುವುದನ್ನು ಕಾಣುತ್ತೇವೆ. ಭೂಮಿ ತನ್ನ ಗುಣದಲ್ಲಿನ ಸ್ಥಿರತೆ, ಧೃಡತೆಯ ಕಾರಣದಿಂದ ಕೇಂದ್ರೀಕರಿಸಿದ ಸ್ಥಿತಿಯಲ್ಲಿದೆ. ಇದರಿಂದಾಗಿ ಪ್ರಕೃತಿಯಲ್ಲಿ ಯಾವುದೇ ಗೊಂದಲವನ್ನು ನಾವು ಕಾಣುವುದಿಲ್ಲ. ಪ್ರಕೃತಿಯ ವಿವಿಧ ಸಂಗತಿಗಳಲ್ಲಿ ಸ್ಥಿರತೆ ಇದೆ. ಈ ಸ್ಥಿರತೆಯ ಕಾರಣದಿಂದಲೇ ಭೂಮಿ, ಜಲ, ಸೂರ್ಯ, ಚಂದ್ರ, ನಕ್ಷತ್ರಗಳು, ಇವೆಲ್ಲವೂ ಇರುವೆಡೆಯಲ್ಲಿ ತಮ್ಮ ಸ್ವಭಾವಕ್ಕನುಗುಣವಾಗಿ ಸ್ಥಿರವಾಗಿವೆ, ಅರ್ಥಾತ್ ಧ್ಯಾನಿಸುತ್ತಿವೆ. (ಇಲ್ಲಿ ಸ್ಥಿರವಾಗಿವೆ ಎಂದರೆ ಚಲನೆಯಿಲ್ಲದೆ ಇವೆ ಎಂದು ಅರ್ಥವಲ್ಲ. ತಮ್ಮ ಚಲನೆ, ಇತ್ಯಾದಿ ಕಾರ್ಯ, ಗುಣಗಳ ವಿಚಾರದಲ್ಲಿ ಸ್ಥಿರವಾಗಿವೆ ಎಂದು!) ಅವುಗಳಿಗ್ಲೆ ತಮ್ಮ ತಮ್ಮಲ್ಲಿ ಗೊಂದಲವಿಲ್ಲ, ಸಂದೇಹವಿಲ್ಲ. ಯಾರಾದರೂ ತಮ್ಮ ಜೀವನದಲ್ಲಿ ಯಾವುದೇ ರೀತಿಯ ಸಾಧನೆಯನ್ನು ಮಾಡಿದ್ದರೆ, ಅದು ಕೇಂದ್ರೀಕರಿಸುವ ಶಕ್ತಿಯ ಕಾರಣದಿಂದ ಆದದ್ದಾಗಿದೆ. ಅದು ದೇವರೇ ಆಗಿರಬಹುದು, ಮನುಷ್ಯನೇ ಆಗಿರಬಹುದು, ಮನಸ್ಸು ಕೇಂದ್ರೀಕರಿಸಿ ಮಾಡಿದ ಕಾರಣದಿಂದಲೇ ಯಶಸ್ಸು ಲಭಿಸಿರುವುದಾಗಿದೆ. ಯೋಚನೆಯನ್ನು ಒಂದು ನಿರ್ದಿಷ್ಟ ದಿಕ್ಕಿನಲ್ಲಿ ತೊಡಗಿಸುವುದೇ ಯಶಸ್ಸಿನ ಕಾರಣವಾಗಿದೆ. ಮನಸ್ಸನ್ನು ಒಂದು ನಿರ್ದಿಷ್ಟ ದಿಕ್ಕಿನಲ್ಲಿ ತೊಡಗಿಸುವುದು ಮತ್ತು ಆ ದಿಕ್ಕಿನಲ್ಲೇ ಸತತ ಪ್ರಯತ್ನದಿಂದ ಮನಸ್ಸನ್ನು ಆ ನಿರ್ದಿಷ್ಟ ವಿಚಾರದಿಂದ ಹೊರಳದಿರುವಂತೆ ನೋಡಿಕೊಳ್ಳುವುದೇ ಕೇಂದ್ರೀಕರಣ. ಒಂದು ನಿರ್ದಿಷ್ಟ ಸಂಗತಿಯೊಂದಿಗೆ ಕುರಿತು ಆತ್ಮಪೂರ್ವಕವಾಗಿ, ಬೇರೆ ಯೋಚನೆಗಳು ಬರದಂತೆ ನೋಡಿಕೊಂಡು, ಒಂದಾಗುವುದೇ ಕೇಂದ್ರೀಕರಣ. ಇದೇ ಧ್ಯಾನ!

     ಮನಸ್ಸಿನ ಇಂತಹ ಕ್ರಿಯೆಯಿಂದಾಗಿಯೇ ಪ್ರಪಂಚದಲ್ಲಿ ಜನರು ಮಹಿಮರಾಗುತ್ತಾರೆಯೇ ಹೊರತು, ಚಂಚಲಿತ ಚಿಂತನೆಗಳಿಂದಲ್ಲ. ನಾವು ನೂರು ಸಂಗತಿಗಳ ಕುರಿತು ಮನಸ್ಸನ್ನು ತೊಡಗಿಸಿಕೊಂಡರೆ ನಾವು ಏನನ್ನೂ ಸಾಧಿಸಲು ಸಾಧ್ಯವಿಲ್ಲ. ನಾವು ಒಂದು ಸಲಕ್ಕೆ, ಒಂದು ಸಮಯಕ್ಕೆ ಒಂದು ವಿಷಯದ ಬಗ್ಗೆ ಆತ್ಮಪೂರ್ವಕವಾಗಿ, ಹೃದಯಪೂರ್ವಕವಾಗಿ ತೊಡಗಿಸಿಕೊಂಡರೆ ನಾವು ಯಶಸ್ವಿಯಾಗುತ್ತೇವೆ. ಇದೇ ಕೇಂದ್ರೀಕರಿಸುವ ಶಕ್ತಿಯ ಮಹತ್ವವಾಗಿದೆ. ಇಲ್ಲಿ ಮತ್ತೆ ಉತ್ತರಪ್ರದೇಶದ ಅರುಣಿಮಾ ಸಿನ್ಹ ನೆನಪಾಗುತ್ತಾಳೆ. ೧೧.೪.೨೦೧೧ರಂದು ಚಲಿಸುತ್ತಿದ್ದ ರೈಲಿನಲ್ಲಿ ದರೋಡೆಗೊಳಗಾಗಿ ಹೊರಗೆ ಎಸೆಯಲ್ಪಟ್ಟು ಪಕ್ಕದ ಹಳಿಯ ಮೇಲೆ ಬಿದ್ದಾಗ ಎದುರಿನಿಂದ ಬಂದಿದ್ದ ರೈಲಿನ ಅಡಿಯಲ್ಲಿ ಸಿಕ್ಕು ಎರಡು ಕಾಲುಗಳನ್ನೂ ಕಳೆದುಕೊಂಡ ೨೩ ವರ್ಷಗಳ ನತದೃಷ್ಟ ತರುಣಿ ಅವಳು. ಪ್ರಜ್ಞಾಹೀನ ಸ್ಥಿತಿಯಲ್ಲಿ ಇದ್ದ ಆಕೆಯನ್ನು ಯಾರೋ ಆಸ್ಪತ್ರೆಗೆ ಸೇರಿಸಿದ್ದರು. ಹಲವಾರು ತಿಂಗಳುಗಳು ನರಳಿದ ಅವಳಿಗೆ ಕೃತಕ ಮರದ ಕಾಲುಗಳನ್ನು ಅಳವಡಿಸಲಾಯಿತು. ಚಿಕಿತ್ಸೆ ಪಡೆಯುತ್ತಿದ್ದ ಸಂದರ್ಭದಲ್ಲೇ ಆಕೆ ಹಿಮಾಲಯ ಪರ್ವತ ಏರುವ ಕನಸು ಕಂಡಳು. ಆಸ್ಪತ್ರೆಯಿಂದ ಹೊರಬಿದ್ದ ಕೂಡಲೇ ಆಕೆ ಆ ದಿಸೆಯಲ್ಲಿ ಕಾರ್ಯಪ್ರವೃತ್ತಳಾದಳು. ಅಗತ್ಯ ತರಬೇತಿ, ಮಾರ್ಗದರ್ಶನ ಪಡೆದಳು. ೧.೪.೨೦೧೩ರಂದು ಮಾರ್ಗದರ್ಶಿ ಸುಸೇನ್ ಮಹತೋ ಜೊತೆಗೂಡಿ ಎವರೆಸ್ಟ್ ವಿಜಯಕ್ಕೆ ಹೊರಟ ಅರುಣಿಮಾ ೫೧ ದಿನಗಳ ಸತತ ಕಠಿಣ ಪರಿಶ್ರಮದ ನಂತರದಲ್ಲಿ ಯಶಸ್ವಿಯಾಗಿ ಶಿಖರದ ತುತ್ತ ತುದಿಯನ್ನು ೨೧.೫.೨೦೧೩ರಂದು ತಲುಪಿಯೇಬಿಟ್ಟಳು! ಇದು ಅವಳ ಧೃಢ ಮನೋನಿರ್ಧಾರದಿಂದ ಲಭಿಸಿದ ವಿಜಯವಾಗಿತ್ತು! ಕೈ ಕಾಲುಗಳು ಗಟ್ಟಿಯಾಗಿರುವವರಿಗೇ ದುಸ್ಸಾಧ್ಯವೆನಿಸುವ ಸಾಹಸವನ್ನು ಈ ತರುಣಿಗೆ ಮಾಡಲು ಸಾಧ್ಯವಾಯಿತೆಂದರೆ ಆಕೆಯ ಮನೋಕೇಂದ್ರೀಕರಣದ ಶಕ್ತಿಯ ಬಗ್ಗೆ ಹೆಮ್ಮೆ ಅನ್ನಿಸುತ್ತದೆ.
     ಕೇಂದ್ರೀಕರಿಸುವ ಶಕ್ತಿಯ ಕೊರತೆಯಿರುವವರು ಪ್ರಪಂಚದಲ್ಲಿ ಜಗಳಗಂಟರು ಮತ್ತು ಸಮಾಜದ ಸ್ವಾಸ್ಥ್ಯವನ್ನು ಹಾಳುಮಾಡುವವರಾಗಿರುತ್ತಾರೆ. ಅವರು ತಮ್ಮ ವಿಫಲತೆಗಳಿಗೆ ಕಥೆ ಕಟ್ಟುವವರಾಗಿರುತ್ತಾರೆ. ಮನಸ್ಸಿನ ಶಕ್ತಿಯನ್ನು ಕೇಂದ್ರೀಕರಿಸಬಲ್ಲವರು ಹಾಗಲ್ಲ, ಅವರು ತಮ್ಮ ಉದ್ದೇಶಗಳಿಗಾಗಿ ತಮ್ಮನ್ನು ಎಷ್ಟರಮಟ್ಟಿಗೆ ತೊಡಗಿಸಿಕೊಳ್ಳುತ್ತಾರೆಂದರೆ, ಅವರಿಗೆ ಉಪಯೋಗವಿಲ್ಲದ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಸಮಯ ಸಿಗುವುದಿಲ್ಲ. ಅಂತಹವರೇ ದೊಡ್ಡವರು. ಆದ್ದರಿಂದ ಕೇಂದ್ರೀಕರಿಸಲು, ಧ್ಯಾನಿಸಲು ಮನಸ್ಸು ಮಾಡಬೇಕು.
     ಮನಸ್ಸನ್ನು ಕೇಂದ್ರೀಕರಿಸುವ ಅಭ್ಯಾಸದಿಂದ ಆಗುವ, ಸಿಗುವ ಫಲಿತಗಳ ಕುರಿತು ವಿವರಿಸುವುದು ಕಷ್ಟ, ಆದರೆ ಅದರಿಂದ ಬಹಳ ಅನುಕೂಲಗಳಿವೆ ಎಂಬುದು ನಿರ್ವಿವಾದ. ಯೋಗಾಭ್ಯಾಸ ಸಹ ಕೇಂದ್ರೀಕರಿಸುವ ಶಕ್ತಿಯ ಗಳಿಕೆಯ ಮಾರ್ಗವೇ ಆಗಿದೆ.  ಈ ಯೋಗಾಭ್ಯಾಸ ದೇಹ ಮತ್ತು ಮನಸ್ಸುಗಳ ಚೈತನ್ಯವೃದ್ಧಿಗೆ ಸಹಕಾರಿ. ಇದು ದೈಹಿಕ ಮತ್ತು ಮಾನಸಿಕ ಅಂಗಗಳನ್ನು ಸಹಜಸ್ಥಿತಿಯಲ್ಲಿ ಇರುವಂತೆ ನೋಡಿಕೊಳ್ಳುತ್ತದೆ. ಕೃತಕ ಮಾರ್ಗಗಳಿಂದ, ಔಷಧಿಗಳಿಂದ ಗಳಿಸುವ ಆರೋಗ್ಯ ಸ್ಥಿರವಲ್ಲ. ಇದರಿಂದ ಅಡ್ಡಪರಿಣಾಮಗಳೂ ಆಗುತ್ತವೆ. ಆದರೆ ಯೋಗಾಭ್ಯಾಸದಿಂದ ದೀರ್ಘ ಮತ್ತು ಸ್ಥಿರವಾದ, ಅಡ್ಡಪರಿಣಾಮಗಳಿಲ್ಲದ ದೈಹಿಕ ಮತ್ತು ಮಾನಸಿಕ ಆರೋಗ್ಯ ಸಾಧ್ಯವಿದೆ. ಧೃಡವಾದ ಮಾನಸಿಕ ಆರೋಗ್ಯವಂತ ಮನಸ್ಸನ್ನು ಹತೋಟಿಯಲ್ಲಿಟ್ಟುಕೊಳ್ಳಬಲ್ಲ. ಮನೋನಿಗ್ರಹ, ಮನೋಕೇಂದ್ರೀಕರಣವಿಲ್ಲದಿದ್ದರೆ ಜೀವನದ ಯಾವುದೇ ಸಂಗತಿ ಅರ್ಥ ಕಳೆದುಕೊಳ್ಳುತ್ತದೆ ಎಂದು ಉಪನಿಷತ್ತು ಹೇಳುತ್ತದೆ. ಮನಸ್ಸನ್ನು ಎಷ್ಟರಮಟ್ಟಿಗೆ ನಿಯಂತ್ರಿಸಬಹುದೋ ಅಷ್ಟರಮಟ್ಟಿಗೆ ಬಂಧಮುಕ್ತನಾಗಬಹುದು, ಸ್ವತಂತ್ರನಾಗಬಹುದು ಮತ್ತು ಜೀವನದಲ್ಲಿ ಯಶಸ್ವಿಯಾಗಬಹುದು.
     ಧ್ಯಾನ ಮಾಡುವುದರಿಂದ ಒತ್ತಡ ಕಡಿಮೆಯಾಗುವುದು, ಮನಸ್ಸು ಹಗುರಾಗುವುದು, ಆಂತರಿಕ ಶಾಂತಿ ಲಭಿಸುವುದು. ಈ ಸ್ಥಿತಿಯಲ್ಲಿ ಸ್ಥಿತಪ್ರಜ್ಞತೆ ನಮ್ಮದಾಗುವುದು. ನೆನಪಿನ ಶಕ್ತಿ ಜಾಗೃತಗೊಳ್ಳುವುದು. ಮನಸ್ಸು ಸರಿಯಾದ ದಿಕ್ಕಿನಲ್ಲಿ ಚಲಿಸುವುದು. ಋಣಾತ್ಮಕ ಚಿಂತನೆಗಳು ಸರಿಯುವುವು. ಗುರಿ ಸಾಧನೆಗೆ ಇದು ಹೇಳಿ ಮಾಡಿಸಿದ ಸ್ಥಿತಿ. ಖಿನ್ನತೆ, ಉದ್ವೇಗ, ಆಸ್ತಮಾ, ರಕ್ತದ ಒತ್ತಡ, ನಿದ್ರಾಹೀನತೆ, ಕ್ಯಾನ್ಸರ್ ಮುಂತಾದ ಹಲವಾರು ಕಾಯಿಲೆಗಳಿಗೂ ಧ್ಯಾನ ಪರಿಣಾಮಕಾರಿಯಾದ ಪರಿಹಾರ ನೀಡುವುದೆಂದು ಸಂಶೋಧನೆಗಳು ಹೇಳುತ್ತವೆ.
     ಮನಸ್ಸನ್ನು ಕೇಂದ್ರೀಕರಿಸುವ ಮೊದಲು ಕೇಂದ್ರೀಕರಿಸುವುದರಿಂದ ಆಗುವ ಪರಿಣಾಮಗಳ ಅರಿವು ಮೊದಲು ಮನಸ್ಸಿಗೆ ಸ್ಪಷ್ಟವಾಗಬೇಕು. ಮನಸ್ಸನ್ನು ಯಾವುದರ ಮೇಲೆ ಕೇಂದ್ರೀಕರಿಸಬೇಕು, ಯಾವುದರ ಕುರಿತು ಧ್ಯಾನಿಸಬೇಕು ಎಂಬುದರ ಅರಿವಿಲ್ಲದೆ ಮಾಡುವ ಅರ್ಥವಿಲ್ಲದ ಧ್ಯಾನ ಫಲ ಕೊಡಲಾರದು. ಧ್ಯಾನಿಸುವ ವಿಧಾನ, ಧ್ಯಾನಿಸುವ ರೀತಿ, ಯಾವ ಉದ್ದೇಶಕ್ಕಾಗಿ ಮನಸ್ಸನ್ನು ಕೇಂದ್ರೀಕರಿಸುವುದು, ಧ್ಯಾನದ ಅಭ್ಯಾಸದಲ್ಲಿ ಎದುರಿಸಬಹುದಾದ ಸಮಸ್ಯೆಗಳು, ಇತ್ಯಾದಿಗಳನ್ನು ಮೊದಲು ಅರಿತುಕೊಳ್ಳಬೇಕು. ಈ ಅರಿವು ಧ್ಯಾನ ಮಾಡುವ ಮೊದಲು ಇರಬೇಕಾದುದು ಅತ್ಯಂತ ಅಗತ್ಯ.
     ಎಲ್ಲಾ ಸಂಗತಿಗಳು, ಪಂಚಭೂತಗಳು (ವಾಯು, ಆಕಾಶ, ಜಲ, ನೆಲ, ಅಗ್ನಿ), ಪಡೆಯುವ ಯಾವುದೇ ವಿದ್ಯೆ, ದೇವರು ಮತ್ತು ಮಾನವ ಜೀವಿಗಳು, ಪ್ರಾಣಿಗಳು ಮತ್ತು ಪಕ್ಷಿಗಳು, ಗುಣಗಳು ಮತ್ತು ದೋಷಗಳು, ಒಳ್ಳೆಯದು ಮತ್ತು ಕೆಟ್ಟದ್ದು, ಸತ್ಯ ಮತ್ತು ಅಸತ್ಯ, ಸಂತೋಷಕರವಾದದ್ದು ಮತ್ತು ದುಃಖಕರವಾದದ್ದು, ಮತ್ತು ಇಂತಹ ಜೀವನದ ಏನೆಲ್ಲಾ ಸಂಗತಿಗಳಿಗೆ ಅರ್ಥ ಬರುವುದು ಅವುಗಳ ಕುರಿತು ಅರಿವು ಇದ್ದರೆ ಮಾತ್ರ. ಯಾವುದಾದರೂ ವಿಷಯದ ಕುರಿತು ನಮಗೆ ಗೊತ್ತಿದೆಯೆಂದರೆ ಅದನ್ನು ನಾವು ಅರ್ಥ ಮಾಡಿಕೊಂಡಿದ್ದೇವೆ ಎಂದು ಅರ್ಥ. ಅರ್ಥ ತಿಳಿದಿಲ್ಲವೆಂದರೆ ಏನೂ ಗೊತ್ತಿಲ್ಲವೆಂದೇ ತಿಳಿಯಬೇಕು. ಜೀವನದ ಬಗ್ಗೆ ನಾವು ಎಷ್ಟು ತಿಳಿದುಕೊಳ್ಳುತ್ತೇವೆಯೋ ಅಷ್ಟರ ಮಟ್ಟಿಗೆ ನಾವು ಜೀವನವನ್ನು ಆಸ್ವಾದಿಸಬಲ್ಲೆವು. ವ್ಯಕ್ತಿಗತವಾಗಿ, ಸಾಮಾಜಿಕವಾಗಿ ಅಥವ ಬೇರೆ ಯಾವುದೇ ಮಾರ್ಗದಲ್ಲಿ ನಾವು ಗಳಿಸುವ ಶಕ್ತಿ ನಮ್ಮ ಜ್ಞಾನವನ್ನು ಅವಲಂಬಿಸಿದೆ. ಜ್ಞಾನಿ ಅಂದರೆ ಅರಿವಿರುವವನು ಶಕ್ತಿವಂತನಾಗಿರುತ್ತಾನೆ. ಅವನ ಶಕ್ತಿಯ ಪ್ರಮಾಣ ಅವನು ಹೊಂದಿರುವ ಜ್ಞಾನವನ್ನವಲಂಬಿಸಿದೆ.
     ಜ್ಞಾನ ಮಿಗಿಲು; ಜ್ಞಾನಮೂಲವಾದ ವಾಕ್ಕು ಅದಕ್ಕಿಂತ ಮಿಗಿಲು; ಇವೆರಡಕ್ಕಿಂತ ಇದವುಗಳನ್ನು ಸಾಧಿಸಲು ಅವಶ್ಯಕವಾದ ಮನಸ್ಸು ಮಿಗಿಲು; ಮನಸ್ಸಿನ ಇಚ್ಛಾಶಕ್ತಿ ಇದಕ್ಕೂ ಮಿಗಿಲು; ನೆನಪಿನ ಶಕ್ತಿಯಿಲ್ಲದಿದ್ದರೆ ಮೇಲಿನದೆಲ್ಲವೂ ವ್ಯರ್ಥವಾದ್ದರಿಂದ ಇದು ಮತ್ತೂ ಹೆಚ್ಚು; ಮೇಲಿನದೆಲ್ಲವೂ ಇದ್ದು ಮನಸ್ಸನ್ನು ಕೇಂದ್ರೀಕರಿಸುವ ಶಕ್ತಿ ಇಲ್ಲದಿದ್ದರೆ, ಧ್ಯಾನ ಮಾಡಲಾಗದಿದ್ದರೆ ಯಾವುದೂ ಪ್ರಯೋಜನಕ್ಕೆ ಬರುವುದಿಲ್ಲವಾದ್ದರಿಂದ ಇದರ ಕೈಮೇಲು; ಯಾವುದರ ಕುರಿತು ಮನಸ್ಸನ್ನು ಕೇಂದ್ರೀಕರಿಸುವುದು ಅಥವ ಧ್ಯಾನಿಸುವುದು ಎಂಬುದರ ಸ್ಪಷ್ಟ ಅರಿವೂ ಇರಬೇಕಾದುದರಿಂದ ಇದು ಮತ್ತೂ ಹೆಚ್ಚಿನದು. ಆದ್ದರಿಂದ ಸಾಧನೆಯ ಆರನೆಯ ಹಂತವಾದ ಮನಸ್ಸನ್ನು ಕೇಂದ್ರೀಕರಿಸುವ, ಉದ್ದೇಶಿತ ಗುರಿಯ ಸಾಧನೆಗೆ ತನು-ಮನಗಳನ್ನು ತೊಡಗಿಸುವ ಶಕ್ತಿ ಮತ್ತು ಏಳನೆಯ ಹಂತವಾದ ಧ್ಯಾನದ ವಿಷಯ ಕುರಿತ ಸ್ಪಷ್ಟ ತಿಳುವಳಿಕೆಯನ್ನು ಗಳಿಸಿಕೊಂಡರೆ ನಾವು ಯಶಸ್ವಿ ವ್ಯಕ್ತಿಗಳಾಗಿಯೇ ಆಗುವೆವು!
-ಕ.ವೆಂ.ನಾಗರಾಜ್.
**************
ದಿನಾಂಕ 27.1.2015ರ ಜನಮಿತ್ರ ಪತ್ರಿಕೆಯ 'ಚಿಂತನ' ಅಂಕಣದಲ್ಲಿ ಪ್ರಕಟಿತ:

7 ಕಾಮೆಂಟ್‌ಗಳು:

  1. H A Patil
    ಕವಿ ನಾಗರಾಜ ರವರಿಗೆ ವಂದನೆಗಳು
    ಮನೋ ಕೇಂದ್ರಿಕರಣ ಕುರಿತ ಲೇಖನ ಚೆನ್ನಾಗಿದೆ ಧ್ಯಾನದ ಉಪಯುಕ್ತತೆ ಕುರಿತು ಬಹಳ ಚೆನ್ನಾಗಿ ಬರೆದಿದ್ದೀರಿ ಜೀವನವನ್ನು ನಾವು ತಿಳಿದುಕೊಂಡಷ್ಟೂ ಅದನ್ನು ನಾವು ಅನುಭವಿಸ ಬಲ್ಲೆವು ಎನ್ನುವುದು ಬಹಳ ಅರ್ಥಪೂರ್ಣ, ಉತ್ತಮ ಲೇಖನ ನೀಡಿದ್ದೀರಿ ದನ್ಯವಾದಗಳು.

    kavinagaraj
    ತಮ್ಮ ಮೆಚ್ಚಿನ ಪ್ರತಿಕ್ರಿಯೆಗೆ ವಂದನೆಗಳು, ಪಾಟೀಲರೇ.

    smurthygr
    <>
    ನಿಮ್ಮ ವಿಚಾರಗಳು ಎಂದಿನಂತೆ ಮನನಯೋಗ್ಯವಾಗಿವೆ. ಆದರೆ ಇವೆಲ್ಲಾ ಸ್ಥಿರವಾಗಿವೆ ಎನ್ನುವುದು ತಪ್ಪು. ಭೂಮಿ, ಚಂದ್ರ ಸತತವಾಗಿ ತಿರುಗುತ್ತಲೇ ಇದೆಯೆಂದು ನಮಗೆ ತಿಳಿದಿದೆ. ಅದೇ ರೀತಿ ಎಲ್ಲಾ ಆಕಾಶಕಾಯಗಳೂ (ಸೂರ್ಯ, ನಮ್ಮ ಆಕಾಶಗಂಗೆ ಗ್ಯಾಲಕ್ಸಿ ಸೇರಿದಂತೆ ಎಲ್ಲಾ ಗ್ಯಾಲಕ್ಸಿಗಳು, ಇ.) ಊಹಿಸಲಾಗದಷ್ಟು ವೇಗವಾಗಿ ಚಲಿಸುತ್ತಲೇ ಇವೆಯೆಂದು ವಿಜ್ಞಾನ ಹೇಳುತ್ತದೆ.

    kavinagaraj
    ಭೂಮಿ ಸ್ಥಿರವಾಗಿದೆ ಎಂಬ ಪದಗಳ ಬಳಕೆ ಚಲನೆಯಿಲ್ಲದುದು ಎಂಬರ್ಥದಲ್ಲಿ ಬಳಸಿಲ್ಲ. ತನ್ನ ಕಾರ್ಯ(ಚಲನೆ)ದಲ್ಲಿ ಅಚಲವಾಗಿದೆ, ಬದಲಾಗಿಲ್ಲ ಎಂಬರ್ಥದಲ್ಲಿ ಬಳಸಲಾಗಿದೆ. ಧನ್ಯವಾದ, ಮೂರ್ತಿಯವರೇ.

    ಪ್ರತ್ಯುತ್ತರಅಳಿಸಿ
  2. ಸರ್ ನನ್ನದು ಒಂದು ಪ್ರೆಶ್ನೆ? ನಾನು ದ್ಯಾನಕ್ಕೆ ಕುಲ್ಲಿತಾಗ ನನ್ನ ಮನಸಿನಲ್ಲಿ ಬೇರೆ ಯೋಚನೆಗಳು ಬೇಗ ಬರುತ್ತೆ , ಮನಸನ್ನ ಕೇದ್ರಿಕರಿಸುವ ರೀತಿಯನ್ನು ಒಂದು ಉದಾ: ಯೋದಿಗೆ ವಿವರೆಣೆ ನೀಡುವಿರ ದಯವಿಟ್ಟು

    ಪ್ರತ್ಯುತ್ತರಅಳಿಸಿ
    ಪ್ರತ್ಯುತ್ತರಗಳು
    1. ಮನಸ್ಸನ್ನು ಕೇಂದ್ರೀಕರಿಸುವ ಮೊದಲು ಕೇಂದ್ರೀಕರಿಸುವುದರಿಂದ ಆಗುವ ಪರಿಣಾಮಗಳ ಅರಿವು ಮೊದಲು ಮನಸ್ಸಿಗೆ ಸ್ಪಷ್ಟವಾಗಬೇಕು. ಮನಸ್ಸನ್ನು ಯಾವುದರ ಮೇಲೆ ಕೇಂದ್ರೀಕರಿಸಬೇಕು, ಯಾವುದರ ಕುರಿತು ಧ್ಯಾನಿಸಬೇಕು ಎಂಬುದರ ಅರಿವಿಲ್ಲದೆ ಮಾಡುವ ಅರ್ಥವಿಲ್ಲದ ಧ್ಯಾನ ಫಲ ಕೊಡಲಾರದು. ಧ್ಯಾನಿಸುವ ವಿಧಾನ, ಧ್ಯಾನಿಸುವ ರೀತಿ, ಯಾವ ಉದ್ದೇಶಕ್ಕಾಗಿ ಮನಸ್ಸನ್ನು ಕೇಂದ್ರೀಕರಿಸುವುದು, ಧ್ಯಾನದ ಅಭ್ಯಾಸದಲ್ಲಿ ಎದುರಿಸಬಹುದಾದ ಸಮಸ್ಯೆಗಳು, ಇತ್ಯಾದಿಗಳನ್ನು ಮೊದಲು ಅರಿತುಕೊಳ್ಳಬೇಕು. ಈ ಅರಿವು ಧ್ಯಾನ ಮಾಡುವ ಮೊದಲು ಇರಬೇಕಾದುದು ಅತ್ಯಂತ ಅಗತ್ಯ.
      ಮನಸ್ಸು ಚಂಚಲಗೊಳ್ಳುವುದು ಎಲ್ಲರ ಸಮಸ್ಯೆಯೂ ಆಗಿದೆ. ಧ್ಯಾನ ಎಂದರೆ ಕೇವಲ ಕಣ್ಣು ಮುಚ್ಚಿ ಕಳಿತುಕೊಳ್ಳುವುದಲ್ಲ. ಯಾವುದೇ ಕೆಲಸವನ್ನು, ಇತರ ಸಂಗತಿಗಳ ಕಡೆಗೆ ಗಮನ ಕೊಡದೇ ಶ್ರದ್ಧೆಯಿಂದ ಮಾಡುವುದೇ ಧ್ಯಾನ!

      ಅಳಿಸಿ
  3. ಮನಸ್ಸನ್ನು ಕೇಂದ್ರೀಕರಿಸುವತ್ತ ನಮ್ಮನ್ನು ಪ್ರೇರೇಪಿಸುವ ಬರಹವಿದು.

    ಪ್ರತ್ಯುತ್ತರಅಳಿಸಿ
  4. ವಂದನೆಗಳು, ಬದರೀನಾಥರೇ.

    ಗಣೇಶ
    ಮನೋಕೇಂದ್ರೀಕರಣ/ಧ್ಯಾನ ಎಂದು ಎಲ್ಲಿ ದೇವರ ಧ್ಯಾನದ ಬಗ್ಗೆ ಹೇಳುವಿರಾ ಅಂತ ಪ್ರಾರಂಭದಲ್ಲಿ ಅನಿಸಿತು. ಧೃಢ ಮನೋನಿರ್ಧಾರಕ್ಕೆ ನೀವು ಕೊಟ್ಟ ಅರುಣಿಮಾ ಉದಾಹರಣೆ ಅತ್ಯಂತ ಸೂಕ್ತ. ಈಕೆಯ ಕತೆ ಗೊತ್ತಿಲ್ಲದವರಿಗಾಗಿ- https://www.youtube.com/watch?v=Wx9v_J34Fyo

    kavinagaraj
    ವಂದನೆಗಳು, ಗಣೇಶರೇ.

    ಪ್ರತ್ಯುತ್ತರಅಳಿಸಿ
    ಪ್ರತ್ಯುತ್ತರಗಳು
    1. ಮಾದಿಗ ಮೂವಮೆಂಟ್ ಯಮನಪ್ಪ ಹಂಡೇಲ್
      ಮನೋವಿಕಾಸಕೆ ಪೂರಕವಾದ ಅಂಶಗಳ ಜೊತೆ ಅವುಗಳ ಅಗತ್ಯದ ಕುರಿತು ವ್ಯಕ್ತಪಡಿಸಿದ ವಿಚಾರ ಚೆನ್ನಾಗಿದೆ.

      ಅಳಿಸಿ