ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಬುಧವಾರ, ಮಾರ್ಚ್ 25, 2015

ಪಂಚ ಶಕ್ತಿಗಳ ಮಹತ್ವ: ಭಾಗ-೨: ಅಗ್ನಿ


     ಪಂಚಭೂತಗಳಲ್ಲಿ ಭೂಮಿಗಿಂತ ಜಲ ಮೇಲಿನದೆಂದು ಹಿಂದಿನ ಲೇಖನದಲ್ಲಿ ತಿಳಿದೆವು. ಇದಕ್ಕಿಂತಲೂ ಉನ್ನತವಾದುದು ಅಗ್ನಿಯಾಗಿದೆ. ಸಾಧನಾಪಥದ ಅರಿವಿನ ಸೋಪಾನಗಳಾದ ಜ್ಞಾನ, ವಾಕ್ಕು, ಮನಸ್ಸು, ಇಚ್ಛಾಶಕ್ತಿ, ಸ್ಮರಣಶಕ್ತಿ, ಧ್ಯಾನ, ಧ್ಯಾನ ಏಕೆ ಮತ್ತು ಹೇಗೆ ಎಂಬ ಅರಿವು, ದೈಹಿಕ ಮತ್ತು ಮಾನಸಿಕ ಶಕ್ತಿ, ಆಹಾರ, ನೆಲ ಮತ್ತು ಜಲಗಳಿಗಿಂತ ಅಗ್ನಿತತ್ತ್ವ ಹೇಗೆ ಮೇಲಿನದೆಂಬ ಬಗ್ಗೆ ವಿಮರ್ಶಿಸೋಣ. ಸೂಕ್ಷ್ಮ ತತ್ತ್ವಗಳು ಸ್ಥೂಲ ತತ್ತ್ವಗಳಿಗಿಂತ ಹೆಚ್ಚು ವ್ಯಾಪಿಸಬಲ್ಲವಾದುದಾಗಿವೆ.
     ಅಗ್ನಿತತ್ತ್ವ ಸೃಷ್ಟಿಕಾರಕ, ಸ್ಥಿತಿಕಾರಕ ಮತ್ತು ಲಯಕಾರಕ ಪರಮಾತ್ಮನ ಗುಣಗಳನ್ನು ಹೊಂದಿದೆ. ಸೂರ್ಯ ನಮಗೆ ಬೆಳಕು ಮತ್ತು ಶಾಖ ನೀಡುವವನಾಗಿದ್ದಾನೆ. ಬಿಸಿಲಿನ ಧಗೆ ಜಾಸ್ತಿಯಾದಾಗ, "ಓಹ್, ಬಿಸಿಲು ಬಹಳ ಪ್ರಖರವಾಗಿದೆ, ತಡೆದುಕೊಳ್ಳಲಾಗದಷ್ಟು ಸೆಖೆ ಇದೆ, ಮಳೆ ಬರಬಹುದು" ಎಂದು ನಾವು ಮಾತನಾಡಿಕೊಳ್ಳುತ್ತೇವೆ. ಇದರ ಅರ್ಥ ಇಷ್ಟೆ, ಶಾಖ ಹೆಚ್ಚಾದಾಗ ಮಳೆ ಬರುತ್ತದೆ, ನೀರು ಅಗ್ನಿಯ ಕಾರಣದಿಂದ, ಅದರ ನಂತರದಲ್ಲಿ ಬರುತ್ತದೆ. ಮಳೆ ಹೇಗೆ ಬರುತ್ತದೆ ಎಂಬುದು ಸಾಮಾನ್ಯ ಜ್ಞಾನದ ಅರಿವಿರುವವರಿಗೆ ತಿಳಿದೇ ಇರುತ್ತದೆ. ನದಿ, ಕೆರೆ, ಕಟ್ಟೆಗಳು, ಸಾಗರಗಳಲ್ಲಿನ ನೀರು ಶಾಖದಿಂದಾಗಿ ಆವಿಯಾಗಿ ವಾತಾವರಣದಲ್ಲಿ ಸೇರಿ ನೀರಿನ ಸಣ್ಣ ಕಣಗಳಾಗಿ ಸಂಗ್ರಹವಾಗುತ್ತವೆ. ಇವುಗಳು ಮೋಡದ ರೂಪದಲ್ಲಿ ಸಂಗ್ರಹವಾಗುತ್ತವೆ. ಹೆಚ್ಚಿನ ಕಣಗಳ ದಟ್ಟ ಸಂಗ್ರಹವಾದಾಗ ಮೋಡಗಳು ಕಪ್ಪಾಗಿ ಭಾರವಾಗುತ್ತಾ ಹೋಗುತ್ತವೆ. ನೀರಿನ ಸಣ್ಣ ಕಣಗಳು ಪರಸ್ಪರ ಡಿಕ್ಕಿ ಹೊಡೆದಾಗ ಒಟ್ಟುಗೂಡಿ ದೊಡ್ಡ ಕಣಗಳಾಗುತ್ತಾ ಹೋಗುತ್ತವೆ. ಗುಡುಗು, ಸಿಡಿಲುಗಳೂ ಸಹ ಈ ಸಂದರ್ಭದಲ್ಲಿ ಕಾಣಬರುತ್ತವೆ. ಸಾಂದ್ರತೆ ಹೆಚ್ಚಾಗಿ ಗಾಳಿಗಿಂತ ಭಾರವಾದಾಗ ಅದು ಮಳೆಯಾಗಿ ಕೆಳಗೆ ಬೀಳುತ್ತದೆ. ಈ ಚಕ್ರ ನಿರಂತರವಾಗಿ ನಡೆಯುತ್ತಿರುತ್ತದೆ. ಈ ಬಗ್ಗೆ ಹೆಚ್ಚು ವಿವರಿಸಹೋಗದೆ ಸಂಕ್ಷಿಪ್ತವಾಗಿ ತಿಳಿದು ಮುಂದುವರೆಯೋಣ. ಸ್ವಾರ್ಥಕ್ಕಾಗಿ ಜಲಮೂಲಗಳನ್ನು ಮುಚ್ಚುತ್ತಿರುವ, ಕಾಡುಗಳನ್ನು, ಬೆಟ್ಟಗುಡ್ಡಗಳನ್ನು ನಾಶ ಮಾಡುತ್ತಿರುವ ಮಾನವ ಈ ಚಕ್ರ ಸುಗಮವಾಗಿ ತಿರುಗಲು ಅಡ್ಡಿಯಾಗಿದ್ದಾನೆ. ಇದರಿಂದಾಗಿ ಕಾಲ ಕಾಲಕ್ಕೆ ಸರಿಯಾಗಿ ಮಳೆಯಾಗದಿರುವುದು ಅಥವ ಅತಿಯಾಗಿ ಮಳೆಯಾಗುವುದು ಮುಂತಾದ ಅತಿರೇಕಗಳನ್ನು ಕಾಣುತ್ತಿದ್ದೇವೆ.
     ಸೂರ್ಯಕಿರಣಗಳು ಭೂಮಿಯ ನಿವಾಸಿಗಳಿಗೆ ಪ್ರಮುಖವಾದ ಶಾಖದ ಮತ್ತು ಬೆಳಕಿನ ಮೂಲಗಳಾಗಿವೆ ಎಂದು ಮೊದಲೇ ಹೇಳಿಯಾಗಿದೆ. ಸೂರ್ಯ ಸೌರ ಮಂಡಲದ ಪ್ರಧಾನವಾದ ಮತ್ತು ಕೇಂದ್ರದಲ್ಲಿರುವ ಬೃಹತ್ ನಕ್ಷತ್ರವಾಗಿದೆ. ಭೂಮಿಯ ವ್ಯಾಸದ ಸುಮಾರು ೧೦೯ರಷ್ಟು ದೊಡ್ಡದಾದ ಸೂರ್ಯ, ಭೂಮಿಯ ಸುಮಾರು ೩೩೦,೦೦೦ದಷ್ಟು ತೂಕವುಳ್ಳದ್ದಾಗಿದೆ. ಇದು ಸೌರಮಂಡಲದ ಒಟ್ಟು ತೂಕದ ಶೇ.೯೯.೮೬ರಷ್ಟಿದೆ. ಈಗಿನ ಸೂರ್ಯ ಸುಮಾರು ೪.೫೬೭ ಬಿಲಿಯನ್ ವರ್ಷಗಳ ಹಿಂದೆ ಉಗಮಗೊಂಡವನಾಗಿದ್ದಾನೆ. ಇನ್ನೂ ಸುಮಾರು ೪ ಬಿಲಿಯನ್ ವರ್ಷಗಳವರೆಗೆ ಈ ಸೂರ್ಯ ಇರುತ್ತಾನೆನ್ನಲಾಗಿದೆ. ಶೇ.೭೩.೪೬ರಷ್ಟು ಜಲಜನಕ, ಶೇ.೨೪.೮೫ರಷ್ಟು ಹೀಲಿಯಮ್ ಹೊಂದಿರುವ ಸೂರ್ಯ ಉಳಿದ ಶೇ.೧.೬೯ರಷ್ಟು ಪ್ರಮಾಣದಲ್ಲಿ ಆಮ್ಲಜನಕ, ಇಂಗಾಲ, ಕಬ್ಬಿಣ, ನಿಯಾನ್, ಸಾರಜನಕ, ಸಿಲಿಕಾನ್, ಮೆಗ್ನೀಷಿಯಮ್ ಮತ್ತು ಗಂಧಕಗಳನ್ನು ಹೊಂದಿದೆ. ಈ ವಿವರಗಳ ಮೂಲ http://en.wikipedia.org/wiki/Sun ಆಗಿದ್ದು, ಇನ್ನೂ ಕುತೂಹಲಕಾರಿ ವಿಷಯಗಳನ್ನು ಇಲ್ಲಿ ತಿಳಿಯಬಹುದು. ಲೇಖನಕ್ಕೆ ಪೂರಕವಾಗಿ ಕೆಲವೊಂದು ಮಾಹಿತಿಯನ್ನು ಮಾತ್ರ ಇಲ್ಲಿ ಪ್ರಸ್ತಾಪಿಸಿದೆ. ಆಗಸದಲ್ಲಿ ಅತಿ ಪ್ರಕಾಶಮಾನವಾದ ನಕ್ಷತ್ರವೆಂದರೆ ಸೂರ್ಯವೇ ಆಗಿದೆ. ಸೂರ್ಯನನ್ನು ದೇವತೆಯೆಂದು ಆರಾಧಿಸುವುದನ್ನು ಕಾಣಬಹುದು. ಭೂಮಿಯ ಮೇಲೆ ಸೂರ್ಯನ ಪ್ರಭಾವ ಗಣನೀಯವಾಗಿದ್ದು, ಸೂರ್ಯನ ಸುತ್ತ ಒಂದು ಸುತ್ತು ಸುತ್ತಲು ಭೂಮಿ ತೆಗೆದುಕೊಳ್ಳುವ ಕಾಲವನ್ನು ಒಂದು ವರ್ಷವೆನ್ನುತ್ತಾರೆ. ಈ ಕಾಲಗಣನೆಯೇ ಇಂದು ಬಳಕೆಯಲ್ಲಿರುವುದಾಗಿದೆ. ವಾರದ ಮೊದಲ ದಿನವನ್ನು ರವಿವಾರವೆಂದು ಹೆಸರಿಸಲಾಗಿದೆ. ಒಟ್ಟಾರೆಯಾಗಿ ಸೂರ್ಯ ಜೀವಿಗಳಿಗೆ ಶಕ್ತಿ, ಬೆಳಕು, ಜೀವನಾಧಾರ ಸಂಗತಿಯಾಗಿದ್ದಾನೆ.      ಈ ಬೃಹತ್ ಬ್ರಹ್ಮಾಂಡದಲ್ಲಿ ನಮ್ಮ ಭೂಮಿ ಇರುವುದೊಂದೇ ಸೂರ್ಯ ಮಂಡಲ ಅಲ್ಲ. ಅದೆಷ್ಟು ಅಸಂಖ್ಯ ಸೂರ್ಯಗಳು, ಭೂಮಿಗಳು ಇರುವ ಸೂರ್ಯಮಂಡಲವಿದೆಯೋ ಗೊತ್ತಿಲ್ಲ. ನಮ್ಮ ಬಾಹ್ಯಾಕಾಶ ವಿಜ್ಞಾನಿಗಳು ಈಗಾಗಲೇ ಸುಮಾರು ೫೦೦ ಸೂರ್ಯಮಂಡಲಗಳಿರುವುದನ್ನು ಖಚಿತಪಡಿಸಿದ್ದಾರೆ. ವರ್ಷಕ್ಕೊಂದರಂತೆ ಹೊಸ ಹೊಸ ಸೂರ್ಯಮಂಡಲಗಳು ಪತ್ತೆಯಾಗುತ್ತಿವೆ.
     "ಓಂ ಸೂರ್ಯೋ ಜ್ಯೋತಿರ್ಜ್ಯೋತಿಃ ಸೂರ್ಯಃ ಸ್ವಾಹಾ||" (ಯಜು.೩.೯.೧.) -ಸೂರ್ಯ ಜ್ಯೋತಿರ್ಯುಕ್ತನಾಗಿದ್ದಾನೆ. ಆದರೆ ಜ್ಯೋತಿರ್ಮಯ ಪ್ರಭುವು ಸೂರ್ಯನಿಗೂ ಸೂರ್ಯನಾಗಿದ್ದಾನೆ. ಇದು ಸತ್ಯ ಎಂಬುದು ಇದರ ಅರ್ಥ. ವೇದಗಳು ಪರಮಾತ್ಮನನ್ನು ಅಗ್ನಿ ಎಂತಲೂ ಸಂಬೋಧಿಸಿರುವುದನ್ನು ಕಾಣಬಹುದು. ಇಲ್ಲಿ ಅಗ್ನಿ ಎಂದರೆ ಜ್ಯೋತಿರ್ಮಯ ಎಂದರ್ಥ. ಋಗ್ವೇದದ ಮೊದಲ ಮಂತ್ರದ ಮೊದಲ ಪದವೇ ಅಗ್ನಿ ಆಗಿದೆ. ಅದು ಹೀಗಿದೆ:
ಅಗ್ನಿಮೀಳೇ ಪುರೋಹಿತಂ ಯಜ್ಷಸ್ಯ ದೇವಮೃತ್ವಿಜಮ್ | ಹೋತಾರಂ ರತ್ನಧಾತಮಮ್ || (ಋಕ್.೧.೧.೧.) (ಸರ್ವಹಿತಕಾರಿ, ಪೂಜ್ಯತಮ, ಜ್ಞಾನಸ್ವರೂಪ, ಜ್ಞಾನದಾತ, ಸರ್ವಪ್ರಥಮ, ಸರ್ವೋಪರಿಸ್ಥಿತ ಪರಮಾತ್ಮನನ್ನು ಸ್ತುತಿಸುತ್ತೇನೆ. ಅವನು ಬ್ರಹ್ಮಾಂಡರೂಪಿ ಯಜ್ಞದ ಪ್ರಕಾಶಕ, ಪ್ರವರ್ತಕ, ಸಮಯಾನುಸಾರ ಎಲ್ಲವನ್ನೂ ಪ್ರಾಪ್ತಗೊಳಿಸುವವನು,, ಸೃಷ್ಟಿ, ಸ್ಥಿತಿ, ಲಯಕರ್ತನು, ಪ್ರಸನ್ನತೆಯನ್ನುಂಟುಮಾಡುವ ರತ್ನಾದಿಗಳನ್ನು, ಉತ್ಕೃಷ್ಟ ಅನ್ನ, ಜಲ, ಫಲ ಪುಷ್ಪಾದಿಗಳನ್ನು ಕರುಣಿಸುವವನೂ ಆಗಿದ್ದಾನೆ.) ಪ್ರಾತಃಕಾಲದಲ್ಲಿ ಆಸ್ತಿಕರು ಉಚ್ಛರಿಸುವ ಈ ಮಂತ್ರವನ್ನು ಗಮನಿಸಿ:
ಓಂ ಪ್ರಾತರ್ಜಿತಂ ಭಗಮುಗ್ರಂ ಹುವೇಮ ವಯಂ ಪುತ್ರಮದಿತೇರ್ಯೋ ವಿಧರ್ತಾ |
ಆಧ್ರಶ್ಚಿದ್ ಯಂ ಮನ್ಯಮನಸ್ತುರಶ್ಚಿದ್ ರಾಜಾ ಚಿದ್ ಯಂ ಭಗಂ ಭಕ್ಷೀತ್ಯಾಹಃ || (ಋಕ್.೭.೪೧.೨)
    'ನಿತ್ಯವಿಜಯಿಯೂ, ಅತಿ ತೇಜಸ್ವಿಯೂ, ಸೂರ್ಯಾದಿ ಪ್ರಕಾಶಪುಂಜಗಳ ನಿತ್ಯಧಾರಕನೂ, ಸರ್ವಜ್ಞನೂ, ಪಾತಕಿಗಳನ್ನು ದಂಡಿಸುವವನೂ ಆದ ದೇವದೇವನ ದಿವ್ಯ ಪ್ರಕಾಶವನ್ನು ನಾವು ಪ್ರಾತಃಕಾಲ ಧರಿಸೋಣ' ಎಂಬುದು ಇದರ ಅರ್ಥ. ಅಗ್ರಣಿಯಾಗಿರುವುದರಿಂದ, ಸದಾ ಜಾಗೃತವಾಗಿರುವುದರಿಂದ, ಜ್ಞಾನದಾಯಕನಾಗಿರುವುದರಿಂದ ಅಗ್ನಿಯನ್ನು ಆತ್ಮಕ್ಕೂ ಹೋಲಿಸುತ್ತಾರೆ. ಜ್ಞಾನಜ್ಯೋತಿ ಬೆಳಗಲಿ ಎಂಬ ಪದಪ್ರಯೋಗ ಗಮನಿಸಬಹುದು. ಯಜ್ಞದಲ್ಲಿ ಅಗ್ನಿಗೆ ಪ್ರಧಾನ ಪಾತ್ರವಿದೆ. ಇಲ್ಲಿ ಯಜ್ಞವೆಂದರೆ ಕೇವಲ ಹವನ, ಹೋಮಗಳಲ್ಲ. ಯಜ್ಞವೆಂದರೆ ಶ್ರೇಷ್ಠತಮವಾದ ಕರ್ಮಗಳು. ಈ ಅರ್ಥದಲ್ಲಿ ಒಳ್ಳೆಯ ರೀತಿಯಲ್ಲಿ ಸಹಜೀವಿಗಳ ಹಿತ ಗಮನದಲ್ಲಿರಿಸಿ ಬಾಳುವುದೇ ಯಜ್ಞವೆನಿಸುತ್ತದೆ. ಅಗ್ನಿಗೆ ಅರ್ಪಿಸುವ ವಸ್ತುಗಳನ್ನು ಅರಗಿಸಿ, ವಿಭಜಿಸಿ ಅದರ ಗುಣವನ್ನು ಎಲ್ಲೆಡೆಗೆ ಹರಡುವ ಶಕ್ತಿ ಇದೆ. ಆದ್ದರಿಂದ ಯಜ್ಞದಲ್ಲಿ ಅರ್ಪಿಸುವ ಹವಿಸ್ಸುಗಳು ಸುತ್ತಮತ್ತಲಿನ ವಾತಾವರಣವನ್ನು ಶುದ್ಧಗೊಳಿಸುವಂತಹದಾಗಿರಬೇಕು, ಆಹ್ಲಾದಕರ ವಾತಾವರಣ ನಿರ್ಮಿಸುವಂತಿರಬೇಕು. ಹವಿಸ್ಸು, ಸಮಿತ್ತು, ಪದಾರ್ಥಗಳನ್ನು ಅಗ್ನಿಗೆ ಅರ್ಪಿಸುವಾಗ 'ಇದಂ ನ ಮಮ' ಎಂಬ ಮಂತ್ರ ಉಚ್ಛರಿಸಲಾಗುತ್ತದೆ. ಇದರ ಅರ್ಥ, ಈ ಕಾರ್ಯ 'ನನಗಾಗಿ ಅಲ್ಲ', ಸಕಲರ ಹಿತಕ್ಕಾಗಿ ಎಂಬುದು ಸೂಚ್ಯಾರ್ಥವಾಗಿದೆ. ಅಗ್ನಿ ಜೀವರು ಮತ್ತು ದೇವರ ನಡುವಣ ಕೊಂಡಿಯಾಗಿದೆ.
     ಐದು ವಿಧದ ಅಗ್ನಿಯನ್ನು ಗುರುತಿಸುತ್ತಾರೆ - ಕಾಲಾಗ್ನಿ (ಸಮಯ), ಕ್ಷುದ್ಧಾಗ್ನಿ (ಹಸಿವು), ಶೀತಾಗ್ನಿ (ಶೀತಲ), ಕೋಪಾಗ್ನಿ (ಕೋಪ) ಮತ್ತು ಜ್ಞಾನಾಗ್ನಿ(ಜ್ಞಾನ). ನಮ್ಮ ಜೀವನದಲ್ಲಿ ಅನುಭವಕ್ಕೆ ಬರುವ ನವರಸಗಳೂ ಅಗ್ನಿಯ ಪ್ರತಿರೂಪವಾಗಿರುತ್ತವೆ. ಕಾಮಾಗ್ನಿ, ವಿರಹಾಗ್ನಿ, ಮೋಹಾಗ್ನಿ ಮುಂತಾದ ಪದಬಳಕೆಯನ್ನು ಗಮನಿಸಬಹುದು. ಬೆಂಕಿ ಉಗುಳುವ ಮಾತುಗಳು, ಕಣ್ಣಿನಲ್ಲೇ ಸುಡುವ ನೋಟ, ಹೊಟ್ಟೆಯುರಿ (ಮತ್ಸರ) ಮುಂತಾದವುಗಳೂ ಸಹ ಅಗ್ನಿಯ ಜೊತೆಗೂಡಿರುವುದನ್ನು ಕಾಣಬಹುದು. ಅಂದರೆ ಅಗ್ನಿ ನಮ್ಮತನವನ್ನು ಪ್ರತಿನಿಧಿಸುವ ಸಂಗತಿಯಾಗಿದೆ.
     ಅಗ್ನಿ ನೀರಿನಿಂದ ಉದಯಿಸುತ್ತದೆ ಮತ್ತು ನೀರಿನಲ್ಲಿ ವಾಸಿಸುತ್ತದೆ ಎಂದು ಋಗ್ವೇದದಲ್ಲಿ ಉಲ್ಲೇಖ ಬರುತ್ತದೆ. ವಿಷಯದ ಆಳಕ್ಕೆ ಹೋದರೆ ಇದರ ಅರ್ಥ ನಮಗೆ ತಿಳಿಯಬಹುದು. ನೀರು ಜಲಜನಕ ಮತ್ತು ಆಮ್ಲಜನಕದ ಮಿಶ್ರಣವಾಗಿದೆ. ಜಲಜನಕ ಶೀಘ್ರವಾಗಿ ದಹಿಸುವ ಅನಿಲವಾಗಿದ್ದು, ಆಮ್ಲಜನಕ ದಹನಕ್ಕೆ ಸಹಕಾರಿಯಾಗಿರುತ್ತದೆ ಅಲ್ಲವೇ? ಪ್ರತಿ ಶುಭ, ಅಶುಭ ಕಾರ್ಯಗಳಿಗೆ ಅಗ್ನಿ ಸಾಕ್ಷಿಯಾಗಿರುತ್ತದೆ. ಅಂತ್ಯ ಸಂಸ್ಕಾರದ ಕ್ರಿಯೆಯಲ್ಲಿ ಶವದಹನಕ್ಕೂ ಅಗ್ನಿ ಬೇಕು. ವೈವಾಹಿಕ ಜೀವನಕ್ಕೆ ಕಾಲಿಡುವಾಗಲೂ ಅಗ್ನಿಸಾಕ್ಷಿಯಾಗಿ ಕೈ ಹಿಡಿಯುವುದು ಎನ್ನುವರಲ್ಲವೇ? ಅಗ್ನಿ ಪಾವಿತ್ರ್ಯದ ಸಂಕೇತವೂ ಆಗಿದೆ, ಪರಮಾತ್ಮನಂತೆ ದಾರಿ ತೋರುವ ಗುಣವನ್ನೂ ಹೊಂದಿದೆ. ಈ ವೇದಮಂತ್ರ ಗಮನಿಸೋಣ:
ಓಂ ಅಗ್ನೇ ನಯ ಸುಪಥಾ ರಾಯೇ ಅಸ್ಮಾನ್ ವಿಶ್ವಾನಿ ದೇವ ವಯುನಾನಿ ವಿದ್ವಾನ್ |
ಯುಯೋಧ್ಯಸ್ಮಜ್ಜುಹುರಾಣಮೇನೋ ಭೂಯಿಷ್ಠಾಂತೇ ನಮ ಉಕ್ತಿಂ ವಿಧೇಮ || (ಯಜು.೪೦.೧೬.)
     ಅರ್ಥ: ಓ ಜ್ಯೋತಿರ್ಮಯ ಪರಮಾತ್ಮನೇ, ಮುಂದೆ ಹೋಗುವ ಎಲ್ಲಾ ಮಾರ್ಗಗಳನ್ನೂ ತಿಳಿದವನು ನೀನಾಗಿದ್ದೀಯೆ. ನಮ್ಮನ್ನು ಐಶ್ವರ್ಯಪ್ರಾಪ್ತಿಗಾಗಿ (ಐಶ್ವರ್ಯ ಎಂದರೆ ಕೇವಲ ಧನಸಂಪತ್ತಲ್ಲ) ಸನ್ಮಾರ್ಗದಲ್ಲಿ ನಮ್ಮನ್ನು ಮುನ್ನಡೆಸು. ನಮ್ಮ ಕುಟಿಲತೆಯೆಂಬ ಪಾಪವನ್ನು ತೊಡೆದು ಹಾಕು. ನಮ್ಮ ಕಲ್ಯಾಣಕ್ಕಾಗಿ ನಿನಗೆ ನಮಸ್ಕಾರಗಳನ್ನು ಅರ್ಪಿಸುವೆವು ಎಂಬುದು ಇದರ ಅರ್ಥವಾಗಿದೆ. ಇದರ ಭಾವಾನುವಾದವನ್ನು ಹೀಗೆ ಮಾಡಬಹುದು:
ಸತ್ಯಪಥದಿ ಮುಂದೆ ಸಾಗಲು ಮತಿಯ ಕರುಣಿಸು ದೇವನೆ
ಸಂಪತ್ತು ಬರಲಿ ನ್ಯಾಯ ಮಾರ್ಗದಿ ನಿನ್ನ ಕರುಣೆಯ ಬಲದಲಿ |
ರಜವ ತೊಳೆದು ತಮವ ಕಳೆದು ಸತ್ತ್ವ ತುಂಬಲು ಬೇಡುವೆ
ಬಾಳ ಬೆಳಗುವ ಜ್ಯೋತಿ ನೀನೆ ವಂದನೆ ಪ್ರಭು ವಂದನೆ ||
-ಕ.ವೆಂ.ನಾಗರಾಜ್.
**************
ದಿನಾಂಕ  02.03.2015ರ ಜನಮಿತ್ರದ 'ಚಿಂತನ ಅಂಕಣದಲ್ಲಿ ಪ್ರಕಟಿತ:

4 ಕಾಮೆಂಟ್‌ಗಳು:

  1. H A Patil
    ಕವಿ ನಾಗರಾಜರವರಿಗೆ ವಂದನೆಗಳು
    ಪಂಚ ಶಕ್ತಿಗಳ ಮಹತ್ವ ಕುರಿತು ತಾವು ಬರೆಯುತ್ತಿರುವ ಸರಣಿ ಚೆನ್ನಾಗಿ ಬರುತ್ತಿದೆ, ತಾವು ಅಯ್ಕೆ ಮಾಡಿಕೊಳ್ಳುವ ಸಾಂಧರ್ಬಿಕ ಸಂಸ್ಕೃತ ಶ್ಲೋಕಗಳು ಅವುಗಳ ಕನ್ನಡದ ಅರ್ಥ ನಿರೂಪಣೆ ಬರಹದ ಗಹನತೆಯನ್ನು ಹೆಚ್ಚಿಸುತ್ತವೆ, ನಿಮ್ಮ ಬರಹಗಳು ನಮ್ಮ ಅನುಭವದ ದಿಗಂತವನ್ನು ಹೆಚ್ಚಿಸುವಲ್ಲಿ ಸಹಾಯ ಮಾಡುತ್ತಿವೆ ಜೊತೆಗೆ ನಿಮ್ಮ ಬರಹಗಳಿಗೆ ಕಾಯುವಂತೆ ಮಾಡುತ್ತಿವೆ, ಧನ್ಯವಾದಗಳು.

    kavinagaraj
    ಸಹೃದಯಿ ಪಾಟೀಲರ ಮೆಚ್ಚುಗೆಯ ಪ್ರತಿಕ್ರಿಯೆಗೆ ವಂದನೆಗಳು.

    nageshamysore
    ಕವಿಗಳೆ ನಮಸ್ಕಾರ. ಪಾಟೀಲರು ಈ ಮೇಲೆ ಹೇಳಿದಂತೆ ಅಗ್ನಿಯ ಕುರಿತಾದ ತುಂಬಾ ಕುತೂಹಲಕಾರಿಯಾದ ಅಂಶಗಳನ್ನೆಲ್ಲ ತುಂಬಾ ಚೆನ್ನಾಗಿ ಕ್ರೋಢೀಕರಿಸಿದ ಲೇಖನ. ಅಗ್ನಿಯ ಕುರಿತು ಓದಿದಂತೆಲ್ಲ ಅದರ ಅಗಾಧ ವ್ಯಾಪ್ತಿಯ ಬಗೆಗೆ ಅಚ್ಚರಿಯಾಗದಿರದು. ದಿನವೂ ನೋಡುವ, ಬಳಸುವ ಸಾಮಾನ್ಯ ಸರಕಾದ ಕಾರಣ ಅದರ ಮಹತ್ವ ಎಲ್ಲರಿಗು ಗೊತ್ತಿದ್ದುದೆ ಆದರು, ಅದರ ಅಖಂಡ ವ್ಯಾಪ್ತಿ ಮತ್ತು ರೂಪಾಂತರಗಳು ಅಚ್ಚರಿದಾಯಕ. ಅದರಲ್ಲೂ ಎಲ್ಲವೂ ಅಗ್ನಿಯೆ ಎನ್ನುವ ಮಾತು ; ಉದಾಹರಣೆಗೆ ಶೀತಾಗ್ನಿ ಎನ್ನುವ ಪದ ಅರ್ಥವಾಗಬೇಕಾದರೆ, ಹಿಮದ ನಾಡಿನಲ್ಲಿ ಬರ್ಫದ ತುಂಡೊಂದು ಬರಿಗೈಯಲ್ಲಿ ಹಿಡಿದು ಕೊರೆಯುವಾಗ ಉಂಟಾಗುವ ಉರಿಯನ್ನು ಅನುಭವಿಸಬೇಕು, ನಿಜಕ್ಕು ಬೆಂಕಿ ಮುಟ್ಟಿದ ತಂಪಾನುಭವ! ಸೊಗಸಾದ ಲೇಖನಕ್ಕೆ ಮತ್ತೆ ಅಭಿನಂದನೆಗಳು ಕವಿಗಳೆ :-)

    kavinagaraj
    ಅಭಿನಂದನಾತ್ಮಕ ಪ್ರತಿಕ್ರಿಯೆಗೆ ವಂದನೆಗಳು, ನಾಗೇಶರೇ.

    ಪ್ರತ್ಯುತ್ತರಅಳಿಸಿ
  2. ಈ ಮಾಲಿಕೆಯನ್ನು ನಾನು ಸಂಗ್ರಹಿಸಿ ಜತನವಾಗಿ ಎತ್ತಿಡಬೇಕೆಂದಿದ್ದೇನೆ.

    ಪಂಚ ಭೂತಗಳ ಔನತ್ಯ ನಮಗೆ ಸಂಪೂರ್ಣ ಅರಿವಿಗೆ ತರುತ್ತಿದ್ದೀರ.

    ಭಾವಾನುವಾದಕ್ಕೆ ಧನ್ಯವಾದಗಳು.

    ಪ್ರತ್ಯುತ್ತರಅಳಿಸಿ
  3. ಈ ಮಾಲಿಕೆಯನ್ನು ನಾನು ಸಂಗ್ರಹಿಸಿ ಜತನವಾಗಿ ಎತ್ತಿಡಬೇಕೆಂದಿದ್ದೇನೆ.

    ಪಂಚ ಭೂತಗಳ ಔನತ್ಯ ನಮಗೆ ಸಂಪೂರ್ಣ ಅರಿವಿಗೆ ತರುತ್ತಿದ್ದೀರ.

    ಭಾವಾನುವಾದಕ್ಕೆ ಧನ್ಯವಾದಗಳು.

    ಪ್ರತ್ಯುತ್ತರಅಳಿಸಿ
  4. ವಂದನೆಗಳು, ಬದರೀನಾಥರೇ. ಈ ಲೇಖನಮಾಲಿಕೆ 'ನಾವು ಮತ್ತು ನಮ್ಮ ಜ್ಞಾನ'ದಿಂದ ಆರಂಭವಾದುದಾಗಿದೆ. ಎಲ್ಲಾ ಲೇಖನಗಳೂ ಒಂದಕ್ಕೊಂದು ಪೂರಕವಾಗಿವೆಯೆಂದು ನನ್ನ ಭಾವನೆ. ಪಂಚಭೂತಗಳ ಅರಿವು ಲೇಖನಮಾಲೆಯ ಭಾಗವಾಗಿದೆ. ನಿಮ್ಮ ಆಸಕ್ತಿಗೆ ನನ್ನ ಮನ ತುಂಬಿದೆ. ಮತ್ತೊಮ್ಮೆ ವಂದನೆಗಳು.

    Rekha Premkumar
    ತುಂಬಾ ಚೆನ್ನಾಗಿದೆ

    ಪ್ರತ್ಯುತ್ತರಅಳಿಸಿ