ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಭಾನುವಾರ, ಮಾರ್ಚ್ 8, 2015

ಪಂಚ ಶಕ್ತಿಗಳ ಮಹತ್ವ - ೧


 ೧.ಭೂಮಿ
     ಒಂದು ಸಂಗತಿ ಹಿರಿದೆಂದುಕೊಂಡರೆ ಅದಕ್ಕಿಂತ ಹಿರಿದಾದುದು ಗೋಚರಿಸುತ್ತಾಹೋಗುತ್ತದೆ. ವಿವೇಚನಾಶಕ್ತಿ ಇರುವ ಮಾನವನಿಗೆ ಜ್ಞಾನ ದೊಡ್ಡದು. ಈ ಜ್ಞಾನಕ್ಕೆ ಮೂಲವಾದ ವಾಕ್ಕು ಜ್ಞಾನಕ್ಕಿಂತ ಹಿರಿದು. ವಾಕ್ಕಿಗಿಂತ ಮನಸ್ಸು, ಮನಸ್ಸಿಗಿಂತ ಇಚ್ಛಾಶಕ್ತಿ, ಇಚ್ಛಾಶಕ್ತಿಗಿಂತ ಸ್ಮರಣಶಕ್ತಿ, ಸ್ಮರಣಶಕ್ತಿಗಿಂತ ಮನೋಕೇಂದ್ರೀಕರಣ (ಧ್ಯಾನ), ಧ್ಯಾನಕ್ಕಿಂತ ಧ್ಯಾನ ಏಕೆ ಮತ್ತು ಹೇಗೆ ಎಂಬ ಅರಿವು ಮಿಗಿಲೆಂಬುದನ್ನು ಅರಿತಿದ್ದೇವೆ. ದೈಹಿಕ ಮತ್ತು ಮಾನಸಿಕ ಬಲವಿಲ್ಲದಿದ್ದರೆ ಮೇಲಿನದೆಲ್ಲವೂ ಅರ್ಥ ಕಳೆದುಕೊಳ್ಳುತ್ತದೆ. ಆದ್ದರಿಂದ ಬಲವೇ ಮಿಗಿಲು. ಬಲ ಬರಲು 'ಅನ್ನ' ಅಗತ್ಯವಾದ್ದರಿಂದ 'ಅನ್ನ' ಅದಕ್ಕಿಂತಲೂ ಮಿಗಿಲು. ಈ 'ಅನ್ನ'ಕ್ಕಿಂತ ಹೆಚ್ಚಿನದಾದುದು ಪಂಚಭೂತಗಳೆಂದು ಕರೆಯಲ್ಪಡುವ ನೆಲ, ಜಲ, ಅಗ್ನಿ, ವಾಯು ಮತ್ತು ಆಕಾಶಗಳು! ಏಕೆಂದರೆ, ಅನ್ನದ ಉತ್ಪತ್ತಿಗೆ ಇವು ಅಗತ್ಯವಾಗಿವೆ. ಜೀವಿಗಳು ಸಹ ಪಂಚಭೂತಗಳ ಆವಿಷ್ಕಾರವಾಗಿವೆ; ಪಂಚಭೂತಗಳ ಸೂಕ್ತ ಸಂಯೋಜನೆಯೊಂದಿಗೆ ಜೀವ ಚೈತನ್ಯ ಸೇರಿಕೊಂಡು ಜೀವಿಗಳು ಎನ್ನಿಸಿಕೊಳ್ಳುತ್ತವೆ. ಈ ಪಂಚಭೂತಗಳೂ ಸಹ ಒಂದಕ್ಕಿಂತ ಮತ್ತೊಂದು ಮಿಗಿಲಾಗಿದೆ. ಒಂದೊಂದಾಗಿ ನೋಡೋಣ.
     'ಅನ್ನ' ಎಂಬ ಪದ ಬಹು ವಿಶಾಲ ಅರ್ಥವಿರುವಂತಹದು ಎಂಬುದನ್ನು ಹಿಂದಿನ ಲೇಖನದಲ್ಲಿ ತಿಳಿದುಕೊಂಡೆವು. ಅನ್ನ ಎಂಬುದು ಕೇವಲ ನಾವು ಸೇವಿಸುವ ಆಹಾರ ಮಾತ್ರ ಅಲ್ಲ, ಅದು ಜೀವಜಗತ್ತಿನ ಪೋಷಣೆಗೆ ನೆರವಾಗುವಂತಹ ಯಾವುದೇ ಸಂಗತಿ ಅಥವ ವಸ್ತು ಅನ್ನವೆನಿಸುತ್ತದೆ. ಅದು ಇಡೀ ವಿಶ್ವದ ಚೈತನ್ಯದ ಮೂಲವಾಗಿದೆ. ಒಂದು ಅರ್ಥದಲ್ಲಿ ಇಡೀ ಭೂಮಿಯೂ ಸಹ ಆನ್ನವನ್ನು ಪ್ರತಿನಿಧಿಸುತ್ತದೆ, ಏಕೆಂದರೆ ಭೂಮಿ ಜೀವ ಜಗತ್ತಿಗೆ ಆಧಾರಪ್ರಾಯವಾಗಿದೆ.
     ಈ ಭೂಮಿ ರಚನೆಯಾದುದಾದರೂ ಹೇಗೆ? ವ್ಶೆಜ್ಞಾನಿಕವಾಗಿ ಹೇಳುವುದಾದರೆ ಸುಖಾಸುಮ್ಮನೆ ಶೂನ್ಯದಿಂದ ಯಾವುದೇ ಸೃಷ್ಟಿ ಸಾಧ್ಯವೇ ಇಲ್ಲ. ಇರುವುದನ್ನು ರೂಪಾಂತರ ಮಾಡಿ ಇನ್ನೊಂದು ರೂಪಕ್ಕೆ ತರಬಹುದಷ್ಟೇ. ದೇವರು ಈ ಜಗತ್ತಿನ ಜನಕನೆಂದು ಧರ್ಮಗ್ರಂಥಗಳು ಹೇಳುತ್ತವೆ. ಆದರೆ ಯಾವುದರಿಂದ ಸೃಷ್ಟಿಸಿದ? ಏಕೆ ಸೃಷ್ಟಿಸಿದ? ಹೇಗೆ ಸೃಷ್ಟಿಸಿದ?  ತರ್ಕಬದ್ಧವಾಗಿ ನೋಡಿದರೆ ಈ ಜಡಜಗತ್ತಿನ ಸೃಷ್ಟಿ ಶೂನ್ಯದಿಂದಂತೂ ಆಗಿರಲಾರದು. ದೇವರ ಸೃಷ್ಟಿ, ಶೂನ್ಯದಿಂದ ಸೃಷ್ಟಿಸಿದ ಎಂಬುದನ್ನು ವಾದದ ಸಲುವಾಗಿ ಒಪ್ಪಿಕೊಂಡರೂ, ಪ್ರಶ್ನೆ ಉದ್ಭವಿಸುತ್ತದೆ. ದೇವರು ಶೂನ್ಯದಿಂದ ಏನು ಬೇಕಾದರೂ ಸೃಷ್ಟಿಸಬಹುದಾದರೆ ಇನ್ನೊಬ್ಬ ತನ್ನಷ್ಟೇ ಅಥವ ತನಗಿಂತ ಬಲಿಷ್ಠ ದೇವರನ್ನು ಸೃಷ್ಟಿಸಬಲ್ಲನೇ ಎಂದರೆ ಉತ್ತರ ಕೊಡುವುದು ಕಷ್ಟ. ಒಂದು ಕಟ್ಟಡವನ್ನು ಯಾವುದೇ ವಸ್ತುಗಳ ಸಹಾಯವಿಲ್ಲದೆ ನಿರ್ಮಿಸಲು ಸಾಧ್ಯವಿದೆಯೇ? ಅದಕ್ಕೆ ಇಟ್ಟಿಗೆ, ಕಲ್ಲು, ಸಿಮೆಂಟು, ಮರಳು, ಕಬ್ಬಿಣ, ಮುಂತಾದವು ಇರಲೇಬೇಕು. ಕಟ್ಟಡದಲ್ಲಿರುವ ವಸ್ತುಗಳು ಮೊದಲೂ ಇದ್ದವು, ಈಗಲೂ ಇದ್ದಾವೆ, ಆದರೆ ಬೇರೆ ಬೇರೆ ರೂಪಗಳಲ್ಲಿ! ಕಟ್ಟಡ ಬಿದ್ದು ಹೋದರೂ, ನಾಶವಾದರೂ, ಅದರಲ್ಲಿ ಬಳಕೆಯಾದ ವಸ್ತುಗಳು ಮುಂದೂ ಸಹ ಒಂದಲ್ಲಾ ಒಂದು ರೀತಿಯಲ್ಲಿ ಯಾವಾಗಲೂ ಇರುತ್ತವೆ. ಹೀಗೆಯೇ ಈ ಜಗತ್ತೂ ಸಹ ಮೊದಲೂ ಇತ್ತು, ಈಗಲೂ ಇದೆ, ಮುಂದೂ ಇರುತ್ತದೆ, ಆದರೆ ಬೇರೆ ರೂಪಾಂತರಗಳಲ್ಲಿ ಎನ್ನವುದು ಹೆಚ್ಚು ಸಮಂಜಸ ವಾದವಾಗುತ್ತದೆ. ಶೂನ್ಯದಿಂದ ಏನೂ ಸೃಷ್ಟಿಸಲು ಸಾಧ್ಯವಿಲ್ಲವೆನ್ನುವುದನ್ನು ಒಪ್ಪುವುದಾದರೆ, ಜಡ ಪ್ರಕೃತಿಯಿಲ್ಲದಿದ್ದರೆ ಸ್ವತಃ ದೇವರೂ ಏನನ್ನೂ ಸೃಷ್ಟಿಸಲು ಸಾಧ್ಯವಿಲ್ಲವೆಂದು ಒಪ್ಪಲೇಬೇಕಾಗುತ್ತದೆ. ಹಾಗಾಗಿ ಈ ಜಗತ್ತು ಮೊದಲಿನಿಂದಲೂ ಇತ್ತು, ಮುಂದೂ ಇರುತ್ತದೆ, ಎಂದೆಂದೂ ಇರುತ್ತದೆ, ಅದು ಜೀವ ಹಾಗೂ ದೇವರಂತೆ ಅನಂತ, ಶಾಶ್ವತ ಎಂದು ತಿಳಿಯಬೇಕಾಗುತ್ತದೆ.
     ಇಂತಹ ಶಾಶ್ವತವಾದ ಜಗತ್ತಿನ ರಚನೆಯ ವಿಚಾರದಲ್ಲಿ ಋಗ್ವೇದ ಬೆಳಕು ಚೆಲ್ಲಿರುವುದು ಹೀಗೆ:
ನಾಸದಾಸೀನ್ನೋ ಸದಾಸೀತ್ ತದಾನೀಂ ನಾಸೀದ್ರಜೋ ನೋ ವ್ಯೋಮಾ ಪರೋ ಯತ್ |
ಕಿಮಾವರೀವಃ ಕುಹ ಕಸ್ಯ ಶರ್ಮನ್ನಂಭಃ ಕಿಮಾಸೀದ್ಗಹನಂ ಗಭೀರಮ್ || (ಋಕ್. ೧೦.೧೨೯.೧)
     ಸೃಷ್ಟಿಯ ಮುನ್ನ ಶೂನ್ಯವಿರಲಿಲ್ಲ, ಈ ಲೋಕವಿರಲಿಲ್ಲ ಮತ್ತು ಆಕಾಶವೂ ಇರಲಿಲ್ಲ. ಆದರೆ ಎಲ್ಲವನ್ನೂ ಆವರಿಸುವ ಗಂಭೀರ ಮತ್ತು ಗಹನವಾದ ಯಾವುದೋ ಒಂದು ತತ್ವ ಅಥವ ಪದಾರ್ಥ ದೇವರ ಆಶ್ರಯದಲ್ಲಿತ್ತು ಎಂದು ಈ ಮಂತ್ರದ ಅರ್ಥವಾಗಿದ್ದು, ಜಡ ಪ್ರಕೃತಿಯ ಮೂಲ ಅಸ್ತಿತ್ವದ ಬಗ್ಗೆ ಹೇಳುತ್ತದೆ.
ಇನ್ನೊಂದು ಮಂತ್ರ ಹೇಳುತ್ತದೆ:
ನ ಮೃತ್ಯುರಾಸೀದಮೃತಂ ನ ತರ್ಹಿ ನ ರಾತ್ರ್ಯಾ ಅಹ್ನ ಆಸೀತ್ ಪ್ರಕೇತಃ |
ಅನೀದವಾತಂ ಸ್ವಧಯಾ ತದೇಕಂ ತಸ್ಮಾದ್ಧಾನ್ಯನ್ನ ಪರಃ ಕಿಂ ಚನಾಸ || (ಋಕ್. ೧೦.೧೨೯.೨)
    ಸಾವು ಇರಲಿಲ್ಲ, ಹಾಗಾಗಿ ಅಮರತ್ವವಿರಲಿಲ್ಲ, ರಾತ್ರಿ, ಹಗಲುಗಳು ಇರಲಿಲ್ಲ. ಆ ಒಂದು ತತ್ವ ಮಾತ್ರ ತನ್ನ ಬಲದಿಂದ ಗಾಳಿಯಿಲ್ಲದಿದ್ದರೂ ಪ್ರಾಣದಾಯಿಯಾಗಿತ್ತು, ಅದನ್ನು ಬಿಟ್ಟು ಬೇರೇನೂ ಇರಲಿಲ್ಲ ಎಂದು ಈ ಮಂತ್ರದ ಅರ್ಥ. ಪ್ರಳಯ, ಇತ್ಯಾದಿ ಕಾರಣಗಳಿಂದ ಜೀವಜಗತ್ತಿನ ಸರ್ವನಾಶವಾದರೆ ಜಗತ್ತಿನ ಸ್ಥಿತಿ ಹೀಗೆಯೇ ಇದ್ದಿರಬಹುದೇನೋ! ಆ ಸ್ಥಿತಿ ಹೇಗಿರಬಹುದು ಎಂದು ತಿಳಿಸುವ ಇನ್ನೊಂದು ಮಂತ್ರವಿದು:
ತಮ ಆಸೀತ್ ತಮಸಾ ಗೂಳ್ಹಮಗ್ರೇs ಪ್ರಕೇತಂ ಸಲಿಲಂ ಸರ್ವಮಾ ಇದಮ್ |
ತುಚ್ಛ್ಯೇನಾಭ್ಯವಿಹಿತಂ ಯದಾಸೀತ್ ತಪಸಸ್ತನ್ಮ ಹಿನಾಜಾಯತೈಕಮ್ || (ಋಕ್.೧೦.೧೨೯.೩)
     ಈ ಮೊದಲು ಇವೆಲ್ಲವೂ ರೂಪ ಲಕ್ಷಣಗಳಿಲ್ಲದೆ, ರಹಸ್ಯಮಯ ಅಂಧಕಾರದಲ್ಲಿ ದ್ರವರೂಪದಲ್ಲಿ (ಹರಿಯುವ ರೀತಿಯಲ್ಲಿ) ಇದ್ದಿತು. ದೇವನ ಕೃಪೆಯಿಂದ ಅದು ಒಂದಾಯಿತು, ಅರ್ಥಾತ್ ಹೊಸ ಸೃಷ್ಟಿಯಾಯಿತು. ಅಥರ್ವವೇದದ ಮಂತ್ರ ಹೇಳುತ್ತದೆ:
ಏಷಾ ಸನತ್ನೀ ಸನಮೇವ ಜಾತೈಷಾ ಪುರಾಣೀ ಪರಿ ಸರ್ವಂ ಬಭೂವ |
ಮಹೀ ದೇವ್ಯುಷಸೋ ವಿಭಾತೀ ಸೈಕೇನೈಕೇನ ಮಿಷತಾ ವಿ ಚಷ್ಟೇ || (ಅಥರ್ವ. ೧೦.೮.೩೦)
     ಅನಾದಿ ಕಾಲದಿಂದಲೇ ಇರುವ ಈ ಪ್ರಕೃತಿ ಸನಾತನವಾಗಿದ್ದು, ಎಲ್ಲಕ್ಕಿಂತಲೂ ಮೊದಲು ಇದ್ದುದಾಗಿದ್ದು, ದೇವರ ಇಚ್ಛೆಯಂತೆ ವಿವಿಧ ರೂಪಗಳಲ್ಲಿ ಪ್ರಕಟವಾಗುತ್ತದೆ, ಪ್ರತಿ ಜೀವಿಯ ಮೂಲಕವೂ ವ್ಯಕ್ತವಾಗುತ್ತದೆ. ಈ ಮಂತ್ರ ಜೀವಿಗಳ ಅಸ್ತಿತ್ವದ ಬಗ್ಗೆಯೂ ಬೆಳಕು ಚೆಲ್ಲಿದೆ. ಸೃಷ್ಟಿ, ಸ್ಥಿತಿ. ಲಯಗಳು ಜಗದ ನಿಯಮ. ಸೃಷ್ಟಿಯಾಗುತ್ತಿರುತ್ತದೆ, ಇರುತ್ತದೆ, ನಾಶವಾಗುತ್ತದೆ - ಈ ಚಕ್ರ ನಿರಂತರವಾಗಿ ಸುತ್ತುತ್ತಿರುತ್ತದೆ. ಇನ್ನು ಜೀವಿಗಳ ಅಸ್ತಿತ್ವಕ್ಕೂ ಪ್ರಕೃತಿ ಇರಲೇಬೇಕು. ಇಂತಹ ಘನತತ್ತ್ವವಾದ ಭೂಮಿ/ಪೃಥ್ವಿ/ನೆಲವನ್ನು ನಾವು 'ತಾಯಿ' ಎನ್ನುತ್ತೇವೆ. ಈ ತಾಯಿಯನ್ನು ನಮ್ಮ ಮತ್ತು ನಮ್ಮ ಮುಂದಿನ ಪೀಳಿಗೆಯ ಸೃಷ್ಟಿಯಿಂದ ಗೌರವಿಸುವುದು, ಉಳಿಸುವುದು, ಸಂರಕ್ಷಿಸುವುದು ಮಕ್ಕಳಾದ ನಮ್ಮ ಕರ್ತವ್ಯವಾಗಿದೆ.
     ನೋಡುವ ಕಣ್ಣುಗಳಿದ್ದರೆ, ಕೇಳುವ ಕಿವಿಗಳಿದ್ದರೆ ಅತ್ಯಂತ ಕ್ಷಮಾಶೀಲ ಧರಿತ್ರಿ ತನ್ನ ಮೇಲೆ ಮಾನವನಿಂದ  ಆದ, ಆಗುತ್ತಿರುವ ಅತ್ಯಾಚಾರಗಳಿಗಾಗಿ ರೋದಿಸುತ್ತಿರುವುದು ಕಾಣುತ್ತದೆ, ಕೇಳುತ್ತದೆ. ಆದರೆ ಆ ರೋದನ ತನಗಾಗಿ ಅಲ್ಲ, ತನ್ನನ್ನು ಆಶ್ರಯಿಸಿರುವ ಜೀವಸಂಕುಲಕ್ಕಾಗಿ ಎಂಬುದನ್ನು ಸಾಧಕ ಮಾತ್ರ ಅರಿಯಬಲ್ಲ!

೨. ಜಲ
     'ನೆಲ'ಕ್ಕಿಂತ ಜಲ ಮೇಲಿನದಾಗಿದೆ. ಘನವಾದ ಯಾವುದೇ ವಸ್ತುವು ಮೂಲತಃ ದ್ರವ ಸ್ಥಿತಿಯಲ್ಲಿದ್ದುದಾಗಿದ್ದು, ಭೂಮಿ ಸಹ ದ್ರವಮೂಲದಿಂದ ಉಗಮವಾದದ್ದಾಗಿದೆ. ಕೇವಲ ಭೂಮಿಯಲ್ಲ, ವಿಶ್ವದ ಯಾವುದೇ ಘನರೂಪದ ಕಾಯವಾಗಲೀ, ವಸ್ತುವಾಗಲೀ ಮೊದಲು ದ್ರವರೂಪದಲ್ಲಿ ಇದ್ದುದಾಗಿದೆ. ಈ ದ್ರವರೂಪದಲ್ಲಿದ್ದ ವಸ್ತು ಅದಕ್ಕೂ ಮೊದಲು ಅನಿಲರೂಪದಲ್ಲಿದ್ದಿತ್ತು. ಹೀಗಾಗಿ 'ಜಲ' ಎಂಬ ಪದದಲ್ಲಿ ಸಂಬೋಧಿಸಬಹುದಾದ ಈ ಸಂಗತಿ ಭೂಮಿಗಿಂತ ಮೇಲಿನದಾಗಿದೆ. ಸೃಷ್ಟಿಯ ರಚನೆಗೆ ಮೂಲ ದ್ರವರೂಪದ ವಸ್ತುವೆಂದು ಹೇಳುತ್ತಾರೆ. (ಮೇಲೆ ಉಲ್ಲೇಖಿಸಿರುವ ಮಂತ್ರಗಳನ್ನು ಗಮನಿಸಬಹುದು.)
     ಜಲತತ್ತ್ವವಿಲ್ಲದಿರುತ್ತಿದ್ದರೆ ಜೀವನ ದುಸ್ತರವಾಗುತ್ತಿತ್ತು. ಮಳೆ ಇರದಿದ್ದಿದ್ದರೆ ಬೆಳೆ ಇರುತ್ತಿರಲಿಲ್ಲ. ನೆಲ ಒಣಗಿ ಫಲವತ್ತತೆಯನ್ನು ಕಳೆದುಕೊಳ್ಳುತ್ತಿತ್ತು. ಮಳೆ ಇಲ್ಲದಿದ್ದರೆ ನೆಲ ಆಹಾರ ಉತ್ಪಾದಿಸುವ ಶಕ್ತಿ ಕಳೆದುಕೊಳ್ಳುತ್ತಿತ್ತು. ನೆಲದ ಘನತತ್ತ್ವ ಮತ್ತು ಜಲತತ್ತ್ವಗಳ ಸಂಯೋಗ 'ಅನ್ನತತ್ತ್ವ'ದ ಉಗಮಕ್ಕೆ ಅಗತ್ಯ. ಮಳೆ ಬರದಿದ್ದರೆ ಕ್ಷಾಮ ಆವರಿಸಿ ಎಲ್ಲೆಲ್ಲೂ ಆಹಾರದ ಕೊರತೆಯಿಂದ ಜೀವಜಗತ್ತು ತಲ್ಲಣಿಸುತ್ತದೆ. ಮಳೆ ಬಂದರೆ ಪಶು, ಪಕ್ಷಿಗಳು ಸೇರಿದಂತೆ ಎಲ್ಲಾ ಜೀವಗಳಿಗೂ ತಂಪಾಗುತ್ತದೆ, ಪ್ರಕೃತಿ ಸಂತಸದಿಂದ ನಳನಳಿಸುತ್ತದೆ. 'ಅನ್ನ'ದ ಕುರಿತ ಲೇಖನದಲ್ಲಿ ಹೇಳಿದ ಎಲ್ಲಾ ಸಂಗತಿಗಳೂ ಜಲಕ್ಕೂ ಅನ್ವಯಿಸುತ್ತದೆ. ಪ್ರಪಂಚದ ನಾಗರಿಕತೆಗಳು ಬೆಳೆದದ್ದು, ಉಳಿದದ್ದು ನದಿ ತಟಗಳಲ್ಲಿಯೇ ಎಂಬುದು ಗಮನಾರ್ಹ. ಎಲ್ಲಿ ಜಲದ ಅಭಾವ ಇರುತ್ತದೋ ಅಲ್ಲಿ ಬದುಕು ದುಸ್ತರವಾಗುತ್ತದೆ. ಭೂಮಿಯಲ್ಲಿ ಲಭ್ಯವಿರುವ ಒಟ್ಟು ನೀರಿನ ಪ್ರಮಾಣದಲ್ಲಿ ಕೇವಲ ಶೇ.೧ರಿಂದ೨ರಷ್ಟು ಮಾತ್ರ ಉಪಯೋಗಕ್ಕೆ ಯೋಗ್ಯವೆಂದು ಹೇಳಲಾಗಿದೆ. ಉಳಿದ ನೀರೆಲ್ಲವೂ ಸಾಗರಗಳಲ್ಲಿರುವಂತಹ ಉಪ್ಪು ನೀರಾಗಿದೆ ಅಥವ ಹೆಪ್ಪುಗಟ್ಟಿದ, ಉಪಯೋಗಿಸಲಾಗದ ನೀರಾಗಿದೆ. ಜನಸಂಖ್ಯೆ ಹೆಚ್ಚಾದಂತೆ ನೀರಿನ ಬಳಕೆ ಸಹ ಹೆಚ್ಚಾಗುತ್ತಿದೆ. ಆದ್ದರಿಂದ ನೀರಿನ ಬಳಕೆಯನ್ನು ಎಚ್ಚರದಿಂದ, ಜಾಣತನದಿಂದ ಮಾಡಬೇಕಿದೆ. ಆದರೆ, ವಾಸ್ತವವಾಗಿ ನಾವು ಮಾಡುತ್ತಿರುವುದೇನು? ಉಪಯೋಗಿಸಬಹುದಾದ ನೀರಿನ ಜಲಮೂಲಗಳಾದ ಕೆರೆ, ಕಟ್ಟೆಗಳನ್ನು ಮುಚ್ಚುತ್ತಿದ್ದೇವೆ, ಅತಿಕ್ರಮಿಸುತ್ತಿದ್ದೇವೆ, ನಾಶಪಡಿಸುತ್ತಿದ್ದೇವೆ. ಕೊಳವೆ ಬಾವಿಗಳನ್ನು ವಿವೇಚನೆಯಿಲ್ಲದೆ ತೋಡುತ್ತಾ ಅಂತರ್ಜಲದ ಮಟ್ಟವನ್ನು ತಗ್ಗಿಸುತ್ತಿದ್ದೇವೆ. ಹೀಗೇ ಆದರೆ ಮುಂದೊಮ್ಮೆ ಪ್ರಕೃತಿಯ ಸಮತೋಲನ ತಪ್ಪಿ ಅನಾಹುತಗಳಾಗುವುದು ಶತಃಸ್ಸಿದ್ಧ. ಮನುಕುಲದ ಉಳಿವಿಗಾಗಿ ಈ ಮಾತುಗಳನ್ನು ನೆನಪಿನಲ್ಲಿಟ್ಟುಕೊಳ್ಳುವುದು ಒಳಿತು:
ನೀರನ್ನು ಉಳಿಸಿದರೆ ಭವಿಷ್ಯವನ್ನು ಉಳಿಸಿದಂತೆ!
ನೀರನ್ನು ರಕ್ಷಿಸಿದರೆ, ನೀರು ನಮ್ಮನ್ನು ರಕ್ಷಿಸುತ್ತದೆ!
-ಕ.ವೆಂ.ನಾಗರಾಜ್.
**************
ದಿನಾಂಕ 23.2.2015ರ ಜನಮಿತ್ರ ಪತ್ರಿಕೆಯ 'ಚಿಂತನ' ಅಂಕಣದಲ್ಲಿ ಪ್ರಕಟಿತ:


4 ಕಾಮೆಂಟ್‌ಗಳು:

  1. ನೆಲ ಜಲಗಳ ಒಳಗೊಂಡ ಈ ಮೊದಲ ಅಧ್ಯಾಯವು ಮನುಜನು ಅದೆಷ್ಡು ಋಣಕ್ಕೆ ಜನ್ಮೇಪಿ ಬಿದ್ದಿಹನು ಎಂಬುದನ್ನು ಬಹಳ ಚೆನ್ನಾಗಿ ವಿವರಿಸಿದೆ.
    ತಕ್ಕ ವೇದ ಮಂತ್ರಗಳ ಬಳಕೆಯು ತಮ್ಮ ಅಧ್ಯಯನದ ಆಳಕ್ಕೆ ನಿದರ್ಶನ ಕೊಡುತ್ತದೆ.

    ನಮ್ಮ ನೆಲೆಯಾದ ಭೂಂತಾಯಿಗೆ ನನ್ನ ಶರಣು. ಅದರ ಮಹತ್ವವನ್ನು ಮರೆತ ಮೂಢ ಮನವನು ಕ್ಷಮಿಸು ತಾಯೇ.

    ಸಮುದ್ರ ವಸನೇ ದೇವೀ ಪರ್ವತ ಸ್ತನ ಮಂಡಲೇ |
    ವಿಷ್ಣುಪತ್ನಿ ನಮಸ್ತುಭ್ಯಂ, ಪಾದಸ್ಪರ್ಶಂ ಕ್ಷಮಸ್ವಮೇ ||

    ಪ್ರತ್ಯುತ್ತರಅಳಿಸಿ
  2. ಆತ್ಮೀಯ Badarinath Palavalli ಯವರೇ, ತಾವು ಮತ್ತು ಇತರ ಸ್ನೇಹಿತರು ಓದಿ ಪ್ರತಿಕ್ರಿಯಿಸುವುದೇ ನನ್ನ ಬರವಣಿಗೆಗೆ ಪ್ರೇರಣೆಯಾಗಿದೆ. ಧನ್ಯವಾದಗಳು.

    ಪ್ರತ್ಯುತ್ತರಅಳಿಸಿ
    ಪ್ರತ್ಯುತ್ತರಗಳು
    1. H A Patil
      ಕವಿ ನಾಗರಾಜ ರವರಿಗೆ ವಂದನೆಗಳು ಪಂಚ ಶಕ್ತಿಗಳ ಕುರಿತು ಬಹಳ ಗಹನವಾಗಿ ವಿಚಾರ ಮಂಡಿಸಿದ್ದೀರಿ ವಿಚಾರ ಪ್ರಚೋದಕ ಲೇಖನ ಧನ್ಯವಾದಗಳು.

      kavinagaraj
      ವಂದನೆಗಳು, ಪಾಟೀಲರೇ.

      nageshamysore
      ಕವಿಗಳೆ ನಮಸ್ಕಾರ. ಸೃಷ್ಟಿಯ ಮೂಲ ಶಕ್ತಿಗಳ ಹುಡುಕಾಟಕ್ಕಿಳಿದರೆ ಸಿಗುವ ಮೂಲವಸ್ತುಗಳು ಈ ಪಂಚಶಕ್ತಿಗಳೆ. ಅವುಗಳನ್ನು ಒಂದೊಂದಾಗಿ ವಿವರಿಸುತ್ತಿರುವ ಗಹನ, ಗಂಭೀರ ಲೇಖನ - ಮಿಕ್ಕವುಗಳ ವಿವರಣೆಗೆ ಕಾದು ನೋಡುವಂತೆ ಮಾಡಿದೆ.

      kavinagaraj
      ವಂದನೆಗಳ, ನಾಗೇಶರೇ.

      ಅಳಿಸಿ
    2. Srinivasa Holla
      ನಿಜಕ್ಕೂ ಕುತೂಹಲಕಾರಿಯಾಗಿದೆ ಹಾಗೂ ಆಸಕ್ತಿದಾಯಕ ಕೂಡ

      partha
      ಸಾವು ಇರಲಿಲ್ಲ, ಹಾಗಾಗಿ ಅಮರತ್ವವಿರಲಿಲ್ಲ, ರಾತ್ರಿ, ಹಗಲುಗಳು ಇರಲಿಲ್ಲ. ಆ ಒಂದು ತತ್ವ ಮಾತ್ರ ತನ್ನ ಬಲದಿಂದ ಗಾಳಿಯಿಲ್ಲದಿದ್ದರೂ ಪ್ರಾಣದಾಯಿಯಾಗಿತ್ತು, ಅದನ್ನು ಬಿಟ್ಟು ಬೇರೇನೂ ಇರಲಿಲ್ಲ
      ಎಂತಹ‌ ಅದ್ಭುತ‌ ವಾಕ್ಯ‌ ಅಲ್ಲವೆ ಸಾವು ಇರಲಿಲ್ಲ‌ ಹಾಗಾಗಿ ಅಮರತ್ವವೂ ಇರಲಿಲ್ಲ‌!!
      ಒಳ್ಳೆಯ‌ ಲೇಖನ‌ ಮುಂದುವರೆಸಿ...

      kavinagaraj
      ಧನ್ಯವಾದಗಳು, ಪಾರ್ಥರೇ.

      ಅಳಿಸಿ